ಪಿರ್ಕಿ ಅನ್ನೋದಂತೂ ನಿಜ..

ಗಿರಿಜಾ ಶಾಸ್ತ್ರಿ 

“ಅವಳು ದಿನಾ ದನ ಬೇಯಿಸ್ತಾಳೋ ಏನೋ ಆ ಆಡುಗೆಮನೆಯಲ್ಲಿ ನಾನು ಹೇಗೆ ಅಡುಗೆ ಮಾಡಲಪ್ಪ? ನೀನು ಸೆಟ್ಲ್ ಆಗಿ ಸರಿಯಾದ ಒಂದು ಸ್ವತಂತ್ರ ಮನೆ ಮಾಡು ಅಮೇಲೆ ಬೇಕಾದರೆ ನಾವು ಬರ್ತೀವಿ” ಮಗ ತನಗೆ ಡೆನ್ವರ್ ನಲ್ಲಿ ಹೊಸ ಕೆಲಸ ಸಿಕ್ಕಿ ಒಂದು ಮನೆಯನ್ನು ಮಾಡಿರುವುದಾಗಿಯೂ ಮೆಕ್ಸಿಕನ್ ಕುಟುಂಬದವರ ಮನೆಯೆಂದೂ ಅದರಲ್ಲಿ ನಮಗೆ ಎರಡು ಕೋಣೆಗಳು, ಅಡುಗೆ ಮನೆ ಮಾತ್ರ ಇಬ್ಬರಿಗೂ ಕಾಮನ್ ಎಂದು ಹೇಳಿದಾಗ ನನಗೆ ಒಪ್ಪಲು ಕಷ್ಟವಾಯಿತು.

ವೀಸಾ ಸಿಕ್ಕಿ ಮಗನ ಗ್ರಾಜುಯೇಷನ್ ಸೆರಿಮನಿಯೆಂದು ಬಫೆಲೋ ಗೆ ಬುಕ್ ಕೂಡ ಮಾಡಿಯಾಗಿದೆ! ಈಗ ಹಿಂತೆಗೆದರೆ ಹೇಗೆ? ಎಲ್ಲ ತಾಯಿ ತಂದೆಯರೂ ಮಕ್ಕಳ ಘಟಿಕೋತ್ಸವಕ್ಕೆಂದೇ ಭಾರತದಿಂದ ಅಮೇರಿಕಾಕ್ಕೆ ಹೋಗುತ್ತಾರೆ. ಇನ್ನು ನಾವು ಹೋಗದಿದ್ದರೆ ಮಗನಿಗೆ ನಿರಾಶೆಯಾಗುವುದು ಖಂಡಿತ. ಬುಕ್ ಮಾಡಿದ ಹಣವಂತೂ ಹಿಂದೆ ಬರುವಹಾಗಿಲ್ಲ. ಅಲ್ಲದೇ ಅಲ್ಲಿನವರು ಹೆಚ್ಚಾಗಿ ಅಡುಗೆ ದಿನಾ ಮಾಡುವರಲ್ಲವೆಂದೂ ಮನೆಯೊಡತಿ ಸ್ಯಾಂಡಿ ಬೆಳಗಿನ ಎಂಟುಗಂಟೆಗೆ ಮನೆ ಬಿಟ್ಟರೆ ರಾತ್ರಿ ಎಂಟಕ್ಕೇ ಮನೆಗೆ ಬರುವಳೆಂದೂ ಅಲ್ಲಿಯವರೆಗೆ ನನ್ನದೇ ಸಾಮ್ರಾಜ್ಯವೆಂದು ಮಗ ಹೇಳಿದ ಮೇಲೆ ಸಮಾಧಾನದಿಂದ ಹೊರಟಿದ್ದಾಯಿತು. ಬಫೆಲೋ ದಲ್ಲಿ ಘಟಿಕೋತ್ಸವ ಮುಗಿಸಿಕೊಂಡು ನಯಾಗರಾ ನೋಡಿಕೊಂಡು ಮಾರನೆಯ ದಿನವೇ ಡೆನ್ವರ್ ತಲಪಿದ್ದಾಯಿತು.

ಇಲ್ಲಿ ಬಂದು ನೋಡಿದರೆ ಸುಸಜ್ಜಿತ ಎರಡು ಕೋಣೆಗಳು. ಬಾಡಿಗೆ ಕೇಳಿ ಮಾತ್ರ ಎದೆ ಧಸಕ್ಕೆಂದಿತು. ಮುಂಬಯಿನ ಅತ್ಯಂತ ಶ್ರೀಮಂತರು ವಾಸಿಸುವ ಸ್ಥಳದಲ್ಲಿ ಎರಡು ಕೋಣೆಗಳ ಮನೆಯೂ ಕೂಡ ಇಷ್ಟು ದುಬಾರಿ ಇರಲಿಕ್ಕಿಲ್ಲ.

“ಅಮ್ಮ ಟಿ.ವಿ ನೂ ಇದೆ”. ಎಂದ ಮಗ “ಇರಲಿ ಬಿಡು ಅಲ್ಲೇನು ಮಗಳು ಜಾನಕಿ ಬರುತ್ತಾ? ಅಥವಾ ರಂಗಣ್ಣನೋ ಆರ್ಣಬ್ ನೋ ಬರುತ್ತಾನಾ?” ಕೋಣೆಗಳ ಮುಂದಿನ ಒಂದು ಸಣ್ಣ ಹಾಲ್ ನ ಮಧ್ಯದಲ್ಲಿ ದೊಡ್ಡ ಟಿ.ವಿ. ಅದಕ್ಕೆ ಅಂಟಿಕೊಂಡ ಹಾಗೆಯೇ ಸ್ನಾನದ ಮನೆ ಮತ್ತು ಲಾಂಡ್ರಿ ರೂಮ್ (ವಾಷಿಂಗ್ ಮಷೀನ್ , ಹೀಟಿಂಗ್ ಸರ್ಕ್ಯೂಟ್ ಇರುವ ಜಾಗ). ಮೇಲಿನ ಮಹಡಿಯಲ್ಲಿ ತುಂಬಾ ದೊಡ್ಡದಾದ ಅಡುಗೆ ಮನೆ, ನನಗೆ ಅರ್ಥವೇ ಆಗದ ಯಂತ್ರ ಸಾಮಗ್ರಿಗಳು ನನಗೆ ಎಟುಕಿಸಲಾರದಷ್ಟು ಎತ್ತರದ ಫ್ರಿಜ್. ಪಕ್ಕಕ್ಕೆ ಸುಸಜ್ಜಿತ ಸ್ನಾನದ ಮನೆ ದೊಡ್ಡ ಹಾಲ್. ಅದಕ್ಕೂ ಮೇಲಿನ ಮಹಡಿಯಲ್ಲಿರುವ ಮೂರು ಕೋಣೆಯಲ್ಲಿ ಸ್ಯಾಂಡಿ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ….ಮನೆಯ ಆವರಣಕ್ಕಿಂತಲೂ ಹಿತ್ತಲೂ ಮತ್ತು ಮುಂದಿನ ಲಾನ್ ಇರುವ ಭಾಗವೇ ವಿಶಾಲವಾದುದು. ನೋಡಿದತಕ್ಷಣ ಎಷ್ಟು ಚೆಂದ ಎನಿಸಿತು.

ಹೆದರಿಕೆಯಿಂದಲೇ ಅಡುಗೆ ಮನೆಗೆ ಕಾಲಿಟ್ಟೆ ಇಲ್ಲಿ ಬಂದು ನೋಡಿದರೆ ದನ ಬೇಯಿಸುವುದು ಇರಲಿ, ಮಹಾರಾಯ್ತಿ ಒಂದು ತಪ್ಪಲೆ ಹಾಲನ್ನೂ ಕೂಡ ಕಾಯಿಸುವುದಿಲ್ಲ ಎಂದು ಗೊತ್ತಾಯಿತು. ಒಳಗೇ ಖುಷಿಯೂ ಆಯಿತು.

ಸ್ಯಾಂಡಿ ಎಂಟೂವರೆಗೆ ಮನೆ ಬಿಡಬೇಕೆಂದರೆ ಹತ್ತು ಹದಿನೈದು ನಿಮಿಷ ಮೊದಲು ಅಡುಗೆ ಮನೆಗೆ ಬರುತ್ತಾಳೆ. ಅಲ್ಲಿಯವರೆಗೆ ವರ್ಕ್ ಔಟ್ ಮಾಡ್ತಾಳಂತೆ! ಹಾಗೇ ತೆಳ್ಳಗೆ ಬಳಕುವಂತೆ ಇದ್ದಾಳೆ. ಅವಳಿಗೆ ೫೨ ವರುಷವೆಂದರೆ ಯಾರೂ ನಂಬುವ ಹಾಗಿಲ್ಲ. ಅಡುಗೆ ಮನೆಗೆ ಬಂದವಳೇ ಒಲೆಯ ಮೇಲೆ ಒಂದು ಕಾವಲಿ ಇಟ್ಟು ಅದು ಬಿಸಿಯಾದ ಮೇಲೆ ಎರಡು ಮೊಟ್ಟೆಗಳನ್ನು ಅದರೊಳಕ್ಕೆ ನೇರವಾಗಿ ಸುರಿದು ಪುಣ್ಯಾತ್ಗಿತ್ತಿ ಬೀಟ್ ಕೂಡಾ ಮಾಡುವುದಿಲ್ಲ ಒಂದಿಷ್ಟು ಕಾಳು ಮೆಣಸಿನ ಪುಡಿ, ಚಿಟಿಕೆ ಉಪ್ಪು ಉದುರಿಸಿದರೆ ಮುಗಿಯಿತು ಅವಳ ಬ್ರೇಕ್ ಫಾಸ್ಟ್. ಒಂದಷ್ಟು ಹಣ್ಣಿನ ಚೂರುಗಳನ್ನು ಡಬ್ಬಿಗೆ ಹಾಕಿಕೊಂಡು ಧಡಾರನೆ ಬಾಗಿಲೆಳೆದುಕೊಂಡು ಹೋದಳೆಂದರೆ ಇನ್ನು ರಾತ್ರಿಯವರೆಗೆ ಬರಲಾರಳು ಎಂದೇ ಅರ್ಥ.

ಅಡುಗೆ ಮನೆಯ ತುಂಬಾ ತರಹೇವಾರಿ ಸೌಟುಗಳು ಚಮಚಗಳು, ತಟ್ಟೆಗಳು ಸಮಾರಾಧನೆಗೆ ಬೇಕಾಗುವಷ್ಟು ಪಾತ್ರೆ ಪಡಗಗಳು! ಕೇಕ್ ಜ್ಯೂಸ್ ಮಾಡಲು ಏನೇನೋ ಮಷೀನುಗಳು. ಅಡುಗೆ ಮನೆಯಲ್ಲಿ ಒಂದು ಫ್ರಿಜ್ ಅಲ್ಲದೇ ಲಾಂಡ್ರಿ ರೂಮಿನಲ್ಲಿ ಏಳು ಅಡಿಯ ಫ್ರೀಜರ್ !! ಅದನ್ನು ತೆಗೆದು ನೋಡಲು ನನಗೆ ಭಯವಾಗುತ್ತದೆ. ಅಲ್ಲಿ ಇಡಕಿರಿದಿರುವ ಪ್ಲಾಸ್ಟಿಕ್ ಚೀಲಗಳಲ್ಲಿ ಏನು ಭಯಾನಕವಡಗಿದೆಯೋ? ಇಂಡಿಯನ್ ಸ್ಟೋರಿನಿಂದ ತಂದ ಪರೋಠಾಗಳ ಪ್ಯಾಕುಗಳನ್ನು, ದೋಸೆ ಹಿಟ್ಟಿನ ಡಬ್ಬಾಗಳನ್ನು ಇಡಲು ನಮಗೆಂದೇ ಸ್ವಲ್ಪ ಜಾಗವನ್ನು ಮಾಡಿಕೊಟ್ಟಿದ್ದಾಳೆ.

ಅಷ್ಟೆಲ್ಲಾ ಪಾತ್ರೆಗಳು ಯಾವ ಪುರುಷಾರ್ಥಕಕ್ಕೇ? ಅಲ್ಲ ಸ್ತ್ರೀಯಾರ್ಥಕ. ಅಡುಗೇನೇ ಮಾಡೋದಿಲ್ಲ? ಯಾವಾಗಲೂ ಕ್ಲೀನು ಕ್ಲೀನು ಜಗತ್ತಿನಲ್ಲಿ ತಾನೊಬ್ಬಳೇ ಮಹಾ ಕ್ಲೀನಸ್ಥೆ ಎನ್ನುವ ತರಹ. ಅಡುಗೆ ಕಟ್ಟೆಯ ಮೇಲೆ ಸಂಜೆಯ ಹೊತ್ತಿಗೆ ಯಾವ ಒಂದು ಪಾತ್ರೆಯೂ ಇರಬಾರದು. ಕಾಫಿ ಮೇಕರ್ ಮಾತ್ರ ತೆಗೆಯಲಾಗುವುದಿಲ್ಲ ಎಂದು ಮಗ ವಿಶೇಷ ಪರವಾನಗಿ ಪಡೆದಿದ್ದಾನೆ. ಹಾಗೆಯೇ ಒಲೆಯ ಮೇಲೂ ಏನೂ ಇಡಬಾರದು. ಕುಕ್ಕರ್ ನ್ನು ಸಹ ತೊಳೆದನಂತರ ಮಗ ಅದನ್ನು ಫ್ರಿಜ್ಜಿನ ಮೇಲೆ ಇಡುತ್ತಾನೆ. “ಇದು ಯಾಕೋ ಅತಿ ಆಯಿತು ಕುಕ್ಕರ್ ನ್ನು ಯಾರಾದರೂ ಮೇಲಿಡುತ್ತಾರೆಯೇ? ದಿನ ಬೆಳಗಾದರೆ ಬೇಕಲ್ಲವೇ? ಸುಮ್ನೆ ಕಟ್ಟೆ ಮೇಲೆ ಇಡು “ ಎಂದು ಮಗನಿಗೆ ಹೇಳಿದ್ದಕ್ಕೆ, ಮಗ ಮಾತು ಕೇಳದೇ ದಿನಾ ರಾತ್ರಿ ಮೇಲೆ ಇಡುತ್ತಾನೆ. ಇಲ್ಲದಿದ್ದರೆ ಅದು ಗಂಡನ ಕೆಲಸ. ನನಗೆ ಎಟುಕಿಸುವುದಿಲ್ಲವಲ್ಲಾ?

ಸ್ಯಾಂಡಿಯ ಮುಂದೆ ಕಾಣಿಸಿಕೊಳ್ಳುವುದನ್ನು ನಾನು ತಪ್ಪಿಸುತ್ತೇನೆ. ಏಕೆಂದರೆ ನನ್ನನ್ನು ಕಂಡಾಗಲೆಲ್ಲಾ hi giriya (ನನ್ನ ಹೆಸರನ್ನು ಹೇಳಲೂ ಬರುವುದಿಲ್ಲ, ನಾನು ತಿದ್ದಲೂ ಹೋಗಿಲ್ಲ) here sticky there oily ಎನ್ನುತ್ತಾ ನಾನು ಸರಿಯಾಗಿ ಒರೆಸಿಲ್ಲವೆಂದು ನನ್ನ ಮೂತಿ ತಿವಿಯುತ್ತಾಳೆ. “ನಾನು ಮೂವತ್ತಾರು ವರುಷ ಸಂಸಾರ ಮಾಡಿರೋಳು ಇವಳೇನು ನನಗೆ ಹೇಳೋಕ್ಕೆ ಬರೋದು, ಕಂಡಿದ್ದೀನಿ ಇವಳ ಸ್ವಚ್ಚತೆಯನ್ನ ಎಂಜಲ ಕೈಯಲ್ಲೇ ಎಲ್ಲ ಮುಟ್ತಾಳೆ. ಪಿರ್ಕಿ ಹೆಂಗಸು. ಇನ್ನೊಂದು ಸರ್ತಿ ನನಗೆ ಸ್ವಚ್ಚತೆಯ ಪಾಠ ಹೇಳ್ಕೊಡೋಕೆ ಬಂದ್ರೆ ಫಿಟ್ಟಿಂಗ್ ರಿಪ್ಲೈ ಕೊಡ್ತೀನಿ ನೋಡು” ಎಂದು ಮಗನಿಗೆ ಹೇಳಿದಾಗ “ ಈ ಹೆಂಗಸರು ಯಾವಾಗಲೂ ಹೀಗೆ ಅಡ್ಜಸ್ಟ್ ಮಾಡ್ಕೋಳಲ್ಲ” ಎಂದ.

“ನಾನ್ಯಾಕೋ ಅವಳ ಜೊತೆ ಅಡ್ಜಸ್ಟ್ ಮಾಡ್ಕೋಬೇಕು ಅವಳೇನು ನನಗೆ ಅತ್ತೇನಾ ಅಥವಾ ಸೊಸೇನಾ?” ಅತ್ತೆ ನನ್ನನ್ನು ಅಡುಗೆ ಮನೆಗೆ ಸೇರಿಸಿಕೊಂಡಿದ್ದೇ ನಮ್ಮ ಮದುವೆಯಾದ ಏಳೆಂಟು ವರುಷಕ್ಕೆ. ಅದೂ ನನ್ನ ಎರಡನೇ ಮಗ ಹುಟ್ಟಿದ ಮೇಲೆ. ಅಷ್ಟು ವರುಷಗಳಾದ ಮೇಲೆ ನಾನ್ಯಾಕೆ ಅಡುಗೆ ಮನೆಗೆ ಹೋಗಲಿ ಎಂದು ಅತ್ತೆಯ ಕಂಟ್ರೋಲಿಗೆ ಸಿಗದೇ ಅಡುಗೆ ಮನೆಯಿಂದಾಚೆಗೇ ಉಳಿದು ಬಿಟ್ಟಿದ್ದೆ. (ನಾವು ಬೆಂಗಳೂರಿನಿಂದ ದೂರವಿದ್ದುದೂ ಒಂದು ಕಾರಣ).

ವಾರಗಿತ್ತಿಯರು ಅವರ ಮನೆ ಪಾಕ ಪದ್ಧತಿಗಳನ್ನು ನನಗೆ ಅಗಾಗ ಹೇಳಿಕೊಡುತ್ತಿದ್ದರೂ ನನಗೆ ಇಷ್ಟ ಬಂದದ್ದನ್ನು ಮಾತ್ರ ಕಲಿತು ಕೊಂಡಿದ್ದೆ. ಕೊನೆ ಕೊನೆಗೆ ಅತ್ತೆ ಬದಲಾಗಿದ್ದರು ನನ್ನ ಜೊತೆ ಪ್ರೀತಿಯಿಂದ ನಡೆದುಕೊಂಡಿದ್ದರು. ಆದರೂ ಹಳೆಯ ಆ ಸೇಡನ್ನು ಈಗ ಸ್ವರ್ಗದಲ್ಲಿರುವ ಅತ್ತೆ ಸ್ಯಾಂಡಿಯ ಮೈಮೇಲೆ ಬಂದು ತೀರಿಸಿಕೊಳ್ಳುತ್ತಿದ್ದಾರೇನೋ. ಈ ಸ್ಯಾಂಡಿ ಇವಳ್ಯಾವ ಸೀಮೆ ದೊಣ್ಣೆ ನಾಯಕಿ?

ಮೊನ್ನೆ ಅವಳ ಕಣ್ಣಿಗೆ ಅಕಸ್ಮಾತ್ ಬಿದ್ದಾಗ giriya come I want to show you something” ಎಂದಳು ನಾನು ವಿಧೇಯವಾಗಿ ಅವಳ ಹಿಂದೆ ಹೋದೆ. “ಚಿಮಣಿಯನ್ನು ನಾನು ಸ್ವಚ್ಛಮಾಡಿದೆ ನೋಡು, ನೀನು ವಾರಕ್ಕೆ ಒಂದು ಸಲವಾದರೂ ಎಲ್ಲ ತೆಗೆದು ಕ್ಲೀನ್ ಮಾಡಬೇಕು” ಎಂದಳು
“ನನಗೆ ಅದನ್ನು ತೆಗೆಯೋಕ್ಕೆ ಬರೋಲ್ಲ “
“I will show you” ಎಂದು ಎಲ್ಲ ತೆಗೆದು ತೋರಿಸಿದಳು.
“ನಾವು ಮಾಂಸಾಹಾರಿಗಳಲ್ಲ ಅಷ್ಟು ಜಿಡ್ಡು ನಮ್ಮ ಅಡುಗೆಯಲ್ಲಿ ಇರೋಲ್ಲ ನಮ್ಮಲ್ಲಿ ವಾರಕ್ಕೊಂದು ಸಲ ಯಾರೂ ಚಿಮಣಿಯನ್ನು ಸ್ವಚ್ಛ ಮಾಡೋಲ್ಲ” ಎಂದೆ.

“ಯಾಕೆ ಜಿಡ್ಡು ಇರೋಲ್ಲಾ? ನೀನು ಅದೇನೋ ಮಾಡ್ತೀಯಲ್ಲ ದಿನಾ ಒಲೆಯ ಮೇಲೆ ಬಾಣಲೆಯಿಟ್ಟು ಕಾದ ಎಣ್ಣೆಯಿಂದ ಬುಸ್ಸ್ ಎಂದು ಹೊಗೆ ಬರುವುದಿಲ್ಲವಾ? ಅದೆಲ್ಲಾ ಜಿಡ್ಡಲ್ಲವಾ?” ಅಂದಳು. ನಾನು ವಡೆ, ಆಂಬೊಡೆ, ಸಮೋಸಾ, ಹಪ್ಪಳ ಏನೂ ಕರಿದಿರಲಿಲ್ಲ. ಮಾಡಿದ್ದೆಲ್ಲಾ ಉಪ್ಪಿಟ್ಟು ಅವಲಕ್ಕಿ ರೊಟ್ಟಿ ದೋಸೆ, ಚಪಾತಿ, ಪಲ್ಯ ಅಷ್ಟೇ.

ಇನ್ನೇನೋ ತೋರಿಸ್ಬೇಕು ಬಾ ಎಂದು ಕರೆದಳು. ಹೋದಾಗ ಒಂದು ಸ್ಟೂಲ್ ತೋರಿಸಿ ಇದರ ಮೇಲೆ ಹತ್ತಿ ಚಿಮಣಿಯ ಮೇಲ್ಭಾಗವನ್ನೂ ಒರೆಸಬೇಕು ಎಂದು ಖಡಕ್ಕಾಗಿ ಹೇಳಿದಳು “ಯಾಕೆ ನಿನ್ನ ಮನೆ ಟೆರೇಸ್ ನ್ನೂ ತೊಳೀತೀನಿ ಬಾ” ಎಂದು ಮನಸ್ಸಿನಲ್ಲೇ ಶಪಿಸಿಕೊಂಡು ಅದು ಎಲ್ಲಿಂದ ಧೈರ್ಯ ಬಂದಿತೋ “No I am sorry I can’t climb the stool, tell your daughters to do, they also use the stove”

“ನಾವ್ ನಾವ್ ದೇ ಕ್ಯಾಂಟ್” ಅಂದಳು. ಮಗನಿಗೆ ಹಿಂದಿನ ರಾತ್ರಿಯೇ ಏನೋ ತುರ್ತಾಗಿ ಮಾತನಾಡಬೇಕೆಂದು ಮೆಸೇಜ್ ಮಾಡಿದ್ದಳಂತೆ. ಏನೋ ಘನಂದಾರಿ ವಿಷಯ ಅಂದ್ರೆ ಅದೇ ಚಿಮಣಿ ಕ್ಲೀನ್ ಮಾಡುವುದು. ಮಗ ಮಾತನಾಡಿ ಅಮ್ಮನಿಗೆ ಹತ್ತಿ ಮಾಡಲು ಆಗುವುದಿಲ್ಲ ನಾನು ಮಾಡುತ್ತೇನೆ ಎಂದು ಹೇಳಿ “ನಾವೇ ಅಲ್ವಾಮ್ಮಾ ಜಾಸ್ತಿ ಅಡುಗೆ ಮಾಡೋದು. ಅಲ್ದೇ ಅವಳ ಕೈಲಿ ನಾವು ನಮ್ಮ ದೇಶದಲ್ಲಿ ದಿನಾ ಮೂರು ಹೊತ್ತು ಅಡುಗೆ ಮಾಡ್ತೀವಿ ನಾಕ್ಹೊತ್ತು ಮಾಡ್ತೀವಿ ಅಂತ ಶೋಕಿ ಬೇರೆ ತೋರಿಸಿದ್ದೀಯಾ ಅದೆಲ್ಲ ಅವಳಿಗೆ ಯಾಕೆ ಹೇಳ್ಬೇಕಾಗಿತ್ತು? ಈಗ ನೋಡು”

“ಹೌದು ಅಡುಗೇನೇ ಮಾಡದಿದ್ರೆ ಕೊಳೆಯಾಕೆ ಅಗುತ್ತೆ? ಏನು ಸಂಸಾರಸ್ಥೇನೋ ಅ ಮಕ್ಕಳಿಗೂ ಸರಿಯಾಗಿ ಹೊಟ್ಟೆಗೆ ಹಾಕೋಲ್ಲ. ಯಾವಾಗಲೂ ಕ್ಯಾರೇಟು ದೊಡ್ಡ ಮೆಣಸಿನಕಾಯಿ ಸೌತೇಕಾಯಿ ತಿನ್ಕೋತಾವೆ”
ಯಾವಾಗಲೂ ಸ್ಯಾಂಡಿ ಬಾಲ ಸುಟ್ಟ ಬೆಕ್ಕಿನ ಹಾಗೆ ಏನೋ ಗಡಿಬಿಡಿ. ಯಾವಾಗಲಾದರೊಮ್ಮೆ ಮೂಡ್ ಚೆನ್ನಾಗಿದ್ದರೆ ಲೋಕಾಭಿರಾಮವಾಗಿ ಒಂದೆರಡು ಮಾತು. ಹಾಗೇನಾದರೂ ಮಾತನಾಡಿದ್ದನ್ನು ಕೆಳಗಿರುವ ನನ್ನ ಮಗ ಕೇಳಿಸಿಕೊಂಡು “ಏನು ಜಗಳಾನಾ?” ಎನ್ನುತ್ತಾನೆ.

“ಅಯ್ಯೋ ಅವಳ ಕೈಲಿ ಜಗಳಾ ಆಡೋಷ್ಟು ಇಂಗ್ಲಿಷ್ ನನಗೆ ಬಂದಿದ್ರೆ ನಾನ್ಯಾಕೆ ಹೀಗಿರ್ತಿದ್ದೆ? ಪಿರ್ಕಿ ಆಫಿಸ್ನಲ್ಲಿ ಏನು ಟೆನ್ಶನ್ನೋ? ಆಫೀಸನ್ನ ಮನೇಗೆ ತಂದು ಎಲ್ಲರ ಮೇಲೆ ಸವಾರಿ ಮಾಡ್ತಾಳೆ. ನಾವು ಬಾಡಿಗೆದಾರರೋ ಅವಳ ಆಳುಗಳೋ ಕೇಳು”.

ಮಗ ಚಿಮಣಿ ಉಜ್ಜಿದ್ದೇ ಉಜ್ಜಿದ್ದು! ಮುಂಬಯಿಯಲ್ಲಿರುವಾಗ ಒಮ್ಮೆಯೂ ಒಂದು ಕಡ್ಡಿಯನ್ನು ಸಹ ಆ ಕಡೆ ತೆಗೆದು ಈ ಕಡೆ ಇಟ್ಟವನಲ್ಲ! ಆಗ No room service, ಎಂದು ಎಷ್ಟು ಸಲ ಹೇಳಿಲ್ಲ? ನನ್ನ ಗೆಳತಿಯರಿಗೆಲ್ಲಾ ನಾನು ನನ್ನ ಮಗನ ಬಾಣಂತನ ಮಾಡ್ತಿದೀನಿ ಅದು ಮುಗಿಯದೇ ಇರೋ ಬಾಣಂತನ ಎಂದೆಲ್ಲ ಹೇಳಿಕೊಂಡು ಬರುತ್ತಿದ್ದೆ.

“ಭಪ್ಪರೆ ಮಗನೇ ಉಜ್ಜು ಉಜ್ಜು ಕಂಡೋರ ಮನೆ ಬಚ್ಚಲನ್ನ ಚೆನ್ನಾಗಿ ಉಜ್ಜು ಮುಂದೆ ನಿನ್ನ ಹೆಂಡತಿಗಾದರೂ ಸಹಾಯವಾಗುತ್ತೆ” ಎಂದೆ
“ಇಲ್ಲ ಮೊದಲೇ ಅವಳು ಸೈಕೋ ಅವಳ ಕೈಲಿ ಜಗಳ ಆಡಬೇಕಾ?”
ಧಪ್ ಎಂದು ಗಾಡಿ ಪಾರ್ಕ್ ಮಾಡಿದ ಸದ್ದು. ಸೈಕೋ ಬಂದಳು. ಮಾಡಿಟ್ಟ ಅಡುಗೆಯನ್ನೆಲ್ಲಾ ಗುಟ್ಟಾಗಿ ರೂಮಿಗೆ ತಂದಿಟ್ಟುಕೊಳ್ಳುತ್ತೇನೆ. ಅವಳು ಎದುರಿಗಿದ್ದರೆ ಉಣ್ಣಲು ಮುಜುಗರ ತಿಂದ ಅನ್ನ ಹೇಗೆ ಮೈಗೆ ಹತ್ತುತ್ತದೆ? ಗುಟ್ಟಾಗಿ ಸಾಗಿಸಬೇಕು. ಕೆಳಗೆ ತಿನ್ನುವ ಹಾಗಿಲ್ಲ ಯಾಕೆಂದರೆ ಅಲ್ಲಿ ಅವಳು ಕಾರ್ಪೆಟ್ ಹಾಕಿದ್ದಾಳೆ. ಅದರ ಮೇಲೆ ಏನಾದರೂ ಬೀಳಬಹುದು ಎನ್ನುವ ಆತಂಕ. ಪ್ರತಿದಿನ, ಕೆಳಗೆ ಏನೂ ತಿನ್ನತಾ ಇಲ್ಲ ತಾನೇ Are you sure? ಎಂದು ಖಚಿತ ಪಡಿಸಿಕೊಳ್ಳುತ್ತಾಳೆ.

ಪ್ರತಿ ವಾರ ವ್ಯಾಕ್ಯೂಮ್ ಕ್ಲೀನರ್ ನಲ್ಲಿ ಕಾರ್ಪೆಟ್ ಸ್ವಚ್ಚ ಮಾಡಿದ್ದೀಯಾ? ಎಂದು ಕೇಳುತ್ತಾಳೆ. ಅವಳ ಈ ಪಿರಿ ಪಿರಿ ಸ್ವಭಾವ ನೋಡಿಯೇ ಗಂಡ ಓಡಿಹೋಗಿರಬಹುದು. ಅವಳು ವಿಚ್ಛೇದಿತೆ. ಅಥವಾ ವಿಚ್ಛೇದಿತೆ ಅಗಿರುವುದರಿಂದಲೇ ಇನ್ನೂ ಹೆಚ್ಚು ಪಿರಿ ಪಿರಿ ಆಗಿರಬಹುದು. ನಾವಿಬ್ಬರೂ ಗಂಡ ಹೆಂಡತಿ ಜೊತೆ ಜೊತೆಯಲ್ಲಿಯೇ ಯಾವಾಗಲೂ ಇರುವುದನ್ನು ನೋಡಿ ಅವಳಿಗೆ ಏನಾದರೂ ಅನ್ನಿಸಿಯೂ ಇರಬಹುದು. ಊಟಕ್ಕೆ ಒಟ್ಟಿಗೆ ಕುಳಿತು ಕೊಳ್ಳುವುದು ಬೇಡ ಎಂದು ಮಗ ಹೇಳುತ್ತಾನೆ. ಅವರಿಗೆ ಮನೆಯವರೆಲ್ಲಾ ಒಟ್ಟಿಗೇ ಕೂತು ಊಟ ಮಾಡುವ ಅಭ್ಯಾಸವಿಲ್ಲ. ಅದರಿಂದ ಅವರಿಗೇನಾದರೂ ಅನ್ನಿಸಬಹುದು ಎಂಬುದು ಮಗನ ಅಭಿಪ್ರಾಯ.

ಬಚ್ಚಲಲ್ಲಿ ಯಾವ ಪಾತ್ರೆಯನ್ನೂ ಇಡುವ ಹಾಗಿಲ್ಲ. ತೊಳೆದ ತಕ್ಷಣ ಎಲ್ಲವನ್ನೂ ಚೆನ್ನಾಗಿ ಒರೆಸಿ ಆಯಾ ಜಾಗಕ್ಕೆ ಸೇರಿಸಿ ಬಿಡಬೇಕು. ಕೆಲವು ಪಾತ್ರೆಗಳನ್ನು ಅವಳೇ ಕೊಟ್ಟಿದ್ದಾಳೆ. ಪಾತ್ರೆ ತೊಳೆಯುವ ಲೋಷನ್, ಶ್ಯಾಂಪು, ಸಕ್ಕರೆ ಎಲ್ಲ ಅವಳದ್ದೇ. ಪಾತ್ರೆ ಇಟ್ಟುಕೊಳ್ಳಲು ಎರಡು ಶೆಲ್ಫಿನ ಡ್ರಾವರ್ ಕೊಟ್ಟಿದ್ದಾಳೆ. ಎಣ್ಣೆ ಸಕ್ಕರೆ ಮಸಾಲೆ ಪುಡಿ ಅಕ್ಕಿ ಬೇಳೆ ಸಮಸ್ತವೂ ಅಲ್ಲಿಯೇ! ಅಡುಗೆ ಮನೆಯಲ್ಲಿ ಎಲ್ಲಕ್ಕೂ ಒಂದೊಂದು ಜಾಗವಿದ್ದು ಎಲ್ಲ ಅಚ್ಚುಕಟ್ಟಾಗಿದ್ದರೆ ತಾನೇ ಅಡುಗೆ ಮಾಡಲು ಮನಸ್ಸು ಬರುವುದು? ಅವಳಿಗೆ ಖಾರ ಆಗುವುದಿಲ್ಲ ಹೀಗಾಗಿ ನನ್ನ ಅಡುಗೆ ಹಿಡಿಸುವುದಿಲ್ಲ. ಆದರೆ ಮಕ್ಕಳು ಮಾತ್ರ ಚಪ್ಪರಿಸಿಕೊಂಡು ತಿನ್ನುತ್ತಾರೆ.

ಆಫೀಸಿನಿಂದ ಬಂದ ತಕ್ಷಣ ಬಚ್ಚಲಲ್ಲಿ ಪಾತ್ರೆ ಬಿದ್ದಿದ್ದರೆ ಮಗಳ ಹೆಸರನ್ನು ಕೂಗುತ್ತಾ ” not done the dishes?, I am tired I am tired” ಧ್ವನಿ ಎತ್ತರಿಸಿ ಮಾತನಾಡುವುದು ಕೇಳಿಸುತ್ತದೆ. ಅವಳ ಮಕ್ಕಳೂ ಅವಳಿಗೆ ಕ್ಯಾರೆ ಅನ್ನುವುದಿಲ್ಲ “She is crazy” ಎಂದು ಆಗಾಗ ಮಾತನಾಡಿಕೊಳ್ಳುತ್ತಾರೆ.

ಶನಿವಾರ ಭಾನುವಾರ ಬಂದಿತೆಂದರೆ ಸ್ಯಾಂಡಿ ಹೇಸರಕತ್ತೆಯೇ! ಬೆಳಗಿನಿಂದ ಸಂಜೆಯವರೆಗೆ ಮನೆ ಮತ್ತು ಲಾನ್ ಸ್ವಚ್ಚತಾ ಅಭಿಯಾನ. ಕುರ್ಚಿಗಳನ್ನೂ ತಲಕೆಳಗು ಮಾಡಿ ಒರೆಸುತ್ತಾಳೆ ಹುಚ್ಚಿ. ಪಿರ್ಕಿ ಅನ್ನೋದಂತೂ ನಿಜ ಆದ್ರೆ ಒಂದು ಸಮಾಧಾನ ಏನಂದರೆ, ಎಲ್ಲಿ ದನ ಬೇಯಿಸ್ತಾಳೊ ಅಂತ ಹೆದರಿದ್ದ ನನಗೆ ಅವಳು ಸದಾ ಹುಲ್ಲು ಕತ್ತರಿಸುತ್ತಾ ಹಣ್ಣು ಹಂಪಲು ತರಕಾರಿ ತಿಂದುಕೊಂಡಿರುವುದು ನೋಡಿದರೆ ಒಳಗೇ ಸಮಾಧಾನವಾಗುತ್ತದೆ.

‍ಲೇಖಕರು avadhi

July 5, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Ashalatha, Mangaluru

    ಮೇಡಂ ತಮ್ಮ ಅನುಭವ ಕಥನ ತುಂಬಾ ಚೆನ್ನಾಗಿದೆ. ತಲೆ ಬರಹದಲ್ಲಿ ಪಿರ್ಕಿ ಎನ್ನುವ ಶಬ್ದ ನೋಡಿಯೇ ನಗು ಬಂತು, ನಾವು ದಕ್ಷಿಣ ಕನ್ನಡದವರು ಈ ಪಿರ್ಕಿ ಎಂಬ ಶಬ್ದವನ್ನು ಹೆಚ್ಚಾಗಿ ಬಳಸುತ್ತೇವೆ.

    ಪ್ರತಿಕ್ರಿಯೆ
  2. Girijashastry

    ಶ್ರಾವಣ ಕುಮಾರಿ ಧನ್ಯವಾದಗಳು. ನಿಮ್ಮ ಮುಂಬಯಿ ಪ್ರವಾಸ ಕಥನವೂ ಅಷ್ಟೇ ಸೊಗಸಾಗಿತ್ತು. ನಿಮ್ಮ ಮುಂಬಯಿ ಅನುಭವ ಮತ್ತು ನನ್ನ ಅಮೇರಿಕಾ ಅನುಭವದ ನಡುವೆ ಇರುವ ಅಂತರವೆಷ್ಟು. ಅದನ್ನು ನಿನ್ನೆ ಹಂಚಿಕೊಂಡಿರುವೆ ಸಾಧ್ಯವಾದರೆ ನೋಡಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: