ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆಜ್ಜೆ ಇಟ್ಟಲ್ಲೆಲ್ಲಾ ಬೆಳಕೇ..

– ಕೆ ಎನ್ ಲಾವಣ್ಯ ಪ್ರಭಾ

ದೇವ ದೀಪ

ಒಳಮನೆಯ ಗರ್ಭಗುಡಿಯಲ್ಲಿ
ಶಾಂತ ಪ್ರಶಾಂತ ಬೆಳಕಿನ
ಕಾರ್ತೀಕದ
ದೇವ ದೀಪದಾರತಿ
ವೈಭವದಲ್ಲಿ ಬೆಳಗುವಾಗ
ಹಸಿರು ತೋರಣದ ಬಾಗಿಲಿನ
ಹೊಸ್ತಿಲಿಕ್ಕೆಲ ಹೊತ್ತಿಸಿಟ್ಟಿದ್ದ
ಮಣ್ಣ ಹಣತೆಯ ಸೊಡರಿಗೆ
ಅಂಗಳ ಹೊಳೆದು
ಸಂಜೆ ಮಬ್ಬಾದ
ಕಾರ್ತೀಕದ ಹುಣ್ಣಿಮೆಯ
ಬೆಳದಿಂಗಳಿರುಳಿನಲಿ
ಪೂರ್ಣ ಚಂದಿರನ
ಶೀತಲ ಕಿರಣಗಳ ಹೊಳಪಿಂದ
ಕಣ್ಣು ಹಾಯಿಸಿದಷ್ಟೂ ದೂರ
ದಾರಿ ನಿಚ್ಚಳ
ಹೆಜ್ಜೆ ಇಟ್ಟಲ್ಲೆಲ್ಲಾ ಬೆಳಕೇ…

ನಡೆವ ಹಾದಿಯುದ್ದಕ್ಕೂ
ದಿವ್ಯ ದೀವಿಗೆಯೊಂದು
ಝಗಮಗ
ಕಣ್ಣು ಕೋರೈಸಿದಂತೆ
ಹಬ್ಬಿ ಆವರಿಸಿದ
ಬೆಳಕ ಪ್ರಭಾವಳಿಯಲ್ಲಿ
ಅಸ್ಪಷ್ಟ ರೂಪೊಂದು ಕದಲಿ
ಸನಿಹವಾದಂತೆಲ್ಲಾ
ಬೆಳಕ ಹೊಳೆಯಲ್ಲಿ
ಬಂಗಾರ ಬಣ್ಣದ ಮೆರುಗು
ದೇವಲೋಕದ ಬೆರಗು!

ಶುದ್ಧ ಕಾರ್ತೀಕದ
ದೇವ ದೀಪದ
ಸಮಯಕ್ಕೆ ಸರಿಯಾಗಿ
ತೀರಾ
ತೀರಾ ಆಕಸ್ಮಿಕವಾಗಿ
ನೀನು ನನ್ನೆದುರಿಗೇ ನಿಂತಿದ್ದೀಯೆ !

‍ಲೇಖಕರು Admin

8 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading