ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಹುಷಾರಾಗಿರಿ, ಸಾಧ್ಯವಾದಷ್ಟು ರಂಗೋಲಿ ಕೆಳಗೆ ನುಗ್ಗಿರಿ!' – ರಾಘವೇಂದ್ರ ಜೋಶಿ ಹೇಳ್ತಾರೆ

ರಾಘವೇಂದ್ರ ಜೋಶಿ

ಸ್ನೇಹಿತರೇ,
ಇದೊಂದು ಟೆಕ್ನಿಕಲ್ ವಿಷಯ. ತಾಂತ್ರಿಕ ವಿಷಯಗಳ ಬಗ್ಗೆ ಮುಗ್ಧವಾಗಿರುವವರು ಮುಂದೊಮ್ಮೆ ಮೋಸ ಹೋಗಬಾರದು ಎನ್ನುವದೇ ಈ ಪೋಸ್ಟಿನ ಆಶಯವಾಗಿದೆ. ಇವತ್ತು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವೀಟರ್, ಬ್ಲಾಗ್ ಗಳನ್ನು ಮೊಬೈಲ್ ನಲ್ಲಿಯೇ ಆಪರೇಟ್ ಮಾಡುವದು ಸಾಮಾನ್ಯವಾಗಿದೆ. ಈ ಕ್ಷಣಕ್ಕೆ ನಮಗೆ ಇದೊಂದು ಉತ್ಪ್ರೇಕ್ಷಿತ ಪೋಸ್ಟಿನಂತೆ ಅಥವಾ ಸುಮ್ಮನೇ ಗಮನ ಸೆಳೆಯುವ ಮಾಮೂಲಿ ಸುದ್ದಿಯಂತೆ ಭಾಸವಾಗಬಹುದು. ಆದರೆ ಮುಂದಿನ ಕೆಲವೇ ವರ್ಷಗಳಲ್ಲಿ ನಮ್ಮ ಎಲ್ಲ ದೈನಂದಿನ ಚಟುವಟಿಕೆಗಳಲ್ಲಿ ಗೂಗಲ್ಲೋ ಅಥವಾ ಫೇಸ್ ಬುಕ್ಕೋ ಅಥವಾ ಇನ್ಯಾರೋ ಮೂಗುತೂರಿಸಿ ಅನಪೇಕ್ಷಿತ ಸಲಹೆ ಕೊಡಲಾರಂಭಿಸಿದಾಗ ನಮಗೆ ಎಚ್ಚರ ಆಗಬಹುದು. ಯಾಕೆಂದರೆ, ಮೊಬೈಲ್ ಮೂಲಕ ನಾವು ಮಾಡುವ ಪ್ರತಿಯೊಂದು ಚಟುವಟಿಕೆಗಳೂ ವಿಶ್ವದ ನಾನಾ ಭಾಗಗಳಲ್ಲಿ ನಮ್ಮ ಐಡೆಂಟಿಟಿಯೊಂದಿಗೆ ಸೇವ್ ಮಾಡಲಾಗುತ್ತಿದೆ!

