ಎನ್ ಪಾರ್ವತಿ
ನಿನ್ನನ್ನಾರಾಧಿಸುವ
ಮನಸ್ಥಿತಿಯೊಂದು
ರೂಪತಳೆಯುವುದರ ಹಿಂದೆ
ಹಿಂದಕ್ಕೂ-ಮುಂದಕ್ಕೂ ತುಯ್ದಾಡುವ
ಮನಸ್ಸಿದೆ, ದೇಹವಿದೆ
ನೀನೇ ಬೇಕೆಂಬ
ನಿರ್ಧಾರವ ಮಾಡಿಯೇ
ಹೊರಡುವ ಕೈಗಳ
ಸ್ಥಿರತೆಯ ಹಿಂದೆ
ಭೂತದ ಛಾಯೆಯಿದೆ
ನೀನೇ ಅಂತಿಮವೆಂಬ
ಕಲ್ಪನೆಯೊಂದು ಪ್ರತಿಕ್ಷಣವನ್ನೂ
ಹೊಚ್ಚಹೊಸದಾಗಿಸಲು ಸೋತು
ಹೋದಾಗ, ಅದರ ಹಿಂದೆ ಹೇರಿಕೆಗೆ
ಬಲಿಯಾದ ಜೀವದ ನರಳಿಕೆ ಇದೆ
ನಿನ್ನ ಸೋಕಬೇಕೆಂಬ
ತೀವ್ರ ಬಯಕೆಯ ಆಚೆ
ನನ್ನ-ನಿನ್ನ ಮನಸ್ಸು ಸೇರಿ ಮೂಡಿಸಿದ
ಹೆಜ್ಜೆ ಮೂಡದ ಹಾದಿಯ ಭಾವವೊಂದಿದೆ
ನಿನ್ನ ಸೇರುವ
ನಿರ್ಧಾರವೊಂದು
ಎಚ್ಚರದ ಆಯ್ಕೆಯಾದಾಗ
ಹುಟ್ಟುವ ಹೊಸ ತಂತುವೇ,
ಜೀವಗಳ ಬೆಸೆವ ಧಾತುವಾಗಿ
ಉಳಿಯುತ್ತದೆ, ನಮ್ಮನ್ನೂ ಬೆಳೆಸುತ್ತದೆ
ಎಂಬ ನಂಬಿಕೆಯಿದೆ
-ಎನ್ ಪಾರ್ವತಿ






Nice…
ಇಷ್ಟವಾಯ್ತು ಕವಿತೆ
Thank you 🙂