’ಹೇಳತೇವ ಕೇಳ. . .’ ಅವಧಿ ಹಾಗೂಅಭಿನವ ಪ್ರಕಾಶನದ ವತಿಯಿಂದ ಬಿಡುಗಡೆಗೊಂಡ, ನೊಂದ ಮನಗಳ ಪ್ರತಿಭಟನೆಯ ದನಿಯ ಲೇಖನಗಳ ಗುಚ್ಛ. ಮಹಿಳೆಯರು, ಮಕ್ಕಳು ಕಂಡ, ಅನುಭವಿಸಿದ ದುಃಖ-ದುಮ್ಮಾನ, ಕ್ರೌರ್ಯವನ್ನು ಅಕ್ಷರ ರೂಪಕ್ಕೆ ಇಳಿಸಲು ಪ್ರೇರೇಪಿಸಿದ್ದು ಜಯಲಕ್ಷ್ಮಿ ಪಾಟೀಲ್ ಅವರ ನೇತೃತ್ವದಲ್ಲಿ ರೂಪುಗೊಂಡ ಅವಧಿಯ ವಿಶೇಷ ಸಂಚಿಕೆ.
ತಲೆ-ತಲಾಂತರದಿಂದ ನಿರಂತರವಾಗಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯದ ಹಿಂದಿರುವುದು ಮಹಿಳೆಗಿಂತ ತಾನು ಮೇಲು ಎನ್ನುವ ಪುರುಷನ ಧೋರಣೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಮಾಜದಲ್ಲಿ ಮಹಿಳೆಯ ಉನ್ನತಿಯನ್ನು ಸಹಿಸಲಾಗದ ಪುರುಷನ ಸಂಕುಚಿತ, ಅಸೂಯೆಯ ಮನೋಭಾವ. ಕುಟುಂಬದಲ್ಲಿ, ಸಮಾಜದಲ್ಲಿ ಪುರುಷನ ಏಕಸ್ವಾಮ್ಯದ ಯಜಮಾನಿಕೆ ತಪ್ಪಿ, ಸಮಾನತೆ ಮೂಡಿ ಬಂದಾಗ, ಪ್ರಸ್ತುತ ಮಹಿಳೆಗಷ್ಟೇ ಅನ್ವಯಿಸುತ್ತಿರುವ ’ಮಾನ’ದ ಪರಿಭಾಷೆ ಬದಲಾದಾಗ, ಅದನ್ನು ಒಪ್ಪಿಕೊಳ್ಳುವ ಮನೋಭಾವ ಮಹಿಳೆಯದ್ದೂ ಆದಾಗ, ಕೇವಲ ಮೌನ, ಅಳುವಿನ ಬದಲು ಧೈರ್ಯವಾಗಿ ಗಂಡಸಿನ ಕ್ರೌರ್ಯವನ್ನು ಎದುರಿಸುವ ದಿಟ್ಟತನ ಮಹಿಳೆಗೆ ಬಂದಾಗ ಸಮಾಜದಲ್ಲಿ ಬದಲಾವಣೆಯನ್ನು ಕಾಣಬಹುದು ಅನ್ನುವುದು ಖ್ಯಾತ ಬರಹಗಾರ ಜಯಂತ ಕಾಯ್ಕಿಣಿಯವರ ಅಭಿಮತ.
ಮಹಿಳೆಯರ ಮನವನ್ನು ಅರ್ಥ ಮಾಡಿಕೊಳ್ಳುವ, ಸಮಾನವಾಗಿ ಕಾಣುವ, ಅವಳು ಧೈರ್ಯಗೆಡದೆ ಮುನ್ನುಗ್ಗಲು ಜೊತೆಯಾಗುವ ಪುರುಷರು ನಮ್ಮ ನಡುವೆ ಇದ್ದಾರೆಂಬುದೇ ಸಂತಸದ ವಿಷಯ. ನಮ್ಮ ನೋವಿನ, ರೋಷದ ಅಭಿವ್ಯಕ್ತಿಗೆ ವೇದಿಕೆ ಒದಗಿಸಿದ ಅವಧಿಗೆ ವಂದನೆಗಳು.







0 Comments