ಡಾ. ಅಜಿತ್ ಹರೀಶಿ / ಸೊರಬ
ಮೊನ್ನೆ ನೋಡಿದೆ ಅವಳ
ಸ್ನಿಗ್ಧ ಸೌಂದರ್ಯ ವರ್ಣಿಸಲಸದಳ
ಕಣ್ಣುಗಳೇನೊ ಹಿಡಿದವು
ಆ ಪಟವ ಪಟಕ್ಕನೆ
ಅವಳೊಂದು ದೃಶ್ಯಕಾವ್ಯ
ಗೆಳೆಯ ಕೇಳುತ್ತಿದ್ದಾನೆ
‘ವರ್ಣಿಸಲು ಆಗದ್ದು
ಪದಗಳಲಿ ತುಂಬುವೆ ಹೇಗೆ?’
ಹೇಗೆ ಹೇಳಲಿ ಅವನಿಗೆ
ಓದಲೇಬೇಕಿದೆ ಅವಳ, ಆದರೆ ಹೇಗೆ
ನನಗೂ ತಿಳಿಯದು..
ಹೇಗೆ ಓದಲಿ ಅವಳ
ನಾ ಓದುವುದು ಅವಳೇ ಅಲ್ಲವಾಗಿದ್ದರೆ
ಓದಿಯೂ ನಾ ಬರಿದಾಗದೇ ಇದ್ದರೆ
ಕೇಳಿಯೂ ಗೆಳೆಯ ಕಿವುಡನಾದರೆ
ಓದಿ ಫಲವೇನು
ಬರೆದು ತೆರೆಯುವುದೇನು?

ಈಗೀಗ ಅವಳು ಕಾಣತೊಡಗಿದ್ದಾಳೆ
ಎಲ್ಲೆಡೆ, ದೊಡ್ಡ ದೊಡ್ಡ ಸ್ಕ್ರೀನುಗಳಲ್ಲಿಯೂ
ಬೇಕು ಬೇಡಗಳ ಎಲ್ಲೆಯ ಮೀರಿ
ನಿಂತಿದ್ದಾಳೆ ಸಮಯ ಕೋರಿ
ಒಮ್ಮೆ ಓದು ಎಂದು ಕಾದು ನಿಂತಿದ್ದಾಳೆ
ಹೇಗೆ ಓದಲಿ ಅವಳ?
ಬಿಳಿಗೂದಲು ಇರುವಷ್ಟು
ಕೂತಿದ್ದರು ಮೂಗಿನ ತುದಿಗೆ ಕನ್ನಡಕ ಇಟ್ಟು
ಹೇಳಿದರು ಅವರು
‘ಓದಲೇ ಬೇಡಿ
ಅವಳು ಕಾಡುತ್ತಲೇ ಇರಲಿ
ಒಮ್ಮೆ ಓದಿಬಿಟ್ಟರೆ ಅದಕೆ ಉಳಿವಿಲ್ಲ
ಕಾಯುವಿಕೆಗೆ ಅಳಿವಿಲ್ಲ’
ಇವಳ ಬಳಿ ಹೆದರುತ್ತಲೇ ಕೇಳಿದೆ
‘ಹೇಗೆ ಓದಲಿ ಅವಳ?’
‘ಹೇಗೆ ಓದುವಿರಿ?
ಓದಿಗೆ ನಿಲುಕದೆ ಇರುವವಳ?
ನಿರುತ್ತರ, ನಿಟ್ಟುಸಿರಿನೊಂದಿಗೆ
ನಾ ಕನ್ನಡಿ ಮುಂದೆ ನಿಂದೆ
ನನ್ನ ಕಣ್ಣಲಿ ಅವಳಿದ್ದಳು
ಆಳವಾಗಿ ಉಸಿರೆಳೆದುಕೊಳ್ಳುತ್ತಾ
ಕಣ್ಣ ಮುಚ್ಚಿಕೊಂಡೆ.






ಸೊಗಸಾದ ಕವಿತೆ