ಫೋಟೋಜೆನಿಕ್ 

ದಾದಾಪೀರ್ ಜೈಮನ್

ಅರ್ಧಸತ್ಯಗಳಷ್ಟೇ ಇರುವ ನಗರಗಳಲ್ಲಿ
ನುಡಿದರ್ಧವನ್ನಷ್ಟೆ ನಂಬುವ ನರರ ನಡುವೆ
ಬೇರೆಯಲ್ಲದ ನಾನು
ಸದಾ ಸತ್ಯವನ್ನೆ ಹೇಳುವೆನೆನುವ ಕನ್ನಡಿಯನೆ
ಸಂಶಯ ಪಟ್ಟಿದ್ದರಲ್ಲಿ ನನ್ನ ತಪ್ಪೇನೇನು
ಇರಲಿಲ್ಲವೆಂಬುದನು ನೀವು
ಸಂಪೂರ್ಣ ನಂಬಲೇಬೇಕೆಂದು ಹೇಳಲಾರೆ

ಮೊನ್ನೆಯಿಂದ  ಮುನಿಸಿಕೊಂಡು
ಮಾತು ಬಿಟ್ಟ ಕನ್ನಡಿ
ತೋರುವ ಪ್ರತಿಬಿಂಬಕ್ಕೆ ಜೀವವಿಲ್ಲ!!!
ಅದೆ ಮೊನ್ನೆ ಯಾರೋ ಸಿಕ್ಕು
ಪಕ್ಕದವರಿಗೆ ಪಿಸುಗುಟ್ಟಿದರು
‘ಫೋಟೋ ಎಷ್ಟು ಮೋಸವಲ್ಲವಾ?’
ಅವರ ಅನುಮಾನ ನಿಜ

ಅವರಿಗೇನು?  ನನಗೇ  ಅನಿಸುವುದುಂಟು!!!
ಫೋಟೋಜೆನಿಕ್ ಅಲ್ಲದ ಫೇಸುಗಳ
ಪಡಿಪಾಟಲು ಕೇಳಬೇಕು ನೀವು
ನನ್ನ  ಗುರುತು ನನಗೆ  ಹತ್ತುವುದಿಲ್ಲ
ಸರ್ವರಲ್ಲೂ ಸಮನಾಗಿ ಇಳಿಯುವುದಿಲ್ಲ
ಜಂಗಮವಾಣಿಯ ಕಣ್ಣುಗಳ ಆರೇಳು
ಫಿಲ್ಟರುಗಳಾಚೆಗೆ ಚೆಂದಗಾಣುವ ನಾನು
ಒಮ್ಮೊಮ್ಮೆ ಒಂದೊಂದು ರೀತಿ ಕಾಣುತ್ತೇನೆ

ನನಗೆ ಕಾಣುವ ನಾನು
ಅವರಿಗೆ ತೋರುವ ನಾನು
ಕನ್ನಡಿಗೆ ಕಾಣುವ ನಾನು
ಬೇರೆ ಬೇರೆಯಾಗಿರುವಾಗ
ಈ ನಿಜವಾದ ಯಾರು ‘ನಾನು?’

ನನ್ನ ಛಾಯೆ ನನ್ನದೆಷ್ಟು
ಕಾಲು? ಮುಕ್ಕಾಲು?
ಅರ್ಧ? ಅಥವಾ ಪೂರ್ತ?
ಒಂದು ಯಕಶ್ಚಿತ್ ಪ್ರತಿಬಿಂಬ
ಇಷ್ಟೆಲ್ಲಾ ಪ್ರಶ್ನೆ ಹುಟ್ಟಿಸಿ
ಪಾತಾಳಕ್ಕಿಳಿಸಿ
ಜಿಜ್ಞಾಸೆಗೆ ಜಿಗಿಸಿ
ಕೀಳಿರಿಮೆಯ ತೊಟ್ಟಿಲಲ್ಲಿ
ತೂಗಿ ತಮಾಷೆ ಮಾಡುವ
ಸಮಯಕ್ಕೆ ಸೋತು
ಇಳಿರಾತ್ರಿ ಹೊತ್ತಿನಲ್ಲಿ

ಕನ್ನಡಿ ಮುಂದೆ ಕುಳಿತಾಗ
ತಾಯಿಯಂತೆ ನುಡಿದಂತಾಗುತ್ತದೆ
‘ಬೇಸರಿಸಿಕೊಳ್ಳದಿರು ಮಗು
ನೀನು ಈ ಶಹರದಂತೆ!!!
ಬಿಂಬಗಳಲ್ಲಿ ಇಡಿಯಾಗಿ
ಹಿಡಿಯಲಾಗುವುದಿಲ್ಲ
ಇಗೋ ನೋಡು
ಸದಾ ಎಚ್ಚರವಿರುವ ಶಹರಕ್ಕೆ
ಲಾಲಿ ಹಾಡುತ್ತಲೇ ಇದ್ದೇನೆ ಇನ್ನು…
ನೀನು ಮಲಗು
ಕನ್ನಡಿ ನಾನು ಸುಳ್ಳು ಹೇಳುವುದಿಲ್ಲ!!!’

‍ಲೇಖಕರು avadhi

June 28, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: