‘ಇನ್ನೇನೂ ಬೇಡ, ಕುಡಿಯದ ಹಾಗೆ ಮಾಡಿ ಸಾಕು’

ಅಂಜಲಿ ರಾಮಣ್ಣ

ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು

**

‘ಸರಿ ಹಾಗಾದರೆ ನಿನಗೀಗ ಏನು ಬೇಕು?’ ಎಂದು ಕೇಳಿದೆ. ಪ್ರತಿಷ್ಠಿತ ಶಾಲೆಯೊಂದರಲ್ಲಿ ನಾಲ್ಕನೆಯ ತರಗತಿ ಓದುತ್ತಿದ್ದ ಬಾಲಕ ತನ್ನ ವಿವರಗಳನ್ನು ಮನೆಯ ವಾತಾವರಣವನ್ನೂ ವಿವರಿಸಿದ್ದ. ಅಲ್ಲಿಯೇ ಇದ್ದ ಅವನ ಅಕ್ಕ, ಏಳನೆಯ ತರಗತಿ ಓದುತ್ತಿದ್ದವಳು ಇಂಗ್ಲೀಷಿನಲ್ಲಿ ’ಇನ್ನೇನೂ ಬೇಡ ನಮ್ಮ ತಂದೆ ತಾಯಿ ಕುಡಿಯದ ಹಾಗೆ ಮಾಡಿ ಸಾಕು’ ಎಂದಳು. ಒಂದೆರಡು ನಿಮಿಷ ಏನೂ ತೋಚದೆ ಕಣ್ಣು ಮುಚ್ಚಿದೆ. ಆ ಅಕ್ಕ, ತಮ್ಮ ಸ್ವತಃ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಸಹಾಯ ಬೇಡಿದ್ದರು. ಹಾಗಾಗಿ ನನ್ನ ಮುಂದೆ ನಿಂತಿದ್ದರು.

ಆ ದಂಪತಿಗೆ ಪೂರ್ವಜರಿಂದ ಬಂದ ಬೇಕಾದಷ್ಟು ಆಸ್ತಿ ಇದೆ. ನಾಲ್ಕು ಜನಕ್ಕಾಗುವಷ್ಟು ವಿದ್ಯಾರ್ಹತೆ ಗಳಿಸಿದ್ದರು. ಒಳ್ಳೊಳ್ಳೆಯ ಕೆಲಸದಲ್ಲಿದ್ದರು. ಒಂದು ತಿಂಗಳ ಸಂಬಳದಲ್ಲಿ ಜೀವನವನ್ನೇ ಒಪ್ಪ ಓರಣವಾಗಿಸಿಕೊಳ್ಳಬಹುದಿತ್ತು. ಉಹುಂ, ಆದರೆ ಹಾಗಾಗಲಿಲ್ಲ ವಾರಾಂತ್ಯದ ಕುಡಿತ ಎಂದು ಶುರುವಾಗಿ ಈಗ ದಿನ ನಿತ್ಯದ ಚಟವಾಗಿತ್ತು. ತಾಯಿ ಅಡುಗೆಮನೆಯ ಕಡೆ ಮುಖ ಹಾಕುವುದನ್ನು ಮರೆತಿದ್ದಳು. ಮಕ್ಕಳು ನಿತ್ಯವೂ ಹೋಟೇಲಿನಲ್ಲಿ ತಿನ್ನುತ್ತಿದ್ದರು. ಇರುವೆ, ಜಿರಲೆಗಳು ಮನೆಯ ಸದಸ್ಯರಿಗಿಂತ ಹತ್ತಿರದ ಕುಟುಂಬವಾಗಿದ್ದರು. ಸೋಪು ಕಾಣದ ಬಟ್ಟೆ, ಬಾಲ್ಯವಿಲ್ಲದ ಕಣ್ಣುಗಳು, ಬಕಲ್ಸ್ ಕಿತ್ತಿದ್ದ ಬ್ಯಾಗ್, ರಟ್ಟು ಚೂರಾಗಿದ್ದ ಶಾಲಾ ಪುಸ್ತಕ, ಫೀಸು ಕಟ್ಟಿಲ್ಲ ಎನ್ನುವ ಸಾಲು ಸಾಲು ನೋಟಿಸುಗಳನ್ನು ಹಿಡಿದು ಆ ಮಕ್ಕಳು ಹಿಡಿಯಲ್ಲಿ ಜೀವ ಇರಿಸಿಕೊಂಡು ನಿಂತಿದ್ದರು. ತಂದೆ ಆಗತಾನೇ ಎರಡನೆಯ ಬಾರಿಗೆ ಮದ್ಯವ್ಯಸನಿಗಳ ಪುನರ್ವಸತಿ ಕೇಂದ್ರದಿಂದ ಬಿಡುಗಡೆಯಾಗಿ ಬಂದಿದ್ದ. ತಾಯಿಯ  ಕಣ್ಣು ಇನ್ನೂ ಅರ್ಧ ನಶೆಯಲ್ಲಿತ್ತು. ಮದ್ಯಪಾನ ಚಟವಾಗುವುದು, ಅಸಭ್ಯ, ಅವಾಚ್ಯವಾಗುವುದು ಕೇವಲ ಬಡವರ ಗುಡಿಸಲುಗಳಲ್ಲಿ, ಬಾಕಿಯಂತೆ ದೊಡ್ಡವರದೆಲ್ಲಾ ಬರೀ ’ಸೋಷಿಯಲ್ ಡ್ರಿಂಕಿಂಗ್’ ಎಂದುಕೊಂಡಿದ್ದವಳ ಕೆನ್ನೆಗೆ ಚಟೀರ್ ಎಂದು ಹೊಡೆದ ಘಟನೆ ಇದು.

ಜೈಲಿನಲ್ಲಿ ಐದು ವರ್ಷದ ಬಾಲಕನೊಬ್ಬ ತಾಯಿಯ ಜೊತೆಯಿದ್ದ.  ಅವರಿಬ್ಬರು ಅಲ್ಲಿಗೆ ಬಂದು ಮೂರೇ ದಿನಗಳಾಗಿತ್ತು. ಆ ಹುಡುಗ ಅದೆಷ್ಟು ಪೋಲಿ ಮಾತುಗಳನ್ನು ಆಡುತ್ತಿದ್ದ ಎಂದರೆ ನನಗೆ ಅರ್ಥವೇ ಆಗದಷ್ಟು ವ್ಯಾಪ್ತಿಯಿತ್ತು ಅವನ ಭಾಷೆಗೆ. ಅವನನ್ನು ಒಂದು ಸಂಸ್ಥೆಗೆ ಸೇರಿಸಲಾಯಿತು. ಈಗ ಮತ್ತೈದು ವರ್ಷಗಳು ಕಳೆದಿವೆ ಆದರೂ ಆ ಹುಡುಗನ ಮಾತು ಸುಧಾರಣೆ ಕಂಡಿಲ್ಲ. ಹುಟ್ಟಿದ ಐದೇ ವರ್ಷದಲ್ಲಿ ತಂದೆ ಕುಡಿದು ಬಂದು ಮಾಡುತ್ತಿದ್ದ ಗಲಾಟೆಗಳು ಅವನ ಮೇಲೆ ಇಷ್ಟು ಗಾಢವಾಗಿ ಪ್ರಭಾವ ಬೀರಿದೆ. ಸಹಜ ಸಮಾಜಕ್ಕೆ ಹೊಂದಿಕೊಳ್ಳಲು ಸಭ್ಯ ಇರಿಸರಿಕೆಗೆ ಬರಲು ಅವನಿಗೆ ದಶಕಗಳೇ ಆಗಬಹುದು.

ಹದಿಮೂರು ವರ್ಷದ ಆ ಹುಡುಗಿಯ ಮನೆಯಲ್ಲಿ ಯಾರೂ ಯಾವ ದುರಭ್ಯಾಸವನ್ನು ಇಟ್ಟುಕೊಂಡಿರಲಿಲ್ಲ ಆದರೂ ಅವಳು ಕುಡಿತವನ್ನು ಚಟವಾಗಿಸಿಕೊಳ್ಳುವವರೆಗೂ ಕುಟುಂಬಕ್ಕೆ ತಿಳಿಯಲೇ ಇಲ್ಲ. ವೈದ್ಯರ ನಿರಂತರ ಮಧ್ಯಸ್ಥಿಕೆಯಿಂದ ಗೊತ್ತಾಗಿದ್ದು ಅವಳ ಮನೆಯ ಕಿಟಕಿಗೆ ಕಾಣುವಂತೆ ಇದೆ ಪಕ್ಕದ ಮನೆಯ ’ಅಂಕಲ್’ನ ಕೋಣೆ. ಆತ ನಿತ್ಯವೂ ರಂಗುರಂಗಾದ ಬಾಟಲಿಗಳನ್ನು ಸುರುವಿಕೊಳ್ಳುತ್ತಿದ್ದನ್ನು ಕಂಡವಳು ಕುತೂಹಲಕ್ಕೆ ಆತನ ಬಳಿಯಿಂದಲೇ ರುಚಿ ನೋಡಿ ಈಗ ಹೀಗಾಗಿದ್ದಳು. ಚಟ ಬಿಡಿಸುವ ಹಾದಿಯಲ್ಲಿ ಆತ್ಮಹತ್ಯೆಯ ಪ್ರಯತ್ನಗಳೂ ನಡೆದಿದೆ. ಜಗತ್ತನ್ನೇ ಆಳಬಲ್ಲಷ್ಟು ಚುರುಕಿದ್ದ ಹುಡುಗಿ ಈಗ ಮೂಳೆ ಚಕ್ಕಳವಾಗಿ, ಮನಸ್ಸಿನ ಶಕ್ತಿ ಕಳೆದುಕೊಂಡಿದ್ದಾಳೆ. ಅವಳು ಬೆಳೆದು ಬಾಳಲು ಆಗದಂತೆ ಮಾಡಿದ್ದು ಸಮಾಜ.

ಹೀಗೆ ಎಷ್ಟೋ ಮಕ್ಕಳು ತಮ್ಮ ಕಷ್ಟಗಳನ್ನು ಹಂಚಿಕೊಳ್ಳಲಾಗದೆ, ತಮ್ಮನ್ನೇ ಅಪರಾಧಿ ಜಾಗದಲ್ಲಿ ಇರಿಸಿ ತುಟಿ ಬಿಗಿಹಿಡಿದು ನೋಯುತ್ತಿರುತ್ತಾರೆ. ವಯಸ್ಕನೊಬ್ಬ ಕುಡುಕ ಎಂದೊಡನೆಯೇ ನಾವುಗಳು ಅವನನ್ನು ದೂರತಳ್ಳುತ್ತೇವೆ ಆದರೆ ಆ ಕುಟುಂಬದ ಮಕ್ಕಳು ಅನುಭವಿಸುತ್ತಿರುವ ಯಾತನೆಯ ಬಗ್ಗೆ ನಮ್ಮದು ದೊಡ್ಡ ನಿರ್ಲಕ್ಷ. ಅಂಕಿಅಂಶದಂತೆ ಶೇಕಡ 70% ಇಂತಹ ಮಕ್ಕಳು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಮುಂದೆ ಬರುವುದಿಲ್ಲ. ನುಂಗುತ್ತಾರೆ. ಕುಂದುತ್ತಾರೆ. ಅಭದ್ರತೆಯಿಂದ ನರಳುತ್ತಾರೆ.

ಸಮಾಜಕಲ್ಯಾಣ ಮತ್ತು ಸಬಲೀಕರಣ ಸಚಿವಾಲಯದ ಸಮೀಕ್ಷೆಯಂತೆ 1 ಹೆಂಗಸಿಗೆ 17 ಗಂಡಸರ ಅನುಪಾತದಲ್ಲಿ ಮದ್ಯಪಾನ ವ್ಯಸನಿಗಳು ಇದ್ದಾರೆ ಈ ದೇಶದಲ್ಲಿ. ಕುಡುಕ ತಾಯ್ತಂದೆಯರಿಂದ ನೊಂದ ಮಕ್ಕಳೆಡೆಗೆ ನಮ್ಮ ಮೌನ ಮುರಿದು ನಾವುಗಳು ಅವರ ದನಿಯಾಗಬೇಕು ಎನ್ನುವ ಉದ್ದೇಶದಿಂದ ಫೆಬ್ರವರಿ 11 ರಿಂದ 17ರವರೆಗೂ ಜಗತ್ತಿನಾಂದ್ಯಂತ ’ಮದ್ಯವ್ಯಸನಿ ಪಾಲಕರ ಮಕ್ಕಳ ಜಾಗೃತಿ ಶಿಬಿರ’ ಎನ್ನುವ ತಲೆಬರಹದಲ್ಲಿ ಈ ವಿಷಯದ ಬಗ್ಗೆ ಸಮಾಜವನ್ನು ಎಚ್ಚರಿಸುವ ಕೆಲಸ ನಡೆಯುತ್ತಿದೆ. ಮಾಧ್ಯಮಗಳ ಮೂಲಕ, ಭಾಷಣ, ಚರ್ಚೆ ಮತ್ತು ಮಾಹಿತಿಗಳನ್ನು ಹಂಚಿಕೊಳ್ಳುವುದರ ಮೂಲಕ ಮಾರ್ಗದರ್ಶನ ನೀಡಲಾಗುತ್ತಿದೆ. ಕುಟುಂಬವನ್ನು ಹಳಿಗೆ ತಂದು ನೊಂದ ಮಕ್ಕಳನ್ನು ಸಬಲರನ್ನಾಗಿ ಮಾಡಿ ಅವರುಗಳನ್ನು ಸಮಾಜಕ್ಕೆ ಹೊರೆಯಾಗುವುದನ್ನು ತಪ್ಪಿಸಲು ಪ್ರಯತ್ನಗಳು ನಡೆಯುತ್ತಿವೆ. ತಮಗೆ ತೋಚಿದಂತೆ, ತಮ್ಮತಮ್ಮ ಪರಿಧಿಯಲ್ಲಿ ಉದ್ದೇಶವನ್ನು ಸಾಕಾರಗೊಳಿಸುವೆಡೆ ಸಾರ್ವಜನಿಕರೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದಾಗಿರುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯು ಪಾಲಕರ ಕುಡಿತವನ್ನು ಕೌಟುಂಬಿಕ ಖಾಯಿಲೆ ಎಂದು ಗುರುತಿಸಿದೆ. ಕುಡಿತವು ಕುಡಿಯುವ ವ್ಯಕ್ತಿಯ ದೇಹದ ಮೇಲೆ ದುಷ್ಪರಿಣಾಮ ಬೀರುವ ಮೊದಲೇ ಅವರುಗಳ ಮನಸನ್ನು ಹಿಡಿತಕ್ಕೆ ತೆಗೆದುಕೊಂಡು ಅವರ ಮಕ್ಕಳ ವ್ಯಕ್ತಿತ್ವದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿರುತ್ತದೆ.  ಹಾಗಾಗಿ ಮದ್ಯವ್ಯಸನಿಯ  ದೇಹಕ್ಕಿಂತ  ಮೊದಲು ಮನಸ್ಸಿಗೆ ಚಿಕಿತ್ಸೆ ನೀಡಬೇಕಿರುತ್ತದೆ. ಮನೆಯ ಮಕ್ಕಳ ಮಾನಸಿಕ ಖಾಯಿಲೆಗೆ ಮಾರ್ಗದರ್ಶನದ ಮದ್ದು ನೀಡಬೇಕಿರುತ್ತದೆ. ಅದಕ್ಕೇ ಭಾರತ ಸರ್ಕಾರ ‘ಟೆಲಿಮನಸ್ ‘ಎನ್ನುವ ಸಹಾಯವಾಣಿಯನ್ನು ನಡೆಸುತ್ತಿದೆ. ಪ್ರತೀ ಜಿಲ್ಲಾಸ್ಪತ್ರೆಗಳಲ್ಲಿ ಮಾನಸಿಕ ಚಿಕಿತ್ಸಾ ವಿಭಾಗ ತೆರೆಯಲಾಗಿದೆ. ಮಾನಸಿಕ ಆರೋಗ್ಯ ಕಾಯಿದೆ, 2017 ಇದರ ಅಡಿಯಲ್ಲಿ ಆಪ್ತಸಮಾಲೋಚನೆ ಮತ್ತು ಚಿಕಿತ್ಸೆಗೆ ತಗುಲುವ ವೆಚ್ಚವನ್ನು ಸರ್ಕಾರ ಭರಿಸಬೇಕಿರುತ್ತದೆ. ಎಲ್ಲಾ ಆರೋಗ್ಯ ವಿಮೆಯೂ ಮಾನಸಿಕ ಅಸ್ವಸ್ಥತೆಗೆ ತೆಗೆದುಕೊಳ್ಳಬೇಕಿರುವ ಔಷಧ ಮತ್ತು ಇತರೆ ಚಿಕಿತ್ಸೆಯನ್ನು ಈ ಕಾನೂನಿನ ಅಡಿಯಲ್ಲಿ ಕಡ್ಡಾಯವಾಗಿ ಭರಿಸಬೇಕಿರುತ್ತದೆ.

16 ವರ್ಷದ ಸೂಫಿಯಾಳ ತಾಯಿ ಕುಡುಕ ಗಂಡನ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇವಳೂ ಬಾಲ್ಯದಲ್ಲಿಯೇ ಚಟಕ್ಕೆ ಬಿದ್ದು ಆಗಾಗ್ಗೆ ಮನೆ ಬಿಟ್ಟು ಹೋಗುತ್ತಿದ್ದಳು. ದೂದೂರಿಗೆ ಹೋಗಿ ಮೈಯೆಲ್ಲಾ ಖಾಯಿಲೆ ಗೂಡಾಗಿಸಿಕೊಂಡು ಪೋಲೀಸರ ಕೈಗೆ ಸಿಕ್ಕಿ ಬಿದ್ದು ನನ್ನಲ್ಲಿಗೆ ಬಂದಾಗ ಕುಡಿತ ಬಿಡಲಾರದ ಹಂತಕ್ಕೆ ತಲುಪಿದ್ದಳು. ದೂರದ ಸಂಬಂಧಿ ಎಂದು ಹೇಳಿಕೊಂಡು ಬಂದವರು ಕರೆದುಕೊಂಡು ಹೋಗುತ್ತೇವೆ ಎಂದಾಗ ಹೊರಗೆ ಕುಡಿಯಲು ಸಿಗುತ್ತದೆ ಎನ್ನುವ ಒಳಗಿನ ಆಸೆಗೆ ಮಾತು ಮೀರಿ ಅವರೊಡನೆ ಹೋದವಳು ಮತ್ತೆ ಓಡಿ ಹೋಗಿದ್ದಾಳೆ. ಇನ್ನೂ ಸಿಕ್ಕಿಲ್ಲ. ಬದುಕಿರುವಾಗ ಸಿಗುವಳು ಎನ್ನುವ ಖಾತರಿಯೂ ಇಲ್ಲ. ಇರುವ ಮಕ್ಕಳನ್ನು ಈಗ ಕಾಪಾಡಿಕೊಳ್ಳಬೇಕಿದೆ ಅದಕ್ಕಾದರೂ ನಾವು ಮೌನ ಮುರಿಯೋಣ ಮಕ್ಕಳಿಗೆ ದನಿಯಾಗೋಣ.

ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು

‍ಲೇಖಕರು avadhi

February 9, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: