
ಎಂ ಬಿ ರಾಜ
1
ನನ್ನ ಚಿತ್ತ ಅತ್ತಿತ್ತ ಚಲಿಸುವದನ್ನ ಸಹಿಸದ ಆಕೆ
ಭಾರೀ ಕುತಂತ್ರಿ,ತನ್ನ ತುಟಿಗಳನ್ನ ನನ್ನ ಸುಪರ್ದಿಗೆ
ಬಿಟ್ಟುಕೊಟ್ಟು,ನನ್ನ ಇಡೀ ಲೋಕ ಅವಳನ್ನೇ
ಸುತ್ತು ಹಾಕುವಂತೆ ಮಾಡಿಬಿಡುತ್ತಾಳೆ.
2
ಹುಡುಗಿ ಅನಾಮತ್ತಾಗಿ ಒಂದು ನಗುವನ್ನ ಅವನತ್ತ ಬಿಸಾಕಿ
ನಡೆದುಬಿಟ್ಟಳು,ಪಾಪ ಈಗ ಬರೀ ಕವಿತೆಗಳನ್ನೇ ಗೀಚುತ್ತಾನೆ.
ಹುಡುಗಿಯರ ನಗು ಕವಿಯಾಗಿಸಬಲ್ಲುದು
ಹೃದಯಗೀತೆ ಆಲಿಸುವ ಕಿವಿಯಾಗಿಸಬಲ್ಲುದು.
3
ಆಕೆಯ ಕೈಹಿಡಿದು ಚಲಿಸಿದೆ.
ತನಗಾದ ಪುಳಕವನ್ನ ದಾರಿಯು
ಮೈಲುಗಲ್ಲುಗಳ ಮೇಲೆ ದಾಖಲಿಸುತ್ತಿತ್ತು
4
ಕಡಲ ಕಿನಾರೆಯಲ್ಲಿ ಕೂತು ನಿನ್ನ
ಪ್ರೇಮಪತ್ರ ಓದುತ್ತಿದ್ದೆ ಹುಡುಗಿ
ನಮಗೂ ಚೂರು ತೋರಿಸೆಂದು ಅಲೆಗಳು
ಪಾದ ಮುಟ್ಟಿ ಮುಟ್ಟಿ ಬೇಡಿಕೊಳ್ಳುತ್ತಿದ್ದವು
‘ಪ್ರೇಮವೆಂಬುದು ಪ್ರದರ್ಶನ’ದ ವಸ್ತುವಲ್ಲ
ಎಂದು ತಿಳಿಹೇಳಿ ಸಾಗಹಾಕಿದೆ.
5
ಧಿಮಾಕುಗೇಡಿ ಕವಿಯ ಮುಂದಾಳುತನದಲ್ಲಿ
ನೀವು ಚಳುವಳಿಗೆ ಇಳಿಯುವಂತಿಲ್ಲ,
ಆತ ಬಣ್ಣಬಣ್ಣದ ಇಮಾರತ್ತುಗಳನ್ನ ಮಾತ್ರ ತೋರಿಸಬಲ್ಲ.
6
ಒತ್ತಾಯದಿಂದ ದಾರ ತುಂಡರಿಸಿಕೊಂಡ ಗಾಳಿಪಟ
ಸಿಕ್ಕಸಿಕ್ಕಲ್ಲಿ ತೇಲಿ,ಕೊನೆಗೆ ಅತಂತ್ರಗೊಂಡು
ಮುಳ್ಳಿನಬೇಲಿಯಲ್ಲಿ ಬಿದ್ದು ಅಸುನೀಗಿತು.
ಪೂರ್ಣಪ್ರಮಾಣದ ಸ್ವಾತಂತ್ರ್ಯ ಪ್ರಾಮಾಣಿಕವಾಗಿ ಬದುಕಲು ಬಿಡಲ್ಲ.





0 Comments