ಹುಚ್ರಾಯಪ್ಪನ ಮೂಢನಂಬಿಕೆ

ಎಚ್ ಜಿ ಮಳಗಿ


ಇಂದು ಮಾರ್ಕೆಟ್ಟಿನಲ್ಲಿ ವಿಪರೀತ ಜನ ಸಂದಣಿ, ನೂಕು ನುಗ್ಗಲು. ಚಂದ್ರನ ಕುಳಿಗಳನ್ನೂ ಮೀರಿಸಿ ನಗುತ್ತಿರುವ ರಸ್ತೆ ಗುಂಡಿಗಳು, ಫುಟ್ಪಾತಿಗೆ ಬಂದ ಅಂಗಡಿಗಳು, ಅನಿವಾರ್ಯವಾಗಿ ರಸ್ತೆಗೆ ಬಂದ ವಾಹನಗಳು, ಜನರು, ರಸ್ತೆಯ ನಡುವೆಯೇ ಬಂದು ವ್ಯಾಪಾರ ಮಾಡುತ್ತಿರುವ ಬೀದಿ ವ್ಯಾಪಾರಿಗಳು, ಎಲ್ಲವನ್ನೂ ಸ್ಥಿತಪ್ರಜ್ಞರಂತೆ ನೋಡುತ್ತ ನಿಂತ ಹಾಗೂ ಈ ಅವ್ಯವಸ್ಥೆಗೂ ತಮಗೂ ಸಂಬಂಧವಿಲ್ಲದವರಂತೆ ದ್ವಿಚಕ್ರ ವಾಹನ ಸವಾರರಿಂದ ‘ದಂಡ’ ವಸೂಲಿಸುತ್ತಿರುವ ಸಂಚಾರಿ ಪೋಲೀಸರು, ಮೊನ್ನೆ ಚುನಾವಣೆ ಘೋಷಣೆ ಆದಾಗಿನಿಂದ ಬಂಟಿಂಗ್ಸ್, ಫೆಕ್ಸ್, ನಾಯಕಮಣಿಗಳು ನಾಚಿಕೆ ಹಾಗೂ ಹಲ್ಲು ಬಿಟ್ಟುಕೊಂಡು ವಿವಿಧ ಪೋಸುಗಳಲ್ಲಿ ಕೈಮುಗಿದು ನಿಂತ ಕಟೌಟಗಳ ಅಲಂಕಾರವೂ ಸೇರಿದೆ.
ಧಾರವಾಡದ ಈ ರಸ್ತೆ ವರ್ಷಗಳಿಂದ ನಮ್ಮ ನಾಗರೀಕ ಪ್ರಜ್ಞೆಗೆ ಸಾಕ್ಷಿ ಹಾಗೂ ಸವಾಲಾಗಿರುವುದನ್ನು ವಿಷಾದದಿಂದ ಅವಲೋಕಿಸುತ್ತಾ ರಸ್ತೆಯ ಮಧ್ಯೆ ಯಾರ ಹೆದರಿಕೆ ಇಲ್ಲದೆ ಕೊತ್ತಂಬರಿಯ ಸೊಪ್ಪನ್ನು ಮಾರುತ್ತಿದ್ದ ಅಜ್ಜಿಯ ಹತ್ತಿರ ಬಹಳ ಹೊತ್ತಿನಿಂದ ಚೌಕಾಶಿ ಮಾಡುತ್ತಿದ್ದ ಮಹಿಳೆಯನ್ನು ಕನಿಕರದಿಂದ ನೋಡಿ, ನಾನೂ ಒಂದು ಹಿಡಿ ಸೊಪ್ಪನ್ನು ಅವಳು ಹೇಳಿದ ಬೆಲೆಗೆ ಮರುಮಾತಿಲ್ಲದೇ ಖರೀದಿಸಿದೆ. ಅಷ್ಟೊತ್ತು ಚೌಕಾಶಿ ಮಾಡುತ್ತಿದ್ದ ಮಹಿಳೆ ನನ್ನನ್ನು ಕೆಕ್ಕರಿಸಿ ನೋಡಿ, ‘ನೀವು ಗಂಡಸ್ರು ಹಂಗ ಕೈ ಲೂಜ್ ಬಿಟ್ಟಿದ್ದಕ್ಕ ಈ ಕಾಯ್ಪಲ್ಯಾದೌರು ಹಿಂಗ ತಲೀಮ್ಯಾಲ ಹತ್ತಿ ಕುಂತಾರ. ಕಾಯ್ಪಲ್ಯಾ ಕಂಡಾಪಟ್ಟಿ ತುಟ್ಯಾಗ್ಯಾವ. ನಿಮಗೇನ್ ಗೊತ್ತು ಹೆಂಗಸ್ರು ಅಡಗೀ ಮಾಡೋ ಕಷ್ಟಾ!’ ಅಂತ ನನಗೊಂದು ಸರ್ಟಿಫಿಕೇಟ್ ನೀಡಿದಳು. ತರಕಾರಿ ಅಜ್ಜಿ ಮಹಿಳೆಯನ್ನು ಸಿಟ್ಟಿನಿಂದ ನೋಡಿ, ‘ಅಲ್ಲಬೇ ಯವ್ವಾ ಚಂಜೀಗಡ್ ಸೆ ಆ ಹೋಟಲ್ಲನಾವಾ ಬಿಲ್ಲಕೊಟ್ರ ಅದನ್ನ ತಿರಿಗೀ ನೋಡ್ಲಾರ್ದ ಅಂವಾ ಕೇಳ್ದಷ್ಟು ರೊಕ್ಕಾ ಕೊಟ್ಟ ಬರ್ತೀವಾ! ನಾ ಮುದಕಿ ಹರ್ಯಾಗಿಂದ ಒಂದ ಬುಟ್ಟಿ ಕೋತಂರ್ಬಿ ಮಾರ್ಲೆಕ್ಕ ಕುಂತ್ರ ನನ್ನತ್ರ ಚೌಕಾಶಿ ಮಾಡ್ತೀಯಲ್ಲಬೇ!’ ಅಂತ ತಿವಿದಳು. ಮಹಿಳೆಗೆ ಅವಮಾನ ಆದಂತಾಗಿ, ‘ಈಗೀಗ ಎಲ್ಲಾರೂ ಮಾತಾಡ್ಲಿಕ್ಕ ಕಲ್ತಾರ’ ಅಂತ ಕೆಕ್ಕರಿಸಿ ನಮ್ಮಿಬ್ಬರನ್ನೂ ನೋಡಿ ಧುಡುಧುಡು ಹೋದಳು. ನಾನೂ ತರಕಾರಿಯ ಚೀಲವು ಸ್ವಲ್ಪವೂ ಭಾರವಾಗದಿದ್ದರೂ ಜೋಬಿನ ಭಾರ ಕಮ್ಮಿಯಾದದ್ದಕ್ಕೆ ಚಿಂತಿಸುತ್ತಾ ಹೆಜ್ಜೆ ಹಾಕುತ್ತಿದ್ದೆ. ಅಷ್ಟರಲ್ಲಿ ನನ್ನ ಬೆನ್ನನ್ನು ಯಾರೋ ತಟ್ಟಿದಂತಾಗಿ ಭಯದಿಂದ ತಿರುಗಿದೆ.
ಯಾರೋ ರಾಜಕೀಯ ವ್ಯಕ್ತಿ! ಬಿಳಿ ಪಂಚೆ, ಅಷ್ಟೇ ಬಿಳಿ ಬಣ್ಣದ ಖಾದೀ ಜುಬ್ಬಾ, ಹೆಗಲ ಮೇಲೊಂದು ಚಕ್ರವಿಲ್ಲದ ಟ್ರೈಕಲರ್ ಟವಲ್, ಯಥಾಪ್ರಕಾರ ಬಗಲಲ್ಲೊಂದು ಹೊಚ್ಚಹೊಸ ಬ್ಯಾಗ್! ಸದಾ ಎಲೆಯಡಿಕೆಯ ಹೋಳಿ ಹಬ್ಬದಂತಿದ್ದ ಅವನ ಹಲ್ಲು ಬಾಯಿ ಶುದ್ಧ ಹಾಗೂ ಸ್ವಚ್ಛ!
ಅರೆರೆ ನಮ್ಮ ಅಡ್ಡಮನಿ ಹುಚ್ರಾಯಪ್ಪ!
ಇವನು ಇಷ್ಟೊಂದು ಶುಚಿರ್ಭೂತನಾಗಿದ್ದು ನೋಡಿದ ನೆನಪಿಲ್ಲ. ಹೀಗಾಗಿ ಮೊದಲು ಅವನ ಗುರ್ತು ಸಿಗಲಿಲ್ಲ. ನಾನು ಗಲಿಬಿಲಿಗೊಂಡಿದ್ದನ್ನು ನೋಡಿ ಅವನು ಮೇಕೆಯಂತೆ ‘ಕೆ ಕೆ’ ಅಂತ ಕೆನೆದು, ‘ಯಾಕ್ ಸಾ ಅಂಗೆ ಟನ್(ಇಂಗ್ಲಿಷಿನ ಸ್ಟನ್ ಇವನ ಅಪದ್ಧ ಬಾಯಲ್ಲಿ ಟನ್ ಆಗಿದೆ!) ಒಡದ್ರಿ ?’ ಅಂತ ಪ್ರಶ್ನೆ ಹಾಕಿದ. ನಾನೂ ಏನಾದರೂ ಹೇಳಬೇಕಿತ್ತಲ್ಲ, ‘ಅಲ್ಲ ಗುರ್ತು ಹತ್ಯು ಮಾರಾಯಾ! ಆದ್ರ ನಿನ್ನ ಹಸರು ಟಾವೆಲ್ ಹೋಗಿ ಟ್ರೈಕಲರ್ ಆಗ್ಯದಲ್ಲಾ ಅದ್ ನ ಯೋಚ್ ನೆ ಮಾಡ್ತಿದ್ದೆ’ ಅಂತ ಪೆದ್ದುತನವನ್ನು ಮುಚ್ಚಿಕೊಳ್ಳುತ್ತ ಹೇಳಿದೆ. ಅವನೂ ಉತ್ಸಾಹದಿಂದ, ‘ನಂಗೊತ್ತಿತ್ತು ಸಾ ನೀವ್ ಇಂಗೆ ಟನ್ ಹೊಡೀತೀರೆಂದು. ನೀವೇ ಏನ್ ಸಾ ಮಾರ್ಕೆಟ್ ಮಂದೀನೂ ಅಂಗೆ ಟನ್ ಒಡ್ದು ಮಕಾಡೆ ಬಿದ್ದೌರೆ ನನ್ನ ಈ ಒಸಾ ಗೆಟಪ್ ನೋಡಿ!’ ಅಂತಂದ. ‘ಅದಿರ್ಲಿ ಹುಚ್ಚಾ, ನಿನ್ನ ಎಲೆಯಡಿಕೆ ಎಲ್ಲ ಹೋತೋ?’ ಅಂತ ಅಚ್ಚರಿ ವ್ಯಕ್ತಪಡಿಸಿದೆ. ‘ಊಂ ಸಾ ಹಡ್ಕೆ ತಿಂದ್ರ ರೋಗ ಬತ್ತದಂತೆ ಸಾ! ನಂ ಗೋಲ್ಮೆಂಟ್ ಬಿಲ್ ತರಾಕೆ ಒಲ್ಟೀದಾರೆ. ಅದ್ಕೆ ನಾನೂ ಹಡ್ಕೆ ತಿನ್ನಾದನ್ನ ಬಿಟ್ಟೆ ಸಾ! ಆದ್ರೂನೂವೆ ಕೋಲ್ಟನಾಗೆ ನಮ್ ಜನಾ ಕೇಸ್ ಬುಕ್ ಮಾಡ್ಯಾರೆ!’ ಅಂತ ಅಂದು, ‘ಸಾ! ನಿಮ್ಗೆ ಟೈಮ್ ಐತಲ್ಲವರಾ? ಇಲ್ದೇ ಏನ್ ಬಂತು, ಎಂಗೂ ನಿಮ್ಗೆ ಕೆಲ್ಸಾ ಇಲ್ಲಾ ಬೊಗ್ಸೆ ಇಲ್ಲ, ಅಕ್ಕೌರಿಗೆ ದಂಡಪಿಂಡ ಆಗಿ ನಿಟೈರ್ ಆಗಿ ಮನೇಲೆ ಅದೀರಿ’ ಅಂತ ನನ್ನ ಬಂಡವಾಳವನ್ನು ತಾನೇ ಹೊರಗೆ ಹಾಕಿ, ‘ಯಾಕ್ ಕೇಳ್ದೆ ಅಂದ್ರೆ, ನಿಮ್ಜೊತಿ ಒಂದೀಟು ಪಾಲಿಟ್ರಿಕ್ಸ್ ಮಾತಾಡೋದೈತೆ’ ಅಂತ ಹೇಳಿ ನನ್ನ ಒಪ್ಪಿಗೆಯನ್ನೂ ಕೇಳದೇ ಕೈಹಿಡಿದು ಒಂದರ್ಥದಲ್ಲಿ ಎಳಕೊಂಡು ಹತ್ತಿರದಲ್ಲಿಯೇ ಇದ್ದ ‘ದರ್ಶನಿ’ಯೊಂದರೊಳಕ್ಕೆ ಹೋದ. ಮೊದಲು ಮಾಮೂಲು ಅದೂ ಇದೂ ಕಾಡು ಹರಟೆ. ಎಂದೂ ಇಲ್ಲದಂತೆ ಇಂದು ಇಬ್ಬರಿಗೂ ಮಸಾಲೆ ದೋಸೆಗೆ ಠೀವಿಯಿಂದ ಆರ್ಡರ್ ಮಾಡಿ,
‘ಸಾ (‘ಸಾ’ಶಿವಮೊಗ್ಗ ಕಡೆಯವರ ಸಾರ್ ಇದರ ಹ್ರಸ್ವ) ನೀವೇನೇ ಹೇಳಿ ಯಾಕೋ ಇತ್ತೀಚ್ ಗೆ ನಮ್ ಲೀಡರ್ಗಳನ್ನು ನಂಬ್ದಂಗಾಗೇತಿ!’ ಹೀಗೆ ವಿಷಯಾಂತರಿಸಿ ಚಕಿತಗೊಳಿಸುವ ಸುದ್ದಿಗಳನ್ನು ಹೇಳೊದ್ರಲ್ಲಿ ನಮ್ಮ ಅಡ್ಡಮನಿ ಹುಚ್ಚೂರಾಯಪ್ಪ ನಿಷ್ಣಾತ. ಈಗ ಯಾವ ಬಾಂಬ್ ಎಸೆಯುತ್ತಾನೆಂದು ಕುತೂಹಲವಾಗಿ, ‘ಅದ್ಯಾಕೋ ಹಂಗಂತೀ? ಏನ್ ಮಾಡಿದ್ರು ನಿಮ್ ಲೀಡರ್ಗೋಳು?’ ಅವನಿಂದ ವಿಷಯ ಬಿಡಿಸುವ ಹಳೆಯ ತಂತ್ರಾಸ್ತ್ರವನ್ನು ಪ್ರಯೋಗಿಸಿದೆ.
‘ಮತ್ತೇನ್ ಸಾ! ಇನೆಕ್ಸೆನ್ನಾಗೆ ನಾ ರೆಡಿ ಕೊಟ್ಟ ಮೆನಿಪೆಸ್ಟ್ ಬಿಟ್ಟು ಏನೇನೋ ಪೋರ್ಗಾಮ್ ಅನೌಸ್ ಮಾಡ್ತಾ ಅದಾರಲ್ಲಾ ಸಾ’ ಆಕ್ರೋಶದಿಂದ ಹೇಳಿದ.
‘ಅಲ್ಲೋ ಹುಚ್ಚಾ! ಹೆಂತೆಂತಾ ಛೊಲೋ ಪ್ರೋಗ್ರಾಮ್ ಮಾಡ್ಯಾರ. ಎಲ್ಲಾ ಭಾಗ್ಯಾನೂ ಕೊಟ್ಟಾರ. ಮತ್ತೇನ್ ಬೇಕಪಾ?’
‘ಅಂಗಲ್ಲಾ ಸಾ! ಈ ದೇವ್ರನ್ನ ನಂಬೋದು, ಸ್ವಾಮ್ಗೋಳ್ಗೆ ಅಡ್ಡ ಬೀಳಾದೂ, ಔರ ಪಾದಪೂಜಾ ಮಾಡಿ ತೀರ್ತಾ ತಗಾಳೋದು, ಔರನ್ನ ಪಲ್ಲಕ್ಕಿ ಮ್ಯಾಗ ಕುಂದರ್ಸಿ ಪೊಜೆಸೆನ್ ಮಾಡೋದು, ನಿಂಬೆ ಅಣ್ ಮಡಗೋದು, ಇವೆಲ್ಲಾ ನಂಬ್ಕೇನಾ ಮೂಡನಂಬ್ಕೇನಾ ಸಾ? ಈಗ್ ನೋಡಿದ್ರೆ ಹಡ್ಕೆನೂ ತಿನ್ಬಾರದಂತೆ! ಇಂಗೇ ಆದ್ರೆ ನೀವು ಬ್ರಾಂಬ್ರು ಪೂಜೆ ಟೇಮಲ್ಲಿ ಪೂಂಗಿ ಪಲ ತಾಂಬೂಲಂ ಸಮರ್ಪಯಾಮಿ ಅಂತ ಏಳೋ ಮಂತ್ರಾನೇ ನಿಲ್ಲಸ್ಬೇಕು ಅಲ್ಲವ್ರಾ?’ ಅಂತ ಹೇಳಿ ‘ಕೆ ಕೆ ಕೆ’ ಅಂತ ಕೆನೆದು ಮತ್ತೆ ಮಾತನ್ನ ಮುಂದುವರೆಸಿದ. ‘ಅಚ್ಚೇ ಆಕುಸ್ಗೊಳ್ಳೋದು, ಅಂಗೆ ಬರೆ ಆಕುಸ್ಕೊಳ್ಳೋದು ಎಲ್ಲಾ ಮೂಡನಂಬ್ಕೆ ಅಂತ ಏಳ್ತಾರಲ್ಲಾ ಸಾ. ಇದು ನ್ಯಾಯಾನಾ ಸಾ?’ ಅಂತ ನೋವಿನ ಮುಖ ಮಾಡಿ ಕುಂಡೆ ಮೇಲೆ ಕೈಯ್ಯಾಡಿಸಿಕೊಂಡ. ನಾನು ಆತಂಕದಿಂದ,
‘ಯಾಕೋ ಏನಾಗ್ಯದ?’ ಅಂತ ಕೇಳಿದೆ. ಅವನು ಮುಜುಗರಪಟ್ಟುಕೊಳ್ಳುತ್ತಾ,
‘ಏನಿಲ್ಲಾ ಸಾ! ತಿಕದ ಮ್ಯಾಗೆ ಒಂದೆಲ್ಡು ಕುರಾ ಎದ್ದಾವೆ, ನಮ್ಮೌವ್ವಾ ತಿಪ್ಪೆಮಟಕ್ಕೋಗಿ ಐನಾರಅಂತ್ಯಾಕ ಬರೆ ಸೆಳೆಸ್ಗೊಂಡ್ ಬಾ ಅಂದ್ಲು!’
‘ಹೌದೋ ಹುಚ್ರಾಯಾ ನೀ ಹಿಂಗ್ ಎಲಿಯಡಕಿ, ತಂಬಾಕ ತಿಂದ್ರ ಕ್ಯಾನ್ಸರ್ ಗೀನ್ಸರ್ ಬಂದೀತೋ? ಅದ್ಕ ಸರಕಾರದೌರು ಅಡಕಿ ಬ್ಯಾನ್ ಮಾಡ್ಬೇಕಂತ ಮಾಡಿರ್ಬೇಕೇಳು. ಇರ್ಲೆ ಅದಕ್ಕೂ ಈಗ ಇದಕ್ಕೂ ನಿಮ್ ಲೀಡರ್ಗೊಳ್ ಗೂ ಏನ್ ಸಂಬಂಧಾ?’ ಅಂತ ಅವನಿಗೆ ಸಮಝಾಯಿಷಿ ಹೇಳಿದರೂ, ಒಂದೊಮ್ಮೆ ಅಡಕೆಯನ್ನು ಬ್ಯಾನ್ ಮಾಡಿದರೆ ಅವನು ಹೇಳುವಂತೆ ‘ಪೂಗೀ ಫಲ ತಾಂಬೂಲಂ ಸಮರ್ಪಯಾಮಿ’ ಅನ್ನುವ ಮಂತ್ರವನ್ನೇ ಪುರೋಹಿತರು ಕೈ ಬಿಡುವ ಪ್ರಸಂಗ ಬಂದರೂ ಬಂತು ಎನ್ನುವ ಅರಿವೂ ನನಗಾಗಿ ಅವನ ಲೋಕಜ್ಞಾನಕ್ಕೆ ತಲೆದೂಗಿದೆ.
‘ಅಲ್ಲಾ ಸಾ! ನಾ ನಂ ಸಗಣೀ ಅಟ್ಟೀ ತಿಪ್ಪೇಮಟದ ಸ್ವಾಮೇರ್ ಸಿಸ್ಯಾ! ಮನ್ನೆ ಇನೆಕ್ಸೆನ್ನಾಗೆ ನಂ ಐಕ್ಳು ಇನೆಕ್ಟ್ ಆದದ್ದೇ ಔರ ಬೆಸ್ಲಿಂಗ್ ನ್ನಿಂದ. ಔರ ಪುಟ್ಟಿಗೆ ಬಿದ್, ಅರ್ಕೆ ತೀರ್ಸಿ ಬರಾನಾಂತ ಊವು ಅಣ್ಣು ಹೆಲೆಹಡ್ಕೆ ದಕ್ಷನೆ ಓದ್ದೆ ಸಾ! ಆದ್ರೆ ಸ್ವಾಮೆರು ಕಾಲಿಗ್ ಬೀಳ್ ಬ್ಯಾಡಾ ಉಚ್ರಾಯಾ ಅಂತ ಕಾಲ್ ನ ಅಗೆ ಸರಕ್ಕಂತ ಹಿಂದೆ ಎಳ್ಕೊಂಡ್ರು ಸಾ! ನಾ ಯಾಕ್ ಸೋಮೇರಾ ಅಂತ ಎದರ್ಕೊಂಡ್ ಕೇಳ್ದೆ ಸಾ! ಅದಕ್ಕೌರು ನಿಂ ಮೆಂಬರ್ಸು ಇಂಗೆ ಸ್ವಾಮೇರ್ಗೆ ಅಡ್ಡ ಬೀಳೋದು, ಪಾದಪೂಜೆ ಮಾಡೋದು ಮೂಡನಂಬ್ಕೆ ಅಂತ ಅದ್ ನ ನಿಸೇದಿಸಿ ಬಿಲ್ ಪಾಸ್ ಮಾಡ್ಬೇಕಂತ ಮಾಡ್ಯಾರ ಅಂತ ರೇಕ್ಕೊಂಡ್ ಏಳಿದ್ರು ಸಾ’
ನನಗೆ ಅವನ ಮಾತಿನ ಜಾಡು ತಿಳಿದು, ಜಾಗ್ರತನಾದೆ. ‘ಹೌದು ಹುಚ್ರಾಯಾ! ಇತ್ತಿತ್ಲಾಗ ಮಂದಿ ಕಾವೀ ಹಾಕ್ಕೊಂಡ್ ಜನ್ರನ್ನ ಮೋಸಾ ಮಾಡೂದು ಹೆಚ್ಚಾಗ್ಯದ. ಅದಕ್ಕ ಸರಕಾರದೌರು ಹಿಂತಿಂತಾ ಎಲ್ಲಾ ಚಟುವಟಿಕೇನ ಮೂಢನಂಬಿಕೆ ಅಂತ ಕ್ಲಾಸಿಫೈ ಮಾಡಿ ಬಿಲ್ ತರ್ಬೆಕಂತ ಮಾಡಿದ್ರು. ಆದ್ರ ಮಂದೀ ಪ್ರೊಟೆಸ್ಟ ಮಾಡಿದ್ರಿಂದ ಸಧ್ಯಕ್ಕ ಬಿಲ್ಲ ತರೂದನ್ನ ಮುಂದ ಹಾಕ್ಯಾರ. ಇವತ್ತಿಲ್ಲಾ ನಾಳೆ ತರ್ತಾರ ಬಿಡು! ಸರಕಾರ ಮಾಡೋ ಛೊಲೋ ಕೆಲ್ಸಕ್ಕ ನಾವ್ ಸಪೋರ್ಟ ಮಾಡ್ಬೇಕು ಹುಚ್ರಾಯಾ!’ ಅಂತ ಅಂದೆ.
‘ಊಂ ಸಾ ನನ್ ಸಪೋಲ್ಟ ಯಾವಾಗ್ಲೂನೂವೆ ಗೋಲ್ಮೆಂಟಿಗೆ ಐತ್ರೆ, ಅಂಗಂತ ಇಂಗೆ ನಂ ಪೀಲಿಂಗ ಜತಿ ಪ್ಲೇ ಮಾಡ್ಬಾರ್ದಲ್ಲವರಾ? ಅಸ್ಟಕ್ಕೂ ಏನ್ ಸಾ ಮೂಡನಂಬ್ಕೆ ಅಂದ್ರೆ ಏನ್ ಸಾ?’
‘ಅಂದ್ರ, ಸುಳ್ಳು ಹೇಳಿ ಜನ್ರನ್ನ ನಂಬ್ಸಿ ಅವರನ್ನ ಮೋಸಮಾಡೋದು. ಏನಪಾ! ಈಗೇನಾಗ್ಯದೋ?’ ನಾನು ಜ್ಞಾತಿಯಂತೆ ಹೇಳಿದೆ.
‘ಅಲ್ಲಾ ಸಾ, ಅಕ್ಕಿ ಕೊಟ್ರೆ ಅನ್ನಾ ಆಗ್ತೈತ್ರಾ, ದುಡ್ ಕಟ್ರೆ ಮದ್ಮೆ ಆಗ್ತೈತ್ರಾ, ಹಡ್ಕೆ ನಿಸೇದಾ ಮಾಡ್ಬಿಟ್ರೆ ಬೀಡಿ ಸಿಗರೇಟ್ ನ್ನಿಂದ ಬರೋ ಕ್ಯಾನ್ಸರ್ ನಿಂತೋಗ್ತೈತ್ರಾ, ಸ್ವಾಮ್ಗೋಳ್ ಪಾದಕ್ಕೆ ಬೀಳೋದ್ ನಿಲ್ಲಿಸ್ ಬಿಟ್ರೆ ಮೂಡನಂಬ್ಕೆ ಎಲ್ಲಾ ನಿಂತೋಗ್ತೈತ್ರಾ?’ ಅವನ ವಿವೇಕಾನಂದ ವಾಣಿಯಂತಹ ಮಾತುಗಳು ಕಿವಿಯನ್ನು ತೂರಿ ಹೋದರೂ ಅರ್ಥ ಮಿದುಳಿಗೆ ಇಳಿಯಲಿಲ್ಲ. ಅವನು ವೇದಾಂತಿಯಂತೆ ಮಾತನಾಡಿದ್ದನ್ನು ನಾನು ಇವತ್ತೇ ನೋಡಿದ್ದು. ಈ ಮಾತುಗಳ ಹಿಂದಿನ ಮರ್ಮ ಅರಿಯುವುದು ಆ ಕ್ಷಣದಲ್ಲಿ ನನ್ನಿಂದಾಗಲಿಲ್ಲ. ಇರಲಿ ಮುಂದೇನು ಹೇಳ್ತಾನೋ ಅಂತ ನೋಡೋಣ ಅಂತ, ‘ಮುಂದ?’ ಅನ್ನುವಂತೆ ಅವನನ್ನು ಕುತೂಹಲದಿಂದ ನೋಡಿದೆ.
‘ಓಟ್ ಕೇಳಾಕೆ ಬಂದೌರು ಜನಕ್ಕೆ ಅಲವಾರು ಬರವಸೆ ಕೊಡ್ತಾರಲ್ಲವರಾ, ಇಂದ್ರ ಚಂದ್ರ, ಸ್ವರ್ಗ ಎಲ್ಲಾನೂವೆ ನಮ್ತಾವ ತಂದು ಇಕ್ತಾರೆ ಅನ್ನೋ ಅಂಗೆ ಮಾತಾಡಿ ನಂ ತಲೇನ ನುಣ್ಣಗೆ ಬೋಳ್ಸಿ ಓಟ್ ತಗಂದ್ ಓಗ್ತಾರಲ್ಲವರಾ, ಅಂಗೆ ಮಂಗನಾಂಗೆ ನಾವೂ ಔರು ಕೊಡೋ ಬರವಸೆಗಳನ್ನ ನಂಬಿ ಇಸ್ಟ್ ವರ್ಸ ಔರ್ನ ಇನೆಕ್ಟ್ ಮಾಡಿ ಕಳುಸ್ತೀವಲ್ಲವರಾ? ಔರಿಂದ ನಂ ಜನಕ್ಕೆ ಒಳ್ಳೆದ ಆಗೈತ್ರಾ?’
‘ಹೌದು? ಈಗೇನಾತ?’ ಸುತ್ತ ಮುತ್ತಲಿನ ಅವ್ಯವಸ್ಥೆ ಕಣ್ಮುಂದೆ ಸುಳಿದಾಡಿದಂತಾಗಿ, ನಾನು ಕುತೂಹಲದಿಂದ ಕೇಳಿದೆ.
‘ಸೇಸಣ್ಣ ಸಾ! ಇವ್ರು ನಮಗೆ ಒಳ್ಳೇದ ಮಾಡ್ತಾರೆ ಅನ್ನೋ ನಂಬ್ಕೇನಲ್ಲೇ ದೇಸದ ಜನಾ ಓಟ್ ಆಕ್ತಾರಲ್ಲಾ, ಅಂಗಾರೆ ಇದು ನಂಬ್ಕೇನಾ ಅತ್ವಾ ಮೂಡನಂಬ್ಕೇನಾ!? ನಿರ್ವಿಕಾರವಾಗಿ, ನಿರ್ಭವುಕನಾಗಿ ವೇದಾಂತಿಯಂತೆ ಕೇಳಿದ.
ಅವನ ಈ ಬಾಣದ ಬಿರುಸಿಗೆ ನನ್ನಲ್ಲಿ ಉತ್ತರವಿಲ್ಲ. ನನಗೆ ದಂಗು ಬಡಿದಂತಾಗಿ ಕಣ್ಣಿಗೆ ಚಕ್ಕರ್ ಬಂದಂತಾಗಿ ಬಾಯೊಣಗಿ ಸುಮ್ಮನೇ ಕೂತೆ. ನಾನು ಸುಮ್ಮನೇ ಕೂತದ್ದನ್ನು ನೋಡಿದ ಹುಚ್ರಾಯಾ ಹಾಗೇಯೇ ಜೋಗಯ್ಯನಂತೆ ನಡೆದುಬಿಟ್ಟ. ಅವನ ಮಾತು ನನ್ನಲ್ಲಿಯೂ ತುಮುಲದ ಸುನಾಮಿಯನ್ನೆಬ್ಬಿಸಿತು. ದರ್ಶನಿಯಿಂದ ಹೊರಗೆ ಬಂದು ಮಾರ್ಕೆಟ್ಟನ್ನು ಮತ್ತೊಮ್ಮೆ ಹೊಸದಾಗಿ ಎಂಬಂತೆ ನೋಡಿದೆ. ಅಲ್ಲಿಯವರೆಗೂ ಅಸ್ಪಷ್ಟವಾಗಿ ಕಂಡಿದ್ದ ವರ್ಷಗಟ್ಟಲೇ ರಿಪೇರಿ ಕಾಣದ ರಸ್ತೆಗಳು, ಬೀದಿಗೇ ಬಂದ ಮಾರ್ಕೆಟ್ಟು, ಡಕೋಟಾ ಬಸ್ಸುಗಳು, ಕಣ್ಣು ಮುಚ್ಚಾಲೆಯಾಡುವ ಕರೆಂಟು, ಎಲ್ಲೆಂದಲ್ಲಿ ರಾಶಿಯಾಗಿ ಬಿದ್ದ ಕಸ, ಅದಕ್ಕಾಗಿ ಹೊಡೆದಾಡುತ್ತಿರುವ ಹಂದಿನಾಯಿಗಳು, ಕಟೌಟಗಳಲ್ಲಿ ಅಸಹ್ಯವಾಗಿ ನಗುತ್ತಿರುವ ನಾಯಕಮಣಿಗಳು ಮುಖಕ್ಕೇ ಬಂದು ಗಹಗಹಿಸಿದಂತಾಗಿ ಬೆಚ್ಚಿದೆ. ಈ ಅವ್ಯವಸ್ಥೆಯಲ್ಲಿ ನನ್ನ ಮುಖವೂ ಕಂಡಂತಾಗಿ ಗಾಬರಿಯಾಯಿತು.
ಅವನು ಕೊನೆಯಲ್ಲಿ ಕೇಳಿದ ಪ್ರಶ್ನೆ ಮತ್ತೊಮ್ಮೆ ಕಿವಿಯಲ್ಲಿ ರಿಂಗಣಿಸಿ ಮೈ ಜುಂ ಎಂದಿತು.
‘ಸೇಸಣ್ಣ ಸಾ! ಅಂಗಾರೆ ಇದು ನಂಬ್ಕೇನಾ ಅತ್ವಾ ಮೂಡನಂಬ್ಕೇನಾ!?’
ಯಥಾಪ್ರಕಾರ ನಾನು ನಿರುತ್ತರ!
 

‍ಲೇಖಕರು avadhi

April 22, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: