ಶಿವಕುಮಾರ್ ಮಾವಲಿ
ಹೇಳಿಕೆಗಳು ಬಂದಪ್ಪಳಿಸುತ್ತವೆ
ದಶದಿಕ್ಕುಗಳಿಂದ ಪ್ರತಿನಿತ್ಯ.
ಬಲ್ಲವನೇ ಬಲ್ಲ ಆ ಹೇಳಿಕೆಗಳ,
ವಾರಸುದಾರರ ನಿತ್ಯ- ಸತ್ಯ.
ಹುಟ್ಟು ಸಾವಿನ ಬಗ್ಗೆ,
ಪ್ರೀತಿ, ಪ್ರೇಮ, ಪ್ರಣಯದ ಬಗ್ಗೆ,
ವಿಜ್ಞಾನ -ತಂತ್ರಜ್ಙಾನದ ಬಗ್ಗೆ,
ರಾಜ್ಯ ದೇಶಗಳ ರಾಜಕೀಯದ ಬಗ್ಗೆ
ಧರ್ಮ-ಸಂಸ್ಕೃತಿಗಳ ಸಂಕರಣದ ಬಗ್ಗೆ,
ಗಾಂಧಿ, ಮಾರ್ಕ್ಸ್, ಲೋಹಿಯಾ, ಲೆನಿನ್, ಅಂಬೇಡ್ಕರರ ಬಗ್ಗೆ,
ಬಡವರ ಬವಣೆ ಮತ್ತು ಧನಿಕನ ದಾನದ ಬಗ್ಗೆ.
ಥರ ಥರ ಹೇಳಿಕೆಗಳನ್ನು
ತರಹೇವಾರಿ ವಿಷಯಗಳ ಮೇಲೆ
ಹುಟ್ಟಿಸಲೆಂದೇ ಕೆಲವರು
ಅದನ್ನು ವಿವಾದ ಮಾಡಲೆಂದೇ ಮತ್ತೆ ಕೆಲವರು.
ನಾಮುಂದು ತಾಮುಂದು ಎಂದು ಹರಡಲು ಮಾಧ್ಯಮದವರು.
“ನನ್ನ ಹೇಳಿಕೆಯನ್ನು ತಿರುಚಲಾಗಿದೆ”
“ನನ್ನ ಹೇಳಿಕೆಗೆ ಈಗಲೂ ಬದ್ದ” ಅಥವಾ ” ಬೇಷರತ್ ಕ್ಷಮೆಯಾಚಿಸುವೆ”
ಎಂದು ಅರಚುವ ಹೇಳಿಕಾಸುರರು.
‘ಇದೊಂದು ಮೂರ್ಖತನದ ಹೇಳಿಕೆ’ ‘ತಾಕತ್ತಿದ್ದರೆ ಸಾಬೀತು ಮಾಡಲಿ’
‘ಮಂಜುನಾಥನ ಬಳಿ ಆಣೆ ಮಾಡಲೂ ಸಿದ್ಧ ‘
ಎಂದೇನೇನೋ ಬಡಬಡಿಸುವ ಭಂಡರು.
‘ಮಾಡೋಣ, ನೋಡೋಣ, ಪರಿಶೀಲಿಸೋಣ’
ಎಂಬ ಭವಿತವ್ಯದ ಹೇಳಿಕೆಗಳು.
ನೋಡಿದ್ದೆ, ಮಾಡಿದ್ದೆ, ಆದೇಶಿಸಿದ್ದೆ ಎಂಬ ಭೂತಕಾಲದ ಭ್ರಮೆಗಳು
ಅಂದಂದೆ ಹುಟ್ಟಿ ಅಂದಂದೆ ಸಾಯುವ ಈ ಸಹಸ್ರ ಹೇಳಿಕೆಗಳು
ಸ್ಪಂದಿಸಿದ ಸಮಸ್ಯೆಗಳೆಷ್ಟು? ?
ಬಗೆಹರಿಸಿದ ಬವಣೆಗಳೆಷ್ಟೋ?
ನಾನಂತೂ ಕಾಣೆ….






0 Comments