ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆಬ್ಬೆಟ್ಟು ರಾಮಕ್ಕ

ಹೆಬ್ಬೆಟ್ಟು ರಾಮಕ್ಕ – ಪ್ರಸ್ತುತ ರಾಜಕೀಯ ಸನ್ನಿವೇಶಗಳ ಪ್ರತಿಬಿಂಬ

ಗೊರೂರು ಶಿವೇಶ್

ಎಪ್ಪತ್ತು ಎಂಬತ್ತರ ದಶಕದಲ್ಲಿ ರೈತ ಚಳುವಳಿ ತೀವ್ರವಾಗಿದ್ದ ಸಂದರ್ಭದಲ್ಲಿ ಬಿಡುಗಡೆಯಾದ ಸಿನಿಮಾ “ಸಂಕ್ರಾಂತಿ”. ನಾಗತಿಹಳ್ಳಿ ಚಂದ್ರಶೇಖರರ ‘ಬನ್ನೇರಿ’ ಕಥೆಯನ್ನಾಧರಿಸಿದ ಆ ಸಿನಿಮಾ ಹಾಸನದ ಸಾಲಗಾಮೆ ನಂಜುಂಡೆಗೌಡರಿಗೆ ಅಪಾರ ಹೆಸರನ್ನು ತಂದು ಕೊಟ್ಟಿದ್ದಲ್ಲದೆ ಹಳ್ಳಿಯ ಬದುಕಿನ ಕುರಿತಾದ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೈಲಿಗಲ್ಲಾದ ಚಿತ್ತವೂ ಆಯಿತು.

ನಂತರ ಹದಿನೈದು ಚಿತ್ರಗಳನ್ನು ನಿರ್ದೇಶಿಸಿದ ಅವರು ಸಂಕ್ರಾಂತಿ ಚಿತ್ರದ ಮುಂದುವರಿಕೆಯ ಭಾಗವೆಂದು ಭಾಸವಾಗುವ ‘ಹೆಬ್ಬೆಟ್ಟು ರಾಮಕ್ಕ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಅಲ್ಲಿಯ ಬನ್ನೇರಿ ಇಲ್ಲಿ ರಾಮಕ್ಕಳಾಗಿದ್ದರೆ ಅಲ್ಲಿನ ಸಿದ್ರಾಮ ಮತ್ತು ಪುಕ್ಸಟ್ಟೆಯ ಮಿಶ್ರಣದಂತೆ ಇಲ್ಲಿ ಕಲ್ಲೇಶಿ ಇದ್ದಾನೆ.

ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ಹೊಂದಿರದ, ಸಣ್ಣ ಪುಟ್ಟ ಕಾಂಟ್ರಾಕ್ಟ್ ಮಾಡಿಕೊಂಡಿರುವ ಕಲ್ಲೇಶಿ, ಇದರಿಂದಾಗಿ ಜಮೀನಿನ ನಿರ್ವಹಣೆಯ ಜವಬ್ದಾರಿಯ ಜೊತೆಗೆ ಗೃಹಕೃತ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಅವಿದ್ಯಾವಂತ ಆದರೆ ತಿಳುವಳಿಕೆಯುಳ್ಳ ಹೆಂಗಸು ರಾಮಕ್ಕ. ಮುಂದೆ ಗಂಡನ ರಾಜಕೀಯ ಆಸಕ್ತಿಯ ಬಲಿಪಶುವಾಗಿ, ಅನಿವಾರ್ಯವಾಗಿ ರಾಜಕೀಯ ಪ್ರವೇಶಿಸಿ ಜಿಲ್ಲಾಪಂಚಾಯ್ತಿ ಸದಸ್ಯಳಾಗಿ ಆಯ್ಕೆಯಾಗುವುದಲ್ಲದೆ ಅಲ್ಲಿ ಉದ್ಭವವಾಗುವ ಅನಿರೀಕ್ಷಿತ ಪರಿಸ್ಥಿತಿಗಳಿಂದಾಗಿ ಅಧ್ಯಕ್ಷಳಾಗಿಯೂ ಆಯ್ಕೆಯಗುತ್ತಾಳೆ.

ಆಕೆಯ ಅನಕ್ಷರತೆಯ ಲಾಭ ಪಡೆಯ ಹೊರಟ ಗಂಡ, ಅಧಿಕಾರಿಗಳು, ಜನಪ್ರತಿನಿಧಿಗಳು. ಇವುಗಳನ್ನು ನಿಧಾನವಾಗಿ ಅರ್ಥಮಾಡಿಕೊಳ್ಳುತ್ತಾ ಈ ಎಲ್ಲಾ ಸಮಸ್ಯೆಗಳಿಗೆ ಸಾಕ್ಷರತೆಯ ಮೂಲಕ ಪರಿಹಾರ ಕಂಡುಕೊಂಡು ಮುಂದೆ ಉದ್ಭವವಾಗುವ ಪರಿಸ್ಥಿತಿಯನ್ನು ಹೇಗೆ ಎದುರಿಸುತ್ತಾಳೆ. ಎಂಬುದು ಚಿತ್ರದ ಕಥಾಹಂದರ.

ಅವಿದ್ಯಾವಂತ ಹೆಣ್ಣು ಮಗಳೊಬ್ಬಳು ತನಗರಿವಿಲ್ಲದ ರಾಜಕೀಯ ಪರಿಸ್ಥಿತಿಯನ್ನೆದುರಿಸುವ ಕಥೆಯೆಂದು ಮೇಲ್ನೋಟಕ್ಕೆ ಅನಿಸಿದರೂ ಚಿತ್ರವು ಪ್ರಸ್ತುತ ರಾಜಕೀಯ ಪರಿಸ್ಥಿತಿಗೆ ಕನ್ನಡಿ ಹಿಡಿದಿದೆ. ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮದ ಪರಿಣಾಮವೋ, ಹಳ್ಳಿಹಳ್ಳಿಗಳ ಮನೆಮನೆಯಲ್ಲೂ ಚರ್ಚಿತವಾಗುತ್ತಿರುವ ರಾಜಕೀಯ ವಿಷಯಗಳಿಂದಾಗಿಯೋ ನಿಧಾನವಾಗಿ ರಾಜಕೀಯದ ಸುಳಿ ಎಲ್ಲರನ್ನೂ ಸೆಳೆಯುತ್ತಿದೆ.

ಪ್ರತಿಯೊಬ್ಬರು ಅವಕಾಶ ದೊರೆತರೆ ರಾಜಕೀಯಕ್ಕಿಳಿಯ ಬಯಸುವವರೆ. ರಾಜಕೀಯ ಕ್ಷೇತ್ರದ ಮೀಸಲಾತಿಯು, ಎಲ್ಲಾ ವರ್ಗಗಳು, ಹಾಗೂ ಮಹಿಳೆಯರು ಕಾಲಿರಿಸಲು ಅನುವು ಮಾಡಿಕೊಟ್ಟಿದೆ. ಆದರೆ ಗೆಲ್ಲಲೆಬೇಕೆಂಬ ಹಪಾಹಪಿ ಭ್ರಷ್ಟತೆಗೆ ದಾರಿ ಮಾಡಿದೆ. ರಾಜಕೀಯ ಗೆಲ್ಲುವ ವ್ಯಕ್ತಿಯ ಕಲೆಯಾಗಿ ಉಳಿಯದೆ ವಿವಿದ ಸಮೀಕರಣಗಳ ರಾಜಕೀಯ ವಿಜ್ಞಾನವಾಗಿ ಮಾರ್ಪಟ್ಟು ಗೆಲುವಿಗಾಗಿ ಹೊಸ ತಂತ್ರಗಳನ್ನು ಹೆಣೆಯಲಾಗುತ್ತಿದೆ.

ರಾಜಕೀಯ ನಾಯಕರು ತಮಗೆ ಅನುಕೂಲವಾಗುವ ರೀತಿಯಲ್ಲಿ ಮೀಸಲಾತಿ, ಅಭ್ಯರ್ಥಿಗಳ ಆಯ್ಕೆ ಮಾಡಿದರೂ ಒಮ್ಮೊಮ್ಮೆ ಅದು ಅವರಿಗೆ ತಿರುಗುಬಾಣವಾಗುವುದು ಉಂಟು. ನಂಬಿಕೆ ದ್ರೋಹವೆಂಬುದು ಅಲ್ಲಿ ಸಾಮಾನ್ಯ ಸಂಗತಿ. ಇಂಥ ಅಂಶಗಳೆಲ್ಲವೂ ಚಿತ್ರದ ಕಥೆಯಲ್ಲಿ ಸಹಜವಾಗಿ ಮೂಡಿ ಬಂದಿದೆ. ರಾಜಕೀಯ ಹಾವು–ಏಣಿ ಆಟದಲ್ಲಿ ಯಾರು ಯಾರನ್ನು ಯಾವ ರೀತಿ ಬಳಸಿಕೊಳ್ಳುತ್ತಾರೆ. ಎನ್ನುವುದರ ಜೊತೆಗೆ ಜನಸಾಮನ್ಯನೊಬ್ಬ ತಮಗೆ ದೊರೆತ ಅವಕಾಶಗಳನ್ನು ಹೇಗೆ ಬಳಸಿಕೊಳ್ಳುತ್ತಾ ಬೆಳೆಯುತ್ತಾನೆ ಎಂಬುದನ್ನು ಚಿತ್ರದಲ್ಲಿ ತೆರೆದಿಡಲಾಗಿದೆ.

ಬಿಗಿಯಾದ ಚಿತ್ರಕಥೆ, ಕಲಾವಿದರ ಅತ್ಯುತ್ತಮ ಅಭಿನಯ ಚಿತ್ರದ ಜೀವಾಳವಾಗಿದ್ದರೂ ಚಿತ್ರದ ಪ್ರಮುಖ ಆಕರ್ಷಣೆ ಸಂಭಾಷಣೆ. ಗ್ರಾಮೀಣ ಸೊಗಡಿನ ಹೆಜ್ಜೆ ಹೆಜ್ಜೆಗೂ ಪ್ರತಿಸನ್ನಿವೇಶದಲ್ಲೂ ಸಹಜವೇನೋ ಎನ್ನುವಂತೆ ಹರಿದುಬರುವ ಗಾದೆಗಳನ್ನೊಳಗೊಂಡ ಸಂಭಾಷಣೆ, ಚಿತ್ರದಲ್ಲಿ ಪಾತ್ರಗಳು ಅದನ್ನು ಒಪ್ಪಿಸುವ ಶೈಲಿ ಚಿತ್ರವನ್ನು ಹೊಸ ಎತ್ತರಕ್ಕೇರಿಸಿದೆ. ಇದಕ್ಕಾಗಿ ಸಂಭಾಷಣೆ ಬರೆದ ಎಸ್.ಜಿ. ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಬೇಕು. ಛಾಯಗ್ರಾಹಣ ಮತ್ತು ಸಂಗೀತ (ಪೂರ್ಣಚಂದ್ರ ತೇಜಸ್ವಿ) ಚಿತ್ರದ ಯಶಸ್ಸಿಗೆ ಸಾತ್ ನೀಡಿದ್ದು, ದೇವರಾಜ್ ಮತ್ತು ತಾರಾ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಕಲಾವಿದರಿಗೆ ಉತ್ತಮ ಅವಕಾಶ ದೊರೆತಿದ್ದು ನಂಜುಂಡ ಮೈಮ್, ಚಂದ್ರು ಕಾಳೇನಹಳ್ಳಿ ರವರಿಗೆ ಪ್ರಮುಖ ಪಾತ್ರ ದೊರಕಿದ್ದು, ಅವರು ಅದನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ.

ಈ ಬಾರಿಯ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ಕನ್ನಡದಿಂದ ಪ್ರಶಸ್ತಿ ವಿಜೇತ ಏಕೈಕ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹೆಬ್ಬೆಟ್ಟು ರಾಮಕ್ಕ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಗ್ರಾಮ ಪಂಚಾಯತ್‍ಗಳು ಕಾರ್ಯರೂಪಕ್ಕೆ ಬಂದ ನಂತರ ಮಹಿಳಾ ಮೀಸಲಾತಿ ಹೆಂಡತಿಯರ ಹೆಸರಲ್ಲಿ ಗಂಡಸರು ನಡೆಸುವ ದರ್ಬಾರು, ತಮ್ಮ ಅವಿದ್ಯಾವಂತಿಕೆಯಿಂದಾಗಿ ಸಭೆ ಸಮಾರಂಭಗಳಲ್ಲಿ ನಗೆಪಾಟಲಾಗುವ ಬಗೆ.. ಹೀಗೆ ಮೀಸಲಾತಿ ಹಿನ್ನೆಲೆಯ ಲೋಪದೋಷಗಳನ್ನು ಪಟ್ಟಿಮಾಡಿದರೂ ಸದುದ್ದೇಶವುಳ್ಳ ವ್ಯಕ್ತಿ ಜನಪರವಾಗಿ ಕೆಲಸ ಮಾಡಲು ಸಾದ್ಯ ಎಂಬುದನ್ನು ಚಿತ್ರ ಶೃತಪಡಿಸಿದೆ.

ಗ್ರಾಮೀಣ ಹಿನ್ನೆಲೆಯ ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಹಳ್ಳಿಯ ಬದುಕಿನ ವಿವಿದ ಸ್ತರಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಪ್ರೇಮ ಕಥೆಯಿರದ ಚಿತ್ರ ಸಾಕ್ಷ ಚಿತ್ರವಾಗುವ ಸಾಧ್ಯತೆಯನ್ನು ತಮ್ಮ ಅನುಭವ ಹಾಗೂ ಜಾಣ್ಮೆಯ ಮೂಲಕ ಹಾಸ್ಯ ಸನ್ನಿವೇಶಗಳು ಹಾಗೂ ಹಳ್ಳಿಯ ಚಿತ್ರಗಳನ್ನು ಹೆಣೆದು ಬಿಗಿಯಾದ ಚಿತ್ರ ಕಥೆಯ ಮೂಲಕ ಪಾರು ಮಾಡಿದ್ದಾರೆ.

‍ಲೇಖಕರು avadhi

28 May, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading