ಯಾವ ಕಾಲದ ಹಕ್ಕಿ ಇಕ್ಕಿದ ಹಿಕ್ಕೆಯೊ
-ಅಪ್ಪಗೆರೆ ಸೋಮಶೇಖರ್
ತಲೆಮಾರು ತೊಲೆಕಂಬ ದಾರಂದ
ನಿಲ ತೂಗುವಲ್ಲಿ ಮುತ್ತಜ್ಜನ ನೆರಳಾಡಿ
ಮಾಡೆಲ್ಲ ಕಪ್ಪುಕಣ್ಣೀರ ಜಾಡು
ಸೋಬಾನೆ ಮೋಡಗಳು ಗರ್ಭಧರಿಸಿ
ಹಾಡುಗಳ ಹಡೆದವ್ವ ಮುತ್ತಜ್ಜಿಯ ಕೊರಳಾಡಿ
ಕೇರಿಗಳ ಸಂತಸಕೆ ಸಾಕ್ಷಿಯಾದೊ
ಹುರಿಬಿಗಿದ ಬಿದಿರ ಸಾಲುಗಳು
ಕೈಯಂಚಿನ ಸೂರುಗಳು
ತೂಗಾಡುವ ತಮಟೆ,ನಗಾರಿ,ತಾರಸಿಗಳ
ಮಯ್ಯ ಚರ್ಮದಲ್ಲಿ
ಸಾವಿರದ ಸಿಡಿಲ ನರಬಳ್ಳಿಗಳು ಮೌನ
ನೇತಾಡೊ ನೇಕೆಯತುಂಬ ಕಿಕ್ಕಿರಿದ
ಜೀತಗಾರ ಅಜ್ಜ, ಸಾಲಗಾರ ಅಪ್ಪ, ಕೂಲಿಕಂಬಳದ ಅವ್ವ
ಅವಮಾನದ ಅಣ್ಣ-ಅಕ್ಕ; ತಮ್ಮ-ತಂಗಿಯರ
ತೊಗಲುಗೊಂಬೆಗಳು ಬಿಕ್ಕಳಿಸುತ್ತಲೇ
ನಿಟ್ಟುಸಿರ ಕಥೆ ಹೇಳುತ್ತಿವೆ

ಅಲ್ಲೆ ಕೈಯಳತೆಯಲ್ಲೆ
ಮೋಟು ಅಡ್ಡಗೋಡೆಯ ಮೇಲಿಟ್ಟ
ಸೊಡರ ಸೂಲು ಸೊಲ್ಲಾಡುತ್ತಿಲ್ಲ
ಹಸೆಕಲ್ಲಿಗಂಟಿರುವ ವಾಗೊಲೆಯ ಮೇಲಿಟ್ಟ
ಹಿಟ್ಟು ಮಡಕೆಯಲ್ಲಿ ಕೆರಬೊಳಕಿಲ್ಲ
ತನಗಿಕ್ಕಿದ ಹಿಟ್ಟತಣಿಗೆಯನೆತ್ತಿ
ತೊಲೆಕಂಬದ ಮೇಲಿಟ್ಟು
ಕೋಲೂರಿ ಕಾಲುದಾರಿಯಗುಂಟ
ಕೇರಿ ಕೇರಿಯ ಅಲೆದು
ಮೊಮ್ಮೊಗನ ಕರೆತಂದು
ತುತ್ತನಿಕ್ಕಿದ ಹಿರಿಯಜ್ಜಿ
ಅನ್ನದಾಸೆಗೆ ಬರುವ ಮೊಮ್ಮಗನ
ದಾರಿ ಕಾಯುತ್ತ ಕುಳಿತ ಕಿರಿಯಜ್ಜಿ
ಕಂದ ಉಣ್ಣಲೆಂದು ಕೊನೆವರೆಗೂ
ಒಂದು ತುತ್ತನ್ನೆ ಮಿದ್ದಿಸುತ್ತ ಕುಳಿತ ಶಬರಿ
ಒಡಹುಟ್ಟುಗಳನ್ನೆಲ್ಲ ಕೇರಿ ಬೀದಿಗಳಿಗಟ್ಟಿ
ಮಣ್ಣಗೋಡೆಯ ಮನೆಗೆ
ಸ್ವಘೋಷಿತ ವಾರಸುದಾರನಾದ ಮನೆಯಜ್ಜ
‘ಬೇಲಿಯೆ ಎದ್ದು ಹೊಲ ಮೇಯುವಾಗ’
ಉರಿಮೀಸೆಯಜ್ಜ ಹಾಮರ್ೊನಿಯಂ ನುಡಿಸುತ್ತ
ಕಂದಗಳ ಹಾಡುತ್ತ
ಧೃತರಾಷ್ಟ್ರ, ಭೀಷ್ಮ, ಧರ್ಮರಾಯರಿಗೆ
ಬೈಯುತ್ತ, ನುಡಿ ಕಲಿಸುತ್ತ ಬಿಡುವಿಲ್ಲದಾದ.
ಅವನಿಲ್ಲದೀಹೊತ್ತುಕುರುಕ್ಷೇತ್ರದ ಪಾತ್ರಗಳೆಲ್ಲ
ನಮ್ಮೂರ ಕೇರಿಯಲ್ಲಿ ಅಲೆದಾಡುತ್ತಿವೆ
ತಾವು ಕಲಿತಿದ್ದ ಕಂದ, ಮಾತು, ಸಂಭಾಷಣೆಗಳ ಮರೆತು.
ಆತ್ಮಗೌರವ, ಸ್ವಾಭಿಮಾನಗಳ ಒಂದಿನಿತು
ಬಿಟ್ಟಿರದ ಕಾಯಕದಜ್ಜ
ಮಗನ ಕಣ್ಣುಗಳಲ್ಲಿ ಬದುಕ ಕನಸು ಕಂಡ
ಸರೀಕರೆದುರು ಸಂಗಾತಿ ನುಡಿದ ನುಡಿಯ ಕಾವಿಗೆ
ರಸಬಾಳೆ ಕಾಯಿ ವಿಷದ ಹಣ್ಣಾಯಿತು
ರಾಮಮ್ಮನ ಕೆರೆಯಲ್ಲಿ ಹೆಣತೇಲಿತು.
ಹಸಿವ ಸಹವಾಸದಿಂದ
ಬಿದಿರ ಮಂಕರಿಗಳ ಹೊತ್ತ ನೆತ್ತಿಗಳು
ಒಕ್ಕಲಿಗರ ಹಬ್ಬ ಮದುವೆ ಅಂಗಳದಲ್ಲಿ ಸಾಲುಗಟ್ಟಿ
ಇಕ್ಕಿದನ್ನವ ಹೊತ್ತು ಕೆರೆ ಏರಿ ಮೇಲೆ
ಮೆರವಣಿಗೆ ಬರುವುದ ಕಂಡ
ಕರುಳ ಕುಡಿಗಳು ಕುಣಿದು
ತಮಟೆ, ನಗಾರಿ, ಡೊಳ್ಳು ವಾದ್ಯಗಳಾದೊ.
‘ಆಕಾಶ ನೊಡೋಕೆ ನೂಕಾಟವೇಕೆಂದ’
ಅಪ್ಪನ ನುಡಿ ಹೊತ್ತು
ನಾ ಹುಟ್ಟಿ ಬೆಳೆದ ಹಳೆಮನೆಯ ಒಳಹೊಕ್ಕು ನಿಂತಾಗ
ನನ್ನಜ್ಜಿಯರು ಕೂರುತ್ತಿದ್ದ ಮಣ್ಣ ಮೂಲೆಯಲ್ಲೀಗ
ಯಾವ ಕಾಲದ ಹಕ್ಕಿ ಇಕ್ಕಿದ ಹಿಕ್ಕೆಯೊ
ದಿನದಿನವು ಅರಳಿಗಿಡ ಚಿಗುರುತ್ತಿದೆ
ಅದ ನೋಡಿದಾಗಲೆಲ್ಲ
ಅರೆಗಣ್ಣ ಸಂತಚಿತ್ತದ ಬುದ್ಧ ನೆನಪಾಗುತ್ತಾನೆ






ತುಂಬಾ ಚೆನ್ನಾಗಿದೆ
ಸರ್ ತುಂಬಾ ಚೆನ್ನಾಗಿದೆ….