ಶ್ರೀನಿವಾಸ ಪ್ರಭು ಅಂಕಣ – ಚಿತ್ರೀಕರಣ ಪ್ರಾರಂಭಿಸಿಯೇಬಿಟ್ಟೆವು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

84

ಒಂದು ದಿನ ಆಫೀಸಿನಲ್ಲಿ ಬೆಳಗಿನ ಮೀಟಿಂಗ್ ಮುಗಿಸಿ ನನ್ನ ಕೋಣೆಗೆ ಬರುತ್ತಿದ್ದಂತೆಯೇ ನಿರ್ದೇಶಕ ಗುರುನಾಥ್ ಅವರಿಂದ ಬುಲಾವ್ ಬಂದಿತು. ಮತ್ತೇನೋ ಹೊಸ ಹೊಣೆ ಹೆಗಲೇರುತ್ತದೆ ಎಂದುಕೊಂಡೇ ಅವರ ಛೇಂಬರ್ ಗೆ ಹೋದೆ. ನನ್ನ ಊಹೆಯೇನೂ ಸುಳ್ಳಾಗಲಿಲ್ಲ! “ಶ್ರೀನಿವಾಸ್ ,ನೀವೇಕೆ ಒಂದು ‘ಇನ್ ಹೌಸ್ ಸೀರಿಯಲ್’ ಮಾಡಬಾರದು?” ಎಂದರು ಗುರುನಾಥ್ ಅವರು. ಆಗಿನ್ನೂ ದೈನಂದಿನ ಮಹಾ ಧಾರಾವಾಹಿಗಳ ಲಗ್ಗೆ ಆರಂಭವಾಗಿರಲಿಲ್ಲ. ಧಾರಾವಾಹಿಗಳ ಶೈಶವಾವಸ್ಥೆ ಅದು. ವಾರಕ್ಕೆ ಒಂದು ಕಂತಿನಂತೆ 13 ವಾರಗಳಲ್ಲಿ ಒಂದು ಧಾರಾವಾಹಿ ಮುಗಿದುಹೋಗುತ್ತಿತ್ತು. “ನಾಟಕಕ್ಕೆಂದು ಇರುವ ಸಮಯದಲ್ಲಿಯೇ ಈ ಧಾರಾವಾಹಿಯನ್ನು ಪ್ರಸಾರ ಮಾಡೋಣ.. ಒಳ್ಳೆಯ ವಸ್ತುವೊಂದನ್ನು ಆಲೋಚಿಸಿಕೊಂಡು ಬಾ.. ಒಂದೆರಡು ಕಂತಿನಲ್ಲಿ ಮುಗಿದುಹೋಗುವಂತಹ ಚಿಕ್ಕ ಚಿಕ್ಕ ಕಥೆಗಳನ್ನು ಆರಿಸಿಕೊಂಡರೆ ಒಳ್ಳೆಯದು” ಎಂದು ಸೂಚಿಸಿದರು ನಮ್ಮ ನಿರ್ದೇಶಕರು. “ಆಗಲಿ ಸರ್ ,ಯೋಚಿಸಿ ಹೇಳುತ್ತೇನೆ” ಎಂದು ಹೇಳಿ ಹೊರಬಂದೆ. ಎಂತಹ ಕಥೆಗಳನ್ನು ಆರಿಸಿಕೊಳ್ಳಬಹುದು ಎಂಬುದರ ಕುರಿತಾಗಿ ನಾನು ಹಾಗೂ ಗೆಳೆಯ ಕಟ್ಟಿ ಚಿಂತನ—ಮಂಥನ ಆರಂಭಿಸಿದೆವು.

ಅದೇ ಸಂದರ್ಭದಲ್ಲಿ ತಮ್ಮ ತಂಡದ, ಈಗಾಗಲೇ ಸಿದ್ಧವಾಗಿರುವ ನಾಟಕಗಳನ್ನು ದೂರದರ್ಶನಕ್ಕೆ ಅಳವಡಿಸಿಕೊಳ್ಳಬಹುದೇ ಎಂಬ ಪ್ರಸ್ತಾವನೆಯೊಂದಿಗೆ ನನ್ನ ಬಳಿಗೆ ಬಂದವರೆಂದರೆ ಕೃಷ್ಣಶರ್ಮ ಹಾಗೂ ಸಂಧ್ಯಾ ಶರ್ಮ ದಂಪತಿಗಳು. ಸಂಧ್ಯಾ ಶರ್ಮ ಕನ್ನಡ ಎಂ.ಎ.ಓದುವಾಗ ನನ್ನ ಸಹಪಾಠಿಯಾಗಿದ್ದವರು. ಅನೇಕ ಕಥೆ— ಕಾದಂಬರಿಗಳನ್ನು ಬರೆದು ಪ್ರಸಿದ್ಧರಾಗಿದ್ದವರು. ಸ್ವತಃ ಭರತನಾಟ್ಯ ಕಲಾವಿದೆಯೂ ಆದ ಸಂಧ್ಯಾ ಅವರದು ಬಹುಮುಖ ಪ್ರತಿಭೆ. ಈಗಲೂ ಅವರು ಪತ್ರಿಕೆಗಳಲ್ಲಿ ಬರೆಯುವ ನೃತ್ಯ ವಿಮರ್ಶೆಗಳು ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡಿವೆ. ಉದಯೋನ್ಮುಖ ನೃತ್ಯ ಕಲಾವಿದರಿಗಂತೂ ಸೊಗಸಾದ ಮಾರ್ಗದರ್ಶನ ದೀಪಿಕೆಗಳಂತಿರುವ ಅವರ ವಿಮರ್ಶೆಗಳು ತಮ್ಮ ವಸ್ತುನಿಷ್ಠ ಅವಲೋಕನದಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ತಮ್ಮ ಪತಿಯೊಂದಿಗೆ ಅವರು ಕಟ್ಟಿರುವ ಸಂಧ್ಯಾ ಕಲಾವಿದರು ತಂಡ ಕನ್ನಡ ನಾಟಕ ರಂಗಕ್ಕೆ ಅನೇಕ ವಿಶಿಷ್ಟ ಕೊಡುಗೆಗಳನ್ನು ನೀಡಿದೆ. ಕೃಷ್ಣಶರ್ಮರು ಬಹಳ ಒಳ್ಳೆಯ ನಾಟಕಕಾರ—ನಟ ಹಾಗೂ ನಿರ್ದೇಶಕ. ಅವರೇ ರಚಿಸಿ ನಿರ್ದೇಶಿಸಿ ನಟಿಸಿದ ಅನೇಕ ನಾಟಕಗಳು ಹಲವಾರು ಪ್ರದರ್ಶನಗಳನ್ನು ಕಂಡು ಅಪಾರ ಜನಪ್ರೀತಿಯನ್ನು ಗಳಿಸಿಕೊಂಡಿವೆಯಷ್ಟೇ ಅಲ್ಲ, ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿವೆ. ಭಾಷೆಯ ಮೇಲಿನ ಅವರ ಪ್ರಭುತ್ವ, ಸಂಭಾಷಣೆಗಳನ್ನು ಅವರು ಹೇಳುವ ಕ್ರಮದಲ್ಲಿರುವ ಸ್ಪಷ್ಟತೆ—ಭಾವ ತೀವ್ರತೆಗಳು ಅನನ್ಯವಾದುವು.

‘ಸುಯೋಧನ’, ‘ಪೌಲಸ್ತ್ಯನ ಪ್ರಣಯ ಕಥೆ’, ‘ಸೊಹ್ರಾಬ್ ರುಸ್ತುಂ’, ‘ಸತ್ಯಂ ವಧ’, ‘ಕುಮಾರರಾಮ’,’ಎಂದುರೋ ಮಹಾನುಭಾವುಲು’—ಇವು ಕೃಷ್ಣಶರ್ಮರ ಕೆಲ ಪ್ರಮುಖ ನಾಟಕಗಳು. ಇವುಗಳ ಜತೆಗೆ ಆಕಾಶವಾಣಿಗಾಗಿ ಹಲವಾರು ಏಕಾಂಕಗಳನ್ನೂ ಸಹಾ ಶರ್ಮರು ರಚಿಸಿದ್ದಾರೆ. ಪೌರಾಣಿಕ ಹಾಗೂ ಐತಿಹಾಸಿಕ ಕಥನಗಳಿಗೆ ಹೊಸ ಹೊಳವಿನ ಸ್ಪರ್ಶ ನೀಡಿ ರಂಗಕ್ಕೆ ತರುವುದರಲ್ಲಿ ಶರ್ಮರು ನಿಷ್ಣಾತರು. ಇವರ ಮತ್ತೊಂದು ಮಹತ್ವದ ಸಾಧನೆಯೆಂದರೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೆ.ಗೋಕಾಕರ ಮಹತ್ಕೃತಿ ‘ಭಾರತ ಸಿಂಧು ರಶ್ಮಿ’ಯನ್ನು ಆಕಾಶವಾಣಿಗಾಗಿ 30 ಕಂತುಗಳಲ್ಲಿ ಅಳವಡಿಸಿಕೊಟ್ಟದ್ದು. ನಾನು ಇವರ ಮೂರು ಪ್ರಮುಖ ನಾಟಕಗಳನ್ನು ದೂರದರ್ಶನಕ್ಕಾಗಿ ಅಳವಡಿಸಿಕೊಂಡೆ. ಅವೇ ‘ಸೊಹ್ರಾಬ್ ರುಸ್ತುಂ’,’ಕುಮಾರರಾಮ’ ಹಾಗೂ ಎಂದುರೋ ಮಹಾನುಭಾವುಲು’. ನಮ್ಮ ಹೊಸ ಸ್ಟುಡಿಯೋದಲ್ಲಿ ಚಿತ್ರೀಕರಿಸಿದ ಈ ನಾಟಕಗಳು ಆ ಕಾಲದಲ್ಲಿ ಬಹು ಜನಪ್ರಿಯತೆಯನ್ನು ಗಳಿಸಿಕೊಂಡು ನಮ್ಮ ಕೇಂದ್ರಕ್ಕೆ ಒಳ್ಳೆಯ ಹೆಸರನ್ನು ತಂದುಕೊಟ್ಟವು.

ಸೊಹ್ರಾಬ್ ರುಸ್ತುಂ ನಾಟಕದಲ್ಲಿ ಮೈಕೋ ಕಿಟ್ಟಿ ಹಾಗೂ ಕೃಷ್ಣಶರ್ಮರು ಪ್ರಧಾನ ಭೂಮಿಕೆಗಳಲ್ಲಿ ಸೊಗಸಾಗಿ ಅಭಿನಯಿಸಿದ್ದರು. ‘ಕುಮಾರ ರಾಮ’ ನಾಟಕದಲ್ಲಿ ಶರ್ಮರು ಕುಮಾರರಾಮನಾಗಿ ಅಭಿನಯಿಸಿದ್ದರೆ ಆ ಕಾಲದ ಒಬ್ಬ ಶ್ರೇಷ್ಠ ನಟರಾದ ಸುಬ್ರಹ್ಮಣ್ಯ ಶಾಸ್ತ್ರಿಗಳು ಕಂಪಿಲರಾಯನ ಪಾತ್ರವನ್ನು ಅಮೋಘವಾಗಿ ನಿರ್ವಹಿಸಿದ್ದರು. ರತ್ನಾಜಿಯ ಪಾತ್ರವನ್ನು ನಿರ್ವಹಿಸಿದವರು ಪಂಚಭಾಷಾ ತಾರೆ ವಿನಯಾ ಪ್ರಸಾದ್. ವಿನಯಾ ಅವರನ್ನು ತಾರೆಯಾಗಿ ರೂಪಿಸುವಲ್ಲಿ ಇಂತಹ ನಾಟಕಗಳಲ್ಲಿನ ಅವರ ಪಾತ್ರಪೋಷಣೆ ಮಹತ್ವದ ಪಾತ್ರ ವಹಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಮೂರೂ ಪ್ರಮುಖ ಪಾತ್ರಧಾರಿಗಳ ಅಮೋಘ ಅಭಿನಯ ಪ್ರಿಯ ವೀಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು.

‘ಎಂದುರೋ ಮಹಾನುಭಾವುಲು’ ಒಂದು ಸಂಗೀತ ಪ್ರಧಾನ ನಾಟಕ. ನಾಟಕಕ್ಕೆ ಸಂಗೀತ ನಿರ್ದೇಶನ ಮಾಡಿದ್ದವರು ಖ್ಯಾತ ವಯಲಿನ್ ವಿದ್ವಾಂಸರೂ ಸಂಗೀತ ಸಂಯೋಜಕರೂ ಆದ ಎ.ವಿ.ಕೃಷ್ಣಮಾಚಾರ್ ಅಲಿಯಾಸ್ ಪದ್ಮಚರಣ್. ಹಿನ್ನೆಲೆ ಗಾಯನದಲ್ಲಿ ಸಹಕರಿಸಿ ನಾಟಕವನ್ನು ರಸಪಾಕಗೊಳಿಸಿದವರು ವಿದ್ವಾನ್ ಎಸ್.ಶಂಕರ್ ಅವರು. ಮುಖ್ಯ ಪಾತ್ರಗಳಲ್ಲಿ ಸುಬ್ರಹ್ಮಣ್ಯ ಶಾಸ್ತ್ರಿಗಳು,ಕೃಷ್ಣಶರ್ಮ, ಮುರಳಿ ಹಾಗೂ ಪ್ರಹ್ಲಾದ್ ಅವರುಗಳು ಮನೋಜ್ಞವಾಗಿ ಅಭಿನಯಿಸಿದ್ದರು. ತ್ಯಾಗರಾಜರ ಬದುಕಿನ ಒಂದು ಘಟನೆಯನ್ನು ಆಧರಿಸಿ ಶರ್ಮರು ರಚಿಸಿದ್ದ ಈ ನಾಟಕವೂ ಸಹಾ ಅಪಾರ ಜನಪ್ರೀತಿಯನ್ನು ಗಳಿಸಿಕೊಂಡದ್ದಲ್ಲದೆ ನಮಗೂ ತೃಪ್ತಿ—ಸಮಾಧಾನಗಳನ್ನು ತಂದುಕೊಟ್ಟವು.

ಇನ್ನು ನಮ್ಮದೇ ಧಾರಾವಾಹಿಯನ್ನು ನಿರ್ಮಿಸಲು ನಿರ್ದೇಶಕರು ಸಲಹೆ ನೀಡಿದ್ದರಲ್ಲಾ, ಆ ಕುರಿತು ಚಿಂತಿಸುತ್ತಿದ್ದಾಗಲೇ ನನಗೆ ಥಟ್ಟನೆ ನೆನಪಿಗೆ ಬಂದದ್ದು ಸರ್ ಆರ್ಥರ್ ಕಾನನ್ ಡೈಲ್ ರ ಶೆರ್ಲಾಕ್ ಹೋಮ್ಸ್ ರ ಕಥೆಗಳು! ವೈಎನ್ಕೆ ಅವರ ಸಲಹೆಯ ಮೇರೆಗೆ ಈ ಕಥೆಗಳನ್ನು ಓದತೊಡಗಿದ್ದ ನಾನು ಶೆರ್ಲಾಕ್ ಹೋಮ್ಸ್ ನ ಕಟ್ಟಾ ಅಭಿಮಾನಿಯೇ ಆಗಿಬಿಟ್ಟಿದ್ದೆ! ಅನೇಕ ಮಹತ್ವದ ಚಾರಿತ್ರಿಕ ಕಾದಂಬರಿಗಳನ್ನು ರಚಿಸಿದ್ದರೂ ಕಾನನ್ ಡೈಲ್ ರಿಗೆ ಜನಪ್ರಿಯತೆಯನ್ನು ತಂದುಕೊಟ್ಟದ್ದು ಮಾತ್ರ ಅವರು ಸ್ಟ್ರ್ಯಾಂಡ್ ಮ್ಯಾಗಜಿ಼ನ್ ಗಾಗಿ ಬರೆದ ಶೆರ್ಲಾಕ್ ಹೋಮ್ಸ್ ಕಥೆಗಳು! ಈ ವಿಶಿಷ್ಟ ಪತ್ತೇದಾರಿ ಕಥೆಗಳು ಅದಾವ ಪರಿಯಲ್ಲಿ ಓದುಗರಿಗೆ ಮೋಡಿ ಮಾಡಿದ್ದವೆಂದರೆ ಒಮ್ಮೆ ಕಾನನ್ ಡೈಲ್ ರೇ ಬೇಸತ್ತು ಈ ಸರಣಿಯನ್ನು ನಿಲ್ಲಿಸಿಬಿಡುತ್ತೇನೆಂದು ತೀರ್ಮಾನಿಸಿ ಶೆರ್ಲಾಕ್ ಹೋಮ್ಸ್ ನ ಅಂತ್ಯದ ಕಥೆ ಬರೆದಾಗ ಸ್ಟ್ರ್ಯಾಂಡ್ ಪತ್ರಿಕಾ ಕಛೇರಿಯ ಮುಂದೆ ‘ಸರಣಿ ನಿಲ್ಲಿಸಬಾರದು’ ಎಂದು ಜನ ಘೋಷಣೆ ಕೂಗಿದ್ದರಂತೆ! ಕಾನನ್ ಡೈಲ್ ರಿಗೆ ‘ಸರಣಿ ನಿಲ್ಲಿಸಬೇಡಿ’ ಎಂದು ಬೇಡಿಕೊಂಡು ಸಹಸ್ರಾರು ಪತ್ರಗಳು ಬಂದವಂತೆ! ಬೇರೆ ಮಾರ್ಗವಿಲ್ಲದೆ ಓದುಗರ ಪ್ರೀತಿಯ ಒತ್ತಾಯಕ್ಕೆ ಮಣಿದು ಕಾನನ್ ಡೈಲ್ ಅವರು ‘ರಿಟರ್ನ್ ಆಫ್ ಶೆರ್ಲಾಕ್ ಹೋಮ್ಸ್’ ಎಂದು ಸರಣಿಯನ್ನು ಮತ್ತೆ ಮುಂದುವರಿಸಿದ್ದರು! ಕಥೆ ಕಾಲ್ಪನಿಕ.. ಕಾಲ್ಪನಿಕ.. ಆದರೂ ಶೆರ್ಲಾಕ್ ಹೋಮ್ಸ್ ನ ಮನೆ ಎಂದು ಲೇಖಕರು ಹಾಗೇ ಸುಮ್ಮನೆ ಬಿಂಬಿಸಿರುವ “ನಂಬರ್ 221/ಬಿ ಬೇಕರ್ ಸ್ಟ್ರೀಟ್” ಮಾತ್ರ ಇಂದು ಲಂಡನ್ ನ ಒಂದು ಪ್ರೇಕ್ಷಣೀಯ ಸ್ಥಳ! ನಿಜಕ್ಕೂ ಅಲ್ಲಿ ಹೋಮ್ಸ್ ವಾಸಿಸುತ್ತಿದ್ದ ಎಂದೇ ಜನಮನದಲ್ಲಿ ಅಚ್ಚೊತ್ತಿಬಿಟ್ಟಿದೆ! ಲಂಡನ್ ಗೆ ಹೋದ ಹೋಮ್ಸ್ ಅಭಿಮಾನಿಗಳು ಬೇಕರ್ ಸ್ಟ್ರೀಟ್ ಗೆ ಹೋಗದೇ ಬಂದದ್ದೇ ಇಲ್ಲ! ನಾನೂ ಎರಡು ಬಾರಿ ಹೋಗಿ ಬಂದಿದ್ದೇನೆ! ಹೋಮ್ಸ್ ಬಳಸುತ್ತಿದ್ದ ಎಂದು ಲೇಖಕರು ಕಥೆಗಳಲ್ಲಿ ವರ್ಣಿಸಿರುವ ಆ ಕಾಲದ ವಸ್ತು ವಿಶೇಷಗಳೆಲ್ಲವನ್ನೂ(ಪೈಪ್, ಉದ್ದನೆಯ ಹ್ಯಾಟ್, ವಯೋಲಿನ್, ಸ್ಟಿಕ್ ಇತ್ಯಾದಿ) ಸಂಗ್ರಹಿಸಿಟ್ಟು ಆ ಮನೆಯನ್ನು ಒಂದು ಮ್ಯೂಸಿಯಂನಂತೆಯೇ ಮಾಡಿಟ್ಟಿದ್ದಾರೆ.

ಶೆರ್ಲಾಕ್ ಹೋಮ್ಸ್ ಕಥೆಗಳನ್ನು ಆಧರಿಸಿ ಇಂಗ್ಲೀಷ್ ಭಾಷೆಯಲ್ಲಿ ಅನೇಕ ಧಾರಾವಾಹಿಗಳೂ ಚಲನಚಿತ್ರಗಳೂ ನಿರ್ಮಾಣಗೊಂಡಿವೆ. ಜಗತ್ತಿನಾದ್ಯಂತ ಇಷ್ಟು ಜನಪ್ರಿಯವಾಗಿರುವ ಈ ಹೋಮ್ಸ್ ಕಥೆಗಳನ್ನು ಕನ್ನಡಕ್ಕೆ ಏಕೆ ಅಳವಡಿಸಿಕೊಳ್ಳಬಾರದು ಎಂದು ಚಿಂತಿಸತೊಡಗಿದೆ. ಆದರೆ ಪಕ್ಕಾ ಬ್ರಿಟಿಷ್ ಸಂಸ್ಕೃತಿ—ವಾತಾವರಣಗಳ ಆ ಕಥೆಗಳನ್ನು ನಮ್ಮ ವಾತಾವರಣಕ್ಕೆ ಹೊಂದಿಸಿಕೊಂಡು ರೂಪಾಂತರಿಸುವುದು ದೊಡ್ಡ ಸವಾಲಿನ ಸಂಗತಿಯೇ ಆಗಿತ್ತು. ಅದೇ ಸಮಯಕ್ಕೆ ಸರಿಯಾಗಿ ಮಯೂರ ಮಾಸ ಪತ್ರಿಕೆಯಲ್ಲಿ ಶೆರ್ಲಾಕ್ ಹೋಮ್ಸ್ ನ ಒಂದು ಸಾಹಸದ ಕಥೆಯ ಅನುವಾದ ಪ್ರಕಟವಾಯಿತು. ಅನುವಾದಿಸಿದ್ದವರು ವಾಸುದೇವರಾವ್ ಅನ್ನುವವರು. ಕೂಡಲೇ ಕಾರ್ಯೋನ್ಮುಖನಾದ ನಾನು ವಾಸುದೇವರಾವ್ ಅವರ ವಿಳಾಸವನ್ನು ಪಡೆದುಕೊಂಡು ಅವರನ್ನು ನಮ್ಮ ಕೇಂದ್ರಕ್ಕೆ ಆಹ್ವಾನಿಸಿ ನಮಗಾಗಿ ಕೆಲವು ಕಥೆಗಳನ್ನು ಅನುವಾದಿಸಿಕೊಡಲು ವಿನಂತಿಸಿಕೊಂಡೆ. ಹಾಗೆ ಅವರು ಅನುವಾದಿಸಿ ರೂಪಾಂತರಿಸಿಕೊಟ್ಟ ಮೊದಲ ಕಥೆ—’ಮರಣಾಸನ್ನ ಪತ್ತೇದಾರ'(the dying detective).”adventures of sherlock holmes” ಕನ್ನಡದಲ್ಲಿ “ಅಜಿತನ ಸಾಹಸಗಳು” ಆಯಿತು;ಪತ್ತೇದಾರ ಶೆರ್ಲಾಕ್ ಹೋಮ್ಸ್ ಕನ್ನಡದಲ್ಲಿ ಪತ್ತೇದಾರ ಅಜಿತ್ ನಾಗಿ ರೂಪಾಂತರಗೊಂಡ; ಡಾ॥ವ್ಯಾಟ್ಸನ್ ಅವರು ಡಾ॥ರಾವ್ ಆದರು. ಸಾಧ್ಯವಾದಷ್ಟೂ ನಮ್ಮ ನೆಲಕ್ಕೆ ಹೊಂದಿಸಲು ಸಾಧ್ಯವಾಗುವಂತಹ ಕಥೆಗಳನ್ನು ಆರಿಸಿಕೊಂಡು ರೂಪಾಂತರ ಕಾರ್ಯ ಆರಂಭಿಸಿದೆ.

ಇನ್ನು ಮುಖ್ಯ ಪಾತ್ರಗಳಿಗೆ ಕಲಾವಿದರ ಆಯ್ಕೆಯ ವಿಚಾರ ಬಂದಾಗ ನನಗೆ ಮೊದಲು ಹೊಳೆದದ್ದು ರಂಗಕರ್ಮಿ—ಆತ್ಮೀಯ ಗೆಳೆಯ ಬಿ.ವಿ.ರಾಜಾರಾಂ ಕಂಚಿನ ಕಂಠದ—ನೀಳಕಾಯದ ರಾಜಾರಾಂ ಅಜಿತ್ ನ ಪಾತ್ರಕ್ಕೆ ಸೂಕ್ತ ಆಯ್ಕೆ ಎನ್ನಿಸಿತು. ಮತ್ತೊಂದು ಮುಖ್ಯ ಪಾತ್ರವಾದ ಡಾ॥ರಾವ್ ಆಗಿ ಮತ್ತೊಬ್ಬ ಪ್ರತಿಭಾವಂತ ರಂಗನಟ ಪೃಥ್ವೀರಾಜ್ ಆಯ್ಕೆಯಾದರು. ಆ ವೇಳೆಗಾಗಲೇ ನಮ್ಮ ಪರಿಚಿತ ಆತ್ಮೀಯ ಬಳಗಕ್ಕೆ ಸೇರ್ಪಡೆಯಾಗಿದ್ದ ಪ್ರತಿಭಾವಂತ ನಾಟಕಕಾರ ಕೃಷ್ಣಶರ್ಮರು ತಮ್ಮ ಪತ್ನಿ ಸಂಧ್ಯಾ ಶರ್ಮ ಅವರೊಂದಿಗೆ ಕೂಡಿ ಕೆಲ ಕಥೆಗಳನ್ನು ರೂಪಾಂತರಿಸಿಕೊಡಲು ಒಪ್ಪಿಕೊಂಡರು. ಕೆಲ ಕಥೆಗಳನ್ನು ನಾನೇ ಅಳವಡಿಸಿಕೊಳ್ಳಲು ಆರಂಭಿಸಿದೆ. ಈ ಧಾರಾವಾಹಿಯ ನಿರ್ಮಾಣದುದ್ದಕ್ಕೂ ನನಗೆ ಬಲಗೈ ಬಂಟನಾಗಿ ಕೆಲಸ ಮಾಡಿದವನೆಂದರೆ ರಾಜೇಂದ್ರ ಕಟ್ಟಿ. ನಾವು ಮಾಡುತ್ತಿದ್ದ ‘ಕಚಗುಳಿ’ ಎಂಬ ಹಾಸ್ಯ ಕಾರ್ಯಕ್ರಮಕ್ಕೆ ನಮಗೆ ವಿಶೇಷವಾಗಿ ನೆರವಾಗುತ್ತಿದ್ದ ಕೆ.ಆರ್.ನಾಗಭೂಷಣ್ ಅವರನ್ನು ಈ ನಮ್ಮ ಧಾರಾವಾಹಿಯ ನಿರ್ಮಾಣ ಕಾರ್ಯದಲ್ಲೂ ನೆರವಾಗಲು ಆಹ್ವಾನಿಸಿದೆ. ಹೀಗೆ ಸಾಕಷ್ಟು ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ಒಂದು ಶುಭ ಮುಹೂರ್ತದಲ್ಲಿ ನಮ್ಮ ದೂರದರ್ಶನದ್ದೇ ಧಾರಾವಾಹಿಯಾದ “ಅಜಿತನ ಸಾಹಸಗಳು” ಚಿತ್ರೀಕರಣವನ್ನು ಪ್ರಾರಂಭಿಸಿಯೇಬಿಟ್ಟೆವು. ಸ್ಟುಡಿಯೋದಿಂದ ಹೊರಬಂದು ಸಂಪೂರ್ಣ ಹೊರಾಂಗಣದಲ್ಲೇ ಚಿತ್ರೀಕರಿಸಬೇಕಾದ್ದರಿಂದ ನಮಗೆ ಅಗತ್ಯವಿರುವಂತಹ ಲೊಕೇಷನ್ ಗಳನ್ನು ದೊರಕಿಸಿಕೊಡಲು ನೆರವಾದವರು ನಾಗಭೂಷಣ್.

ಸಂಭ್ರಮದಿಂದ ಚಿತ್ರೀಕರಣವನ್ನೇನೋ ಆರಂಭ ಮಾಡಿದೆವು.. ಆದರೆ ಒಂದೆರಡು ದಿನಗಳಲ್ಲೇ ಬಗೆಬಗೆಯ ಸಮಸ್ಯೆಗಳು ಒಂದೊಂದಾಗಿ ಎದುರಾಗತೊಡಗಿದವು! ಕೆಲವೊಮ್ಮೆ ಹಗಲು ರಾತ್ರಿ ಎಡೆ ಬಿಡದೆ ಚಿತ್ರೀಕರಣ ನಡೆಸಬೇಕಾಗುತ್ತಿತ್ತು. ನಾವು ಹಾಗೂ ಕಲಾವಿದರದೇನೋ ಸರಿ, ಆದರೆ ನಮ್ಮ ತಾಂತ್ರಿಕ ವರ್ಗದ ಸಿಬ್ಬಂದಿಗೆ ನಿರ್ದಿಷ್ಟ ಕಾರ್ಯಾವಧಿ ನಿಗದಿಯಾಗಿತ್ತು!ಕೆಲವರಿಗೆ ಹೆಚ್ಚಿನ ಅವಧಿಯ ಕೆಲಸಕ್ಕೆ ವಿಶೇಷ ಭತ್ಯೆಯೂ ದೊರೆಯುತ್ತಿರಲಿಲ್ಲ! ಹಾಗಿದ್ದೂ ಅನೇಕ ತಂತ್ರಜ್ಞರು ಯಾವ ಗೊಣಗು—ಕಿಸುರುಗಳೂ ಇಲ್ಲದೆ ನಮಗೆ ಸಹಕರಿಸಿದರೆನ್ನುವುದು ನಿಜಕ್ಕೂ ನಮಗೆ ನೆಮ್ಮದಿ ನೀಡಿದ ಹಾಗೂ ನಮ್ಮ ಬಲವನ್ನು ಹೆಚ್ಚಿಸಿದ ಸಂಗತಿಯಾಗಿತ್ತು. ಬಹುತೇಕ ನಮ್ಮ ಚಿತ್ರೀಕರಣ ನಡೆಯುತ್ತಿದ್ದುದು ಎನ್.ಆರ್.ಕಾಲನಿಯ—ನಾಗಭೂಷಣರ ಪರಿಚಿತರ ಮನೆಗಳಲ್ಲಿ. ಎಷ್ಟೋ ಬಾರಿ ಬೆಳಿಗ್ಗೆ ಹೋಗಿ ಅವರುಗಳ ಮನೆಯಲ್ಲಿ ಕ್ಯಾಮರಾ ಇಟ್ಟು ಪ್ರತಿಷ್ಠಾಪಿಸಿಬಿಟ್ಟರೆ ಮತ್ತೆ ಜಾಗ ತೆರವು ಮಾಡುತ್ತಿದ್ದುದು ಸಮರಾತ್ರಿಗೇ! ಇಂಥ ಸಂದರ್ಭಗಳಲ್ಲೆಲ್ಲಾ ಆ ಮನೆಯವರು ನಮಗೆ ನೀಡಿದ ಸಹಕಾರ—ಪ್ರೋತ್ಸಾಹಗಳು ನಿಜಕ್ಕೂ ಶ್ಲಾಘನೀಯ. ನನಗೆ ಅವರುಗಳ ಪೈಕಿ ಈಗಲೂ ನೆನಪಿರುವವರೆಂದರೆ ಆಹ್ಲಾದ ರಾವ್ ಹಾಗೂ ಶಿವಶಂಕರ್ ಅವರು ನಮ್ಮ ರಂಗಭೂಮಿಯ ಮಿತ್ರ ನೀಲಿಯ ಸೋದರ.

ಬೆಳಗಿನಿಂದ ರಾತ್ರಿಯವರೆಗೆ ನಮ್ಮ ಗದ್ದಲ—ಗಲಾಟೆಗಳನ್ನು ಸಹಿಸಿಕೊಳ್ಳುವುದಷ್ಟೇ ಅಲ್ಲದೆ ನಮಗೆ ಅವರುಗಳ ಮನೆಯಿಂದಲೇ ವಿದ್ಯುತ್ ಅನ್ನೂ ನೀಡಬೇಕಾದ ಅನಿವಾರ್ಯತೆ ಇತ್ತು! ದೂರದರ್ಶನದ ನಮ್ಮ ಹೊರಾಂಗಣ ಕಾರ್ಯಕ್ರಮಗಳಿಗೆ ಎಂದೂ ಜನರೇಟರ್ ಸೌಲಭ್ಯ ಒದಗಿಸುವ ಪದ್ಧತಿಯೇ ಇರಲಿಲ್ಲ! ಜನರೇಟರ್ ಮಾತಂತಿರಲಿ, ಅಗತ್ಯವಿರುವಷ್ಟು ಲೈಟ್ ಗಳೂ ಸಹಾ ನಮಗೆ ದೊರೆಯುತ್ತಿರಲಿಲ್ಲ! ಇದ್ದ ಬದ್ದ ಒಂದೂ ಮತ್ತೊಂದು ಲೈಟ್ ಗಳನ್ನು ಬಳಸಿಯೇ ಶ್ರೇಷ್ಠ ಗುಣಮಟ್ಟದ ಕಾರ್ಯಕ್ರಮ ನಿರ್ಮಿಸುವ ಹೊಣೆ ನಮ್ಮ ಮೇಲಿತ್ತು! ‘ಅತಿ ಕಡಿಮೆ ಸೌಲಭ್ಯಗಳಲ್ಲಿ ಅತ್ಯುತ್ತಮ ಕಾರ್ಯಕ್ರಮ ರೂಪಿಸುವುದೇ ನಿಮ್ಮ ಸೃಜನಶೀಲತೆಗೊಂದು ದೊಡ್ಡ ಸವಾಲು’ ಎಂದ ನಸುನಗುತ್ತಿದ್ದ ನಮ್ಮ ನಿರ್ದೇಶಕ ಗುರುನಾಥ್ ಅವರ ಮುಗುಳ್ನಗುವಿನ ಹಿಂದಿನ ಸಣ್ಣ ತುಂಟತನ ನಮಗೆ ಅರ್ಥವಾಗದೇ ಏನೂ ಇರಲಿಲ್ಲ! ಏನೇ ಆದರೂ ಬಹಳಷ್ಟು ದಿನಗಳು ಒಂದೇ ಮನೆಯಲ್ಲಿ ಚಿತ್ರೀಕರಣ ನಡೆಸುವಾಗ ಅವರ ಮನೆಯಿಂದಲೇ ತೆಗೆದುಕೊಂಡು ಬಳಸುವ ವಿದ್ಯುತ್ತಿನ ಬೆಲೆಯನ್ನಾದರೂ ನಾವು ಕಟ್ಟಿಕೊಡುವುದು ಬೇಡವೇ ಎಂದರೆ ಅದಕ್ಕೆಲ್ಲಾ ನಮ್ಮ ಸರ್ಕಾರಿ ಕಛೇರಿಯಲ್ಲಿ ಮಂಜೂರಾತಿ ಇಲ್ಲ! ಶೂಟಿಂಗ್ ನಡೆಸುತ್ತಿದ್ದ ಮನೆಯವರಿಗೆ ಮುಖ ತೋರಿಸಲು ನನಗೇ ಒಂದು ನಮೂನೆ ನಾಚಿಕೆಯಾಗುತ್ತಿತ್ತು. ‘ಹೇಗಾದರೂ ಮಾಡಿ ಈ ಸಮಸ್ಯೆಗೆ ಒಂದು ಪರಿಹಾರ ಸೂಚಿಸಿ ಸರ್ ‘ ಎಂದು ನಾನು ನಿರ್ದೇಶಕರನ್ನೇ ಕೇಳಿಕೊಂಡೆ. ಕ್ಷಣಕಾಲ ಚಿಂತಿಸಿದ ಅವರು, “ಒಂದು ಕೆಲಸ ಮಾಡು..ಆ ಮನೆಯವರನ್ನು ಯಾವುದಾದರೊಂದು ದೃಶ್ಯದಲ್ಲಿ ತೋರಿಸಿ ಅವರ ಹೆಸರಿಗೂ ಕಲಾವಿದರು ಎಂದು ನಮೂದಿಸಿ ಒಂದು ಚೆಕ್ ಬರೆಸಿ ಕೊಟ್ಟುಬಿಡು.. ನಾನು ಇದಕ್ಕೆ ಅನುಮತಿ ನೀಡುತ್ತೇನೆ’ ಎಂದು ಪರಿಹಾರ ಸೂಚಿಸಿದರು! ಅಲ್ಲಿಗೆ ಒಂದು ಸಮಸ್ಯೆ ಬಗೆಹರಿದಂತಾಯಿತು.

ಶೂಟಿಂಗ್ ಸಮಯದಲ್ಲಿ ನಮಗೆ ಎದುರಾಗುತ್ತಿದ್ದ ಮತ್ತೊಂದು ದೊಡ್ಡ ಸಮಸ್ಯೆಯೆಂದರೆ ಊಟ ತಿಂಡಿಯದ್ದು. ಕಲಾವಿದರಿಗೆಲ್ಲಾ ಅವರ ಸಂಭಾವನೆಯ ಜೊತೆಗೆ ದೈನಂದಿನ ಭತ್ಯೆಯನ್ನೂ ಸೇರಿಸಿ ಚೆಕ್ ಕೊಡಲಾಗುತ್ತಿತ್ತು. ಆದರೆ ನಮ್ಮ ಕೇಂದ್ರದ ತಂತ್ರಜ್ಞರಿಗೆ ಹಾಗೂ ನಮಗೆ ಯಾವ ಭತ್ಯೆಯೂ ಇರಲಿಲ್ಲ! ಸಂಬಳ ನೀಡುತ್ತೇವಲ್ಲಾ, ಅದರಲ್ಲೇ ಎಲ್ಲಾ ಸೇರಿದೆ ಎಂದು ನಮ್ಮ ಅಕೌಂಟ್ಸ್ ವಿಭಾಗದವರು ಹೇಳಿ ಕೈತೊಳೆದುಕೊಳ್ಳುತ್ತಿದ್ದರು. ಸರಿಯೇ! ಆದರೆ ಹೊತ್ತುಗೊತ್ತಿನ ಪರಿವೆಯಿಲ್ಲದೆ ಕೆಲಸ ಮಾಡುವ ತಂತ್ರಜ್ಞರಿಗೆ ‘ಮನೆಯಿಂದ ಊಟ ತಂದುಕೊಳ್ಳಿ’ ಎಂದು ಹೇಳಲಾದೀತೇ? ಅಥವಾ ಶೂಟಿಂಗ್ ನಡುವೆ ‘ಹೋಗಿ ನಿಮ್ಮ ಖರ್ಚಿನಲ್ಲಿ ಊಟ ಮಾಡಿಕೊಂಡು ಬನ್ನಿ’ ಎಂದು ಕಳಿಸಲಾದೀತೇ? (ವಾಸ್ತವವಾಗಿ ಹಾಗೆ ಮಾಡಿದ ಕಾರ್ಯಕ್ರಮ ನಿರ್ಮಾಪಕರೂ ಇದ್ದಾರೆಂಬುದು ನಂತರದಲ್ಲಿ ನನಗೆ ತಿಳಿದುಬಂದ ವಿಷಯ!)
ಮಾಡುವುದಾದರೂ ಏನು? ಒಂದಷ್ಟು ಸಮಯ ನಾನು ಹಾಗೂ ಗೆಳೆಯ ಕಟ್ಟಿ ನಮ್ಮ ಜೇಬಿನಿಂದಲೇ ಹಣ ತೆಗೆದುಕೊಟ್ಟು ಊಟ ಹಾಕಿಸಿದೆವು.

ಎನ್ ಆರ್ ಕಾಲನಿಯಲ್ಲಿ ನಟ ‘ಚೋಮ’ ವಾಸುದೇವ ರಾವ್ ಅವರ ಸೋದರಿ ನಡೆಸುತ್ತಿದ್ದ ಒಂದು ಮೆಸ್ ಇತ್ತು. ಅಲ್ಲಿ ಒಂದು ಊಟಕ್ಕೆ ಬರೇ ನಾಲ್ಕು ರೂಪಾಯಿಗಳು!ಅದೂ ರುಚಿರುಚಿಯಾದ ಫುಲ್ ಮೀಲ್ಸ್! ಆ ಮಹಾತಾಯಿ ಅನ್ನಪೂರ್ಣೇಶ್ವರಿಯ ದಯೆಯಿಂದ ಒಂದಷ್ಟು ದಿನಗಳ ಊಟದ ಸಮಸ್ಯೆ ನಿವಾರಣೆಯಾಯಿತು. ಆದರೆ ಎಷ್ಟು ದಿನಗಳು ಇದನ್ನಾದರೂ ಭರಿಸಲು ನಮಗೆ ಸಾಧ್ಯ? ಇಬ್ಬರ ಜೇಬೂ ಖಾಲಿಯಾಗುತ್ತಾ ಬಂದಂತೆ ಬೇರೆ ಮಾರ್ಗವಿಲ್ಲದೆ ಕಲಾವಿದರಿಗೆ ಪರಿಸ್ಥಿತಿಯನ್ನು ವಿವರಿಸಿ, “ನಿಮ್ಮ ಊಟ ತಿಂಡಿಗಾಗಿ ನೀಡುವ ಭತ್ಯೆ ನಿಮಗೆ ಸಿಗುವ ಚೆಕ್ ನಲ್ಲೇ ಸೇರಿದೆ; ದಯವಿಟ್ಟು ನೀವುಗಳು ಸ್ವಲ್ಪ ಹಣ ನೀಡಿದರೆ ಖರ್ಚು ತೂಗಿಸಲು ಅನುಕೂಲವಾಗುತ್ತದೆ” ಎಂದು ಕೇಳಿಕೊಂಡೆವು. “ಆಗಲಿ ಸರ್.. ಅದಕ್ಕೇನಂತೆ” ಎಂದ ಕಲಾವಿದರು ನಮ್ಮ ಬೆಂಬಲಕ್ಕೆ ನಿಂತರು. ಏನೇ ಆದರೂ ಅದು ನಮ್ಮ ಹೊರೆಯನ್ನು ಪೂರ್ತಿ ಇಳಿಸಲೇನೂ ನೆರವಾಗದೆ ನನ್ನ ಹಾಗೂ ಗೆಳೆಯ ಕಟ್ಟಿಯ ಪೇಚಾಟ ಹಾಗೇ ಮುಂದುವರಿಯಿತು. ಈ ಎಲ್ಲ ಸಂಕಟಗಳಿಗೆ ಕಳಸಪ್ರಾಯವಾಗಿ ಮೂಡಿಬಂದ ಸಂಗತಿಯೆಂದರೆ ಮಡಿವಂತಿಕೆಯೇ ಮೂರ್ತಿವೆತ್ತಂತಿದ್ದ ನಮ್ಮ ಒಬ್ಬ ಹಿರಿಯ ಅಧಿಕಾರಿಗಳು ನಮ್ಮ ಮೇಲೆ ಹೊರಿಸಿದ ಆರೋಪ!!

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

February 16, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: