ಜಿ ಎನ್ ನಾಗರಾಜ್ ಅಂಕಣ- ಲೈಂಗಿಕ ಜೋಡಿಗಳ ಇಚ್ಛಾ ಸಂಬಂಧ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

16

ಒಬ್ಬ ಹುಡುಗಿಯನ್ನು ಕಾಡಿನಲ್ಲಿ ಹಣ್ಣು,ಗೆಡ್ಡೆ ಗೆಣಸು ಆರಿಸುತ್ತಿರುವಾಗ ನೋಡಿದ ಹುಡುಗ ಆಕೆಯನ್ನು ಮೆಚ್ಚಿ ಅವಳೊಡನೆ ಸಂಬಂಧ ಇಟ್ಟುಕೊಳ್ಳಬಯಸುತ್ತಾನೆ. ಅವಳು ತನ್ನ ತಾಯಿ,ಅಜ್ಜಿ,ಸೋದರ ಮಾವಂದಿರೊಡನೆ ವಾಸ ಮಾಡುವ “ತರವಾಡಿ”ಗೆ ಹೋಗಿ ಎರಡು ಮುಂಡು (ಸೀರೆಯನ್ನು ಎರಡು ತುಂಡು ಮಾಡಿ ಉಡುವ ಪದ್ಧತಿಯಲ್ಲಿ) ಗಳನ್ನು ನೀಡುತ್ತಾನೆ. ಅದನ್ನು ಅವಳು ಪಡೆದುಕೊಂಡರೆ ಅವನ ಜೊತೆ ಕೂಡುವುದನ್ನು ಒಪ್ಪಿಕೊಂಡಂತೆ.

ನಂತರ ಅವರ “ಸಮ್ಮಂದ”ದ ಜೋಡಿ ಜೀವನ ಆರಂಭ. ಹೆಣ್ಣು ತನ್ನ ಅಜ್ಜಿಯಂದಿರ “ತರವಾಡಿ”ನಲ್ಲಿಯೇ ಇರುತ್ತಾಳೆ. ಗಂಡು ಅಲ್ಲಿಗೆ ರಾತ್ರಿ ಹೋಗಿ ಅವಳೊಡನೆ ಕೂಡಿ ಬೆಳಗ್ಗೆ ತನ್ನ ಅಜ್ಜಿಯಂದಿರ ತರವಾಡಿಗೆ ಹಿಂದಿರುಗುತ್ತಾನೆ. ತಾನು ಕೂಡುವ ಹೆಣ್ಣಿನ ತರವಾಡಿನ ಜೊತೆ ಬೇರಾವ ಸಂಬಂಧವೂ ಇಲ್ಲ ಎನ್ನುವಷ್ಟು ಕಡಿಮೆ. ಯಾವುದಾದರೂ ದಿನ ಆಕೆ ಕೂಡುವಿಕೆಗೆ ಸಿದ್ಧಳಿಲ್ಲದಿದ್ದರೆ ಬಾಗಿಲ ಮುಂದೆ ಕಾಲು ತೊಳೆದುಕೊಳ್ಳುವುದಕ್ಕೆ ಇಡುವ ನೀರಿನ ಚೊಂಬನ್ನು ಮಗುಚಿ ಇಡುತ್ತಾಳೆ. ಅದನ್ನು ನೋಡಿದ ಗಂಡು ನನಗೆ ಇಂದು ಅವಳೊಡನೆ ಕೂಡುವಿಕೆ ಇಲ್ಲ ಎಂದು ಹಿಂದಿರುಗುತ್ತಾನೆ.

ಈ ಸಮ್ಮಂದದಿಂದ ಹುಟ್ಟಿದ ಮಕ್ಕಳು ಹೆಣ್ಣಿನ ತರವಾಡಿಗೆ ಸೇರುತ್ತಾರೆ. ಅವರ ಪಾಲನೆ, ಕಲಿಕೆ ಮೊದಲಾದ ಹೊಣೆಗಳೆಲ್ಲವೂ ಹೆಣ್ಣಿನ ತರವಾಡಿಗೆ ಸೇರಿದ್ದು. ಅಂದರೆ ತಾಯಿ, ದೊಡ್ಡಮ್ಮ, ಚಿಕ್ಕಮ್ಮಗಳು, ಅಜ್ಜಿಯಂದಿರು, ಸೋದರಮಾವಂದಿರುಗಳಿಗೆ ಸೇರಿದ್ದು. ಇಂತಹ ತರವಾಡುಗಳಲ್ಲಿ ಐವತ್ತು ಅರವತ್ತು ಜನರಿಂದ ಇನ್ನೂರು ಜನದವರೆಗೂ ಇರಬಹುದು. ಮಕ್ಕಳ ಹೊಣೆಯನ್ನು  ಅವರ ಬೇಸಾಯ ಮತ್ತಿತರ ವೃತ್ತಿಗಳ ಸಂಪಾದನೆಯ ಮೂಲಕ ಎಲ್ಲರೂ ಕೂಡಿ ನಿರ್ವಹಿಸುತ್ತಾರೆ. ಆ ಮಕ್ಕಳು ಅವರವರ ವಯಸ್ಸಿಗೆ ತಕ್ಕಂತೆ ಈ ವೃತ್ತಿಗಳಲ್ಲಿ ಭಾಗಿಯಾಗುತ್ತಾರೆ. ತಂದೆ ತನ್ನ ಮಕ್ಕಳಿಗೆ ಯಾವ ಆಸ್ತಿ ನೀಡುವಂತಿಲ್ಲ. ತಾನು ಹೆಣ್ಣಿನ ತರವಾಡಿಗೆ ಹೋದಾಗ ತನ್ನ ಮಕ್ಕಳೊಡನೆ ಕಾಲ ಕಳೆಯಬಹುದು. ಸಣ್ಣ ಪುಟ್ಟ ಉಡುಗೊರೆ ಕೊಡಬಹುದು.

ಪ್ರತಿ ಮಗುವಿನ ತಂದೆ ಯಾರು ಎಂಬುದು ನಿರ್ದಿಷ್ಟವಾಗಿ ಗುರುತಿರುತ್ತದೆ. ಹಾಗೆ ತಂದೆ ಯಾರು ಎಂಬುದು ಗುರುತಾಗದಿದ್ದರೆ ಆಗ ಹೆಣ್ಣಿಗೆ ಕಳಂಕ ಎಂಬ ಭಾವನೆ ಇದೆ. ಇದು ಒಂದು ಜೋಡಿಯ ಸಮ್ಮಂದ ಸಾಕಷ್ಟು ದೀರ್ಘವಾಗಿರುವಂತೆ ಹೆಣ್ಣಿನ ಮೇಲೆ ಸಾಮಾಜಿಕ ಒತ್ತಡವನ್ನು ಉಂಟುಮಾಡುತ್ತದೆ. ಅಲ್ಲದೆ ಲೈಂಗಿಕ ಸಂಬಂಧದ ಹೊರತು ಬೇರೆ ನಿತ್ಯ ಜೀವನದ ಒಡನಾಟಗಳಿಲ್ಲದಿರುವುದರಿಂದ ಗಂಡು ಹೆಣ್ಣಿನ ನಡುವೆ ಭಿನ್ನಾಭಿಪ್ರಾಯಗಳಿಗೆ ಅವಕಾಶ ಕಡಿಮೆ. ಆದ್ದರಿಂದ ಸಾಕಷ್ಟು ದೀರ್ಘವಾಗಿರುತ್ತವೆ. ಕನಿಷ್ಟ ಒಂದು ಮಗು ಹುಟ್ಟುವವರೆಗಾದರೂ ಸಮ್ಮಂದ ಉಳಿಯುವ ಸಾಧ್ಯತೆ ಹೆಚ್ಚು. ಸತ್ಯಕಾಮನ ತಾಯಿ ಜಾಬಾಲಳಂತೆ ಅಥವಾ ಎಲ್ಲಮ್ಮನಂತೆ “ನಿನ್ನ ತಂದೆಯ ಗುರುತ ನನಗಿಲ್ಲೋ ರಾಮ” ಎಂದು ಹೇಳುವ ಸಮಸ್ಯೆ ಇರುವುದಿಲ್ಲ.

ಹೆಣ್ಣಿಗಾಗಲೀ, ಗಂಡಿಗಾಗಲೀ ಈ ಸಂಬಂಧ ಬೇಡವೆಂದರೆ ಬಿಡುಗಡೆಯಾಗುವುದು ಕೂಡಾ ಬಹಳ ಸುಲಭ. ಹೆಣ್ಣು ತನ್ನ ನಿವಾಸದ ಬಾಗಿಲ ಮುಂದೆ ಗಂಡಿನ ಚಪ್ಪಲಿ ಇರಿಸಿದರೆ ಇನ್ನು ಮುಂದೆ ನನ್ನ ಜೊತೆ ಹೆಣ್ಣಿಗೆ ಸಂಬಂಧ ಬೇಡ ಎಂಬ ಸೂಚನೆ. ಮರುಮಾತನಾಡದೆ ಅವನು ಹಿಂದಿರುಗುತ್ತಾನೆ. ಅವಳು ಬೇರೆಯವರೊಡನೆ ಸಮ್ಮಂದ  ಬೆಳೆಸಬಹುದು,ಅವನೂ ಕೂಡಾ ತಾನು ಬಯಸುವ ಬೇರೆ ಹೆಣ್ಣಿಗೆ “ಮುಂಡು” ನೀಡಿ ಒಪ್ಪಿಕೊಂಡರೆ ಹೊಸ ಸಮ್ಮಂದ ಆರಂಭಿಸುತ್ತಾನೆ.

ಇದು ತಾಯಿ ಕೇಂದ್ರಿತ ಸಮಾಜ ಮತ್ತು ಮರುಮಕ್ಕತ್ತಾಯ ಎಂಬ ಅಳಿಯ ಸಂತಾನ ಪದ್ಧತಿಯನ್ನು ಇತ್ತೀಚಿನವರೆಗೂ ಉಳಿಸಿಕೊಂಡು ಬಂದ ಕೇರಳದ ನಾಯರ್ ಸಮುದಾಯದ ಜೋಡಿ ಲೈಂಗಿಕ ಸಂಬಂಧದ ಬುಡಕಟ್ಟು ಮೂಲ ಪದ್ಧತಿ. ಇದರಲ್ಲಿ ವಿವಾಹ ಎಂಬ ಕಟ್ಟುನಿಟ್ಟಿನ ಶಾಸ್ತ್ರಗಳ ನಿರ್ದೇಶನಕ್ಕೊಳಗಾದ ಪದ್ಧತಿಯೂ ಇಲ್ಲ. ವೈಭವದ ಮದುವೆಗಳೂ ಇಲ್ಲ. ವಿವಾಹ ವಿಚ್ಛೇದನವೆಂಬ ದೀರ್ಘ ಕಾಲದ ಸಂಕಟಗಳೂ ಇಲ್ಲ. ಪ್ರತಿಯೊಬ್ಬರೂ ತಮ್ಮ ಹುಟ್ಟಿನೊಂದಿಗೆ ಬಂದ ತಾಯಿ, ಮಕ್ಕಳು, ಮೊಮ್ಮಕ್ಕಳು, ಅಣ್ಣ ತಮ್ಮ ಅಕ್ಕ ತಂಗಿ ಎಂಬ ಸಹಜ ಸಂಬಂಧಗಳ ಪರಿಧಿಯಲ್ಲಿಯೇ ಜೀವಿಸುತ್ತಾರೆ.

ಸಮ್ಮಂದಗಳಲ್ಲಿ ವಿರೂಪಗಳು :
ರಾಜಪ್ರಭುತ್ವದ ಕಾಲಘಟ್ಟದಲ್ಲಿ ,ಈ  ಸಹಜ ಸಂಬಂಧಗಳಲ್ಲಿ ಅನೇಕ ವಿರೂಪಗಳು ಕಾಣಿಸಿಕೊಂಡವು. ನಂಬೂದರಿ ಬ್ರಾಹ್ಮಣರೊಡನೆ ” ಸಮ್ಮಂದ ” ಕ್ಕೆ ಅವಕಾಶ, ನಂಬೂದರಿಗಳಲ್ಲಿ ಹಿರಿಯ ಮಗನಿಗೆ ಮಾತ್ರ ತನ್ನ ಜಾತಿಯ ಹೆಣ್ಣಿನೊಡನೆ ಮದುವೆ , ಉಳಿದವರಿಗೆಲ್ಲ ನಾಯರ್ ಹೆಣ್ಣುಗಳೊಡನೆ ” ಸಮ್ಮಂದ ” ಎಂಬ ವಿರೂಪಗಳು; ಬ್ರಾಹ್ಮಣರೊಡನೆ, ರಾಜ‌ಮನೆತನದವರೊಡನೆ ಸಮ್ಮಂದ ತಮ್ಮದೇ ನಾಯರ್ ಸಮುದಾಯದ ಗಂಡುಗಳೊಡನೆ ಸಮ್ಮಂದಕ್ಕಿಂತ ಎಂಬ ಉತ್ತಮ ಎಂಬ  ಮೇಲು ಕೀಳುಗಳು ಈ ಪದ್ಧತಿಯಲ್ಲಿ ನುಸುಳಿವೆ. ಹಿರಿಯ ಸೋದರಮಾವನಿಗೆ ಕಾರಣವರ್ ಎಂಬ ಸ್ಥಾನ ನೀಡಿ ಇಡೀ ತರವಾಡಿನ ಆಸ್ತಿ, ಬದುಕಿನ ವ್ಯವಹಾರಗಳು, ಹುಡುಗಿಯರಿಗೆ ಸಮ್ಮಂದ ಜೋಡಿಸುವುದು ಅಥವಾ ಒಪ್ಪಿಗೆ ನೀಡುವುದು ಇತ್ಯಾದಿಗಳ ಮೂಲಕ  ಪುರುಷಾಧಿಕಾರದ ವ್ಯವಸ್ಥೆ ಸ್ಥಾಪಿಸಲ್ಪಟ್ಟಿತು. ಆದರೂ ಲೈಂಗಿಕ ಸಂಬಂಧಗಳಲ್ಲಿ ಮೂಲ ಸರಳತೆಯ ಅಂಶಗಳು ಬಹು ಕಾಲ ಉಳಿದುಕೊಂಡಿದ್ದವು. ಭೂಮಿಯನ್ನು ಒಟ್ಟಾಗಿ ಸಾಗುವಳಿ ಮಾಡಿ ಜೀವಿಸುವ ಸಾವಿರಾರು ವರ್ಷದಿಂದ ಬಳಕೆಯಲ್ಲಿದ್ದ ಜೀವನದ ಮೇಲೆ ಆಧರಿಸಿದ್ದ ತರವಾಡು  ಪದ್ಧತಿ ಬದಲಾಯಿತು. ವಿವಿಧ ವೃತ್ತಿಗಳನ್ನು ಕೈಗೊಂಡು ನೆಲೆವನೆಯಿಂದ ದೂರಾಗಿ ಜೀವಿಸುವ ಆಧುನಿಕ ಜೀವನದ ಒತ್ತಡಗಳಿಗೆ ಸಿಲುಕಿ  20 ನೆಯ ಶತಮಾನದ ಎರಡನೇ ಅರ್ಧ ಭಾಗದಿಂದಷ್ಟೇ ಉಳಿದವರಂತೆ ವಿವಾಹ,ಪತಿ ಪತ್ನಿ ಸಂಬಂಧ, ಒಂಟಿ ಕುಟುಂಬಗಳ ಪದ್ಧತಿ ಅಸ್ತಿತ್ವಕ್ಕೆ ಬಂದಿದೆ.

ಜೋಡಿ ಜೀವನ ವಿವಾಹ ಪದ್ಧತಿಯೆಡೆಗೆ ಸಾಗುವ ದಾರಿಯಲ್ಲಿವೆ.
ಈ ರೀತಿಯ ಲೈಂಗಿಕ ಜೋಡಿ ಜೀವನದ ಪದ್ಧತಿ ಕೇವಲ ತಾಯಿ ಕೇಂದ್ರಿತ ಸಮಾಜಗಳಾಗಿ ಉಳಿದಿರುವೆಡೆ ಮಾತ್ರವೇ ಅಲ್ಲದೆ ಭಾರತದ ಎಲ್ಲೆಡೆ ವ್ಯಾಪಕವಾಗಿತ್ತು. ಪುರುಷಾಧಿಕಾರದ ಆರಂಭದ ಹಂತಗಳಲ್ಲಿಯೂ ಇದ್ದಿತು ಎಂಬುದಕ್ಕೆ ಹಲವು ಉದಾಹರಣೆಗಳಿವೆ.

“ಗಂಡಾಗಲಿ ಹೆಣ್ಣಾಗಲಿ ಮನಸು ಬೆರೆಯಬೇಕು ”

“ಗಂಡಾಗಲಿ ಹೆಣ್ಣಾಗಲಿ ಮನಸು ಕಾಯಬೇಕು.ಮನಸು ಬರೆಯಬೇಕು. ಮನಸು ಬೆರೆತ ಮೇಲೆ ಕಾಡಿಗೆ ಹೋಗಿ ಹಾಡಿಗೆ ಬರಬೇಕು. ಬಂದಮೇಲೆ ಜೊತೆಯಾಗಿ ನಡೀಬೇಕು. ಒಬ್ಬರಯ ಮೆಚ್ಚಿದೀವಿ ಅಂದರೆ ಸಾಲದು.ಇಬ್ಬರೂ ಮೆಚ್ಚಬೇಕು. ಇಬ್ಬರೂ ಮೆಚ್ಚಿದ ಮೇಲೆ ಮೈ ಕೂಡಬೇಕು.ಮಿಗ ನೋಡು,ಹಕ್ಕಿ ನೋಡು,ಆಕಾಸ ಭೂಮಿ ನೋಡು. ಅಂತ ಹಿರೇರು ಹೇಳ್ಯಾರೆ ತಿಳಿತೆ .
….. ನನ್ನ ಮಗಳು ಅಂತ ಮೋನನ್ನ ಹಂಬಲುಪಡಿಸೋದು ಬಾರದು. ಒಲ್ಲದಿದ್ದರೆ ಒಲ್ಲೆ ಅನಬೇಕು.ಸುಮ್ಮಕಿರಬಾರದು.ಸುಮ್ಮಕಿದ್ದರೆ ಗಂಡು ಪರದಾಡ್ತಾನೆ.ಹಾಡಿ ಆಡಕೋತದೆ. ಏನು “
ಇದು ಚಾಮರಾಜನಗರದ ಬುಡಕಟ್ಟುಗಳಲ್ಲಿ ಒಂದಾದ ಕಾಡುಕುರುಬರ ಲೈಂಗಿಕ ಸಂಬಂಧಗಳ ಚಿತ್ರಣ.  ಬುಡಕಟ್ಟು ಮುಖ್ಯಸ್ಥನಾದ ತಂದೆ ತನ್ನ ಮಗಳಿಗೆ ನೀಡುವ ಉಪದೇಶದ ರೂಪದಲ್ಲಿ.ಈ ಬುಡಕಟ್ಟು ಈಗಾಗಲೇ ತಾಯಿ ಕೇಂದ್ರಿತ ಸಮಾಜದ  ಪದ್ಧತಿಯಿಂದ ಹೊರಬಂದು ತಂದೆ ಕೇಂದ್ರಿತ ಸಮಾಜವನ್ನು ರೂಪಿಸಿಕೊಂಡಿದೆ. ಹೆಣ್ಣು ತನ್ನ ತಂದೆ ತಾಯಿಯ ಮನೆಯನ್ನು ಬಿಟ್ಟು ಗಂಡಿನೊಡನೆ ಬಾಳಲು ಆರಂಭಿಸಿದ್ದಾಳೆ. ಆದರೆ ಗಂಡಿನ ತಂದೆ ತಾಯಂದಿರ ಜೊತೆ ಅಲ್ಲ. ಅಲ್ಲಿಯೇ ಪ್ರತ್ಯೇಕ ಗುಡಿಸಲಿನಲ್ಲಿ. ಬುಡಕಟ್ಟುಗಳ ಸರಳ ಜೀವನ ಮುಂದುವರೆದಿದೆ. ಬೇಟೆ, ಕಾಡಿನ ಹಣ್ಣು ಹಂಪಲುಗಳು, ಜೇನು, ಆನೆ ದಂತಗಳ ವ್ಯಾಪಾರ ಇವರ ಜೀವನದ ಆಧಾರ.

ಇವರಲ್ಲಿ ಗಂಡು ಹೆಣ್ಣು ಜೊತೆಗೂಡುವುದೆಲ್ಲಾ ಪರಸ್ಪರ ಪ್ರೇಮಿಸಿಯೇ. ತಂದೆ ತಾಯಂದಿರ ಮಧ್ಯ ಪ್ರವೇಶವಿಲ್ಲ ಮಾತ್ರವಲ್ಲ  ಮಕ್ಕಳು ತಾವು ಯಾರ ಜೊತೆ ಜೀವಿಸ ಬಯಸುತ್ತೇವೆ ಎಂಬುದನ್ನು ತಂದೆ ತಾಯಂದಿರಿಗೆ ತಿಳಿಸುವುದೂ ಇಲ್ಲ . ತಾವೇ ಪರಸ್ಪರ ಪ್ರೇಮಿಸುತ್ತಾರೆ. ಗಂಡಿನ ಪ್ರೇಮ ಯಾಚನೆಯನ್ನು ಹೆಣ್ಣು ಒಪ್ಪಿಕೊಳ್ಳಬೇಕೆಂದೇನಿಲ್ಲ. ಹಾಗೇ ಹೆಣ್ಣಿನ ಪ್ರೇಮವನ್ನೂ . ಅವರವರ ಇಚ್ಛೆ. ಪ್ರೇಮ ಹದಕ್ಕೆ ಬಂದ ಮೇಲೆ ಯಾರಿಗೂ ಹೇಳದೆ ಕಾಡಿಗೆ ಹೋಗಿಬಿಡುತ್ತಾರೆ. ಮೂರು ರಾತ್ರಿ ಅಲ್ಲಿ ಕಳೆದು ಮತ್ತೆ ಹಾಡಿಗೆ ಬರುತ್ತಾರೆ. ಅವರು ಮಾಯವಾದದ್ದು ಗಮನಕ್ಕೆ ಬಂದಾಗ ಅವರು ಪರಸ್ಪರ ಕೂಡಿಕೊಂಡರು ಎಂದು ಎಲ್ಲರೂ ತಿಳಿದುಕೊಳ್ಳುತ್ತಾರೆ. ಹೆಣ್ಣಿನ ಹತ್ತಿರದ ಗೆಳತಿಯರು ಅವರಿಗೆ ಊಟದ ಬುತ್ತಿಯನ್ನು ಕಾಡಿನೊಳಕ್ಕೆ ಕಳಿಸುವ ವ್ಯವಸ್ಥೆ ಮಾಡುತ್ತಾರೆ. ಅವರು ಬರುವ ವೇಳೆಗೆ ಅವರಿಗಾಗಿ ಪ್ರತ್ಯೇಕ ಗುಡುಲೊಂದನ್ನು ಅವರ ಗೆಳೆಯರು ಸಿದ್ಧ ಮಾಡಿರುತ್ತಾರೆ. ಅದರಲ್ಲಿ ಹೊಸ ಜೋಡಿ ಜೀವನ ಮಾಡಲಾರಂಭಿಸುತ್ತಾರೆ.

ಈ ಜೋಡಿ ಜೀವನಕ್ಕೆ ವಿವಾಹದ ಧಾರ್ಮಿಕ ಪರಿವೇಷ ಇಲ್ಲದಿದ್ದರೂ ವಿವಾಹ ಪದ್ಧತಿಗೆ ಬಹಳ ಹತ್ತಿರವಾದದ್ದು. ಮಕ್ಕಳ ತಂದೆ ಯಾರೆಂಬುದನ್ನು ಸ್ಪಷ್ಟವಾಗಿ ಗುರುತಿಸುವುದು ಮಾತ್ರವೇ ಅಲ್ಲದೆ ಅವನೊಡನೆಯೇ ಹೆಣ್ಣಿನ ಜೀವನ, ಮಕ್ಕಳನ್ನು ಸಾಕುವ ಹೊಣೆ ಇವೆಲ್ಲವೂ ರೂಢಿಗಳಾಗಿವೆ. ಅದೇ ಸಮಯದಲ್ಲಿ ಪರಸ್ಪರ ಬೇಡವಾದರೆ ಬೇರಾಗುವುದು , ಬೇರೊಬ್ಬರ ಜೊತೆ ಜೋಡಿಯಾಗುವುದು ಮದುವೆಯಷ್ಟೇ  ಸುಲಭ.

ಭಾರತದ ವಿವಿಧ ದಲಿತ,ಹಿಂದುಳಿದ ಜಾತಿಗಳಲ್ಲಿ ಪುರುಷಾಧಿಕಾರ ಸಮಾಜ ತೀರಾ ಇತ್ತೀಚಿನವರೆಗೂ ಮದುವೆ ಬಹಳ ಸರಳವಾಗಿ , ಕೇವಲ ವಧುವಿಗೆ ತೆರ ನೀಡಿ ಮನೆಯ ಮುಂದೆ ಮದುವೆ ಮಾಡುವುದಕ್ಕೆ ಸೀಮಿತವಾಗಿತ್ತು. ಈ ಸಮುದಾಯಗಳಲ್ಲಿ ಕೂಡಿಕೆ ಎಂಬ  ವಿಧವಾ ವಿವಾಹ ರೂಢಿಯಲ್ಲಿತ್ತು.

ಗಂಡು ಹೆಣ್ಣು ಜೋಡಿ ಬೇರಾಗುವುದು ಸರಳ ಆದರೆ ಅವರ ಮಕ್ಕಳನ್ನು ಯಾರು ಸಾಕುವವರು ಎಂಬುದು ಮೇಲಿನ ಕಥನದಲ್ಲಿ ಸ್ಪಷ್ಟವಾಗಿಲ್ಲ. ಮಕ್ಕಳು ತಾಯಿಯ ಜೊತೆ ಹೊಸ ಗಂಡನ ಮನೆ ಸೇರುತ್ತಾರೋ ಅಥವಾ ತಂದೆ ಮತ್ತು ಅವನ ಹೊಸ ಹೆಂಡತಿಯ ಜೊತೆ ಇರುತ್ತಾರೋ ಎಂಬ ಪ್ರಶ್ನೆ ಉಳಿಯುತ್ತದೆ.

ಮಹಾಕಾವ್ಯ, ಪುರಾಣಗಳಲ್ಲಿ ಜೋಡಿಗಳು :
ತಾಯಿ ಕೇಂದ್ರಿತ ಬುಡಕಟ್ಟು ಜೀವನದಲ್ಲಿ ಆರಂಭವಾದ ಲೈಂಗಿಕ ಜೋಡಿಗಳು ಪುರುಷಾಧಿಕಾರ ಸಮಾಜ ವ್ಯವಸ್ಥೆ ರೂಪುಗೊಂಡ ಮೇಲೆ ಕೂಡಾ ಮುಂದುವರೆದ ಹಲವು ಉದಾಹರಣೆಗಳು ಭಾರತದ ಕಾವ್ಯ ಪುರಾಣಗಳಲ್ಲಿವೆ.
ವಿಕ್ರಮೋವರ್ಶೀಯ, ಶಂತನು- ಗಂಗೆ, ಪರಾಶರ- ಸತ್ಯವತಿ, ಅರ್ಜುನ- ಉಲೂಪಿ, ಚಿತ್ರಾಂಗದೆ, ಹಿಡಿಂಬೆ-ಭೀಮ ಇತ್ಯಾದಿ ಹಲವು ಪ್ರಸಂಗಗಳಿವೆ.

ಕಾಳಿದಾಸನ ಮೊದಲ ನಾಟಕಕ್ಕೆ ವಸ್ತುವಾದ ವಿಕ್ರಮನೆಂಬ ಚಕ್ರವರ್ತಿ ಮತ್ತು ಅಪ್ಸರೆ ಊರ್ವಶಿಯರ ಪ್ರೇಮ ಇಂತಹ ಜೋಡಿ ಸಂಬಂಧ. ಪರಸ್ಪರ ಬಯಸಿ ಪ್ರೇಮಿಸಿದರು. ಜೋಡಿಯಾದರು. “61 ಸಾವಿರ” ವರ್ಷಗಳ ನಂತರ ಊರ್ವಶಿಗೆ ಬೇಡವಾಯಿತು. ಮತ್ತೆ ಬೇರೆಯಾದರು.  ಅದು ಮದುವೆ,ಕುಟುಂಬ ಎಂಬ ಶಾಸ್ತ್ರೀಯ ವಿವಾಹ ಸಂಬಂಧವಲ್ಲ‌. ಈ ಪ್ರಸಂಗದಲ್ಲಿ ಮಕ್ಕಳ ಪ್ರಸ್ತಾಪವಿಲ್ಲ.

ಹಾಗೆಯೇ ಶಂತನು ಗಂಗೆಯನ್ನು  ಮೆಚ್ಚಿದ. ಗಂಗೆ ಕೆಲವು ಶರತ್ತುಗಳನ್ನು ಹಾಕಿ ಒಪ್ಪಿ ಎಂಟು ಮಕ್ಕಳಾಗುವವರೆಗೂ ಜೊತೆಯಲ್ಲಿದ್ದು ಬೇರೆಯಾದಳು. ಪರಾಶರ ಋಷಿ ದೋಣಿಯಲ್ಲಿ ನದಿಯನ್ನು ದಾಟುತ್ತಿದ್ದಾಗ ಬೆಸ್ತ ಯುವತಿ ಸತ್ಯವತಿಯನ್ನು ಮೆಚ್ಚಿದ. ಸತ್ಯವತಿಯೂ ಒಪ್ಪಿದಳು. ನದಿ ಮಧ್ಯದ ದ್ವೀಪವೊಂದಕ್ಕೆ ಹೋಗಿ ಜೋಡಿಯಾದರು. ವ್ಯಾಸ ಹುಟ್ಟಿದ ನಂತರ ಬೇರೆಯಾದರು. ಮಗು ಹುಟ್ಟಿದ ತಕ್ಷಣವೇ ನಡೆದಾಡಿತು ಎಂಬ ಕಲ್ಪನೆಗಳನ್ನು ಪಕ್ಕಕ್ಕಿಟ್ಟರೆ ಇದು ಒಂದು ಮಗುವಾಗುವವರೆಗಿನ ಜೋಡಿ ಸಂಬಂಧ.

ಉಲೂಪಿ, ಚಿತ್ರಾಂಗದೆ, ಹಿಡಿಂಬೆಯರದು ಕೇವಲ ಕೆಲ ಕಾಲದ ಲೈಂಗಿಕ ಸಂಬಂಧ. ಬೆಡಗುಗಳ ನಡುವಣ ಗುಂಪು ಸಂಬಂಧ, ಪುನಲುವನ್ ಸಂಬಂಧವಲ್ಲ. ರಕ್ತ ಸಂಬಂಧಿಗಳ ನಡುವಣ ಸ್ವೇಚ್ಛಾ ಸಂಬಂಧವೂ ಅಲ್ಲ. ಪರಸ್ಪರ ಒಪ್ಪಿ ಕೆಲಕಾಲ ಯಾವುದೇ ಕಟ್ಟಲೆಗಳಿಲ್ಲದೆ ಜೋಡಿಯಾಗಿದ್ದ ಸಂಬಂಧ. ಅರ್ಜುನ ಚಿತ್ರಾಂಗದೆಯೊಡನೆ ಮೂರು ವರ್ಷ ಕಳೆದ ನಂತರ ಯಾವುದೇ ಕಟ್ಟಲೆಗಳಿಲ್ಲದೆ ಬೇರಾದರು.

ಹಿಡಿಂಬೆಯ ವಿಷಯದಲ್ಲಿ ಹಿಡಿಂಬೆ ಭೀಮನನ್ನು ಬಯಸಿದರೆ ಭೀಮ ಒಪ್ಪಲಿಲ್ಲ. ಆದರೆ ಕುಂತಿ,ಧರ್ಮರಾಯ ಇಬ್ಬರೂ ಹೆಣ್ಣೊಂದು ಒಲಿದು ಕೂಡ ಬಯಸಿದರೆ ಅವಳೊಡನೆ ಕೂಡಬೇಕಾದ್ದು ಗಂಡಸಿನ ಧರ್ಮ ಎಂದು ತಿಳಿ ಹೇಳಿದ ನಂತರ ಅವರಿಬ್ಬರೂ ಒಂದು ಮಗುವಾಗುವವರೆಗೂ ಹಗಲೆಲ್ಲ ಜೋಡಿಯಾಗಿ ಜೀವಿಸಿದರು. ರಾತ್ರಿಯ ವೇಳೆ ಕುಂತಿ ಮತ್ತು ಇತರ ಪಾಂಡವರ ಬಳಿಗೆ ಹಿಡಿಂಬೆ ತಂದು ಬಿಡುತ್ತಿದ್ದಳು. ಇದೇ ರೀತಿ ಪುರಾಣಗಳಲ್ಲಿ  ಅಂದಿನ ಲೈಂಗಿಕ ಜೋಡಿ ಜೀವನಕ್ಕೆ ಹಲವು ಉದಾಹರಣೆಗಳಿವೆ.

ಮುಖ್ಯವಾದ ವಿಷಯವೆಂದರೆ ಈ ಮೊದಲಿನ ಲೈಂಗಿಕ ಸಂಬಂಧಗಳ ಜಾಗದಲ್ಲಿ ಜೋಡಿ ಸಂಬಂಧಗಳು ಹೆಚ್ಚು ಹೆಚ್ಚು ವ್ಯಾಪಿಸಲ್ಪಟ್ಟಿತು. ಮುಂದೆ ಹಲವು ಸಾವಿರ ವರ್ಷಗಳ ನಂತರ ವಿವಾಹ ಎಂಬ ಶಾಸ್ತ್ರಬದ್ಧ ಲೈಂಗಿಕ ಸಂಬಂಧ ಮತ್ತು ಕುಟುಂಬ ಪದ್ಧತಿಗೆ ನಾಂದಿಯಾಯಿತು.

ಜೋಡಿ ಲೈಂಗಿಕ ಸಂಬಂಧಗಳನ್ನು  ವಿವಾಹ ಎನ್ನಬಹುದೇ ? :
ಲೈಂಗಿಕ ಸಂಬಂಧದ ಜೋಡಿಗಳ ಜೀವನ ರೂಢಿಗೊಂಡುದನ್ನು ವಿವಾಹ ಪದ್ಧತಿ ಎಂದು ಕರೆಯಬಹುದೇ ಎಂಬುದು ಒಂದು ಮುಖ್ಯ ಪ್ತಶ್ನೆ. ಗುಂಪು ವಿವಾಹ, ಪುನಲುವನ್ ಮದುವೆ ಎಂಬ ಪದಗಳನ್ನು ಅವುಗಳ ಅರ್ಥ ಸ್ಪಷ್ಟವಾಗುವುದಕ್ಕಾಗಿ ಬಳಸಿದ್ದರೂ ಹಿಂದಿನ ಲೇಖನಗಳಲ್ಲಿ ಬಳಸಿದ್ದರೂ ಅವು ಆ ಸಂಬಂಧಗಳನ್ನು ಈಗ ಮದುವೆ/ ವಿವಾಹ ಎಂದು ಈಗ ಗುರುತಿಸುವ ಸಾಮಾಜಿಕ ಸಂಸ್ಥೆಯ ಶಾಸ್ತ್ರ ಬದ್ಧ ಕಟ್ಟಲೆಗಳಿಗೂ ಈ ಲೈಂಗಿಕ ಸಂಬಂಧಗಳಿಗೂ ಅಜಗಜಾಂತರ ಕಂದರವಿದೆ. ಈ ಸಂಬಂಧಗಳ ಗಂಡು,ಹೆಣ್ಣುಗಳಿಗೆ ಪತಿ ಪತ್ನಿ ಎಂಬ ಸಾಂಸಾರಿಕ ಪಾತ್ರಗಳ ಹೇರಲಾಗುವುದಿಲ್ಲ.

ಈ ಇಚ್ಛೆಯ ಜೋಡಿ ಜೀವನ ತಾಯಿ ಕೇಂದ್ರಿತ ಸಮಾಜದ ಒಳಗಿ‌ಂದಲೇ ಆರಂಭವಾದವು. ಮುಂದೆ ಪುರುಷ ಕೇಂದ್ರಿತ ಸಮಾಜದ ಆರಂಭದ ಘಟ್ಟದವರೆಗೂ ಮುಂದುವರೆದವು. ಆದರೆ ತಾಯಿ ಕೇಂದ್ರಿತ ಸಮಾಜದಲ್ಲಿರುವಾಗ ಅವುಗಳ ಸ್ವರೂಪ ಮತ್ತು ಗಂಡು ಹೆಣ್ಣಿನ ಪರಸ್ಪರ ಸಂಬಂಧಗಳು ಮತ್ತು ಸಮಾಜದೊಡನೆ ಅವರ ಸಂಬಂಧಗಳ ಸ್ವರೂಪವೇ ಬೇರೆ.‌ ಪುರುಷ ಕೇಂದ್ರಿತ ಸಮಾಜದಲ್ಲಿ ಈ ಜೋಡಿ ಸಂಬಂಧಗಳ ಸ್ಚರೂಪವೇ ಬೇರೆ. ಮುಂದೆ ಪುರುಷಾಧಿಕಾರದ, ರಾಜಪ್ರಭುತ್ವಗಳ ಕಾಲದಲ್ಲಿ ಇದೇ ಸಂಬಂಧ ವಿವಾಹ/ ಮದುವೆ ಎಂಬ ಶಾಸ್ತ್ರ ಬದ್ಧ ಸ್ವರೂಪ ತಳೆದಾಗಿನ ಗಡಚು ಸ್ವರೂಪ ಮತ್ತು ಆಗಿನ ಪುರುಷಾಧಿಕಾರ ಕುಟುಂಬಗಳ ಒಳಗೆ ಗಂಡು ಹೆಣ್ಣಿನ ಪರಸ್ಪರ ಸಂಬಂಧ,ಪಾತ್ರ ಮತ್ತು ಸಮಾಜದೊಂದಿಗಿನ ಸಂಬಂಧಗಳ ಸ್ವರೂಪ ಪೂರ್ತಿ ಬೇರೆ.

ಪುರುಷಾಧಿಕಾರ ವ್ಯವಸ್ಥೆಯ ವಿವಾಹ ಎಂಬ ಸಂಸ್ಥೆ, ಕುಟುಂಬ ಎಂಬ ಸಂಸ್ಥೆಯ ಅನಿವಾರ್ಯ ಅಂಗವಾಗಿ ರೂಪುಗೊಂಡುದರ ವಿವಿಧ ಹಂತಗಳನ್ನು ಹೀಗೆ ಗುರುತಿಸಬಹುದು.

ಹಿಂದಿನ ಲೇಖನದಲ್ಲಿ ಗುರುತಿಸಿದಂತೆ ಜೋಡಿ ಲೈಂಗಿಕ ಸಂಬಂಧಗಳ ಉಗಮಕ್ಕೆ ಮೊದಲಿನ ಲೈಂಗಿಕ ಸಂಬಂಧಗಳ ಬೆಳವಣಿಗೆಯಲ್ಲಿ ರಕ್ತ ಸಂಬಂಧಿಗಳ ಒಳಗೇ ಸಂಬಂದ, ಬೆಡಗು ರೂಪುಗೊಂಡ ಮೇಲೆ ಗುಂಪುಗಳ ನಡುವಿನ ಲೈಂಗಿಕ ಸಂಬಂಧ , ಎಲ್ಲ ಸಹೋದರಿಯರಿಗೆ ಬೇರೆ ಬೆಡಗಿನ ಎಲ್ಲ ಸೋದರರು ಎಂಬ ಪುನುಲುವನ್ ಎಂಬ ಸಂಬಂಧ, ಇಚ್ಛೆಯ ಜೋಡಿ ಸಂಬಂಧಗಳು ಎಂಬ ನಾಲ್ಕು ಘಟ್ಟಗಳನ್ನು ಕಾಣುತ್ತೇವೆ. ಈ  ಘಟ್ಟಗಳು ಸಾಮಾಜಿಕ ಬೆಳವಣಿಗೆಯ ನಾಲ್ಕು ಘಟ್ಟಗಳಿಗೆ‌ ಹೊಂದಿಕೊಂಡಿವೆ.

ತಾಯಿ ಕೇಂದ್ರಿತ ಸಮಾಜದಿಂದ ರಾಜಪ್ರಭುತ್ವವೆಂಬ ಸಾಮಾಜಿಕ ರಚನೆಗೆ ಬದಲಾಗುವ ಮಹತ್ತರ ಸಂಕ್ರಮಣ ಸಮಯದಲ್ಲಿ ಜೋಡಿ ಸಂಬಂಧಗಳು ವಿವಾಹ ಎಂಬ ಪದ್ಧತಿಯ ಪತಿ,ಪತ್ನಿ  ಜೋಡಿಯ  ಬೆಳವಣಿಗೆಯತ್ತ ಸಾಗುವಲ್ಲಿ ಮೂರು ಹಂತಗಳನ್ನು ಗುರುತಿಸಬಹುದು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: