ಹೆಲಿಕಾಪ್ಟರ್ ಚಿಟ್ಟೆಗಳೂ, ಅವುಗಳ ಮಿಲನವೂ…

ಸಿದ್ದರಾಮ ಕೂಡ್ಲಿಗಿ

ಇತ್ತೀಚೆಗೆ ಕೆರೆಯ ಬಳಿ ಹೋಗಿದ್ದೆ. ಕೆರೆಯನ್ನು ಒಂದು ಸುತ್ತು ಹೊಡೆದ ನಂತರ ಅಲ್ಲಿನ ಕೃತಕ ಹೊಂಡದ ಹತ್ತಿರ ಸುಮ್ಮನೆ ಕಣ್ಣಾಡಿಸುತ್ತಿರಬೇಕಾದರೆ ಅಲ್ಲಿ ಬೆಳೆದ ಗಿಡಗಳ ಬಳಿ ಎರಡು ಕಡ್ಡಿಯಂತಹ ರೆಕ್ಕೆ ಇರುವ ಕೀಟಗಳು ಕಂಡವು. ಅಷ್ಟೇ ಅಲ್ಲ. ಒಂದು ಕೀಟದ ಬಾಲ ಮತ್ತೊಂದು ಕೀಟದ ತಲೆಯ ಬಳಿ ಬಂದಿಯಾಗಿತ್ತು. ಇನ್ನೂ ವಿಶೇಷವೆಂದರೆ ಇದೇ ಭಂಗಿಯಲ್ಲಿಯೇ ಅವು ಎತ್ತ ಬೇಕತ್ತ ಹಾರಾಡುತ್ತಿದ್ದವು. ಇದೇನು ವಿಚಿತ್ರ ? ಎಂದು ತಲೆಕೆರೆದುಕೊಳ್ಳುತ್ತಲೇ, ಸುಮ್ಮನೆ ಗಮನಿಸುತ್ತ ನಿಂತೆ. ಗಿಡಗಳ ಬಳಿ ಹಾರಾಡಿದ ಈ ಜೋಡಿಗಳು ನಂತರ ಹೊಂಡದ ಬಳಿ ಬಂದವು. ಅದೇನಾಯಿತೋ ಏನೋ ಎರಡೂ ಸಬ್ ಮರೀನ್ ರೀತಿಯಲ್ಲಿ ನೀರಿನೊಳಕ್ಕೆ ಧುಮುಕಿ ಒಳಹೊಕ್ಕು ಹೊರಬಂದವು. ಇದರ ತಲೆಬುಡ ಒಂದೂ ಅರ್ಥವಾಗಲಿಲ್ಲ. ಈ ಜೋಡಿಗಳು ಈ ಭಂಗಿಯಲ್ಲಿ ಏನು ಮಾಡಹೊರಟಿವೆ ? ಎಂಬುದೇ ನನ್ನ ತಲೆ ತಿನ್ನಲು ಶುರುಮಾಡಿತ್ತು. ಏನಾದರಲಾಗಲಿ ಎಂದು ಕೆಮರಾದಿಂದ ಬೆನ್ನುಹತ್ತಿ ಅವು ಹೋದೆಡೆಯಲ್ಲೆಲ್ಲ ಕ್ಲಿಕ್ಕಿಸಿದೆ. ನಂತರ ಇವುಗಳ ಮಾಹಿತಿಯನ್ನು ಸಂಗ್ರಹಿಸಿದಾಗ ಈ ಕೆಳಗಿನಂತೆ ಸ್ವಾರಸ್ಯಕರವಾದ ಮಾಹಿತಿ ದೊರೆಯಿತು.-ಇದು ಏರೋಪ್ಲೇನ್ ಚಿಟ್ಟೆಯಂತೆಯೇ ಕಾಣುವ ಅದರ ಹತ್ತಿರದ ಸಂಬಂಧಿ ಹೆಲಿಕಾಪ್ಟರ್ ಚಿಟ್ಟೆ. ಇದನ್ನು ಇಂಗ್ಲೀಷ್ ನಲ್ಲಿ (Damselfly) ಎಂದು ಕರೆಯಲಾಗುತ್ತದೆ.

ಇವೂ ಕೂಡ ಏರೋಪ್ಲೇನ್ ಚಿಟ್ಟೆ(Dragonfly)ಯಂತೆಯೇ ಕಾಣುವವಾದರೂ ಅವುಗಳಿಗಿಂತ ಸ್ವಲ್ಪ ಭಿನ್ನ. ಇವಕ್ಕೆ ಹೆಲಿಕಾಪ್ಟರ್ ಚಿಟ್ಟೆ ಎಂಬ ಹೆಸರು ಬರಲು ಕಾರಣ ಇವು ಹೆಲಿಕಾಪ್ಟರ್ ರೀತಿಯಲ್ಲಿಯೇ ಗಾಳಿಯಲ್ಲಿ ಒಂದೇ ಕಡೆ ನಿಲ್ಲುವ ಸಾಮರ್ಥ್ಯ ಪಡೆದಿವೆ. ಏರೋಪ್ಲೇನ್ ಚಿಟ್ಟೆಗಳು ವಿಶ್ರಾಂತ ಸ್ಥಿತಿಯಲ್ಲಿದ್ದಾಗ ರೆಕ್ಕೆಯನ್ನು ದೇಹಕ್ಕೆ ಸಮಾನಾಂತರವಾಗಿ ಬಿಡಿಸಿ ಕುಳಿತರೆ, ಹೆಲಿಕಾಪ್ಟರ್ ಚಿಟ್ಟೆಗಳು ನಾಲ್ಕೂ ರೆಕ್ಕೆ ಒಂದಕ್ಕೊಂದಕ್ಕೆ ಸೇರಿಸಿ ಮಡಿಚಿಕೊಂಡು ಕುಳಿತಿರುತ್ತವೆ. ಹೆಲಿಕಾಪ್ಟರ್ ಚಿಟ್ಟೆಯ ನಾಲ್ಕೂ ರೆಕ್ಕೆಗಳು ಒಂದೇ ಗಾತ್ರದಲ್ಲಿದ್ದು, ಬುಡದಲ್ಲಿ ಚಿಕ್ಕದಾಗಿ ಬೆನ್ನಿಗೆ ಅಂಟಿಕೊಂಡಿದ್ದರೆ, ಏರೋಪ್ಲೇನ್ ಚಿಟ್ಟೆಯ ಮುಂದುಗಡೆಯ ಎರಡು ರೆಕ್ಕೆಗಳು ಹಿಂದಿನ ಎರಡು ರೆಕ್ಕೆಗಳಿಗಿಂತ ಚಿಕ್ಕದಾಗಿರುತ್ತವೆ. -ಅಂದಹಾಗೆ ನಾನು ಇವುಗಳನ್ನು ನೋಡಿದ ಸಂದರ್ಭವೆಂದರೆ ಇವುಗಳ ಮಿಲನದ ಸಮಯದಲ್ಲಿ. ಗಂಡು ಹೆಲಿಕಾಪ್ಟರ್ ಚಿಟ್ಟೆ ಗಾಢಬಣ್ಣವನ್ನು ಹೊಂದಿದ್ದರೆ, ಹೆಣ್ಣು ತೆಳುವಾದ ಬಣ್ಣ ಹೊಂದಿರುತ್ತದೆ. ಗಂಡು ತನ್ನ ಗಾಢ ಬಣ್ಣದಿಂದ ಹೆಣ್ಣನ್ನು ಆಕರ್ಶಿಸುತ್ತದೆ. ನಂತರ ತನ್ನ ಬಾಲದಿಂದ ಹೆಣ್ಣಿನ ತಲೆಯ ಭಾಗವನ್ನು ಹಿಡಿದಾಗ ಹೆಣ್ಣು ತನ್ನ ಬಾಲವನ್ನು ಗಂಡಿನ ಬಾಲಕ್ಕೆ ಅಂಟಿಸಿ ಗಂಡಿನಿಂದ ವೀರ್ಯಾಣುವನ್ನು ಪಡೆಯುತ್ತದೆ. ಈ ಸಂದರ್ಭದಲ್ಲಿ ಇವುಗಳ ಚಿತ್ರಣ ಹೇಗಿರುತ್ತದೆಂದರೆ ಒಂದು ಹೃದಯದ ಆಕಾರ ಅಥವಾ ಚಕ್ರದ ಆಕಾರದಲ್ಲಿರುತ್ತದೆ. ನಂತರ ಹೆಣ್ಣು ಮೊಟ್ಟೆಗಳನ್ನಿಡಲು ಗಂಡು ಸಹಾಯ ಮಾಡುತ್ತದೆ.

ಗಂಡು ತನ್ನ ಬಾಲದಿಂದ ಹೆಣ್ಣಿನ ತಲೆಯ ಭಾಗವನ್ನು ಹಿಡಿದಾಗಲೇ ಹೆಣ್ಣು ತನಗೆ ಅನುಕೂಲಕರವಾದ ಸ್ವಚ್ಛ ನೀರಿನಲ್ಲಿ ಮೊಟ್ಟೆಗಳನ್ನಿಡುತ್ತ ಸಾಗುತ್ತದೆ. ಈ ಸಂದರ್ಭದಲ್ಲೇ ನಾನು ಇವುಗಳನ್ನು ನೋಡಿದ್ದು.-ಒಂದುವಾರದ ಕಾಲಾವಧಿಯಲ್ಲಿ ಮೊಟ್ಟೆಯಿಂದ ಹೊರಗೆ ಬರುವ ಲಾರ್ವಾಗಳು ನೀರಿನಲ್ಲಿ ಜಲಚರಗಳಾಗಿ ಬದುಕುತ್ತವೆ.ಚಿಕ್ಕ ಪುಟ್ಟ ಲಾರ್ವಾಗಳು ನೀರಿನೊಳಗಿನ ಸೂಕ್ಷ್ಮಜೀವಿಗಳನ್ನು ಭಕ್ಷಿಸಿದರೆ, ದೊಡ್ಡ ಗಾತ್ರದ ಲಾರ್ವಾಗಳು ಚಿಕ್ಕ ಪುಟ್ಟ ಮೀನುಗಳು, ಸ್ವಜಾತಿಯ ಚಿಕ್ಕ ಲಾರ್ವಾಗಳು, ಸೊಳ್ಳೆಯ ಲಾರ್ವಾಗಳನ್ನು ತಿಂದು ಬದುಕುತ್ತವೆ. ಇವು ಪ್ರೌಢಾವಸ್ಥೆಗೆ ಬರಲು ಒಂದು ವರ್ಷಗಳಷ್ಟು ಕಾಲ ಹಿಡಿಯುತ್ತದೆ. ಈ ಸಮಯದಲ್ಲಿ ಹನ್ನೆರಡು ಬಾರಿ ತನ್ನ ಹೊರಗವಚವನ್ನು ಬದಲಿಸುತ್ತವೆ. ಹೀಗೆ ಬದಲಾಗುತ್ತ ಪ್ರೌಢಾವಸ್ಥೆಗೆ ಬಂದನಂತರ ಹೊಳಪಿನ ಮೈಬಣ್ಣವನ್ನು ಪಡೆಯುತ್ತವೆ.

ಗಂಡು ತನ್ನ ಮೈಬಣ್ಣದಿಂದ ಹೆಣ್ಣನ್ನಾಕರ್ಶಿಸುತ್ತದೆ. ಬದುಕಿನ ಚಕ್ರ ಮತ್ತೆ ಮುಂದುವರೆಯುತ್ತದೆ. ಹೀಗಾಗಿಯೇ ಅವುಗಳ ಮಿಲನವೂ ಸಹ ಚಕ್ರದ ಭಂಗಿಯಲ್ಲಿಯೇ ಇರುತ್ತದೆ. -ಕೀಟಗಳ ಜಗತ್ತೇ ಅದ್ಭುತ. ನಿಧಾನವಾಗಿ, ತಾಳ್ಮೆಯಿಂದ ನೋಡುತ್ತ ಹೋದರೆ ಇನ್ನೂ ಅಲ್ಲಿ ಏನೇನು ಅಡಗಿದೆಯೋ ಗೊತ್ತಿಲ್ಲ. ತಿಳಿದುಕೊಳ್ಳುವಷ್ಟು ಸಮಯ ಹಾಗೂ ಪುರುಸೊತ್ತೂ ನಮಗಿಲ್ಲ. ನಾವೆಲ್ಲ ಬೇರಾವುದಕ್ಕೋ ಓಡುತ್ತ, ಬೆನ್ನಟ್ಟುತ್ತ ಹೋಗುತ್ತಿದ್ದೇವಷ್ಟೆ. -(ದಯವಿಟ್ಟು ಚಿತ್ರಗಳನ್ನು ಪೂರ್ಣ ಪರದೆಯಲ್ಲಿ ವೀಕ್ಷಿಸಿ.)ಮಾಹಿತಿ : ವಿವಿಧೆಡೆಯಿಂದಚಿತ್ರಗಳು : ಮೊದಲ 5 ಚಿತ್ರಗಳು ನನ್ನವು, ಕೊನೆಯ

ಚಿತ್ರ – ಅಂತರ್ಜಾಲದ ಕೃಪೆ

‍ಲೇಖಕರು avadhi

February 16, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: