ಹೊಣೆಗಾರಿಕೆ ತೋರೋಣ..

ಅಂಜಲಿ ರಾಮಣ್ಣ

ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ

ಎಷ್ಟೇ ಆದರೂ ನಾನು ತಾಯಿ ಅಗುವವಳು ಅಲ್ಲ್ವಾ ಅದಕ್ಕೇ ತಾಳ್ಮೆಯಿಂದ ಇರಬೇಕು ಅಲ್ವಾ, ಎಂದಿದ್ದು ಕೇವಲ ಒಂಬತ್ತು ವರ್ಷದ ಹುಡುಗಿ. ಪಕ್ಕದ ಮನೆಯ ವಯಸ್ಕ ’ಅಣ್ಣ’ನಿಂದ ನಾಲ್ಕಾರು ಬಾರಿ ಅತ್ಯಾಚಾರಕ್ಕೆ ಒಳಗಾಗಿದ್ದಳು. ಯಾರಿಗೂ ಸುಳಿವು ಕೊಡದೆ ನೋವುಂಡವಳಿಗೆ ಈ ಬುದ್ಧಿಮಾತು ಮನನವಾಗಿತ್ತು.

೧೬ ವರ್ಷದ ರೀಮ ಪಕ್ಕದ ಮನೆಯ ದಿನೇಶನನ್ನು ತನ್ನನ್ನು ಪ್ರೀತಿ ಮಾಡು ಎಂದು ಬಲವಂತ ಮಾಡುತ್ತಿದ್ದಳು. ಅವನಿಗೆ ಬೇಡವೆನಿಸಿತ್ತು. ಇವಳು ಬಗ್ಗದೆ ನಿನ್ನ ಹೆಸರು ಚೀಟಿಯಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡು ಬಿಡುತ್ತೇನೆ ಎಂದು ಹೆದರಿಸಿದಾಗ, ಅವಳ ಆಸೆಯಂತೆ ಮನೆ ಬಿಟ್ಟು ಅವಳ ಜೊತೆ ಓಡಿ ಹೋದ.ಎಂಟ್ಹತ್ತು ದಿನಗಳ ನಂತರ ಕಾಸಿಲ್ಲ, ಕೊಸರಿಲ್ಲ ಎನ್ನುವಂತಾದಾಗ, ಬಸ್ ಸ್ತ್ಯಾಂಡಿನಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದು ನನ್ನ ಮುಂದೆ ಕುಳಿತಾಗ, ೨೦ ವರ್ಷದ ಆ ಹುಡುಗ ಹೇಳಿದ್ದು “ ನಾನೇನು ಮೇಡಮ್ ಒಂದೆರಡು ದಿನ ಇವಳ ಜೊತೆ ಇದ್ದು ಎಲ್ಲಿಗೆ ಬೇಕಾದರೂ ಹೋಗಿ ಜೀವನ ಮಾಡ್ಕೋಬಹುದು. ಆದರೆ ಇವಳು ತಾನೆ ಮಗುವನ್ನು ಬೆಳೆಸಬೇಕಾದವಳು?’ ನನಗಾಗ ಆ ಹುಡುಗಿಗಿಂತ ಬಾಲಕನ ಬಗ್ಗೆ ಚಿಂತೆಯಾಯ್ತು. ಅವನಲ್ಲಿ ಆ ರೀತಿಯ ಆಲೋಚನೆಯನ್ನು ಬಿತ್ತಿರುವ ನಮ್ಮ ಬಗ್ಗೆಯೇ ಅಸಹ್ಯವೆನಿಸಿತು.

ಮಕ್ಕಳ ಎಲ್ಲಾ ಜವಾಬ್ದಾರಿಯೂ ತಾಯಿಯದ್ದೇ ಎನ್ನುವ ಅಲಿಖಿತ ನಿಯಮ ಮಾಡಿರುವುದು, ತಾಯ್ತನವನ್ನು ವೈಭವೀಕರಿಸಿರುವುದು, ತಂದೆಯೆಂದರೆ ಬೇಜವಾಬ್ದಾರಿಯ ಮತ್ತೊಂದು ರೂಪ ಎನ್ನುವ ಚಿತ್ರಣ ಕಟ್ಟಿರುವುದು ಇವೆಲ್ಲವೂ ಮಕ್ಕಳ ಮೇಲೆ ನಡೆಯುತ್ತಿರುವ ಎಲ್ಲಾ ರೀತಿಯ ದೌರ್ಜನ್ಯಗಳಿಗೂ ಪ್ರತ್ಯಕ್ಷ ಮತ್ತು ಪರೋಕ್ಷ ಕಾರಣವಾಗಿದೆ.

ಮಹಿಳೆ ಮತ್ತು ಮಕ್ಕಳು ಎನ್ನುವ ಜೋಡಿ ಪದಗಳ ಬಳಕೆ ಪ್ರತ್ಯೇಕಗೊಂಡು ಚಾಲ್ತಿಗೆ ಬಂದಾಗ ಸಮೂಹ ಒಂದು ಒಟ್ಟು ಸಮಾಜವಾಗಿ ಮಕ್ಕಳ ಜವಾಬ್ದಾರಿ ಹೊಂದಲು ಸಾಧ್ಯವಾಗುತ್ತದೆ. ‘ಸೇವ್ ದ ಚಿಲ್ಡ್ರೆನ್’ ಕೂಗಾಗಲೀ, ಕುಟುಂಬಗಳನ್ನು ರಕ್ಷಿಸಿ ಎನ್ನುವ ದನಿಯಾಗಲೀ ತಂದೆಯನ್ನು ಹೊರತು ಪಡಿಸಿ ಕಂಡುಕೊಳ್ಳಬಹುದಾದ ಗುರಿ ಅಲ್ಲ. ಮಕ್ಕಳ ಹಕ್ಕುಗಳ ಒಡಂಬಡಿಕೆಯ ೫ನೆಯ ಪರಿಚ್ಛೇಧವು ಮಕ್ಕಳ ಬೆಳವಣಿಗೆ, ರಕ್ಷಣೆ, ಪೋಷಣೆ ಮಾಡಲು ತಾಯಿ, ತಂದೆ, ಪೋಷಕರು ಮಾರ್ಗದರ್ಶನ ಮಾಡುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಹೇಳುತ್ತದೆ. ಇದಕ್ಕೆ ಅನುಗುಣವಾಗಿ ರಚನೆಗೊಂಡು ಜಾರಿಗೆ ಬಂದಿರುವ ಎಲ್ಲಾ ಕಾನೂನುಗಳೂ ಸಹ ತಾಯಿ, ತಂದೆ, ಪೋಷಕರು ಎಂದು ಹೇಳುತ್ತದೆಯೇ ಹೊರತು ಎಲ್ಲಿಯೂ ತಾಯಿ ಮಾತ್ರ ಎನ್ನುವುದಿಲ್ಲ.

ಇವತ್ತು ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ದಿನ. ಮೂವತ್ತು ವರ್ಷಗಳಿಂದ ಆಚರಣೆಯಲ್ಲಿ ಇದ್ದು ಸಮಾಜವನ್ನು ಮಕ್ಕಳೆಡೆಗೆ ’ಗಮನ ಕೊಡಿ’ ಎಂದು ಎಚ್ಚರಿಸುತ್ತಿರುವ ದಿನ. ಹಾಗಾದರೆ ಇವತ್ತಿಗೆ ೩೦ ವರ್ಷಗಳಿಂದೀಚೆಗೆ ಮಕ್ಕಳ ಸ್ಥಿತಿ ಸುಧಾರಿಸಿದೆಯೇನು? ಹೌದು, ಖಂಡಿತ ಬಹುಶಃ ಮಕ್ಕಳನ್ನು ನಾವು ಪ್ರೀತಿಸಲು ತೊಡಗಿದ್ದೇ ೩೦ ವರ್ಷಗಳ ಈಚೆಗೆ ಎನಿಸುತ್ತೆ. ಮಕ್ಕಳ ಬಗ್ಗೆ ಕಾಳಜಿ ಮಾಡಬೇಕು ಎನ್ನುವ ಅರಿವು ಮೂಡಿದ್ದೇ ಈ ಕಾಲಾವಧಿಯಲ್ಲಿ ಎನ್ನಿಸುತ್ತೆ. ಇವತ್ತಿಗೆ ೩೦ ವರ್ಷಗಳ ಹಿಂದೆ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆ ಜಾರಿಗೆ ಬರದಿದ್ದರೆ ನಮ್ಮ ಸಮಾಜ ಇಷ್ಟಾದರೂ ಸಹನೆಯಿಂದ ಇರಲು ಸಾಧ್ಯವಾಗುತ್ತಿರಲಿಲ್ಲ.

ಇದನ್ನು ಗಮನದಲ್ಲಿ ಇಟ್ಟುಕೊಂಡೇ ಮಕ್ಕಳ ಬಗ್ಗೆ ಇರುವ ಎಲ್ಲಾ ಕಾನೂನುಗಳು, ಯೋಜನೆ, ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ. ದೈನಂದಿನ ಜೀವನದಲ್ಲಿ ಅವರೆಡೆಗೆ ಹೊಣೆಗಾರಿಕೆ ತೋರೋಣ. ಮಕ್ಕಳ ವಿಷಯದಲ್ಲಿ ಪಲಾಯನವಾದಿಗಳಾಗದಿರೋಣ. ಸಮಸ್ಯೆಗಳನ್ನು ಎದುರಿಸುವಾಗ ಕ್ಷೇತ್ರ ತಜ್ಞರುಗಳ ಸಲಹೆ ಸಹಕಾರ ಪಡೆದುಕೊಳ್ಳೋಣ. ಜಗತ್ತಿನ ಎಲ್ಲಾ ಮಕ್ಕಳಿಗೂ ತಾಯ್ತಂದೆಯರಾಗೋಣ. ಕೊನೆಯ ಬಾರಿಗೆ ಮನುಷ್ಯರಾಗಿಬಿಡೋಣ.

 

‍ಲೇಖಕರು avadhi

November 20, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: