ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹುಡುಕಿಕೊಡು‌ ದೇವಾ..!

ಅರ್ಚನಾ ಎಚ್

ಅಂಚೆ ಕಾಗದದಲ್ಲಿ ನೂರು ಹಕ್ಕಿ
ಹಾರಿ ಹೋದವು ಎದೆಯ ಹೊಕ್ಕಿ..
ಅವನಲ್ಲಿ ನಾನಿಲ್ಲಿ ಸಾವಿರದ ದೂರ
ನಡುವಲ್ಲಿ ವಿರಹ ಸುಡುವ ಸೂರ್ಯ..!

ಬರೆದೆಷ್ಟೋ ಹಾಳೆಗಳು ಹಿಂತಿರುಗಿ ಬಂದು
ಕಾಯಬೇಡೆಂದನು ಅಂಚೆಯವನು..
ಜಡಿದಿಹುದು ಬೀಗ, ವಿಳಾಸ ಬದಲು
ಸುಮ್ಮನೇತಕೆ‌ ಕಾಯ್ವೆ!? ನಲ್ಲನಿಲ್ಲ..

ಸುಟ್ಟ ಕರುಕಲು ಹಾಳೆ, ಬೂದಿ ಉಳಿದು
ಕಣ್ಣಂಚಲಿ ನೀರ ಧಾರೆ ಜಿಗಿದು…
ತಿಂಗಳುರುಳಿ ಮತ್ತೆ ಸಿಗದ ಸುಳಿವು
ಕಾಯ್ವ ಜೀವಕೆ ಕ್ಷಣವು ಯುಗದ ಇರುವು..

ಎಂತಿರುವ ಹೇಗಿರುವ? ಕಂಡಿಲ್ಲವವನ..
ತಬ್ಬಿಲ್ಲ ಭುಜಕೊರಗಿ ಲಲ್ಲೆಗರೆದಿಲ್ಲ..
ಮುತ್ತಿಲ್ಲ ಮಾತಿಲ್ಲ ತುಂಟಾಟವಿಲ್ಲ..
ಒಲವು ಭೋರ್ಗರೆವ ನದಿ,
ಕೊಳದ ನೀರಲ್ಲ..

ವಿರಹ ತೀರದ ಮೋಹ
ನಿಗಿನಿಗಿಯ ಕೆಂಡ..
ಸುಡುತಿಹುದು ದಹದಹಿಸಿ
ನಲುಗಿಹುದು ಜೀವ…

ತಿಳಿನೀಲಿ ಹಾಳೆಯಲಿ
ನೆತ್ತರಿನ ಚಿತ್ರ..
ವಿಳಾಸ ಬರೆಯಲಿ ಏನು?
ಟಪಾಲು ಕಳುಹಿಸುವುದೆಂತು?
ಎಲ್ಲಿಹುದವನ ಮನೆ
ಹುಡುಕಿಕೊಡು ದೇವಾ..!!

‍ಲೇಖಕರು Admin

28 May, 2022

2 Comments

  1. Kotresh T A M

    ತುಂಬಾ ಚೆಂದದ ಕವಿತೆ

    • Archana H

      ಧನ್ಯವಾದಗಳು ಸರ್…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading