ಹುರುಳಿ ವಡೆ ಮತ್ತು ನಾನು

ಸ್ಪೂರ್ತಿ ಎಸ್ ಎಂ

ದಿನಂಪ್ರತಿ ಸಾಮಾನ್ಯವಾಗಿ ಮಾಡುವ ಅಡುಗೆಗಳಿಗಿಂತ ಏನನ್ನಾದರೂ ಹೊಸದಾಗಿ, ಹಿಂದೆ ಮಾಡಿರದ ಹೊಸ ಅಡುಗೆ, ತಿಂಡಿಗಳನ್ನು ಮಾಡಲು ನನ್ನ ಮನಸು ಸದಾ ಸಕಾರಾತ್ಮಕವಾಗಿರುತ್ತಿತ್ತು. ಒಮ್ಮೆ ಇದ್ದಕ್ಕಿದ್ದಂತೆ ಎಂದೋ ಸವಿದಿದ್ದ ಹುರುಳಿ ಕಾಳಿನ ವಡೆ‌ ನನ್ನ ನೆನಪಿಗೆ ಬಂತು. 

ನಾನಾಗ ನಾಲ್ಕನೇ ತರಗತಿ ಮುಗಿಸಿ ಬೇಸಿಗೆ ರಜೆಗೆಂದು ನನ್ನ ದೊಡ್ಡಮ್ಮ ವಾಸವಾಗಿದ್ದ ಕೊಡಗಿನ ಗಟ್ಟತಾಳ ಎಂಬಲ್ಲಿಗೆ ಹೋಗಿದ್ದೆ. ಬಸ್ಸು ಇಳಿದದ್ದೇ ಚಿಕ್ಕ ಮೆಟಡಾರು ವ್ಯಾನ್ ಏರಿ ಅವರ ಊರಿನ ಕಡೆ ಸಾಗಿದೆವು‌. ಸುತ್ತಲೂ ಹಚ್ಚ ಹಸಿರಿನ ಕಾಫಿತೋಟ. ಆ ತೋಟದ ಅಲ್ಲಲ್ಲಿ ದೈತ್ಯಾಕಾರದ ಮರಗಳು. ಆ ಎಲ್ಲಾ ಮರಗಳಿಗೂ ಎಡೆಬಿಡದೇ ಸುತ್ತಿಕೊಂಡ ಬಳ್ಳಿ. ಮೊದಲಿಗೆ ಅದನ್ನು ವೀಳ್ಯದೆಲೆ ಎಂದು ಭಾವಿಸಿದ ನನಗೆ ಆನಂತರ ಅದು ಕಾಳು ಮೆಣಸಿನ ಬಳ್ಳಿ ಎಂದು ತಿಳಿಯಿತು.

ನಮ್ಮ ದೊಡ್ಡಮ್ಮ ವಾಸವಾಗಿದ್ದ ಮನೆಗೆ ನಾವು ಸುಮಾರು ಎರಡು ಕಿ.ಮೀ. ದೂರ ವ್ಯಾನ್ ಇಳಿದು ನಡೆಯಬೇಕಿತ್ತು. ಜನಸಾಂದ್ರತೆ ಅತಿ ಕಡಿಮೆ ಇದ್ದ ಆ ಪ್ರದೇಶದಲ್ಲಿ ಸಾಮಾನ್ಯ ಚಿಲ್ಲರೆ ಅಂಗಡಿಗಳ ಸಂಖ್ಯೆ ಬಹಳ ಕಡಿಮೆ. ಅದಕ್ಕಾಗಿ ದಾರಿಯಲ್ಲೇ ಸಿಕ್ಕ ಒಂದು ಅಂಗಡಿಯಲ್ಲಿ ನಾವು ಕೆಲವು ಅಗತ್ಯ ವಸ್ತುಗಳನ್ನು ಖರೀದಿಸಲು ಹೋದೆವು‌. ನಮ್ಮ ದೊಡ್ಡಮ್ಮ ನಮಗಾಗಿ (ನಾನು ಮತ್ತು ದೊಡ್ಡಮ್ಮನ ಮಗಳು) ಆಗತಾನೆ ಬಾಣಲಿಯಿಂದ ತೆಗೆದು ಹಾಕಿದ್ದ ಬಿಸಿಯಾದ ಹುರುಳಿ ವಡೆಯನ್ನು ಕೊಡಿಸಿದಳು.

ಕೇವಲ ಕಡಲೆ ಬೇಳೆ, ಉದ್ದಿನ ವಡೆಯ ಪರಿಚಯವಿದ್ದ ನನಗೆ ಹುರುಳಿ ವಡೆ ಅಪರೂಪವಾಗಿ ಕಂಡಿತ್ತು. ತಿಂದಾಕ್ಷಣ ನಾಲಿಗೆಗೆ ಹುರುಳಿ ಕಾಳಿನ ರುಚಿ ಸ್ವಲ್ಪ ಮಟ್ಟಿಗೆ ಸಿಕ್ಕರೂ, ಇದು ನಿಜವಾಗಿಯೂ ಹುರುಳಿ ಯಿಂದ ಮಾಡಿದ್ದೇ?!. ಎನ್ನುವಷ್ಟು ಆಶ್ಚರ್ಯಕರವಾಗಿತ್ತು. ಆದರೂ ಬಹಳ ರುಚಿಯಾಗಿದ್ದ ಕಾರಣ, ಅಷ್ಟೊಂದು ಗಾಢವಾಗಿ ಯೋಚಿಸದೇ ವಡೆಯನ್ನು ಸವಿಯುತ್ತಾ ನಡೆದೆ. ಅಲ್ಲಿದ್ದಷ್ಟು ದಿನ ಮನೆಯಲ್ಲಿ ಅಂಗಡಿ ಕಡೆ ಹೊರಟು ಏನಾದರೂ ತಿಂಡಿ ತರಬೇಕೇ? ಎಂದು ಕೇಳಿದಾಗ ತಕ್ಷಣ ಹುರುಳಿ ವಡೆ ಬೇಕೆನ್ನುತಿದ್ದೆ. ದುರಾದೃಷ್ಟವಶಾತ್ ಅಲ್ಲಿದ ಒಂದು ತಿಂಗಳಿನ ಅವಧಿಯಲ್ಲಿ ನನಗೆ ಕೇವಲ ಮೂರು ಬಾರಿಯಷ್ಟೇ ಹುರುಳಿ ವಡೆ ತಿನ್ನಲು ದೊರೆತಿದ್ದು.

ಸ್ವತಃ ಸ್ವಲ್ಪ ಮಟ್ಟಿಗೆ ಅಡಿಗೆ ಮಾಡಲು ಆರಂಭಿಸಿದ ನನಗೆ ಹಿಂದೆ ಸವಿದಿದ್ದ ಹುರುಳಿ ವಡೆ ಆಗಾಗ್ಗೆ ನೆನಪಾಗುತ್ತಿತ್ತು. ಹುರುಳಿ ಕಾಳು ಒಣ ಪ್ರದೇಶಗಳಲ್ಲಿ ಬೆಳೆಯುವ ಧಾನ್ಯ. ಇತರೆ ಬೇಳೆ, ಉದ್ದು, ಕಡಲೆ, ಹೆಸರುಕಾಳುಗಳಂತೆ ಇದು ದುಬಾರಿಯಲ್ಲ.  ಆ ಎಲ್ಲಾ ಕಾಳುಗಳಿಗಿಂತಲೂ ಅಧಿಕ ಪೌಷ್ಟಿಕಾಂಶಗಳನ್ನು ಹೊಂದಿದೆ‌.

ದಿನೇ ದಿನೇ ಆಹಾರ ಪದಾರ್ಥಗಳು ಆಧುನಿಕ ಕೃಷಿ ಪದ್ಧತಿಯಿಂದ ಸತ್ವ ಕಳೆದುಕೊಳ್ಳುತ್ತಿವೆ. ಆದರೆ ಹುರುಳಿಯ ವಿಶೇಷವೆಂದರೆ ಯಾವುದೆ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳನ್ನು ಬಳಸದೆ, ಕೇವಲ ನೀರನ್ನು ಅವಲಂಬಿಸಿ ಸುಲಭವಾಗಿ ಬೆಳೆಯಬಹುದಾದ ಶ್ರೇಷ್ಠ ಧಾನ್ಯ. 

ಮೊದಲಿಗೆ ಈ ಹುರುಳಿ ವಡೆಯನ್ನು ತಯಾರಿಸುವ ವಿಧಾನಕ್ಕಾಗಿ ಯೂಟ್ಯೂಬ್ ನ ಮೊರೆ ಹೋದೆ‌. ಅಲ್ಲಿ ಸಾಕಷ್ಟು ವಿವರ ಸಿಕ್ಕರೂ ನೋಡಲು ಹಳೇ ವಡೆಯಂತೆ ಒಂದೂ ಕಾಣಲಿಲ್ಲ. ಆದರೂ ಮೊದಲ ಬಾರಿ ಹುರುಳಿ ಮೊಳಕೆ ಕಾಳಿನಲ್ಲಿ ವಡೆ ತಯಾರಿಸಿದೆ. ಒಂದು ರೀತಿ ನಾಲಿಗೆಗೆ ರುಚಿ ಎನಿಸಿದರೂ, ನಾ ಬಯಸಿದ್ದ ವಡೆಯ ರುಚಿ ಸಿಗಲಿಲ್ಲ. ಆನಂತರ, ಒಣಗಿದ ಹುರುಳಿಯನ್ನೇ ನೆನೆಸಿ, ರುಬ್ಬಿ ವಡೆ ಮಾಡಿದ್ದೆ. ಆದರ ಮೇಲಿನ ಒಣ ಸಿಪ್ಪೆ ಸರಿಯಾಗಿ ಅರೆಯದೇ, ಎಣ್ಣೆಯಲ್ಲಿ ಕರಿದ ಮೇಲೆ ಬಹಳ ಗಡುಸಾಗಿ, ಕಟುಂ ಕಟುಂ ಎನ್ನಲು ತಿನ್ನಲು ಕಬ್ಬಿಣದ ಕಡಲೆಯಾಗಿ ಹೋಯಿತು.

ಹೀಗೆ ನನ್ನ ಪ್ರಯತ್ನವೂ ಸಾಗುತ್ತಿತ್ತು. ಒಂದು ದಿನ ಬೀಸುವ ಕಲ್ಲಿನಲ್ಲಿ ತಗಣಿಕಾಳನ್ನು ಬೀಸಿ, ಬೇಳೆ ಮಾಡುತ್ತಿದ್ದ ನಮ್ಮ ಅವ್ವನಿಗೆ, ಹುರುಳಿಯನ್ನು ಬೀಸಿ ಹೀಗೆ ಬೇಳೆ ಮಾಡಿಕೊಡು. ಆಗ ವಡೆ ಮಾಡುತ್ತೀನಿ‌. ಚೆನ್ನಾಗಿರುತ್ತೆ ಎಂದು ದುಂಬಾಲು ಬಿದ್ದೆ. ನನ್ನ ಕಾಟ ಸಹಿಸಲಾರದೆ ನನ್ನವ್ವ ಹುರುಳಿ ಬೇಳೆ ಸಿದ್ಧಪಡಿಸಿಕೊಟ್ಟರು. ಆದರೂ ಕೆಲವು ದಿನ ವಡೆ ತಯಾರಿ ತಂಟೆಗೆ ಹೋಗಿರಲಿಲ್ಲ. 

ಇಂದು ಮಧ್ಯಾಹ್ನ ಬಾರದ ಮಳೆ ಬಿದ್ದು ಚಳಿಯಲ್ಲಿ ಏನನ್ನಾದರೂ ತಿನ್ನುವ ಇರಾದೆಯಿಂದ, ನನ್ನವ್ವ ಹುರುಳಿ ಬೇಳೆಯನ್ನು ನೆನಪಿಸಿದರು‌. ನಂತರ ಬಹಳ ಶ್ರದ್ಧೆ ವಹಿಸಿ ಹುರುಳಿ ಬೇಳೆ ವಡೆಯನ್ನು ತಯಾರಿಸಿದೆ. ಈ ಬಾರಿಯೂ ರುಚಿಗೇನೂ ಮೋಸ ಆಗಲಿಲ್ಲ. ನಾನಂದು ಸವಿದ ಆ ಮೃದುವಾದ ಗರಿ ಗರಿ ವಡೆಯ ಸವಿ, ಇಂದಿಗೂ ಕಣ್ಮುಚ್ಚಿಕೊಂಡರೆ ನೆನಪಾಗುತ್ತದೆ. ಆ ರುಚಿಗೆ ಇಂದು ನಾನು ತಯಾರಿಸಿದ ವಡೆಯ ರುಚಿ ನೂರಕ್ಕೆ ಮೂವತ್ತೈದರಷ್ಟು ಅಂಕ ಗಳಿಸಿದೆ ಎಂದು ನನ್ನ ಭಾವನೆ. ಅರ್ಥಾತ್ ನಾನು ಮತ್ತೆ ಪ್ರಯತ್ನಿಸಬಹುದು.

ಈ ರೀತಿ ನನ್ನ ತಲೆ ಕೆಡಿಸಿದ್ದ ವಡೆಯ ಕಥೆಗೆ ಅಕ್ಷರ ರೂಪ ಕೊಡಬೇಕೆನಿಸಿ ಹೀಗೆ ಕುಳಿತು ಬರೆಯುತ್ತಿದ್ದೇನೆ. ಮುಂದೊಮ್ಮೆ ನಾನು ನೂರಕ್ಕೆ ನೂರು ಅಂಕ ಗಳಿಸಿದ ಬಳಿಕ, ಆಧುನಿಕ ಸಂಪ್ರದಾಯದಂತೆ ವಾಟ್ಸಾಪ್ ಸ್ಟೇಟಸ್ಸಿನಲ್ಲಿ, Mission #Huruli vade Completed ಎಂಬ ಘೋಷದೊಂದಿಗೆ ನಿಮ್ಮನ್ನು ಭೇಟಿ ಮಾಡುತ್ತೇನೆ.

‍ಲೇಖಕರು Avadhi

June 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: