ಹೆಣಿಗೆ ಹಾಕಿದರು ಮಂಡೇಲಾನಿಗಾಗಿ..

ಒಂದಿಷ್ಟು ಬ್ಲಾಂಕೆಟ್ ಬೇಕಲ್ಲಾ..?-

ಮೊಬೈಲ್‍ನ ಅತ್ತ ಕಡೆಯಿಂದ ಕಂಡು ಕೇಳದ ದನಿ. ನಾನು ತಬ್ಬಿಬ್ಬಾದೆ. ಪರಿಚಯವೇ ಇಲ್ಲದ ಆಕೆ ನನ್ನ ನಂಬರ್ ಹುಡುಕಿ ಬ್ಲಾಂಕೆಟ್‍ಗೆ ಬೇಡಿಕೆ ಇಟ್ಟಿದ್ದರು. ಇದು ಖಂಡಿತಾ ‘ಸ್ಪಾಮ್’ ಕಾಲ್ ಎಂದು ನಾನು ಎರಡನೇ ಮಾತೇ ಆಡದಂತೆ ಫೋನ್ ಕಟ್ ಮಾಡುವವನಿದ್ದೆ. ಆಗ ಆ ಕಡೆಯ ದನಿ ‘ನೆಲ್ಸನ್ ಮಂಡೇಲಾಕಾರ ಎಂದಿತು. ತಕ್ಷಣ ನನ್ನ ಬೆರಳು ಅಲ್ಲೇ ನಿಂತಿತು.

ಕಾಲ್ ಬಂದದ್ದು ಕೇರಳದಿಂದ. ಕೇಳುತ್ತಿರುವುದು ಹೊದೆಯುವ ಬ್ಲಾಂಕೆಟ್‍ಗಳನ್ನು. ಹೇಳುತ್ತಿರುವುದು ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಹೆಸರು.

ನಾನು ತಬ್ಬಿಬ್ಬಾಗಿದ್ದು ಗೊತ್ತಾಯಿತೇನೋ, ಕೇರಳದ ಕೊಟ್ಟಾಯಂ ನ ರಾಣಿ ಥಾಮಸ್. ಸ್ಪಷ್ಟವಾಗಿ ಹೇಳಿದರು ಜುಲೈ 18 ನೆಲ್ಸನ್ ಮಂಡೇಲಾ ಹುಟ್ಟುಹಬ್ಬ ಈ ವರ್ಷಕ್ಕೆ ಇನ್ನೂ ಒಂದು ಮಹತ್ವವಿದೆ. ಮಂಡೇಲಾ ಬದುಕಿದ್ದಿದ್ದರೆ ಈ ಬಾರಿ ಅವರದ್ದು 100 ನೆಯ ಹುಟ್ಟುಹಬ್ಬ. ಈ ವರ್ಷವನ್ನು ತೀರಾ ಭಿನ್ನವಾಗಿ ಆಚರಿಸಲಾಗುತ್ತಿದೆ ಉಣ್ಣೆ ಹೊದಿಕೆಗಳನ್ನು ಹೆಣಿಗೆ ಹಾಕುವ ಮೂಲಕ. ಕರ್ನಾಟಕದಿಂದಲೂ ಹಾಗೆ ಹೆಣಿಗೆ ಹಾಕಿ ಕೊಡುವ ಉತ್ಸಾಹಿಗಳನ್ನು ಜೊತೆ ಮಾಡಿ ಕೊಡಬಹುದೇ.. ಎಂದು.

ಆಕೆ ನನಗೆ ಹಾಗೆ ಹೇಳುತ್ತಿರುವ ಸಮಯದಲ್ಲಿಯೇ ಜಗತ್ತು ತನ್ನ ಮನೆಯ ಮೂಲೆಯಲ್ಲಿದ್ದ ಉಣ್ಣೆಯನ್ನು ಹೊರ ತೆಗೆದಿತ್ತು.

ದಕ್ಷಿಣ ಆಫ್ರಿಕಾದ ಮಂಡೇಲಾ ಸ್ವೇರ್ ವಿನಿಂದ ವಾಷಿಂಗ್ಟನ್‍ವರೆಗೆ, ಪ್ರಾಥಮಿಕ ಶಾಲೆಗಳಿಂದ ಆಕ್ಸ್ಫರ್ಡ್ ಯೂನಿವರ್ಸಿಟಿಯವರೆಗೆ, ಪುಟ್ಟ ಮಕ್ಕಳಿಂದ ಹಣ್ಣು ಹಣ್ಣು ಮುದುಕರವರೆಗೆ, ಶಾಲೆ, ಆಸ್ಪತ್ರೆ, ಜೈಲು, ಹೋಟೆಲ್ ನಿಂದ ಹಿಡಿದು ಉದ್ಯಾನವನಗಳವರೆಗೆ ಎಲ್ಲೆಡೆ ಉಣ್ಣೆಯ ನೂಲು ಹೊರತೆಗೆದವರು ಹೆಣಿಗೆ ಹಾಕಲು ಶುರು ಮಾಡಿದ್ದರು. ಎಲ್ಲರೂ ತಯಾರಿಯಾಗುತ್ತಿದ್ದುದು ನೆಲ್ಸನ್ ಮಂಡೇಲಾ ಹುಟ್ಟು ಹಬ್ಬಕ್ಕಾಗಿ. ಮಂಡೇಲಾ ನೆನಪಿನಲ್ಲಿ ಒಂದಿಷ್ಟು ಮೈ ಮನಸ್ಸುಗಳನ್ನು ಬೆಚ್ಚಗಿಡುವುದಕ್ಕಾಗಿ ಹೊದಿಕೆಗಳನ್ನು ಹೆಣೆಯಲು.

ಅದೊಂದು ದಿನ ನೆಲ್ಸನ್ ಮಂಡೇಲಾರ ಬಹುಕಾಲದ ಆಪ್ತ ಕಾರ್ಯದರ್ಶಿ ಜೆಲ್ಡಾ ಲಾ ಗ್ರಾಂಜೆ ತನ್ನ ಗೆಳತಿಯೊಂದಿಗೆ ಹರಟೆ ಹೊಡೆಯುತ್ತಿದ್ದಾಗ ಮಂಡೇಲಾ ನೆನಪಿಗೆ 67 ಬ್ಲಾಂಕೆಟ್ ಹೆಣಿಗೆ ಹಾಕಿಕೊಡು ನೋಡೋಣ ಎಂದರು. ಮಂಡೇಲಾ ನಿಧನರಾಗಿದ್ದ ದುಃಖದಿಂದ ಯಾರೂ ಹೊರ ಬರಲಾಗದಿದ್ದ ದಿನಗಳು ಅವು. ತಕ್ಷಣ ಗೆಳತಿ ಕ್ಯಾರೋಲಿನ್ ಸ್ಟೀನ್ ಚಾಲೆಂಜ್ ಸ್ವೀಕರಿಸಿಯೇ ಬಿಟ್ಟರು. ಆ ಕ್ಷಣಕ್ಕೆ ಹುಮ್ಮಸ್ಸಿನಿಂದ ಪಂಥ ಸ್ವೀಕರಿಸಿ ಬಂದ ಕ್ಯಾರೋಲಿನ್‍ಗೆ ಉಣ್ಣೆಯ ನೂಲು ಕೈನಲ್ಲಿ ಹಿಡಿದಾಗ ಗೊತ್ತಾಯಿತು ‘ಇದು ಸುಲಭವಾಗಿ ಆಗುವಂತದ್ದಲ್ಲ’. ಆಗ ಆಕೆ ತನ್ನ ಗೆಳೆಯರ ಗುಂಪಿನ ಕಡೆ ನೋಡಿದರು. ಅನೇಕರು ತಾವೂ ಕೈ ಜೋಡಿಸಿದರು.

ಕ್ಯಾರೋಲಿನ್ ತನ್ನ ಎಲ್ಲಾ ಗುಂಪಿಗೆ ಈ ವಿಷಯ ತಿಳಿಯಲಿ ಎಂದು ಫೇಸ್‍ಬುಕ್ ಪೇಜ್ ರೂಪಿಸಿದರು. ಸೋಷಿಯಲ್ ಮೀಡಿಯಾಗೆ ಈ ವಿಷಯ ಬಂದದ್ದೇ ತಡ ‘ನಾವೂ ಇದ್ದೇವೆ, ನಾವೂ ಬ್ಲಾಂಕೆಟ್ ಹೆಣಿಗೆ ಹಾಕಲು ಸಿದ್ದ’ ಎಂದು ಮುಂದೆ ಬಂದವರು ಅದೆಷ್ಟೋ ಜನ.

ಕ್ಯಾರೋಲಿನ್ ನೋಡ ನೋಡುತ್ತಿದ್ದಂತೆಯೇ ಗಡಿ ಗೋಡೆಯಿಂದ ಈ ಯೋಚನೆ ಜಿಗಿದು ಹೊರಗೋಡಿತು. ಬೀದಿಯಲ್ಲಿ, ಗಲ್ಲಿಯಲ್ಲಿ, ಬೇಲಿ ಮಳೆಯ ಮರೆಗಳಲ್ಲಿ ಎಲ್ಲೆಲ್ಲೂ ಹೆಣಿಗೆ ಶುರುವಾಗಿಯೇ ಹೋಯ್ತು. ಇಂಗ್ಲೆಂಡ್, ಜರ್ಮನಿ, ಅಮೇರಿಕಾ, ನ್ಯೂಜಿಲ್ಯಾಂಡ್,ಕ್ರೊಯೇಷಿಯಾ, ಅರ್ಮೇನಿಯಾ, ಜಪಾನ್, ಶ್ರೀಲಂಕಾ ಹೀಗೆ ಜನ ವಿಷಯ ಗೊತ್ತಾಗುತ್ತಿದ್ದಂತೆಯೇ ಹೆಣಿಗೆ ಕಡ್ಡಿಯನ್ನು ಕೈಗೆತ್ತಿಕೊಂಡರು.

ಆಗ ಕಣ್ಣೀರಾಗಿದ್ದು ಕ್ಯಾರೋಲಿನ್ – ‘ಇಲ್ಲಿ ನನಗೆ ಹೀಗಾಗುತ್ತದೆ ಎಂದು ಖಂಡಿತಾ ಗೊತ್ತಿರಲಿಲ್ಲ ಮಂಡೇಲಾ ಜಗತ್ತಿನ ಎಲ್ಲೆಡೆ ಇಷ್ಟೊಂದು ಹೃದಯಗಳಲ್ಲಿ ಅಡಗಿ ಕುಳಿತಿದ್ದಾರೆ ಎಂದೇ ಗೊತ್ತಿರಲಿಲ್ಲ’. ವರ್ಣಧ್ವೇಷಿ ಬೋಥಾ ಸರ್ಕಾರ ಮಂಡೇಲಾರನ್ನ ಬಂದೀಖಾನೆಯ ಒಳಗೆ ನಡೆಸಿಕೊಂಡು ಹೋಯಿತು. ಆದರೆ ಅದೇ ವೇಳೆ ಎಷ್ಟೊಂದು ಜನ ಅವರನ್ನು ಕೈ ಹಿಡಿದು ತಮ್ಮ ಎದೆಗೂಡುಗಳ ಒಳಗೆ ಕರೆದುಕೊಂಡು ಬಿಟ್ಟರು

ಟೀ ಪಾರ್ಟಿಯ ಒಂದು ಹರಟೆಯಾಗಿಯಷ್ಟೇ ಮುಗಿದು ಹೋಗಬಹುದಾಗಿದ್ದ ಒಂದು ಮಾತು ಜಗತ್ತಿನ ಒಂದು ವಿಭಿನ್ನ ಚಳವಳಿಯೇ ಆಗಿ ಹೋಯಿತು. ಒಂದೊಂದು ಹೊಲಿಗೆಯೂ ಒಂದು ವಿಭಿನ್ನ ಕಥೆ ಹೇಳುತ್ತಾ ಹೋಯಿತು. ಪ್ರತಿಯೊಂದು ಹೆಣಿಗೆಯ ಹಿಂದೆ ಪ್ರೀತಿಯ ಹೃದಯಗಳಿತ್ತು. ಹಾಗಾಗಿಯೇ ನೋಡನೋಡುತ್ತಿದ್ದಂತೆಯೇ 67 ಹೊದಿಕೆಗಳ ಕೆಲಸ ಹೂವೆತ್ತುವಂತೆ ಮುಗಿದು ಹೋಯಿತು. ಆದರೆ ಹೊದಿಕೆಗಳು ಬರುವುದು ನಿಲ್ಲಲಿಲ್ಲ. ಇದರ ಜೊತೆಗೆ ಸ್ಪೆಟರ್‍ ಗಳು, ಶಾಲುಗಳು, ಮಫ್ಲರ್ ಗಳು ಹೆಣಿಗೆಯಾಗುತ್ತಾ ಹೋಯಿತು. ‘ಎದೆ ಎದೆಗಳ ನಡುವೆ ಇರುವ ಸೇತುವೆಗಳು ಕುಸಿದಿವೆ’ ಎಂದಾವರಾರು? ಹಾಗಾಗಿಯೇ ಗಿನ್ನೆಸ್ ದಾಖಲೆಯೊಂದು ಸೃಷ್ಟಿಯಾಯಿತು. ಈ ಯೋಜನೆ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತು. ಬ್ಲಾಂಕೆಟ್ ವರ್ಲ್ಡ್ ಕಪ್ ಹೆಸರಿನಲ್ಲಿ ಅದು ಒಂದು ಆಟವೇನೋ ಎನ್ನುವಂತೆ ಸಂಭ್ರಮಿಸಿದರು.

‘ನಾವು ಹೆಣಿಗೆ ಹಾಕುತ್ತಾ ಹೋದೆವು. ಉಣ್ಣೆಯನ್ನು ಹೆಣಿಗೆ ಹಾಕುತ್ತಾ ಹಾಕುತ್ತಾ ತಿರುಗಿ ನೋಡಿದರೆ ನಮಗೆ ನಾವೇ ಹೆಣಿಗೆ ಹಾಕಿಕೊಂಡಿದ್ದೆವು. ಮಂಡೇಲಾ ಎನ್ನುವ ಜಾದೂ ದೇಶ ದೇಶಗಳನ್ನು, ಅಲ್ಲಿನ ಜನರನ್ನು ಹೆಣಿಗೆ ಹಾಕಿಬಿಟ್ಟಿತು. ಜಗತ್ತು ಎಷ್ಟು ದೊಡ್ಡದು ಎಂದು ಮೊದಲು ಅನಿಸಿತ್ತು. ಆದರೆ ನೋಡ ನೋಡುತ್ತಿದ್ದಂತೆಯೇ ಒಬ್ಬರಿಗೊಬ್ಬರು ಪರಿಚಯವಾಗುತ್ತಾ, ಸ್ನೇಹ ಬೆಳೆಯುತ್ತಾ ಜಗತ್ತು ಒಂದು ಪುಟ್ಟ ಗೂಡು ಎನಿಸಿ ಹೋಯಿತು’ ಎನ್ನುತ್ತಾರೆ ಜೆಲ್ಡಾ.

ಹನ್ನೊಂದು ವರ್ಷದ ಎಲ್ಲಾ ಗ್ರೀಲಿ ಇಬ್ಬರು ಜೈಲುವಾಸಿಗಳ ಜೊತೆ ಕೈಜೋಡಿಸಿ ಹಾಡೊಂದನ್ನು ಬರೆದಳು. ಇದು ಈಗ ’67 ಬ್ಲಾಂಕೆಟ್ಸ್ ಫಾರ್ ನೆಲ್ಸನ್ ಮಂಡೇಲಾ’ ಚಳವಳಿಯ ಧ್ಯೇಯಗೀತೆ. ಶಾಲೆಗಳಲ್ಲಿ, ವೃದ್ಧಾಶ್ರಮದಲ್ಲಿ, ಹೋಟೆಲ್‍ಗಳಲ್ಲಿ, ಪಾರ್ಕ್‍ಗಳಲ್ಲಿ, ಆಸ್ಪತ್ರೆಗಳಲ್ಲಿ ಹೆಣಿಗೆ ಸ್ಪರ್ಧೆ, ಹೆಣಿಗೆ ಕ್ರೀಡೆ ನಡೆಸಿದ್ದನ್ನು ನೋಡಿದ ಬಂಧೀಖಾನೆಯ ಕೈದಿಗಳು ನಮಗೂ ಮಂಡೇಲಾ ಬ್ಲಾಂಕೆಟ್ ಹೆಣಿಗೆ ಹಾಕಲು ಅವಕಾಶ ಕೊಡಿ ಎಂದು ಕೋರಿದರು. ದಕ್ಷಿಣ ಆಫ್ರಿಕಾ ಸರ್ಕಾರ ಒಪ್ಪಿದ್ದೇ ತಡ ಆ ದೇಶದ ಎಲ್ಲಾ 243 ಬಂಧೀಖಾನೆಗಳಲ್ಲಿ ‘ಮಂಡೇಲಾ, ಮಾಡಿಬಾ’ ಘೋಷಣೆ ಕೇಳಿಬಂತು.

‘ಇಂದೊಂದು ಹೆಣಿಗೆ ಕ್ರಾಂತಿ’ ಎಂದೇ ಜಗತ್ತು ಬಣ್ಣಿಸಿತು. ಹಾಗೆ ಎಲ್ಲೆಡೆ ಸಿದ್ದವಾದ ಉಣ್ಣೆಯ ಹೊದಿಕೆ, ಉಡುಗೆಗಳನ್ನು ಹೊತ್ತ ತಂಡಗಳು ಬೀದಿ ಬೀದಿ ಅಲೆದವು. ಚಳಿಯಲ್ಲಿ ನಡುಗುತ್ತಿದ್ದವರು ಮಂಡೇಲಾರ ಸ್ಪರ್ಶದಲ್ಲಿ ಬೆಚ್ಚಗಾದರು.

ಈ ಮಧ್ಯೆ 160*160 ಸೆಂಮೀಗಳ ಹಲವು ಬ್ಲಾಂಕೆಟ್ ತುಣುಕುಗಳು ಸೇರಿಸಲಾಯಿತು. ಪ್ರತಿಯೊಬ್ಬರಿಗೂ ಅದರಲ್ಲಿ ಏನು ಇರಬೇಕು ಎಂದು ಸೂಚಿಸಲಾಗಿತ್ತು. ಎಲ್ಲಾ ತುಣುಕುಗಳೂ ಒಂದೆಡೆ ಸೇರಿಸಿ ಜೋಡಿಸಿದಾಗ ವಾರೆವ್ವಾ…. ಇನ್ನೊಂದು ಯಕ್ಷಿಣಿ. ಜಗತ್ತಿನ ಅತ್ಯಂತ ದೊಡ್ಡ ಬ್ಲಾಂಕೆಟ್ ನ ಹೃದಯದಲ್ಲಿ ಮಂಡೇಲಾ ಚಿತ್ರ ಮೂಡಿಬಂದಿತ್ತು.

‘ಅಲ್ಲಿ ಆ ಆಗಸದಲ್ಲಿ ಬೆಳ್ಳಿ ಚುಕ್ಕೆಯಾಗಿರುವ ಮಂಡೇಲಾ ಅಲ್ಲಿಂದ ಕೆಳಗೆ ಇಣುಕಿದರೆ ಅವರ ಚಿತ್ರ ಕಾಣಬೇಕಲ್ಲವೇ..? ಹಾಗಾಗಿ ಇಷ್ಟು ದೊಡ್ಡ ಮಂಡೇಲಾರ ಚಿತ್ರ ಬಿಡಿಸಿದ್ದೇವೆ’ ಎಂದು ಸಂಭ್ರಮಿಸಿದರು.

‘ನಾವು ಗುಲಾಮರು ಎಷ್ಟು ದೂರ ಬಂದಿದ್ದೇವೆ…’ ಎಂದಿದ್ದರು ಮಂಡೇಲಾ. ಅತಿ ದೀರ್ಘ ಬಂದೀಖಾನೆ ವಾಸದ ನಂತರ ಕ್ಯೂಬಾಗೆ ಬಂದಿಳಿದಾಗ. ಫಿಡೆಲ್ ಕ್ಯಾಸ್ಟ್ರೋ ಅವರ ಕೈಕುಲುಕಿದಾಗ. ಗುಲಾಮರು ಎಂದು ಕರಿದಿದ್ದ ಜಗತ್ತು ಬೆಚ್ಚಿಬಿದ್ದಿತ್ತು. ಅಂತೆಯೇ ಈಗ ಜಗತ್ತಿನ ಹಲವಾರು ಜನರು ಎಷ್ಟು ದೂರ ನಡೆದು ಬಂದರು ಆ ಮಂಡೇಲಾಗಾಗಿ

‍ಲೇಖಕರು avadhi

August 2, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ರೇಣುಕಾ ರಮಾನಂದ

    ಹೆಣಿಗೆ ಕ್ರಾಂತಿಯ ಬಗ್ಗೆ ಗೊತ್ತೇ ಇರಲಿಲ್ಲ..ಮಂಡೇಲಾ ಚಿರಾಯು

    ಪ್ರತಿಕ್ರಿಯೆ
  2. K. Nallathambi

    Just Wow Sandhyaji…. I can see your heart and soul in all of your writings….. Great. All the best…….. Regards

    ಪ್ರತಿಕ್ರಿಯೆ
  3. Nagraj Harapanahalli.karwar

    ಗುಲಾಮಗಿರಿಯನ್ನು ಪ್ರತಿಭಟಿಸಿ ಬೆಳೆದವರ ಕತೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: