ಡಾ ಕೆ ಎಸ್ ಚೈತ್ರಾ ಅಂಕಣ – ನಿಪ್ಪಟ್ಟು-ಹಲ್ಲಿನ ಸೆಟ್ಟು…

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

17

ವಯಸ್ಸಾಗುತ್ತಾ ಬಂದ೦ತೆ ದೇಹದ ಇತರ ಅಂಗಗಳ೦ತೆ ಹಲ್ಲೂ ಸವೆಯುತ್ತದೆ. ಸರಿಯಾಗಿ ಕಾಳಜಿ ವಹಿಸದಿದ್ದಲ್ಲಿ ಒಂದೊ೦ದಾಗಿ ಬಿದ್ದು ಬೊಚ್ಚು ಬಾಯಿಯಾಗಬಹುದು. ಹಿರಿಯ ನಾಗರೀಕರನ್ನು ವರ್ಣಿಸುವಾಗ ಬೊಚ್ಚು ಬಾಯಿ ಅಜ್ಜ-ಅಜ್ಜಿ ಎಂಬ ವಿಶೇಷಣ ಸಾಮಾನ್ಯ. ಎಷ್ಟೋ ಬಾರಿ ಹೇಗಿದ್ದರೂ ವಯಸ್ಸಾಗಿದೆ, ಇನ್ನೇಕೆ ಹಲ್ಲು ಎಂದು ಮನೆಯವರೂ ಉದಾಸೀನ ಮಾಡುತ್ತಾರೆ. ಬೇರೆಯವರೇಕೆ.. ವಿದ್ಯಾರ್ಥಿಗಳಾಗಿದ್ದಾಗ ನಮಗೂ ಹಾಗೆನಿಸುತ್ತಿತ್ತು. ಆದರೆ ಹಿರಿಯ ನಾಗರೀಕರಿಗೂ ಎಲ್ಲರಂತೆ ಆರೋಗ್ಯವಾಗಿ-ಆತ್ಮವಿಶ್ವಾಸದಿಂದ ಬದುಕುವ ಹಕ್ಕಿದೆ. ಸುಂದರವಾಗಿ ಕಾಣುವ ಬಯಕೆ ಇರುತ್ತದೆ ಎಂಬುದನ್ನು ತಿಳಿಯುವುದು ಮುಖ್ಯ. ಹಲ್ಲುಗಳು ಇಲ್ಲದಿರುವುದು ಅವರ ಜೀವನದ ಗುಣಮಟ್ಟವನ್ನೇ ಕುಗ್ಗಿಸಬಹುದು. ಕಾಲೇಜಿನಲ್ಲಿ ಚಿಕಿತ್ಸೆಗೆ ಬಂದ ಅಜ್ಜ-ಮೊಮ್ಮಗರ ಜೋಡಿ ಈ ಪಾಠ ಕಲಿಸಿತ್ತು. 

ಹಲ್ಲೇನೂ ಬೇಡ!

ಎಂಬತ್ತರ ಅಜ್ಜನನ್ನು ಕರೆದುಕೊಂಡು ಮೊಮ್ಮಗ ಅವರ  ಹಲ್ಲು ಕೀಳಿಸಲು ಬಂದಿದ್ದ. ಹುಳುಕಾದ ಅಲುಗಾಡುತ್ತಿದ್ದ ಹಲ್ಲುಗಳನ್ನು ಕಿತ್ತ ನಂತರ ‘ ಅಜ್ಜಾ , ಇನ್ನು ಬೋಡು ಬಾಯಿ! ಮೆತ್ತಗಿನ ಅನ್ನ ತಿಂದರೆ ಸಾಕು. ಈ ವಯಸ್ಸಿಗೆ ಹಲ್ಲಿಟ್ಟು ಯಾರನ್ನು ಇಂಪ್ರೆಸ್ ಮಾಡಬೇಕು ನೀವು? ಅಜ್ಜಿ ಆಗಲೇ ಮೇಲಿದ್ದಾರೆ ’ ನಗುತ್ತಾ ನುಡಿದಿದ್ದ ಮೊಮ್ಮಗ. ಆಗಷ್ಟೇ ಹಲ್ಲು ಕಿತ್ತದ್ದರಿಂದ ಅಜ್ಜ ಏನೂ ಮಾತನಾಡದೇ ಸುಮ್ಮನಿದ್ದರು.  ಎರಡು ದಿನ ಬಿಟ್ಟು ಮರುತಪಾಸಣೆಗೆ ಬಂದಾಗ ‘ ನನಗೆ ಆದಷ್ಟು ಬೇಗ ಡೆಂಚರ್ ಬೇಕು. ಮನೆಯವರೆಲ್ಲಾ ಹೇಳ್ತಾರೆ ವಯಸ್ಸಾಯಿತು ಅಂತ. ವಯಸ್ಸಾದರೆ ಏನಂತೆ? ನನಗೆ ರುಚಿಯಾಗಿ ತಿನ್ನಬೇಕು, ವಾಕ್‌ಗೆ ಹೋಗುವಾಗ  ಚೆನ್ನಾಗಿ ಕಾಣಸಬೇಕು, ದಿನಾ ಪೂಜೆ ಮಾಡುವಾಗ ಮಂತ್ರ ಸ್ಪಷ್ಟವಾಗಿ ನುಡಿಯಬೇಕು. ಹಲ್ಲಿಲ್ಲದಿದ್ದರೆ ಹೇಗೆ ಸಾಧ್ಯ? ಬೇರೆಯವರಿಗಾಗಿ ಅಲ್ಲ; ನನ್ನ ಸಲುವಾಗಿಯೇ ಹಲ್ಲು ಬೇಕು. ನನಗಂತೂ ಹಲ್ಲಿಲ್ಲದೇ ಬದುಕುವುದನ್ನು ನೆನೆಸಿಕೊಂಡೇ ಭಯವಾಗುತ್ತದೆ. ಯಾರೇನೇ ಹೇಳಲಿ ಡೆಂಚರ್ ಬೇಕು. ಮನೆಯವರೆಲ್ಲಾ ಏನೇ ಹೇಳಲಿ..ನನ್ನನ್ನು  ಹಲ್ಲಿನ ಸೆಟ್ ಮಾಡುವ ಡಿಪಾರ್ಟ್ಮೆಂಟಿಗೆ ಕಳಿಸಿಕೊಡಿ’ ಎಂದು ಗಟ್ಟಿಯಾಗಿಯೇ ಹೇಳಿದ್ದರು. ಅವರು ಹೇಳಿದಂತೆ ಹಲ್ಲು ತೆಗೆದ ಗಾಯ ಮಾಯ್ದ ನಂತರ ಅವರನ್ನು ಬೇರೆ ವಿಭಾಗಕ್ಕೆ ಕಳಿಸಿಕೊಟ್ಟೆವು. ಇದು ಆಗ ನಡೆದ ಘಟನೆ.

ರಾಮಜ್ಜ ಎಂಬ ಹಿರಿಯ

ಕಾಲೇಜಿನಲ್ಲಿ ಕಲಿಕೆ ಮುಗಿದು ದಂತವೈದ್ಯೆಯಾಗಿ  ವೃತ್ತಿಜೀವನ  ಆರಂಭಿಸಿ  ಎರಡೂವರೆ  ದಶಕಗಳಾಗಿವೆ. ಅಳುವ  ಕಂದ, ತುಂಟ ಹುಡುಗ, ಫ್ಯಾಶನ್ ಪ್ರಿಯೆ ಯುವತಿ, ಮನೆಗೇ ಅಂಟಿಕೊಂಡಿರುವ ಗೃಹಿಣಿ,ದೊಡ್ಡ  ಕಂಪನಿಯ  ಆಫೀಸರ್, ಅರವತ್ತರ ಆಂಟಿ, ಎಂಭತ್ತರ ಅಜ್ಜ –ಹೀಗೆ ಬಣ್ಣ, ಗಾತ್ರ, ವರ್ಗ, ಜಾತಿ, ಅಂತಸ್ತಿನಲ್ಲಿ ಬೇಧವಿದ್ದರೂ ಹಲ್ಲು ನೋವಿಗೆ ಮಾತ್ರ ಯಾವ ತಾರತಮ್ಯವೂ ಇಲ್ಲ! ರೋಗಿಗಳನ್ನು ನೋಡುತ್ತಾ,ಅವರ ತೊಂದರೆ ಪರಿಹರಿಸುವ ಪ್ರಯತ್ನ ಮಾಡುತ್ತಲೇ ಮಾನವ ಸ್ವಭಾವದ ವಿವಿಧ ಮುಖಗಳ ಪರಿಚಯ ನನಗಾಗಿದೆ. ಸಿಹಿ, ಕಹಿ, ಹಾಸ್ಯ, ವಿಷಾದ ಹೀಗೆ ಎಲ್ಲವೂ ಬೆರೆತ ಚೌಚೌಭಾತ್ ಅನುಭವ ಎಂದರೆ ತಪ್ಪಾಗಲಾರದು.  ಆದರೂ ಹಿರಿಯ ನಾಗರಕರಿಗೆ ಹಲ್ಲಿನ ಸೆಟ್ ಮಾಡುವಾಗಲೆಲ್ಲಾ ಕಣ್ಮುಂದೆ ನಿಲ್ಲುವ ಚಿತ್ರ ರಾಮಜ್ಜನದ್ದು ! ‘ ಏನ್ ಈ ಹುಡ್ಗೀನಾ ಹಲ್ ತೆಗೆಯೋ ಡಾಕ್ಟ್ರಮ್ಮ? ಕೆಲ್ಸ ಸರೀ ಮಾಡ್ತದಾ ಹೆಂಗೆ ’ ಎಂದು ನನ್ನನ್ನು ನೋಡಿ ಮಗನಲ್ಲಿ ಜೋರಾಗಿಯೇ ಸಂಶಯ ವ್ಯಕ್ತಪಡಿಸಿದವನು ರಾಮಜ್ಜ. ಹಲ್ಲುನೋವಿದ್ದರೂ ಅರ್ಧ ಗಂಟೆ ತನ್ನ ಮುತ್ತಜ್ಜ, ಅಜ್ಜ, ಅಪ್ಪ, ಊರು-ಕೇರಿ, ಮಕ್ಕಳು ಎಲ್ಲಾ ವಿವರ ಕೊಟ್ಟೇ ನಂತರ ಪರಿಶೀಲನೆಗೆ ಒಳಗಾಗಿದ್ದು. ಜತೆಗಿದ್ದ ಮಗ ಅದೆಲ್ಲಾ ಪುರಾಣ ಯಾಕಪ್ಪಾ ಎಂದರೆ ‘ ಏ ಸುಮ್ನಿರು,ನಾನು ಯಾರು- ನಮ್ ವಂಶ ಎಂಥದು ಅಂತ ತಿಳೀದೇ ಈ ಹುಡ್ಗಿ ಅದೆಂಥಾ ಬರೀ ಹಲ್ ನೋಡ್ತದೆ?’ ಎಂದು ಮರು ಪ್ರಶ್ನೆ ಮಾಡಿ ಸುಮ್ಮನಾಗಿಸಿದ್ದ. 

ತಿಂಡಿಪೋತ

ಅಂತೂ ರಾಮಜ್ಜನೇ ಹೇಳಿದ ಪ್ರಕಾರ ಅವರು ಮೂಲತಃ ಕೋಲಾರ ಸಮೀಪದ ಹಳ್ಳಿಯವರು. ತಲತಲಾಂತರದಿಂದ ಬಂದಿದ್ದ ಜಮೀನಿನಲ್ಲಿ ಕೃಷಿ ಮಾಡಿ ಬಡತನದಲ್ಲೇ ಸಂಸಾರ ನಡೆಸಿದ ಹಿರಿಯ ರಾಮಜ್ಜ. ಆದರೆ ಇದ್ದೊಬ್ಬ ಮಗ ಚೆನ್ನಾಗಿ ಓದಿ ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಬಗ್ಗೆ ರಾಮಜ್ಜನಿಗೆ ಎಲ್ಲಿಲ್ಲದ ಹೆಮ್ಮೆ. ಮಗ ದೊಡ್ಡ ಮನೆ ಕಟ್ಟಿ ಮದುವೆಯಾಗಿದ್ದ.ಹಳ್ಳಿಯಲ್ಲೇ ಇದ್ದ ರಾಮಜ್ಜ ಮತ್ತು ಆತನ ಹೆಂಡತಿಯದ್ದು ಹೆಚ್ಚೇನೂ ಖರ್ಚಿಲ್ಲದ ಸರಳ ಬದುಕು. ಆದರೆ ಬಾಲ್ಯದಿಂದಲೂ ತಿಂಡಿ-ಊಟ ಎಂದರೆ ಎಲ್ಲಿಲ್ಲದ ಪ್ರೀತಿ. ತಾನು ತಿಂಡಿಪೋತ ಎಂದೇ ಹೆಮ್ಮೆ. ಆದರೂ ದುಡ್ಡಿಲ್ಲದ ಕಾರಣ ಬೇಕುಬೇಕಾದ್ದನ್ನು ತಿನ್ನಲಾಗುತ್ತಿರಲಿಲ್ಲ.ಈಗ ಕೈತುಂಬಾ ದುಡಿಯಲಾರಂಭಿಸಿದ ಮಗ ಕಳಿಸಿದ ದುಡ್ಡಿನಿಂದ ತನಗೆ ಬೇಕಾಗಿದ್ದೆಲ್ಲಾ ತಿನ್ನುತ್ತಿದ್ದ. ಅದರಲ್ಲೂ ಕುರುಕಲು ತಿಂಡಿ-ಕರಿದದ್ದು, ತಿಂದಷ್ಟೂ ಸಾಲದು.

ಸಂಜೆ ಆದೊಡನೆ ಕಾಫಿ ಜತೆ ಕರಿದ ಕಡ್ಲೆಕಾಳು, ಹುರಿಗಾಳು, ನಿಪ್ಪಟ್ಟು, ಚಕ್ಕಲಿ ಬೇಕೇಬೇಕು. ರಾಮಜ್ಜನಿಗೆ ಬೇಕಾದಂತೆ ಮಾಡಿಹಾಕುವ ಹೆಂಡತಿ ಇದ್ದಳು. ಹೀಗೆ ರಾಮಜ್ಜ ಚೆನ್ನಾಗಿ ತಿಂದು ಹಾಯಾಗಿದ್ದ. ಆದರೆ ನಾಲ್ಕು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಹೆಂಡತಿ ತೀರಿಕೊಂಡಾಗ ರಾಮಜ್ಜನಿಗೆ ಸಮಸ್ಯೆ ಶುರುವಾಯಿತು. ಒಬ್ಬನೇ ಮಗ ತಂದೆಯನ್ನು ತನ್ನೊಡನೆಯೇ ಬರುವಂತೆ ಒತ್ತಾಯಿಸಿದ. ಮನಸ್ಸಿಲ್ಲದಿದ್ದರೂ ಬೇರೆ ದಾರಿ ಕಾಣದೇ ರಾಮಜ್ಜ ಬೆಂಗಳೂರು ಸೇರಿಯಾಗಿತ್ತು. ಮಗ, ಸೊಸೆ ಮತ್ತು ಮೊಮ್ಮಗನೊಡನೆ ನೆಮ್ಮದಿಯಾಗಿಯೇ ಇದ್ದ ರಾಮಜ್ಜನಿಗೆ ಕೆಲತಿಂಗಳಿನಿಂದ ಹಲ್ಲು ನೋವು, ಅಲುಗಾಡುವಿಕೆ ಆರಂಭವಾಗಿತ್ತು. ಇದರಿಂದ ಏನೂ ಸರಿಯಾಗಿ ತಿನ್ನಲು ಸಾಧ್ಯವಾಗುತ್ತಿರಲಿಲ್ಲ.ನನ್ನಿಂದ ಚಿಕಿತ್ಸೆ ಪಡೆದಿದ್ದ ಮಗ ರಾಮಜ್ಜನನ್ನು ತೋರಿಸಲು ಕರೆತಂದಿದ್ದ.  

ಹಲ್ಲು ಕಿತ್ತ ಬಳಿಕ

ಬಾಯಿ ತೆರೆಸಿ ನೋಡಿದರೆ ಇದ್ದದ್ದೇ ನಾಲ್ಕಾರು ಹಲ್ಲುಗಳು.ಅವೂ ಸುಸ್ಥಿತಿಯಲ್ಲಿರಲಿಲ್ಲ. ಅವನ್ನೆಲ್ಲಾ ತೆಗೆದು ಹಲ್ಲಿನ ಸೆಟ್ ಮಾಡಬೇಕಾಗಿತ್ತು. ಹಲ್ಲು ಕೀಳುವ ಪೂರ್ವದಲ್ಲಿ ಸಾಮಾನ್ಯ ಆರೋಗ್ಯದ  ತಪಾಸಣೆಯಲ್ಲಿ ರಾಮಜ್ಜನಿಗೆ ಯಾವುದೇ ತೊಂದರೆ ಇರಲಿಲ್ಲ. ‘ಅಲ್ಲವ್ವಾ ನಂಗೆ ಬೀಪಿ,ಸುಗರ್ ಯಾವ್ದೂ ಇಲ್ಲ, ಈ ಹಲ್ಲುಗಳು ಮಾತ್ರ ಮಾತ್ರ ಅಡ್ಡಾದಿಡ್ಡಿ. ನಮ್ಮ ವಂಸಾದಲ್ಲಿ ಬುದ್ಧಿ ನೆಟ್ಟಗೆ ಐತೆ., ಹಲ್ಲು ಮಾತ್ರ ಹಿಂಗೈತೆ’ ಎಂದು ಬೇಸರದಿಂದಲೇ ಹಲ್ಲು ಕೀಳಿಸಿಕೊಂಡ ರಾಮಜ್ಜ. ಆಮೇಲೆ ನೋವಿಗೆ ಮಾತ್ರೆ ಬರೆದು ಏನು ಮಾಡಬೇಕು ಎಂಬ ಸೂಚನೆ ಕೊಡುತ್ತಿರುವಾಗ ‘ಅರ್ಧ ಗಂಟೆ ಬಿಟ್ಟು ಐಸ್ಕ್ರೀಂ ಕೊಡಿ ಅಥವಾ ತಣ್ಣನೆಯ ಜ್ಯೂಸ್ ಕೊಡಬಹುದು’ ಎಂದೆ. ಕೂಡಲೇ ಮುಖ ಅರಳಿಸಿ ರಾಮಜ್ಜ ‘ಐಸ್ಕ್ರೀಂ ತಿಂದು ಕೂಲ್ ಡ್ರಿಂಕ್ ಕುಡಿದ್ರೆ ಬೇಗ ಗುಣ ಆಗ್ತದೆ ಅಲ್ವಾ! ಯಾವುದಕ್ಕೂ ದೊಡ್ಡ ಡಬ್ಬಿ ಐಸ್ಕ್ರೀಂ, ಉದ್ದ ಬಾಟಲಿ ಜೂಸ್ ತಂದುಬಿಡು’ ಎಂದು ಮಗನಿಗೆ ಆರ್ಡರ್ ಮಾಡಿದ. ಸಾಲದು ಎಂಬಂತೆ ‘ಈ ಹುಡುಗಿ ಪರವಾಗಿಲ್ಲ, ಚೆನ್ನಾಗಿ ಹಲ್ಲು ತೆಗೀತದೆ, ಮತ್ತೆ ಗುಣ ಆಗೋಕೆ ಒಳ್ಳೆ ಉಪಾಯ  ಹೇಳಿದೆ‘ ಎಂಬ ಶಹಬ್ಬಾಸ್ ನನಗೆ!! 

ಅಂತೂ ನಿಧಾನವಾಗಿ ರಾಮಜ್ಜನ ಒಂದೊಂದೇ ಹಲ್ಲನ್ನು ಕಿತ್ತು ಸೆಟ್ ತಯಾರಿಸುವ ಕೆಲಸ ಶುರು ಮಾಡಿದೆ. ಮೊದಲೆರಡು ಸಲ ಮಗನೊಂದಿಗೆ ಬಂದವ, ರೂಢಿಯಾದಂತೆ ಒಬ್ಬನೇ ಬರತೊಡಗಿದ.ನಾನು ಕೆಲಸ ಮಾಡುವಾಗ ಒಂದೇ ಸಮನೆ ನಾನಾ ತಿಂಡಿ ತಿನಿಸುಗಳ ವರ್ಣನೆ.ಅಷ್ಟು ಸಾಲದು ಎಂಬಂತೆ ಇಲ್ಲಿ ಎಲ್ಲಿ ಒಳ್ಳೆ ಮಂಡಕ್ಕಿ,ಬಜ್ಜಿ ಸಿಗುತ್ತದೆ ಎಂಬ ವಿಚಾರಣೆ. ಸೆಟ್ ತಯಾರಿಸಲು ಅಳತೆ ಕೊಡಲು ಪ್ರತಿ ಬಾರಿ ಬಂದಾಗಲೂ ರಾಮಜ್ಜನ ಪ್ರಶ್ನೆ ಒಂದೇ ‘ಯಾವಾಗ ಸರಿಯಾಗಿ ತಿನ್ನಬಹುದು? ಏನೇನನ್ನು ತಿನ್ನಬಹುದು? ’. ಕೆಲವೊಮ್ಮೆ ಕಿರಿಕಿರಿಯಾದರೂ ‘ಹೊಸ ಸೆಟ್ ಆದ ಮೇಲೆ ನಿಮಗೆ ಹೊಂದಿಕೆ ಆಗಬೇಕು.ಆಹಾರ ತಿನ್ನಬಹುದು, ಆದರೂ ನಿಮ್ಮ ನಿಜ ಹಲ್ಲಿನಂತೆ ಎಲ್ಲವನ್ನೂ ಅಗಿಯಲು ಸಾಧ್ಯವಿಲ್ಲ’ ಎಂದು  ನಾನು ಇರುವ ಸತ್ಯ ಹೇಳುತ್ತಿದ್ದೆ.

 ಕುಟುಂ ಕುಟುಂ

ತಿಂಗಳಲ್ಲಿ ಎಲ್ಲಾ ಕೆಲಸ ಮುಗಿದು ರಾಮಜ್ಜನ ಸೆಟ್ ತಯಾರಾಯಿತು. ಹೊಸ ಶರ್ಟ್, ಪಂಚೆ ಧರಿಸಿ ಬಂದ ರಾಮಜ್ಜನ ಮುಖದಲ್ಲಿ ಖುಷಿ.ಹಲ್ಲಿನ ಸೆಟ್ ಕೈಯಲ್ಲಿ ಹಿಡಿದು ‘ಎಷ್ಟ್ ಚೆನ್ನಾಗಿದೆ, ಒಳ್ಳೆ ದಾಳಿಂಬೆ ಕಾಳ್ ಇದ್ದಂಗೆ ಇದೆ’ ಎಂದು ಮೆಚ್ಚಿಕೊಂಡಿದ್ದೂ ಆಯ್ತು. ಅಂತೂ ರಾಮಜ್ಜನಿಗೆ ಹಲ್ಲಿನ ಸೆಟ್ ಹಾಕಾಯ್ತು. ಎಲ್ಲವೂ ಸರಿಯಾಗಿದೆಯೇ ಎಂದು ಸ್ವಲ್ಪ ಹೊತ್ತು ಬಿಟ್ಟು ಪರಿಶೀಲಿಸಬೇಕಿತ್ತು. ಹಾಗಾಗಿ ಹೊರಗೆ ಕೂರಲು ಹೇಳಿ ನಾನು ಇನ್ನೊಂದು ರೋಗಿಯನ್ನು ಪರಿಶೀಲಿಸುತ್ತಿದ್ದೆ. ಐದು ನಿಮಿಷದ ನಂತರ ಹೊರಗಿನಿಂದ ‘ಕುಟುಂ ಕುಟುಂ’  ಎಂಬ ಸದ್ದು. ಮೊದಲು ಮಂಗ, ಬೆಕ್ಕು, ಇಲಿ ಹೀಗೆ ಭಾವಿಸಿ ಸುಮ್ಮನಾದೆ.ಆದರೆ ಶಬ್ದ ನಿಲ್ಲಲಿಲ್ಲ. ತಡೆಯಲಾರದೇ ಹೊರಗೆ ಬಂದು ನೋಡಿದರೆ ಕುಟುಂ ಶಬ್ದದ ಮೂಲ ಕಣ್ಣಿಗೆ ಬಿತ್ತು, ರಾಮಜ್ಜ!! ಕೈಚೀಲದಿಂದ ದೊಡ್ಡ ಡಬ್ಬದ ತುಂಬಾ ಹುರಿಗಾಳು, ಕಡ್ಲೆಕಾಳು. ಅದನ್ನು ಒಂದೊಂದಾಗಿ ಬಾಯಿಗೆ ಎಸೆಯುತ್ತಾ, ಹೊಸ ಸೆಟ್ಟಿನಿಂದ ಕಷ್ಟಪಟ್ಟು ಅಗಿಯುತ್ತಾ  ಟಿವಿ ಮುಂದೆ ಪ್ರತಿಷ್ಠಾಪನೆಯಾಗಿದ್ದ. ಆತನ ಮುಖದಲ್ಲಿ ಕಾಣುತ್ತಿದ್ದದ್ದು ಬ್ರಹ್ಮಾನಂದವೇ ಸರಿ!

ಆ ಕುಟುಂ ಶಬ್ದ ನನಗೆ ಕರ್ಣ ಕಠೋರವಾಗಿತ್ತು. ರಾಮಜ್ಜನ ಸಂತೋಷಕ್ಕೆ ಧಕ್ಕೆ ತರುವ ಆಶಯ ನನಗಿರಲಿಲ್ಲ. ಆದರೆ ನಾನು ಇಷ್ಟು ಆಸ್ಥೆ ವಹಿಸಿ ಮಾಡಿದ ಹಲ್ಲಿನ ಸೆಟ್ ಗತಿ? ಮನೆಗೆ ಹೋಗುವ ಮುನ್ನವೇ ತುಂಡಾದರೇನು ಗತಿ? ದುಡ್ಡು ಕೊಡುವವರಾದರೂ ಯಾರು? ಇವನ್ನೆಲ್ಲಾ ಯೋಚಿಸಿ ‘ಹೀಗೆಲ್ಲಾ ಇಷ್ಟು ಬೇಗ ಗಟ್ಟಿಯಾದುದನ್ನು ತಿನ್ನಬಾರದು. ನಿಧಾನವಾಗಿ ಮೆತ್ತಗಿನ ಆಹಾರದಿಂದ ಅಭ್ಯಾಸ ಮಾಡಬೇಕು. ಈ ಚಕ್ಕಲಿ, ನಿಪ್ಪಟ್ಟು, ಕುರುಕಲು ಎಲ್ಲಾ ತಿನ್ನೋದು ಕಷ್ಟ ಇದೆ ರಾಮಜ್ಜಾ’ ಎಂದು ವಿವರಿಸಿದೆ. ಅದಕ್ಕೆ ರಾಮಜ್ಜ ‘ನೀನು ಹೇಳೋದು ಸರಿನೇ ಕಣಮ್ಮಾ. ಆದ್ರೆ ನಾನು ಈ ಸೆಟ್ಟು ಮಾಡಿಸಿಕೊಂಡಿದ್ದೇ ಇವೆಲ್ಲಾ ತಿನ್ನಕ್ಕೆ! ನೋಡ್ತಾ ಇರು ಹೆಂಗೆ ಪ್ರಾಕ್ಟೀಸ್ ಮಾಡ್ತೀನಿ ಅಂತಾ… ನನ್ ಮಗಾ ಸೊಸೆ ಇದನ್ನೆಲ್ಲಾ ತಿನ್ ಬಾರದು ಅಂತಾರೆ, ನಂಗೂ ತಿನ್ನಕೆ ಆಗ್ತಾ ಇರ್ಲಿಲ್ಲ.ಈಗ ನೋಡು ಹೆಂಗೆ? ಇವತ್ತು ಮನೆಗೆ ಹೋಗಿ ಖಾರ ಕೋಡುಬಳೆ ಎಲ್ಲರ ಮುಂದೆ ಚಪ್ಪರಿಸಿ ತಿಂದ್ರೇ ಸಮಾಧಾನ. ಸೆಟ್ಟು  ಮುರಿದ್ರೆ ಅಂತ ನಂಗೇನೂ ಹೆದ್ರಿಕೆ ಇಲ್ಲ; ಹೆಂಗಿದ್ರೂ ನೀನು ಮನೆ ಹತ್ರಾನೇ ಇದ್ದೀಯಲ್ಲ, ಬಂದ್ರಾಯ್ತು ತಗಾ. ನನ್ ತಾವ ದುಡ್ಡಿಗೇನೂ ಮೋಸ ಇಲ್ಲ’ ಎಂದು ನನಗೇ ಸಮಾಧಾನ ಹೇಳಿದ್ದಲ್ಲದೇ ಗುಟ್ಟಿನಿಂದ ನನ್ನ ಕೈಗೆ ಏನನ್ನೋ ಹಿಡಿಸಿದ. ನೋಡಿದರೆ, ಕೋಲಾರದ ಸ್ಪೆಷಲ್ ಕಡ್ಲೆಕಾಯಿ ಪೊಟ್ಟಣ!

ಇದೆಲ್ಲಾ ಆಗಿ ಎರಡು ವರ್ಷವೇ ಕಳೆಯಿತು.ಕಳೆದ ತಿಂಗಳು ಮನೆ ಹತ್ತಿರ ಚಿಂತಾಮಣಿ ಚಾಟ್ ಸೆಂಟರ್ ಹೊಸದಾಗಿ ಆರಂಭವಾಯಿತು. ಹೇಗಿದೆ ಎಂದು ನೋಡಲು ಹೋದರೆ ‘ಓಹೋ, ಏನ್ ಬಾರವ್ವಾ,ಇದು ನಮ್ಮೂರ ಕಡೆಯವರದ್ದೇ ಅಂಗಡಿ.’ ಎಂದು ಸ್ವಾಗತಿಸಿದ್ದು ಮತ್ಯಾರು ಅಲ್ಲ, ನಿಪ್ಪಟ್ಟು ಮಸಾಲವನ್ನು ಸಶಬ್ದವಾಗಿ ತಿನ್ನುತ್ತಿದ್ದ ರಾಮಜ್ಜ! ನಾನೇ ಮಾಡಿಕೊಟ್ಟ ಸೆಟ್ಟಿನ ಹಲ್ಲು ತುಸು ಮಂಕಾಗಿತ್ತು, ಆದರೆ ರಾಮಜ್ಜನ ಮುಖದಲ್ಲಿ ತೃಪ್ತಿಯ ನಗೆ ಮಿಂಚುತ್ತಿತ್ತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: