'ಹೆಣ್ಣಾಗಿಯೇ ಅನುಭವಿಸಿ ಬರೆದೆ' ಎನ್ನುವ ಜಗದೀಶ ಕೊಪ್ಪರ 'ಮರುಭೂಮಿಯ ಹೂ'


ಆತ್ಮವಿಶ್ವಾಸ ಒಂದಿದ್ದರೆ ಬದುಕನ್ನು ಗೆಲ್ಲಬಹುದು – ವಾರಿಸ್
ಅಯ್ಯ…. ಇನ್ನೂ ಮೂಗು ಚುಚ್ಚಿಸಿಲ್ಲ? ಮೂಗು ಚುಚ್ಚಿಸದೇ ಮದುವೆ ಹೇಗಾಗ್ತಿ?” ಮನೆಗೆ ಬಂದ ಪರಿಚಯದವರೊಬ್ಬರು ನಾನೇನೋ ಮಹಾ ಅಪರಾಧ ಮಾಡಿದ್ದೆನೆ ಎನ್ನುವಂತೆ ಪ್ರಶ್ನಿಸಿದ್ದರು.
ಅವರು ಕೇಳಿದ ಪ್ರಶ್ನೆಯನ್ನು ಈಗಾಗಲೇ ಹತ್ತಾರು ಜನ ಕೇಳಿದ್ದರಿಂದ ನನಗೆ ಅದರಲ್ಲೇನೂ ವಿಶೇಷ ಎನ್ನಿಸಲಿಲ್ಲ.
ನನ್ನ ಸಹಪಾಠಿಗಳಂತೂ ರಜೆಗೆಂದು ಊರಿಗೆ ಹೊರಟಾಗಲೆಲ್ಲ “ಏನೆ ಶ್ರೀ ಈ ಸಲಾನಾದ್ರೂ ಮೂಗು ಚುಚ್ಚಿಸ್ಕತ್ಯೋ ಇಲ್ಯೋ?  ಎಂತಾ ಆರಾಂ ಇದ್ಯೇ ಮಾರಾಯ್ತಿ” ಎಂದು ಒಂದಿಷ್ಟು ಕುತೂಹಲ ಮತ್ತೊಂದಿಷ್ಟು ಅಸೂಯೆಯಿಂದ ಪ್ರಶ್ನಿಸುವುದು ನನಗೆ ಮಾಮೂಲಾಗಿ ಬಿಟ್ಟಿತ್ತು.
“ಸುಮ್ನಿರ್ರೆ. ನಿಮಗೊಂದು ಮೈಯ್ಯನ್ನೆಲ್ಲ ತೂತು ಮಾಡಿಸ್ಕಂಡು ಬಂಗಾರ ಹೇರಿಕೊಳ್ಳೋ ಉಮ್ಮೇದಿ ಇದ್ದು ಹೇಳಿ ನಾನೂ ಚುಚ್ಚಿಸ್ಕಳವಾ? ಎನ್ನ ಹತ್ರ ಆಗ್ತಿಲ್ಲೆ” ಅವರ ಪ್ರಸ್ತಾಪಕ್ಕೆ ನೇರಾ ನೇರಾ ತಿರಸ್ಕರಿಸಿ ಬಿಡುತ್ತಿದ್ದೆ. “ನಾ ಸಣ್ಣ್ ಇರಕೀರೇ ಎಂಗೆ ಗೊತ್ತಿಲ್ದೆ ಕಿವಿ ಚುಚ್ಸಿಕಿದ. ಗೊತ್ತಾದ್ರೆ, ಕಿವಿನೂ ಚುಚ್ಚಿಸ್ಕಳ್ತಿದ್ನಿಲ್ಲೆ.” ಎನ್ನುತ್ತ ಕಿವಿಯನ್ನು ತೂತು ಮಾಡಿದ ಬಗ್ಗೆ ಗೊಣಗುತ್ತಿದ್ದೆ.
ಹುಟ್ಟಿದ ಮಗುವಿಗೆ ಒಂದು ವರ್ಷ ಆಗುವುದರೊಳಗೆ ಅಜ್ಜಿ ಮನೆಯಲ್ಲೇ ಕಿವಿ ಚುಚ್ಚುವ ಶಾಸ್ತ್ರ ಮಾಡಿಸಬೇಕು ಎಂಬ ನಮ್ಮ ಕಡೆಯ ಸಂಪ್ರದಾಯಕ್ಕೆ ಕಟ್ಟು ಬಿದ್ದು ನನ್ನ ಅಜ್ಜಿ ಮನೆಯಲ್ಲಿ ಕಿವಿ ಚುಚ್ಚಿಸಿ ಆಗಿಬಿಟ್ಟಿತ್ತು. ಅದು ಗೊತ್ತಾದ ನಂತರ ಅಪ್ಪ ಅಮ್ಮನ ಬಳಿ ರೇಗಿದ್ದರಂತೆ. ‘ಅವಳಿಗೆ ಬೇಕಿದ್ದರೆ ಕಿವಿ ಚುಚ್ಚಿಸಿಕೊಳ್ಳುತ್ತಿದ್ದಳು. ನೀನ್ಯಾಕೆ ಆ ಶಾಸ್ತ್ರ ಅಂತೆಲ್ಲ ಮಾಡಿಸಿದ್ದು?’ ಎಂದು. ನಾನು ಒಂದಿಷ್ಟು ದೊಡ್ಡವಳಾದ ಮೇಲೆ ಒಮ್ಮೆ ಅಪ್ಪನೇ ಈ ಬಗ್ಗೆ ಹೇಳಿದ್ದರೂ ನನ್ನ ಅಜ್ಜಿ ಮನೆಯ ಅತ್ತೆ ಮಾತ್ರ ಈಗಲೂ ಅದನ್ನು ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ. “ನಿನ್ನ ಅಪ್ಪನಿಗೆ ನಾವು ನಿನ್ನ ಕಿವಿ ಚುಚ್ಚಿಸಿದ್ದಕ್ಕೆ ಸಿಟ್ಟು ಬಂದಿತ್ತು” ಅಂತಾ.
“ಅಕ್ಕೋರೆ ಇವಳಿಗೆ ಬೇಗ ಮೂಗು ಚುಚ್ಚಿಸಿ ಬಿಡಿ”  ಎಂದ ಇವರಿಗೂ ಇದೇ ಮಾತು ಹೇಳಿದೆ, “ನಾನು ದೊಡ್ಡವಾದ ಮೇಲೆ ಚುಚ್ಚಿದ್ರೆ ಕಿವಿಯನ್ನೂ ಚುಚ್ಚಿಸಿಕೊಳ್ಳುತ್ತಿರಲಿಲ್ಲ.” ನನ್ನ ಮಾತು ಅವರಿಗೆ ಬೇಸರ ತರಿಸಿರಬೇಕು. ಈಗಿನ ಮಕ್ಕಳಿಗೆ ಆಚಾರ ವಿಚಾರ ಸಂಪ್ರದಾಯವೇ ಗೊತ್ತಿಲ್ಲ ಗೊಣಗಿಕೊಂಡಂತೆ ಹೇಳಿದರು.
ಇತ್ತೀಚೆಗಂತೂ ಚಿನ್ನ ಹಾಕಿಕೊಳ್ಳುವುದೇ ಒಂದು ರೀತಿಯ ಬೇಸರದ ಸಂಗತಿಯಾಗಿರುವಾಗ ನನಗೆ ಹಾಗೆ ನಮ್ಮದೇ ದೇಹವನ್ನು ಚುಚ್ಚಿಸಿಕೊಂಡು ನೋವು ಮಾಡಿಕೊಂಡು ಚಿನ್ನ ಹಾಕಿಕೊಳ್ಳುವುದು ಇಷ್ಟವೇ ಆಗದಿರುವಾಗ ನಮ್ಮದೇಹದ ಗುಪ್ತಾಂಗವನ್ನು ಛೇದಿಸಿ ಹೊಲಿಗೆ ಹಾಕುವ ಒಂದು ಅಮಾನುಷ ಪದ್ದತಿಯ ಕುರಿತು ಜಗತ್ಪ್ರಸಿದ್ಧ ರೂಪದರ್ಶಿ ವಾರಿಸ್ ತಮ್ಮ ‘ಡೆಸರ್ಟ್ ಪ್ಲವರ್’ ಹೆಸರಿನ ತಮ್ಮ ಆತ್ಮ ಕಥೆಯಲ್ಲಿ ಜಗತ್ತನ್ನು ತಲ್ಲಣಗೊಳಿಸುತ್ತಾರೆ.
ಇಂದಿನ ಪುರುಷ ಪ್ರಧಾನ ಸಮಾಜದ ಮಾತಂತಿರಲಿ, ಶತಮಾನಗಳ ಕಾಲದ ಹಿಂದಿನಿಂದಲೂ ಇನ್ನೂ ಆಧುನಿಕತೆಯ ಸೋಂಕೂ ಇಲ್ಲದ  ಅಪ್ಪಟ ಮರಳುಗಾಡಿನಲ್ಲೂ ಒಂದು ಹೆಣ್ಣು ಗಂಡಿನ ಅಡಿಯಾಳಾಗಿಯೇ ಇರಬೇಕು ಎಂದು ಆಶಿಸಿ ಆಕೆಯ ಮೇಲೆ ಸಂಪ್ರದಾಯದ ಹೆಸರಿನಲ್ಲಿ, ದೇವರು- ಧರ್ಮದ ಹೆಸರಿನಲ್ಲಿ ಅನಿಷ್ಟತೆಗಳನ್ನು ಹೇರುವುದಿದೆಯಲ್ಲ ಅದು ನಿಜಕ್ಕೂ ವಿಚಿತ್ರ.
ಇದು ಜಗತ್ತಿನ ಯಾವ ಮೂಲೆಗೆ ಹೋದರೂ ಪುರುಷ ಸಮಾಜ ಹೆಣ್ಣಿನ ಮೇಲೆ ಹಿಡಿತ ಸಾಧಿಸಲು ಪಟ್ಟ ಪ್ರಯತ್ನದ ಕಥೆಯನ್ನು ಹೇಳುತ್ತದೆ. ಆದರೆ ಅಂತಹ ಎಷ್ಟೇ ಪ್ರಯತ್ನಗಳು ತಮ್ಮ ಮೇಲೆ ಎರಗಿದರೂ ಹೆಣ್ಣೊಬ್ಬಳು ಆತ್ಮವಿಶ್ವಾಸದಿಂದ ಎದ್ದು ನಿಂತು ಅದನ್ನು ಅದರ ವಿರುದ್ಧ ಜಯಗಳಿಸುವುದನ್ನು ಹೇಳುವ ಮೂಲತಃ ವಾರಿಸ್ ಡೇರಿಸ್  ಬರೆದ ಡೆಸರ್ಟ್ ಫ್ಲವರ್ ಎಂಬ ಹೆಸರಿನ ಆತ್ಮಕಥೆಯನ್ನು ‘ಮರುಭೂಮಿಯ ಹೂ’ ಎಂಬ ಹೆಸರಿನಲ್ಲಿ ಜಗದೀಶ ಕೊಪ್ಪ ಕನ್ನಡಕ್ಕೆ ತಂದ ಈ ಪುಸ್ತಕ ನನ್ನ ವಾರದ ರೆಕಮಂಡ್.
ಕೆಲವು ದಿನಗಳ ಹಿಂದೆ ಜಗದೀಶ ಕೊಪ್ಪರವರಿಗೆ ಫೋನಾಯಿಸಿದ್ದೆ. “ಇರು ಪುಟ್ಟ,. ಏನೋ ಬರೀತಿದ್ದೀನಿ. ಹತ್ತು ನಿಮಿಷ ಬಿಟ್ಟು ಫೋನ್ ಮಾಡ್ತೀನಿ ಅಂದವರು ಮರಳಿ ಫೋನಾಯಿಸಿದ್ದು ಬರೋಬ್ಬರಿ ಒಂದು ತಾಸಿನ ನಂತರ. ಅಷ್ಟರಲ್ಲಿ ನಾನೂ ಒಂದು ಕ್ಲಾಸ್ ಮುಗಿಸಿ ಬಂದು ಕುಳಿತಿದ್ದೆ.
“ಈಗ ಬರೆದು ಮುಗಿಯಿತು. ಹೇಳವ್ವ ಈಗ… ಏನಾಯ್ತು?” ಎಂದವರ ಧ್ವನಿಯಲ್ಲಿ  ಅದೇ ಆತ್ಮೀಯತೆ, ಅದೇ ವಾತ್ಸಲ್ಯ, ಜಗದೀಶಣ್ಣ ಎಂದೂ ಮುಗಿಯದ ಪ್ರೀತಿ, ಮಮತೆಯ ಕಣಜ ಎಂದು ನನಗೆ ಎಷ್ಟೋ ಸಲ ಅನ್ನಿಸಿದ್ದಿದೆ.
“ಅಣ್ಣಾ, ಮರುಭೂಮಿಯ ಹೂ ಓದ್ತಿದ್ದೀನಿ….” ಎಂದೆ.
“ಇದು ಎಷ್ಟನೇ ಸಲ ತಾಯಿ?”  ನಕ್ಕು “ಏನಾದ್ರೂ ಬೇಸರದಲ್ಲಿದ್ದೀಯೇನವ್ವಾ?” ಎಂದರು.  
ನಾನೇನಾದರೂ ಬೇಸರದಲ್ಲಿದ್ದರೆ, ನನ್ನ ಆತ್ಮವಿಶ್ವಾಸ ಕುಗ್ಗುತ್ತಿದೆ ಅನ್ನಿಸಿದರೆ, ಇನ್ನೇನು, ನನ್ನಿಂದ ಏನೂ ಆಗೊದಿಲ್ಲ ಎಂಬ ಹತಾಶ ಭಾವನೆಯಲ್ಲಿದ್ದರೆ  ಆಗ ನಾನು ಓದಲು ಆರಿಸಿಕೊಳ್ಳುವುದು ಈ ಪುಸ್ತಕವನ್ನೇ ಎಂಬ ಸತ್ಯ ಅವರಿಗೂ ಗೊತ್ತು. ಹೀಗಾಗಿ ಕನಿಷ್ಟ ಎಂದರೂ ನನ್ನಿಂದ ಏಳರಿಂದ ಎಂಟು ಸಲ ಓದಿಸಿಕೊಂಡ ಈ ಪುಸ್ತಕ ನಿಮಗೂ ಇಷ್ಟವಾಗಬಹುದು ಎಂಬ ಕಾರಣಕ್ಕಾಗಿಯೇ ನಿಮಗೂ ರೆಕಮೆಂಡ್ ಮಾಡುತ್ತಿದ್ದೇನೆ.
ಸುಮಾರು ನಾಲ್ಕು ವರ್ಷಗಳ ಹಿಂದಿನ ಮಾತು. ಧಾರವಾಡದಲ್ಲಿ ಬೇಂದ್ರೆ ಯುವ ಗ್ರಂಥ ಪುರಸ್ಕಾರದ ಸಮಯ. ಪ್ರಶಸ್ತಿ ಸ್ವೀಕಾರಕ್ಕೆಂದು ನಾವು ಧಾರವಾಡದಲ್ಲಿದ್ದೆವು. ರಾತ್ರಿ ಧಾರವಾಡದಿಂದ ನಮ್ಮೂರ ಕಡೆಗೆ ಬರುವ ಬಸ್ ತುಂಬಾ ಕಡಿಮೆ. ಹೀಗಾಗಿ ನಮಗೆ ಒಂದು ರೀತಿಯ ಆತಂಕ. ಆಗ ನನಗೆ ಜಗದೀಶ ಕೊಪ್ಪ ಅಷ್ಟೇನೂ ಪರಿಚಯದವರಲ್ಲ.  ಹಾಗಂತ ಈ ಸಾಮಾಜಿಕ ಜಾಲತಾಣಗಳು ಎಲ್ಲರನ್ನೂ ಆತ್ಮೀಯವಾಗಿಸಿ ಬಿಡುವ ಈ ಸಂದರ್ಭದಲ್ಲಿ ಪರಿಚಯ ಇಲ್ಲದವರೂ ಅಲ್ಲ. ಎಷ್ಟೋ ಸಲ “ಇಡೀ ದಿನ ಫೇಸ್ ಬುಕ್ ನಲ್ಲಿ ಇರ್ತೀಯಲ್ಲ. ಫೇಸ್ ಬುಕ್ ನಲ್ಲಿ ಟೈಂ ಪಾಸ್ ಮಾಡೋದನ್ನು ಬಿಟ್ಟು ಒಂದಿಷ್ಟು ಓದಿ ಬರೆದು ಮಾಡಬಾರದಾ?’ ಎಂದು ರೇಗಿಯೂ ಬಿಟ್ಟಿದ್ದರು.
ಕೆಲವೊಮ್ಮೆ ಒಂದು ವಾರ ಫೇಸ್ ಬುಕ್ ನೋಡಬಾರದು. ಅಷ್ಟರಲ್ಲಿ ಈ ಪುಸ್ತಕ ಓದಿ ಮುಗಿಸಬೇಕು ಇದು ನನ್ನ ಚಾಲೆಂಜ್’ ಎಂದು ಹೇಳಿ ನಾನು ಒಂದಿಷ್ಟು ಓದಲು ಒತ್ತಾಯಿಸಿ, ಫೇಸ್ ಬುಕ್ ಹುಚ್ಚನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಮುಖತಃ ಪರಿಚಯ ಇರಲಿಲ್ಲ. ಅವರು ಧಾರವಾಡದಲ್ಲಿರುವುದೂ ನನಗೆ ಗೊತ್ತಿರಲಿಲ್ಲ. ಪ್ರಶಸ್ತಿ ಪ್ರಧಾನ ಸಮಾರಂಭ ಮುಗಿದ ಕೂಡಲೇ ಏನೂ ಚಿಂತೆ ಮಾಡಬೇಡಮ್ಮ. ನಾನು ಬಿಡ್ತೇನೆ. ಎನ್ನುತ್ತ ನಮ್ಮಿಬ್ಬರನ್ನು ನಮ್ಮೂರಿನ ಬಸ್ ಬರುವ ಕಡೆ ತಲುಪಿಸಿದ್ದರು.  ಅದಕ್ಕೇ ನನಗೆ ಜಗದೀಶ ಕೊಪ್ಪ ಅಂದರೆ ಹಿರಿಯಣ್ಣನ ಪ್ರೀತಿ.
ರಾತ್ರಿ ಕನಸಿನಲ್ಲಿ ಒಂದು ಹುಲಿಯನ್ನೋ ಸಿಂಹವನ್ನೋ ಕಂಡರೆ ಗಡಗಡ ನಡುಗಿ ಕೆಟ್ಟ ಕನಸು ಅಂತಾ ತುಳಸಿದಳ ಸುಳಿದು ಸಮಾಧಾನ ಪಟ್ಟುಕೊಳ್ಳುವ ನಾವು ನಮ್ಮ ಕಣ್ಣೆದುರಿಗೇ ನಿಜವಾದ ಸಿಂಹ ಬಂದರೆ ಏನು ಮಾಡಬಹುದು? ಝೂದಲ್ಲಿ ಏನಾದರೂ ನಿಜವಾದ ಸಿಂಹವನ್ನು ಕಂಡರೆ ಎಲ್ಲಾದರೂ ಆ ಸಿಂಹ ಬೋನಿಂದ ತಪ್ಪಿಸಿಕೊಂಡು ಬಂದರೆ ಏನು ಗತಿ ಎಂಬ ಮುಂಜಾಗರೂಕತೆಯಲ್ಲಿ ಓಡಲು ಅನುಕೂಲವಾಗುವಂತೆ ಮಾರು ದೂರ ನಿಂತುಕೊಂಡು ನಮ್ಮ ಸೇಫ್ಟಿ ನೋಡಿಕೊಳ್ಳುವಾಗ ಸಿಂಹ ಮುಖಕ್ಕೆ ಮುಖ ತಾಗಿಸಿದರೆ ನಮ್ಮ ಪರಿಸ್ಥಿತಿ ಏನಾಗಬಹುದು?  
ಸಿಂಹದ ಬಾಯಿಯ ದುರ್ಗಂದ ನಮ್ಮ ಮೂಗಿನ ಬಳಿಯೇ ಬಂದಿದ್ದರೆ ನಮ್ಮ ಎದೆ ಒಡೆದೇ ಹೋಗಬಹುದೇನೋ. ಆದರೆ ವಾರಿಸ್ ಅಂತಹ ಸ್ಥಿತಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಇನ್ನೇನು ಸಿಂಹ ತನ್ನ ಕುತ್ತಿಗೆಗೆ ಬಾಯಿ ಹಾಕುತ್ತದೆ ಎಂದು ಕಣ್ಣು ಮುಚ್ಚಿ ಸಾವನ್ನು ಸ್ವಾಗತಿಸಿದವಳು.
ಪುಸ್ತಕದ ಪ್ರಾರಂಭದಲ್ಲೇ ಬರುವ ಈ ಘಟನೆ ಪುಸ್ತಕವನ್ನು ಹಾಗೇ ಒಮ್ಮೆ ತಿರುಗಿಸಿ ಹಾಕೋಣ ಎಂದು ಕೈಗೆತ್ತಿಕೊಂಡವರನ್ನು ಓದಿಸದೇ ಬಿಡುವುದಿಲ್ಲ. ಅದೇಕೋ ಮುಖಕ್ಕೆ ಮುಖವಿಟ್ಟು ಮುತ್ತಿಟ್ಟ ಆ ಸಿಂಹ ಅದೇನು ಅಂದುಕೊಂಡಿತೋ, ಕುಡಿಯೋದಕ್ಕೆ ಹನಿ ರಕ್ತವೂ ಸಿಗದೇ,  ತಿನ್ನಲು ಚಿಟಿಕೆ ಮಾಂಸವೂ ಸಿಗದ ಬರೀ ಮೂಳೆ ತುಂಬಿಕೊಂಡಿರುವ ದೇಹ ಎಂದುಕೊಂಡಿರಬೇಕು. ಸುಮ್ಮನೆ ಬಿಟ್ಟು ಹೊರಟು ಹೋಗಿದ್ದು ಬಹುಶಃ ಈ ಹದಿಮೂರು ವರ್ಷದ, ಮೂಳೆ ಚಕ್ಕಳವಾಗಿದ್ದ ಹುಡುಗಿ ಮುಂದೊಂದು ದಿನ ಕಗ್ಗತ್ತಲ ಖಂಡವಾಗಿರುವ ಆಫ್ರಿಕಾ ಖಂಡದ ಹಸಿವಿನ ದೇಶ ಸೋಮಾಲಿಯಾದಲ್ಲಿನ ಬುಡಕಟ್ಟಿನ ಜನಾಂಗಗಳಲ್ಲಿ ಯಾವ ಹೆಣ್ಣೂ ಹೇಳಿಕೊಳ್ಳಲಾಗದ ಅಮಾನುಷ ಕೃತ್ಯವನ್ನು ಜಗತ್ತಿಗೆ ಸಾರಿ ಆ ಹೆಣ್ಣುಗಳ ಮೂಕ ವೇದನೆಯನ್ನು ಒಂದಿಷ್ಟಾದರೂ ಕಡಿಮೆ ಮಾಡುತ್ತಾಳೆ ಎಂದು ಆ ಸಿಂಹಕ್ಕೆ ಅನ್ನಿಸಿರಬೇಕು.
ಝೂನಲ್ಲಿ ಹುಲಿ, ಸಿಂಹಗಳನ್ನು ಕಂಡರೇ ಮರಗಟ್ಟಿ ಹೋಗುವ ನಮಗೆ, ಹುಲಿ, ಸಿಂಹಗಳು ಸಹಜವಾಗಿ ಬೇಟೆಯಾಡುವುದನ್ನು ಹತ್ತಿರದಿಂದಲೇ ಕಂಡ ಈ ಹುಡುಗಿಯ ಧೈರ್ಯ ಒಂದು ರೀತಿಯ ಅಚ್ಚರಿಯ ವಿಷಯವೇ. ಚಿಕ್ಕಂದಿನಿಂದಲೇ ಇಂತಹ ಬೇಟೆಯನ್ನು ಕಂಡಿದ್ದರಿಂದಲೇ ಅದಕ್ಕಿಂತ ಕ್ರೂರವಾದ ಮಾನವ ಜಗತ್ತಿನ ಬೇಟೆಯನ್ನು ಚಾಣಾಕ್ಯತನದಿಂದಲೇ ಎದುರಿಸುವ ಧೈರ್ಯ ದೊರೆಯಿತು ಎಂದು ಹೇಳಬಹುದು.   
ಆಗ ಆಕೆಗೆ ಕೇವಲ ಹದಿಮೂರು ವರ್ಷ. ಆ ವಯಸ್ಸಿಗೆ ತನ್ನ ಅಪ್ಪ ಹುಡುಕಿದ್ದ ಅರವತ್ತು ವರ್ಷದ ಮದುಮಗನನ್ನು ವಿರೋಧಿಸಿ ಮನೆ ಬಿಟ್ಟು ಹೊರಟವಳು ವಾರಿಸ್. ಆ ಹಸಿವಿನ ಮರುಭೂಮಿಯ ಬಾಳು ಅಲ್ಲಿ ಅನುಭವಿಸಿದವರಿಗಷ್ಟೇ ಗೊತ್ತು. ಒಂದು ಚರ್ಮದ ಚೀಲದ ತುಂಬ ನೀರನ್ನು ತರಬೇಕೆಂದರೆ ಆ ಮರುಭೂಮಿಯಲ್ಲಿ ಎರಡು ದಿನಗಟ್ಟಲೆ ತಿರುಗಾಡಬೇಕಿತ್ತು. ನೀರಿಗಿಂತ ಸುಲಭವಾಗಿ ಒಂಟೆಯ ಹಾಲು ಕುಡಿಯಬಹುದಿತ್ತು. ಆದರೆ ನೀರು ಮಾತ್ರ ದುಬಾರಿ.
ನಾನು ಹೈಸ್ಕೂಲಿಗೆ ಹೋಗುವ ದಿನಗಳಲ್ಲಿ ಸೋಮಾಲಿಯದ ಮಕ್ಕಳ ಚಿತ್ರ ಪೇಪರ್ ನಲ್ಲಿ ಬರುತ್ತಿತ್ತು. ಬೆನ್ನಿಗೆ ಅಂಟಿಕೊಂಡ ಹೊಟ್ಟೆಯ ಚಿಕ್ಕ ಮಕ್ಕಳು ನನ್ನಲ್ಲಿ ವಿಚಿತ್ರ ತಲ್ಲಣ ಹುಟ್ಟಿಸುತ್ತಿದ್ದರು. ಎದೆಯ ಮೂಳೆಗಳೆಲ್ಲ ಎದ್ದು ಕಾಣುವ ಚಿತ್ರಗಳು ಯಾಕೋ ಹೊಟ್ಟೆ ತೊಳೆಸುವಂತೆ ಮಾಡುತ್ತಿತ್ತು.  
ಆದರೆ ಅಪ್ಪ ಮಾತ್ರ ಆ ದಿನದಿಂದ ನನಗೆ ಒಂದು ಅಗುಳನ್ನು ಬಟ್ಟಲಲ್ಲಿ ಉಳಿಸಲು ಬಿಡುತ್ತಿರಲಿಲ್ಲ. “ಅಲ್ಲಿ ಹೊಟ್ಟೆಗೆ ಒಂದು ಹಿಡಿ ಅನ್ನ ಸಿಗದವರಿದ್ದಾರೆ. ಇಲ್ಲಿ ನೀನು ಊಟ ಬಿಡ್ತೀಯಾ?” ಎಂದು ತಣ್ಣನೆಯ ಸ್ವರದಲ್ಲಿ ಕೇಳುತ್ತಿದ್ದರು. ಯಾವತ್ತೂ ಬೈಯ್ಯದ, ಹೊಡೆಯದ ಅಪ್ಪ ಒಂದು ಮಾತು ಹೇಳಿದರೂ ಸಾಕು, ಅದು ನನಗೆ ಗದರಿಸುವಂತೆ ಕಾಣುತ್ತಿತ್ತು. ಹೀಗಾಗಿ ನಾನು ಒಂದು ಮಾತನ್ನೂ ಆಡದೇ ಊಟ ಮಾಡಿಬಿಡುತ್ತಿದ್ದೆ. ಬಹುಶಃ ಬಾಲ್ಯದ ಆ ಸೋಮಾಲಿಯಾದ ಮಕ್ಕಳ ಚಿತ್ರವೇ ನನಗೆ ಈ ಪುಸ್ತಕ ಓದಲು ಪ್ರೇರೇಪಿಸಿದ್ದು. ಈಗ ನನ್ನ ಮಕ್ಕಳಿಗೂ ನಾನು ಸೋಮಾಲಿಯದ ಆ ಮಕ್ಕಳ ಹಸಿವೆಯ ಕಥೆ ಹೇಳುತ್ತೇನೆ. ಆದರೆ ನಾನು ಅನುಭವಿಸಿದ ಆ ಫೀಲಿಂಗ್  ಯಾಕೋ ಅವರ ಮನಸ್ಸಿನಲ್ಲಿ ಹುಟ್ಟುತ್ತಲೇ ಇಲ್ಲ.
ಮನೆಯಿಂದ ಹೊರಟ ಹದಿಮೂರರ ಹುಡುಗಿಗೆ ಎಲ್ಲಿಗೆ ಹೋಗುವುದೆಂದೇ ಗೊತ್ತಿರಲಿಲ್ಲ. ಸೋಮಾಲಿಯಾದ ರಾಜಧಾನಿ ಮೊಗದೀಶು ನಗರದಲ್ಲಿ  ಚಿಕ್ಕಮ್ಮನಿದ್ದಾಳೆ ಎಂಬುದು ಗೊತ್ತಿತ್ತೇ ಹೊರತು ಆಕೆ ಯಾರು ಹೇಗಿದ್ದಾಳೋ ಎಂಬುದೂ ಗೊತ್ತಿರಲಿಲ್ಲ. ಮುಖ ಪರಿಚಯವೇ ಇಲ್ಲದ ಆಕೆಯ ಮನೆಯನ್ನು ಹುಡುಕಿ ಹೊರಟವಳ ಧೈರ್ಯಕ್ಕೆ ಶಿರಬಾಗಿ ಸೆಲ್ಯೂಟ್ ಹೇಳದೇ ಬೇರೇನು ಹೇಳಲು ಸಾಧ್ಯ?
ಕೆಲವು ದಿನಗಳ ಹಿಂದೆ ಟಿ ವಿ ನೋಡುವಾಗ ಯಾವುದೋ ದಾರಾವಾಹಿಯಲ್ಲಿ ಶಿವನ ಪಾತ್ರದಾರಿ ಹೆಣ್ಣು ತನ್ನ ಮೇಲಾಗುವ ದೌರ್ಜನ್ಯಕ್ಕೆ ಯಾಕೆ ಯಾವಾಗಲೂ ಬೇರೆಯವರಿಂದ ಸಹಾಯಕ್ಕೆ ಯಾಚಿಸಬೇಕು? ಗಂಡಸರೇ ಬಂದು ರಕ್ಷಿಸಲಿ ಎಂದು ಯಾಕೆ ಬಯಸಬೇಕು? ತನ್ನ ಮೇಲಾದ ದೌರ್ಜನ್ಯಕ್ಕೆ ಸ್ವತಃ ಪ್ರತಿಕಾರ ಯಾಕೆ ತೆಗೆದುಕೊಳ್ಳುವುದಿಲ್ಲ”  ಎಂದು ಪಾರ್ವತಿಯ ಪಾತ್ರಧಾರಿಯ ಬಳಿ ಕೇಳುತ್ತಿದ್ದ. ನನಗೆ ಅದೇಕೋ ನಿಜ ಅನ್ನಿಸಿದ್ದು ಮನೆ ಬಿಟ್ಟು ಹೊರಟ ವಾರಿಸ್ ದಾರಿಯಲ್ಲಿ ಟ್ರಕ್ ಕ್ಲೀನರ್ ಒಬ್ಬ ತನ್ನ ಮೇಲೇ ಬಲಾತ್ಕಾರಕ್ಕೆ ಪ್ರಯತ್ನಿಸಿದಾಗ ಆತನ ಮೇಲೆ ಚೂಪಾದ ಕಲ್ಲಿನಿಂದ ಹಲ್ಲೆ ನಡೆಸಿ ಬಚಾವಾದದ್ದನ್ನು ಓದಿದ ಮೇಲೆ. ಹಾಗೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ವಾರಿಸ್ ಯಾವತ್ತೂ ಇಂದಿನ ಹೆಣ್ಣು ಮಕ್ಕಳಿಗೊಂದು ಮಾದರಿಯಾಗಿಯೇ ನಿಲ್ಲುತ್ತಾಳೆ.
ಅದಕ್ಕೂ ಮೊದಲು ಅಂದರೆ ಕೇವಲ ನಾಲ್ಕು ವರ್ಷದವಳಿದ್ದಾಗಲೇ ನಕ್ಷತ್ರದ ಕಥೆ ಹೇಳುತ್ತೇನೆ ಬಾ ಎಂದು ಕರೆದ ಅಪ್ಪನ ಸ್ನೇಹಿತ ಗುಬಾನ ಎಂಬಾತ ಅತ್ಯಾಚಾರಕ್ಕೆಳೆಸಿದ್ದನ್ನು ಹೇಳುವ ವಾರಿಸ್ ಬದುಕು  ನೊದವರ ಪಾಲಿಗೊಂದು ಸಂತೈಕೆಯಾಗಿ ನಿಲ್ಲುತ್ತದೆ.
ಮೊಗದೀಶು ನಗರದಲ್ಲಿ ಅಕ್ಕ ಅಮಿನಾಳ ಮನೆ ಸೇರಿದ ವಾರಿಸ್ ಅಲ್ಲಿಂದ ಮಾವನ ಮನೆ, ಚಿಕ್ಕಮ್ಮನ ಮನೆ, ನಂತರ ಅಲ್ಲಿಂದ ಲಂಡನ್ನಿನಲ್ಲಿ ಸೋಮಾಲಿಯಾದ ರಾಯಭಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮತ್ತೊಬ್ಬ ಚಿಕ್ಕಮ್ಮನ ಗಂಡನ ಜೊತೆ ಲಂಡನ್ ನ ಚಿಕ್ಕಮ್ಮನ ಮನೆ ಸೇರುವವರೆಗಿನ ದಾರಿ ಸುಲಭವಾದುದ್ದೆನೂ ಆಗಿರಲಿಲ್ಲ.
ಆದರೆ ಆಕೆ ಯಾವತ್ತೂ ತನ್ನ ಸ್ವಾಭಿಮಾನವನ್ನು ಕಳೆದುಕೊಂಡು ಬದುಕಲಿಲ್ಲ. ತನ್ನತನವನ್ನು ಮಾರಿಕೊಳ್ಳಲಿಲ್ಲ. ಆದರೆ ಆ ದಿನಗಳಲ್ಲಿ ಆಕೆ ಅದೆಷ್ಟು ಕೆಲಸ ಮಾಡಿದರೂ, ಬೆಳಿಗ್ಗೆ ಐದು ಗಂಟೆಯಿಂದ ರಾತ್ರಿ ಹನ್ನೆರಡು ಗಂಟೆಗಳವರೆಗೆ ಒಂದರೆಕ್ಷಣವೂ ವಿಶ್ರಾಂತಿ ಇಲ್ಲದೇ ದುಡಿದರೂ ತನ್ನನ್ನು ಕೆಡಿಸಲು ಮಧ್ಯರಾತ್ರಿ ಬಂದ ಚಿಕ್ಕಮ್ಮನ ಮಗ ಹಾಜಿಯನ್ನು ದಿಟ್ಟತನದಿಂದ ಎದುರಿಸಿದವಳು.
ಜೀವನದಲ್ಲಿ ಏನನ್ನೂ ನೋಡದ ವಾರಿಸ್ ಮೊಗದೀಶು ನಗರಕ್ಕೆ ಹೋದ ವರ್ಷದೊಳಗೇ ಲಂಡನ್ ನ ಇನ್ನೊಬ್ಬ ಚಿಕ್ಕಮ್ಮನ ಮನೆಗೆ ಹೋಗಬೇಕಾದ ಸಂದರ್ಭ ಬಂದೊದಗಿತು. ಎಂದೂ ವಿಮಾನ ಎಂದರೆ ಏನೆಂದು ತಿಳಿಯದವಳು ವಿಮಾನದೊಳಗೆ ಪ್ರಯಾಣಿಸುವ ಅವಕಾಶ. ಸೋಮಾಲಿಯಾ ಭಾಷೆ ಬಿಟ್ಟು ಬೇರೇನೂ ಗೊತ್ತಿರದ ವಾರಿಸ್ ಏಕಾಂಗಿಯಾಗಿ ವಿಮಾನದಲ್ಲಿ ಪ್ರಯಾಣಿಸುವುದು ಅಚ್ಚರಿಯೆನಿಸುತ್ತದೆಯಾದರೂ ಅಲ್ಲಿಯೂ ಆಕೆಯ ಮುಗ್ಧತೆ ಕಾಣಿಸುತ್ತದೆ.
ವಿಮಾನದ ಶೌಚಾಲಯದೊಳಗೆ ಎಲ್ಲಿ ಮೂತ್ರ ವಿಸರ್ಜನೆ ಮಾಡುವುದೆಂದೇ ತಿಳಿಯದೇ, ಶೌಚಾಲಯದ ಯಾವ ಗುಂಡಿ ಒತ್ತಿದರೆ ಏನಾಗುತ್ತದೋ, ಯಾವುದಾದರೂ ಗುಂಡಿ ಒತ್ತಿ ವಿಮಾನವೇ ಸಿಡಿದು ಹೋದರೆ ಎಂಬ ಆತಂಕದಲ್ಲಿ ಅಲ್ಲಿಯೇ ಕುಳಿತು ವಿಸರ್ಜಿಸಿದ ವಾರಿಸ್ ನಂತರ ಬೇರೆಯಾರಾದರೂ ಅಲ್ಲಿ ಬಂದರೆ ಅಸಹ್ಯ ಆಗಬಹುದೆಂದು ಯೋಚಿಸಿ, ಅಲ್ಲಿಯೇ ಇದ್ದ ಪೇಪರ್ ಕಪ್ ಒಂದರಿಂದ ಮೂತ್ರವನ್ನೆಲ್ಲ ತುಂಬಿ ಕಮೋಡ್ ಗೆ ಸುರಿದು ಸ್ವಚ್ಛ ಮಾಡಿದ್ದನ್ನು ನಂತರ ಅಂದರೆ ಜಗದ್ವಿಖ್ಯಾತ ರೂಪದರ್ಶಿ ಆದ ಮೇಲೂ ಯಾವ ಮುಜುಗರ, ಕೀಳರಿಮೆಯೂ ಇಲ್ಲದೇ ವಿವರಿಸುವುದನ್ನು ಓದಿದಾಗ ಬದುಕಿನಲ್ಲಿ ಸರಳತೆ ಎನ್ನುವುದು ಎಷ್ಟು ಮುಖ್ಯವೆನ್ನುವುದು ಅರ್ಥವಾಗುತ್ತದೆ.                    
ತುಂಬಾ ಆತ್ಮೀಯರಂತೆ ಹತ್ತಿರ ಬರುವ ಮತ್ತು ಅಕಾರಣವಾಗಿ ದೂರ ಸರಿಯುವ ಈ ಮನುಷ್ಯ ಸಂಬಂಧಗಳ ಬಗ್ಗೆ ನನಗೊಂದು ತರಹದ ಕುತೂಹಲವಿದೆ. ಎಷ್ಟೋ ಸಲ ಅತ್ಯಂತ ಆತ್ಮೀಯರಾಗಿದ್ದವರು ನಂತರ ಯಾವ ನಿರ್ದಿಷ್ಟ ಕಾರಣವನ್ನೂ ಹೇಳದೇ ದೂರ ಸರಿಸುವ ಪ್ರಕ್ರಿಯೆ ನನಗೆ ಸಂಕಟದ ಜೊತೆಗೆ ಅಷ್ಟೇ ಆಶ್ಚರ್ಯವನ್ನೂ ಹುಟ್ಟಿಸುತ್ತದೆ. ಹತ್ತಿರವಾದಷ್ಟೇ ಸಹಜವಾಗಿ ಮೈಮೇಲಿನ ಧೂಳು ಕೊಡವಿಕೊಂಡಂತೆ ದೂರವಾಗಿ ಬಿಡುವವರ ಕುರಿತು ನನಗೆ ತಣಿಸಲಾಗದ ಕುತೂಹಲವೊಂದು ಯಾವಾಗಲೂ ಇರುತ್ತದೆ.
ಇಲ್ಲಿಯೂ ಕೂಡ ವಾರಿಸ್ ಳ   ಚಿಕ್ಕಪ್ಪ ಸೋಮಾಲಿಯಾದ ರೂಪದರ್ಶಿ ಆಗಿದ್ದಾಗ ಜೊತೆಯಲ್ಲಿ ಕೆಲಸ ಮಾಡಿದ್ದ ಅಡಿಗೆಯವ ಹಾಗೂ ಕಾರಿನ ಚಾಲಕ ನಂತರ ಅವಳು ಯಾರೆಂಬುದೇ ತಿಳಿಯದಂತೆ ತುಂಬ ಕಠಿಣವಾಗಿ ವರ್ತಿಸುವುದನ್ನು ಹೇಳುತ್ತ ಮನುಷ್ಯನ ಸಹಜ ಗುಣವನ್ನು ಅನಾವರಣ ಮಾಡುತ್ತಾಳೆ. ಚಿಕ್ಕಪ್ಪ ಹಾಗೂ ಚಿಕ್ಕಮ್ಮ ಲಂಡನ್ ನಗರವನ್ನು ಬಿಟ್ಟು ಹೋದರೂ ತನ್ನ ಬದುಕು ಇರುವುದು ಲಂಡನ್ ನಲ್ಲಿಯೇ ಎಂದು ನಿರ್ಧರಿಸಿ ಅಲ್ಲಿಯೇ ಉಳಿದುಕೊಳ್ಳುವ ವಾರಿಸ್ ನಂತರ ಎದುರಿಸಿದ ಬದುಕು ಕೆಂಪು ಹಾಸಿನ ನೆಲವಲ್ಲ. ಬದಲಿಗೆ ಚೂಪುಗಲ್ಲು, ಮುಳ್ಳುಗಳಿಂದ ಕೂಡಿದ ನೆಲ. ಕೆಲವೊಮ್ಮೆ ಕಾಲಿಟ್ಟಲ್ಲಿ ಹೂತು ಹೋಗುವ ಜವಳು ಪ್ರದೇಶ. ಆದರೆ ಮರಳುಗಾಡಿನಲ್ಲಿ ಬದುಕಿನ ಸಂಕಷ್ಟಗಳನ್ನೆಲ್ಲ ಎದುರಿಸಿದ ಹುಡುಗಿಗೆ ಇದನ್ನೆಲ್ಲ ಎದುರಿಸುವ ಛಲ ಸಹಜವಾಗಿಯೇ ರಕ್ತಗತವಾಗಿಬಿಟ್ಟಿರುತ್ತದೆ ಎಂಬುದನ್ನು  ಸಹಜವಾಗಿ ಹೇಳುತ್ತಾಳೆ.
ಮಾಡೆಲಿಂಗ್ ನಂತಹ ತಳಕು ಬಳಕಿನ ಲೋಕದಲ್ಲಿ ತನ್ನತನವನ್ನು ಕಾಯ್ದುಕೊಳ್ಳುವುದು ಎಷ್ಟು ಕಷ್ಟ ಎಂಬುದು ಅರಿವಾಗುವ ಮುನ್ನವೇ ಆ ಲೋಕದೊಳಗೆ ಇಳಿದವಳು ಆಕೆ. ಅದು ಪಿರೆಲ್ಲಿ ಕ್ಯಾಲೆಂಡರ್ ಗಾಗಿ ರೂಪದರ್ಶಿಗಳನ್ನು ಆಯ್ಕೆ ಮಾಡುವ ಒಂದು ಆಡಿಶನ್. ಅಲ್ಲಿನ ಕ್ಯಾಮರಾಮನ್  ಆಕೆಯ ಫೋಟೊ ತೆಗೆಯಲು ಅವಳ ಮೇಲುಡುಪನ್ನು ತೆಗೆಯಲು ಹೇಳಿದಾಗ, ದಂಗಾಗಿ ತಾನು ಬ್ರಾ ಹಾಕದಿರುವುದನ್ನು ಸಹಜವಾಗಿಯೇ ಹೇಳಿದವಳು ಆಕೆ. ಆದರೆ ಅದನ್ನು ವಿರೋಧಿಸಿ ಹೊರಗೆ ಹೊರಟಾಗ ಅಲ್ಲಿ ಆಕೆಗೆ ಮಾಡೆಲಿಂಗ್ ಪ್ರಪಂಚದ ಒಳಗನ್ನು ಅರ್ಥ ಮಾಡಿಸಿ ಸಂತೈತಿಸಿ ಚಿತ್ರೀಕರಿಸಿದ್ದನ್ನು ಹೇಳುತ್ತ ಅರೆ ಬೆತ್ತಲಾಗುವುದರ ಮೂಲಕ ಮಾಡೆಲಿಂಗ್ ವೃತ್ತಿ ಪ್ರಾರಂಭವಾದುದನ್ನು ಉತ್ತುಂಗದ ಶಿಖರದಲ್ಲಿದ್ದಾಗ ವಿವರಿಸುವುದು ಅಷ್ಟು ಸುಲಭವಲ್ಲ.
ಅಷ್ಟೇ ಸಹಜವಾಗಿ ಯಾವ ಉದ್ವೇಗವೂ ಇಲ್ಲದೇ  ತಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ವಾರಿಸ್ ಒಂದು ಉತ್ತಮ ನಿದರ್ಶನವಾಗಿ ನಮ್ಮೆದುರು ನಿಲ್ಲುತ್ತಾಳೆ. ಗೆಳತಿಯ ಪಾಸ್ ಪೋರ್ಟ್ ಬಳಸಿ  ಬೇರೆ ಬೇರೆ ದೇಶಗಳಿಗೆ ಮಾಡಲಿಂಗ್ ಗೆ ಹೋಗುವ ವಾರಿಸ್ ನಂತರ ಹಾಗೆ ಮಾಡಬಾರದೆಂದು ನಿರ್ಧರಿಸಿ ತನ್ನದೇ ಆದ ಒಂದು ಪಾಸ್ ಪೋರ್ಟ್ ಮಾಡಿಸಿಕೊಳ್ಳಲು ಹೆಣಗುವುದೇ ಒಂದು ದೊಡ್ಡ ಕಾದಂಬರಿಯಾದೀತು.
ಪಾಸ್ ಪೋರ್ಟ್ ಗಾಗಿ ಮುದುಕನೊಬ್ಬನನ್ನು ಮದುವೆಯಾಗಿದ್ದು, ಆ ಪಾಸ್ ಪೋರ್ಟ್ ಕೊಡಲು ಸರಕಾರ ನಿರಾಕರಿಸಿದ್ದು, ಪಾಸ್ ಪೋರ್ಟ್ ಮಾಡಿಸಲೇ ಬೇಕಾದ ತುರ್ತು ಹೆಚ್ಚಿರುವುದರಿಂದ ಮತ್ತೊಂದು ಮದುವೆ ಆಗಲು ಆ ಮುದುಕನಿಂದ ಡೈವೊರ್ಸ್ ಪಡೆಯಲು ಹೋದಾಗ ಆತ ಸತ್ತು ಹೋಗಿ ತನಗೆ ವಿಧವೆ  ಪಟ್ಟವನ್ನು ಕರುಣಿಸಿದ್ದನ್ನು ತಮಾಷೆಯೆಂಬಂತೆ ಹೇಳಿಕೊಳ್ಳಲು ಅದೆಷ್ಟು ಮಾನಸಿಕ ಸ್ಥೈರ್ಯ ಬೇಕಾಗಬಹುದು ಎಂದು ನಾವು ಯೋಚಿಸುವಾಗಲೇ ಅದಕ್ಕಿಂತ ದೊಡ್ಡದೊಂದು ಸಂಕಷ್ಟವನ್ನು ಮತ್ತೊಂದು ಮದುವೆ ನೀಡಿದ್ದನ್ನು ಹೇಳುತ್ತಾಳೆ.
ಆ ಸಮಯಕ್ಕಾಗಲೇ ಹೆಸರಾಂತ ರೂಪದರ್ಶಿಯಾಗಿ ಗುರುತಿಸಿಕೊಳ್ಳುತ್ತಿದ್ದವಳನ್ನು ಅವಳ ಗೆಳತಿಯ ತಮ್ಮ ನಿಗೆಲ್ ಮದುವೆ ಆಗಿ ಪಾಸ್ ಪೋರ್ಟ್ ಪಡೆಯಲು ಸಹಾಯ ಮಾಡುವುದಾಗಿ ಹೇಳುತ್ತಾನೆ. ಏನೂ ಕೆಲಸ ಮಾಡದೆ ಅಕ್ಕನ ದುಡಿಮೆಯಲ್ಲಿ ತಿಂದುಂಡು ಬದುಕುತ್ತಿದ್ದ ನಿಗೆಲ್ ಅಂದರೆ ವಾರಿಸ್ ಗೆ ಮೊದಲಿನಿಂದಲೂ ಅಸಹ್ಯ. ಆದರೆ ಪಾಸ್ ಪೋರ್ಟ್ ಗಾಗಿ ಮದುವೆ ಆಗಲೇ ಬೇಕಾದ ಅನಿವಾರ್ಯತೆ. ಅದರೊಟ್ಟಿಗೆ ಆತನ ಜೊತೆ ಬದುಕುತ್ತಿದ್ದೇನೆ ಎಂದು ಸರಕಾರದಿಂದ ಪದೇ ಪದೇ ಬೇಟಿ ಕೊಡುವ ಅಧಿಕಾರಿಗಳಿಗೆ ತೋರಿಸಲು ಅವನೊಟ್ಟಿಗೆ ಕೆಲವು ದಿನಗಳಾದರೂ ಬದುಕಬೇಕಾದ  ಅನಿವಾರ್ಯತೆ.
ಕೊನೆಗೆ ಒಳ್ಳೆಯ ಆಫರ್ ದೊರೆತು ನ್ಯೂಯಾರ್ಕ್ ಗೆ ಹೊರಟಾಗ ಗಂಡನೆಂದು ಅಲ್ಲಿಗೂ ಬಂದ ನಿಗೆಲ್ ನನ್ನು ಸಾಗಹಾಕುವುದಷ್ಟೇ ಅಲ್ಲ, ತಾನು ಬಯಸಿದಾತನ ಮಗುವಿಗೆ ತಾಯಿ ಆಗುವ ಸಂದರ್ಭದಲ್ಲೂ ವಿವಾಹ ವಿಚ್ಛೇದನ ನೀಡದೇ ಸತಾಯಿಸಿದ ನಿಗೆಲ್ ನ ಸಹವಾಸ ಸಾಕೋ ಬೇಕಾದಾಗ ಬದುಕಿನ ಪ್ರಾರಂಭದಿಂದ ಕೊನೆಯವರೆಗೂ ತನ್ನ ಜೀವನ ಈ ಪುರುಷ ಸಮಾಜದ ಹಿಡಿತದಲ್ಲಿ ನಲುಗಿ ಹೋದ ಬಗ್ಗೆ ವಾರಿಸ್ ತೀವ್ರವಾಗಿ ವಿಷಾದಿಸುತ್ತಾಳೆ.
ಇವೆಲ್ಲದರ ನಡುವೆ ಜಗತ್ತಿನ ನಂಬರ್ ಒನ್ ರೂಪದರ್ಶಿಯಾದ ನಂತರ ಯಾವುದೋ ಒಂದು ಸಂಗೀತ ಕ್ಲಬ್ ನಲ್ಲಿ ಡ್ರಮ್ ಬಾರಿಸುತ್ತಿದ್ದ ಆಪ್ರಿಕಾದ ಹುಡುಗನ ಬಗ್ಗೆ ಆಸಕ್ತಿ ತಾಳಿದ್ದನ್ನೂ, ಆತನ ಜೊತೆ ಮೊದಲ ನೋಟದಲ್ಲೇ ಪ್ರೇಮಕ್ಕೆ ಬಿದ್ದುದನ್ನೂ, ತಾನೇ ಮುಂದಾಗಿ ಪ್ರೇಮ ನಿವೇದನೆ ಮಾಡಿದ್ದನ್ನು ಕೂಡ ಅಷ್ಟೇ ಸಹಜವಾಗಿ ಹೇಳುತ್ತಾಳೆ.    
ಆದರೆ ಇವೆಲ್ಲದರ ನಡುವೆ ಆಕೆ ತನ್ನ ಇಪ್ಪತ್ತೆಂಟನೇ ವಯಸ್ಸಿನಲ್ಲಿ ಒಂದು ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಾಳೆ. ತಿಂಗಳ ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವೆಂದು ಒದ್ದಾಡುತ್ತ ನರಳುವ ವಾರಿಸ್ ಗೆ ಅದರ ಕಾರಣ ಗೊತ್ತಿದೆ. ಸುಮಾರು ಐದು ವರ್ಷದವಳಿದ್ದಾಗ ನಡೆದ ಗುಪ್ತಾಂಗದ ಹೊಲಿಗೆ. ಅದಕ್ಕೂ ಒಂದಿಷ್ಟು ತಿಂಗಳುಗಳ ಮುಂಚೆ ಅಕ್ಕನನ್ನು ಹೆಂಗಸಾಗಿದ್ದನ್ನು ಗಮನಿಸಿದ್ದ ವಾರಿಸ್ ತನಗೂ ಯೋನಿ ವಿಚ್ಛೇದನ ಮಾಡಬೇಕೆಂದು ಅಮ್ಮನನ್ನು ಗೋಗರೆದಿದ್ದಳು.
ಕೇವಲ ಐದು ವರ್ಷದ ಪುಟ್ಟ ಬಾಲಕಿಯನ್ನು ಅತ್ಯಂತ ಅವೈಜ್ಞಾನಿಕವಾಗಿ ಗುಪ್ತಾಂಗದ ಕೆಲವು ಭಾಗಗಳನ್ನು ಕತ್ತರಿಸಿ, ನಂತರ ಮೂತ್ರ ಮಾಡಲು ಚಿಕ್ಕ ಜಾಗವೊಂದನ್ನು ಬಿಟ್ಟು ಉಳಿದವುಗಳನ್ನೆಲ್ಲ ಸೇರಿಸಿ ಬಟ್ಟೆ ಹೊಲಿಯುವಂತೆ ಹೊಲೆಯಲಾಗುತ್ತಿದ್ದ ಅಮಾನುಷ ಪದ್ದತಿಗೆ  ಸಾಕ್ಷಿಯಾಗಿದ್ದಷ್ಟೇ ಅಲ್ಲ, ಸ್ವತಃ ಬಲಿಯಾಗಿದ್ದಳು. ಆ ವಿಚ್ಛೇದನ ಮತ್ತು ಹೊಲಿಗೆ ಅವಳನ್ನು ಮಾನವ ಸಹಜವಾಗಿ ಇರಲು ಬಿಟ್ಟಿರಲೇ ಇಲ್ಲ.
ಆದರೆ ಅಪ್ಪ ಎನ್ನುವ ಮದುವೆ ಮಾರುಕಟ್ಟೆಯ ದಲ್ಲಾಳಿಗೆ ಹಾಗೆ ಛೇದನ ಮಾಡಿಸಿಕೊಂಡ ಹೆಣ್ಣು ಮಕ್ಕಳು ಬಂಗಾರದ ಮೊಟ್ಟೆ ಇಡುವ ಕೋಳಿಗಳು. ಹೀಗಾಗಿಯೇ ಧರ್ಮ ಮತ್ತು ಕನ್ಯತ್ವವನ್ನು ಕಾಪಾಡಿಕೊಳ್ಳುವ ಹೆಸರಿನಲ್ಲಿ ನಡೆಯುವ ಈ ಪದ್ದತಿ ಜೀವಂತವಾಗಿಯೇ ಉಳಿದು ಹೋಗಿದ್ದರ ಕುರಿತು ವಾರಿಸ್ ಯುದ್ಧ ಸಾರುತ್ತಾಳೆ.
ಅತ್ಯಂತ ಹೇಯವಾದ ಈ ಪದ್ದತಿ ಆಚರಣೆ ರೂಢಿಯಲ್ಲಿರುವುದು ಹೊರ ಜಗತ್ತಿಗೆ ಗೊತ್ತಾಗದಂತೆ ಸೋಮಾಲಿಯಾ ದೇಶದ ಲಂಡನ್ನಿನ ರಾಯಭಾರಿಯಾದ ಚಿಕ್ಕಪ್ಪನ ಹೆಂಡತಿ ಕೂಡ ಅದು ಹೊರ ಜಗತ್ತಿಗೆ ಅರಿವಾಗದಂತಿರಲು ತಿಂಗಳ ಮುಟ್ಟಿನ ನೋವಿನ ಸಮಯದಲ್ಲಿ ವಾರಿಸ್ ಆ ಬಗ್ಗೆ ವೈದ್ಯರಿಗೆ ಹೇಳದಂತೆ ಕಾವಲು ಕಾಯುತ್ತಾಳೆ. ಅಂತೂ ತನ್ನ ಕಾಲ ಮೇಲೆ ತಾನು ನಿಂತ ನಂತರವಷ್ಟೇ ವೈದ್ಯರಿಂದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ವಾರಿಸ್ ಅದು ತನ್ನ  ಜೀವನದಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯದ, ಬಿಡುಗಡೆಯ ಅನುಭವ ನೀಡಿತು ಎನ್ನುತ್ತಾಳೆ.
ದೇವರು, ಧರ್ಮ ಹಾಗೂ ಸಂಪ್ರದಾಯದ ಹೆಸರಿನಲ್ಲಿ ಹೆಣ್ಣನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಪುರುಷ ಸಮಾಜ ಆಚರಣೆಗೆ ತಂದ ಅತ್ಯಂತ ಹೀನವಾದ ಈ ಪದ್ದತಿ ಇಂದಿಗೂ ಕೂಡ ಬುಡಕಟ್ಟು ಜನಾಂಗಗಳಲ್ಲಿ ಗುಟ್ಟಾಗಿ ಆಚರಿಸಲ್ಪಡುತ್ತಿದೆ ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಮುಂಬೈನ ಒಂದು ಜನಾಂಗದಲ್ಲಿ ಈ ಪದ್ದತಿ ಇದೆ ಎಂಬುದನ್ನು ಜಗದೀಶ ಕೊಪ್ಪ ವಿಷಾದದಿಂದ ಹೇಳುವುದನ್ನು ಕೇಳಿದಾಗ ನನಗೆ ಕಾಲಡಿಯ ನೆಲ ಕುಸಿದ ಅನುಭವ.
ಈ ಎಲ್ಲದರ ಮಧ್ಯೆ ವಾರಿಸ್ ಬಿ ಬಿ ಸಿ ಯವರ ಸಾಕ್ಷ್ಯ ಚಿತ್ರಕ್ಕೋಸ್ಕರ ಅಮ್ಮನನ್ನು ಹುಡುಕಿದ್ದು, ಆಗ ಹನ್ನೊಂದು ಮಕ್ಕಳ ತಾಯಿಯಾದ ಅಮ್ಮ, ತನ್ನ ಸವತಿ, ಅಂದರೆ ತನ್ನ ಗಂಡನ ಎರಡನೆಯ ಹೆಂಡತಿಯ ಐದು ಮಕ್ಕಳನ್ನು ಪಾಲಿಸುವಲ್ಲಿ ನಿರತಳಾದ ವಿಷಯ ತಿಳಿದು ಅಮ್ಮನ ಜೀವನ ಪ್ರೀತಿಗೆ ಬೆರಗಾಗುವುದು ಹೊಸ ವಿಷಯವೇನಲ್ಲ. ಯಾಕೆಂದರೆ ಅದೇ ಅಮ್ಮನ ಛಲ ಮತ್ತು ಜೀವನ ಪ್ರೀತಿಯನ್ನು ಹೊತ್ತು ತಂದವಳು ವಾರಿಸ್.
ಹೀಗಾಗಿಯೇ ಆಕೆ ಆಪ್ರಿಕಾದ ತನ್ನ ಬುಡಕಟ್ಟು ಆಚರಿಸುತ್ತಿದ್ದ ಯೋನಿ ಛೇದನದ ವಿಷಯವನ್ನು ಬಿಚ್ಚಿಡಲು ಸಾಧ್ಯವಾಗಿದ್ದು. ‘ಮೇರಿ ಕ್ಲೈರ್’ ಎಂಬ ಪತ್ರಿಕೆಯಲ್ಲಿ ಮೊದಲ ಬಾರಿಗೆ ಈ ವಿಷಯ ಪ್ರಕಟವಾದಾಗ ಆಧುನಿಕ ಸಮಾಜ ಅಲ್ಲೋಲ ಕಲ್ಲೋಲವಾಯಿತು, ಅದಕ್ಕೂ ಮೊದಲು ವಾರಿಸ್ ತನ್ನ ಯೋನಿಗೆ ಹಾಕಿದ್ದ ಹೊಲಿಗೆಯ ಕುರಿತು ಗೆಳತಿ ಮರ್ಲಿನ್ ಗೆ ಹೇಳಿದಾಗ ಅದನ್ನು ನೋಡಿದ ಮರ್ಲಿನ್ ಕೂಡ ಕಂಗೆಟ್ಟು ತಕ್ಷಣ ಶಸ್ರ ಚಿಕಿತ್ಸೆ ಮಾಡಿಸಿದ್ದನ್ನು ನೆನಪಿಸಿಕೊಳ್ಳುತ್ತಾಳೆ.
ವಾರಿಸ್ ಈ ಅನಿಷ್ಟ ಪದ್ದತಿಯ ವಿರುದ್ಧ ಹೋರಾಟ ಪ್ರಾರಂಭಿಸಿದಾಗ ಅವಳಿಗೆ ಬೆಂಬಲವಾಗಿ ನಿಂತದ್ದು ವಿಶ್ವಸಂಸ್ಥೆ. ಆಕೆಯನ್ನು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ರಾಯಭಾರಿಯಾಗಿ ಗೌರವಿಸಿ ಅವಳ ಹೋರಾಟಕ್ಕೊಂದು ತಾರ್ಕಿಕ ಬೆಂಬಲ ನೀಡಿತು.
ಹೆರಿಗೆಯಿಂದ ಸಡಿಲವಾದ ಗುಪ್ತಾಂಗದಿಂದಾಗಿ ಗಂಡಸಿನ ಸುಖಕ್ಕೆ ಅಡ್ಡಿಯಾಗಬಾರದು ಎಂದು ಬಟ್ಟೆ ಹೊಲಿಯುವ ಸೂಜಿ ದಾರದಿಂದ ಹೆಣ್ಣಿನ ಯೋನಿಯನ್ನು ಹೊಲಿಯುವ ತನ್ನ ಬುಡಕಟ್ಟಿನಲ್ಲಿ ಹೆಣ್ಣು ಕೇವಲ ಅವರು ಸಾಕುವ  ಒಂಟೆಗಳಂತೆ ಒಂದು ಪ್ರಾಣಿ ಎಂದು ದುಃಖಿಸುವ ವಾರಿಸ್, ಹಾಗೇನಾದರೂ ಅಂತಹ ಅವೈಜ್ಞಾನಿಕ ಕ್ರಮದಿಂದ ಸೋಂಕು ತಗಲಿ ಸತ್ತರೆ ಅವಳಿಗೆ ಕಣ್ಣೀರಿಡಲೂ ಯಾರೂ ಗತಿಯಿಲ್ಲ ಎಂದು ವಿಷಾದಿಸುತ್ತಾರೆ.
ಹೆಂಡತಿ ಸತ್ತ ವಾರದೊಳಗೇ ಗಂಡ ಇನ್ನೊಂದು ಮದುವೆ ಆಗುತ್ತಾನೆ ಎನ್ನುತ್ತ ಗಂಡಸಿನ ಗುಪ್ತಾಂಗವನ್ನು ಕತ್ತರಿಸಿ ಆತ ರಕ್ತ ಸುರಿಸುತ್ತ ಬೀದಿ ತುಂಬ ಓಡಾಡುವುದನ್ನು ಕಲ್ಪಿಸಿಕೊಂಡೆ ಎನ್ನುತ್ತಾರೆ. 1998ರ ಹೊತ್ತಿಗೆ ವಿಶ್ವಸಂಸ್ಥೆಯ ಸಮೀಕ್ಷೆಯ ಪ್ರಕಾರ ಆಪ್ರಿಕಾದ ವಿವಿಧ ರಾಷ್ಟ್ರಗಳಲ್ಲಿ ಸುಮಾರು ಹದಿಮೂರು ಕೋಟಿ ಹೆಣ್ಣು ಮಕ್ಕಳು ಈ  ಅನಿಷ್ಟತೆಗೆ ಒಳಗಾಗಿದ್ದು, ಇಪ್ಪತ್ತು ಲಕ್ಷ ಹುಡುಗಿಯರು, ಚೂಪಾದ ಕಲ್ಲು , ತುಕ್ಕು ಹಿಡಿದ ಕತ್ತರಿ, ಸೂಜಿ, ಗಾಜಿನ ಚೂರುಗಳನ್ನು ಬಳಸಿದ್ದರ ಫಲವಾಗಿ ಸೋಂಕು ತಗಲಿ ಸತ್ತಿದ್ದರು.ಅದನ್ನು ವಿರೋಧಿಸಿದ ವಾರಿಸ್ ಡೆಸರ್ಟ ಫ್ಲವರ್ ಎಂಬ ಹೆಸರಿನ ಸಂಸ್ಥೆಯ ಮುಖಾಂತರ ಸಹಾಯ ಮಾಡುತ್ತಿದ್ದಾರೆ.
ಬಂದ ಕಷ್ಟಗಳನ್ನೆಲ್ಲ ಎದುರಿಸಿ, “ನೀನು  ಬದುಕಿನಲ್ಲಿ ಏನನ್ನಾದರೂ ಸಾಧಿಸಬಲ್ಲೆ, ತಾಳ್ಮೆಯಿಂದಿರು.” ಎಂದು ತನ್ನನ್ನು ತಾನೇ ಸಂತೈಸಿಕೊಂಡು ಬದುಕನ್ನು ಎದುರಿಸಲು ಸಿದ್ಧಳಾದ ವಾರಿಸ್ ನನಗೆ ಆತ್ಮವಿಶ್ವಾಸದ ಪ್ರತೀಕವಾಗಿಯಷ್ಟೇ ಅಲ್ಲ, ಸರಳತೆಯ ಪ್ರತೀಕವಾಗಿಯೂ ಕಾಣುತ್ತಾಳೆ.
ಹೀಗಾಗಿಯೇ ಬದುಕಿನಲ್ಲಿ ನಾನು ಸೋಲುತ್ತಿದ್ದೇನೆ, ಆತ್ಮವಿಶ್ವಾಸದ ಕೊರತೆಯಾಗುತ್ತಿದೆ ಎನ್ನಿಸಿದಾಗಲೆಲ್ಲ ನಾನು ಕೈಗೆತ್ತಿ ಕೊಳ್ಳುವುದು ‘ಮರುಭೂಮಿಯ ಹೂ’. ನಾನಿದನ್ನು ಹೆಣ್ಣಾಗಿಯೇ ಅನುಭವಿಸಿ ಬರೆದೆ ಎನ್ನುವ ಜಗದೀಶ ಕೊಪ್ಪ ಇಡೀ ಪುಸ್ತಕದಲ್ಲಿ ಎಲ್ಲಿಯೂ ಅನುವಾದ ಸಡಿಲಗೊಳ್ಳಲು  ಬಿಟ್ಟಿಲ್ಲ. ಮೂಲ ಕನ್ನಡದ್ದೇ ಕೃತಿ ಎಂಬಂತೆ ಸುಲಲಿತವಾಗಿ ಓದಿಸಿಕೊಳ್ಳುವ ಈ ಪುಸ್ತಕವನ್ನು ಜೀವನದಲ್ಲಿ ಸೋಲನ್ನು ಮೆಟ್ಟಿನಿಂತು, ಪ್ರತಿಕೂಲ ಪರಿಸ್ಥಿತಿಗಳನ್ನು ಪಕ್ಕಕ್ಕೆ ತಳ್ಳಿ ಯಶಸ್ಸಿನ ಮೆಟ್ಟಿಲನ್ನು ಏರಿ, ಉತ್ತುಂಗ ತಲುಪಬೇಕು ಎನ್ನುವ ಪ್ರತಿಯೊಬ್ಬ ಹುಡುಗಿಯೂ ಓದಲೇ ಬೇಕು.
ಈ ಪುರುಷ ಸಮಾಜದ ಕ್ರೌರ್ಯವನ್ನು ಅರಿತು ತಾವು ಅಂತಹ ತಪ್ಪು ಮಾಡಬಾರದು ಎಂಬ ಎಚ್ಚರಿಕೆಯನ್ನು ಪ್ರಯತ್ನಪೂರ್ವಕವಾಗಿಯಾದರೂ ರೂಢಿಸಿಕೊಳ್ಳಬೇಕು ಎನ್ನುವ ಗಂಡಸರು ಒಮ್ಮೆಯಾದರೂ ಇದನ್ನು ಓದಿ ಅರ್ಥ ಮಾಡಿಕೊಳ್ಳಬೇಕು.

‍ಲೇಖಕರು Avadhi

August 12, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

  1. ರಮೇಶ ಗಬ್ಬೂರ್

    ಈಗ್ಗೆ ಎರಡು ವರ್ಷದ ಹಿಂದೆ ಓದಿದ ಕಾದಂಬರಿ… ನನಗಂತು ಕಣ್ಣೀರು ಬಂತು… ನೀವು ಓದಿ ವಿಮರ್ಷೆ‌ಮಾಡೋದು ಅಂದ್ರೆ ಇನ್ನೂ ಡೆಜರ್ಟ ಫ್ಲವರ್ ಪಾತ್ರಕ್ಕೆ ಸಿಗುವ ನ್ಯಾಯವಾಗುತ್ತದೆ ಸಿರಿಯವರೆ… ನಿಜಕ್ಕೂ ನಿಮ್ಮ ಓದಿಗೆ ಬೆರಗಾದೆ….. ಇಲ್ಲಿ ನೀವು ಮೂಲ ಲೇಖಕರನ್ನು ನೆನೆದದ್ದು ಬಹಳ ಸಂತಸವಾಯ್ತು….. ನಿಜ. ನೀವು ಹೇಳಿದಂತೆ ಪುರುಷ ಸಮಾಜ ಓದಲೇಬೇಕು..‌ನಾಚಿಕೊಳುವಂತೆ…
    ರಮೇಶ ಗಬ್ಬೂರ್

    ಪ್ರತಿಕ್ರಿಯೆ
  2. Ravindra

    Tq u so much madam. ಸುಮಾರು ತಿಂಗಳ ಹಿಂದೆ ಸಿಕ್ಕ ಯಾವುದೊ ತುಂಡು ಪೇಪರ್ ನಲ್ಲಿ ಇದರ ಬಗ್ಗೆ ಓದಿ, ಗೆಳೆಯನಿಗೆ ಈ ಪುಸ್ತಕ ಕಳಿಸಲು ಹೇಳಿದ್ದೆ, ಅವ ಸ್ಟಾಕ್ ಬಂದಿಲ್ಲ, ಬಂದಿಲ್ಲ ಅಂತಿದ್ದ, ಕೊನೆಗೂ ನಿಮ್ಮ ಕಡೆಯಿಂದ ಓದುವಂತಾಯ್ತು, ತುಂಬು ಹೃದಯದ ಧನ್ಯವಾದಗಳು. ಬರೆಯುತ್ತಿರಿ ಹೀಗೆ

    ಪ್ರತಿಕ್ರಿಯೆ
  3. Noorulla Thyamagondlu

    Desert flower ಸಿನಾಮಾ ನೋಡಿದ್ದೆ..ಕಣ್ಣಾಗೆ ನೀರು ಬಂದಿತು.. ಎಂಥಾ ಕ್ರೂರ ಪದ್ದತಿ ಈ ಜಗತ್ತಿನಲ್ಲಿ ಇದೆ ಎಂದು ಗೊತ್ತಾಗಿದ್ದು ಆ ಸಿನಾಮಾ ನೋಡಿದಾಗಲೇ..
    ಜಗದೀಶ್ ಸರ್ ರವರ ಅನುವಾದ ಆತ್ಮಕಥನ ಓದಿಲ್ಲ.. ಸಿರಿಜೀ ನಿಮ್ಮ ರೆಕಮೆಂಡ್ ತೆಗೆದುಕೊಂಡು ಓದುವೆ.. ಬರಹ ವೆರಿ ನೈಸ್ ..

    ಪ್ರತಿಕ್ರಿಯೆ
  4. DS Kore

    ಹೌದು…. ಮೇಡಂ ನಿಜ , ಪುರುಷಪ್ರದಾನ ಸಮಾಜದಲ್ಲಿ ಕೆಲವೊಂದು ಅನಿಷ್ಟ ಪದ್ಧತಿಗಳು ಈಗಲೂ ಇವೆ.

    ಪ್ರತಿಕ್ರಿಯೆ
  5. Sreedhar

    ನಿಜಕ್ಕೂ ಹೀಗಿದೆ ಎಂದು ಗೋತ್ತಿರಲಿಲ್ಲ ಕಣ್ಣೀರು ಬಂತು.

    ಪ್ರತಿಕ್ರಿಯೆ
  6. ರಾಜು ಪಾಲನಕರ ಕಾರವಾರ

    ಶ್ರೀದೇವಿ ಮೇಡಂ ಈ ವಾರದ ಅವಧಿಯಲ್ಲಿ ನಿಮ್ಮ ಅಂಕಣ ಬರಹ ಓದಿದೆ… ತುಂಬಾ ಅರ್ಥಪೂರ್ಣವಾಗಿ ಬರೆದಿರುವಿರಿ….ನೀವು ಬರೆದಂತೆ ಪುರುಷ ಪ್ರಧಾನ ಸಮಾಜದಲ್ಲಿ ಕೆಲವು ಕಡೆ ಈ ಅನಿಷ್ಟ ಪದ್ಧತಿಗಳು ಈಗಲೂ ಜಾರಿಯಲ್ಲಿರುವುದು ದುಖಃದ ಸಂಗತಿಯಾಗಿದೆ… ಮರುಭೂಮಿಯ ಹೂ ಪುಸ್ತಕದ ಕುರಿತು ನಿಮ್ಮ ವಿಮರ್ಶೆ ಮನ ಮಿಡಿಯುವಂತಿದೆ ನಿಮಗೆ ಅಭಿನಂದನೆಗಳು

    ಪ್ರತಿಕ್ರಿಯೆ
  7. ಸುಜಾತ ಲಕ್ಷೀಪುರ

    ಮೊದಲಿಗೆ ಜಗದೀಶ್ ಅವರಿಗೆ ಧನ್ಯವಾದಗಳು.. ಇಂತ ಕೃತಿಯನ್ನು ಕನ್ನಡಕ್ಕೆ ತಂದಿದ್ದ ಕ್ಕೆ. ಈ ಆತ್ಮಕಥನವನ್ನು ಮತ್ತೆ ಮತ್ತೆ ಓದಿ,ಆಗಾಗ ಅದರಿಂದ ಕಸುವು ಪಡೆದುಕೊಂಡು ನಮಗೂ ಓದಲು ರೆಕಮೆಂಡ್ ಮಾಡುತ್ತಿರುವ ಶ್ರೀದೇವಿಯವರಿಗೆ ಮನತುಂಬಿ ನಮನ.ಏಕೆಂದರೆ ನನಗೂ ಈ ಕೃತಿಯನ್ನು ಓದಲೇಬೇಕೆನ್ನಿಸುವಷ್ಟು ಅವರ‌ ಬರವಣಿಗೆ ಕಾಡುತ್ತಿದೆ.ವಾರೀಸ್ಳ ಬದುಕು ,ಬವಣೆ.. ಎಲ್ಲವನ್ನು ಮೆಟ್ಟಿ ಗೆಲ್ಲುವ ಛಲ…ಓದುತ್ತಿದ್ದಂತೆ ಹೃದಯ ನೀರಾಯಿತು….ನಿಜ ,ಎಲ್ಲ ಹೆಣ್ಣು ಮಕ್ಕಳು ಮತ್ತು ಅವರನ್ನು ಸಲಹುವ ಪುರುಷರು ಓದಲೇಬೇಕಾದ ಜೀವಂತ ಕಥನ. ಮರುಭೂಮಿಯ ಹೂವಾದ ವಾರೀಸ್…ತನ್ನ ಜನಾಂಗದ ನೀಚ ವ್ಯವಸ್ಥೆಯ ವಿರುದ್ದ ಹೋರಾಡಿ, ಹೆಣ್ಣುಮಕ್ಕಳ ಪಾಲಿಗೆ ಸ್ವಾತಂತ್ರ್ಯ ದ ಹೂವಾಗಿ,ಹೋರಾಟದ ಹೂವಾಗಿದ್ದಾಳೆ.ಅಸ್ತಿತ್ವಕ್ಕೆ ಹೋರಾಡಿ ಬದುಕು ಕಟ್ಟಕೊಂಡ ಬೆಂಕಿಯ ಹೂ ವಾರೀಸ್ ಆತ್ಮಕಥನವನ್ನು ಆದಷ್ಟು ಬೇಗ ಓದಬೇಕೆನ್ನಿಸಿದೆ..ಬೆಳಕು ಪಡೆಯಲು.
    ಥ್ಯಾಂಕ್ ಯು ಶ್ರೀದೇವಿ ಮೇಡಮ್.

    ಪ್ರತಿಕ್ರಿಯೆ
  8. ಡಿ.ಎಮ್.ನದಾಫ್. ಅಫಜಲಪುರ

    ಪಶ್ಚಾತ್ತಾಪದ ನೋವಿನಲ್ಲಿ ಬೆಂದೆ. ಗಂಡು ಎಂದುಕೊಳ್ಳುವಾಗಲೊಮ್ಮೆ ಎದೆ ಮುಟ್ಟಿ ನೋಡಿಕಳ್ಳಬೇಕೆನಿಸಿತು. ಜೊತೆಗೆ ಗಂಡಸೊಬ್ಬರು ಅನುಭವಿಸಿ ಅನುವಾದಿಸಿದ್ದಕ್ಕೆ ಸಮಾಧಾನ ವಾಯಿತು.

    ಪ್ರತಿಕ್ರಿಯೆ
  9. ಡಿ.ಎಮ್.ನದಾಫ್. ಅಫಜಲಪುರ

    ಪಶ್ಚಾತ್ತಾಪವಾಯಿತು ಗಂಡಾಗಿರುದಕ್ಕೆ, ಸಮಾಧಾನವಾಯಿತು ಗಂಡಸೊಬ್ಬರು ಅನುಭವಿಸಿ ಅನುವಾದಿಸಿರುವದಕ್ಕೆ.
    ಡಿ.ಎಮ್.ನದಾಫ್ ಅಫಜಲಪುರ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: