ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಯ್ತಾ ಇರಿ- ಬರುತ್ತೆ ಫೇಸ್ ಬುಕ್ ಬಗ್ಗೇನೇ ಸಿನಿಮಾ..

ಲಾಸ್ಟ್ ಬಸ್ ಜರ್ನಿ

ಕನ್ನಡ ಸಿನಿಮಾ ಜಗತ್ತು ಎಲ್ಲಾ ಏಳು-ಬೀಳುಗಳ ಜೊತೆಗೆ ಆಧುನಿಕ ಕಾಲದ ಓಟಕ್ಕೆ ತಕ್ಕ ಹಾಗೆ ತನ್ನ ಮಹತ್ವವನ್ನು ಹೆಚ್ಚಿಸಿಕೊಳ್ಳುತ್ತಿದೆ. ಯುವ ಜನಾಂಗದ ಬಾಗೀದಾರಿಕೆ ಕನ್ನಡ ಸಿನಿಮಾಕ್ಕೆ ತಂದುಕೊಡುತ್ತಿರುವ ಯಶಸ್ಸು ದೊಡ್ಡದು. ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಕುಟುಂಬದ ಕುಡಿಗಳು ನಿರ್ಮಿಸಿರುವ
’ಲಾಸ್ಟ್ ಬಸ್’ ಸಿನಿಮಾ ಮೇಲಿನ ಮಾತುಗಳಿಗೆ ಕಾರಣ.

ಅರವಿಂದ್ ನಿರ್ದೇಶನದ ’ಲಾಸ್ಟ್ ಬಸ್’ ಸಿನಿಮಾದ ಹಾಡೊಂದು ಕಳೆದ ಭಾನುವಾರ ’ಬಿಬಿಸಿ ಏಷಿಯನ್ ನೆಟ್‌ವರ್ಕ್ ರೇಡಿಯೋ ಕೇಂದ್ರ’ದಿಂದ ಪ್ರಸಾರವಾಗಿದೆ. ಕವಿ, ನಾಟಕಕಾರು, ವಿಮರ್ಶಕ, ಪ್ರಾಧ್ಯಾಪಕ ಡಾ.ಕೆ.ವೈ.ನಾರಾಯಣಸ್ವಾಮಿ ಅವರು ಬರೆದಿರುವ ಈ ’ದೂರಿ.. ದೂರಿ..’ ಜೋಗುಳದ ಹಾಡು ಈ ಜಾಗತಿಕ ರೇಡಿಯೋದಲ್ಲಿ ಪ್ರಸಾರವಾದ ಮೊದಲ ಕನ್ನಡ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ನೆಪದಲ್ಲಿ ಕೆ.ವೈ.ಎನ್ ಜೊತೆ ಸ್ವಲ್ಪ ಹೊತ್ತು:
ಕೋಲಾರದ ಮಾಲೂರಿನ ಕುಪ್ಪೂರು ಗ್ರಾಮದ ಕೆ.ವೈ.ನಾರಾಯಣಸ್ವಾಮಿ ಗಡಿಭಾಗದ ಯುವಜನರಿಗಿರುವಂತೆ ಸಹಜವಾಗಿ ಸಿನಿಮಾ ಗೀಳು ಹತ್ತಿಸಿಕೊಂಡವರು. ತೆಲುಗು- ಕನ್ನಡ ಮಿಶ್ರಿತ ಸಿನಿಮಾ ಖಾಯಸ್ಸು ಅವರನ್ನು ಇಲ್ಲಿವರೆಗೆ ಕರೆದುಕೊಂಡು ಬಂದಿದೆ. ಸಿನಿಮಾ ಜೊತೆಗೆ ವಿಧ್ಯಾರ್ಥಿ ದೆಸೆಯಲ್ಲಿಯೇ ಕವಿತೆಯ ಗೀಳು ಹತ್ತಿಸಿಕೊಂಡು ಹಲವು ಬಹುಮಾನಗಳನ್ನು ಪಡೆದ ಕೆ.ವೈ.ಎನ್. ಅಧ್ಯಾಪನಕ್ಕೆ ಬಂದಮೇಲೆ ಸಿನಿಮಾ ಕುರಿತ ಆಸೆಯನ್ನು ಬಿಡಲಿಲ್ಲ. ಕ್ರೈಸ್ಟ್ ಕಾಲೇಜಿನಲ್ಲಿ ಪಾಠ ಮಾಡುವಾಗ ಸಿಕ್ಕ ವಿದ್ಯಾರ್ಥಿಗಳೇ ತಮ್ಮ ಮುಂದಿನ ಸಿನಿಮಾ ಕನಸಿಗೆ ಒತ್ತಾಸೆಯಾಗುತ್ತಾರೆ ಎಂದು ಅವರು ಊಹಿಸಿರಲಿಲ್ಲ.

’ಆ ದಿನಗಳು’ ಖ್ಯಾತಿಯ ಚೈತನ್ಯ ಹಾಗೆ ಸಿಕ್ಕವರು. ಅವರಿಗಾಗಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದ ’ಸೂರ್ಯಕಾಂತಿ’ ಸಿನಿಮಾ ಮೇಷ್ಟ್ರ ಸಿನಿಮಾ ಖಾಯಸ್ಸಿಗೆ ಇಂಬು ಕೊಟ್ಟಿತು. ನಂತರ ಇದೇ ಅರವಿಂದ್ ಅವರ ’ಜುಗಾರಿ’ ಸಿನಿಮಾಕ್ಕಾಗಿ ಬರೆದ ’ನಿನ್ನ ನಾನು ನೋಡೋವರೆಗೂ..’ ಹಾಡು ಹೆಚ್ಚು ಚಿತ್ರಪ್ರಿಯರನ್ನು ಸೆಳೆಯಿತು. ಶಿವರುದ್ರಯ್ಯನವರ ’ಭಗವತಿ ಕಾಡು’ ಸಿನಿಮಾಕ್ಕೂ ಕೆ.ವೈ.ಎನ್ ಹಾಡು ಬರೆದರು. ಆನಂತರ ಎಂ.ರವಿ ನಿರ್ದೇಶಿಸಿದ ’ಕಳವು’ ಇವರದ್ದೇ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಒಳಗೊಂಡಿದ್ದು ಪ್ರಶಸ್ತಿಯನ್ನೂ ಗಿಟ್ಟಿಸಿತು. ಇದೀಗ ಕನ್ನಡದ ಮಹತ್ವಾಕಾಂಕ್ಷೆಯ ’ಲಾಸ್ಟ್ ಬಸ್’ ಅವರಿಗೆ ದೊಡ್ಡ ಕೀರ್ತಿಯನ್ನು ತಂದುಕೊಟ್ಟಿದೆ.

ತಮ್ಮ ವಿದ್ಯಾರ್ಥಿಯಾದ ಅರವಿಂದ್ ಮೇಲೆ ಮೇಷ್ಟ್ರುಗಿರುವ ವಿಶ್ವಾಸ, ಪ್ರೀತಿ ’ದೂರಿ ದೂರಿ’ ಹಾಡು ಬರೆಯಲು ಪ್ರೇರೇಪಿಸಿದೆ. ಹಾಗೂ ಇದರೊಟ್ಟಿಗೆ ಸಿನಿಮಾದಲ್ಲಿ ಅವರ ಮೂರು ಹಾಡುಗಳಿವೆ. ’ಲಾಸ್ಟ್ ಬಸ್’ ಬಗ್ಗೆ ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿರುವ ಮೇಷ್ಟ್ರು ಅರವಿಂದರಿಗಾಗಿ ’ಪೇಸ್‌ಬುಕ್’ ಎಂಬ ಸಿನಿಮಾ ಕಥೆ ಸಿದ್ಧಮಾಡಿದ್ದಾರೆ. ಲಾಸ್ಟ್ ಬಸ್ ನಂತರ ಆ ಸಿನಿಮಾ ಸೆಟ್ಟೇರಲಿದೆ. ಅಂದಹಾಗೆ ’ಲಾಸ್ಟ್ ಬಸ್’ ಎಂದು ಸಿನಿಮಾಗೆ ಹೆಸರಿಟ್ಟಿದ್ದು ಕೆ.ವೈ.ಎನ್ ಅವರೇ.

ಇದೇ ತಂಡ ಕೆ.ವೈ.ಎನ್. ಅವರ ’ಕೈಲ್ಯಾಂಪು’ ಎಂಬ ಪ್ರೇಮಗೀತೆಗಳ ಆಲ್ಬಂ ಮಾಡಿದ್ದನ್ನು ಇಲ್ಲಿ ನೆನಯಬಹುದು.

ಕೆಂಪೇಗೌಡರ ಜೀವನ ಕುರಿತ ಕಥೆಯೊಂದನ್ನು ಟಿ.ಎಸ್.ನಾಗಾಭರಣರಿಗಾಗಿ ಸಿದ್ಧಪಡಿಸಿರುವ ಕೆ.ವೈ.ಎನ್. ನಾಗತಿಹಳ್ಳಿ ಚಂದ್ರಶೇಖರ್ ಅವರಿಗಾಗಿಯೂ ಕಥೆಯೊಂದನ್ನು ಬರೆಯುತ್ತಿದ್ದಾರೆ.

ಭರತ- ಬಾಹುಬಲಿಯ ಕಥೆಯೊಂದನ್ನು ಸಿನಿಮಾ ಮಾಡುವ ಮಹತ್ವಾಕಾಂಕ್ಷೆ ಹೊಂದಿರುವ ಕೆ.ವೈ.ಎನ್. ಬಾರತೀಯ ಮನಸ್ಸುಗಳಲ್ಲಿ ಕಾರುಣ್ಯದ ಬೀಜ ಬಿತ್ತಿದ ಬಾಹುಬಲಿ- ಭರತರ ಪಾತ್ರಗಳು ವರ್ತಮಾನದ ಪಾತ್ರಗಳೊಂದಿಗೆ ಬೆರೆತು ಉಂಟಾಗಬಹುದಾದ ಸೋಜಿಗವನ್ನು ಕಾಣುವ ಕಾತರದಲ್ಲಿದ್ದಾರೆ ಅವರು. ಈ ಸಿನಿಮಾ ತೆರೆಗೆ ಬಂದರೆ, ತೆಲುಗಿನಲ್ಲಿ ರಾಜಮೌಳಿ ಸೃಷ್ಟಿಸಿದ ಅದ್ಭುತವನ್ನು ನಾವೂ ಸೃಷ್ಟಿಸಬಹುದು ಅನ್ನುವುದರಲ್ಲಿ ಎರಡು ಮಾತಿಲ್ಲ.

ಕೆ.ವೈ.ಎನ್ ಮೇಷ್ಟ್ರ ಸಿನಿಮಾ ಯಾನ ಹೀಗೇ ಮುಂದುವರಿಯಲಿ, ಅವರಿಂದ ಕನ್ನಡ ಸಿನಿಮಾ ಜಗತ್ತಿಗೆ ಆ ಮೂಲಕ ಕನ್ನಡ ಸಂಸ್ಕೃತಿಗೆ ದಕ್ಕಿರುವ ಜಾಗತಿಕ ಮನ್ನಣೆಗಾಗಿ ಅವರಿಗೆ ನಮ್ಮ ಅನಂತ ನಮನಗಳು.

‍ಲೇಖಕರು Admin

11 January, 2016

1 Comment

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading