ನೊಂದ ಕನಸು

ಗಿರಿಜಾಶಾಸ್ತ್ರಿ
“ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ”
ಆಲಯಗಳೆಲ್ಲ ಬಿದ್ದು ಹೋದವು
ಅದರೊಳಗೆ ಸಿಕ್ಕಿದ ‘ಹೆಣ್ಣು’ ‘ಗಂಡು’ ಗಳು ಜಜ್ಜಿಹೋದವು
ಗಂಟೆ ಬಾರಿಸುತ್ತಲೇ ಪೂಜಾರಿ
ಧರೆಗುರುಳಿದ
ಮಸೀದಿಯ ಮುಲ್ಲನೂ
ಇಗರ್ಜಿಯ ಪೋಪನೂ
ಹೊರಗೆ ಕಾಯುವ ಹೊಲೆಮಾದಿಗರೂ ನೆಲಸಮವಾದರು.
ಧನಿಕ ಮಾಲಿಕ ಎದೆಯೊಡೆದು ಸತ್ತ
ಸಾಲುಗಟ್ಟಿದ ಭಿಕಾರಿಗಳು ಕುಳಿತಲ್ಲೇ ಕುಸಿದರು.
ಎಲ್ಲ ಹೆಣಗಳನ್ನೂ ಈಗ ಸಾಗಿಸಬೇಕಾಗಿದೆ ಸ್ಮಶಾನಕ್ಕೆ
ಹೆಗಲು ಕೊಡುವೆಯೇನೇ ಅಕ್ಕಾ…
ರಕ್ತಸಿಕ್ತ ಬಯಲ
ತೊಳೆಯಬೇಕಾಗಿದೆ
ಕೈ ನೀಡುವೆಯೇನೇ..
ಎಲ್ಲಾ ಸುಟ್ಟುರುಹಿದ ನೆಲದಲ್ಲಿ
ಹೊಸಬೀಜ ಬಿತ್ತಬೇಕಾಗಿದೆ
ನಿನ್ನ ಚೆನ್ನಮಲ್ಲಿಕಾರ್ಜುನನ
ಕಳುಹಿಸುವೆಯೇನೇ
ನನ್ನ ಸಂಗಾತಕ್ಕೇ..





0 Comments