ಭಾರತದಂಥ ದೇಶಗಳಲ್ಲಿ ಪ್ರೈವಸಿಯನ್ನು ಒಂದು ಆಯುಧ ಮತ್ತು ನಮ್ಮ ಹಕ್ಕು ಎಂಬುದಾಗಿ ನಾವು ಯಾವತ್ತೂ ಭಾವಿಸಿಲ್ಲ. ಹೀಗಿರುವಾಗ ನಮ್ಮ ನಡೆ-ಚಲನವಲನಗಳನ್ನು ಇನ್ಯಾರೋ ನಮಗೆ ಗೊತ್ತಿಲ್ಲದಂತೆ ವೀಕ್ಷಿಸುತ್ತಿದ್ದಾರೆ ಅನ್ನುವದು ನಮಗೆ ಭಯ ಬೀಳಿಸುವ ಸಂಗತಿಯೇ ಅಲ್ಲ. ಆದರೆ ಮುಂದಿನ ದಿನಗಳಲ್ಲಿ ನಮ್ಮ ರೂಟೀನ್ ಕೆಲವೊಂದು ಅಚ್ಚರಿಯಾಗುವ, ಗಾಬರಿಯಾಗುವ, ಬೆಚ್ಚಿಬೀಳಿಸುವ ಸಂಗತಿಗಳನ್ನು ಹೊತ್ತು ತಂದರೆ ನಾವ್ಯಾರೂ ಆಶ್ಚೈರ್ಯರಾಗುವಂತಿಲ್ಲ. ಹೀಗಾಗಿ ಸ್ವಲ್ಪಾದರೂ ನಮ್ಮ ಇವತ್ತಿನ ನಡೆಯ ಬಗ್ಗೆ ಜಾಗ್ರತರಾಗಿರೋಣ.
1. ನೀವು ಮೊಬೈಲ್ ನಲ್ಲಿ ಯಾವುದೇ ಸಾಮಾಜಿಕ ಜಾಲತಾಣದ ಅಪ್ಲಿಕೇಶನ್ ಹಾಕಿಕೊಂಡಿದ್ದರೆ, ಆ ಮೊಬೈಲ್ ನಲ್ಲಿ ಬ್ಯಾಂಕಿಂಗ್ transactions ಮಾಡಬೇಡಿ.
2. ಕಂಪ್ಯೂಟರ್ ನ ಒಂದೇ ಬ್ರೌಸರ್ (ಉದಾ: Chrome, IE, Firefox)ನಲ್ಲಿ ಇಂಥ ಜಾಲತಾಣಗಳನ್ನೂ, ಹಣದ ವಹಿವಾಟು ನಡೆಸುವಂಥ ವೆಬ್ ಸೈಟುಗಳನ್ನೂ ಒಟ್ಟೊಟ್ಟಿಗೆ ಓಪನ್ ಮಾಡಬೇಡಿ. ಇವೆರಡೂ ಚಟುವಟಿಕೆಗಳನ್ನು ಬೇರೆಬೇರೆಯಾಗಿ, ಅದೂ ಕೂಡ ಪ್ರತಿಸಲ ಟೆಂಪರರಿ ಫೈಲ್ಸ್/cache ಕ್ಲೀಯರ್ ಮಾಡಿದ ಬಳಿಕವೇ ಮಾಡಿ.
3. ನಾನು ಅಂಟಿವೈರಸ್ ಹಾಕ್ಕೊಂಡಿದೀನಿ ಅನ್ನುವ ಉಡಾಫೆ ಖಂಡಿತ ಬೇಡ. ಆದರೆ ಖಂಡಿತ ಹಾಕಿಕೊಳ್ಳಿ.
4. ಮೊಬೈಲ್ ನಲ್ಲಿ ಹೊಸದಾಗಿ ಅಳವಡಿಸಿಕೊಳ್ಳುವ ಬಹುತೇಕ ಅಪ್ಲಿಕೇಶನ್ ಗಳು ನಿಮ್ಮ ಎಲ್ಲ ಫೋಟೋ, ಮೆಸೇಜ್, ಮೂವಿ, ಐಡೆಂಟಿಟಿ, ನೀವಿರುವ ಜಾಗ, ಪಾಸ್ ವರ್ಡ್ಸ್ ಓದಬಲ್ಲವು. ನಿಮ್ಮ ಅನುಮತಿಯಿಲ್ಲದೇ ಇದೆಲ್ಲವನ್ನೂ ಗುಪ್ತ ಸ್ಥಳಕ್ಕೆ ರವಾನಿಸಬಲ್ಲವು!
5. ಸಣ್ಣ ಪ್ರಯೋಗ ಮಾಡಿ ನೋಡಿ: ನಿಮ್ಮ ಕಂಪ್ಯೂಟರ್ ನಲ್ಲಿನ ಯಾವುದಾದರೂ ಒಂದು ಬ್ರೌಸರ್ ನಲ್ಲಿ ಫೇಸ್ ಬುಕ್ ಮತ್ತು ಯಾವುದಾದರೂ ಆನ್ ಲೈನ್ ಶಾಪಿಂಗ್ ಸೈಟ್ ಗೆ ಹೋಗಿ ನೋಡಿ. ಈ ಶಾಪಿಂಗ್ ಸೈಟ್ ತನ್ನೊಳಗೆ ಬಿಟ್ಟುಕೊಳ್ಳಲು ನಿಮಗೆ ರಿಜಿಸ್ಟರ್ ಮಾಡಲು ಹೇಳುತ್ತದೆ ಅಥವಾ ನಿಮ್ಮ ಹೆಸರನ್ನು ಉಚ್ಚರಿಸುತ್ತ “ಫೇಸ್ ಬುಕ್ ನಿಂದ ಲಾಗಿನ್ ಆಗ್ತೀರ..” ಅಂತ ನಿಮ್ಮನ್ನೇ ಕೇಳಿಬಿಡುತ್ತದೆ. ಅರೇ, ನಾನು ಫೇಸ್ ಬುಕ್ ನಲ್ಲಿ ಲಾಗಿನ್ ಆಗಿರುವದು ಈ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಗೆ ಹ್ಯಾಗೆ ಗೊತ್ತಾಯಿತು ಅಂತ ಯಾವತ್ತಾದರೂ ನೀವು ಕೇಳಿಕೊಂಡಿದ್ದೀರ?
6. ನೀವು ಆನ್ ಲೈನ್ ನಲ್ಲಿ ಯಾವುದೋ ವಸ್ತುವಿನ ಹುಡುಕಾಟ ನಡೆಸುತ್ತಿದ್ದೀರಿ ಅಂದುಕೊಳ್ಳಿ. ಅದೇ ಸಮಯಕ್ಕೆ ನಿಮ್ಮ ಫೇಸ್ ಬುಕ್ಕಿನಲ್ಲೂ ಅಂಥದೇ ವರ್ಗದ ವಸ್ತುಗಳ ಜಾಹಿರಾತುಗಳು ಕಾಣಿಸಿಕೊಳ್ಳತೊಡಗುತ್ತವೆ. ಅರೇ, ಅಲ್ಲಿ ಹುಡುಕ್ತ ಇದ್ದಿದ್ದು ಇಲ್ಲಿ ಹ್ಯಾಗೆ ಗೊತ್ತಾಯಿತು ಅಂತ ಯಾವತ್ತಾದರೂ ನೀವು ಕೇಳಿಕೊಂಡಿದ್ದೀರ?
ಸಮಯ ಮಿಂಚಿಲ್ಲ. ಹುಷಾರಾಗಿರಿ. ಸಾಧ್ಯವಾದಷ್ಟು ರಂಗೋಲಿ ಕೆಳಗೆ ನುಗ್ಗಿರಿ!
 

‍ಲೇಖಕರು G

24 July, 2014

2 Comments

  1. Anil Talikoti

    E-ರಂಗೋಲಿ ಕೆಳಗ ಹೋದ್ರು ಇವನ್ನ ಏಮಾರಿಸೋದು ಸುಲಭ ಅಲ್ಲ -ಒಂಥರಾ ರೋಗಾಣುಗಳಿವು ಹೆಂಗೋ ಒಳಗ ಹೊಕ್ಕೊತಾವು!

  2. Shrinivas Pandurangi

    uttama baraha

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading