ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೂವುಗಳಿಗೆ ರಂಗು ತುಂಬಲಿ..

ಹೂವುಗಳಿಗೆ ರಂಗು ತುಂಬಲಿ ಗುಲಾಬಿ ತೋಟಗಳ ಕಾರುಬಾರು ಶುರುವಾಗಲಿ

ಮೂಲ: ಫೈಜ್ ಅಹಮದ್ ಫೈಜ್ ಅವರ “ಗುಲೋ ಮೆ ರಂಗ್ ಭರೇ ಗುಲ್ಶನ್ ಕಾ ಕಾರೊಬಾರ್ ಚಲೇ”

ಕನ್ನಡಕ್ಕೆ: ಎಸ್. ಸಿರಾಜ್ ಅಹಮದ್

ಮಧುಮಾಸದ ಮೊದಲ ಪರಿಮಳ ಹರಡಲಿ 

ಹೂವುಗಳಿಗೆಲ್ಲ ರಂಗು ತುಂಬಲಿ

ಆಗಲಿ ಇವತ್ತಿನಿಂದಲೇ ಗುಲಾಬಿ ತೋಟಗಳ ಕಾರುಬಾರು ಶುರುವಾಗಲಿ

ಎದೆಯ ಪಂಜರ ಬಣಗುಡುತ್ತಿದೆ 

ಗಾಳಿಗಾದರೂ ಇಂದು  ಏನನ್ನಾದರೂ ಮೊರೆಯಲು ಹೇಳಿ

ದೇವರು ಸಾಕ್ಷಿಯಿರಲಿ ಇವತ್ತಾದರೂ

ನಲ್ಲೆಯ ಹೆಸರು ಹೇಗಾದರೂ  ಕಿವಿಗೆ ಬೀಳಲಿ

ಕೊನೆಗೆ ಯಾವುದಾದರೊಂದು ಬೆಳಗು

ನಿನ್ನ ಮೆಲುದುಟಿಯ ಸೋಕಿನಿಂದ ಶುರುವಾಗಲಿ

ನಿನ್ನ ಹೆರಳಿನ ಕಮ್ಮನೆಯ ನೆರಳಲ್ಲಿ

ಯಾವುದಾದರೊಂದು ಹಗಲು ರಾತ್ರಿಯಾಗಲಿ

ನೋವಿನ ಹೊಕ್ಕಳಿನಲ್ಲೇ ನಮ್ಮ ನಡುವಿನ ಬಂಧ ಗಟ್ಟಿಯಾಗಿಹುದು

ಸೋತಿರುವ ಬಡಪಾಯಿ ಹೃದಯ

ನನ್ನ ಸಂತೈಸಲು ಬಂದವರ ಬಾಯಲ್ಲಿ

ನಿನ್ನ ಹೆಸರ ಕೇಳಿಯೇ ಸಂತೈಕೆಗೊಳಗಾಗುವುದು

ಆಗಿದ್ದು ಆಗಲಿ ಇನ್ನೂ ಏನಾಗಬೇಕೋ ಆಗಿ ತೀರಲಿ

ನಿನ್ನ ಬೀಳ್ಕೊಡುವ ದಿನ ಹರಿದ ಕಣ್ಣೀರ ಹನಿಗಳೆಲ್ಲ

ಬರುವ ಮುಂಬೆಳಗುಗಳ ಪೊರೆವ ಹಾರೈಕೆಗಳಾಗಲಿ

ಕರೆದಿದ್ದಾರೆ ನನ್ನ ಅನುರಾಗ-ಉದ್ವೇಗಗಳ 

ದಾಖಲೆಗಳ ಸಮೇತ ಹಾಜರಾಗಲಿಕ್ಕೆ

ಒಳಗೆ ಹರಿದು ಚೂರಾಗಿರುವ ಜೀವದೆಳೆಗಳ ಬಿಟ್ಟು ಇನ್ನೇನಿದೆ ತೋರಲಿಕ್ಕೆ

ಯಾವ ಹಾದಿಯೂ ಸುಖವೆನಿಸಲಿಲ್ಲ ಫೈಜ್ ನನಗೆ

ನಿನ್ನ ಗಲ್ಲಿಯಿಂದ ಹೊರಟ ಮೇಲೆ ಸೀದಾ ಕೊರಳು ಒಡ್ಡಿದ್ದು ನೇಣುಹಗ್ಗಕ್ಕೆ

                  *********************

ಇದು ಪಾಕಿಸ್ತಾನದ ಪ್ರಸಿದ್ಧ ಕವಿ ಫೈಜ್ ಅಹಮದ್ ಫೈಜ್ ಬರೆದ ಬಹಳ ಪ್ರಸಿದ್ಧ ಗಜಲ್. ಮೇಲ್ನೋಟಕ್ಕೆ  ತೀವ್ರವಾದ ಪ್ರೇಮ ಕವಿತೆಯಂತೆ ಕಾಣುವ ಈ ಸಾಲುಗಳು ಭಾರತ-ಪಾಕಿಸ್ತಾನದ  ವಿಭಜನೆಯ ತರುವಾಯ  ತಾನು ಬಾಳಿ ಬದುಕಿದ ನೆಲವನ್ನು ಪ್ರಿಯತಮೆಯನ್ನು ನೆನೆದು ಹಂಬಲಿಸುತ್ತಿರುವ ಹೃದಯವೊಂದರ ಸ್ವಗತದ ಹಾಗೆಯೂ ಕೇಳಿಸುತ್ತದೆ ಎಂಬುದನ್ನು ಇಲ್ಲಿ ಗಮನಿಸಬೇಕು.

ಈ ಕವಿತೆಯನ್ನು ಬರೆದಾಗ ಫೈಜ್ ರಾವಲ್ಪಿಂಡಿಯ ಜೈಲಿನಲ್ಲಿದ್ದರು. ದೇಶವಿಭಜನೆಯ ನಂತರ ಫೈಜ್ ಪಾಕಿಸ್ತಾನ ಸರ್ಕಾರವನ್ನು ಟೀಕಿಸಿದ್ದಕ್ಕೆ ದೇಶದ್ರೋಹಿ ಎಂದು ಕಮ್ಯುನಿಸ್ಟ್ ಎಂದು ಜೈಲಿಗೆ ಹಾಕಿತ್ತು. ಭಾರತದ ಅಗಲಿಕೆ, ಎರಡೂ ದೇಶಗಳು ನಡೆಯುತ್ತಿರುವ ದಾರಿಯನ್ನು ನೋಡಿ  ದೇಶವನ್ನು ಕುರಿತ ಅಭಿಮಾನವನ್ನು ಪ್ರೇಮಿಯ ವಿರಹ- ಹತಾಶೆಯಲ್ಲಿ ಬರೆದ ಈ ಕವಿತೆ  ಹಾಡಾಗಿಯೂ ಬಹಳ ಪ್ರಸಿದ್ಧವಾಗಿದೆ.  ಫೈಜ್, ಗಾಲಿಬ್ ನಂತಹ ಕವಿಗಳಿಗೆ ದೇಶ, ಧರ್ಮ,  ಕಾವ್ಯ, ಪ್ರೇಮ ಮದಿರೆಗಳೆಲ್ಲ ತೀವ್ರ ಹಂಬಲಿಕೆಯ  ಸಂಗತಿಗಳೇ ಆಗಿವೆ.

‍ಲೇಖಕರು avadhi

27 July, 2023

1 Comment

  1. Jayasrinivasa Rao

    Lovely, Siraj!! Enjoyed reading your translation of this iconic ghazal by Faiz. I have been a huge fan of this ghazal. Mehdi Hassan’s rendering of this ghazal is mesmerising.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading