ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆಂಗಸರು ಮುಂಚೂಣಿಯಲ್ಲಿ ಸಾಯುವುದಿಲ್ಲ

ಬಿಲ್ಕಿಸ್ ಕ್ಯೂಜಾ ಮಾಲೆ

ಕ್ಯೂಬಾದಲ್ಲಿ 1942 ಹುಟ್ಟಿ, ಅವಳು ಮತ್ತವಳ ಗಂಡ ಕ್ರಾಂತಿಕಾರಿ ಕವಿಗಳಾಗಿದ್ದರಿಂದ ದೇಶಭ್ರಷ್ಟೆಯಾಗಿ ಅಮೆರಿಕಾಗೆ ವಲಸೆ ಬಂದು ಪತ್ರಕರ್ತೆಯಾಗಿ ಕೆಲಸ ಮಾಡಿದವಳು.

ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

**

ಹೆಂಗಸರು ಯುದ್ಧ ಮುಂಚೂಣಿಯಲ್ಲಿ ಸಾಯುವುದಿಲ್ಲ

ಗಾಲ್ಫ್ ಚೆಂಡುಗಳಂತೆ ಅವರ ತಲೆಗಳು ಉರುಳುವುದಿಲ್ಲ

ಮದ್ದಿನ ಮಳೆಕಾಡಿನಲ್ಲಿ ಮಲಗುವುದಿಲ್ಲ ಅವರು

ಆಕಾಶವನ್ನು ಛಿದ್ರಗೊಳಿಸುವುದಿಲ್ಲ

ಅವರ ಎದೆಯೊಳಗೆ ಹಿಮಗಟ್ಟುವುದಿಲ್ಲ

ಹೆಂಗಸರು ಮುಂಚೂಣಿಯಲ್ಲಿ ಸಾಯುವುದಿಲ್ಲ.

ಅವರು ಜೆರುಸಲೇಮಿನಿಂದ ದೆವ್ವಗಳನ್ನು ಓಡಿಸುವುದಿಲ್ಲ

ಕಾಲುವೆಗಳನ್ನು ರೈಲುಹಳಿಗಳನ್ನು ಉಡಾಯಿಸುವುದಿಲ್ಲ

ಯುದ್ಧಕಲೆ ಅವರಿಗೆ ಕರಗತವಲ್ಲ

ಶಾಂತಿ ಕೂಡಾ. ಹೆಂಗಸರು

ಪೇಟೆಯ ವೃತ್ತದಲ್ಲಿ ಕಡೆದು ನಿಲ್ಲಿಸಿದ ಶಿಲೆಯ ಅನಾಮಿಕ ಸೈನಿಕ

ಅಥವಾ ಸೇನಾಪತಿಗಳಾಗುವುದಿಲ್ಲ.  

ಹೆಂಗಸರು ಮುಂಚೂಣಿಯಲ್ಲಿ ಸಾಯುವುದಿಲ್ಲ

ಅವರು ಲೂವ್ರ್ ಮ್ಯೂಸಿಯಮ್ಮಿನಲ್ಲಿ

ಉಪ್ಪಿನ ಶಿಲ್ಪಗಳಾಗುತ್ತಾರೆ

ಫೆಡ್ರಾ ಥರ ತಾಯಂದಿರಾಗುತ್ತಾರೆ

ಎಂಟನೇ ಹೆನ್ರಿಯ ಪ್ರೇಮಿಗಳಾಗುತ್ತಾರೆ

ಮಾತಾ ಹರಿಗಳು 

ಈವಾ ಪೆರೋನ್ ಗಳು

ಪ್ರಧಾನಮಂತ್ರಿಗಳು ಸಮಾಲೋಚಿಸುವ ರಾಣಿಯರು

ದಾದಿಯರು, ಅಡಿಗೆಯವರು, ಅಗಸಗಿತ್ತಿಯರು

ರೊಮ್ಯಾಂಟಿಕ್ ಕವಿಗಳಾಗುತ್ತಾರೆ.

ಹೆಂಗಸರು ಚರಿತ್ರೆ ರಚಿಸುವುದಿಲ್ಲ ಆದರೆ

ಒಂಭತ್ತು ತಿಂಗಳ ನಂತರ ತಮ್ಮ ಗರ್ಭದಿಂದ

ಅದನ್ನು ಹೊರನೂಕುತ್ತಾರೆ ಮತ್ತು

ಯುದ್ಧಭೂಮಿಯಿಂದ ರಜೆಗೆ ಬಂದ ಸೈನಿಕನಂತೆ

ಇಪ್ಪತ್ತನಾಲ್ಕು ಗಂಟೆ ನಿದ್ದೆಹೋಗುತ್ತಾರೆ.

***

‍ಲೇಖಕರು avadhi

9 February, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading