ಹೆಜ್ಜೆ ಇಟ್ಟಲ್ಲೆಲ್ಲ ನೆನಪು ಬಿತ್ತಿ ಹೋದ ಕನಸುಗಣ್ಣಿನ ಹುಡುಗ

ಮಂಗಳಾ ಎನ್

೨೦೦೯ ರ ಸೆಪ್ಟೆಂಬರ್, ನನಗಿನ್ನೂ ಚೆನ್ನಾಗಿ ನೆನಪಿದೆ. ಎಸ್.ರಾಮನಾಥ ರ ‘ಅರಹಂತ’. ನಾಟಕವನ್ನು ಸಂಚಾರಿ ಥೀಯೇಟರ್‍ ಕೈಗೆತ್ತಿಗೊಂಡಿತ್ತು. ಅದರ ಓದಿಗೆ ಸಂಚಾರಿ ಥಿಯೇಟರ್ ತೊಡಗಿರುವಾಗ, ನಮ್ಮ ತಂಡದ ಕಲಾವಿದ ಕೆ.ಶ್ರೀ ಅವರು ವಿಜಯ್ ಎಂಬ ಒಬ್ಬ ಹುಡುಗನನ್ನು ಕರೆದುಕೊಂಡು ಬಂದರು. ಬಂದವರೇ ಅವರೂ ಸರ್ಕಲ್ ನಲ್ಲಿ ಕುಳಿತರು. ನಾಟಕದ ರೀಡಿಂಗ್ ನಲ್ಲಿ ಭಾಗವಹಿಸಿದರು. ನಾಟಕದ ಭಾಗವಾದರು. ಮತ್ತೆ ಮತ್ತೆ ಸಂಚಾರಿಯ ಎಲ್ಲ ನಾಟಕಗಳಲ್ಲೂ ತಮ್ಮ ಸ್ಥಳವನ್ನು ತನ್ನ ರಂಗಭೂಮಿಯ ನಿಷ್ಟೆ ಮತ್ತು ಪ್ರತಿಭೆಯ ಮೂಲಕ ಕಾಯ್ದಿರಿಸಿಕೊಂಡರು. ಸಂಚಾರಿಯ ಅತಿ ಮುಖ್ಯ ದ್ರವ್ಯವಾದರು. ನಂತರ ಸಂಚಾರಿಯೇ ಆದರು.

ಎಷ್ಟೊಂದು ನೆನೆಪುಗಳನ್ನು ಬಿಟ್ಟು ಹೋಗಿದ್ದಾರಲ್ಲ ಈ ಹನ್ನೆರಡು ವರ್ಷಗಳಲ್ಲಿ? ಹನ್ನೆರಡು ವರ್ಷ ಅಷ್ಟೇನಾ ಅಂತ ಈಗ ಲೆಕ್ಕ ಹಾಕಿದರೆ ಆಶ್ಚರ್ಯ ಆಗತ್ತೆ. ಯಾಕೆಂದರೆ ಅವರು ಬಿಟ್ಟು ಹೋಗಿರುವ ಆರ್ಧ್ರ ಭಾವದ ತೀವ್ರತೆ ಹೇಗಿದೆಯೆಂದರೆ ಅವರು ನಮ್ಮೊಡನೆಯೇ ಅದ್ಯಾವ ಕಾಲದಿಂದಲೆ ಇದ್ದವರಲ್ಲವಾ… ಅನ್ನಿಸುವಂತಹ ಬದುಕನ್ನು ನಮ್ಮೊಡನೆ ಬದುಕಿ, ತೀವ್ರವಾಗಿ ಬದುಕನ್ನು, ಕೆಲಸವನ್ನು, ಗೆಳೆತನವನ್ನು ಪ್ರೀತಿಸುತ್ತಾ ಅನುಭವಿಸಿದವರು. ಗಾಢವಾದ ತಮ್ಮ ಇರುವಿಕೆಯ ಹಾಸನ್ನು ಹಾಸಿಹೋಗಿದ್ದಾರೆ.

ಸಂಚಾರಿ ಅಂಗಳಕ್ಕೆ ಬಂದಾಗ ಈ ಹುಡುಗನಿಗೆ ಮಾತೇ ಬರುವುದಿಲ್ಲವೇನೊ ಎಂಬಂತಿದ್ದವರು, ಎಲ್ಲದಕ್ಕೂ ಒಂದು ಮುಗುಳುನಗೆ ಸೂಸಿ ಎಲ್ಲರ ಮನಸ್ಸನ್ನು ಹಗುರಾಗಿಸುತ್ತಿದ್ದ ಈ ಹುಡುಗ ನಿಧಾನವಾಗಿ ತಾನು ನಡೆದುಬಂದ ದಾರಿ, ಊರು, ಕೇರಿ, ತೋಟ, ಬಾವಿ, ಕೆರೆ, ಸ್ಕೂಲು,ಅಮ್ಮ,ಅಪ್ಪ, ಬಾಲ್ಯ ನಂತರದಲ್ಲಿ ತನ್ನ ಅಣ್ಣ ತಮ್ಮಂದಿರ ಜೊತೆ ಕಷ್ಟ ಸುಖಗಳನ್ನು ರಿಲೇ ಆಟದಂತೆ ಹಂಚಿಕೊಂಡು ತಮ್ಮ ಬದುಕನ್ನು ನಿಧಾನಗತಿಯಲ್ಲಿ ಕಟ್ಟಿಕೊಂಡು ಕಾಲೇಜೊಂದರಲ್ಲಿ ಲೆಕ್ಚರರ್ ಆದ ವಿಷಯದ ವರೆಗೆ, ಬೇರೆ ಬೇರೆ ಸಂದರ್ಭಗಳಲ್ಲಿ ಹೇಳುತ್ತಾ ನನ್ನ ಅರಿವಿಗೆ ಬಾರದೇ ನನ್ನೊಳಗೆ ಇಳಿದು ಬಂದು ಮನೆಮಗನಂತಾದದ್ದು ಈಗ ಕತೆಯಾಗಿದೆ ಎಂದು ಹೇಗೆ ನಂಬುವುದು?

ವಿಜಯ್ ಕಾಲೇಜಿನ ಲೆಕ್ಚರರ್ ಕೆಲಸ ಮಾಡುತ್ತಿದ್ದರು. ಸಂಜೆಯಾಯಿತೆಂದರೆ ರಿಹರ್ಸಲ್ ಕಡೆಗೆ ನಡೆದುಬರುತ್ತಿದ್ದರು. ಸಂಚಾರಿ ಸ್ಟೂಡಿಯೋಗೆ ಎಲ್ಲರೂ ಬರುವುದಕ್ಕೆ ಮೊದಲು ಸುಮಾರು ಒಂದೆರಡು ಗಂಟೆಗಳ ಮೊದಲೇ ಬಂದು ಹಾರ್ಮೋನಿಯಂ ನುಡಿಸತ್ತಲೊ,ಚಿತ್ರ ಬರೆಯುತ್ತಲೋ, ಪುಸ್ತಕ ಓದುತ್ತಲೋ, ಏನೊಂದೂ ಮಾಡದೇ ಸುಮ್ಮನೇ ಕುಳಿತು ಏನನ್ನೋ ಯೋಚಿಸುತ್ತಲೋ ಅಥವಾ ಕನಸು ಕಾಣುತ್ತಲೋ, ಇಲ್ಲಾ ಆ ಕನಸನ್ನು ನನಸು ಮಾಡುವುದರೆಡೆಗೆ ಕೆಲಸ ಮಾಡುತ್ತಲೋ ತಲ್ಲೀನರಾಗಿ ಇರುತ್ತಿದ್ದರು. ಹೀಗೊಂದು ಧ್ಯಾನಸ್ಥ ಸ್ಥಿತಿಯಲ್ಲಿ ಕಾಣುತ್ತಿದ್ದ ವಿಜಯ್ ಕಣ್ಣುಗಳಲ್ಲಿ ಅದೆಷ್ಟು ಕನಸುಗಳಿತ್ತೊ….? ವ್ಯಕ್ತವಾಗಿದ್ದೆಷ್ಟೋ… ? ವ್ಯಕ್ತವಾಗದೆ ನರಳಿದ್ದೆಷ್ಟೋ……. ? ಈ ಎಲ್ಲವೂ ಈಗ ನನಗೆ ಕಾಡುವ ವಿಷಯಗಳು. ಯಾವಾಗಲು ಗುಂಪು ಗುಂಪು ಸ್ನೇಹಿತರ ಒಡನಾಟ. ಬೇರೆ ಬೇರೆ ಆಸಕ್ತಿಯ ಗುಂಪುಗಳು- ನಾಟಕದವರ ಗುಂಪು, ಸಂಚಾರಿಯ ಗುಂಪು, ಸಿನಿಮಾ ಗೆಳೆಯರು, ಪಿಜಿ ಯಲ್ಲಿ ಒಡನಾಡಿದ ಗೆಳೆಯರು, ಷಟಲ್ ಕಾಕ್ ಆಟದ ಗೆಳೆಯರು,ಊರಿನ ಗೆಳೆಯರು, ನಾಡಿನ ಗೆಳೆಯರು, ಬರೆಯುವ ಗೆಳೆಯರು, ಹಾಡುವ ಗೆಳಯರು , ಹೊಸ ಗೆಳೆಯರು, ಹಳೆ ಗೆಳೆಯರು, ನೆರೆ ಗೆಳೆಯರು, ಕರೋನಾ ಗೆಳೆಯರು, ಮಂಗಳ ಮುಖಿ ಗೆಳತಿಯರು ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ವಿಜಯ್ ಗೆ ಮಾತ್ರವೆ ಗೊತ್ತು ಅವರ ಗೆಳೆಯ ಗೆಳತಿಯರು ಪಟ್ಟಿ. ಯಾವತ್ತೂ ಸ್ನೇಹದ ವಲಯದಲ್ಲಿ ಮುಳುಗಿರುತ್ತಿದ್ದ ವಿಜಯ್ ಎಲ್ಲ ಮುಗಿದ ನಂತರ ಮನೆಗೆ ಬಂದು ಅನುಭವ ಹಂಚಿಕೊಳ್ಳುತ್ತಿದ್ದುದು ಸಂಚಾರಿಯ ಸಂಗಡಿಗರಲ್ಲಿ. ಅಂತಹ ತವರು ಮನೆ ಸಲಿಗೆಯನ್ನು ಅವರು ಸಂಚಾರಿಯೊಳಗೆ ಕಂಡುಕೊಂಡಿದ್ದರು.

ಪ್ರಾರಂಭದ ನಾಟಕ ಅರಹಂತದ ಖಾರವೇಲ ಆಗಿದ್ದ ವಿಜಯ್ ತಾಲೀಮಿನಲ್ಲಿ ರಾಜ್ ಕುಮಾರ್ ಅವರ ಡೈಲಾಗ್ ಮಾದರಿಯನ್ನು ಅನುಕರಿಸುತ್ತಿದ್ದರು. ಉದ್ದ ಮೂಗಿನ ಹುಡುಗ ಕೆಲವು ಬಾರಿ ರಾಜ್ ಕುಮಾರ್ ರಂತೆ ಭಾಸವಾಗುತ್ತಿದ್ದರು. ಆಗ ಅವರನ್ನು ವಿಜಯ್ ಆಗಿಸಲು ನಾನು ಹೆಚ್ಚು ಕೆಲಸ ಮಾಡಬೇಕಾಗಿ ಬಂದು, ಹೆಚ್ಚಿನ ಸಮಯ ಕೊಡಬೇಕೆಂದು ಹೇಳಿದಾಗ, ಅದನ್ನು ಅವರು ಸ್ವೀಕರಿಸಿದ ರೀತಿ ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದೆ. ಅಂದು ಅವರು ತೋರಿಸಿದ ಆ ಶ್ರದ್ಧೆ, ಕೆಲಸದ ಕಡೆಗಿನ ನಿಷ್ಟೆ ಮತ್ತು ಹೇಳಿದ್ದನ್ನು ಕೇಳುವ ಕಿವಿ, ಅರ್ಥ ಮಾಡಿಕೊಳ್ಳುವ ಮನಸ್ಸು, ಯೋಚಿಸುವ ಬುದ್ಧಿ, ಅನುಭವಿಸುವ ಹೃದಯದ ಹದ ಮುಂದೆ ಅವರನ್ನು ಶ್ರೇಷ್ಟ ನಟನಾಗುವ ದಾರಿಯತ್ತ ಕೊಂಡೊಯ್ದಿತು. ಯಾವಾಗಲೂ ಗಾಂಭೀರ್ಯವನ್ನೇ ಮೂರ್ತಿವೆತ್ತಂತೆ ಕುಳಿತಿರುತ್ತಿದ್ದ ವಿಜಯ್ ಅವರಿಗೆ ನಾನು ಸಿ.ಜಿ.ಕೆ ಉತ್ಸವಕ್ಕೆ ಒಂದು ಹಾಸ್ಯ ನಾಟಕ ಮಾಡಿಸುವ ಉದ್ದೇಶ ಇದೆ ಎಂದು ಕಮಲಮಣಿ ಕಾಮಿಡಿ ಕಲ್ಯಾಣದ ಕುರಿತು ಹೇಳಿದಾಗ, ತನಗೆ ಕಾಮಿಡಿ ಅಂದರೆ ಬಹಳ ಇಷ್ಟ, ತಾನೂ ಅದರ ಭಾಗವಾಗಬಹುದೇ ಎಂದು ಕೇಳಿದರು. ನನಗೆ ಬಾಯೇ ಬಿಡದ, ಗಾಂಭೀರ್ಯದ ಮೂರ್ತಿಯಂತಿರುವ ಈ ಹುಡುಗ ಕಾಮಿಡಿ ಮಾಡಬಲ್ಲನಾ ಎಂಬ ಅನುಮಾನ ಅವತ್ತು ಮೂಡಿದ್ದು ಸತ್ಯ. ಆದರೆ ಅಷ್ಟು ಹೊತ್ತಿಗೆ ಬಹಳ ಆತ್ಮವಿಶ್ವಾಸವನ್ನು ಗಳಿಸಿಕೊಂಡಿದ್ದ ವಿಜಯ್ ನಂತರ ಆ ನಾಟಕದಲ್ಲಿ ಜಿದ್ದಿಗೆ ಬಿದ್ದವರಂತೆ ಕೊಟ್ಟ ಪಾತ್ರ ವರದನನ್ನು ಮೈ ಮೇಲೆ ಆವಾಹಿಸಿಕೊಂಡು ತನ್ನ ಪ್ರವೇಶದಲ್ಲಿಯೇ ಜನರೆಲ್ಲರನ್ನು ಗೊಳ್ ಎಂಬ ನಗುವಿನಲೆಯಲ್ಲಿ ಮುಳುಗೇಳಿಸುತ್ತಿದ್ದುದು ಈಗ ಹಳೆಯ ಕತೆ. ಆ ನಂತರ ಸಂಚಾರಿ ಥಿಯೇಟರ್ ನ ಎಲ್ಲ ನಾಟಕಗಳಲ್ಲೂ ಇರುತ್ತಿದ್ದರು. ಜೊತೆಗೆ ಅವರಿಗೆ ಸಂಗೀತದಲ್ಲಿ ಅಪಾರವಾದ ಆಸಕ್ತಿ ಇತ್ತು. ಚಂದ ಹಾಡುತ್ತಿದರು ಕೂಡ, ಆದರೆ ಸಂಗೀತ ಅವರ ಕೈ ಹಿಡಿಯಲಿಲ್ಲ.

