ಪಾವನಾ ಭೂಮಿ – ಮಂಜುಳಾ ಹುಲಿಕುಂಟೆ


ಪಾವನ:
ಕನಸುಗಳೇ ಹಾಗೇ
ಎಷ್ಟೋ ಸಲ ಕೈತಪ್ಪಿ ಬಿಡುತ್ವೆ
ಕಾರಣಗಳು ಮಾತ್ರ ಕ್ಷುಲ್ಲಕ ….
ನೋವು ಅಗಾಧ …. ಆರದ್ದು….!
************
ಮಂಜುಳಾ:
ಹೂಂ ಕನಸುಗಳೇ ಹೀಗೆ ರೆಕ್ಕೆಪುಕ್ಕ ಸುಟ್ಟಿಕೊಂಡ ಹಕ್ಕಿಗಳ ಹಾಗೆ ಹಾರಲಾಗದೆ ಕೂರಲಾರದೆ ತತ್ತರಿಸುತ್ತವೆ…
ಥೇಟ್ ನನ್ನ -ನಿನ್ನ ಹಾಗೇ..
************
ಪಾವನ:
ಒಮ್ಮೊಮ್ಮೆ ನೆಲದಲ್ಲೇ ಹರಿದಾಡುತ್ತಾ
ಇನ್ನೊಮ್ಮೆ ಮುಗಿಲಿಗೆ ಹಾರುತ್ತಾ ಹಾಡುತ್ತಾ… ತೇಲೋ ಕನಸುಗಳು
ಎಷ್ಟೋ ಬಾರಿ ನೀರಿನಾಳದಾಚೆ
ನೂಕಿ ನನ್ನ ನಿನ್ನ ಪರೀಕ್ಷಿಸಿ ಖುಷಿಪಡುತ್ತವೆ….
ಪಾತಾಳಕ್ಕೆ ಇಳಿದು ಉಸಿರುಗಟ್ಟಿಸುತ್ತವೆ…!!!
***************
ಮಂಜುಳಾ:
ಹೂಂ ನೋಡು ಕನಸುಗಳೂ ಉಸಿರು ಕಟ್ಟಿಸುತ್ತವೆ….
ಕಟ್ಟಿಕೊಂಡ ಕನಸುಗಳು ಎದೆಯೊಳಗೆ ಸುಡುವಾಗ ಹಾರಲಾಗದ ನಾನು ಕಳೆದ ಕನಸಿಗೆ ಹಪಹಪಿಸುವಂತೆ..ಉಳಿದವೂ ಉಸಿರುಕಟ್ಟಿಸುತ್ತವ
ಎಂದೂ ಒಮ್ಮೆ ಇಲ್ಲ-ಸಲ್ಲದ ನೆಪಕ್ಕಾದರೂ ಅವು ದಕ್ಕಿಬಿಡಲೆಂದು ಕಾಯ್ದು ಕೂರುವ ನನ್ನೊಳಗೂ ನಿನ್ನೊಳಗೂ ಕನಸುಗಳು ಮತ್ತೆ ಮತ್ತೆ ಹುಟ್ಟು ಪಡೆಯುತ್ತವೆ..
ಹುಟ್ಟು ಪಡಿಯುತ್ತಲೇ ಉಸಿರ ಕಟ್ಟಿಸುತ್ತವೆ..
******************
ಪಾವನ:
ಕಟ್ಟಿದ ಕನಸುಗಳೆಲ್ಲಾ ಉಸಿರು ಗಟ್ಟಲು
ನಾನು ನೀನು ಮತ್ತೊಂದ ಕನಸುತ್ತೇವೆ
ಅದಕ್ಕೆ ರೆಕ್ಕೆ ಕಟ್ಟಿ ಉಸಿರು ನೀಡಿ
ಹಾರಲು ಬಿಡುತ್ತೇವೆ….
ದಕ್ಕದ ಸಿಕ್ಕದ ಕನಸುಗಳಿಗೆ
ಕಾದು ಕೂರುತ್ತೇವೆ…
ಅಸುನೀಗಿದ ಅವುಗಳಿಗೆ
ಎದೆನೋವ ಹಾಡಾಗಿಸಿ
ಹಾಡುತ್ತಾಡುತ್ತಲೇ
ಮತ್ತೆ ಶುರು …
ಕನಸಿನ ಹುಟ್ಟು ಸಾವು…
***************
ಮಂಜುಳಾ:
ಹುಟ್ಟು – ಸಾವು ಇದಿಷ್ಟರದೇ ಲೆಕ್ಕ ಮಧ್ಯೆ ಕಟ್ಟಿಕೊಂಡ ಕನಸು ಕಮರುತ್ತವೆ ರಾತ್ರಿ ಸತ್ತ ಕನಸುಗಳಿಗೆ ಹಗಲಿಷ್ಟು ಮಣ್ಣುಮಾಡಿ ಮತ್ತೆ ಹೊಸ ಕನಸೊಂದಕ್ಕೆ ತುಡಿಯುತ್ತೆವೆ ಸತ್ತವು ಹುಟ್ಟು ಪಡೆದವುಗಳ ಲೆಕ್ಕ ಬೇಡ ಕಟ್ಟು ಹೊಸಕನಸೊಂದಕ್ಕೆ ಉಸಿರ ಊದಿ ಜೀವ ನೀಡಿ ಬಿಡುವ ಬದುಕಿಗೆ ಬೇಕಾದಷ್ಟು ಒಲವಿದೆ…
ಎಷ್ಟೇ ಸತ್ತರು ಮತ್ತೆ ಬದುಕಿಸುತ್ತದೆ
*******************
ಪಾವನ:
ಹಗಲು ರಾತ್ರಿ ಗಳ ಕನಸುಗಳು
ನೋಡು ಆಗಸದ ತಾರೆಗಳಂತೆ
ಲೆಕ್ಕ ಇಡಲು ನಾನು ನೀನು ಎಲ್ಲಿಯವರು..??
ಸತ್ತ ಕನಸುಗಳು ಅಷ್ಟೇ ಗೋರಿಯೊಳಗೆ ತೂರಿ ಮುಚ್ಚುವುದಷ್ಟೇ..
ಆದಷ್ಟು ಸತ್ತರೂ ಅತ್ತರೂ
ಮತ್ತೆ ಉಸಿರು ಕೊಡಲು
ನಾನು ನೀನು ಪ್ರತಿಸಲವೂ
ಒಲವ ಕಾದಿಟ್ಟು ಕೂರುತ್ತೇವೆ
ಹಾದಿಗುಂಟ ಬಯಲಿನಾಚೆ…
ನೋಡಲ್ಲಿ…
ಮೇಲೆ ಉಸಿರಿಟ್ಟ ಕನಸುಗಳು
ಕೆಳಗೆ ಮಣ್ಮುಚ್ಚಿದ
ಚಿಗುರದ ಕಮರದ
ಕನಸುಗಳು…





wonderful !
Nice…