ಪ್ರತಿಭಾ ನಂದಕುಮಾರ್ ಅಂಕಣ– ಹೈದರ್ ಮತ್ತು ಹೆಣ್ಣುಗಳು

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ.

ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ ದಶಕಗಳ ಕಾಲದ ಉಸಿರಾಟದ ಗುರುತು. ‘ಇನ್ನು ಹತ್ತು ವರ್ಷದ ನಂತರ ಮತ್ತಿನ್ನೊಂದು ಸಮಗ್ರ ಸಂಗ್ರಹದೊಂದಿಗೆ ಬರುತ್ತೇನೆ’ ಎಂದು ಖಚಿತವಾಗಿ ಹೇಳುವ ಉತ್ಸಾಹಿ. ‘ನಾವು ಹುಡುಗಿಯರೇ ಹೀಗೆ’ಯಿಂದ ಆರಂಭಿಸಿ ‘ಕೌಬಾಯ್ಸ್ ಮತ್ತು ಕಾಮಪುರಾಣ’ವರೆಗೆ ಕನ್ನಡ ಸಾಹಿತ್ಯವನ್ನು ಆವರಿಸಿ ನಿಂತಿರುವ ಪ್ರತಿಭಾ ಪರಿ ಮಾದರಿ.

ಸಂಶೋಧನೆ ಇವರ ಇನ್ನೊಂದು ಮೋಹ. ಸಂಶೋಧನೆಯನ್ನು ಕೈಗೆತ್ತಿಕೊಂಡರೆ ಅದರ ಆಳಕ್ಕೆ ಡೈವ್ ಹೊಡೆಯುವ ಉತ್ಸಾಹ.

ಅಂತಹ ಒಂದು ಅಧ್ಯಯನವನ್ನು ‘ಅವಧಿ’ ನಿಮ್ಮ ಮುಂದಿಡುತ್ತಿದೆ. ಈ ಅಧ್ಯಯನ ಬರಹಗಳ ಈ ಅಂಕಣದಲ್ಲಿ ಬರುವ ಎಲ್ಲಾ ಅಭಿಪ್ರಾಯಕ್ಕೂ ಲೇಖಕರೇ ಜವಾಬುದಾರರು ಎಂದು ಕಾಣಿಸುತ್ತಾ ಈ ಅಂಕಣದ ಎಲ್ಲಾ ಬರಹಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ.

ಹೈದರನಿಗೆ ಸುಂದರ ಹುಡುಗಿಯರ ಬಗ್ಗೆ ಅಪಾರ ಆಸಕ್ತಿ ಇತ್ತು. ರಾತ್ರಿ ಮನರಂಜನೆಯ ಕಾರ್ಯಕ್ರಮದಲ್ಲಿ ನಾಟಕ ನರ್ತನ ಗಾಯನ ಇರುತ್ತಿತ್ತು. ನರ್ತಕಿಯರನ್ನು ತಯಾರು ಮಾಡುವ ವಿಶೇಷ ವಿಭಾಗದ ವಿವರವಾದ ವರ್ಣನೆಯನ್ನು ಎಂಎಲ್ ಡಿಟಿ ದಾಖಲಿಸುತ್ತಾನೆ. 

ಒಬ್ಬಳು ಮುಖ್ಯಸ್ಥೆ (ನಾವು ಕೋಠಿವಾಲಿ ಅನ್ನುತ್ತೇವೆ, ಬ್ರಿಟಿಷರು ಮ್ಯಾನೇಜರ್ ಎಂದು ಕರೆದಿದ್ದಾರೆ!) ಸೌಂದರ್ಯವೇ ಪ್ರಧಾನ ಅಂಶವಾಗಿಟ್ಟುಕೊಂಡು ನಾಲ್ಕು ಅಥವಾ ಐದು ವರ್ಷದ ಹುಡುಗಿಯರನ್ನು ಖರೀದಿಸುತ್ತಾಳೆ. ಅವರ ನಾಜೂಕು ಮುಖ ಲಕ್ಷಣಗಳ, ದೊಡ್ಡ ಕಪ್ಪು ಕಣ್ಣುಗಳು, ಸುಂದರ ಹುಬ್ಬು, ಮುದ್ದಾದ ಪುಟಾಣಿ ಬಾಯಿ, ಸ್ಪಟಿಕದಂತಹ ಹಲ್ಲುಗಳು, ಕೆನ್ನೆಯಲ್ಲಿ ಗುಳಿ, ಮಂಡಿವರೆಗೆ ಇಳಿಬೀಳುವ ಕಪ್ಪು ಕೂದಲ ರಾಶಿ. ನಯವಾದ ಚರ್ಮ, ಸ್ವಲ್ಪ ಕಂದುಬಣ್ಣ.

‘ಮಿಶ್ರತಳಿಯ ಹೆಂಗಸರಂತೆ ನಾಚಿಕೊಂಡರೆ ಕೆನ್ನೆ ಕೆಂಪಾದದು ಕಾಣದಂತಹ ಕಂದಲ್ಲ, ಆರೋಗ್ಯಪೂರ್ಣ ಗ್ರಾಮೀಣ ಚೆಲುವೆಯರಂತೆ ಗುಲಾಬಿ ಬಣ್ಣ. ಇವರು ಹಳದಿ ಚೆಲುವೆಯರು. ಪ್ಯಾರಿಸ್ ನ ಫ್ರೆಂಚ್ ಮಹಿಳೆಯರು ಕೆನ್ನೆಗೆ ರೋಜ್ ಹಚ್ಚಿಕೊಂಡಂತೆ ಇವರು ಲಘುವಾಗಿ ಅರಿಷಿನ ಹಚ್ಚಿಕೊಳ್ಳುತ್ತಾರೆ. ಮೊದಲಿಗೆ ಸ್ವಲ್ಪ ಆಶ್ಚರ್ಯವಾದರೂ ಬಹಳ ಬೇಗ ಇದು ಸುಂದರ ಎಂದು ಒಪ್ಪಿಕೊಳ್ಳುವಂತಾಗುತ್ತದೆ’ ಅವರು ಸದಾ ತೆಳುವಾದ ಮಸ್ಲಿನ್ ಬಟ್ಟೆಯ ಮೇಲೆ ಚಿನ್ನದ ರೇಖುಗಳಿಂದ ಕುಸುರಿ ಕೆಲಸ ಮಾಡಿದ ವಸ್ತ್ರ ತೊಡುತ್ತಾರೆ. ಅವರು ತಲೆಯಿಂದ ಕಾಲಿನವರೆಗೆ ಆಭರಣಗಳಿಂದ ಸಿಂಗರಿಸಿಕೊಳ್ಳುತ್ತಾರೆ. ತಲೆ, ಕೊರಳು, ಕಿವಿ, ಮೂಗು, ಎದೆ, ತೋಳುಗಳು, ಕೈಗಳು, ಬೆರಳುಗಳು, ಕಾಲು, ಕಾಲ್ಬೆರಳುಗಳವರೆಗೆ ಆಭರಣಗಳು ಒಪ್ಪವಾಗಿ ಅತಿ ಮೋಹಕವಾಗಿದೆ ಎಂದು ಮೆಚ್ಚಿಕೊಂಡಿದ್ದಾನೆ.  

ಅವರಿಗೆ ಮೊದಲು ಇನಾಕ್ಯುಲೇಷನ್ ಹಾಕಿಸುತ್ತಾಳೆ ಎಂದಿದ್ದಾನೆ. 1740 ರಲ್ಲೇ ಇನಾಕ್ಯುಲೇಷನ್ ಇತ್ತಾ? ನಂತರ ಅವರಿಗೆ ನೃತ್ಯ ಮತ್ತು ಹಾಡುಗಾರಿಕೆಯ ತರಬೇತಿ ನಡೆಸಲಾಗುತ್ತಿತ್ತು. ಹೈದರನಿಗೆ ಮತ್ತು ಆತನ ನಿಕಟವರ್ತಿಗಳು ಹಾಗು ಅತಿಥಿಗಳಿಗೆ ಸಂತೋಷಪಡಿಸುವ ಎಲ್ಲಾ ಕಲೆಗಳನ್ನೂ ಅವರಿಗೆ ಕಲಿಸಲಾಗುತ್ತಿತ್ತು. ಅದರಲ್ಲಿ ಅವರು ಎಂಥ ಪರಿಣತರಾಗಿರುತ್ತಿದ್ದರೆಂದರೆ ಎಂತಹ ಅರಸಿಕನನ್ನೂ ಸಮ್ಮೋಹನಗೊಳಿಸುವಲ್ಲಿ ಯಶಸ್ವಿಯಾಗುತ್ತಿದ್ದರು.

ಹತ್ತು ಅಥವಾ ಹನ್ನೊಂದು ವಯಸ್ಸಿಗೆ ಅವರು ಸಾರ್ವಜನಿಕ ಪ್ರದರ್ಶನಕ್ಕೆ ಸಿದ್ಧರಾಗಿರುತ್ತಿದ್ದರು. ನರ್ತಿಸುವಾಗ ಅವರು ತಲೆಯಿಂದ ಪಾದದವರೆಗೆ ಪ್ರತಿಯೊಂದು ಅಂಗವನ್ನೂ ಅದ್ಭುತವಾಗಿ  ಬಳಸಿಕೊಳ್ಳುತ್ತಾರೆ. ಯಾವ ನರ್ತಕಿಯೂ ಹದಿನೇಳು ವಯಸ್ಸು ಮೀರಿದವಳಲ್ಲ. ಹದಿನೇಳು ವರ್ಷವಾದ ಮೇಲೆ ಅವರನ್ನು ಕಳಿಸಿಬಿಡಲಾಗುತ್ತದೆ, ಅವರು ಬೇರೆಬೇರೆ ಕಡೆಗೆ ಪ್ರಯಾಣ ಮಾಡುತ್ತಾರೆ ಅಥವಾ ಯಾವುದಾದರೂ ದೇವಸ್ಥಾನಕ್ಕೆ ಸೇರುತ್ತಾರೆ ಎನ್ನುತ್ತಾನೆ. 

ತಂಡದ ಮುಖ್ಯಸ್ಥೆಗೆ ಹೈದರ್ ಧಾರಾಳ ಸಂಭಾವನೆ ಕೊಡುತ್ತಾನೆ. ಯಾರಾದರೂ ಶ್ರೀಮಂತ ಒಂದು ಗೋಷ್ಠಿ ಏರ್ಪಡಿಸಿ ಇವರನ್ನು ಆಮಂತ್ರಿಸಿದರೆ ಪ್ರತಿಯೊಬ್ಬಳು ನರ್ತಕಿ ಗಾಯಕಿಗೂ ಒಂದು ನೂರು ವರಹಗಳನ್ನು ಸಂದಾಯ ಮಾಡಬೇಕು. ಸಾಮಾನ್ಯವಾಗಿ ತಂಡದಲ್ಲಿ ಇಪ್ಪತ್ತು ಹುಡುಗಿಯರಿರುತ್ತಾರೆ. ಪಕ್ಕವಾದ್ಯದವರಿಗೆ ಪ್ರತ್ಯೇಕ ಹಣ ಸಂದಾಯವಿಲ್ಲ. ತಂಡಕ್ಕೆ ಒಳ್ಳೆಯ ಊಟ, ಹಣ್ಣು, ಸಿಹಿ ತಿಂಡಿ, ಹಾಲು ಕೊಡಬೇಕು. ನರ್ತನವಾದ ಮೇಲೆ ಹುಡುಗಿಯರನ್ನು ಇರಿಸಿಕೊಂಡರೆ ಅದಕ್ಕೆ ಹೆಚ್ಚಿನ ನೂರು ವರಹಗಳನ್ನು ಹಾಗೂ ಏನಾದರೊಂದು ಆಭರಣವನ್ನು ಕೊಡಬೇಕು. 

ಇನ್ನೊಂದು ದಾಖಲೆಯ ಪ್ರಕಾರ ನರ್ತಿಸುವವಳು ಹಿಂದೂ ಆಗಿದ್ದರೆ ಅವಳು ಬಿಳಿಯ ಉಡುಪು ಧರಿಸಬೇಕಿತ್ತು. ಮುಸಲ್ಮಾನಳಾಗಿದ್ದರೆ ಜರತಾರಿ ಉಡುಪು. ನರ್ತನ ಮಂದಗತಿಯಲ್ಲಿರಬೇಕಾಗಿತ್ತು. ನರ್ತಿಸುವಾಗ ಅವಳು ಯಾವುದೇ ರೀತಿಯಲ್ಲಿ ನಗಬಾರದಿತ್ತು ಅಥವಾ ತನ್ನ ಕಡೆಗೆ ಗಮನ ಸೆಳೆಯಬಾರದಿತ್ತು. ಯಾರಾದರೂ ನರ್ತಕಿಯ ಕಡೆಗೆ ಕಣ್ಣು ಹೊರಳಿಸಿದರೆ ತಕ್ಷಣ ಹೈದರ್ ಜೋರಾಗಿ ‘ನೋಡು, ನೋಡು… ಚೆನ್ನಾಗಿ ನೋಡು, ನಿಮ್ಮಮ್ಮ ಮನೆ ಬಿಟ್ಟು ಬಂದು ಅವಳ ಗಂಡಂದಿರ ನಡುವೆ ಕುಣಿತಿದ್ದಾಳೆ!’ ಎನ್ನುತ್ತಿದ್ದ! ಹೈದರನ ಅಶ್ಲೀಲ ಮಾತಿನ ಒಂದು ಉದಾಹರಣೆ ಇದು.

ಸಾಮಾನ್ಯವಾಗಿ ಹೈದರಾಲಿಗೆ ತನ್ನ ಅಧಿಕಾರಿಗಳು ಯಾವುದೇ ಮತಕ್ಕೆ ಸೇರಿದವರಾಗಿರಲಿ ಅದರ ಬಗ್ಗೆ ಗಮನವಿರುತ್ತಿರಲಿಲ್ಲ, ಅವರು ತನ್ನ ಬಗ್ಗೆ ಇಟ್ಟಿರುವ ನಿಷ್ಠೆ ಮತ್ತು ವಿಧೇಯತೆ ಕಡೆಗೆ ಮಾತ್ರ ಅವನಿಗೆ ಮುಖ್ಯವಾಗಿತ್ತು. ಅವನ ಜನಾನಾದಲ್ಲಿ ಹೇರಳ ಸುಂದರಿಯರಿದ್ದರು. ಆದರೆ ಅವನಿಗೆ ಹೆಣ್ಣಿನ ‘ಹುಚ್ಚು’ ಇರಲಿಲ್ಲ ಮತ್ತು ತನ್ನ ಮಿಲಿಟರಿ ಬದುಕಿನಲ್ಲಿ ಹೆಣ್ಣು ಅಡ್ಡಿಯಾಗಲು ಬಿಡಲಿಲ್ಲ. ಜೊತೆಗೆ ಹೆಣ್ಣುಗಳು ಸಾರ್ವಜನಿಕ ಕರ್ತವ್ಯಗಳಿಂದ ತನ್ನನ್ನು ವಿಮುಖನನ್ನಾಗಿಸಲು ಎಂದಿಗೂ ಬಿಡಲಿಲ್ಲ. ಇದನ್ನು ಆತನನ್ನು ಬಲ್ಲ ಹಲವಾರು ಬ್ರಿಟಿಷ್ ಮತ್ತು ಫ್ರೆಂಚ್ ಅಧಿಕಾರಿಗಳು ದಾಖಲಿಸಿದ್ದಾರೆ. 

ಹೈದರನ ಮೊದಲನೆಯ ಹೆಂಡತಿ ಸಿರಾದ ರಾಜನಾದ ಸಯ್ಯದ್ ಶಾಬಾಜ್ ನ ಮಗಳು. ಇವಳಿಗೆ ಮೊದಲ ಹೆರಿಗೆಯಲ್ಲಿ ಸೊಂಟದಿಂದ ಕೆಳಗೆ ಪಾರ್ಶ್ವವಾಯು ಬಡಿದು ಹಾಸಿಗೆ ಹಿಡಿದಳು. ಆದರೂ ಅವಳ ಬಗ್ಗೆ ಹೈದರನಿಗೆ ಅತೀವ ಪ್ರೀತಿ ಇದ್ದು ಕೊನೆವರೆಗೂ ಅವಳೇ ಮನೆಯ ಯಜಮಾನಿಕೆ ನೋಡಿಕೊಳ್ಳುತ್ತಿದ್ದಳು. 

ಎರಡನೆಯವಳನ್ನು ಫಕ್ರುನ್ನೀಸಾ ಅಥವಾ ಫಾತಿಮಾ ಬೇಗಂ ಸಾಹಿಬಾ.  ಸೇದಾನಿ ಬೇಗಂ ಎಂದು ಕರೆಯುತ್ತಿದ್ದರು. ಕಡಪಾದ ಫೌಜುದಾರನಾಗಿದ್ದ ಮೀರ್ ಮೊಯುದ್ದೀನನ ಮಗಳು. 1745ರಲ್ಲಿ ಶ್ರೀರಂಗಪಟ್ಟಣದಲ್ಲಿ ಮದುವೆಯಾದ. ಇವಳ ಮಗನೆ ಟೀಪು ಸುಲ್ತಾನ್. 

1759ರಲ್ಲಿ ಕೆನ್ನಿ ಸಾಹಿಬಾಳನ್ನು ಮೈಸೂರಿನಲ್ಲಿ ಮದುವೆಯಾದ. ಆರ್ಕಾಟಿನ ಜಮಾದಾರ ಮೆಹದಿ ಬೇಗ್ ನ ಮಗಳು, ಮಿರ್ಜಾ ಹುಸೇನ್ ಬೇಗ್ ನ ತಂಗಿ. 

ಇನ್ನೊಬ್ಬಳು ಹೆಂಡತಿ ಫಾತಿಮಾ ಖಾನಂ, ಯೂಸುಫ್ ಬೇಗ್ ನ ತಂಗಿ.  ಮತ್ತೊಬ್ಬಳು ಮೀರಾ ಬೀಬಿ. ಇವಳ ಬಗ್ಗೆ ಹೆಚ್ಚು ವಿವರಗಳಿಲ್ಲ. 

ಮತ್ತೊಬ್ಬಳು ದುರ್ದಾನಾ ಬೇಗಂ ಸಾಹಿಬಾ. 1782ರಲ್ಲಿ ಮದುವೆಯಾದ. ಇವಳನ್ನು ದೆಹಲಿಯಲ್ಲಿ ಖರೀದಿಸಲಾಯಿತು. ಇವಳನ್ನು ಮದುವೆಯಾದಾಗ ಹೈದರನಿಗೆ ವಯಸ್ಸು ಅರವತ್ತೆರಡು  ವರ್ಷ. ಇವಳಲ್ಲಿ ಹೈದರನಿಗೆ ಒಬ್ಬ ಮಗ ಹುಟ್ಟಿದ.  

ಇವರಲ್ಲದೆ ದೆಹಲಿಯಲ್ಲಿ ಖರೀದಿಸಿದ ಇಪ್ಪತ್ತು ಹೆಂಗಸರಲ್ಲಿ ಶ್ರೀರಂಗಪಟ್ಟಣಕ್ಕೆ ಬಂದ ಮೇಲೆ ಒಬ್ಬಳನ್ನು ಟಿಪ್ಪುಗೆ ಕೊಟ್ಟು ಉಳಿದ ಹತ್ತೊಂಭತ್ತು ಹುಡುಗಿಯರನ್ನು ಹೈದರ್ ಮದುವೆಯಾದ. ಆ ಹತ್ತೊಂಬತ್ತು ಹೆಣ್ಣುಗಳನ್ನು ಹೈದರನ ಹೆಂಡತಿಯರಲ್ಲಿ ಲೆಕ್ಕ ಹಾಕಲಾಗುತ್ತದೆ. ಅವರನ್ನು ಖರೀದಿಸಿದ ಸಂದರ್ಭ ಕುರಿತು ಇನ್ನಷ್ಟು ವಿವರಗಳು ಸಿಗುತ್ತದೆಯೇ ಎಂದು ಇನ್ನೂ ಹುಡುಕುತ್ತಿದ್ದೇನೆ.

ಮದುವೆಯಾದ ಹೆಣ್ಣುಗಳ ಮೇಲೆ ಹೈದರ್ ಕಣ್ಣು ಹಾಕಿದ ಯಾವುದೇ ಒಂದು ಪ್ರಕರಣವೂ ಇಲ್ಲ. ಅದರ ಸೂಚನೆಯೂ ಇಲ್ಲ. ಬದಲಿಗೆ ದೊಡ್ಡ ಕೃಷ್ಣರಾಜ ಒಡೆಯರ ನಿಧನಾನಂತರ ಪಟ್ಟಕ್ಕೆ ಬಂದ ಆತನ ತಮ್ಮ ಚಾಮರಾಜ ಒಡೆಯ ಅತ್ತಿಗೆಯ ಮೇಲೆ ಕಣ್ಣು ಹಾಕಿದ. ಆಕೆ ದಳವಾಯಿ ದೇವರಾಜನಲ್ಲಿ ತನ್ನ ಗೋಳು ಹೇಳಿಕೊಂಡಳು. ದೇವರಾಜ ಅರಸನಿಗೆ ಬೈದು ಬುದ್ಧಿ ಹೇಳಿದ್ದಕ್ಕೆ ಚಾಮರಾಜ ಕೋಪಿಸಿಕೊಂಡು ದೇವರಾಜನನ್ನು ಕೆಟ್ಟ ಮಾತುಗಳಿಂದ ಬೈದು ಆಸ್ಥಾನದಿಂದ ಹೊರಗೆ ಹಾಕಿದ. 

ಅವನು ಬೆಂಗಳೂರಿನ ಸೇನಾಧಿಕಾರಿ ನಂಜರಾಜ ಮತ್ತು ಮಧುಗಿರಿಯ ಸೇನಾಧಿಕಾರಿ ನಂಜರಾಜನ ನೆರವು ಕೇಳಿದ. ಮೂವರೂ ಸೇರಿ ಚಾಮರಾಜನನ್ನು ಬಂಧಿಸಿ ಕಪಿಲೆದುರ್ಗದ ಸೆರೆಮನೆಯಲ್ಲಿಟ್ಟರು. ಎಷ್ಟೋ ವರ್ಷಗಳ ನಂತರ ಹೈದರ್ ಅಧಿಕಾರದ ಚುಕ್ಕಾಣಿ ಹಿಡಿದಾಗ ಆತ ಬಿಡುಗಡೆಯನ್ನು ಕೇಳಿದಾಗ ಹೈದರ್ ‘ಅತ್ತಿಗೆಯ ಮೇಲೆ ಕಣ್ಣು ಹಾಕಿದ ಪಾಪಿ’ ಎಂದು ಬೈದ. ಹಾಗಾಗಿ ಆತ ಸೆರೆಮನೆಯಲ್ಲೇ ಕೊನೆಯುಸಿರೆಳೆದ. 

ಬೇಡನೂರಿನ ರಾಣಿಯ ಬಗ್ಗೆ ಹೈದರ್ ನಡೆದುಕೊಂಡ ರೀತಿಯೂ ವಿಭಿನ್ನವಾಗಿದೆ. ರಾಜನ ಮರಣಾನಂತರ ಆತನ ವಿಧವೆ ರಾಣಿ ತನ್ನ ಕೆಲಸಗಾರನೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದಳು. ಇದರ ಬಗ್ಗೆ ಊರಲ್ಲೆಲ್ಲಾ ಗುಲ್ಲೆಬ್ಬಿತ್ತು. ಇದರ ಪರಿಣಾಮ ಕುರಿತು ಕಿರ್ಮಾನಿ ವಿವರವಾಗಿ ಬರೆದಿದ್ದಾನೆ. ಆಕೆ ಮೈಸೂರ ಅರಸರಿಗೆ ಸಲ್ಲಿಸಬೇಕಾದ ಕಪ್ಪವನ್ನು ಸಲ್ಲಿಸಿರಲಿಲ್ಲ.  ಅಲ್ಲಿಯೇ ಒಬ್ಬ ಸಂದರ್ಭವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ಹವಣಿಸುತ್ತಿದ್ದ. ವಿಷಯ ತಿಳಿದ ಹೈದರಾಲಿ ತಕ್ಷಣ ನಗರದ ಪರಿಸ್ಥಿತಿಯನ್ನು ಅರಿತುಕೊಳ್ಳಲ್ಲು ಬೇಹುಗಾರರನ್ನು ಕಳಿಸಿ ವಿಷಯ ಸಂಗ್ರಹಿಸಿದ. ಸಮಯ ನೋಡಿಕೊಂಡು ತನ್ನ ಪಡೆಯನ್ನು ಕರೆದುಕೊಂಡು ನಗರಕ್ಕೆ ಮುತ್ತಿಗೆಯಿಟ್ಟ.

ಹೈದರ್ ಅಲ್ಲಿಯ ಜನರಿಗೆ ಆಶ್ವಾಸನೆ ನೀಡಿ, ಯೋಗ್ಯರಾದವರನ್ನು ಸೇನೆಗೆ ಭರ್ತಿಯಾಗಲು ಅನುಮತಿ ನೀಡಿ ಜನರಲ್ಲಿ ಆಶಾಭಾವನೆ ಹುಟ್ಟುಹಾಕಿದ. ಹೈದರನ ಧಾಳಿಯಿಂದ ಹೆದರಿದ ರಾಣಿ ತನ್ನ ವಕೀಲರ ಮೂಲಕ ಸಂಧಾನ ಪತ್ರವನ್ನೂ ಉಡುಗೊರೆಗಳನ್ನೂ ಕಳಿಸಿದಳು. ಜೊತೆಗೆ ವರ್ಷಕ್ಕೆ ಮೂರುವರೆ ಲಕ್ಷ ವರಹಗಳನ್ನು, ಕರಿಮೆಣಸು, ಶ್ರೀಗಂಧ ಇತ್ಯಾದಿ ವಸ್ತುಗಳನ್ನೂ ನೀಡುವುದಾಗಿ ಆಶ್ವಾಸನೆ ನೀಡಿದಳು. ಅದನ್ನೆಲ್ಲ ಓದಿಸಿ ತಿಳಿದ ಹೈದರ್ ಅವಳಿಗೆ, ಅವಳ ಕೆಟ್ಟ ಹೆಸರನ್ನು ಅಳಿಸಿ ಹಾಕಿ, ರಾಣಿಯ ಯೋಗ್ಯತೆಗೆ ತಕ್ಕಂತೆ ಬದುಕಬೇಕಾದರೆ ತಕ್ಷಣ ಬಂದು ತನ್ನನ್ನು ಕಾಣಬೇಕು ಮತ್ತು ಅವಳನ್ನು ಸಕಲ ಮರ್ಯಾದೆಗಳ ಸಹಿತ ಶ್ರೀರಂಗಪಟ್ಟಣಕ್ಕೆ ಕಳಿಸಿಕೊಡುವುದಾಗಿ ಹಾಗೂ ಆಕೆ ಬಯಸಿದಂತೆ ಬದುಕಲು ಸೂಕ್ತ ಭತ್ಯೆಯನ್ನೂ ನೀಡುವುದಾಗಿಯೂ ವಚನವಿತ್ತ. ಆದರೆ ಆಕೆ ಹೈದರನ ಆಫರ್ ಅನ್ನು ನಿರಾಕರಿಸಿದಳು! ಬದಲಿಗೆ ಸವಣೂರಿನ ಅಬ್ದುಲ್ ಹಕೀಮ್ ಖಾನನಿಗೆ ಪತ್ರ ಮತ್ತು ಸಾಕಷ್ಟು ದೊಡ್ಡ ಮೊತ್ತದ ಹಣವನ್ನು ಕಳಿಸಿ ನೆರವು ಬೇಡಿದಳು. 

ಅಬ್ದುಲ್ ಹಕೀಮ್ ಆಕೆಯ ಕೋರಿಕೆಯನ್ನು ಮನ್ನಿಸಿ ತಕ್ಷಣ ಎರಡು ಸಾವಿರ ಕುದುರೆಯಾಳು, ನಾಲ್ಕು ಸಾವಿರ ಕಾಲಾಳುಗಳನ್ನು ಕಳಿಸಿದ. ಜೊತೆಗೆ ತಾನೇ ಸ್ವತಃ ದೊಡ್ಡ ಸಂಖ್ಯೆಯ ಪಡೆಯ ಸಹಿತ ಬಂದು ಕೋಟೆಯನ್ನು ಸುತ್ತುವರಿದು ಕಾವಲು ನಿಂತ. ವಿಷಯ ತಿಳಿದ ಹೈದರ್ ಕೋಪದಿಂದ ಸಕಲ ಸೈನ್ಯ ಸಹಿತ ಬಂದು ಧಾಳಿ ಮಾಡಿದ. ಇದು ಸುಲಭ ಯುದ್ಧವಾಗಿರಲಿಲ್ಲ. ರಾಣಿ ಕೂಡಾ ಹೆದರದೇ ಹೋರಾಡಿದಳು. ಕೊನೆಗೆ ಹೈದರ್ ತನ್ನ ಸೈನ್ಯಕ್ಕೆ ‘ನಗರವನ್ನು ಲೂಟಿ ಮಾಡಿ, ದಕ್ಕಿಸಿಕೊಂಡದ್ದೆಲ್ಲ ನಿಮಗೇ’ ಎಂದು ಘೋಷಿಸಿದ. ಪರಿಣಾಮ ನಗರ ಹೈದರನ ಸೈನ್ಯದ ವಶವಾಯಿತು.

ರಾಣಿ ತನ್ನ ಅರಮನೆಗೆ ಬೆಂಕಿ ಇಟ್ಟು ಸುರಂಗ ಮಾರ್ಗವಾಗಿ ಕವಲೇದುರ್ಗ ಸೇರಿಕೊಂಡಳು. ಅಲ್ಲಿಗೆ ಧಾಳಿ ಇಟ್ಟ ಹೈದರ್ ಒಂದು ತಿಂಗಳು ಸತತವಾಗಿ ಧಾಳಿ ಮಾಡಿ ಕವಲೇದುರ್ಗವನ್ನು ವಶಪಡಿಸಿಕೊಂಡ. ರಾಣಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಶ್ರೀರಂಗಪಟ್ಟಣಕ್ಕೆ ಕಳಿಸಿದ. ನಂತರ ರಾಣಿಯನ್ನು ಮಧುಗಿರಿಯ ಕೋಟೆಯಲ್ಲಿ ಸೆರೆಯಲ್ಲಿಟ್ಟ. ಬೇಡನೂರನ್ನು ವಶಪಡಿಸಿಕೊಂಡು ಅದಕ್ಕೆ ಹೈದರ್ ನಗರ ಎಂದು ಹೆಸರಿಟ್ಟು ಎಲ್ಲರಿಗೂ ಕೈತುಂಬಾ ಉಡುಗೊರೆಗಳನ್ನು ಇತ್ತು ಪುರಸ್ಕರಿಸಿದ. ಅಲ್ಲಿಂದ ಹೈದರ್ ಸವಣೂರಿನ ಖಾನ್ ನ ಸೋಲಿಸಿದ್ದು, ಸುತ್ತಮುತ್ತಲ ಪ್ರದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಂಡದ್ದು ಬೇರೆ ಅಧ್ಯಾಯ. ಮುಂದೆ ಮರಾಠರ ಮಾಧವ ರಾವ್ ದಂಡೆತ್ತಿ ಬಂದು ಹೈದರನನ್ನು ಸೋಲಿಸಿ ರಾಣಿಯನ್ನು ಅಲ್ಲಿಂದ ಬಿಡುಗಡೆ ಮಾಡಿದರೂ ಅವಳನ್ನು ಪುಣೆಗೆ ಕರೆದು ಕೊಂಡು ಹೋಗಿ ಅಲ್ಲಿ ಸೆರೆಯಲ್ಲಿಟ್ಟ!

ಇನ್ನೊಂದು ಸಂದರ್ಭದಲ್ಲಿ ಆರ್ಕಾಟಿನ ಜಮಾದಾರ ಮೆಹದಿ ಬೇಗ್ ಯುದ್ಧದಲ್ಲಿ ಮೃತನಾದ ನಂತರ ಆತನ ಮಕ್ಕಳು ಹುಸೈನಿ ಬೇಗ್ ಮತ್ತು ಮೊರೌದ್ ಬೇಗ್ ತಮ್ಮ ತಂಗಿ ಕೆನ್ನಿ ಸಾಹಿಬಾಳ ಜೊತೆ ಮೈಸೂರಿನಲ್ಲಿ ನೆಲೆಸಲು ಬಂದರು. ಹೈದರ್ ಕೆನ್ನಿ ಸಾಹಿಬಾಳನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ. ಮದುವೆಯಾಗಿ ಅವಳಿಗೆ ಕರೀಂ ಸಾಹಿಬ್ ಎನ್ನುವ ಮಗ ಮತ್ತು ಮತ್ತೊಬ್ಬಳು ಮಗಳು ಹುಟ್ಟಿದರು. ನಂತರ ಅವಳಿಗೆ ಕಾಯಿಲೆಯಾಗಿ ತೀರಿಕೊಂಡಳು. ಆ ಮಕ್ಕಳನ್ನು ಹೈದರನಿಗೆ ಬಹಳ ಪ್ರೀತಿಯ ನರ್ತಕಿ ಝೋಹರೆ ತುಂಬಾ ಪ್ರೀತಿಯಿಂದ ಸಾಕಿದಳು.

ಆ ಮಗನ ಬಗ್ಗೆ ಹೈದರನಿಗೆ ತುಂಬಾ ಪ್ರೀತಿ ಇತ್ತು. ಅವನು ವಯಸ್ಸಿಗೆ ಬಂದ ತಕ್ಷಣ ಮದುವೆ ಮಾಡಬೇಕೆಂದು ತೀರ್ಮಾನಿಸಿದ. ಹಿಂದೆ ಸವಣೂರಿನ ಹಕೀಮ್ ಖಾನ್ ಮೇಲೆ ಯುದ್ಧ  ಹೂಡಿ ಸೋಲಿಸಿದ್ದನಲ್ಲಾ ಅವನ ಜೊತೆ ದ್ವೇಷದ ಬದಲು ಸ್ನೇಹ ನೆಂಟಸ್ತನ ಯಾಕೆ ಮಾಡಬಾರದು ಎಂದು ಅನ್ನಿಸಿ ಹಕೀಮ್ ಖಾನನಿಗೆ ಯಥೇಚ್ಛ ಉಡುಗೊರೆಗಳ ಸಹಿತ ಪತ್ರ ಕಳಿಸಿದ.

ಖಾನನು ಸಹ ಪ್ರಸ್ತಾವವನ್ನು ಒಪ್ಪಿದ. ಆ ಪ್ರಕಾರ ಖಾನನ ಮಗಳನ್ನು ಹೈದರನ ಮಗನಿಗೆ ಹೈದರನ ಮಗಳನ್ನು ಖಾನನ ಮಗನಿಗೆ ಕೊಟ್ಟು ಮದುವೆ ಮಾಡುವುದು ಎಂದು ನಿಶ್ಚಿತವಾಯಿತು. ಖಾನನನ್ನು ವಿಜೃಂಭಣೆಯಿಂದ ಶ್ರೀರಂಗಪಟ್ಟಣಕ್ಕೆ ಬರಮಾಡಿಕೊಂಡು ಹಕೀಮ್ ಖಾನನ ಮಗ ಖಿರಾಮೀನ್ ಖಾನ್ ಗೆ ಹೈದರನ ಮಗಳನ್ನು ಕೊಟ್ಟು, ಹೈದರನ ಮಗನಿಗೆ ಹಕೀಮಖಾನನ ಮಗಳನ್ನು ಕೊಟ್ಟು ಮದುವೆ ಮಾಡಿದರು.

ಹೈದರ್ ಬೇರೆ ಊರುಗಳನ್ನು ಕೊಳ್ಳೆ ಹೊಡೆದಾಗ ಸ್ವಲ್ಪ ಕಾಲ ಜನರನ್ನು ನೆಮ್ಮದಿಯಿಂದ ಬಾಳಲು ಬಿಡುತ್ತಿದ್ದ. ಸ್ವಲ್ಪ ಕಾಲದ ನಂತರ ಮದುವೆಗಳಲ್ಲಿ ಡೋಲು ಹೊಡೆಯುವ ಹೆಂಗಸರನ್ನು ಕರೆಸುತ್ತಿದ್ದ. ಸಾಮಾನ್ಯವಾಗಿ ಅವರಿಗೆ ಎಲ್ಲಾ ಮನೆಗಳಲ್ಲೂ ಪ್ರವೇಶಿಸುವ ಅವಕಾಶ ಇದ್ದುದರಿಂದ ಅವರನ್ನು ಯಾವ ಯಾವ ಮನೆಗಳಲ್ಲಿ ಸುಂದರವಾದ ಹುಡುಗಿಯರಿದ್ದಾರೆ ಏನು ಕೇಳಿಕೊಳ್ಳುತ್ತಿದ್ದ. ನಂತರ ಆಳುಗಳನ್ನು ಕಳಿಸಿ ಆ ಹುಡುಗಿಯರನ್ನು ಕರೆಸಿಕೊಳ್ಳುತ್ತಿದ್ದ. ಅವರಲ್ಲಿ ಯಾರು ಬೆಳ್ಳಗೆ ಸುಂದರವಾಗಿದ್ದು, ಉತ್ತಮ ಸೌಷ್ಠವದಿಂದ ಕೂಡಿದ್ದು, ಉದ್ದಕೂದಲು ಹೊಂದಿದ್ದು ನಾಜೂಕಾಗಿರುತ್ತಾರೋ ಅವರನ್ನು ತನ್ನ ಜನಾನಾಗೆ ಸೇರಿಸಿಕೊಳ್ಳುತ್ತಿದ್ದ.

ಅವರಿಗೆ ಸಂಬಳ ನಿಗದಿಸಿ ಹೆಂಗಸರ ಜಮೌತದಾರ್ – ಆತನ ಹಿರಿಯ ರಾಣಿಯರಲ್ಲಿ ಒಬ್ಬಳು – ಅವಳ ಸುಪರ್ದಿನಲ್ಲಿ ಇಡುತ್ತಿದ್ದ. ಉಳಿದವರನ್ನು ಅವರ ಮನೆಗೆ ಕಳಿಸಿಬಿಡಲಾಗುತ್ತಿತ್ತು ಅಥವಾ ಆಪ್ತರಲ್ಲಿ ಯಾರಿಗಾದರೂ ಹಂಚಿಬಿಡಲಾಗುತ್ತಿತ್ತು. ಹೀಗೆ ಹೈದರನ ಜನಾನಾದಲ್ಲಿ ಭಾರಿ ಸಂಖ್ಯೆಯಲ್ಲಿ ಹೆಣ್ಣುಗಳಿದ್ದರು. ಆದರೆ ಹಿರಿಯ ರಾಣಿಯರೇ ಇತರ ಎಲ್ಲಾ ಹೆಣ್ಣುಗಳ ಮೇಲ್ವಿಚಾರಣೆ ಮಾಡುತ್ತಿದ್ದರು.

ಹೈದರ್ ಯಾವ ಮಹಲಿಗೆ ಹೋಗುವುದು ನಿರ್ಧಾರವಾಗಿತ್ತೋ ಆ ರಾಣಿ ತನ್ನ ಮಹಲಿನ ಎಲ್ಲ ಹುಡುಗಿಯರನ್ನು ಒಂದೇ ಬಣ್ಣದ ಬಟ್ಟೆ ತೊಡಿಸಿ ನಿಲ್ಲುತ್ತಿದ್ದರು. ಇದರ ವಿವರವಾದ ವರ್ಣನೆಯನ್ನು ದಾಖಲಿಸಲಾಗಿದೆ. ನೇರಳೆ ಬಣ್ಣ, ಬಿಳಿ, ರೋಜಾ, ಹಸಿರು, ಚಿನ್ನದ ಬಣ್ಣ, ಗಂಧದ ಬಣ್ಣ ಇತ್ಯಾದಿ.

ಆ ಹುಡುಗಿಯರೆಲ್ಲ ಹೈದರನ ಪಾದದ ಬಳಿ ಕೂರುತ್ತಿದ್ದರು. ಆದರೆ ಹೈದರ್ ಟೀಪುವಿನ ತಾಯಿ ಫಕ್ರುನ್ನೀಸಾ ಹೊರತುಪಡಿಸಿ ಬೇರೆ ಯಾರ ಜೊತೆಯೂ ಮಾತಾಡುತ್ತಿರಲಿಲ್ಲ. ಅವರೂ ಯಾರೂ ತಾವಾಗಿ ಮಾತನಾಡುವಂತಿರಲಿಲ್ಲ. ಪ್ರತಿದಿನ ಬೆಳಿಗ್ಗೆ ಎಲ್ಲಾರೂ ಹಿರಿಯ ರಾಣಿಗೆ ಗೌರವ ಸೂಚಿಸುವುದು ಕಡ್ಡಾಯವಾಗಿತ್ತು. ಆದರೆ ಹೈದರ್ ಮತ್ತು ಫಕ್ರುನ್ನೀಸಾ ಜಗಳವನ್ನೂ ಆಡುತ್ತಿದ್ದರು.  ಬಹಳ ಹೊತ್ತು ಅವಳ ಬೈಗುಳಗಳನ್ನು ಕೇಳಿದ ಹೈದರ್ ಕೊನೆಗೆ ‘ನಿನ್ನ ನಾಲಿಗೆಗೆ ಹೆದರಿಯೇ ನಾನು ಜನಾನಾಗೆ ಬರುವುದನ್ನು ಬಿಟ್ಟಿದ್ದು’ ಎಂದು ಹೇಳಿ ಎದ್ದುಬಿಡುತ್ತಿದ್ದ. 

ಹೊರಗೆ ಬಂದು ತನ್ನ ಗೆಳೆಯರು ಗುಲಾಂ ಅಲಿ ಖಾನ್, ಬಹಾದುರ್, ಔಜುಮನ್ ಖಾನ್ ಮುಂತಾದವರ ಜೊತೆ ಖಾಸಾ ಕೋಣೆಯಲ್ಲಿ ಕೂತು ಫಕ್ರುನ್ನೀಸಾ ಬಗ್ಗೆ ದೂರು ಹೇಳಿಕೊಳ್ಳುತ್ತಿದ್ದ. ‘ಇವತ್ತು ಹೇಗಾದರೂ ಮಾಡಿ ಅವಳ ಮಾತಿಗೆ ತಕ್ಕ ಉತ್ತರ ಕೊಡಬೇಕೆಂದು ಧೈರ್ಯ ಮಾಡಿಕೊಂಡು ಹೆಡೆ ಆದರೆ ಅವಳ ನಾಲಿಗೆಯ ಮುಂದೆ  ನನ್ನ ಆಟ ನಡೆಯಲಿಲ್ಲ’ ಎಂದು ಹೇಳುತ್ತಿದ್ದ. ಆದರೆ ಅವಳ ಬಗ್ಗೆ ಹೈದರನಿಗೆ ಎಷ್ಟು ಪ್ರೀತಿ ಇತ್ತೆಂದರೆ ಅವಳಿಗೆ ಸರ್ವತಂತ್ರ ಸ್ವಾತಂತ್ರ್ಯವಿತ್ತು.

ಅರಮನೆಯ ಎಲ್ಲಾ ಜವಾಬ್ದಾರಿಯನ್ನು ಅವಳು ವಹಿಸಿಕೊಳ್ಳುತ್ತಿದ್ದಳು. ಜನಾನಾಗೆ ಹೋದ ಕೂಡಲೇ ಹೈದರ್ ಮೊಟ್ಟಮೊದಲು ಅವಳ ಹೆಸರು ಹಿಡಿದೇ ಕರೆಯುತ್ತಿದ್ದ. ಅವಳನ್ನೇ ಮೊದಲು ಮಾತಾಡಿಸುತ್ತಿದ್ದ.  ಆಗ ಅವಳು ಬಂದು ಕೋಪದಲ್ಲಿ ‘ಈಗೇನು ಬೇಕು ನನ್ನಿಂದ?’ ಎಂದು ಗದರುತ್ತಿದ್ದಳು. ಅವಳಿಗೆ ಏನಾದರೂ ಉತ್ತಮ ಉಡುಗೊರೆ ಇಲ್ಲದೆ ಹೈದರ್  ಅವಳ ಮಹಲು ಪ್ರವೇಶಿಸುತ್ತಿರಲಿಲ್ಲ.  ಅವನು ಹೆಚ್ಚಿನ ರಾತ್ರಿಗಳನ್ನು ಮಹಲಿನಿಂದ ಹೊರಗೆ ಕಳೆದರೂ ಅವನ ಇಬ್ಬರು ಮೂವರು ರಾಣಿಯರು ಅವನ ಸೇವೆಯಲ್ಲಿ ನಿರತರಾಗಿರುತ್ತಿದ್ದರು.

‍ಲೇಖಕರು Admin

June 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: