ಹೆಣ್ಣಿಗೆ ಸೆಕ್ಸ್ ಬೇಕು ಅನಿಸಿದರೆ..??

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. 

ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು ಹಾಕಿದ್ದಾರೆ.

ಇವರ ಮೊದಲ ಚಿತ್ರ ‘ಹರಿವು’ ನಿರ್ಮಾಣಗೊಂಡ ಕಥನವೂ ‘ಅವಧಿ’ಯಲ್ಲಿಯೇ ಪ್ರಕಟವಾಗಿತ್ತು. 

ಸಿನೆಮಾ ರಂಗದಲ್ಲಿ ಸಾಮಾನ್ಯವಾಗಿ ಬಳಸುವ ಪದ ‘ವರ್ಕೌಟ್’. ಈ ‘ವರ್ಕೌಟ್’ ಅನ್ನೋ ಪದಕ್ಕೆ ಹಲವು ಅರ್ಥಗಳು ಬರುತ್ತವೆ. ಹಾಗೇ ಕಥೆಯ ವಿಷಯದಲ್ಲೂ ಸಹ. ಯಾವುದೇ ಕಥೆಯ ಚರ್ಚೆ ಅಥವಾ ಯಾರಿಗಾದರು ಕಥೆ ಹೇಳಿದಾಗ ಕೂಡಲೇ ಬರುವ ಒನ್ ಲೈನ್ ಉತ್ತರ ಇದು ‘ವರ್ಕೌಟ್’ ಆಗುತ್ತೆ, ಇದು ‘ವರ್ಕೌಟ್’ ಆಗಲ್ಲ.

ಸಿನೆಮಾ ಕಥೆಗಳ ವಿಷಯದಲ್ಲಿ ನನ್ನ ಅನುಭವದಲ್ಲಿ ಹೇಳುವುದಾದರೇ ಯಾವ ಕಥೆ ‘ವರ್ಕೌಟ್’ ಆಗುತ್ತೆ ಅನ್ನೋ ಸ್ಪಷ್ಟತೆ ನನಗೆ ಇವತ್ತಿಗೂ ಸಿಕ್ಕಿಲ್ಲ. ಸಾಕಷ್ಟು ಚರ್ಚೆ, ಸಂಶೋಧನೆ, ವಿಚಾರ ಮಾಡಿ ಸಿದ್ಧಪಡಿಸಿದ ಚಿತ್ರಕಥೆಗಳು ಸಿನೆಮಾ ಆಗುವುದೇ ಇಲ್ಲ. ಯಾವುದೋ ಒಂದು ಘಳಿಗೆಯಲ್ಲಿ ತಲೆಯಲ್ಲಿ ಮೂಡಿದ ಒಂದು ಸಣ್ಣ ಎಳೆ ಕಥೆಯಾಗಿ, ಚಿತ್ರಕಥೆಯಾಗಿ ಸಿನೆಮಾ ಆಗಿ ತೆರೆ ಮೇಲೆ ಬಂದು ಬಿಡುತ್ತದೆ. ಎಲ್ಲಾ ಕಥೆಗಳಿಗೂ ಈ ಅದೃಷ್ಟ ಇರುವುದಿಲ್ಲ. ಅಂತಹ ಅದೃಷ್ಟವಂತ ಕಥೆ ‘ನಾತಿಚರಾಮಿ’.

‘ಹರಿವು’ ಸಿನೆಮಾದ ನಂತರ ನಾನು ಕೆಲಸ ಮಾಡಿದ್ದು ಎಂಟೋ-ಹತ್ತೋ ಚಿತ್ರಕತೆಗಳ ಮೇಲೆ. ಇದರಲ್ಲಿ ಕೆಲವು ಒನ್ಲೈನ್ ಕಥೆಗಳಾಗಿಯೇ ಉಳಿದಿದ್ದರೆ, ಐದು ಕಥೆಗಳು ಪೂರ್ಣ ಪ್ರಮಾಣದ ಸ್ಕ್ರಿಪ್ಟ್ ಗಳಾಗಿ ಧೂಳು ಹಿಡಿಯುತ್ತಾ ಕೂತಿವೆ.  ಮೊದಲಿಗೆ ಒಂದೇ ಸ್ಕ್ರಿಪ್ಟ್ ಬರೆದು ಮುಗಿಸಿ, ನಿರ್ಮಾಪಕರನ್ನು ಹುಡುಕಿ ಅವರಿಗೆ ಕತೆ ಹೇಳಿ, ಅವರ ಪ್ರತಿಕ್ರಿಯೆಗಾಗಿ ತಿಂಗಳಾನುಗಟ್ಟಲೆ ಕಾಯುತ್ತಿದ್ದ ದಿನಗಳಲ್ಲಿ ಒಮ್ಮೆ ಯೋಗರಾಜ್ ಭಟ್ ಸರ್ ಆಫೀಸಿನಲ್ಲಿ, ಜಯಂತ್ ಕಾಯ್ಕಿಣಿ ಸರ್ ಜೊತೆ ಮಾತಾಡುತ್ತಿದ್ದಾಗ ಅವರು ಒಂದು ಕಿವಿ ಮಾತು ಹೇಳಿದ್ದರು.

ಖಾಲಿ ಇರುವಾಗಲೆಲ್ಲ ಕಥೆಯ ಬಗ್ಗೆ ಯೋಚಿಸುತ್ತಾ ಕಥೆಗಳನ್ನು ಬರೆದಿಟ್ಟುಕೊಳ್ಳಿ, ಯಾರಿಗ್ ಗೊತ್ತು ಯಾವುದು ‘ವರ್ಕೌಟ್’ ಆಗುತ್ತೋ ಅಂತ. ಆ ಕಾರಣದಿಂದಲೇ ಮನೆಯಲ್ಲಿ ತಲೆಯಲ್ಲಿ ಕತೆಗಳ ಸಂಗ್ರಹ ತುಂಬುತ್ತಲೇ ಇದೆ. ಹೀಗೆ ಬರೆದ ಚಿತ್ರಕತೆಗಳಲ್ಲಿ ಒಂದು ಸಿನೆಮಾ ಮುಹೂರ್ತ ಆಗಿಯೂ ನಿಂತು ಹೋಯಿತು.

2017ರಲ್ಲಿ ‘ನಾತಿಚರಾಮಿ’ ಕಥೆ ಶುರುವಾಗುವ ಮೊದಲು ನಾನು ಬೇರೊಂದು ಚಿತ್ರಕಥೆಯ ಕೆಲಸದಲ್ಲಿ ನನ್ನ ತೊಡಗಿಸಿಕೊಂಡಿದ್ದೆ. ಆ ಚಿತ್ರಕತೆ ಬರೆಯಲೆಂದೇ ಹಲವು ದಿನಗಳ ಕಾಲ ಕುಂದಾಪುರ-ಬ್ರಹ್ಮಾವರದಲ್ಲಿ ಹಲವು ದಿನ ನೆಲೆಸಿದ್ದೆ.  ಚಿತ್ರಕಥೆಯೇನೋ ಸಂಪೂರ್ಣವಾಗಿ ಸಿದ್ಧವಾಗಿ, ಆ ಕಥೆಯನ್ನು ನಿರ್ಮಾಣ ಮಾಡಲು ಮುಂದಾಗಿದ್ದ ನಿರ್ಮಾಪಕರಿಗೂ ಆ ಕಥೆ ಬಹಳವೇ ಇಷ್ಟವಾಗಿತ್ತು. ಚಿತ್ರೀಕರಣ ಆರಂಭಿಸಲು ಎಲ್ಲಾ ತಯಾರಿಯೂ ಆಗಿತ್ತು. ನಟರ ಆಯ್ಕೆ, ತಂತ್ರಜ್ಞರ ಜೊತೆ ಮಾತುಕತೆ, ಎಲ್ಲಾ ಒಂದು ಹಂತದ ಕೆಲಸಗಳು ಮುಗಿದಿತ್ತು.  ಆದರೆ ಕಾರಣಾಂತರಗಳಿಂದಾಗಿ ನಿರ್ಮಾಪಕರಿಗೆ ಆರ್ಥಿಕ ಸಮಸ್ಯೆ ಬಂದಿದ್ದರಿಂದ ಕೆಲವು ತಿಂಗಳು ಚಿತ್ರೀಕರಣ ಮುಂದೂಡುವಂತೆ ಹೇಳಿದರು. ವಿಧಿ ಇಲ್ಲದೇ ಎಲ್ಲಾ ಕೆಲಸಗಳನ್ನು ನಿಲ್ಲಿಸಬೇಕಾಯಿತು.

ಮುಂದೇನು ಮಾಡುವುದೋ ತಿಳಿಯದೇ ಚಿಂತೆಯಲ್ಲಿರುವ ಸಮಯದಲ್ಲೇ, ಒಮ್ಮೆ ನಟರಾದ ಸಂಪತ್ (ಕಿರಗೂರಿನ ಗಯ್ಯಾಳಿಗಳು, ಕವಲುದಾರಿ ಖ್ಯಾತಿಯ) ಅವರೊಂದಿಗೆ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಹತ್ತಿರ, ಇಳಿಸಂಜೆ ಲೋಕಾಭಿರಾಮವಾಗಿ ಹರಟುತ್ತಾ, ಜಗತ್ತಿನ ಸಮಸ್ಯೆಗಳ ಬಗ್ಗೆ, ರಾಜಕೀಯ, ಸಾಂಸ್ಕೃತಿಕ ರಾಜಕಾರಣದ ಕುರಿತಂತೆಲ್ಲ ಚರ್ಚೆ ಮಾಡುತ್ತಿರುವಾಗ, ಮಹಿಳೆಯರಿಗೆ ಸಂಬಂಧಿಸಿದ, ಅವರ ಚಾರಿತ್ರ್ಯಕ್ಕೆ ಸಂಬಂಧಪಟ್ಟ ಹಲವು ವಿಷಯಗಳು ಚರ್ಚೆಗೆ ಬಂತು. 

ಚರ್ಚೆ ತುಸು ಕಾವೇರಿದಾಗ, ನಾನು ಅವರಿಗೆ ಒಂದು ಪ್ರಶ್ನೆ ಮಾಡಿದೆ, ಅಣ್ಣಾಜಿ, ನಮ್ ಸಮಾಜದಲ್ಲಿ ಗಂಡಿಗೆ ತನ್ನ ದೇಹದ ಬಯಕೆ ತೃಪ್ತಿ ಪಡಿಸಿಕೊಳ್ಳಲು ಹೆಣ್ಣಿನ ಬಳಿ ಹೋಗಿ ಬರಲು ಮುಕ್ತ ಅವಕಾಶ ಇದೆ, ದೇಶದ ಹಲವು ಭಾಗಗಳಲ್ಲಿ ಅಧಿಕೃತವಾಗಿ ನಿರ್ದಿಷ್ಟ ಪ್ರದೇಶಗಳಿವೆ. ಅಲ್ಲಿಗೆ ಗಂಡು ಯಾವಾಗ ಬೇಕಾದರೂ ಹೋಗಿ ಬರಬಹುದು. ಎಷ್ಟು ಬಾರಿಯಾದರೂ ಹೋಗಿ ಬರಬಹುದು. ಎಷ್ಟು ಜನ ಹೆಣ್ಣುಮಕ್ಕಳ ಜೊತೆಯಾದರೂ ದೇಹ ಸಂಪರ್ಕ ಬೆಳೆಸಬಹುದು. ಅದಕ್ಕೆಲ್ಲ ಮುಕ್ತ ಅವಕಾಶ ಇದೆ. ಅಲ್ಲಿ ಅವನಿಗೆ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಇದೆ. 

ಗಂಡು ಇಷ್ಟೆಲ್ಲಾ ಮಾಡಿದರೂ ಕೂಡ ಅವನ ಚಾರಿತ್ರ್ಯ, ಶೀಲದ ಬಗ್ಗೆ ಯಾವ ಪ್ರಶ್ನೆಯೂ ಹುಟ್ಟುವುದಿಲ್ಲ. ಅವನ ಸೋಷಿಯಲ್ ಸ್ಟೇಟಸ್ ಕಿಂಚಿತ್ತೂ ಮುಕ್ಕಾಗುವುದಿಲ್ಲ. ಹಲವು ಹೆಣ್ಣುಮಕ್ಕಳ ಸಂಗ ಮಾಡುವ ಗಂಡಿಗೆ ಪ್ಲೇಬಾಯ್, ಅದೂ ಇದೂ ಎಂಬ ಗೌರವ ಬಿರುದು ಕೊಟ್ಟು, ಅದೊಂದು ಹೆಮ್ಮೆಯ ವಿಷಯವೆಂದು ಬೀಗುವಂತೆ ಮಾಡುವ ನಮ್ಮ ಸಮಾಜ, ಅಷ್ಟೇ ಮುಕ್ತ ವಾತಾವರಣವನ್ನು ಹೆಣ್ಣಿಗೆ ಯಾಕೆ ಕೊಟ್ಟಿಲ್ಲ? 

ಕಾಮ ಎನ್ನುವುದು ಗಂಡಿಗೆ ಇದ್ದಷ್ಟೇ ಸಹಜವಾಗಿ ಹೆಣ್ಣಿಗೂ ಇರುತ್ತದೆಯಲ್ಲವೇ ಎಂದು ಬ್ಯಾಕ್ ಟು ಬ್ಯಾಕ್ ಅವರಿಗೆ ಪ್ರಶ್ನೆ ಕೇಳಿದೆ. ಅವರು ಅದಕ್ಕೆ ಉತ್ತರಿಸುವ ಮೊದಲೇ ನನ್ನೊಳಗಿನ ನಿರ್ದೇಶಕ ಸಡನ್ನಾಗಿ ಜಾಗೃತನಾಗಿಬಿಟ್ಟು, ‘ಅಣ್ಣಾಜಿ, ಇದೇ ಕಾನ್ಸೆಪ್ಟ್ ಇಟ್ಕೊಂಡು ಕಥೆ ಮಾಡಿದ್ರೆ ಹೇಗೆ? ಒಂದು ಹೆಣ್ಣು ತನಗೆ ಪ್ರೀತಿ ಬೇಡ, ಸಂಬಂಧ ಬೇಡ, ಎಮೋಷನಲ್ ಅಟ್ಯಾಚ್ ಮೆಂಟ್ ಯಾವುದೂ ಬೇಡ. ಬರೀ ಕಾಮ ಅಷ್ಟೇ ಬೇಕು ಎಂದು ಹೊರಡುವ ಕಥಾ ನಾಯಕಿ ಸಮಾಜದಲ್ಲಿ ಎದುರಿಸುವ ಪ್ರಶ್ನೆಗಳೇನು? ಒಟ್ಟಾರೆ ಸಮಾಜದ ರಿಯಾಕ್ಷನ್ ಅಷ್ಟನ್ನೇ ಸಿನೆಮಾ ಮಾಡಿದರೆ ಹೇಗೆ?’ ಎಂದು ಸಂಪತ್ ಸರ್ ಮುಖ ನೋಡಿದೆ. 

ಸಂಪತ್ ಕಣ್ಣರಳಿದ್ದು, ಆ ಅರೆಗತ್ತಲು ಬೆಳಕಿನಲ್ಲಿ ಅವರ ಮುಖದಲ್ಲಿ ಕಂಡ ಗ್ಲೋ ಇಂದಿಗೂ ಕಣ್ಣಮುಂದಿದೆ. ಅವರು ಕೂಡಲೇ ಸೂಪರ್ರಾಗಿದೆ ಮಾಡಿ, ಸಮಾಜದ ಮುಖಕ್ಕೆ ತೆಗೆದು ಬಾರಿಸ್ದಂಗಿರುತ್ತೆ ಅಂತಂದ್ರು. ನನಗೆ ಫುಲ್ ಜೋಷ್. ಆ ಇಡೀ ರಾತ್ರಿ ನಿದ್ದೆ ಬರದೆ ಈ ಕಥೆಯ ಎಳೆಯ ಬಗೆಗಿನ ಚಿಂತನೆಯಲ್ಲೇ ಕಳೆದು ಹೋಯಿತು!! 

‍ಲೇಖಕರು ಮಂಸೋರೆ

August 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: