ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಡ್ಲಹಳ್ಳಿ ನಾಗರಾಜ್ ಅಂಕಣ – ಮಾವಿನ ಹಣ್ಣು ತಾ ಅಂದ್ರೆ…

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.

‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ.

ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.

ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.

ಇನ್ನು ಕೆಲವಕ್ಕೆ, ದಿನದ ದುಡಿಮೆಯ ದಣಿವು ನೀಗಿಸಿ ಮನಸು ಹಗುರಮಾಡಿಕೊಳ್ಳವ, ಸ್ವಾರಸ್ಯಕರ ಮಾತುಗಾರರು, ಸೋಮಾರಿಕಟ್ಟೆಯಲ್ಲಿ ಕುಳಿತು, ಕತೆಗಳ ಪೋಷಾಕು ತೊಡಿಸಿ ಹರಟೆಯ ರೂಪದಲ್ಲಿ ಹೇಳುವ ಪ್ರಯತ್ನವೂ ಇದಾಗಿದೆ.

ಮಲೆನಾಡಿನ ಬೈನೆ ಸೇಂದಿಯ ಅಡಸಾಲೆಗಳಲ್ಲಿ ಧಗಧಗಿಸುವ ಬೆಂಕಿಯ ಸುತ್ತ ಕುಳಿತು ಸಂಜೆಯ ಪಾನಗೋಷ್ಟಿಗಳನ್ನು ಉತ್ತೇಜನದಾಯಕವಾಗಿಸಲು ಹೇಳಿದ ʻಗುಂಡು ಪಾರ್ಟಿʼಯ ಕಥಾ ಪ್ರಸಂಗಗಳಾಗಿರಲೂಬಹುದು.

ಜನಪದ ಕತೆಗಳಂತೆ ಜನರ ಬಾಯಿಂದ ಬಾಯಿಗೆ ಹರಿದುಬಂದು ʻಕೇಳು ಕತೆʼ ಗಳಾಗಿ ಗಾಳಿಯಲ್ಲಿ ತೇಲಾಡಿ ಹೋಗುವ ಇಂತಹಾ ಪ್ರಸಂಗಗಳು ಹಲವಾರು.

ಓದುಗರಿಗೆ ಹಿತವಾಗುವಂತಹಾ ಈ ಎಲ್ಲಾ ಪ್ರಸಂಗಗಳ ಹ್ಯೂಮರ್‌ ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲದೆಂಬುದನ್ನು ಮನಗಂಡು ʻಹಗ್ರಾಣದ ಕತೆʼಗಳ ರೂಪ ಕೊಟ್ಟು ಇಲ್ಲಿ ಪ್ರಸ್ತುತಪಡಿಸಲಾಗಿದೆ.

ಅಂಕಣ – 3

ಶಿವಣ್ಣ ರಾತ್ರಿಯೆಲ್ಲಾ ನಿದ್ರೆಯಿಲ್ಲದೆ ಹೊರಳಾಡುತ್ತಿದ್ದುದ್ದು ಕಂಡ ಅವನ ಹೆಂಡತಿ ಗಾಬರಿಯಾಗಿದ್ದಳು. ರಾತ್ರಿ ಮಲಗಿದ ಮೇಲೆ ಮಧ್ಯದಲ್ಲೆಂದೂ ಏಳದ ಅವನು ಅಂದು ಮಧ್ಯ ರಾತ್ರಿ ಎದ್ದು ಹೊರಹೋಗಿ ಸಿಗರೇಟು ಸೇದಿ ಬಂದಿದ್ದ.

ಹಿಂದೆ ವ್ಯವಹಾರದಲ್ಲಿ ನಷ್ಟವಾದಾಗ, ಚುನಾವಣೆಗಳಲ್ಲಿ ಸೋತಾಗ ಯಾವಾಗಲೂ ಈ ರೀತಿ ನಿದ್ದೆಗೆಟ್ಟು ಬಳದಿವನಲ್ಲ. ಈಗಲಾದರೋ ಚುನಾವಣೆಯಲ್ಲಿ ಗೆದ್ದು ಜಿಲ್ಲಾ ಪಂಚಾಯ್ತಿ ಮೆಂಬರ್ ಆಗಿದಾನೆ. ಅಧ್ಯಕ್ಷನೂ ಆಗಬಹುದು ಅಂತ ಜನ ಮಾತಾಡಿಕೊಳ್ತಾ ಇದಾರೆ. ಅಂತಹದ್ದರಲ್ಲಿ ಇವನ ಆತಂಕಕ್ಕೆ ಕಾರಣವಾದರೂ ಏನು ಎಂದು ಅವಳು ಚಡಪಡಿಸುತ್ತಿದ್ದಳು.

ಶಿವಣ್ಣ ಐದು ಗಂಟೆಗೆ ಹಾಸಿಗೆ ಬಿಟ್ಟೆದ್ದು ಬಟ್ಟೆ ಬದಲಿಸಿ ಹೊರಬಂದು ಜೀಪ್ ಸ್ಟಾರ್ಟ್ ಮಾಡತೊಡಗಿದಾಗ ಅವಳುʻ ಇದೇನು ಇಷ್ಟು ಬೇಗ ಇವತ್ತುʼ ಎಂದಿದ್ದಳು.

‘ನಾನು ಪೇಟೆಗೆ ಹೋಗ್ತಿದೀನಿ. ಅಣ್ಣಯ್ಯನವರು ಬಂದು ಅಲ್ಲಿ ಐಬಿಲಿ ಉಳ್ದಿದ್ದಾರಲ್ಲ. ಅವರನ್ನು ನೋಡ್ಬೇಕು ನೀನು ಹೋಗಿ ಮಲಗು ‘ ಎನ್ನುತ್ತಾ ಪಟ್ಟಣದ ದಿಕ್ಕಿಗೆ ಜೀಪು ಚಲಾಯಿಸಿದ್ದ.

ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗ ನಿರ್ಜನವಾಗಿತ್ತು. ಜೀಪು ನಿಲ್ಲಿಸಿದ ಅವನು ಮಬ್ಬುಗತ್ತಲಲ್ಲಿ ಕೈ ಕೈ ಹಿಸುಕಿಕೊಳ್ಳುತ್ತಾ ನಿಂತಲ್ಲಿ ನಿಲ್ಲದೆ ಅತ್ತಿತ್ತ ತಿರುಗಾಡತೊಡಗಿದ. ಅವನ ಒಡನಾಡಿಗಳು ಆಪ್ತರು, ಹಿಂಬಾಲಕರು, ಒಬ್ಬೊಬ್ಬರೇ ಬಂದು ಪ್ರವಾಸಿ ಮಂದಿರದ ಎದುರು ಜಮಾಯಿಸತೊಡಗಿದರು. ಅದೇ ಕಟ್ಟಡದಲ್ಲಿ ಈ ದಿನ ಶಿವಣ್ಣನ ಭವಿಷ್ಯ ನಿರ್ಧಾರವಾಗಲಿತ್ತು. ಅವನ ರಾಜಕೀಯ ಬದುಕಿನ ಹಣೆಬರಹ ಬರೆಯುವವರು ಪ್ರವಾಸಿಮಂದಿರದ ಮಹಡಿಯ ರೂಮಿನಲ್ಲಿ ತಂಗಿದ್ದರು. ಅವರೇ, ಶಿಷ್ಯರಿಂದ, ಸ್ಥಳೀಯ ಜನ ಸಾಮಾನ್ಯರಿಂದ ‘ಅಣ್ಣಯ್ಯ’ ಎಂದು ಕರೆಸಿಕೊಳ್ಳುವ ರಾಜ್ಯದ ಪ್ರಮುಖ ಮಂತ್ರಿ ಅಷ್ಟೇಗೌಡರು.

ಜನರ ನಡುವೆ ಓಡಾಡಿಕೊಂಡು, ಚಿಕ್ಕಪುಟ್ಟ ಗುತ್ತಿಗೆ ಕಾಮಾಗಾರಿ ಮಾಡಿಸುತ್ತಾ. ಸೊಸೈಟಿ ಮೆಂಬ‌ರ್, ಪಂಚಾಯ್ತಿ ಸದಸ್ಯ, ಅಧ್ಯಕ್ಷ ಹೀಗೆ ರಾಜಕಿಐದಲ್ಲಿ ಬೆಳೆದು ಬಂದು ಜನನಾಯಕನಾಗಿದ್ದ ಸೌಮ್ಯ ಸ್ವಾಭಾವದ ಶಿವಣ್ಣನನ್ನು ಇತ್ತೀಚೆಗಿನ ಚುನಾವಣೆಯಲ್ಲಿ ಜನ ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ ಆಯ್ಕೆ ಮಾಡಿದ್ದರು. ಅಣ್ಣಯ್ಯನ ಕಣ್ಣಿಗೆ ಬಿದ್ದ ಈ ಶಿವಣ್ಣ ಅವರ ರಾಜಕೀಯ ಶಿಷ್ಯತ್ವದ ನೆರಳಿಗೆ ಬಂದದ್ದು ಅವನಿಗೂ ಹೆಮ್ಮೆಯ ವಿಚಾರವಾಗಿತ್ತು.

ರಾಜ್ಯ ರಾಜಕೀಯದಲ್ಲಿ, ಅದರಲ್ಲೂ ಪಕ್ಷದ ಹೈಕಮಾಂಡ್ ಲೆವೆಲ್ಲಿನಲ್ಲಿ ಪ್ರಭಾವ ಸ್ಥಾಪಿಸಿಕೊಂಡಿದ್ದ ಅಣ್ಣಯ್ಯ ಮನಸ್ಸು ಮಾಡಿದ್ದರೆ ತಾನು ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷ ಕುರ್ಚಿಯನ್ನು ಎಟುಕಿಸಿಕೊಳ್ಳುವುದರಲ್ಲಿ ಕಷ್ಟವೇನೂ ಆಗಲಾರದು ಎಂಬುದು ಅವನಿಗೂ ತಿಳಿದಿತ್ತು.

ಅಧ್ಯಕ್ಷ ಹುದ್ದೆಯು ಇವನದೇ ಒಬಿಸಿ ವರ್ಗಕ್ಕೆ ಮೀಸಲಾಗಿತ್ತು. ಆದರೆ ಅಲ್ಲೊಂದು ತೊಡಕಿತ್ತು. ಅದೇ ಒಬಿಸಿ ವರ್ಗಕ್ಕೆ ಸೇರಿದ ಕುಶಾಲಪ್ಪ ಎಂಬ ಇನ್ನೊಬ್ಬ ಸದಸ್ಯ ಆಯ್ಕೆಯಾಗಿದ್ದ. ಮುಖ್ಯ ಮಂತ್ರಿಯವರ ನೇರ ಸಂಪರ್ಕ ಹೊಂದಿದ್ದ ಅವನೂ ಅಧ್ಯಕ್ಷ ಹುದ್ದೆಯ ಪ್ರಬಲ ಆಕಾಂಕ್ಷಿ. ಹೈಕಮಾಂಡ್ ಹೇಳಿದರೆ ಲಕ್ಷಾಂತರ ರೂಪಾಯಿ ಪಾರ್ಟಿಫಂಡ್ ಕೊಟ್ಟು ಹುದ್ದೆಯನ್ನು ತನ್ನದಾಗಿಸಿಕೊಳ್ಳಬಹುದಾದಷ್ಟು ಬಲಿಷ್ಠ.

ಸತತವಾಗಿ ಐದು ಬಾರಿ ಶಾಸಕನಾಗಿ ಗೆದ್ದು ಬಂದ ಅಣ್ಣೇಗೌಡ ಉರುಫ್ ಅಣ್ಣಯ್ಯ ಜನರ ಮಧ್ಯದ ಕೆಲಸಗಾರ. ತನ್ನ ಜನರ ಕಷ್ಟದ ಸ್ಪಂದನೆಗೆ ನೇರವಾಗಿ ಧಾವಿಸುವ ಅವನು ಯಾವುದೇ ಭ್ರಷ್ಟಚಾರದ ಹಗರಣದಲ್ಲಿ ಹೆಸರು ಕೆಡಿಸಿಕೊಂಡಿಲ್ಲ….ಆದರೆ ವಿದುರನಾದ ಆತ ಹೆಣ್ಣುಗಳ ಒಡನಾಟಕ್ಕೆ ಆಸೆ ಪಡುತ್ತಾನೆಂದು ಜನ ಗುಟ್ಟಾಗಿ ಪಿಸುಗುಡುತ್ತಿದ್ದರು.

ಏನೇ ಆದರೂ ಸರ್ಕಾರ ಹಾಗೂ ಹೈಕಮಾಂಡ್ ರಾಜಕೀಯ ವಿಚಾರದಲ್ಲಿ, ಅದರಲ್ಲೂ ಸ್ಥಳೀಯ ವಿಚಾರದಲ್ಲಿ ನಿರ್ಣಯ ಕೈಗೊಳ್ಳುವಾಗ ಅಣ್ಣಯ್ಯನ ಮಾತು ತೆಗೆದುಹಾಕುವುದಿಲ್ಲವೆಂಬುದು ಜನಜನಿತ.

ರಾಜಧಾನಿಗೆ ಹೋಗಿ ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರ ಎದುರಿಗೆ ನಿಂತು, ಕುಶಾಲಪ್ಪನೊಂದಿಗೆ ಪೈಪೋಟಿ ಮಾಡುವುದು ಸಲ್ಲದ ಮಾತು ಎಂಬುದು ಶಿವಣ್ಣ ಹಾಗೂ ಅವನ ಬೆಂಬಲಿಗರೆಲ್ಲರಿಗೂ ತಿಳಿದಿತ್ತು.

ಹೇಗಾದರೂ ಮಾಡಿ ತನ್ನ ಹೊಸಾ ರಾಜಕೀಯ ಗುರು ಅಣ್ಣಯ್ಯನನ್ನು ಮೆಚ್ಚಿಸಿ ಓಲೈಸುವುದೊಂದೇ ಅದ್ಯಕ್ಷ ಗಾದಿಯ ಕಡೆಗೆ ಸಾಗುವ ಮಾರ್ಗ ಎಂದು ಅವರ ಗುಂಪಿನಲ್ಲಿ ತೀವ್ರ ಚಿಂತನೆ ನಡೆದಿತ್ತು.

ಆದರೆ ಹೇಗೆ? ರಾಜಧಾನಿ ಬಿಟ್ಟು ಹೊರ ಜಿಲ್ಲೆಗಳ ಪ್ರವಾಸದಲ್ಲಿದ್ದಾಗ ಅವರ ಸುತ್ತ ಸ್ಥಳೀಯ ನಾಯಕರೇ ತುಂಬಿಕೊಂಡಿರುತ್ತಾರಲ್ಲ….

ಹೀಗಿರುವಾಗ ‘ರೊಟ್ಟಿ ಜಾರಿ ತುಪ್ಪದಲ್ಲಿ ಬಿತ್ತು’ ಅಂತಾ ಗಾದೆ ಇದೆಯಲ್ಲಾ ಹಾಗೆ ಅಣ್ಣಯ್ಯನವರ ಸರ್ಕಾರಿ ಕಾರ್ಯಕ್ರಮ ತಮ್ಮದೇ ಸ್ವಂತ ಕ್ಷೇತ್ರಕ್ಕೆ ನಿಗಧಿಯಾಯಿತು…..

ಅದಕ್ಕಿಂತಾ ಸುಸಂದರ್ಭ ಇನ್ನೇನುಬೇಕು? ಶಿವಣ್ಣ ಬೆಳಗ್ಗೆಯಿಂದಲೂ ಅವರ ಬೆನ್ನು ಬಿದ್ದು ಸಮಯ ಸಿಕ್ಕಾಗಲೆಲ್ಲಾ ಅವರ ಕಿವಿಯಲ್ಲಿ ʻಅಧ್ಯಕ್ಷ’ ಪದ ಉಸುರಿದ…… ʻಬಿಡು ಮಾರಾಯ ಗೊತ್ತುʼ ಎಂದರು ಅಣ್ಣಯ್ಯ.

ʻಕುಶಾಲಪ್ಪ ಮುಖ್ಯಮಂತ್ರಿ ಹತ್ರ ಹೋಗಿದಾನೆ. ನಾಯಕರು ಕೇಳಿದರೆ ದುಡ್ಡು ಕೋಡೋಕು ರೆಡಿ ಇದಾನೆ’ ಎಂದ.

‘ಇರ್ಲಿ ಬಿಡೋ ಮಾರಾಯ. ನಮ್ ಏರಿಯಾದ ವಿಚಾರ ನನ್ನ ಕೇಳದೆ ಹೆಂಗೆ ಡಿಸೈಡ್ ಮಾಡ್ತಾರೆʼಎಂದರು. ಮತ್ತೂ ಬಿಡದೇ ಹಿಂದೆ ಹಿಂದೆಯೇ ಸುಳಿದಾಡಿದಾಗ ʻಸಂಜೆ ಐಬಿಲಿ ಊಟ ಮಾಡ್ತಾ ಮಾತಾಡೋಣ ಬಿಡೋ ಅತ್ಲಾಗಿ’ ಎಂದಿದ್ದರು.

ಅವಕಾಶ ಕೈತಪ್ಪಲು ಬಿಡಬಾರದು ಎಂದು ನಿರ್ಧರಿಸಿದ ಶಿವಣ್ಣ ಅಣ್ಣಯ್ಯನನ್ನು ಖುಷಿ ಪಡಿಸುವ ಬಗೆಗೇ ಯೋಚಿಸಿದ.

ಕಾರ್ಯಕ್ರಮ ಮುಗಿಸಿ ಅಧಿಕಾರಿಗಳೆಲ್ಲಾ ನಿರ್ಗಮಿಸಿದರು. ಶಿವಣ್ಣ ತನ್ನ ಕಡೆಯವರನ್ನೆಲ್ಲಾ ಗಂಧರ್ವ ಬಾರ್‌ಗೆ ಹೋಗಿ ಊಟ ಮುಗಿಸಿ ಬರಲು ಹೇಳಿದ.

ಐಬಿ ರೂಮಿನಲ್ಲಿ ಉಳಿದವರು ಅಣ್ಣಯ್ಯ ಹಾಗೂ ಶಿವಣ್ಣ ಇಬ್ಬರೇ.

ಶಿವಣ್ಣ ಮುದ್ದೆ ಹಾಗೂ ನಾಟಿಕೋಳಿ ಸಾರು ಊರಿನಿಂದ ಮಾಡಿಸಿ ತರಿಸಿದ್ದ. ಸ್ಕಾಚ್ ಬಾಟಲ್ ತೆಗೆದು ಟೇಬಲ್ ಮೇಲಿರಿಸಿ ಎರಡು ಗ್ಲಾಸ್ ತೊಳೆದು ತಂದು ಇರಿಸಿದ. ʻಛೇ ಛೇ, ಅದೆಲ್ಲಾ ಬ್ಯಾಡ ಮಾರಾಯ ….ನನಗೆ ಅದರಲ್ಲಿ ಆಸಕ್ತಿ ಇಲ್ಲ’ ಎಂದರು ಅಣ್ಣಯ್ಯ. ಇದು ಇಲ್ಲಿದು ಅಲ್ಲ ಅಣ್ಣಯ್ಯ…. ಫಾರಿನ್ ಸ್ಕಾಚು. ನಮ್ಮ ಅಣ್ಣನ ಮಗ ಜರ್ಮನಿಯಿಂದ ತಂದು ಕೊಟ್ಟಿರದು’ ಎನ್ನುತ್ತಾ ಎರಡು ಗ್ಲಾಸಿಗೂ ಒಂದೊಂದು ಪೆಗ್ಗಿನಷ್ಟು ಸುರಿದ. ಸೋಡಾ ಬೆರೆಸಿ ಗ್ಲಾಸನ್ನು ಅವರ ಮುಂದಿಡುವ ವೇಳೆಗೆ ಅಣ್ಣಯ್ಯ ಬಾಟಲ್ ಎತ್ತಿ ಅತ್ತಿತ್ತ ತಿರುಗಿಸಿ ನೋಡಿ ಮುಖ ಅರಳಿಸುವುದನ್ನು ಶಿವಣ್ಣ ನೋಡಿದ.

ರಾಜ್ಯದ ರಾಜಕೀಯ ಕ್ಷೇತ್ರದ ಸಮಸ್ಯೆ ಮುಂತಾದವುಗಳ ಬಗ್ಗೆ ಮಾತನಾಡುತ್ತಾ ಎರಡನೇ ಪೆಗ್ಗನ್ನು ಮುಗಿಸಿದ್ದರು ಅಣ್ಣಯ್ಯ. ಶಿವಣ್ಣ ಮೊದಲನೇ ರೌಂಡಿನದ್ದನ್ನು ಹಾಗೆಯೇ ಉಳಿಸಿಕೊಂಡು ಅವರಿಗೆ ಕಂಪನಿ ಕೊಡುತ್ತಿದ್ದ.

ಮುದ್ದೆ, ನಾಟಿಕೋಳಿ ಸಾರು ಅಣ್ಣಯ್ಯನವರಿಗೆ ಬಹಳ ಹಿಡಿಸಿತು. ಚಪ್ಪರಿಸಿಕೊಂಡು ತಿಂದರು. ಕೊನೆಗೆ ರಸಬಾಳೆ ಹಣ್ಣು ಹಾಗೂ ಬೀಡ ತಿಂದು ಮುಗಿಸುವ ವೇಳೆಗೆ ಅಣ್ಣಯ್ಯನವರು ಬಹಳ ಹುರುಪಿನಲ್ಲಿದ್ದರು.

ಈಗ ಅಧ್ಯಕ್ಷ ಚುನಾವಣೆಯ ಬಗ್ಗೆ ಮಾತಾಡಿ ಆಶ್ವಾಸನೆ ತೆಗೆದುಕೊಳ್ಳಲು ಸೂಕ್ತ ಸಮಯ ಎಂದು, ಮಾತಿಗೆ ಸಿದ್ಧತೆ ಮಾಡಿಕೊಳ್ಳತೊಡಗಿದ ಶಿವಣ್ಣ.

ಅಣ್ಣಯ್ಯ ‘ಬಹಳ ಚೆನ್ನಾಗಿತ್ತು ಮಾರಾಯ ಊಟ…ನಿಮ್ಮ ಮನೆಯವರಿಗೆ ಥ್ಯಾಂಕ್ಸ್ ಹೇಳಿದೆ ಅಂತ ಹೇಳು’ ಎನ್ನುತ್ತಾ ತಟ್ಟೆಯಲ್ಲೇ ಕೈತೊಳೆದು ಕೈ ಒರೆಸುತ್ತಾ ಎದ್ದು ನಿಂತರು.

ಅವರು ಎದ್ದುದರಿಂದ ಶಿವಣ್ಣನೂ ಎದ್ದು ನಿಂತ. ಸ್ಕಾಚ್‌ನ ಹುರುಪಿನಲ್ಲಿದ್ದ ಅಣ್ಣಯ್ಯ ಏನೋ ಬೇಡಿಕೆ ಇಡಲು ತಡವರಿಸುವವರಂತೆ ತದೇಕವಾಗಿ ಶಿವಣ್ಣನ ಮುಖ ನೋಡತೊಡಗಿದರು…..ಶಿವಣ್ಣನಿಗೆ ಮುಜುಗರವಾಯಿತು.

ʻಇನ್ನೇನಾದರೂ ಬೇಕಿತ್ತಾ ಅಣ್ಣಯ್ಯ’ ಎಂದ. ತನಗೇನು ಬೇಕು ಎಂದು ಶಿವಣ್ಣನ ಮುಂದೆ ಧೈರ್ಯವಾಗಿ ಕೇಳುವ ಹುಮ್ಮಸ್ಸನ್ನು ಸ್ಕಾಚ್ ಒದಗಿಸಿತ್ತು, ಅಣ್ಣಯ್ಯನಿಗೆ

‘ಹೋಗೋ ಮಾರಾಯ ಒಂದು ಮಾವಿನ ಹಣ್ಣು ಕಳ್ಸು’ ಎಂದರು. ….ಶಿವಣ್ಣ ಗಲಿಬಿಲಿಗೊಳಗಾದ.

‘ಇದೆಂತಹಾ ಬೇಡಿಕೆ! ಸೇಬು ತಾ ಅಂದರೆ ತರಬಹುದು. ರಸಬಾಳೆ ತಾ ಅಂದ್ರೆ ತರಬಹುದು, ಹೋಗ್ಲಿ ಒಂದು ಐವತ್ತು ಸಾವಿರ ಹಣ ತಾ ಎಂದರೂ ಹೇಗಾದರೂ ಹೊಂದಿಸಿ ತರಬಹುದು…ಆದರೆ ಈ ಶಿವರಾತ್ರಿಯ ಉರಿ ಕಾಲದಲ್ಲಿ ಮಾವಿನಹಣ್ಣು ಎಲ್ಲಿ ತರುವುದಪ್ಪಾ ‘ ಎಂದು ತಲೆಬಿಸಿಯಾಗತೊಡಗಿತು.

ಫಲಪ್ರಧ ಮಾತುಕತೆ ಮುಗಿಸಿ ಶಿವಣ್ಣ ಖಷಿಯಾಗಿ ಬರಬಹುದೆಂದು ಕಾದಿದ್ದ ಅವನ ಗೆಳೆಯರಿಗೆ ಅವನ ಮುಖಭಾಗ ಶಿವಣ್ಣನಿಗೆ ಇದು ತನ್ನಿಂದ ಅಸಾಧ್ಯ ಎನ್ನಿಸಿತು. ‘ಇನ್ನೇನ್ಮಾಡದು, ಇದು ನನ್ನ ಕೈಲಾಗದ ಕೆಲಸ. ಅಧ್ಯಕ್ರ ಕುರ್ಚಿಯ ಆಸೆ ಬುಟ್ಟಂಗೆಯ ನಡಿರಿ’ ಎಂದ.

ಪುಟ್ಟೇಗೌಡ ಎಲ್ಲ ದಿಕ್ಕುಗಳಲ್ಲೂ ತಿರುಗಾಡಿ ಪ್ರಪಂಚ ಜ್ಞಾನ ಪಡೆದವನು. ಕೊನೆಯ ಘಟ್ಟದಲ್ಲಿ ಶಿವಣ್ಣ ಕೈಚೆಲ್ಲಿ ನಿರಾಸೆ ಹೊಂದುವುದು ಅವನಿಗೆ ಸರಿ ಬರಲಿಲ್ಲ. ಏನೋ ನಿರ್ಧಾರ ಮಾಡಿದವನಂತೆ ‘ಎಲ್ಲಿ ನಿಮ್ ಜೀಪ್ ಕೀ ಕೊಡಿ ಅಣ್ಣ….ಇಲ್ಲೇ ಇರಿ… ಒಂದ್ ಅರ್ಧ ಗಂಟೆಲಿ ಬಂದೆ’ ಎನ್ನುತ್ತಾ ಜೀಪ್ ಚಲಾಯಿಸುತ್ತಾ ಹೊರಟೇಹೋದ….

ಅರ್ಧ ಗಂಟೆಯೂ ಆಗಿರಲಿಲ್ಲ. ಜೀಪ್ ಹಿಂತಿರುಗಿ ಬಂತು. ಶಿವಣ್ಣ ಕುತೂಹಲದಿಂದ ನೋಡಿದ. ಜೀಪಿನಿಂದ ಒಬ್ಬ ಸ್ಕೂಲ ಕಾಯದ ಹೆಣ್ಣು ಇಳಿದಳು. ಹಳ್ಳಿ ಹೆಂಗಸಿನಂತೆ ಸೀರೆ ಉಟ್ಟು, ಹಣೆಗೆ ಅಗಲ ಕುಂಕುಮ ಇಟ್ಟಿದ್ದಳು. ಕೂದಲಿಗೆ ಹರಳೆಣ್ಣೆ ತೀಡಿ ಹಿಂದಕ್ಕೆಳೆದು ತುರುಬು ಕಟ್ಟಿದ್ದಳು. ಕಪ್ಪು ಕೂದಲಿನ ಮಧ್ಯೆ ಬಿಳಿ ಕೂದಲುಗಳೂ ಸಮಾ ಇದ್ದಂತೆ ತೋರುತ್ತಿತ್ತು. ಮೈಯ ಅಂಗಾಂಗಗಳಲ್ಲಾ ಜಬ್ಬಾಗಿದ್ದು, ಅವಳು ಐವತ್ತಕ್ಕೂ ಹೆಚ್ಚಿನ ವಯಸ್ಸಾದವಳಂತೆ ತೋರುತ್ತಿದ್ದಳು.

ರಸಭರಿತವಾದ ಮಾವಿನ ಹಣ್ಣನ್ನು ಕಲ್ಪಿಸಿಕೊಂಡಿರುವ ಆ ವಿದುರನ ಮುಂದೆ ಈ ಪ್ರಾಯ ಮೀರಿದ ಹೆಣ್ಣನ್ನು ಹೇಗೆ ನಿಲ್ಲಿಸುವುದು. ಇದರಿಂದ ಅವರನ್ನು ಖುಷಿಪಡಿಸುವುದಿರಲಿ, ಅದರಿಂದ ಹೆಚ್ಚಿನ ಕೇಡೇ ಆಗಬಹುದು ಎಂದು ಶಿವಣ್ಣ ಯೋಚಿಸಿದ. ಭಯದಿಂದ ಅವನ ಅಂಗಾಂಗಗಳು ನಡುಗುತ್ತಿರುವುದನ್ನು ಪುಟ್ಟೇಗೌಡ ನೋಡಿದ.. ಪರಿಸ್ಥಿತಿ ಹೀಗೇ ಮುಂದುವರೆಯಲು ಬಿಟ್ಟರೆ ಕೆಲಸ ಕೇಡು ಎನಿಸಿತು.

ಹೆಂಗಸನ್ನು ಮುಂದೆ ನಡೆಯುವಂತೆ ಸಂಜ್ಞೆ ಮಾಡಿದ ಪುಟ್ಟೇಗೌಡ, ಶಿವಣ್ಣನ ನಡುಗುವ ಕೈ ಹಿಡಿದೆಳೆಯುತ್ತಾ ಪ್ರವಾಸಿ ಮಂದಿರದ ಒಳಗೆ ಹೋದ. ಮಹಡಿ ಮೆಟ್ಟಿಲ ಬಳಿ ತಾನು ನಿಂತು ಅವರಿಬ್ಬರನ್ನು ಮೇಲಿನ ರೂಮಿನ ಕಡೆ ಹೋಗುವಂತೆ ಹೇಳಿದ.

ಶಿವಣ್ಣ ಹೆಜ್ಜೆ ತೆಗೆಯಲು ಮನಸ್ಸಿಲ್ಲದವನಂತೆ ಹಾಗೆಯೇ ಸೆಟೆದು ನಿಂತಿದ್ದು ಕಂಡು, ನಡೆಯುತ್ತಿದ್ದ ಹೆಂಗಸಿನ ಹಿಂದೆ ನಾಲೈದು ಮೆಟ್ಟಿಲವರೆಗೂ ಅವನನ್ನು ನೂಕುತ್ತಾ ಹೋಗಿ ಬಿಟ್ಟು ಬಂದ.

ಶಿವಣ್ಣ ನಡುಗುವ ಕೈಯಲ್ಲೇ ಅಣ್ಣಯ್ಯನವರ ರೂಮಿನ ಚಿಲಕ ಬಡಿದ: ಬಾತ್ ರೂಮಿನಲ್ಲಿದ್ದ ಅವರು ‘ಬಾಗಿಲು ತೆಗೆದಿದೆ’ ಎಂದರು. ಒಳಹೋದ ಹೆಂಗಸು ಸೋಫಾದ ಮೇಲೆ ಕುಳಿತು ಕೈ ಬಳೆಗಳನ್ನು ಮೇಲೆ ಕೆಳಗೆ ಆಡಿಸಿಕೊಳ್ಳುತ್ತಾ ಕುಳಿತಳು.

ಶಿವಣ್ಣ ಅಣ್ಣಯ್ಯನನ್ನು ಹೇಗೆ ಎದುರಿಸುವುದು ಎಂದು ಯೋಚಿಸುತ್ತಿದ್ದ.

ಒಳಗಿದ್ದ ಅಣ್ಣಯ್ಯನ ಕಿವಿಗೆ ಬಳೆಗಳ ಗಲಗಲ ಸದ್ದು ಕೇಳುತ್ತಿತ್ತು.

‘ಶಿವಣ್ಣ ನೀನು ಹೋಗಿ ಬಿಟ್ಟು ಬೆಳಗ್ಗೆ ಬಾ ಮಾತಾಡೋಣ’ ಎಂದು ಒಳಗಿನಿಂದಲೇ ಕೂಗಿದ್ದರು ಅಣ್ಣಯ್ಯ…

  • *

ಹಿಂದಿನ ದಿನದ ಘಟನಾವಳಿಗಳನ್ನೆಲ್ಲಾ ಮನಸ್ಸಿನಲ್ಲೇ ಮೆಲುಕು ಹಾಕುತ್ತಾ ತಪ್ಪಿತಸ್ಥ ಭಾವ ಹೊತ್ತು ನಿಂತಿದ್ದ ಶಿವಣ್ಣ, ‘ಸಾಹೇಬ್ರು ಕರೀತಿದಾರೆ ಬನ್ನಿ’ ಎಂದಾಗ ಬೆಚ್ಚಿದ.

ವಯಸ್ಸು ಮೀರಿದ ಹೆಣ್ಣನ್ನು ಅವರ ರೂಮಿಗೆ ಕಳಿಸಿದ್ದರಿಂದ ಅಣ್ಣಯ್ಯ ಕುಪಿತರಾಗಿದ್ದರೆ ಅವರನ್ನು ಹೇಗೆ ಎದುರಿಸುವುದು ಎಂದು ಯೋಚಿಸುತ್ತಾ ಪ್ರವಾಸಿ ಮಂದಿರದ ಒಳಗೆ ಪ್ರವೇಶಿಸಿದ.

ಬನಿಯನ್, ಪಂಚೆಯಲ್ಲಿದ್ದ ಅಣ್ಣಯ್ಯನವರು ಎರಡೂ ಕೈಗಳನ್ನೂ ಮೇಲೆತ್ತಿ ವ್ಯಾಯಾಮದ ಭಂಗಿಯಲ್ಲಿ ಮೆಟ್ಟಿಲಿಳಿದು ಬರುತ್ತಿದ್ದರು.

ಶಿವಣ್ಣ ಉಸಿರು ಬಿಗಿ ಹಿಡಿದು ನಿಂತುಕೊಂಡ.

ಅವನೆದುರಿಗೆ ನಿಂತ ಅಣ್ಣಯ್ಯ ಮುಖದ ಮೇಲೆ ದೃಷ್ಟಿ ನೆಟ್ಟು ‘ಎಂತಾ ಕೆಲಸ ಮಾಡಿದೆ ಮಾರಾಯ’ ಎಂದರು.

ಶಿವಣ್ಣನಿಗೆ ಉಸಿರು ಸಿಕ್ಕಿಕೊಂಡಂತೆಯೇ ಆಯಿತು. ಪಿಳಿ ಪಿಳಿ ಕಣ್ಣು ಬಿಡುತ್ತಾ ನಿಂತುಕೊಂಡ.

‘ಅಲ್ಲಾ ಮಾರಾಯ ಮಾವಿನ ಹಣ್ಣು ತಾ ಅಂದ್ರೆ ಹಲಸಿನ ಹಣ್ಣು ತಂದಿದ್ದೀಯಲ್ಲಾ’ ಎನ್ನುತ್ತಾ ಶಿವಣ್ಣನ ಮುಖಭಾವವನ್ನೇ ಗಮನಿಸಿದರು.

ಶರೀರದ ಅಂಗಾಂಗಗಳೆಲ್ಲಾ ಕಂಪಿಸುತ್ತಿದ್ದ ಅವನು ಯಾಕೆ ಭಯಗೊಂಡಿದ್ದಾನೆಂದು ಅರಿವಾಗಲಿಲ್ಲ.

‘ಇರ್ಲಿ ಬಾ… ಅದೂ ಒಂತರ ಚೆನ್ನಾಗೇ ಇತ್ತು’ ಎನ್ನುತ್ತಾ ಹೆಗಲ ಮೇಲೆ ಕೈ ಹಾಕಿ ಸೋಫಾದ ಮೇಲೆ ತನ್ನ ಬಳಿ ಕೂರಿಸಿಕೊಳ್ಳುತ್ತಾ, ಮೇಟಿಗೆ ಕೇಳುವಂತೆ ‘ಇಲ್ಲಿಗೆ ಎರಡು ಟೀ ಕಳಿಸಿ’ ಎಂದು ಕೂಗು ಹಾಕಿದರು.

। ಮುಂದಿನ ವಾರಕ್ಕೆ ।

‍ಲೇಖಕರು Admin

8 November, 2025

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading