ಹೆಣ್ಣಿನ ದೇಹ ವ್ಯವಹಾರದ ಕಥೆ ವ್ಯಥೆ – ಗಂಗೂಬಾಯಿ ಕಥಿಯಾವಾಡಿ

ಡಾ ಜ್ಯೋತಿ


ಬಹುತೇಕ ಹೆಣ್ಣುಮಕ್ಕಳಂತೆ, ತಾನು ಪ್ರೀತಿ ಮಾಡಿ ಭರವಸೆಯಿಟ್ಟವರಿಂದಲೇ ಮೋಸಹೋಗಿ ವೇಶ್ಯಾವೃತ್ತಿಗೆ ತಳ್ಳಲ್ಪಟ್ಟ ಹೆಣ್ಣುಮಗಳೊಬ್ಬಳು, ತನ್ನ ದುಸ್ತರ ಪರಿಸ್ಥಿತಿಯನ್ನೇ ಬಂಡವಾಳವಾಗಿಸಿಕೊಂಡು, ಲೈಂಗಿಕ ಕಾರ್ಯಕರ್ತೆಯರಿಗೆ ಆಶಾದಾಯಕ ಬೆಳಕಾಗಿ, ಸಮಾಜದಲ್ಲಿ ತನ್ನದೇ ಛಾಪು ಒತ್ತಿ, ಮುಂಬೈಯ ಕಾಮಾಟಿಪುರದ ನಾಯಕಿಯೆನಿಸಿದ ‘ಗಂಗೂಬಾಯಿ ಕಥಿಯಾವಾಡಿ’ ಜೀವನ ವೃತ್ತಾಂತ ಈಗ ಬೆಳ್ಳಿತೆರೆಯ ಮೇಲೆ ಮೂಡಿಬಂದಿದೆ.

ಈ ಸಿನಿಮಾ, ಸದಾ ಕತ್ತಲೆಯ ಪ್ರಪಂಚದಲ್ಲಿರುವ ಲೈಂಗಿಕ ಕಾರ್ಯಕರ್ತೆಯರ ಜೀವನಕ್ಕೆ ಒಂದಿಷ್ಟು ಬೆಳಕು ಚೆಲ್ಲುವ ಪ್ರಯತ್ನ ಮಾಡಿ, ಸಹೃದಯಿ ಪ್ರೇಕ್ಷಕರಲ್ಲಿ ಅನುಕಂಪ, ಕಣ್ಣೀರು ಹಾಗು ಸ್ವವಿಮರ್ಶೆಗೆ ಹಚ್ಚುವಲ್ಲಿ ಯಶಸ್ವಿಯಾಗಿದೆಯೆನ್ನಬಹುದು.

ಹೆಣ್ಣಿನ ದೇಹ ಪ್ರದರ್ಶನವನ್ನು ಬಂಡವಾಳವಾಗಿಸಿಕೊಂಡು ಐಟಂ ಸಾಂಗುಗಳನ್ನು ಅನಗತ್ಯವಾಗಿ ಸಿನೆಮಾಗಳಲ್ಲಿ ತುರುಕಿಸಿ ಹಣಮಾಡುವ ಭಾರತೀಯ ಚಿತ್ರರಂಗ, ಅದೇ ಹೆಣ್ಣಿನ ದೇಹ ‘ವಸ್ತು’ವಾಗಿ ಮಾರಾಟವಾಗುವ ಕತ್ತಲೆಯ ಪ್ರಪಂಚವನ್ನು ಬೆಳಕಿಗೆ ತಂದ ಉದಾಹರಣೆಗಳು ಬಹಳ ಕಡಿಮೆಯೆನ್ನಬಹುದು.

ಈ ಹಿನ್ನೆಲೆಯಲ್ಲಿ ‘ಗಂಗೂಬಾಯಿ ಕಥಿಯಾವಾಡಿ’ ಸಿನೆಮಾ ಒಂದು ವಿಶಿಷ್ಟ ಹಾಗು ಪ್ರಶಂಸನೀಯ ಪ್ರಯತ್ನವೆನ್ನಬಹುದು.
ಹಾಗಿದ್ದಲ್ಲಿ, ಈ ಸಿನೆಮಾದ ಕಥಾವಸ್ತುವಾದ ‘ಗಂಗಾ’, ‘ಗಂಗೂ’ ಅಥವಾ ‘ಗಂಗೂಬಾಯಿ ಕಥಿಯಾವಾಡಿ’ ಯಾರು? ಈಕೆ 1960ರ ದಶಕದಲ್ಲಿ ಮುಂಬೈಯ ಕಾಮಾಟಿಪುರದಲ್ಲಿ ಲೈಂಗಿಕ ಕಾರ್ಯಕರ್ತೆಯರ ಮಾನವ ಹಕ್ಕು, ಸ್ವಾಭಿಮಾನ ಹಾಗು ಸಹನೀಯ ಬದುಕಿಗಾಗಿ ಹೋರಾಡಿದ ಮಹಿಳೆ.

ಈ ಸಿನೆಮಾವು, ಪತ್ರಕರ್ತ ಎಸ್. ಹುಸೇನ್ ಜೈದಿ ಹಾಗು ಜೇನ್ ಬೋರ್ಗೆಸ್ ಬರೆದಿರುವ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಪುಸ್ತಕವನ್ನು ಆಧರಿಸಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಸಿನೆಮಾದಲ್ಲಿ ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿದ್ದಾರೆ.

ಗುಜರಾತಿನ ಕಥಿಯಾವಾಡಿಯ ಅನುಕೂಲಸ್ಥ ಕುಟುಂಬದಲ್ಲಿ ಹುಟ್ಟಿದ ಗಂಗಾ, ನಟ ದೇವಾನಂದನ ಹುಚ್ಚು ಅಭಿಮಾನಿಯಾಗಿ, ಹಿಂದಿ ಸಿನೆಮಾ ಜಗತ್ತಿನಲ್ಲಿ ನಾಯಕಿಯಾಗಿ ಹೆಸರು ಮಾಡಬೇಕೆಂಬ ಮಹದಾಸೆಯಿಂದ, ಮನೆಯವರಿಗೆ ತಿಳಿಸದೇ, ತಾನು ಪ್ರೀತಿಸಿದ ಹುಡುಗನೊಂದಿಗೆ ಮುಂಬೈಗೆ ರೈಲಿನಲ್ಲಿ ಪಯಣಿಸುತ್ತಾಳೆ. ಆದರೆ, ಅವಳ ಪ್ರೀತಿಯ ಹುಡುಗ ಅವಳನ್ನು 500 ರೂಪಾಯಿಗೆ ಕಾಮಾಟಿಪುರಕ್ಕೆ ಮಾರಿ ಪರಾರಿಯಾಗುತ್ತಾನೆ.

ತಾನು ಸಿಲುಕಿ ಹಾಕಿಕೊಂಡ ಆಘಾತಕಾರಿ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡ ಗಂಗಾ, ನಿಧಾನವಾಗಿ ಮಾನಸಿಕ ಸ್ಥೈರ್ಯ ಕಂಡುಕೊಂಡು, ತನ್ನ ಮತ್ತು ಇನ್ನುಳಿದ ಲೈಂಗಿಕ ಕಾರ್ಯಕರ್ತೆಯರ ಬದುಕನ್ನು ಗೌರವಯುತವಾಗಿಸುವುದೇ ತನ್ನ ಜೀವನದ ಉದ್ದೇಶವೆಂಬಂತೆ ಮನಃಪೂರ್ವಕವಾಗಿ ಶ್ರಮಿಸುತ್ತಾಳೆ.ರಕ್ಷಕಿಯಾಗುತ್ತಾಳೆ.

ವೇಶ್ಯಾಗ್ರಹದ ಮಾಲಕಿಯನ್ನು ಪಳಗಿಸುವುದರಿಂದ ಆರಂಭಿಸಿ, ವಾರದಲ್ಲಿ ಒಂದು ದಿನ ಅಲ್ಲಿನ ಯುವತಿಯರಿಗೆ ರಜೆ ಸಿಗುವಂತೆ ಮಾಡಿ ಸಿನೆಮಾ, ಹೋಟೆಲ್ ಸುತ್ತಿಸುತ್ತಾಳೆ. ಹಾಗೆಯೇ, ಯಾವ ಹುಡುಗಿಯೂ ಕೂಡ ತನ್ನಿಷ್ಟಕ್ಕೆ ವಿರುದ್ಧವಾಗಿ ಅಲ್ಲಿರದಂತೆ ನೋಡಿಕೊಂಡು, ಅವರನ್ನು ಸುರಕ್ಷಿತವಾಗಿ ಮನೆಗೆ ವಾಪಸ್ಸು ಕಳುಹಿಸುತ್ತಾಳೆ. ಅಲ್ಲಿ ಹುಟ್ಟಿದ ಮಕ್ಕಳನ್ನು ಶಾಲೆಗೆ ಕಳುಹಿಸುವ ಮೂಲಕ, ಅವರೆಂದೂ ವೇಶ್ಯಾವೃತ್ತಿಯ ಜಾಲಕ್ಕೆ ಬೀಳದಂತೆ ಮುನ್ನೆಚ್ಚರಿಕೆ ವಹಿಸುತ್ತಾಳೆ. ಅಲ್ಲಿದ್ದ ಮಾಫಿಯಾಗಳ ಶಕ್ತಿಗಳ ಮುರಿಯುವುದಕ್ಕಾಗಿ, ಮಾಫಿಯಾ ನಾಯಕನೊಬ್ಬನಿಗೆ ರಾಖಿ ಕಟ್ಟಿ ಅಣ್ಣಾನನ್ನಾಗಿಸಿ ಅವನ ಸಹಾಯದಿಂದ ತಾನು ಕಾಮಾಟಿಪುರದ ನಾಯಕಿಯಾಗಿ ಅಲ್ಲಿರುವ ಎಲ್ಲಾ 4000 ಮಹಿಳೆಯರಿಗೆ ರಕ್ಷಕಿಯಾಗುತ್ತಾಳೆ.

ಈ ಸಿನೆಮಾದ ಮುಖ್ಯ ಆಕರ್ಷಣೆ, ಲೈಂಗಿಕ ಕಾರ್ಯಕರ್ತೆಯೊಬ್ಬಳು ತನ್ನ ಮಾನವೀಯ ಹಕ್ಕುಗಳನ್ನು ತಲೆಯೆತ್ತಿ ಆತ್ಮವಿಶ್ವಾಸದಿಂದ ಕೇಳುವ ಪರಿ. ಅಲ್ಲಿನ ಮಕ್ಕಳನ್ನು ಶಾಲೆಗೆ ದಾಖಲಿಸುವಾಗ, ‘ಅಪ್ಪನ ಹೆಸರೇನು? ಎಂದು ಶಾಲೆಯಲ್ಲಿ ಕೇಳಿದಾಗ, ‘ಅಮ್ಮನ ಹೆಸರು ಸಾಕಾಗುವುದಿಲ್ಲವೇ?’ ಎಂದು ಪ್ರಶ್ನಿಸುತ್ತಾಳೆ.

ಅವಳ ಆಪ್ತ ಸ್ನೇಹಿತೆ ಸತ್ತಾಗ, ಅಲ್ಲಿರುವ ಮಹಿಳೆಯರೆಲ್ಲಾ ಸತ್ತವಳ ಬದುಕು ಮತ್ತು ಬಾಡಿಹೋದ ಕನಸುಗಳ ಬಗ್ಗೆ ಮಾತನಾಡುವ ದೃಶ್ಯ, ಹುಡುಗಿಯೊಬ್ಬಳು ತನ್ನ ಮನೆಗೆ ಕಾಗದ ಬರೆಯಲು ಗಂಗಾಳ ಸಹಾಯ ಕೇಳುವಾಗ ಉಳಿದ ಹುಡುಗಿಯರು, ತಾವೆಲ್ಲಾ ಹೇಗೆ ಕನಸುಗಳ ಬೆನ್ನುಹತ್ತಿ ಮನೆ ಬಿಟ್ಟು ಬಂದು ಇಲ್ಲಿ ಸೇರಿದೆವು ಏನ್ನುವ ವಿಷಾದದ ದೃಶ್ಯ, ಗಂಗಾ ಉಳಿದ ಹೆಣ್ಮಕ್ಕಳ ಶ್ರೇಯಸ್ಸಿನ ಜವಾಬ್ದಾರಿ ಹೊತ್ತು ತನ್ನ ಪ್ರೀತಿಯನ್ನು ತ್ಯಾಗ ಮಾಡಬೇಕಾದ ದೃಶ್ಯ…. ಹೀಗೆ, ಹಲವಾರು ದೃಶ್ಯಗಳನ್ನು ಮನಕಲುಕುವಂತೆ ಚಿತ್ರಿಸಲಾಗಿದೆ.

ಹಾಗೆಯೇ, ಆಜಾದ್ ಮೈದಾನದಲ್ಲಿ ಗಂಗೂಬಾಯಿ ಮಾಡುವ ಭಾಷಣ ಕೂಡ ಮನಮುಟ್ಟುವಷ್ಟು ಪರಿಣಾಮಕಾರಿಯಾಗಿದೆ.
ಒಟ್ಟಿನಲ್ಲಿ, ಇಡೀ ಸಿನೆಮಾದ ಪ್ರತಿ ಫ್ರೇಮಿನಲ್ಲಿಯೂ ಆಲಿಯಾ ಗಮನಸೆಳೆಯುತ್ತಾಳೆ ಹಾಗು ತನ್ನ ವಯಸ್ಸನ್ನು ಮೀರಿದ ಪ್ರಭುದ್ದತೆ ಮೆರೆದು ಪಾತ್ರಕ್ಕೆ ಜೀವ ತುಂಬಿದ್ದಾಳೆ. ಮಹಿಳೆಯರ ಭಾವಪ್ರಪಂಚದಲ್ಲಿ ಆಸಕ್ತಿ ಹೊಂದಿದ ಅಂತಃಕರಣವುಳ್ಳ ಮನಸ್ಸುಗಳೆಲ್ಲಾ ನೋಡಲೇ ಬೇಕಾದ ಸಿನೆಮಾ ‘ಗಂಗೂಬಾಯಿ ಕಥಿಯಾವಾಡಿ.’

‍ಲೇಖಕರು Admin

March 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: