ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೊಂದು ಕವಿತೆಯಂತಹಾ ಕಥೆ

ನಿಷ್ಕಲ್ಮಶ

ಸಹನಾ ಪುಂಡಿಕಾಯಿ

1

ಅಲ್ಲೊಂದು ಮರ. ಮರದ ಅನತಿ ದೂರದಲ್ಲೊಂದು ಮನೆ. ಮನೆಯ ಹೊರಗೆ ಬಿರು ಬಿಸಿಲು. ಬಿಸಿಲಲ್ಲಿ ನಿತ್ಯವೂ ಮನೆಯಾತನ ಕೆಲಸಗಳು ಸಾಗುತ್ತಿತ್ತು. ನೆತ್ತಿಯ ಮೇಲೆ ಸುಡುವ ಸೂರ್ಯನ ತಾಪ,ತನ್ನ ಮುಂದೆ ನಿಗಿ ನಿಗಿ ಕೆಂಡ. ಹಾಗಂತ ಸುಮ್ಮನೆ ಕೂರಲಾದೀತೇ? ಹೊಟ್ಟೆಪಾಡು. ಮಡದಿ, ಮಕ್ಕಳನ್ನೆಲ್ಲಾ ಸಾಕಬೇಕು, ಬದುಕ ಸಾಗಿಸಬೇಕು.ನಿತ್ಯದ ಕಾಯಕ.

ಆ ‘ಮರ’ ಹಾಗೇ ನಿಧಾನವಾಗಿ ಬೆಳೆಯುತ್ತಾ, ತನ್ನ ರೆಂಬೆಕೊಂಬೆಗಳನ್ನೆಲ್ಲಾ ಹಸಿರು ಹೊದಿಕೆಯಿಂದ ಮುಚ್ಚಿಕೊಳ್ಳುತ್ತಾ, ವಿಶಾಲವಾಗಿ ಮನೆಯಾತನ ಶಿರವೂ ಸುಡದಂತೆ, ಮನೆಯೂ ತಂಪಿರುವಂತೆ ಮೈ ಚಾಚಿಕೊಂಡಿತು.ಆ ಮರಕ್ಕಾದರೋ ಈಗ ಆತನಿಗೆ ನೆರಳು ನೀಡಿದ ಸಂತೋಷ, ಆತನಿಗೂ ತುಂಬಾ ಖುಶಿ.ಬಂದವರ, ಹೋದವರ ಬಳಿಯಲ್ಲೆಲ್ಲಾ ಮರದ ಕುರಿತಾದ ಹೊಗಳಿಕೆಯ ಮಾತು,” ಈ ಮರದ ನೆರಳಿನಿಂದಾಗಿ ಮನೆಯೊಳಗೂ ತಂಪು, ನನಗೂ ಕೆಲಸ ಮಾಡಲು ಹಿತವಾಗಿದೆ, ಆಯಾಸವಾಗುವುದಿಲ್ಲ”.

ಆರಂಭದಲ್ಲಿ ಹಿತವೆನಿಸಿದ ಮರದ ನೆರಳು, ಇತ್ತೀಚೆಗೆ ಆತನಿಗೇಕೋ ಅಹಿತವೆನಿಸಲಾರಂಭಿಸಿತು. ಮರದ ಉದುರಿದ ಎಲೆಗಳೆಲ್ಲಾ ಕಸವೆಂದೆನಿಸಿ ಕಸಿವಿಸಿಗೊಳ್ಳಲಾರಂಭಿಸಿತು.ಬಿಸಿಲಲ್ಲಿಯೇ ದುಡಿಯುತ್ತಿದ್ದವನಿಗೆ ಸದಾಕಾಲ ನೆರಳಲ್ಲಿಯೇ ಇರುವುದು ಮಸುಕು ಮಸುಕಾದಂತೆ ಅನಿಸುತ್ತಿತ್ತು. ಸರಿ, ಮರದ ಒಂದೊಂದೇ ಗೆಲ್ಲುಗಳನ್ನು ಕಡಿಯಲಾರಂಭಿಸಿದ.ಮರ ಮತ್ತೆ ಚಿಗುರಿತು, ಮತ್ತೆ ಕಡಿದ, ಮತ್ತೆ ಚಿಗುರಿತು. ಮತ್ತೆ ಮತ್ತೆ ಚಿಗುರುವ ಮರಕ್ಕೆ ನೆರಳನ್ನೀಯುವುದಷ್ಟೇ ಗೊತ್ತು. ಕೊನೆಗೊಂದು ದಿನ ಆತ ನಿರ್ಧರಿಸಿಯೇ ಬಿಟ್ಟ. ಕೊಡಲಿಯನ್ನು ಮಸೆದು, ಅದನ್ನು ಝಳಪಿಸುತ್ತಾ ಬಲವಾದ ಹೊಡೆತವನ್ನು ಮರದ ಬುಡಕ್ಕೆ ಹಾಕಿಯೇ ಬಿಟ್ಟ. ಆ ಮರವಾದರೋ ನೋವಿನಿಂದಲೇ ನೆಲಕ್ಕೆ ಉರುಳಿಯೇ ಹೋಯಿತು. ತುಂಡಾಗಿ ಉರುಳಿದ ಮರವು ಒಂದೆರಡು ದಿನಗಳ ನಂತರ ಅದರ ಹಸಿರು ಎಲೆಗಳೆಲ್ಲಾ ಒಣಗಿ,ಉದುರಿ ಅವರಿವರ ಕಾಲಡಿಯಲ್ಲಿ ಸಿಲುಕಿ ಪುಡಿಪುಡಿಯಾಗಿ, ಮಣ್ಣಲ್ಲಿ ಮಣ್ಣಾಗಿ ಹೋದವು.

ಮರೆಯಲಾಗದ ಮರದ ಕಥೆ. ಆ ಮರದೊಳಗೊಂದು ಮನಸಿನ ವ್ಯಥೆ, ಮನಸಿಗೊಂದು ಮನಸು ಬೇಡವಾದ ಕಥೆ.

ಒಣಗಿದೆ ಮರವೀಗ…………

ಕೆಲದಿನಗಳ ನಂತರ……….

ಮನೆಯಾತನ ಮಡದಿ ದಡಬಡನೆ ಬಂದು, ಲಟಲಟನೆ ಒಣಗಿದ ಗೆಲ್ಲುಗಳನ್ನು ಮುರಿದು, ಆ ಗೆಲ್ಲುಗಳನ್ನು ತನ್ನ ಮನೆಯ ಒಲೆಯೊಳಗೆ ಧಗಧಗನೆ ಉರಿಸಿ ಸಿಹಿಸಿಹಿಯಾದ ಪಾಯಸವನ್ನು ಕೊತ ಕೊತನೆ ಕುದಿಸಿ,ತನ್ನ ಮಕ್ಕಳಿಗೆ ತಲೆ ನೇವರಿಸಿ ಉಣಬಡಿಸಿದಳು. ಆತನಾದರೋ, ಮತ್ತದೇ ಬಿರುಬಿಸಿಲಿನಲ್ಲಿ ಕೆಲಸದಲ್ಲಿ ತಲ್ಲೀನ. ಹಣೆಯಲ್ಲಿ ಬೆವರ ಹನಿಗಳ ಮುತ್ತುಗಳದ್ದೇ ಅಲಂಕಾರ.

ಅಲ್ಲೊಂದು………ಅನತಿ ದೂರದಲ್ಲಿ ಅದೇ ಮರದ ಬೀಜವೊಂದು ಮೊಳಕೆಯೊಡೆದು ಮತ್ತೆ ನೆರಳ ನೀಡುವೆ ಎಂಬಂತೆ ನಸು ನಗುತ್ತಿತ್ತು.

ಬೇಡವಾದ ಮನಸಿಗೆ, ಬೇಡವೆಂದ ಮನದೊಳಗೆ ನೆರಳಾಗುವ ಬಯಕೆಯ ಕಥೆ…

‍ಲೇಖಕರು G

25 September, 2015

3 Comments

  1. Paramesh

    Chennagide Sir,

  2. Paramesh

    Sorry, Chennagide Sahana avre….

  3. Venkatesha Bhat

    “They tried to bury us, but they didn’t know we are seeds…” idu ittheechege naanu nOdida yavudo WhatsApp Profile Status. ee kathe haagide…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading