ಹೀಗೆ ಎಳ್ಳೂ ಇದೆ ಬೆಲ್ಲವೂ ಇದೆ ನನ್ನ ನೆನಪಲ್ಲಿ!

ಗೀತಾ ಹೆಗ್ಡೆ, ಕಲ್ಮನೆ 

ಹೌದು ಪ್ರತೀ ಹಬ್ಬವೂ ಒಂದಲ್ಲಾ ಒಂದು ನೆನಪುಗಳನ್ನು ಹೊತ್ತು ತರುತ್ತವೆ.  ಅದರಲ್ಲೂ ಬಾಲ್ಯದ ನೆನಪುಗಳು ಇದ್ದರಂತೂ ಆ ಹುಡುಗಾಟಿಕೆ ವಯಸ್ಸಿನಲ್ಲಿ ನಾವು ನಡೆದುಕೊಂಡ ರೀತಿ,ಮಾಡಿದ ಕಿತಾಪತಿ, ಹಠಮಾರಿತನ, ಸುಳ್ಳು ಹೇಳಿ ಜಾರಿಕೊಂಡಿದ್ದು, ಒಡಹುಟ್ಟಿದವರ ಜೊತೆ ಜುಟ್ಟಿಡಿದು ಜಗಳಾಡಿ ರಾಮಾರಂಪ ಮಾಡಿದ್ದು, ಹೆತ್ತವರಿಂದ ಬೈಯ್ಸಿಕೊಂಡು ಹೊಡ್ತಾ ತಿಂದಿದ್ದು ಒಂದಾ ಎರಡಾ!  ನೆನಪಾದಾಗಲೆಲ್ಲ ನಗು, ನಾಚಿಕೆ, ನನ್ನ ಮೇಲೇ ಕೋಪ, ಛೆ! ನಾನು ಹೀಗೆಲ್ಲಾ ವರ್ತಿಸುತ್ತಿದ್ದೆನಾ? ಅಂತೆಲ್ಲಾ ಪ್ರಶ್ನೆ ಮಾಡಿಕೊಳ್ಳುವಂತಾಗುತ್ತದೆ.  ಆದರೂ ಈ ನೆನಪುಗಳು ಕಚಗುಳಿ ಇಡುತ್ತ ಬದುಕಿನ ಬಂಡಿಗೆ ಹೆಗಲಾಗುವುದು ಸುಳ್ಳಲ್ಲ.

ಹಾಗೆ ಈ ಸಂಕ್ರಾಂತಿ ಹಲವು ನೆನಪುಗಳ ಬುತ್ತಿ ಅಂದರೂ ತಪ್ಪಿಲ್ಲ.  ಮೊಗೆ ಮೊಗೆವಷ್ಟು ಸಖತ್ ಸಂತೋಷವೂ ಇದೆ ಅಷ್ಟೇ ಜನ್ಮ ಪೂರ್ತಿ ಮರೆಯಲಾಗದ ದುಃಖವೂ ಇದೆ. ಕಳೆದ ಸಂಗತಿಗಳು ಘಟನೆಗಳು ಅತ್ಯಂತ ನೆನಪಲ್ಲಿ ಉಳಿಯುವ ವಯಸ್ಸಿನಲ್ಲಿ ನಡೆದು ಮಸ್ತಕದಲ್ಲಿ ವಿರಾಜಿಸಿಬಿಟ್ಟಿದೆ.

ಆಗಿನ್ನೂ ನನಗೆ ವಯಸ್ಸು ಹತ್ತು ವರ್ಷ.  ನಮ್ಮ ಹಳ್ಳಿ ಸರ್ಕಾರಿ ಶಾಲೆ “ನಾಲ್ಕನೇ ಕ್ಲಾಸಿನ ವರೆಗೆ ಮಾತ್ರ ಇನ್ನು ಈ ಶಾಲೆಯಲ್ಲಿ” ಅಂತ ಘೋಷಣೆ ಮಾಡಿಬಿಡ್ತು ನಾನು ಐದನೇ ಕ್ಲಾಸಿಗೆ ಬರುವಷ್ಟರಲ್ಲಿ.  ಗತಿ ಇಲ್ಲದೇ ಅಜ್ಜಿ (ನನ್ನ ಅಜ್ಜಿಯ ತಂಗಿ ಮನೆ) ಮನೆಯಲ್ಲಿ ಉಳಿದು ಹತ್ತಿರವಿರುವ ಸಿಟಿ ಶಾಲೆಗೆ ಹೋಗಬೇಕಾಯಿತು.  ಅದೂ ಕೂಡಾ ಸರ್ಕಾರಿ ಶಾಲೆಯೇ ಆಗಿತ್ತು.  ಆದರೆ ದೊಡ್ಡ ಶಾಲೆ, ಮಕ್ಕಳ ಸಂಖ್ಯೆನೂ ಜಾಸ್ತಿ ಇತ್ತು.  ನನಗೆ ಮೊದ ಮೊದಲು ಕಣ್ ಕಟ್ಟಿ ಕಾಡಲ್ಲಿ ಬಿಟ್ಟಂತಾಗಿತ್ತು.  ಆದರೂ ದೊಡ್ಡ ಶಾಲೆ ಎಂಬ ಖುಷಿ ಒಂದು ಕಡೆ ಮತ್ತದೇನೊ ಘಮೇಂಡಿ! “ಪ್ಯಾಟೆ ಶಾಲೆಯಲ್ಲಿ ಒದ್ತಿದ್ದಿ ಆನು” ಎಂಬ ದೌಲತ್ತು ನಮ್ಮಳ್ಳಿಗೆ ಹೋದಾಗ ಜೊತೆಯವರಲ್ಲಿ.

ಈ ಸಂಕ್ರಾತಿಗೂ ಶಾಲೆ ಪರೀಕ್ಷೆಗೂ ಕೊಂಡಿ.  ಮುಗಿಯದ ಪೋರ್ಷನ್ ಮುಗಿಸುವ ತರಾತುರಿ ಟೀಚರ್ಗಳದ್ದು.  ಹೋಂ ವರ್ಕ್, ಕ್ಲಾಸ್ ಪರೀಕ್ಷೆ ಜೊತೆಗೆ ಏಳನೇ ಕ್ಲಾಸಲ್ಲಿ ಬೇರೆ ಇದ್ನಾ…ಪಬ್ಲಿಕ್ ಪರೀಕ್ಷೆ ಇತ್ತು ಆಗ.  “ನಮ್ಮ ಶಾಲೆಗೆ 100% ರಿಸಲ್ಟ್ ಬರಬೇಕು” ಟೀಚರ್ ಪದೇ ಪದೇ ಉವಾಚ.  ಜೊತೆಗೆ ವರ್ಷದ ಕೊನೆಯಲ್ಲಿ ಜೋಗ್ ಫಾಲ್ಸ್ ಗೆ ದೊಡ್ಡ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು.  ಟ್ರ್ಯಾಲಿಯಲ್ಲಿ ಇಳಿಸಿ ವಿದ್ಯುತ್ ಉತ್ಪಾದನೆಯಾಗುವ ಆ ಬುಡದ ಆಳದವರೆಗೂ ನಮ್ಮನ್ನೆಲ್ಲಾ ಕರೆದುಕೊಂಡು ಹೋಗಿದ್ದು ಈಗ ಇದಕ್ಕೆ ಅವಕಾಶ ಇಲ್ಲ ಎಂದು ಎಂದೋ ಪೇಪರಿನಲ್ಲಿ ಓದಿದಾಗ  “ಆಗ ನಾವೆಲ್ಲ ಹೋಗಿದ್ವಿ ಗೊತ್ತಾ” ಅಂತ ಮಗಳತ್ತಿರ ಕೊಚ್ಚಿಕೊಂಡಿದ್ದು ಈ ನೆನಪಿನಿಂದಾಗೇ… ಆಗೆಲ್ಲಾ ಮನಸ್ಸು ತದಾಂಗು ತಕಧಿಮಿ ತೋಂ.

ಇದಿರ್ಲಿ ಇಲ್ಕೇಳಿ ಹೇಳ್ತೀನಿ ಈ ಸಂಕ್ರಾಂತಿ ಸಮಾಚಾರಾ;

ಮೂರು ಮನೆ ಒಂದೇ ಕೋಳು ಇರುವ ಬಹುದೊಡ್ಡ ಮನೆ ನಾನುಳಿದ ನನ್ನ ಅಜ್ಜಿ ಮನೆ.  ಪಿತ್ರಾರ್ಜಿತ ಆಸ್ತಿ ಪಾಲು ಮಾಡಿಕೊಂಡರೂ ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗಲು ಹಿತ್ಲಾಕಡೆ (ಮನೆಯ ಹಿಂದೆ) ಸಣ್ಣ ಓಣಿ ಬಾಗಿಲು.  ಟುಸ್ಕಂತ.. ಹೋಗಿ ಬರಬಹುದಾಗಿತ್ತು.  ಒಂದು ಮನೆಯಲ್ಲಂತೂ ನನ್ನ ಜೋಡಿ ಮಕ್ಕಳೇ ಇದ್ದಿದ್ದರಿಂದ ನಾನು ಹೆಚ್ಚು ಅಲ್ಲೇ ಇರ್ತಿದ್ದೆ.  ಹೀಗಿರುವಾಗ ಆ ಮನೆ ದೊಡ್ಡಕ್ಕ ಒಬ್ಬಳು ಬೆಳ್ಳಂಬೆಳಗ್ಗೆ ಎದ್ದು ಪ್ರತೀ ವರ್ಷ ಸಂಕ್ರಾಂತಿ ಕಾಳು ಮಾಡ್ತಿದ್ಲು.  ನನಗೊ ನೋಡಿ ನೋಡಿ “ಓರ್ಮನೆ ಅಕ್ಕಯ್ಯನ ಜೊತೆ ನಾನೂ ಸಂಕ್ರಾಂತಿ ಕಾಳು ಮಾಡ್ತಿ ಈ ವರ್ಷ” ಅಂತ ಚಿಕ್ಕಮ್ಮನ (ಅಜ್ಜಿಯನ್ನು ಚಿಕ್ಕಮ್ಮ ಎಂದು ಕರಿತಿದ್ದದ್ದು ನನ್ನ ಆಯಿನೂ ಹೀಗೆ ಕರಿತಿದ್ದರಿಂದ.  ಆಯಿ ಬಾಲ ಆಗೆಲ್ಲಾ ಎಲ್ಲಾದಕ್ಕೂ…) ಹತ್ತಿರ ದುಂಬಾಲು ಬಿದ್ದೆ.

“ಬೆಳಗಿನ ಜಾವ ಐದು ಗಂಟಿಗೆ ಎದ್ಕಂಡು ಮಾಡವೆ.  ರಾಶಿ ಚಳಿ ಬೀಳ್ತಾ ಇದ್ದು.  ನಿನ್ನ ಕೈಲಾಗ್ತಿಲ್ಲೆ ಬ್ಯಾಡ್ದೆ” ಅಂತ ಹೇಳಿದ್ರೂ ಕೇಳ್ದೆ ಅಕ್ಕಯ್ಯನ ಜೊತೆ ಶುರು ಹಚ್ಕಂಡೆ.  ಸಾಮಾನೆಲ್ಲಾ ಅಕ್ಕಯ್ಯನ ಮನೆದೆ.  “ಬಾರೆ ಹೇಳ್ಕೊಡ್ತ್ನೆ” ಅಂದಾಗ ಚಿಕ್ಕಮ್ಮನಿಗೆ ಕ್ಯಾರೇ..ಅನ್ನಲಿಲ್ಲ.

ಬಿಳಿ ಎಳ್ಳು, ಸಕ್ಕರೆ ಹದವಾದ ಪಾಕ ಇಷ್ಟೇ ಗೊತ್ತು.  ಅದು ಹೇಗೆ ಮಾಡ್ತಾರೆ ಪಾಕ, ಏನೇನೆಲ್ಲಾ ಹಾಕ್ತಾರೆ ಏನೂ ಗೊತ್ತಿಲ್ಲದ ವಯಸ್ಸು.  ಆದರೆ ಕಲಿಬೇಕು ಮಾಡಬೇಕು ಎಂಬ ಹುಮ್ಮಸ್ಸು ಜೋರೇ ಜೋರು.  ಬೆಳಿಗ್ಗೆ ಎದ್ದು ಓದು ಅಂದರೆ ಬೆನ್ನಟ್ಟಿ ಬರುವ ನಿದ್ದೆ, ಸಂಕ್ರಾಂತಿ ಕಾಳು ಬಡಿದೆಬ್ಬಿಸುತ್ತಿತ್ತು ಬೆಳಿಗ್ಗೆ ನಾಲ್ಕು ಗಂಟೆಗೇ.

ಒಂದು ಊಟದ ತಾಟಿನಲ್ಲಿ ಸ್ವಲ್ಪೇ ಸ್ವಲ್ಪ ಎಳ್ಳು ಚೂರೇ ಚೂರು ಬಿಸಿ ಪಾಕ ಹಾಕುತ್ತ ಕೈಯ್ಯಾಡಿಸುತ್ತ ಕೆಂಡದ ಒಲೆ ಪಕ್ಕದಲ್ಲೆ ಇಟ್ಟುಕೊಂಡು ಅಕ್ಕಯ್ಯ ಸಂಕ್ರಾಂತಿ ಕುಸುರೆಳ್ಳು ಮಾಡುವಾಗ ನೋಡುವಾಗಿನ ಉಮೇದಿ ನಾ ಮಾಡುವಾಗ ನಾಲ್ಕಾರು ದಿನಗಳಲ್ಲೆ ಅಯ್ಯಪ್ಪ ಅಂತೆನಿಸಿದರೂ ಎಳ್ಳು ಮುಳ್ಳು ಬರ್ತಿಲ್ಲ ಎಂಬ ಕೊರಗು.  ಥೊ…… ಇನ್ನೂ ಸ್ವಲ್ಪ ಜಾಸ್ತಿ ಸಕ್ಕರೆ ಪಾಕ ಹಾಕಿದರೆ ಬೇಗ ಮುಳ್ಳು ಬರಬಹುದೆಂಬ ಭ್ರಮೆಯಲ್ಲಿ ಅಕ್ಕಯ್ಯ ಹೇಳಿದ ಅಳತೆಗಿಂತ ಜಾಸ್ತಿ ಹಾಕಿ ಅದು ಮುದ್ದೆ ಆಗಿ ಬೆರಳಿಗೆಲ್ಲ ಯಳ್ಳಂಟಿ ಎಲ್ಲಾ ಎಕ್ಕುಟ್ಟೋಗಿ ನನ್ನ ಅವಸ್ಥೆ ನೋಡಿ ಅಕ್ಕಯ್ಯನ ಜೊತೆ ಚಿಕ್ಕಮ್ಮ ಮಾವಂದಿರು ಮನೆ ಜನ ಎಲ್ಲಾ ನಗ್ತಾ ಇದ್ದರೆ ನಾನೋಗಿ ಮೂಲೆ ಸೇರಿ ಮುಸುಂಡಿ ತರ ಕೂತಿದ್ದೆ.  ಕೆಟ್ಟ ಕೋಪ  ಸೋಲಾಗೋಯ್ತು ಅಂತ ಒಂದುಕಡೆ, ಅವಮಾನದಿಂದ ಅಳು ಒತ್ತರಿಸುತ್ತಿದೆ ಆಯಿ ಬೇಕೂ… ಮನಸ್ಸು ನೆನಪಿಸಿಕೊಳ್ಳುತ್ತಿದೆ….

(ಎಷ್ಟು ಪಾಪದ ಸ್ಥಿತಿ ನಂದು ಅಲ್ವಾ?  ಅಷ್ಟು ಚಿಕ್ಕ ವಯಸ್ಸಿನಲ್ಲೇ ಆಯಿ ಬಿಟ್ಟು ಇದ್ನಲ್ಲಾ ಈ ಶಾಲೆಯಿಂದಾಗಿ ಅಂತ ಈಗಲೂ ಅನಿಸುತ್ತದೆ ಸರ್ಕಾರಿ ಶಾಲೆ ಮುಚ್ಚುತ್ತಿರುವ ಸುದ್ದಿ ಕೇಳಿದಾಗೆಲ್ಲ ಆಗಿನ ನನ್ನ ಸ್ಥಿತಿ ರಪ್ಪೆಂದು ಹೃದಯಕ್ಕೆ ಬಡಿಯುತ್ತದೆ.)

“ಸಂಘೀ….( ಮಾವಂದಿರು ಕರೆಯುತ್ತಿದ್ದದ್ದು) ಎಂತಾತೆ.  ಬಾರೆ ಅಳಡ್ದೆ.  ನೀ ಇನ್ನೂ ಶಟ್ಕಿದ್ದೆ.  ದೊಡ್ಡಾದ ಮೇಲೆ ಕಲ್ಕಳಕ್ಕಡೆ” ಅಂದಾಗಂತೂ ದುಃಖ ಉಮ್ಮಳಿಸಿ ಚಿಕ್ಕಮ್ಮನ ಸೆರಗಲ್ಲಿ ಮಗುವಿನಂತೆ ಅತ್ತಿದ್ದೆ.  ಅಂದೇ ಕೊನೆ ಆಗೋಯ್ತು ಕುಸುರೆಳ್ಳು ಮಾಡುವ ಕಸರತ್ತು.

“ಕಷ್ಟ ಇದೆ ಕುಸುರೆಳ್ಳು ಮಾಡುವುದು.  ಬಹಳ ತಾಳ್ಮೆ ಸಂಯಮ ಬೇಕು.  ಕನಿಷ್ಠ ಒಂದು ವಾರವಾದರೂ ಬೇಕು ಮಾಡಲು.  ಮುಳ್ಳು ಬರೋದು ನಿಧಾನ, ಮುಳ್ಳು ಬಂದ ಮೇಲೆ ಅದು ಬೆಳೆಯಲು ಮುರಿಯದಂತೆ ಚಾಕಚಕ್ಯತೆಯಿಂದ ನಿಧಾನವಾಗಿ ಕೈಯ್ಯಾಡಿಸ ಬೇಕು.  ಅದೂ ಬೆಳಗಿನ ಜಾವದ ಚಳಿಯಲ್ಲೇ ಮಾಡಬೇಕು ಬೇಗ ಮುಳ್ಳು ಬರಲು.  ಸಕ್ಕರೆ ಪಾಕದ ಹದವೂ ಕರೆಕ್ಟಾಗಿರಬೇಕು” ಹೀಗೆಲ್ಲಾ ಅಕ್ಕಯ್ಯ ಕುಸುರೆಳ್ಳು ಮಾಡುವ ವಿಧಾನ ಹೇಳುತ್ತಿದ್ದದ್ದು ಮಾತ್ರ ನೆನಪಾಗಿ ಉಳಿದುಬಿಟ್ಟಿದೆ.  ಈಗ ಕುಸುರೆಳ್ಳಿನ ಅಕ್ಕಯ್ಯ ಇದ್ದಾರೊ ಇಲ್ಲವೊ ಅದೂ ಗೊತ್ತಿಲ್ಲ.  ಆದರೆ ಅವಳ ನೆನಪು ಮಾತ್ರ ಈ ಹಬ್ಬದಲ್ಲಿ ಬರೋದು ಗ್ಯಾರಂಟಿ!

ಇನ್ನು ಮನೆಗಿಂತ ಸ್ಕೂಲಲ್ಲಿ ಸಂಕ್ರಾಂತಿ ಕುಸುರೆಳ್ಳು ಹಂಚುವ ಸಂಭ್ರಮ ಜೋರು.  ಹೊಸಾ ಚಂದದ ಲಂಗ ಹಾಕಿ ಉದ್ದ ಎರಡು ಜಡೆ ಬಣ್ಣದ ರಿಬ್ಬನ್, ದಂಡೆ ಕಟ್ಟಿದ ಹೂವು ಮುಡಿದು ಮುತ್ತಿನ ಸರ (ಸಿರ್ಸಿ ಜಾತ್ರೆದು)ಕೈ ತುಂಬ ಬಳೆ ಗಲ್ಗಲಸ್ತಾ ಶಾಲೆಗೆ ಬಲೂ ಗಮ್ಮತ್ತಲ್ಲಿ ಹೋಗಿ ಕುಸುರೆಳ್ಳು ಕೊಡ್ತಾ “ಸಂಕ್ರಾಂತಿಯ ಶುಭಾಶಯಗಳು” ಟೀಚರ್ ಗೆ ಹೇಳಿದ್ರೆ ಉಳಿದವರಿಗೆಲ್ಲಾ “ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡು” ಅನ್ನುವುದು.  ಹಾಗೆ ಟೂ ಬಿಟ್ಟವರೂ ಎಳ್ಳು ಕೊಡುವ ನೆವದಲ್ಲಿ ದೋಸ್ತಿ ಬೆಳೆಸಿಕೊಂಡು ಬರುವಾಗ ಬಡಿವಾರ ತೋರ್ಸಿ ಮಿಕ್ಕವರು ಮಸ್ಕಾ ಹೊಡೆದು ದೋಸ್ತಿ ಕೂಡಿಸೋದು ಕ್ಷಣದಲ್ಲಿ ಹಿಂದಿಂದೆಲ್ಲಾ ಮರೆತು ಒಂದಾಗಿ ಆ ಸಮಯ ಎಂಜಾಯ್ ಮಾಡೋದು ,..ಅರೆರೇ…ಅದೇನ್ ನೆನಪೂ……

ನಾನಂತೂ ತಪ್ಪದೇ ಪ್ರತೀ ವರ್ಷ ನನ್ನ ಅಣ್ಣನಿಗೆ ಕುಸುರೆಳ್ಳು ಪೋಸ್ಟ್ ನಲ್ಲಿ ಕಳುಹಿಸುತ್ತಿದ್ದೆ.    ಅವನೂ ಕಳಿಸುತ್ತಿದ್ದ.  ಆದರೆ ಈ ಮೊಬೈಲು ಫೋನು ಬಂದ ಮೇಲೆ ಇತ್ತೀಚೆಗಂತೂ ಹಬ್ಬಕ್ಕೆಲ್ಲಾ ಬರೀ ಒಣಾ ಒಣಾ ಶುಭಾಶಯ ಹೇಳೋದಾಗೋಗಿದೆ.  ಛೆ! ಆಗಲೇ ಚಂದ ಇತ್ತು ಹಬ್ಬಗಳು.

ಬುದ್ಧಿ ತಿಳಿದಾಗಿಂದ ಈ ಹಬ್ಬಕ್ಕೆ ಒಂದು ವಾರವಿರುವಾಗಲೇ ಕುಸುರೆಳ್ಳನ್ನು ಸ್ನೇಹಿತರು,ನೆಂಟರಿಗೆ ಅಂದವಾದ ಬಗೆ ಬಗೆಯ ಗ್ರೀಟಿಂಗ್ಸ್ ತಂದು ಅದರೊಳಗಡೆ ಪುಟ್ಟ ಕವರಿನಲ್ಲಿ ನಾಲ್ಕೇ ನಾಲ್ಕು ಕಾಳು ಹಾಕಿ (ಜಾಸ್ತಿ ಹಾಕಿದರೆ ಸ್ಟಾಂಪ್ ರೊಕ್ಕ ಜಾಸ್ತಿ ಆಗುತ್ತಲ್ಲಾ) ಬಹಳ ಮುತುವರ್ಜಿ ವಹಿಸಿ ಆ ಪೋಸ್ಟ್ ಆಫೀಸಿನಲ್ಲಿ ಕವರಿನ ಮೇಲೆ ಸೀಲಾಕಲು ಹೋಗಿ ಅದರ ಮೇಲೆ ಗುದ್ದಿಬಿಟ್ಟರೆ ಎಂಬ ಆತಂಕದಲ್ಲಿ ಕವರಿನ ಒಂದು ಮೂಲೆಯಲ್ಲಿ ಅಲುಗಾಡದಂತೆ ಗಟ್ಟಿ ಅಂಟಿಸಿ ಪೋಸ್ಟ್ ಮಾಡಿ ಮತ್ತೆ ಪೋಸ್ಟ್ ಮನ್ ಸೈಕಲ್ ಬೆಲ್ಲಿಗೆ ಕಾಯೋದು.  ನಾನು ಕಳಿಸಿದ ಮೇಲೆ ಅವರೂ ಕಳಿಸಬೇಕಲ್ವಾ? ಕಳಿಸದೇ ಇದ್ದರೆ …. ದೋಸ್ತಿ ಕಥಂ.

ಭಯಂಕರ ಲೆಕ್ಕಾಚಾರಾ ಮಾರ್ರೆ… ಆಗಿನ ಲೆಕ್ಕ ಈಗ ಫೋನಿಗೆ ತಗಲಾಕ್ಕೊಂಡಿದೆ ಫೇಸ್ಬುಕ್ ಕಮೆಂಟಿನಂತೆ.  ಫೋನೇನು, ಫೇಸ್ಬುಕ್ ಏನು, ವಾಟ್ಸಾಪ್ ಲ್ಲೂ ಇದೇ ಕಥೆ.  ನಾವು ಕಳಿಸಿದ ತಕ್ಷಣ ಟಣಟಣ. ಉಘೇ ಉಘೇ….”ನೀ ನನಗಾದರೆ ನಾ ನಿನಗೆ”
ಇದನ್ನು ಮಾತ್ರ ಚಾಚೂ ತಪ್ಪದೇ ಪಾಲಿಸುವ ಗಂಭೀರ ವಾತಾವರಣ ನಂಗಂತೂ ಉಸಿರು ಕಟ್ಟಿಸುತ್ತದೆ.

88ರ ಸಂಕ್ರಾಂತಿಯ ಸಂಜೆ.  ತವರಲ್ಲಿ ಬಾಣಂತನದ ಐದನೇ ತಿಂಗಳು ಮುಗಿಯಲು ಇನ್ನೂ ಕೇವಲ ಐದೇ ದಿನ ಇದೆ.  ನನ್ನ ತವರಿಗೆ ಅವನ ಮಗಳನ್ನು ನೋಡಲು ಬಂದ ಅಪ್ಪ ಹಬ್ಬ ಮುಗಿಸಿ ಹಿರಿಯರಿಗೆ ನಮಸ್ಕರಿಸಿ ಹೊರಟ.  ಇನ್ನೇನು ನಾಲ್ಕಾರು ದಿನದಲ್ಲಿ ನಾನೂ ಮಗಳೊಂದಿಗೆ ಬೆಂಗಳೂರಿಗೆ ಹೋರಡುವುದೆಂದು ಮಾತಾಯಿತು.  ಆಯಿ ಮುಖ ಬಾಡಿ ಕಣ್ಣಲ್ಲಿ ನೀರು ತುಂಬಿಕೊಂಡು “ಹೋಗಲೇ ಬೇಕನೆ? ಇನ್ನೂ ಸ್ವಲ್ಪ ದಿನ ಇರೆ “. ಆದರೆ ನನಗಿಲ್ಲಿ ನೌಕರಿ ಕರೆಯುತ್ತಿತ್ತು.

ಆಯಿ ರಾತ್ರಿ ಮಲಗಿದವಳು ಬೆಳಿಗ್ಗೆ ಏಳುವಾಗಲೇ ಅವಳ ಆರೋಗ್ಯದಲ್ಲಿ ಏರುಪೇರು.  ಹಳ್ಳಿ ಡಾಕ್ಟರ್ ಬಂದು ಇಂಜಕ್ಷನ್ನು ಔಷಧಿ ಮಾಡಿದರು.  ಮೂರು ದಿನ ಕಳೆಯಿತು.  ಆರೋಗ್ಯದಲ್ಲಿ ಗೆಲುವೇ ಇಲ್ಲ. ನಾಲ್ಕನೇ ದಿನ ಮತ್ತೆ ಬಂದು ಡಾಕ್ಟರ್ ಮತ್ತೆ ಇಂಜಕ್ಷನ್ನ ಕೊಟ್ಟು ರೋಮೈಟೈಡ್ ಆರ್ಥೈರೈಟೀಸ್ ಈ ಚಳಿಗೆ ಜಾಸ್ತಿ ಆದಂತಿದೆ.   ಅದಕ್ಕೇ ಹೀಗೆ ಅಂದಾಗ ನಾವೂ ಹೌದೆನೊ ಅಂದುಕೊಂಡಿದ್ದು  ರಾತ್ರಿ ಹನ್ನೆರಡು ಗಂಟೆಗೆ ಆಯಿ ನರಳಾಟ “ತಂಪಾಗಿ ಎಂತಾರೂ ಕೊಡೆ, ರಾಶಿ ಸಂಕಟಾಗ್ತೂ. ಸೆಕೆ ಸೆಕೆ.”

ಬಾಯಿಗೆ ಹಾಕಿದ ಗುಟುಕು ಕೆನ್ನೆ ಮೇಲೆ ಜಾರಿತು.  ಗೊಟಕ್ ಎಂಬ ಸದ್ದು.  ಆಯಿ ಇಹಲೋಕ ಯಾತ್ರೆ ಮುಗಿಸಿದ್ದು ….ಯಮ ಯಾತನೆ!

ನನ್ನ ಆಯಿ ಶಾಶ್ವತವಾದ ನೆನಪಿನ ಬುತ್ತಿ ಕಟ್ಟಿಕೊಟ್ಟ ಹಬ್ಬವಾಗಿದೆ ಈ ಸಂಕ್ರಾಂತಿ.  ಕಾರಣ “ಐದು ತಿಂಗಳ ಬಾಣಂತನ ಮುಗಿಸಿಕೊಂಡು ಹೋಗೆ.  ಮಗಳನ್ನು ಪ್ಲೇ ಹೋಮಲ್ಲಿ ಬಿಟ್ಟು ಹೋಗವಲೆ.  ಪಾಪ! ಅದು ಹ್ಯಾಂಗಿರ್ತನ ಅಲ್ಲಿ.” ಹೇಳಿದವಳು ಸರಿಯಾಗಿ ಐದು ತಿಂಗಳು ಮುಗಿದ ದಿನವೇ ತಾನೇ ನನ್ನ ಬಿಟ್ಟು ಹೊರಟುಹೋದಳು ಬಾರದ ಜಾಗಕ್ಕೆ!

ಹೀಗೆ ಎಳ್ಳೂ ಇದೆ ಬೆಲ್ಲವೂ ಇದೆ ನನ್ನ ನೆನಪಲ್ಲಿ!

‍ಲೇಖಕರು avadhi

January 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

Trackbacks/Pingbacks

  1. “ಹೀಗೆ ಎಳ್ಳೂ ಇದೆ ಬೆಲ್ಲವೂ ಇದೆ ನನ್ನ ನೆನಪಲ್ಲಿ! – ಅವಧಿ । AVADHI” https://avadhimag.in/?p=224569 – Sandhyadeepa…. - […] “ಹೀಗೆ ಎಳ್ಳೂ ಇದೆ ಬೆಲ್ಲವೂ ಇದೆ ನನ್ನ ನೆನಪಲ್ಲಿ! – ಅವಧಿ । AVADHI” https://avadhimag.in/?p=224569 […]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: