ಸುಧಾ ಆಡುಕಳ
ಎರಡು ಗಂಡುಮಕ್ಕಳ ತಾಯಿ ನಾನು. ಈ ಸಮಾಜದಲ್ಲಿ ಗಂಡೊಂದು ಮಾನವನಾಗದೇ ಮೃಗೀಯ ವರ್ತನೆಯನ್ನು ತೋರಿದಾಗಲೆಲ್ಲ ಮನಸ್ಸು ತಲ್ಲಣಿಸುತ್ತದೆ. ಮತ್ತೆ ನನ್ನನ್ನು ಅರಿವಿನ ನಿಕಷಕ್ಕೆ ಒಡ್ಡಿಕೊಳ್ಳುವಂತೆ ಮಾಡುತ್ತದೆ. ಖಂಡಿತವಾಗಿಯೂ ಗಂಡುಗಳ ಅಮ್ಮಂದಿರ ಮೇಲೆ ಗುರುತರವಾದ ಹೊಣೆಯಿದೆ. ಸಹಜೀವಿಯಾಗಿ ಹೆಣ್ಣನ್ನು ಗೌರವಿಸುವ ಗುಣವನ್ನಿಂದು ಅವರಲ್ಲಿ ಎರಕ ಹೊಯ್ಯಲೇಬೇಕಿದೆ.
ಇತ್ತೀಚೆಗೆ ನನ್ನ ರಂಗ ಸ್ನೇಹಿತರೊಬ್ಬರು ಹೇಳುತ್ತಿದ್ದರು, “ನಿಜವಾಗಿಯೂ ಇಂದಿನ ಗಂಡುಮಕ್ಕಳು ದ್ರಾಬೆಗಳಾಗುತ್ತಿದ್ದಾರೆ. ಯಾವ ಕೆಲಸವನ್ನೂ ಶ್ರದ್ಧೆಯಿಂದ ಮಾಡಲಾರರು. ಯಾವುದನ್ನೂ ಆಸಕ್ತಿಯಿಂದ ಕಲಿಯಲಾರರು. ಏಕಾಗ್ರತೆಯನ್ನಂತೂ ಅವರಿಂದ ನಿರೀಕ್ಷಿಸಲೇಬಾರದು. ಹೆಚ್ಚು ಅಂದರೆ ಹೇಳಿದ ವಸ್ತುಗಳನ್ನಷ್ಟನ್ನು ಆನ್ಲೈನ್ನಲ್ಲಿಯೋ ಅಥವಾ ಪೇಟೆಗೆ ಹೋಗಿಯೋ ತಂದುಕೊಟ್ಟಾರಷ್ಟೆ. ಅದರಲ್ಲಿಯೂ ಖರೀದಿಯ ದರವನ್ನು ಹೆಚ್ಚು ಹೇಳಿ ದುಡ್ಡು ಹೊಡೆಯದೇ ಇರಲಾರರು. ಆದರೆ ಹೆಣ್ಣುಮಕ್ಕಳು ತಮ್ಮ ಕೆಲಸವನ್ನು ಅದೆಷ್ಟು ತನ್ಮಯತೆಯಿಂದ ನಿರ್ವಹಿಸುತ್ತಿದ್ದಾರೆಂದರೆ, ಇಡಿಯ ಜವಾಬ್ದಾರಿಯನ್ನು ತಮ್ಮ ತಲೆಯ ಮೇಲೆ ಹೊತ್ತುಕೊಂಡು ನಿರ್ವಹಿಸುವರು.” ಅಪವಾದಗಳು ಇರುವವಾದರೂ ಅವರ ಅನುಭವವನ್ನು ಅಲ್ಲಗಳೆಯಲಾಗದು.
ಇವೆಲ್ಲವುಗಳಲ್ಲಿ ನಮ್ಮ ಹೊಣೆಯಿಲ್ಲವೆ? ಖಂಡಿತ ಇದೆ. ನಾವು ಅದೆಷ್ಟೋ ವರ್ಷಗಳಿಂದ ಹೆಣ್ಣುಗಳಿಗೆ ಸುರಕ್ಷತೆಯ ಪಾಠ ಹೇಳುತ್ತಲೇ ಬಂದಿದ್ದೇವೆ. ಆದರೆ ಗಂಡುಗಳಿಗೆ ಅಸರಕ್ಷಿತ ಭಾವವನ್ನು ಸಹಜೀವಿಗಳಲ್ಲಿ ಮೂಡಿಸಬಾರದೆಂಬುದನ್ನು ಹೇಳುವುದನ್ನೇ ಮರೆತಿದ್ದೇವೆ. ಕಳೆದ ಶತಮಾನ ನೀಡಿದ ಸ್ವಾತಂತ್ರ್ಯದ ಗೊಬ್ಬರವನ್ನುಂಡು ಕುಡಿಯೊಡೆದು ಹಬ್ಬಿ ದಾಂಗುಡಿಯಿಡುತ್ತಿರುವ ಹೆಣ್ಣಿನ ಯಶಸ್ಸು ಗಂಡಿನೊಳಗೆ ಮೂಡಿಸುತ್ತಿರುವ ತಲ್ಲಣಗಳನ್ನು ಅರಿಯಲು ಹೋಗಿಲ್ಲ.
ಮನೆ ನಡೆಸುವವ ಎಂಬ ಹೊಣೆಗಾರಿಕೆಯಿಂದ ಜಾರುತ್ತಿರುವ ಅವನೊಳಗೆ ತುಂಬಿಕೊಳ್ಳುತ್ತಿರುವ ಖಾಲಿತನವನ್ನು ತುಂಬಿಸುವುದು ಹೇಗೆಂಬುದರ ಬಗ್ಗೆ ಯೋಚಿಸುತ್ತಲೇ ಇಲ್ಲ. ಅಂಕಗಳ ಆಚೆಗೂ ಶಿಕ್ಷಣ ತನ್ನ ಬಾಹುಗಳನ್ನು ಚಾಚುವ ವೈಶಾಲ್ಯತೆಯನ್ನು ಅರ್ಥಮಾಡಿಕೊಳ್ಳಲೇ ಇಲ್ಲ. ಪರಿಣಾಮಗಳು ಇಂದು ನಮ್ಮ ಮುಂದೆಯೇ ಇವೆ. ನಾವಿನ್ನೂ ಶಿಕ್ಷೆಯ ಬಗ್ಗೆಯೋ ಅಥವಾ ಹೆಣ್ಣುಗಳು ಹದ್ದುಮೀರಿದವೆಂಬ ಗ್ರಹಿಕೆಯಲ್ಲಿಯೋ ಗಿರಕಿಹೊಡೆಯುತ್ತಲೇ ಇದ್ದೇವೆ.
ತುಂಬ ಸರಳವಾದ ಉದಾಹರಣೆಗಳಿವೆ ಎಂದೆನ್ನಿಸಿದರೂ ಇವೇ ಮುಖ್ಯವೆಂದು ನನಗನಿಸಿದ್ದರಿಂದ ಕೆಲವು ಅನುಭವಗಳನ್ನು ಹಂಚಿಕೊಳ್ಳುವೆ. ಅದೊಂದು ಸಂಜೆ ನಾನು ಎಲ್ಲ ಕೆಲಸಗಳನ್ನು ಮುಗಿಸಿ, ನನ್ನಿಷ್ಟದ ಪುಸ್ತಕ ಹಿಡಿದು ಸೋಫಾದಲ್ಲಿ ಸುಖಾಸನದಲ್ಲಿದ್ದೆ. ನಮ್ಮವರು ಆಗತಾನೇ ಸಂತೆಗೆ ಹೋಗಿ ತಂದ ತರಕಾರಿಗಳನ್ನು ನೆಲದಲ್ಲಿ ಹರಡಿಕೊಂಡು ಜೋಡಿಸುತ್ತಿದ್ದರು.
ಹದಿಹರೆಯದ ಮಗ ಪ್ರತಿಕ್ರಿಯಿಸಿದ, “ನಮ್ಮನೆಯಲ್ಲಿ ಎಲ್ಲವೂ ಉಲ್ಟಾ. ಅಮ್ಮ ಸೋಫಾದಲ್ಲಿ ಕುಳಿತು ಓದುವುದು, ಅಪ್ಪ ತರಕಾರಿಗಳನ್ನು ಜೋಡಿಸುವುದು” ಹಳ್ಳಿಯ ಮನೆಗಳಲ್ಲಿ ಗಂಡಸರು ಕುಳಿತಿರುವುದು, ಹೆಂಗಸರು ಇಂತಹ ಕೆಲಸಗಳಲ್ಲಿ ಮುಳುಗಿರುವುದನ್ನು ನೋಡಿ ಅವನು ಹೇಳಿದ ಮಾತಾಗಿತ್ತದು. ನಾನವನನ್ನು ಪ್ರೀತಿಯಿಂದ ಹತ್ತಿರ ಕರೆದು ನಾನು ಮಾಡಿರುವ ಕೆಲಸಗಳ ವರದಿ ನೀಡಿದೆ. ನಾನು ಬೆಳಿಗ್ಗೆ ನಿಂತಲ್ಲಿ ನಿಲ್ಲದೇ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿರುವಾಗ ಅವನಪ್ಪ ಸೋಫಾದಲ್ಲಿ ಮಲಗಿ ಪೇಪರ್ ಓದುವ ದೃಶ್ಯವನ್ನು ನೆನಪಿಸಿದೆ. ಅದೇ ಕೊನೆ. ಮುಂದೆಂದೂ ನನ್ನ ಮಗನ ಬಾಯಲ್ಲಿ ಗಂಡಸುತನದ ಮಾತುಗಳು ಬರಲಿಲ್ಲ. ಅವನು ಮನೆಯಲ್ಲಿರುವಾಗಲೆಲ್ಲ ನಾನು ಬರುವ ಹೊತ್ತಿಗೆ ಬಿಸಿಯಾದ ಚಹಾ ಟೇಬಲ್ನ ಮೇಲೆ ಕಾಯುತ್ತಿರುವುದು ನನ್ನ ಹೆಮ್ಮೆ.
ಮನೆಯ ಕೆಲಸದ ಹುಡುಗಿಯರನ್ನು ನನ್ನ ಮಕ್ಕಳೆಂದಿಗೂ ಅಕ್ಕನೆಂದೇ ಕರೆಯುವುದು. ಒಬ್ಬಳು ಹುಡುಗಿ ನನ್ನ ಮಗ ಅವಳನ್ನು “ರೇವತಿಯಕ್ಕಾ ನೀವು …” ಎಂದು ಮಾತನಾಡಿಸುವಾಗೊಮ್ಮೆ ಅತ್ತೇಬಿಟ್ಟಿದ್ದಳು. “ಇಷ್ಟು ಮನೆಯ ಕೆಲಸ ಮಾಡ್ತೆ. ಯಾರೂ ನನ್ನನ್ನು ನೀವು ಅಂತ ಕರೆದಿರಲಿಲ್ಲ” ಅಂತ. ಮನೆಗೆ ಆಗಾಗ ಬರುವ ಅಕ್ಕ, ತಂಗಿ, ಮೈದುನರ ಹೆಣ್ಣುಮಕ್ಕಳಿಗೆ ನಾನು ವಿಶೇಷ ಮಮತೆ ತೋರುವೆನೆಂದು ನನ್ನ ಮಕ್ಕಳು ಅದೆಷ್ಟೋ ಸಲ ಜಗಳವಾಡಿದ್ದುಂಟು.
ಆಗೆಲ್ಲ ನಾನು ಅವರಿಗೆ ಹೆಣ್ಣುಮಕ್ಕಳಿಗೆ ಇರುವ ಕೆಲವೊಂದು ವಿಶೇಷ ಕಷ್ಟಗಳ ಬಗ್ಗೆ ತಿಳಿಹೇಳಿದ್ದೇನೆ. ಅವರೊಂದಿಗೆ ಸಹಜತೆಯಿಂದ ಮತ್ತು ಸಮಾನತೆಯಿಂದ ವರ್ತಿಸುತ್ತಿರುವರೋ ಇಲ್ಲವೋ ಎಂಬುದರ ಬಗ್ಗೆ ನಿಗಾವಹಿಸಿದ್ದೇನೆ. ಗಂಡಿನ ಬೆಳವಣಿಗೆಯ ಪ್ರತಿಹಂತದಲ್ಲಿಯೂ ಇಂಥದ್ದನ್ನೆಲ್ಲ ಒಡಮೂಡಿಸುವುದು ಸಾಮಾಜಿಕ ಕಾಳಜಿಯೆಂದೇ ನನ್ನ ನಂಬಿಕೆ.
ಇಂದು ಸಾಮಾಜಿಕ ಜಾಲತಾಣಗಳು ಬೇಕಾದ್ದನ್ನು, ಬೇಡದ್ದನ್ನು ನಮ್ಮೆದುರು ಸುರಿಯುತ್ತಲೇ ಇವೆ. ಮೊದಲ ಸಲ ಮಗನ ಮೊಬೈಲ್ನಲ್ಲಿ ಅಂಥವುಗಳ ಕುರುಹು ಕಂಡಾಗಲೇ ಅವುಗಳ ಮಿಥ್ಯತೆಯ ಬಗ್ಗೆ, ಅವು ಸೃಷ್ಟಿಸುವ ಭ್ರಾಮಕತೆಯ ಬಗ್ಗೆ, ಹಿಂಸೆಯೇ ಸುಖವೆಂದು ಅವು ಪ್ರತಿಪಾದಿಸುವುದರ ಬಗೆಗೆಲ್ಲ ಮನಬಿಚ್ಚಿ ಮಾತನಾಡಿದ್ದೇನೆ. ಇಬ್ಬರೂ ಗಂಡುಮಕ್ಕಳಾದ್ದರಿಂದ ಅವರ ಬೆಳವಣಿಗೆಯ ಹಂತದಲ್ಲಿ ಹೆಣ್ಣುಮಕ್ಕಳೊಂದಿಗಿನ ಒಡನಾಟ ಸಿಗುವಂತೆ ಮಾಡಿದ್ದೇನೆ. ಹೆಣ್ಣಿನ ಬಗ್ಗೆ ಕೇವಲವಾಗಿ ಮಾತನಾಡದ, ಹೆಣ್ಣುಗಳ ಕುರಿತಾದ ಹಳಸಲು ಜೋಕುಗಳನ್ನು ಕೇಳಿ ನಗದ ಅವರ ನಡವಳಿಕೆಯ ಬಗ್ಗೆ ತುಂಬ ಹೆಮ್ಮೆಪಟ್ಟಿದ್ದೇನೆ.
ಇವೆಲ್ಲವೂ ನನ್ನ ಹೆಚ್ಚುಗಾರಿಕೆಯನ್ನು ಹೇಳಿಕೊಳ್ಳಲು ಹಂಚಿಕೊಳ್ಳುತ್ತಿರುವುದಲ್ಲ. ನಮ್ಮ ಗಂಡುಗಳೆಲ್ಲ ಅವರಿಗೇ ಅರಿವಿರದೆ ದುರಂತದ ಪ್ರಪಾತಕ್ಕೆ ಜಾರುತ್ತಿರುವ ಗಳಿಗೆಯಲ್ಲಿ ನಾವು ಮಾಡಬಹುದಾದ ಸಣ್ಣಪುಟ್ಟ ಪ್ರಯತ್ನಗಳನ್ನು ಹಂಚಿಕೊಳ್ಳುವ ಬಗೆಯಷ್ಟೆ. ಅಮ್ಮ ಯಾವಾಗಲೂ ಹೇಳುತ್ತಿದ್ದ ಮಾತು ಯಾಕೋ ಮತ್ತೆ ಮತ್ತೆ ನೆನಪಾಗುತ್ತದೆ. ಅವಳ ಸಣ್ಣ ಅಣ್ಣ ಯಾವಾಗಲೂ ಎಲ್ಲ ತಂಗಿಯಂದಿರ ನೋವಿಗೂ ಮಿಡಿಯುತ್ತಿದ್ದ. ಯಾರಿಗೆ ಕಷ್ಟ ಬಂದರೂ ಧಾವಿಸಿ ಬರುವ ಅವನ ಬಗ್ಗೆ ಅಮ್ಮ ಎಲ್ಲರೆದುರು ತುಂಬ ಅಭಿಮಾನದಿಂದ ಹೇಳುತ್ತಿದ್ದಳು, “ನನ್ನ ಸಣ್ಣ ಅಣ್ಣನದು ಹೆಂಗರುಳು. ಯಾರೂ ಏನೇ ಅಂದರೂ ಅವನ ಕರುಳು ಚುರುಕ್ ಅನ್ನುವುದು. ಕೊನೆಯ ಮಗನೆಂದು ನಮ್ಮೊಟ್ಟಿಗೇ ಬೆಳೆದ ನೋಡಿ. ನಮ್ಮ ಗುಣವೇ ಅವನಿಗೂ ಬಂತು.”
ನಮ್ಮ ಘನಂದಾರಿ ಗಂಡುಮಕ್ಕಳನ್ನು ಹೆಣ್ಣುಗಳೊಂದಿಗೆ ಬೆಳೆಸೋಣ. ಏಕೆಂದರೆ ಅವರೊಳಗೆ ಒಂದು ಹೆಂಗರುಳು ಸದಾಮಿಡಿಯುತ್ತಿರಲಿ. ಗಂಡಸುತನವೆಂಬ ನಾಗರ ಹೆಡೆಯಾಡಿಸಿದಾಗಲೆಲ್ಲ ಅವರೊಳಗಿನ ಆರ್ದೃತೆಯನ್ನು ಬಡಿದೆಬ್ಬಿಸಬೇಕಾದದ್ದು ಪೋಷಕರ ತುರ್ತು ಕರ್ತವ್ಯವಾಗಿದೆ.






Excellent, I have always been thinking about the same.
A healthy society is where there is equality irrespective of caste, money, power, colour and of course gender.
Thank u
ನಿಜ,, ಈ ಜವಾಬ್ದಾರಿಯನ್ನು ಮೊದಲು ತಾಯಿಯೇ ಮೂಡಿಸಬೇಕು.ಈಗಲೂ ಕೆಲವು ತಾಯಂದಿರು “ಅವನು ಗಂಡಸು ಹೆಂಗಿದರೂ ನಡೆಯುತ್ತೆ” ಅನ್ನುವುದನ್ನು ಅವರೇ ಮಕ್ಕಳ ತಲೆಯಲ್ಲಿ ತುಂಬಿಸುವುದು ದುರಂತ..ಇಂದಿನ ಅತಿ ಅಗತ್ಯದ ಬರಹ
Thank u
True. We have been promoting and marketing we have schools and college with students sitting separately and thus fueling imbalance and oppressing them. They will never be able to to freely interact each other, and won’t see other gender as fellow humans.
Thank u