ಜೊತೆ ಜೊತೆಗೆ ಪೂರ್ವರಂಗದ ಅಭ್ಯರ್ಥಿಗಳಿಗೆ ಶಿಕ್ಷಕರಾಗಿಯೂ ಮಾರ್ಪಾಡಾದರು. ಅಷ್ಟರಲ್ಲಿ ಅವರೊಳಗೆ ನಟನ ಜೊತೆ ಒಬ್ಬ ನಿರ್ದೇಶಕ ಬೆಳೆಯಲು ಪ್ರಾರಂಭಿಸಿದ್ದ. ನಾವಿಬ್ಬರೂ ಒಂದು ಏರಿಯಾದಲ್ಲಿ ವಾಸ ಮಾಡುತ್ತಿದ್ದ ಕಾರಣ ನಿತ್ಯವೂ ಕೆಲಸ ಮುಗಿದ ನಂತರ ನಾವಿಬ್ಬರೂ( ಜೊತೆಗೆ ನನ್ನ ಮಗಳೂ)ಅವರ ಬೈಕಿನಲ್ಲಿ ಮನೆಗೆ ಬರುತ್ತಿದ್ದೆವು. ಬರುವಾಗ ದಾರಿಯುದ್ದಕ್ಕೂ ಅಭಿನಯ, ನಿರ್ದೇಶನ, ವಿನ್ಯಾಸಗಳಿಗೆ ಕುರಿತಂತೆ ಬರೀ ಪ್ರಶ್ನೆಗಳ ಸುರಿಮಳೆಯಾಗುತ್ತಿತ್ತು. ಅವರಲ್ಲಿದ್ದ ಆ ಹಸಿವು ಮತ್ತು ಹೊಸತೊಂದನ್ನು ಸೃಷ್ಟಿಸುವ ಅದಮ್ಯ ಚೈತನ್ಯ ಎದ್ದು ಕಾಣುತ್ತಿತ್ತು. ಆಗ ಹೊಸ ಹುಡುಗರಿಗೆ ನಾನು ಮಾಡಬೇಕಾಗಿದ್ದ ನಾಟಕವನ್ನು ವಿಜಯ್ ಗೆ ವರ್ಗಾಯಿಸಿದೆ. ಈ ಮೂಲಕ ಕನ್ನಡ ರಂಗಭೂಮಿಗೆ ಒಂದು ಗುಂಪು ಹೊಸ ಕಲಾವಿದರನ್ನು ಪರಿಚಯ ಮಾಡಿಸುವುದರ ಜೊತೆಗೆ ಒಬ್ಬ ಹೊಸ ನಿರ್ದೇಶಕನನ್ನೂ ಸಂಚಾರಿ ಥಿಯೇಟರ್ ಪರಿಚಯ ಮಾಡಿಸಿತು. ವಿಜಯ್ ಗಾಗಿ ಕಾರ್ಲೋ ಕಲಾಡಿ ಅವರ ಪಿನೋಕಿಯೋ ಕತೆಯನ್ನು ಸಂಕ್ಷಿಪ್ತಗೊಳಿಸಿ, ರಂಗರೂಪಕ್ಕೆ ನಾನು ಸಿದ್ಧ ಮಾಡಿಕೊಟ್ಟೆ. ವಿಜಯ್ ಅವರು ಅದನ್ನು ಅತ್ಯಂತ ವಿಶಿಷ್ಟ ರೀತಿಯಲ್ಲಿ ನಿರ್ದೇಶಿಸಿ ರಂಗದ ಮೇಲೆ ತಂದಿದ್ದರು. ಈ ಮೂಲಕ ಹೊಸ ನಿರ್ದೇಶಕನೊಬ್ಬನ ಉದಯವಾಗಿತ್ತು.

ಅಷ್ಟರಲ್ಲಾಗಲೇ ಅವರೊಳಗಿನ ಕಲಾವಿದ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಪ್ರಾದ್ಯಾಪಕಗಿರಿಗೆ ಸೋಡಾ ಚೀಟಿ ಕೊಡಿಸಲು ಸಜ್ಜಾಗುತ್ತಿದ್ದ ಅಂತ ಕಾಣಿಸತ್ತೆ. ಸಂಪೂರ್ಣವಾಗಿ ಅವರು ನಾಟಕ, ಅಭಿನಯ ಇವುಗಳ ಕಡೆಗೆ ಗಮನ ಕೊಟ್ಟರು. ಅದೇ ಸಂದರ್ಭದಲ್ಲಿ ಜಿ.ಪಿ.ರಾಜರತ್ನಂ ವಿರಚಿತ ಕೈಲಾಸಂ ಕೀಚಕದಲ್ಲಿ ಬ್ರುಹನ್ನಳೆಯ ಪಾತ್ರ ಮಾಡುತ್ತಿದ್ದವರು ಒಂದು ದಿನ ಇದ್ದಕ್ಕಿದ್ದಂತೆ ಮಾಯವಾಗಿಬಿಟ್ಟರು. ಎಂದೂ ಹೀಗೆ ಮಾಡದವರು ಎಲ್ಲಿಗೆ ಹೋಗಿಬಿಟ್ಟರೆಂದು ನಾವೆಲ್ಲ ಕಂಗಾಲಾಗಿ ಹುಡುಕಾಡಿದಾಗ ಅವರು ಮನಸ್ಸು ಹಗುರ ಮಾಡಿಕೊಳ್ಳಲು ಊರು ಸೇರಿಬಿಟ್ಟಿದ್ದರು. ಕಾರಣವೇನೆಂದು ಕೇಳಿದಾಗ ಯಾವುದೋ ಸಣ್ಣ ಘಟನೆಯಿಂದಾಗಿ ಕಾಲೇಜಿನ ಕೆಲಸದಲ್ಲಿ ಮನನೊಂದಿದ್ದರು. ಅಷ್ಟೇ ಕಾರಣವಾಯಿತು ಕೆಲಸ ಬಿಡಲು. ತದನಂತರ ಅವರು ಸಂಚಾರಿಯ ಸ್ಟೂಡಿಯೋದಲ್ಲೇ ಹೆಚ್ಚು ಸಮಯ ಕಳೆಯಲು ಪ್ರಾರಂಭಿಸಿದರು. ಬೇರೆ ಬೇರೆ ತಂಡಗಳ ಜೊತೆ ಕೂಡ ಕೆಲಸ ಮಾಡುತ್ತಿದ್ದರು. ಈ ನಡುವೆ ಸೀರಿಯಲ್ ಗಳಲ್ಲಿ, ಟೆಲಿ ಫಿಲ್ಮ್ ಗಳಲ್ಲಿ, ಈವೆಂಟಗಳಲ್ಲಿ ಆಂಕರ್ ಆಗಿ ಮತ್ತು ಸಿನಿಮಾಗಳ ಕಡೆ ಕೂಡ ಗಮನ ಹರಿಸಲು ಪ್ರಾರಂಭಿಸಿದ್ದರು. ಸಿನಿಮಾಗಳಲ್ಲೂ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದರು.

ಅವರಿಗೆ ಸಿಕ್ಕ ಮೊದಲ ಮುಖ್ಯ ಪಾತ್ರ ಎಂದರೆ ಎಂ.ಎಸ್.ರಮೇಶ್ ಅವರ ದಾಸವಾಳ ಸಿನಿಮಾದ ಪಾತ್ರ. ಆ ಮೂಲಕ ಅವರಿಗೆ ಗಾಂಧಿನಗರದಲ್ಲಿ ಒಂದು ಗುರುತು ಸಿಕ್ಕಿತು. ವಿಜಯ್ ಆ ಹೊತ್ತಿಗೆ ಸಂಚಾರಿ ವಿಜಯ್ ಆದರು. ನಂತರದ ದಿನಗಳಲ್ಲಿ ಅಭಿನಯ ಪ್ರಕಾರದ ಎಲ್ಲ ಮಾಧ್ಯಮಗಳ ಕಡೆಗೆ ಒಲವು ತೋರಿದರು. ಹೆಚ್ಚು ಹೆಚ್ಚು ಅಭಿನಯ ಮತ್ತು ನಿರ್ರ್ದೇಶನಕ್ಕೆ ಸಂಬಂಧ ಪಟ್ಟಂತೆ ಕೆಲಸ ಮಾಡಲು ತೊಡಗಿದರು. ಅದೇ ಸಂದರ್ಭದಲ್ಲಿ ಮತ್ತೆ ಸಂಚಾರಿ ಥಿಯೇಟರ್ ಗಾಗಿ ಮತ್ತೊಂದು ನಾಟಕ ನಿರ್ದೇಶಿಸುವ ಆಶಯ ವ್ಯಕ್ತ ಪಡಿಸಿದರು. ಈ ಬಾರಿ ಕೆ.ವಿ.ಅಕ್ಷರ ಅವರು ದಾರಿಯೋಫೊ ಅವರ ಮೂಲಕೃತಿಯಾದ ನಾಟಕವೊಂದರ ಕನ್ನಡ ಅವತರಣಿಕೆಯನ್ನು ಸಂಸಾರದಲ್ಲಿ ಸನಿದಪ ಎಂದು ಮಾಡಿರುವ ನಾಟಕವೊಂದನ್ನು ತಾವು ನಿರ್ದೇಶಿಸುವ ಆಸಕ್ತಿ ತೋರಿದರು. ಅದನ್ನೇ ಮಿಸ್ಅಂಡರ್ ಸ್ಟಾಂಡಿಂಗ್ ಎಂದು ಮರುನಾಮಕರಣ ಮಾಡಿ ಅನೇಕ ಬಾರಿ ತುಂಬಿದ ಸಭಾಂಗಣದಲ್ಲಿ ಜನ ಅದನ್ನು ನೋಡುವಂತೆ ಮಾಡಿದರು. ಬಹುಶಃ ಸಂಚಾರಿಯಲ್ಲಿ ಅತಿ ಹೆಚ್ಚು ಹೌಸ್ ಫುಲ್ ಪ್ರದರ್ಶನ ಕಂಡಿರುವುದು ಈ ನಾಟಕವೇ.

೨೦೧೪ ಸಂಚಾರಿ ಥಿಯೇಟರ್ ತನ್ನ ಹತ್ತು ವರ್ಷದ ವಾರ್ಷಿಕೋತ್ಸವದ ಸಲುವಾಗಿ ಹತ್ತು ದಿನಗಳ ಹತ್ತು ನಾಟಕಗಳ ಉತ್ಸವವನ್ನು ಹಮ್ಮಿಕೊಂಡಿತ್ತು. ಸಂಚಾರಿಯ ಎಲ್ಲ ಸಂಗಡಿಗರು ಒಂದಾಗಿ ಈ ಉತ್ಸವಕ್ಕೆ ಮೆರಗು ತುಂಬಿದರು. ಆ ಸಂದರ್ಭದಲ್ಲಿ ವಿಜಯ್ ಅಧ್ಬುತ ಸಂಘಟಕರಾಗಿಯೂ ಕೆಲಸ ಮಾಡಿದರು. ಮೂರು ತಿಂಗಳ ಕಾಲ ಬೇರೆ ಯಾವ ಕೆಲಸದ ಕಡೆಗೂ ಗಮನ ಹಾಯಿಸದೆ ಹತ್ತೂ ನಾಟಕಗಳ ತಾಲೀಮು, ಅವುಗಳ ನೇಪಥ್ಯ ಸಿದ್ಧತೆ, ಉತ್ಸವದ ಹತ್ತು ಹಲವು ಕೆಲಸಗಳಲ್ಲಿ ತಾವೇ ಖುದ್ದು ತೊಡಗಿಕೊಂಡು ಹೊಸ ಹುಡುಗರಿಗೆ ಮಾರ್ಗದರ್ಶಕರಾದರು. ಒಂಬತ್ತು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.

ಉತ್ಸವದ ನಂತರ ‘ಹರಿವು’, ಅದರ ನಂತರ ‘ನಾನು ಅವನಲ್ಲ ಅವಳು’ ಸಿನಿಮಾಗಳಿಗೆ ಸಮಯ ಮೀಸಲಿಟ್ಟರು. ಅವೆರಡು ಸಿನಿಮಾಗಳು ಅವರಿಗೆ ಹೆಸರನ್ನು ತಂದುಕೊಟ್ಟವು. ೨೭ ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಶ್ರೇಷ್ಟ ನಟ ಪ್ರಶಸ್ತಿಯನ್ನು ತಂದುಕೊಟ್ಟರು. ಇದ್ದಕ್ಕಿದ್ದಂತ ಬೆಳಗಾಗುವುದರಲ್ಲಿ ವಿಜಯ್ ‘ಸಂಚಾರಿ ವಿಜಯ್’ ಆಗಿ ಅಪಾರ ಖ್ಯಾತಿಯನ್ನು ಪಡೆದರು. ಆದರೆ ಅದಕ್ಕಾಗಿ ಅವರು ಬಹಳಷ್ಟು ವರ್ಷಗಳ ಕಾಲ ಸತತವಾಗಿ ಕಷ್ಟಪಟ್ಟಿದ್ದರು. ಯಾವತ್ತೂ ಖ್ಯಾತಿ ಬೆಳಗಾಗುವುದರಲ್ಲಿ ಎಲ್ಲರ ಕಣ್ಣಿಗೆ ಕಾಣಿಸುತ್ತದೆ. ಆದರೆ ಅದಕ್ಕೆ ನಡೆಸಿದ ತಯಾರಿ, ಅನುಭವಿಸಿದ ಕಷ್ಟದ ದಾರಿ, ಬಿಟ್ಟುಕೊಟ್ಟಂತಹ ಸಣ್ಣ ಸಣ್ಣ ಖುಷಿಗಳ ಸಂಜೆಗಳು, ತ್ಯಾಗ ಮಾಡಿದ ಹಲವು ಸುಖ ಸೌಲಭ್ಯಗಳು, ಖಾಲಿ ಜೇಬಿನ ದಿನಗಳು, ಅರೆಹೊಟ್ಟೆಯ ರಾತ್ರಿಗಳು ಈ ಖ್ಯಾತಿಗೆ ಮೆಟ್ಟಿಲಾಗಿರುತ್ತವೆ. ಇವು ಯಾವತ್ತೂ ಯಾರಿಗೂ ಕಣ್ಣಿಗೆ ರಾಚುವಂತೆ ಕಾಣುವುದಿಲ್ಲ. ಹಾಗೆಂದ ಮಾತ್ರಕ್ಕೆ ಮೆಟ್ಟಲುಗಳನ್ನು ಹತ್ತುವಾಗ ಎಷ್ಟೆಲ್ಲ ಕಷ್ಟ ಪಟ್ಟೆವೆಂದೇನೂ ವೈಭವೀಕರಿಸಬೇಕಾಗಿಲ್ಲ. ಯಾಕೆಂದರೆ ಅವೆಲ್ಲವೂ ಇಷ್ಟಪಟ್ಟೇ ಆರಿಸಿಕೊಂಡ ಕಷ್ಟಗಳು ಮತ್ತು ಕಷ್ಟದ ದಾರಿಗಳು. ಅಂತೆಯೇ ವಿಜಯ್ ನ ನಡೆಯೂ. ನಾನು ಯಾವಾಗಲೂ ವಿಜಯ್ ಗೆ ನೆನಪಿಸುತ್ತಿದ್ದೆ. ಈಗ ಬಂದಿರುವ ರಾಷ್ಟ್ರ ಪ್ರಶಸ್ತಿ ಈ ವರ್ಷಕ್ಕಷ್ಟೇ. ಮತ್ತೆ ಮುಂದಿನ ವರ್ಷಕ್ಕೇ ಮತ್ತೆ ಹೊಸದೇ ಕೆಲಸ, ಹೊಸ ಸಿದ್ಧತೆ ಶುರು ಆಗಬೇಕೆಂದು. ಅದನ್ನು ವಿಜಯ್ ಅಕ್ಷರಶಃ ಒಪ್ಪಿದ್ದರು ಕೂಡ.

ಆ ನಂತರ ವಿಜಯ್ ನ ನಡೆ ಮತ್ತು ಚಿತ್ತ ಸಿನಿಮಾದತ್ತ ಚಲಿಸಿತು. ಸಹಜ ಅದು. ಅವಕಾಶಗಳು ಹಾಗೆಯೇ ಬಂತು.ಮಾಡಬೇಕಾಗಿರುವ ಕೆಲಸ ರಾಶಿ ಇತ್ತು. ಕಣ್ಣು ತುಂಬ ಕನಸುಗಳು ಇದ್ದವು. ಮಹತ್ವಾಕಾಂಕ್ಷಿಯಾಗಿದ್ದ ವಿಜಯ್ ಅಪಾರವಾದ ಸ್ನೇಹವಲಯದಲ್ಲಿ ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು. ಚಿತ್ರರಂಗದಲ್ಲಿ ಗಟ್ಟಿ ಹೆಜ್ಜೆಗಳನ್ನು ಮೂಡಿಸುವ ಸಲುವಾಗಿ ಅಲ್ಲಿ ಕೆಲಸ ಮಾಡಬೇಕಾಗಿದ್ದ ಕಾರಣ ಸಂಚಾರಿಯ ಹೊಸ ನಾಟಕಗಳಿಂದ ದೂರವಾದರು. ಹೊಸ ನಾಟಕಗಳಿಗೆ ಕೊಡಬೇಕಾದಷ್ಟು ಸಮಯ ಅವರ ಬಳಿ ಇರಲಿಲ್ಲ. ಆದರೆ ಹಳೇ ನಾಟಕಗಳ ಮರುಪ್ರದರ್ಶನಗಳಿಗೆ ಬಂದು ತಾಲೀಮು ನಡೆಸಿ ಪ್ರದರ್ಶನ ನೀಡುತ್ತಿದ್ದರು. ಬಿಡುವು ಸಿಕ್ಕಾಗೆಲ್ಲ ಸಂಚಾರಿಯಲ್ಲಿ ಅಭಿನಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹೊಸ ಹುಡುಗರ ಜೊತೆ ಬಂದು ಸಮಯ ಕಳೆಯುತ್ತಿದ್ದರು. ನೇಪಥ್ಯದ ಕೆಲಸಗಳಲ್ಲಿ ಕೈ ಜೋಡಿಸುತ್ತಿದ್ದರು. ಸೆಟ್ ಹಾಕುವ ಸಮಯಕ್ಕೆ ಬರಲಾಗದಿದ್ದರೂ ಸೆಟ್ ತೆಗೆದು ಅನ್ಲೋಡ್ ಮಾಡುವ ಸಮಯಕ್ಕಾದರೂ ಹಾಜರಾಗುತ್ತಿದ್ದರು. ಯಾವತ್ತೂ ಸಂಚಾರಿಯ ನಂಟು ಬಿಡಲಿಲ್ಲ. ಅವರು ಬರಲಿ, ಬರದೇ ಇರಲಿ ನಾವೆಲ್ಲ ಅವರ ಉಪಸ್ಥಿತಿಯನ್ನು ಭಾವಿಸುತ್ತಿದ್ದೆವು.

ಆದರೆ ಈಗಲೂ ಹಾಗೆಯೇ ಭಾವಿಸಿಕೊಳ್ಳಬೇಕಾದ ಪರಿಸ್ಥಿತಿಗೆ ನಮ್ಮನ್ನು ದೂಡಿ ಹೋಗಬಾರದಿತ್ತು ವಿಜಯ್.

ಉಪಸಂಹಾರಕ್ಕೆ ತಲೆದಂಡ !
ನಾನೆಂದು ವಿಜಯ್ ನನ್ನು ಏಕವಚನದಲ್ಲಿ ಸಂಭೋದಿಸಿದ್ದೇ ಇಲ್ಲ. ಅತ್ಯಂತ ಆತ್ಮೀಯ ಹುಡುಗನಾಗಿದ್ದರೂ ನಾನೆಂದು ನೀನು ತಾನೆಂದು ಕರೆಯಲೇ ಇಲ್ಲ.

ನಮ್ಮಿಬ್ಬರದ್ದು ಒಂದು ರೀತಿಯ ಕರುಳುಬಳ್ಳಿಯ ನಂಟು. ಆದರೂ ನಾವೆಂದೂ ಅದನ್ನು ಪರಸ್ಪರ ವ್ಯಕ್ತಪಡಿಸಿಕೊಳ್ಳಲೇ ಇಲ್ಲ. ಆದರೆ ನಮ್ಮಿಬ್ಬರ ಒಳಗೂ ಒಂದು ತಾಯಿಮಗನ ಮೌನ ಸಂಭಾಷಣೆ ನಮ್ಮಿಬ್ಬರ ಅರಿವಿಗೆ ಬರುತ್ತಿತ್ತು. ವಿಜಯ್ ಗೆ ಭಾವನೆಗಳ ಕಟ್ಟೆ ಒಡೆದಾಗ ಓಡಿ ಬರುತ್ತಿದ್ದರು. ಮಾತು ಮಾತು ಮಾತು ನಿಲ್ಲಿಸುತ್ತಲಿರಲಿಲ್ಲ. ನಾನು ಕೇವಲ ಕಿವಿಯಾಗಿರುತ್ತಿದ್ದೆ. ಅಷ್ಟೆ. ನಂತರ ನಾವೇನೂ ಮಾತಾಡೇ ಇಲ್ಲ ಎಂಬಂತೆ ವರ್ತಿಸುತ್ತಿದ್ದೆವು. ಆದರೆ ೨೦೧೯ ರಲ್ಲಿ ಹದಿನೇಳು ವರ್ಷಗಳ ನಂತರ ನಾನು ಮತ್ತೊಂದು ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡೆ. ಒಪ್ಪಿಕೊಂಡ ಮೇಲೆ ಗೊತ್ತಾಯಿತು ನನ್ನ ಮಗನ ಪಾತ್ರಧಾರಿ ಸಂಚಾರಿ ವಿಜಯ್ ಎಂದು. ಸಂತೋಷವಾಯಿತು. ಆ ಸಿನಿಮಾ ಶೂಟಿಂಗ್ ನಲ್ಲಿ ಸುಮಾರು ೩೫ ದಿನಗಳ ಕಾಲ ಒಟ್ಟಿಗೆ ಅಮ್ಮ ಮಗನಾಗಿ ಕಳೆದೆವು. ಇಷ್ಟೂ ವರ್ಷದ ನಮ್ಮಿಬ್ಬರ ಸ್ವಗತವು “ತಲೆದಂಡ” ಸಿನಿಮಾದಲ್ಲಿ ಮಾತುಗಳಾಗಿದ್ದವು. ಈ ಸಂದರ್ಭದಲ್ಲಿ ನಾನವನನ್ನು ಏಕವಚನದಲ್ಲಿ ಕರೆಯುತ್ತಿದ್ದೆ. ಡೋ…ಕೂಸೇ ಅಂದರೆ ಅವನೂ ನನ್ನನ್ನು ಅವೈ…. ಎನ್ನುತ್ತಿದ್ದ. ಆಮೇಲೆ ನಾವಿಬ್ಬರೂ ಬಹುವಚನಕ್ಕೆ ಮರಳಲಿಲ್ಲ. ನೀನು ತಾನೆಂದು ಮಾತನಾಡಿಕೊಳ್ಳುತ್ತಾ ಹಗುರಾಗಿಬಿಟ್ಟಿದ್ದೆವು.

ಕೊನೇ ಬಾರಿಗೆ ‘ ಕಿಟ್ ಕೊಟ್ ಬುಟ್…. ಮನಿಗೆ ಓಯ್ತಿರದೆ. ಅಂತ ಫೇಸ್ ಬುಕ್ಕಲ್ಲಿ ಬರಕೊಂಡಿದ್ಡ.

ನಾನು ‘ಉಸಾರು ಕೂಸೆ” ಅಂತಂದೆ.

ಅವನು ಲೈಕ್ ಒತ್ತಿ,
ಮುಂದಕ್ಕೆ ಹೋಗಿ
ಬೈಕ್ ಹತ್ತಿ ಹೋದೋನು,
ಮರಳಿ ಬರಲೇ ಇಲ್ಲವಲ್ಲಾ……..

ಹೀಗೆ ಬಿಟ್ಟು ಹೋಗಿದ್ದು ತರವೇ….?

ಅನಂತವಾಗಿರು (ಸಂಚಾರಿ ವಿಜಯ್ ಕಥನ) ಪುಸ್ತಕಕ್ಕಾಗಿ ಬರೆದ ಲೇಖನ

‍ಲೇಖಕರು Admin

July 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: