ಸಂಚಾರಿ ವಿಜಯ್ ಸರ್ ಜೊತೆಗಿನ ಒಂದಷ್ಟು ನೆನಪುಗಳು.

ಅನಿಲ್ ಗುನ್ನಾಪೂರ

ಜಯಂತ್ ಕಾಯ್ಕಿಣಿ ಅವರು “ಚಿಗುರಿದ ಕನಸು” ಸಿನಿಮಾ ತಯಾರಾಗುವ ಸಂದರ್ಭದಲ್ಲಿ ನಟ ರಾಜಕುಮಾರ ಅವರ ಜೊತೆಗಿನ ಒಂದು ಅಪರೂಪದ ಪ್ರಸಂಗವನ್ನು ತಮ್ಮ ಭಾಷಣದಲ್ಲಿ ಆಗಾಗ ಮೆಲುಕು ಹಾಕುತ್ತಾರೆ. ಜಯಂತ್ ಕಾಯ್ಕಿಣಿ ಅವರ ಮಾತುಗಳನ್ನು ಕೇಳಿದಾಗ ಸಂಚಾರಿ ವಿಜಯ್ ಸರ್ ಜೊತೆಗಿನ ಒಂದು ಘಟನೆ ನನಗೆ ಥಟ್ ಅಂತ ನೆನಪಾಯಿತು. ಇಂದು ವಿಜಿ ಸರ್ ಹುಟ್ದಬ್ಬ. ಅವರ ಒಡನಾಟದಲ್ಲಿನ ನೆನಪುಗಳನ್ನು ಹಂಚಿಕೊಳ್ಳುವುದು ಬಹಳಷ್ಟಿದೆ. ಯಾಕೋ ಗೊತ್ತಿಲ್ಲ. ಅವರ ಬಗ್ಗೆ ಏನೇ ಬರೆಯಲು ಕಣ್ಣೀರು ಒತ್ತರಿಸಿಕೊಂಡು ಬರುತ್ತದೆ. ಇಂದಲ್ಲಾ ನಾಳೆ ಹೇಳಿ ಹಗುರಾಗಬಹುದೇನೋ ಗೊತ್ತಿಲ್ಲ. ಇರಲಿ ಈಗ ಜಯಂತ್ ಕಾಯ್ಕಿಣಿ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಬರೋಣ.

… ಇದು ನಿಜನಾ? ಕೋಟ್ಯಾಂತರ ಅಭಿಮಾನಿಗಳು ಆರಾಧಿಸುವ ದೈವ, ಅಭಿಮಾನಿಗಳ ಪಾಲಿನ ಅಣ್ರಾವ್ರು ನಿಜಕ್ಕೂ ಇಷ್ಟು ಸರಳವಾಗಿ, ಇಷ್ಟೊಂದು ಸೂಕ್ಷ್ಮವಾಗಿ ಇದ್ರಾ? ನಂಬಲು ಕಷ್ಟ ಎನ್ನಿಸಿದರೂ ಅವರ ಬದುಕಿನ ಏರಿಳಿತಗಳನ್ನು, ಸೋಲು ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಅವರ ಪ್ರಬುದ್ಧತೆಯನ್ನು ಕಂಡರೆ ನಿಜ ಎನ್ನಿಸದೆ ಇರಲಾರದು. ಆ ಸಂದರ್ಭ ಹೀಗಿದೆ-
ಜಯಂತ ಕಾಯ್ಕಿಣಿ ಅವರ ಮಾತುಗಳಲ್ಲಿ…. ಕೇಳಿ.

ಚಿಗುರಿದ ಕನಸುದಲ್ಲಿ ಒಂದು ಸನ್ನಿವೇಶ ಬರುತ್ತೆ… ಅನಂತನಾಗ್ ಇದಾರಲ್ಲ.. ಅವ್ರು ಊರು ಬಿಟ್ಟು ಡೆಲ್ಲಿಗೆ ಓಡಿ ಹೊಗ್ತಾರೆ.. ಯಾಕೆ ಹೋಗ್ತಾರೆ ಅಂದ್ರೆ ಅವರಿಗೆ ಒಂದು ಕುರುಡಿ ಹುಡುಗಿ ಜೊತೆಗೆ ಮದುವೆ ಮಾಡ್ತಿನಿ ಅಂತ Force ಮಾಡ್ತಾರೆ. ಕುರುಡಿನ ಮದುವೆ ಆಗಲ್ಲ ಅಂತ ಹೋಗ ಬಿಡ್ತಾರೆ ಅವ್ರು. ಎಲ್ಲಾ ಒಪ್ಕೊಂಡ್ರು ನಡಿತಾ ಇತ್ತು. ನನಗನಸ್ತು ಈ ಅನಂತನಾಗ್ ಅಥವಾ ಹೀರೋ ವ್ಯಕ್ತಿ ಕುರುಡಿಗೆ ಮದುವೆ ಆಗಲ್ಲ ಅಂದ್ರೆ ಸಿನಿಮಾ ದೃಷ್ಟಿಲಿ ಹೀರೋ ಹೇಗೆ ಆಗ್ತಾನೆ? ಅದು ಯಾಕೊ ಸರಿ ಇಲ್ಲ ಅಂದೆ… (ಅದಕ್ಕೆ ಅಣ್ಣಾವ್ರು) ವಿಚಾರ ಮಾಡಿ.. ವಿಚಾರ ಮಾಡಿ ನಾಳೆ ನೋಡೋಣ..‌ ಅಂತದ್ರು.. ಸೋ ನಾನು ಮನೆಗೆ ಬಂದು.. ಥಿಂಕ್ ಮಾಡ್ತಾ ಇದ್ದೆ. ಅವಳನ್ನು ಕುರುಡಿ ಮಾಡೋದು ಬೇಡ ಸಣ್ಣ ಹುಡುಗಿ ಮಾಡೋಣ.. ಅವನು ಅವಳನ್ನು ಎತ್ತಿ ಆಡ್ಸಿರತಾನೆ.. ಮಗು ತರಾ ತಂಗಿ ತರಾ ನೋಡ್ತಿರ್ತಾನೆ.. ಊರಿನ ಹುಡುಗಿ. ಅವಳನ್ನು ಮದುವೆ ಆಗು ಅಂತ ಬರ್ತಾರೆ. ದೂರದ ಸಂಬಂಧ ಬೇರೆ;
ಇವ್ನು ಹೇಳ್ತಾನೆ ಅದು ತಪ್ಪು ಬಾಲ್ಯ ವಿವಾಹ ಆಗುತ್ತೆ. ಅದು ಹಳೇ ಕಾಲದ ಕತೆ ಇದು ತಪ್ಪು. ಅವಳು ನನ್ನ ಮಗು ಇದ್ದ ಹಾಗೆ.. ಇದು ತಪ್ಪು ಅಂತಾನೆ ಆದ್ರು Force ಮಾಡ್ತಾರೆ ಓಡಿ ಹೋಗ್ತಾನೆ ಅಂತ.. ಸೋ ನಾನು ಬೆಳಗ್ಗೆ ಹೋದೆ ಅವ್ರು (ಅಣ್ಣಾವ್ರು) ವಾಕ್ ಮಾಡ್ತಾ ಇದ್ರು.. ನಾನು ಒಬ್ನೆ First ಹೋದ ತಕ್ಷಣ “ಬನ್ನಿ ಕವಿಗಳೇ ಏನು.. ಏನು.. ಯೋಚನೆ ಮಾಡಿದ್ರಿ” ಅಂತ ಕೇಳಿದ್ರು.

ನಾನೆಂದೆ “ಸರ್ ಅದು ಹೀಗೆ ಕುರುಡಿ ಮಾಡೋದು ಬೇಡ.. ಅವಳು ಕುರುಡಿ ಅಲ್ಲ.. ನಾರ್ಮಲ್ ಕಣ್ಣು ಇರುವಂತಹ ಹುಡುಗಿ ಬಟ್ ಸಣ್ಣವಳು. ಹೀಗಾಗಿ ಅವನು ಹೇಳ್ತಾನೆ ತಪ್ಪು ಇದು‌. ಮದುವೆ ಗಿದುವೆ ಮಾಡ್ಕೋಬಾರದು… ಅಂತ ಹಾಗೆ ಹೇಳದಾಗ ಒತ್ತಾಯ ಮಾಡ್ತಾರೆ ಆಗ ಓಡಿ ಹೋಗ್ತಾನೆ” ಆಗ (ಅಣ್ಣಾವ್ರು) ಅವ್ರು ನನ್ನ ಕೈ ಹಿಡಕೊಂಡು
“ಬಾಳ ಒಳ್ಳೆಯ ಕೆಲಸ ಮಾಡಿದ್ರಿ.. ಇಲ್ದಿದ್ರೆ ಕುರುಡಿಯಾಗಿ ಬಾಳ ಕಷ್ಟ ಪಟ್ಟಿರುವಳು ಬದುಕಿನಲ್ಲಿ..” ಎಂದರು.

ನನಗೆ ಮೈ ಜುಂ ಆಗೋಯ್ತು. ಯಾಕಂದ್ರೆ ಅದು ಒಂದು ಕಲ್ಪಿತ ಪಾತ್ರ ಅದು.. ಕಲಾಕೃತಿಯ ಪಾತ್ರದ ಕುರುಡು ಕಳೀತು ಅಂತ ಈ ವ್ಯಕ್ತಿ ಅಷ್ಟು ಅನುಭವಿಸಿಕೊಂಡು ಒಂದು ರೀಲಿಫ್ ಅನುಭವಿಸ್ತಾರೆ ಅಂತಂದ್ರೆ ಎಷ್ಟು ನಿಜವಾದದ್ದು.. ಕಲೆ ಎಷ್ಟು ನಿಜ… ಕಲೆ ಎಷ್ಟು ನಿಜ ಒಬ್ಬ ಕವಿಗೆ.. ಕೆಲವ್ರು ಕೇಳ್ತಾರೆ ವಾಸ್ತವಾನೋ ಒಬ್ಬ ಬರಹಗಾರನಿಗೆ.. ಕಲೆಗಾರನಿಗೆ ನಾನು ಬರೆಯೋದೆ ನನಗೆ ವಾಸ್ತವ. ಅದಕ್ಕಿಂತ ಮಿಗಿಲಾದ ಬೇರೆ ವಾಸ್ತವ ಇಲ್ವೇ ಇಲ್ಲ.. ಅದು ಅಲ್ಟಿಮೇಟ್ ರೀಯಾಲಿಟಿ When I Write ಬೇರೆ… ಹಾಗೆ ಒಬ್ಬ ಕಲಾವಿದನಿಗೆ ಅವನು ಅಭಿನಯಿಸುವಾಗಲೇ ನಿಜ ಅವನಿಗೆ.. ಇಲ್ಲಾಂದ್ರೆ ಅವನಿಗೆ ಅಭಿನಯಸೋಕೆ ಆಗಲ್ಲ. ಈ ತರಹ ಬೇರೆಬೇರೆ ರೀತಿಯಲ್ಲಿ ರಾಜಕುಮಾರ ಕನ್ನಡ ಪೋಷಿಸಿದವ್ರು ಅಲ್ವಾ.. ಹೀಗಾಗಿ ನನಗೆ ತುಂಬಾ ಆ ಸರಣಿ ಕೂಡಾ ನನ್ನನ್ನು ಬೆಳೆಸಿದೆ.

ಈಗ ಸಂಚಾರಿ ವಿಜಯ್ ಸರ್ ವಿಷಯಕ್ಕೆ ಬರೋಣ.
ಅವು ನಾನು(2009)ಆಗ ತಾನೇ ಇಂಜಿನಿಯರಿಂಗ್ ಓದಲು ಬೆಂಗಳೂರು ಸೇರಿದ ಆರಂಭಿಕ ದಿನಗಳು. ಅಲ್ಲಿ ಪರಿಚಯದವ್ರು ಅಂತ ಯಾರೊಬ್ಬರೂ ಇರಲಿಲ್ಲ. ಸಾಹಿತ್ಯ ಮತ್ತು ಸಿನಿಮಾ ಕುರಿತು ಒಂದಷ್ಟು ಹುಂಬ ಕನಸುಗಳು ಜೊತೆಗಿದ್ದವು ಎನ್ನುವುದನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ಪ್ರತಿ ಶನಿವಾರ ಮತ್ತು ರವಿವಾರ ಸಾಹಿತ್ಯದ ಕಾರ್ಯಕ್ರಮಗಳು ಎಲ್ಲಿಯೇ ನಡೆದರೂ ಹಾಜರು ಆಗಿರುತ್ತಿದ್ದೆ.

ವಿದ್ಯಾಪೀಠ ಸರ್ಕಲ್ ಲಿ ಇರುವ M&E ಹಾಸ್ಟೆಲ್ ಲಿ ರೂಮ್ ನಂಬರ್ -06 ರಲ್ಲಿ ಕನಸುಗಳು ಚಿಗುರೊಡೆಯಲು ಆರಂಭವಾಗಿದ್ದವು. ಆಗಲೇ ವಿಜಿ ಸರ್ ಪರಿಚಯವಾಗಿತ್ತು. ಆದಾದ ಮೇಲೆ ಅವರು ಪ್ರತಿಭೇಟಿಯಲ್ಲಿಯೂ ‘ಬನ್ರೀ ಅನಿಲ್’ ಎಂದು ಕರೆದು SLV ಎದುರು ಬೈಟು ಟೀ ಕುಡಿಯುತ್ತ ಕೂತು ನನ್ನ ಓದು ಬರವಣಿಗೆಯ ಬಗ್ಗೆ ವಿಚಾರಿಸುತ್ತ ತಮ್ಮ ಮುಂದಿನ ನಾಟಕಗಳ ಬಗ್ಗೆ ಮತ್ತು ಸಿನಿಮಾ ಕನಸುಗಳನ್ನು ಹಂಚಿಕೊಳ್ಳುವ ಮಟ್ಟಿಗೆ ಆತ್ಮೀಯರಾಗಿದ್ದರು.
‘ಸರ್ ಮುಂದೊಮ್ಮೆ ನಾನು ನಿಮಗಾಗಿ ಕತೆ ಬರೀತಿನಿ.. ನೀವೇ ಹೀರೋ ಆಗಿ ನಟಿಸಬೇಕು’ ಎಂದಿದ್ದೆ. ‘ಬೇಗ ಮಾಡ್ರೀ ಅನಿಲ್ ವಯಸ್ಸು ಆಗ್ತಿದೆ’ ಅಂತ ನಕ್ಕಿದ್ರು. ಮತ್ತು ತಾವು ನಟಿಸುತ್ತಿದ್ದ ನಾಟಕಗಳಿಗೆ ನೋಡಲು ಬರಲು ಟಿಕೆಟ್ ಕೊಡ್ತಾ ಇದ್ರು. ಅಂದೊಮ್ಮೆ ಅವರ ರೂಮಿಗೆ ಹೋಗಿದ್ದಾಗ ತಾವು ಬಿಡಿಸಿದ ಚಿತ್ರಗಳನ್ನು ತೋರಿಸಿದ್ದರು. ಆ ಚಿತ್ರಗಳಲ್ಲಿ ಐಶ್ವರ್ಯ ರೈ, ಸಚಿನ್, ದ್ರಾವಿಡ್ ಇದ್ದ ಅಸ್ಪಷ್ಟ ನೆನಪು. ಅವರೊಬ್ಬ ಅದ್ಭುತ ಚಿತ್ರ ಕಲಾವಿದರಾಗಿದ್ದರು ಅನ್ನಿ. ಒಂದು ದಿನ ಬೆಳಗ್ಗೆ ಪತ್ರಿಕೆ ನೋಡಿದಾಗ ಇವರದೇ ಮುಂದಾಳತ್ವದಲ್ಲಿ ಸಂಗೀತ ಕಚೇರಿ ಇತ್ತು. ನನಗೆ ಗಾಬರಿಯೋ ಗಾಬರಿ‌. ಒಂದು ಕಡೆ ನಾಟಕ, ಉಪನ್ಯಾಸಕ ವೃತ್ತಿ, ಚಿತ್ರಕಲೆ, ಸಂಗೀತ ಹೀಗೆ ಹತ್ತುಹಲವು ಕೆಲಸಗಳಲ್ಲಿ ಏಕಕಾಲಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದರು.

ಆಮೇಲೆ ನಾನು ನೌಕರಿಗೆ ಸೇರಿ ಊರ ಕಡೆ ಬಂದ ಮೇಲೆಯೂ ಅವರೊಂದಿನ ನಂಟು ಕಡಿಮೆ ಆಗಿರಲಿಲ್ಲ. ಅವತ್ತು ಅವರು ನಟಿಸಿದ “ನಾನು ಅವನಲ್ಲ ಅವಳು” ಸಿನಿಮಾಗೆ “ಅತ್ಯುತ್ತಮ ನಟ” ರಾಷ್ಟ್ರಪ್ರಶಸ್ತಿ ಬಂದಾಗ ನಾನಂತೂ ನನಗೆ ಬಂದಷ್ಟು ಕುಣಿದು ಕುಪ್ಪಳಿಸಿದ್ದೆ. ಮತ್ತು ಅದೇ ವರ್ಷ “ಮಂಸೋರೆ ಸರ್” ನಿರ್ದೇಶನ ‘ಹರಿವು’ ಸಿನಿಮಾಗೂ ರಾಷ್ಟ್ರಪ್ರಶಸ್ತಿ ಬಂದಿತ್ತು. ಈ ಎರಡೂ ಚಿತ್ರಗಳಲ್ಲಿ ಸಂಚಾರಿ ವಿಜಯ್ ಅವರೇ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಆಮೇಲೆ ಸಂಚಾರಿ ವಿಜಯ್ ಅವರು ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಹೋದಾಗ ಕಾಲ್ ಮಾಡಿ ತಮಗೆ ಬರುತ್ತಿರುವ ಹೊಸ ಹೊಸ ಆಫರ್ ಗಳ ಬಗ್ಗೆ ಖುಷಿ ವ್ಯಕ್ತಪಡಿಸುತ್ತಾ ಮತ್ತು ಆ ದಿನ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗಳ ಬಗ್ಗೆ ಕುತೂಹಲದಿಂದ ವಿಚಾರಿಸಿದ್ದರು.

ನಂತರದಲ್ಲಿ ಸಂಚಾರಿ ವಿಜಯ್ ಸರ್ ಜೊತೆ ಸಿನಿಮಾ, ಸಾಹಿತ್ಯದ ಕುರಿತು ಚರ್ಚೆ ನಡೆದೇ ಇತ್ತು. ತುಂಬಾ ಭರವಸೆ ಇದೆ ನಿಮ್ಮ ಮೇಲೆ. ಖಂಡಿತವಾಗಿಯೂ ಜೊತೆಯಾಗಿ ಕೆಲಸ ಮಾಡೋಣ ಎಂದಿದ್ದರು. ಸಣ್ಣಪುಟ್ಟ ಬೇಜಾರಾದಾಗ ಅಥವಾ ಏನಾದರೂ ವಿಶೇಷ ಅನ್ನಿಸುವ ವಿಚಾರಗಳು ಇದ್ದಾಗ ನಾನು ಮೊದಲಿಗೆ ಅವರೊಡನೆ ಹಂಚಿಕೊಳ್ಳುತ್ತಿದ್ದೆ. ಅವರ ಸಲಹೆಗಳು ನನ್ನಲ್ಲಿ ಮತ್ತಷ್ಟು ಆತ್ಮವಿಶ್ವಾಸ ತುಂಬುತ್ತಿದ್ದವು. ಹೀಗೆ ಒಂದು ದಿನ ನನ್ನ ಕನಸುಗಳ ವಿಷಯವಾಗಿ ಬೇಜಾರು ವ್ಯಕ್ತಪಡಿಸಿದಾಗ.. ಅವರು ಹೀಗೆ ರಿಪ್ಲೇ ಮಾಡಿದ್ದರು.

You are on right track, right things fall in right time don’t worry just go ahead with your passion
29 Jun 2018 at 7:48 PM.

ನನ್ನ ಚೊಚ್ಚಲ ಕಥಾಸಂಕಲನ ‘ಕಲ್ಲು ಹೂವಿನ ನೆರಳು’ ಕೃತಿಯಲ್ಲಿ ‘ಚುಕ್ಕಿ ಕೇಳಿದ ಕತೆ’ ಅಂತ ಪುಟ್ಟ ಕತೆ ಇದೆ. ಆ ಕತೆಗೆ ರಾಜ್ಯಮಟ್ಟದ ಒಂದು ಸ್ಪರ್ಧೆಯಲ್ಲಿ ಪ್ರಶಸ್ತಿ ಲಭಿಸಿತ್ತು. ಫೇಸ್ ಬುಕ್ ಮತ್ತು ವಾಟ್ಸಪ್ ಲಿ ಹಾರೈಕೆಗಳ ಸುರಿಮಳೆ ಬಂದು ಮತ್ತು ಪತ್ರಿಕೆಯಲ್ಲಿ ವರದಿ ಪ್ರಕಟವಾಗಿ ನನ್ನ ಹೆಸರು ಓಡಾಡಿ ಕಥಾ ಬರವಣಿಗೆಯ ಬಗ್ಗೆ ನನ್ನಲ್ಲಿ ಒಂದಷ್ಟು ಆತ್ಮವಿಶ್ವಾಸ ಮೂಡಲು ಕಾರಣವಾಗಿತ್ತು. ಆಗ ಫೇಸ್‌ಬುಕ್‌ ಲಿ ಲೈವ್ ಬಂದು ಕತೆ ಕವಿತೆಗಳನ್ನು ಓದುವ ಸರಣಿ ಕಾರ್ಯಕ್ರಮಗಳು ಪ್ರಾರಂಭವಾಗಿದ್ದವು.

ಕತೆಗೆ ಪ್ರಶಸ್ತಿ ಬಂದ ಹುರುಪಿನಲ್ಲಿ ಸಂಚಾರಿ ವಿಜಯ್ ಸರ್ ಅವರಿಗೆ ಒಂದು ಮೇಸೆಜ್ ಹಾಕಿ ಫೇಸ್ ಬುಕ್ ಲೈವ್ ಬಂದು ನನ್ನದೊಂದು ಕಥಾವಾಚನ ಮಾಡಬಹುದಾ ಸರ್? ಎಂದು ಕೇಳಿದೆ. ಅವರು ಒಪ್ಪಿಕೊಳ್ಳುತ್ತಾರೆಂಬುದು ನನಗೆ ಗೊತ್ತಿತ್ತು. ಆದರೂ ಅವರ Busy schedule ನಲ್ಲಿ ನನಗಾಗಿ ಸಮಯ ಹೊಂದಿಸಿಕೊಂಡು ಓದಬೇಕಲ್ಲ ಎಂಬ ಸಣ್ಣ ಅಳುಕಿನಲ್ಲಿಯೇ ಕತೆಯನ್ನು ಕಳಿಸಿದ್ದೆ.
ಸಂಚಾರಿ ವಿಜಯ್- Odi nantara tilisuve….
ಅಂದಿದ್ರು..
ಕತೆ ಓದಿದ ಮೇಲೆ…
ಸಂಚಾರಿ ವಿಜಯ್- ಅಂದರೆ ಚುಕ್ಕಿಯ ತಾಯಿಯ ಕತೆಯೇ ಅದು?
ಆ ಪುಟ್ಟ ಮಗುವಿನ ಮುಂದೆ ಯುವರಾಣಿಯ ಅಂಗಸೌಷ್ಟವ ನೋಡುತ್ತಿದ್ದ ನಕ್ಷತ್ರ ಎಂದಾಗ ಆ ಮಗು ಹೇಗೆ ಮತ್ತು ಏನೆಂದು ಕಲ್ಪಿಸಿಕೊಳ್ಳುವುದು? ಮಗುವಿನ ಮೇಲೆ ಯಾವ ರೀತಿಯ ಪರಿಣಾಮ ಬೀರುವುದು?
ನಾನು: ಚುಕ್ಕಿ ತಾಯಿಯ ಕತೆಯೇ ಎನ್ನಬಹುದು ಸರ್.. ಅಂಗಸೌಷ್ಟವದ ಕುರಿತ ನಿಮ್ಮ ಅಭಿಪ್ರಾಯ
ನಿಜ ಸರ್.. ಆದರೆ ಕಥೆಯ ದೃಷ್ಟಿಯಲ್ಲಿ ಕಲ್ಪನೆ ಇರುವುದರಿಂದ ವಿವಾದಾಸ್ಪದ ವಿಷಯ ಅನಿಸುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ.

ಮತ್ತು ಕಥೆಯಲ್ಲಿ ಸಣ್ಣಪುಟ್ಟ ಗೊಂದಲ ಅನ್ನಿಸಿದರೆ.. ಮುಂದೆ ಯಾವತ್ತಾದರೂ ಬೇರೆ ಕತೆ ಓದುವಿರಂತೆ.. ಸರ್
ಸಂಚಾರಿ ವಿಜಯ್- ಗೊಂದಲ ಅನ್ನುವುದಕ್ಕಿಂತ ಮಗುವಿನ ಮನಸ್ಥಿತಿಯ ಬಗ್ಗೆ ಚಿಂತಿಸಿದೆ. ಆ ಒಂದು ಸಾಲನ್ನು ತಪ್ಪಿಸಬಹುದಲ್ಲವೇ ?

ನಾನು-ಅವಶ್ಯಕವಾಗಿ ತಪ್ಪಿಸಬಹುದು ಸರ್.. ಕಥೆಯ ಆಶಯಕ್ಕೆನು ದಕ್ಕೆ ಬರುವುದಿಲ್ಲ.

ಸಂಚಾರಿ ವಿಜಯ್- ಆಗಲಿ ಓದೋಣ.

ಮೇಲ್ನೋಟಕ್ಕೆ ಆ ಕತೆಯ ಕುರಿತು ಸಂಚಾರಿ ವಿಜಯ್ ಸರ್ ಅವರ ಅಭಿಪ್ರಾಯ ಸರಳ ಎನ್ನಿಸಿದರೂ ಕತೆಯೊಳಗಿನ ಪಾತ್ರದಲ್ಲಿನ ಒಂದು ‘ಮಗುವಿನ ಮನಸ್ಥಿತಿಯ ಬಗ್ಗೆ ಚಿಂತಿಸಿದೆ’ ಎಂಬ ಮಾತು ಬಹಳ ತೂಕದ್ದು. ಅಬ್ಬಾ! ಎಷ್ಟೊಂದು ಸೂಕ್ಷ್ಮತೆ ಇದು. ಕತೆ ಬರೆಯುವಾಗ ನಮಗೆ ಗೊತ್ತಿಲ್ಲದ ಹಾಗೆ ಕತೆಯಲ್ಲಿ ಏನೇನೋ ಮೂಡಿಬಿಟ್ಟಿರುತ್ತದೆ. ಕತೆಯೊಳಗಿನ ಪಾತ್ರಗಳ ಬಗ್ಗೆ ಹೀಗೂ ಯೋಚಿಸಬಹುದಾ!? ಸಾರ್ವಜನಿಕವಾಗಿ ಒಂದು ಕತೆಯನ್ನು ಓದುವಾಗ ಇರಬೇಕಾದ ಎಚ್ಚರಿಕೆ ಮತ್ತು ಸೂಕ್ಷ್ಮತೆಯ ಬಗ್ಗೆ ಅವರು ಆಲೋಚನೆ ಮಾಡಿದ್ದರು. ಅದರಲ್ಲೂ ಆ ಕತೆಯಲ್ಲಿರುವ ಪುಟ್ಟ ಹುಡುಗಿಯ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದರು.
ನಿಜಕ್ಕೂ ಸಾಹಿತ್ಯದ ಕುರಿತು ಅವರಲ್ಲಿರುವ ಗಂಭೀರತೆ ನನಗೆ ಅಚ್ಚರಿ ಹುಟ್ಟಿಸಿತ್ತು.

ಜಯಂತ್ ಕಾಯ್ಕಿಣಿ ಅವರು ಪ್ರಸ್ತಾಪಿಸಿದ ‘ಚಿಗುರಿದ ಕನಸು’ ಸಿನಿಮಾ ಸಂದರ್ಭದಲ್ಲಿ ‘ಅಣ್ಣಾವ್ರು’ ಯೋಚಿಸಿದ ಆಶಯಕ್ಕೂ ‘ಸಂಚಾರಿ ವಿಜಯ್ ಸರ್’ ಅವರು ನನ್ನ ‘ಚುಕ್ಕಿ ಕೇಳಿದ ಕತೆ’ಯ ಓದಿ ಯೋಚಿಸಿದ ಆಶಯಕ್ಕೂ ಒಂದಕ್ಕೊಂದು ತಾಳೆ ಆದ ಹಾಗೆ ಅನ್ನಿಸಿತು. ಹೀಗಾಗಿ ತಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು.

ನನ್ನ ಚೊಚ್ಚಲ ಕಥಾಸಂಕಲನ ‘ಕಲ್ಲು ಹೂವಿನ ನೆರಳು’ ಕೃತಿಯಲ್ಲಿ ಸಂಚಾರಿ ವಿಜಯ್ ಸರ್ ಅವರ ‘ಚುಕ್ಕಿ ಕೇಳಿದ ಕತೆ’ಯ ಕುರಿತು ಅವರು ನೀಡಿದ ಅಭಿಪ್ರಾಯವನ್ನು ಹಾಕಿರುವೆ ಮತ್ತು ಸಂಚಾರಿ ವಿಜಯ್ ಅವರ ಆತ್ಮೀಯ ಗೆಳೆಯರು ಮತ್ತು ನನ್ನ ಇಷ್ಟದ ನಿರ್ದೇಶಕರಾದ ಮಂಸೋರೆ ಸರ್ ಅವರು ಸಹ ನನ್ನ ಕತೆಗಳನ್ನು ಓದಿ ಅಭಿಪ್ರಾಯ ಹಂಚಿಕೊಂಡಿದ್ದಾರೆ ಅದು ಸಹ ಕೃತಿಯಲ್ಲಿ ಇದೆ. ಸಂಚಾರಿ ವಿಜಯ್ ಸರ್ ಇದನ್ನೆಲ್ಲ ನೋಡಿದ್ದರೆ ಬಹಳ ಖುಷಿ ವ್ಯಕ್ತಪಡಿಸುತ್ತಿದ್ದರು‌. ತುಂಬು ಪ್ರೀತಿ ಅಭಿಮಾನದಿಂದ ಸಂಚಾರಿ ವಿಜಯ್ ಸರ್ ಅವರಿಗೆ ನನ್ನ ‘ಕಲ್ಲು ಹೂವಿನ ನೆರಳು’ ಕೃತಿಯನ್ನು ಅರ್ಪಣೆ ಮಾಡಿರುವೆ. ಸಂಚಾರಿ ವಿಜಯ್ ಸರ್ ಜೊತೆಗಿನ ನೆನಪುಗಳ ಕುರಿತು ಬರೆಯುವುದು ಬಹಳಷ್ಟು ಬಾಕಿ ಇದೆ… ಬರೆಯುವೆ.

ಜನ್ಮದಿನದ ಶುಭಾಶಯಗಳು ಸಂಚಾರಿ ವಿಜಯ್ ಸರ್.

‍ಲೇಖಕರು Admin

July 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: