ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೃದಯದ ಗೆಜ್ಜೆಗಳಿಗಾದರೂ…

ಅಶೋಕ ಹೊಸಮನಿ

ಆ ಜಂತಿಯ ಮಣ್ಣಾದರೂ ನಾನಾಗಬೇಕಿತ್ತು
ಆ ಜಂತಿಯಾದರೊ ಉಸಿರಾಡಬೇಕಿತ್ತು

ಉರಿವ ಬೆರಳಿಗೊ ಕೆಣಕುವ ಚರಿತೆಯ ನಂಟಿದೆಯಾ ಹೇಳು?
ಕರೆದು ಕೂಡಿಸಿಕೊಳ್ಳಬಹುದಿತ್ತು ಆ ಮಾಡವಾದರೂ
ಆ ಗೂಢ ಕುರುಹಾದರೂ

ಅದೆಷ್ಟು ಕಣ್ಣುಗಳ ಕೀಳಿದಿರಿ ಆ ದೇವತೆಯದ್ದಾದರೂ
ಧೂಳಡರಿಹ ಬಳೆಗಳಾದರೊ ಕಡು ಕತ್ತಲಿಗೂ ಬೇಡವೇ?

ಆ ಬೂದಿಯನ್ನಾದರೂ ಹೀರಬಹುದಿತ್ತು
ಆತ್ಮವ ಸೋಸಿಹ ಜಾಡಿನಲ್ಲೇ
ಕರುಳ ಬಳ್ಳಿಗೂ ಹಾಡಾಗಬೇಕಿತ್ತು

ಉಸಿರ ಕುಡಿಯುತಿಹ ಸೂರ ನೆತ್ತಿಗಾದರೊ
ನೆತ್ತರ ಸುರುವಿರೊ
ನೆಪಗಳಿಗೆ ತಡಕಾಡುವಿರೊ ಬೀಗ ಜಡಿಯಲು
ಅಳಿಸುವಿರೊ ಮುರಿ ಮುರಿದು

ಕುಕ್ಕುವ ಮಂದಿಯದ್ದಾದರೊ ಏನಿದೆ ತಕರಾರು
ಅಂಗಳ ನೆಕ್ಕುವುದಕ್ಕಾದರೂ ಬೇಕಿತ್ತೇ ಮಾಳಿಗೆ
ಹರ್ನಾಳಿಗೆ

ತಾಕಬೇಕಿತ್ತೇನೊ ಆ ಮೂಕ ಪಕ್ಷಿಯನ್ನಾದರೂ
ಮೌನವನ್ನೇ ಹೀರಿಕೊಳ್ಳೊ ಕನಸುಗಳಿಗಾದರೂ
ಕಟ್ಟಬೇಕಿತ್ತೇನೊ ಗೆಜ್ಜೆ

ಊರುಗೋಲಾಗಬೇಕಿತ್ತು ಆ ತೊಲೆಗಂಬವಾದರೂ
ಆ ಗಣವಾರಿ ತಪ್ಲಾದರೂ ಅಪ್ಪಿಕೊಳ್ಳಬೇಕಿತ್ತು
ತಂಪು ಸುರಿವ ಈ ಕ್ಷಣಕ್ಕಾದರೂ
ಅದೆಷ್ಟು ಕನಸುಗಳು ಸುಟ್ಟವೊ
ಅದೆಷ್ಟು ಬೆಟ್ಟಗಳ ಮಡಿಲ ಮಮಕಾರವೊ
ಬಲ್ಲವರಾರು?

ಅಳಿಸಿವೆ ಅಂಗೈ ರೇಖೆಗಳಾದರೂ
ಸುಡುವ ಸುಣ್ಣಕ್ಕೆ,ಸಂಬಂಧಕ್ಕೆ
ಹಕ್ಕಳಿಕೆಗಳೊ ಕಳಚುವಲ್ಲಿ

ಆ ಸೂತಕದ ನೆರಳಿಗಂಟಲಿ ಕಣ್ಣೀರಾದರೂ
ಹೃದಯದಲ್ಲಿರಲಿ ಕೆಂಡದ ಕುಳ್ಳೊ

ಅದೆಷ್ಟು ಮಳೆ,ಗಾಳಿ,ಗುಡುಗು ಸಿಡಿಲಿಗೆ
ಎದೆಯೊಡ್ಡಿವೆಯೊ ಜಂತಿಗಳಾದರೂ,ತೊಲೆಗಂಬಗಳಾದರೂ,
ಈ ಮಣ್ಣಾದರೂ,
ದಾಟಿಸುವುದು ಹೇಗೆ
ಹೃದಯದ ಗೆಜ್ಜೆಗಳಿಗಾದರೂ

‍ಲೇಖಕರು Admin

27 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading