ಹಿನ್ನೀರು ಗಜನಿಯ ಉಪ್ಪು ನೀರಿನ ‘ಕಗ್ಗ’

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ..

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

|ಕಳೆದ ಸಂಚಿಕೆಯಿಂದ|

ಚಾ ಕುಡಿದಾದ ಮೇಲೂ ಒಂದು ಅಕ್ಕಿಮೂಡೆಯಷ್ಟು ಮಾತಾಡಿ “ಚಾವಿ ಹಾಕಿದ್ರೂ ನೀ ಹೆದ್ರಿ ಸಾಯ್ತಿ ಅಂತ ಮುಂದಿನ ಕೊಂಬು ಮುರ್ದಿದ್ದೇನೆ. ಮನೆಗೆ ತಕಂಡೋದದ್ದೇ ಫ್ರಿಡ್ಜಿಗೆ ಹಾಕು. ಐಸಿಗೆ ಒಂದ್ ತಾಸಲ್ಲಿ ಪಡ್ಚ ಅವು. ಕಡೆಗೆ ತೆಗ್ದು, ಸೋಯ್ಸಿ, ಗನಾ ಖಾರ, ಗರ್ಮಸಾಲೆ, ಶುಂಠಿ ಸೇರ್ಸಿ ಪುಡಿ ಹಾಕು ಎಂದು ಹೇಳಿ ತಾನೇ ಗಾಡಿ ಬಾಕ್ಸಿಗೆ ಹತ್ತು ಏಡಿ ಹಾಕಿಕೊಟ್ಟು ಗಣಪು ಹೋಗಿ ಬಹಳ ಹೊತ್ತಾದ ಮೇಲೆಯೂ ಅವನ ಎಮ್-80 ಬೈಕಿನ ಟರ್ ಟರ್ ಸದ್ದು ನನ್ನ ಕಿವಿ ಸುತ್ತ ಸುತ್ತುತ್ತಲೇ ಇತ್ತು.

ಅದರ ಸೈಲೈನ್ಸರ್ ಹೊಗೆ ತಾರಾಮಾರಾ ಎದ್ದು ಅಂಕೋಲೆ ಪೇಟೆಗೆಲ್ಲ ಹಬ್ಬಿ ಯಾರಿಂವ ಈ ನಮೂನೆ ಹೊಗಿ ಬಿಡು ಮಾರಾಯ ಎಂದು ಜನ ಎಲ್ಲ ಅಂಗ್ಡಿ ಬಿಟ್ಟು ಹೊರಬಂದು ನೋಡತೊಡಗಿದ ಹಾಗೆ ರಾತ್ರಿ ಹುಬೇಹೂಬು ಕನಸಾಗಿ ‘ಏಡಿ ತಿಂದದ್ದು ತಲೆಗೆ ಹತ್ತತಾ ಹೆಂಗೆ ನಂಗೆ ?’ ಅಂತ ನಕ್ಕು ನೀರು ಕುಡಿದು ಮಲಗಿದರೆ ಆ ಮಧ್ಯರಾತ್ರಿಯ ನೀರವದಲ್ಲಿ ಬಹುಕಾಲದ ಹಿಂದೆ ಅಜ್ಜಿ ಮುಡ್ಲಲ್ಲಿ ಬಿಜಿಗುಡುತ್ತ ಮನೆಗೆ ಬಂದು ಜಿಗ್ಗು ಬೆಂಕಿಯಲ್ಲಿ ಸುಟ್ಟು ಹೊಟ್ಟೆಸೇರುತ್ತಿದ್ದ ಏಡಿಗಳು ಮತ್ತೆ ಎದ್ದೆದ್ದು ತಲೆಗೆ ಬಂದವು.

ಪಿಶ್ವಿ ಇಲ್ಲ, ಬುಟ್ಟಿ ಇಲ್ಲ. ಆದ್ರೂ ಉಟ್ಟ ಕಪಡದಲ್ಲೇ ಗದ್ದೆ ಏಡಿ, ಗುಳ್ಳೆ, ಬೆಟ್ಟದ ಕಲ್ಲೆಸಡಿಗಳನ್ನು.. ಗಜನಿಯ ಮುಳ್ಳು ಸೀಗಡಿಗಳನ್ನು ಹಿಡಿದು ತರುತ್ತಿದ್ದ ಅವಳ ಅರಲು ಕಾಲು, ಏಡಿಗಳಿಂದ ಕಚ್ಚಿಸಿಕೊಂಡು ಸೀಗಡಿ ಮುಳ್ಳಿಂದ ಸಿಗಿಸಿಕೊಂಡು ಸಣ್ಣಗೆ ರಕ್ತ ಒಸರುತ್ತಿದ್ದ ಕೈ ಬೆರಳುಗಳು ನೆನಪಾದವು.

ಸ್ಯಾಡಿ ಎಂಬ ಮೀನಿನ ಮೀಸೆ ಮುಳ್ಳು ಹೊಡೆದು ರಾತ್ರಿ ಪೂರ್ತಿ ಬುಸುಗುಡುವ ಪಾದಕ್ಕೆ ಕೊಬ್ಬರಿಯೆಣ್ಣೆಯಲ್ಲಿ ಜಜ್ಜಿದ ಕಾಸಿದ ಹಸಿರು ಸೊಪ್ಪು ಕಟ್ಟಿಕೊಂಡು ನಿದ್ರೆಯಿಲ್ಲದ ರಾತ್ರಿ ಕಳೆದರೂ ಮತ್ತೆ ಮರುದಿನ ಅದೇ ಕಾಯಕಕ್ಕೆ ನಿಷ್ಠೆಯಿಂದ ಹೋಗುವ ಅವಳ ದಂದುಗ ಕಣ್ಮುಂದೆ ಓಡತೊಡಗಿತು. “ಹೆದರಿ ಹೇಲಾಗಿ ಒಲೆಬುಡಕ್ಕೆ ಮಲಗಿದರೆ ಹಾಲುತುಪ್ಪ ತಿನ್ನುಕಾಗ್ತದೇನೇ..???!!” ಎನ್ನುತ್ತ ಪಕಪಕ ನಗುವ ಅವಳ ಮಂಗಳೂರು ಸೌತೆ ಬೀಜದಂತಹ ಗಟ್ಟಿಮುಟ್ಟು ಸಾಲು ಕಿರುಹಲ್ಲುಗಳು ಈಗಲೇ ಇಲ್ಲೇ ಬಂದು ಹೊಳೆದಂತಾದವು.

ಕೊಂಬು ಮುರಿದ ಏಡಿಯ ಉಳಿದ ಮೊಂಡು ಜೀವಕ್ಕೂ ಹೆದರಿ ಹಿಂದೆ ಹಿಂದೆ ಸರಿಯುವ ನಾಜೂಕುತನದೊಂದಿಗೆ ಕೈ ಕೆಸರೂ ಮಾಡಿಕೊಳ್ಳಲಿಚ್ಛಿಸದ ಜನಜೀವನ ಈಗ. ಉಂಬುವಾಗ ಸ್ಪೂನು ಫೋರ್ಕು ಚಮಚ ಬೇಕು ನಮಗೆ. “ಈ ಮಕ್ಕಳು ಮಾವು, ಪಪ್ಪಾಯ, ಕಲ್ಲಂಗಡಿಯ ಹಣ್ಣನ್ನೂ ಚಮಚೆ ಬಳಸಿ ಕೊರೆದೇ ತಿನ್ನುವುದು ಮಾರಾಯ್ತಿ. ಈ ಕಚ್ಚಿ, ಚೀಪಿ ತಿನ್ನುವ ಪದ್ಧತಿ ಹೋದ ಮೇಲೆ ಅಲ್ವೇ ಹತ್ತು ಮಾರಿಗೊಂದು ಹಲ್ಲಿನ ದವಾಖಾನೆ ಆದದ್ದು ನಮ್ಮೂರಲ್ಲೂ..” ಎನ್ನುವುದನ್ನು ಆಗಾಗ ಹೇಳುತ್ತಲೇ ಇರುವ ನಮ್ಮೂರ ದಾಸನ ಮನೆ ಪ್ರೇಮಕ್ಕ ನನ್ನ ಅಲಾಉಲಿ ಕಂಡಾಗಲೆಲ್ಲ ಹಿಡಿದು ನಿಲ್ಲಿಸಿ ಅಂದು ಹೇಗಿತ್ತು ಇಂದು ಹೇಗಿದೆ ಎಂಬುದಕ್ಕೆ ಇಂಥವನ್ನೆಲ್ಲ ಒಂದೆರಡು ಉದಾಹರಣೆ ಕೊಟ್ಟೇ ಕೈ ಬಿಡುವುದು.

ಆಗೆಲ್ಲ ಗಜನಿಯ ಕಪ್ಪು ಅರಲಲ್ಲಿ ಸೊಂಟದವರೆಗೆ ನಿಂತು ಕಗ್ಗ ಭತ್ತ ಬಿತ್ತುವ ಅಜ್ಜಿ ಮತ್ತೆ ಮುನ್ನೆಲೆಗೆ ಬಂದು ಸುಳಿದಾಡುತ್ತಾರೆ. ಹೊರಗೊಂದು ಒಳಗೊಂದು ಬಾತರೂಮಿಗೊಂದು ವಾಕಿಂಗಿಗೊಂದು ಇರುವ ನಾಜೂಕು ಚಪ್ಪಲಿಗಳು.. ಶೂಗಳು.. ‘ಒಮ್ಮೆ ನಮ್ಮನ್ನು ಹಾಕಿ ಗಜನಿಯ ಅರಲಿಗಿಳಿದು ಕಗ್ಗದ ಒಂದು ತೆನೆ ಕೊಯ್ದು ತಾ ನೋಡುವಾ’ ಎಂದು ಅಣಕಿಸುತ್ತವೆ. 

ಹಿಂಗಾರು ಹಂಗಾಮು ಅಂದರೆ ಅಕ್ಟೋಬರ್ ತಿಂಗಳ ನಂತರ ಮೇ ತಿಂಗಳ ಅಂತ್ಯಕ್ಕೂ ಪೂರ್ವ ಏಳು ತಿಂಗಳ ಅವಧಿಯಲ್ಲಿ ಗಜನಿ ಹಿನ್ನೀರಿನಲ್ಲಿ ನಿರಂತರ ಮೀನು ಬೇಟೆ ನಡೆದಿರುತ್ತದೆ. ಅದೇ ಜಾಗದಲ್ಲಿ ಮುಂಗಾರು ಹಂಗಾಮಿನಲ್ಲಿ ಜೂನ್ ತಿಂಗಳಿಂದ ಅಕ್ಟೋಬರ್ ತಿಂಗಳವರೆಗೆ ಕಗ್ಗ ಭತ್ತದ ಕೃಷಿ ನಡೆಯುತ್ತಿರುತ್ತದೆ.

ಮೇ ತಿಂಗಳಲ್ಲಿ ಬೊಬಶಿ ಎಂಬ ಬೆಂಕಿಕಡ್ಡಿ ಗಾತ್ರದ ಒಣಮೀನು ತಂದು ಮಾರುವ ಬೆಟ್ಕುಳಿಯ ಗಂಗೆ – “ಇನ್ನು ಮೀನಿಲ್ಲ. ಮುಂಗಾರು ಶುರುವಾದ್ರೆ ಮೀನು ಹಿಡಿಯೋ ಜಾಗದಲ್ಲಿ ಕಗ್ಗ ಭತ್ತ ಬಿತ್ತುತ್ತಾರೆ. ಈಗೇ ತಕ್ಕಂಡು ಬಿಡಿ ಎಂದು ಮೂರು ಕೊಳಗ ಬೊಬಶಿ ಕೊಟ್ಟು ಹೋಗುತ್ತಾಳೆ. ನನಗೆ ಕಗ್ಗ ಅಕ್ಕಿ ಬೇಕಿತ್ತಲ್ಲೆ, ತಂದ್ಕೊಡೆ ಅಂದರೆ ಬರುವಾಗ ಆಗೀಗ ಒಂದೊಂದು ಕೊಳಗ ಕಗ್ಗದ ಕೆಂಪು ಕುಚ್ಚಲಕ್ಕಿ ತರುತ್ತಾಳೆ.

ಮೊನ್ನೆ ಸರ್ಕಾರಿ ಆಸ್ಪತ್ರೆಯ ಕಾರಿಡಾರಿನಲ್ಲಿ ಬೆರಳಿಗೆ ಬ್ಯಾಂಡೇಜು ಸುತ್ತಿ ಕುಳಿತಿದ್ದ ಕಾಗಾಲದ ಮಾಣಿ ಗೌಡ ಇಂದೂ ಮತ್ತೆ ಅದೇ ಬೆರಳನ್ನು ನೆಟ್ಟಗೆ ಮಾಡಿಕೊಂಡು ಕುಳಿತಿದ್ದ. ಕುತೂಹಲವಾಗಿ ಕೇಳಿದರೆ ‘ಕಗ್ಗದ ಸುಂಗು ಹೊಡೆದಿತ್ತು ಉಗುರ ಸಂದಿಗೆ.. ರಸಿಗೆಯಾಗಿ ಒಂದು ತಿಂಗಳಿಂದ ತ್ರಾಸು ಕೊಡ್ತಿದೆ ನೋಡು.. ಬೆರಳು ಆಪರೇಶನ್ನೇ ಮಾಡಿದ್ರು ಡಾಕ್ಟರು.. ಈಗ ದಿನಾ ಬ್ಯಾಂಡೇಜು ಮಾಡಬೇಕು ಅಂದಿದಾರೆ..’ ಅಂದ.

ಯಾಕೋ ಮತ್ತೆ ಮತ್ತೆ ಈ ಕಗ್ಗ ನನ್ನ ಅಲ್ಲಿ ಇಲ್ಲಿ ಎದುರಾಗುತ್ತಿದೆ ಅನ್ನಿಸತೊಡಗಿತು.. ಪ್ರತಿಕೂಲ ನೆಲೆಯಲ್ಲಿಯೂ ಬೇಸಾಯ ಮಾಡುತ್ತ ತಳಿ ಉಳಿಸುತ್ತ.. ಪಾಲಿಗೆ ಬಂದ ಭೂಮಿಯನ್ನು ಪಾಳು ಬಿಡದೇ ಹೆಂಗೆಲ್ಲಾ ಬೆಳೆ ತೆಗೆಯಬಹುದು, ನೇಗಿಲು, ಎತ್ತಿಲ್ಲದೇ ಸೊಂಟದವರೆಗೆ ಕಾಲು ಹುಗಿವ ಗಜನಿ, ಹೂಡ್ಲಿನಲ್ಲೂ ಭತ್ತದ ಮೊಳಕೆ ಬೇರೂರಿಸಬಹುದು.. ಎಂಬುದನ್ನೆಲ್ಲ ತಿಳಿದು ಪರಿಸರಕ್ಕನುಗುಣವಾಗಿ ಹೊಂದಿಕೊಂಡು ನಿಂತ ಜಾಗದಲ್ಲೇ ತನ್ನ ಅನ್ನ ಸೃಷ್ಟಿಸಿಕೊಂಡು ಲೋಕವನ್ನೂ ಪೊರೆದ ರೈತನ ಅನಾದಿಕಾಲದ ಕಾಯಕವೇ ನಮ್ಮೆಲ್ಲರ ಬದುಕ ಮುನ್ನಡೆಸುತ್ತ ಬಂದುದಲ್ಲವೇ..

ಏನಿದು ಕಗ್ಗ ಭತ್ತ ನದಿ ಸಮುದ್ರ ಸೇರುವ ಸ್ಥಳದ ಆಸುಪಾಸಿನ ಭೂಮಿಯನ್ನು ಹಿನ್ನೀರು ಗಜನಿ ಅಂತ ಕರೆಯಲಾಗುತ್ತದೆ. ಸಮುದ್ರದ ಭರತ ಇಳಿತದ ಉಪ್ಪು ನೀರು ಇಲ್ಲಿಗೆ ಹಿಮ್ಮುಖವಾಗಿ ಹಾಯುತ್ತಿರುತ್ತದೆ. ಮಳೆಗಾಲದಲ್ಲಿ ಮೇಲ್ಭಾಗದ ತರಿ ಭೂಮಿಯ ಹಾಗೂ ಭಾಗಾಯತದ ಜಮೀನಿನಲ್ಲಿ ಬಿದ್ದ ನೀರು ಕೂಡ ಇಲ್ಲಿಂದಲೇ ಇಳಿದು ಸಮುದ್ರ ಸೇರುವುದು.

ನಮ್ಮ ರಾಜ್ಯದಲ್ಲಿ ಇಂತಹ ಆರು ಸಾವಿರ ಹೆಕ್ಟೇರ್ ಗಜನಿಯಿದೆ. ಇದರಲ್ಲಿ ಸುಮಾರು ೪೦೦೦ ಹೆಕ್ಟೇರ್ ಕ್ಷೇತ್ರ ಅಘನಾಶಿನಿ, ಗಂಗಾವಳಿಯ ಹಿನ್ನೀರು ಪ್ರದೇಶವಾದ ನಮ್ಮ ಕುಮಟೆ ಅಂಕೋಲೆಯ ಸಮುದ್ರ ತೀರದಲ್ಲಿಯೇ ಇದೆ. ಅಕ್ಕಿಯೇ ಆಹಾರ ಮತ್ತು ವಾಣಿಜ್ಯ ಪ್ರಧಾನ ಬೆಳೆಯಾಗಿಸಿಕೊಂಡಿದ್ದ ನಮ್ಮ ಪೂರ್ವಜರು ಪಾಲಿಗಿರುವ ಇಂತಹ ತೀರದ ಉಪ್ಪು ನೀರು ಹಾಯುವ ಪ್ರದೇಶದಲ್ಲಿ ಕೂಡ ಬೆಳೆ ತೆಗೆದುಕೊಂಡು ಬದುಕಿಗೆ ಬಳಸಿಕೊಳ್ಳುವ ಅನಿವಾರ್ಯತೆಯನ್ನು ಅಂದು ಹೊಂದಿದ್ದರು.

ಅವಕಾಶಗಳ ಕೊರತೆಯ ದಿನಮಾನ- ಮನುಷ್ಯನನ್ನು ಇರುವ ಪರಿಧಿಯಲ್ಲೇ ಇದ್ದು ಈಸಿ ಗೆಲ್ಲುವ ಕಸುಬನ್ನು ಕಲಿಸಿತ್ತು. ಉಪ್ಪು ನೀರಿನಲ್ಲಿ ಬಿತ್ತಿ ಬೇರೂರಿಸಿ ಬೆಳೆ ತೆಗೆಯುವ ಪ್ರಯೋಗದಲ್ಲಿ ಅವರನ್ನು ಗೆಲ್ಲಿಸಿ ಅನಾದಿಕಾಲದಿಂದ ಪೊರೆದದ್ದು ಇದೇ ಈ ಕಗ್ಗ ಭತ್ತ.

ಕಗ್ಗದಲ್ಲಿ ಕರಿ ಕಗ್ಗ ,ಬಿಳಿ ಕಗ್ಗ ಎನ್ನುವ ಎರಡು ಪ್ರಕಾರ. ಜೀರಿಗೆಯ ಬಣ್ಣ ಆಕಾರ ಹೋಲುವ, ಜೀರಿಗೆಗಿಂತ ಸ್ವಲ್ಪ ಗಾತ್ರದಲ್ಲಿ ದೊಡ್ಡದಿರುವ ಕಗ್ಗ ಭತ್ತಕ್ಕೆ ಅದರ ಆಕಾರಕ್ಕಿಂತ ಎರಡುಪಟ್ಟು ಉದ್ದದ ಸುಂಕು ಇರುತ್ತದೆ. ಸಿಪ್ಪೆಯೂ ಬಲುಗಟ್ಟಿ.

ಗಜನಿ ನೆಲಕ್ಕೆ ಊರಿ ನಿಲ್ಲಲು ಹೇಳಿ ಮಾಡಿಸಿದ ಹಾಗೆ. ಜೂನ್ ತಿಂಗಳಲ್ಲಿ ಮಳೆಗಾಲ ಶುರುವಾಗಿ ಮೃಗಶಿರಾ ಮಳೆ ಹೊಯ್ದ ನದಿಗಳೆಲ್ಲ ತುಂಬಿ ಒತ್ತಡ ಹೆಚ್ಚಿಸಿಕೊಂಡು ಗಜನಿಯ ಉಪ್ಪಿನಂಶ ಮುಕ್ಕಾಲುಪಾಲು ಕೊಚ್ಚಿಹೋಗಿ ‘೦’ ಡಿಗ್ರಿ ಉಪ್ಪಿನಾಂಶ ಹಾಗೂ ph ಒಂದರಿಂದ ಎರಡರಷ್ಟಿದ್ದಾಗ ಕಗ್ಗವನ್ನು ಬಿತ್ತುತ್ತಾರೆ. ಈ ಸಮಯದಲ್ಲಿ ಬೇಸಿಗೆಯಲ್ಲಿ ನೀರಿಲ್ಲದೆ ಸೊರಗಿದ ಸಮುದ್ರದ ಭರತ ಬಹಳ ಕಮ್ಮಿ ಇರುತ್ತದೆ.

ಬೇರೆ ಭತ್ತಗಳನ್ನು ಮೊಳಕೆ ತರಿಸುವ ಪ್ರಕ್ರಿಯೆ ಮೂರು ದಿನಗಳೊಳಗೆ ಮುಗಿದರೆ ಕಗ್ಗಕ್ಕೆ ಏಳು ದಿನ ಬೇಕು. ಒಂದು ದಿನ ನೆನೆಸಿದರೆ ಮರುದಿನ ನೀರಿಂದ ಎತ್ತಿಡುತ್ತಾರೆ. ಅದರ ಮರುದಿನ ಮತ್ತೆ ನೀರಿಗೆ. ಮತ್ತೆ ಮರುದಿನ ಎತ್ತಿಡುವುದು.. ಹೀಗೆ ಏಳು ದಿನ ವೆಟ್ಟಿಂಗ್ ಮತ್ತು ಡ್ರೈಯಿಂಗ್ ಕೆಲಸ ಮಾಡಿದ ಮೇಲೆ ಕಗ್ಗಕ್ಕೆ ಮೊಳಕೆ ಬರುತ್ತದೆ. ಬಂದ ಮೇಲೆ ಹದಿನೈದು ದಿನದೊಳಗೆ ಯಾವಾಗ ಬೇಕಿದ್ದರೂ ಬಿತ್ತಬಹುದು. ಅಲ್ಲಿಯವರೆಗೆ ಮೊಳಕೆ ಹಾಳಾಗಲ್ಲ. ಸುಲಭಕ್ಕೆ ಮುರಿಯದ ಮೊಳಕೆಯ ಕೋಟಿಂಗ್ ಕೂಡ ಗಟ್ಟಿ ಇರುತ್ತದೆ.

ಕಗ್ಗ ಬಿತ್ತುವ ಮಂಡಿಯ ತನಕದ ಹುಗಿವ ಅರಲು ಜಾಗದಲ್ಲಿ ನೇಗಿಲು ಉಪಯೋಗಿಸಲು ಬರುವುದಿಲ್ಲ. ಇದು ಸಾಮೂಹಿಕ ಅಥವಾ ಒಕ್ಕೂಟ ಕೃಷಿಯಾದ ಕಾರಣ ಊರು ಮತ್ತದರ ಆಸುಪಾಸಿನ ಎಲ್ಲ ಜನ ಒಂದೇ ದಿನ ಗಜನಿಯಲ್ಲಿ ಸೇರಿಕೊಂಡು ಸಲಿಕೆ ಅಥವಾ ಗುದ್ದಲಿಯಿಂದ ಕೆಸರನ್ನು, ಕಸವನ್ನು ಸ್ವಲ್ಪ ಸಡಿಲ ಮಾಡಿಕೊಳ್ಳುತ್ತಾರೆ. ನಂತರ ಎಲ್ಲ ರೈತರು ಅಡ್ಡ ಮತ್ತು ಉದ್ದಕ್ಕೆ ಹಗ್ಗ ಹಿಡಿದುಕೊಂಡು ಭಾಗಮಾಡಿ ಅಷ್ಟಷ್ಟು ಜಾಗ ಗುರ್ತಿಸಿಕೊಂಡು ಬಿತ್ತುತ್ತಾರೆ. ಈ ಭಾಗಕ್ಕೆ ಹಸಗಿ ಎಂದು ಕರೆಯುತ್ತಾರೆ.

ಕೊಯ್ಲು ಮಾಡುವಾಗ ಕೂಡ ನಮ್ಮ ನಿಮ್ಮದು ಎಂಬ ಬದುವಿನ ಗುರ್ತಿಲ್ಲದ ಜಾಗವಾದ ಅಲ್ಲಿ ಅಳತೆಯ ಹಗ್ಗ ಹಿಡಿದೇ ಸಾಮೂಹಿಕ ಸಮಪಾಲಿನ ಕೊಯ್ಲು ನಡೆಯುತ್ತದೆ. ಪ್ರವಾಹದ ಖನಿಜ ಮಣ್ಣು, ಗಜನಿಯ ಕಪ್ಪು ಸಾರದ ಮಣ್ಣಿನಲ್ಲೇ ಅತ್ಯುತ್ತಮವಾಗಿ ಬೆಳೆಯುವ ಕಗ್ಗಕ್ಕೆ ಯಾವುದೇ ಇನ್ನಿತರ ಮೇಲುಗೊಬ್ಬರ, ತಳಕ್ಕೆ ಹಾಕುವ ಹಟ್ಟಿಗೊಬ್ಬರ ಬೇಕಾಗಲ್ಲ. ನಾಲ್ಕೂವರೆ ತಿಂಗಳ ಬೆಳೆಯಾದ ಇದನ್ನು ಒಮ್ಮೆ ಬಿತ್ತಿ ಸರಿಯಾಗಿ ಬೇರೂರುವಂತೆ ನೋಡಿಕೊಂಡು ಬಿಟ್ಟರೆ ಮುಗಿಯಿತು. ನಂತರ ಯಾವ ಪ್ರವಾಹ, ಸಮುದ್ರದ ಭರತ ಇಳಿತ ಯಾವುದಕ್ಕೂ ಇದು ಜಗ್ಗದೇ ಬೆಳೆದು ಬಿತ್ತಿದವನ ಬದುಕು ಕಾಯುತ್ತದೆ. ಉಳಿದ ಭತ್ತದ ಹಾಗೆ ನೀರು ಹಿಡಿಯುವ, ಬಿಟ್ಟುಕೊಡುವ ಆರೈಕೆ ಬೇಡದ ಕಗ್ಗ ಹದಿನೈದು ದಿನ ಪ್ರವಾಹದಲ್ಲಿ ಮುಳುಗಿದ್ದರೂ ಕೊಳೆಯುವುದಿಲ್ಲ.

ಕಗ್ಗ ಬಿತ್ತಿದ ಒಂದೆರಡು ದಿನ ಮಳೆ ಸರಿಯಾಗಿ ಬಿದ್ದರೆ ಮೊಳಕೆ ಮತ್ತು ಸುಂಕು ಕೆಸರಿಗೆ ಕಚ್ಚಿಕೊಂಡು ಚೆನ್ನಾಗಿ ಬೆಳೆಯುತ್ತದೆ. ಮಳೆ ಬೀಳದಿದ್ದರೆ ರೈತರೆಲ್ಲ ಕೂಡಿ ಸುತ್ತಲಿನ ಜಾಗದ ನಿಂತ ನೀರನ್ನು ಇದರ ಮೇಲೆ ತೋಕುತ್ತಾರೆ.

ಬಿತ್ತುವ ಎರಡು ದಿನ ಮೊದಲು ನೀರನ್ನೆಲ್ಲ ಬಿಟ್ಟುಕೊಡಲು ಖಾರ್ಲೆಂಡ್ ಬಂಡ್ ಎನ್ನುವ ಬಾರೀಕು ಗೇಟ್ ಸೇತುವೆಗಳನ್ನು ಹಿಂದೆ ಉಪಯೋಗಿಸುತ್ತಿದ್ದ ಕಾರಣ ಕಗ್ಗ ಚೆನ್ನಾಗಿ ಬೆಳೆಯುತ್ತಿತ್ತು. ಬಿತ್ತಿದ ಬೀಜವೆಲ್ಲವೂ ಬೆಳೆಯಾಗಿ ದಕ್ಕುತ್ತಿತ್ತು. ಈ ಬಂಡುಗಳು ಮಳೆಗಾಲದಲ್ಲಿ ನೆರೆಹಾವಳಿ ಹಾಗೂ ಬೇಸಿಗೆಯಲ್ಲಿ ಉಪ್ಪುನೀರು ನುಗ್ಗುವುದನ್ನು ಮುಕ್ಕಾಲುವಾಸಿ ತಡೆಯುತ್ತಿದ್ದವು. ಮತ್ತು ನೀರು ಕಡಿಮೆಯಾದಾಗ ನೀರು ಗಜನಿಗೆ ಬಿಟ್ಟುಕೊಳ್ಳಲೂ ನೆರವಾಗುತ್ತಿದ್ದವು.

1973 ರಲ್ಲಿ ರಾಮಕೃಷ್ಣ ಹೆಗಡೆಯವರು ಸಚಿವರಾಗಿದ್ದಾಗ ಗಜನಿ ಪ್ರದೇಶದ ಉದ್ದದ ಗುಂಟ ಹತ್ತಾರು ಕಿಲೋ ಮಿಟರ್ ಖಾರ್ಲೆಂಡ್ ಬಂಡ್ ನಿರ್ಮಿಸಿಕೊಟ್ಟಿದ್ದರು. ಆಗಿನ ಖಾರ್ಲೆಂಡ್ ಕಾಮಗಾರಿಯ ತಾಖತ್ತು ನಲವತ್ತೈದು ವರ್ಷದವರೆಗೂ ಕಗ್ಗ ಬೆಳೆಯುವ ಬಡ ರೈತನ ಹೊಟ್ಟೆಯನ್ನು ಇಲ್ಲಿವರೆಗೆ ಕಾದಿತ್ತು. ಈಗ ನಾಲ್ಕು ವರ್ಷದಿಂದ ಖಾರ್ಲೆಂಡ್ ಅಲ್ಲಲ್ಲಿ ಒಡೆದು ಪ್ರತಿ ವರ್ಷ ಜೂನ್ ತಿಂಗಳ ಆರಂಭದಲ್ಲಿ ಖಾರ್ಲೆಂಡ್ ದುರಸ್ತಿಗಾಗಿ ರೈತರು ಹೋರಾಟ ಮಾಡುವುದು ಸ್ಥಳೀಯ ಪತ್ರಿಕೆಯಲ್ಲಿ ದಿನವೂ ಸುದ್ದಿಯಾಗುತ್ತಿರುತ್ತದೆ.

ತೀರದ ರೈತರಿಗೆ ಗಜನಿ ಭೂಮಿ ಬಿಟ್ಟರೆ ಬೇರೆ ನೆಲೆಯಿಲ್ಲ. “ಅರವತ್ತು ಸಾವಿರ ಕ್ವಿಂಟಲ್‌ಗೂ ಹೆಚ್ಚು ಭತ್ತ ಆಗ್ತಿತ್ತಂತೆ ಆಗ. ಈಗ ಖಾರ್ಲೆಂಡ್ ಹಾಳಾಗಿ ಬಿತ್ತಿದ ಕಗ್ಗ ವರ್ಷಾ ವರ್ಷಾ ಸಮುದ್ರ ಪಾಲಾತಿದು.. ಹಂಗಾಗಿ ಈಗಿನ ಹುಡುಗರು ಅಷ್ಟು ಮನ್ಸು ಮಾಡುದಿಲ್ಲ ಕಗ್ಗ ಬಿತ್ತುಕೆ..” ಅನ್ನೋದು ಬೆಟ್ಕುಳಿ ಗಂಗೆಯ ಮಾತು.

“ನಾವು ಕಗ್ಗ ಬೆಳಿಯೂ ರೈತರೆಲ್ಲ ಸೇರಿ ಚೆನ್ನೈನ ಎಮ್ ಎಸ್ ಸ್ವಾಮಿನಾಥನ್ ಪ್ರತಿಷ್ಠಾನ ಮತ್ತು ಸಣ್ಣ ನೀರಾವರಿ ಇಲಾಖೆಯ ಸಲಹೆಯ ಮೇರೆಗೆ  ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸಿ ಬಂಡ್ ದುರಸ್ತಿಗೆ ಮತ್ತು ನಿರ್ಮಾಣಕ್ಕೆ ನಾಕೈದು ವರ್ಷದಿಂದ ಪ್ರಯತ್ನ ಮಾಡ್ತಿದ್ವಿ. ಈ ಸಲ ಖಾರ್ಲೆಂಡ್ ದುರಸ್ತಿಗೆ ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಯೊಜನೆಯಡಿಯಲ್ಲಿ ಮೂವತ್ತೆರಡು ಕೋಟಿ  ಮಂಜೂರಾಗಿದೆ. ಕಾಮಗಾರಿ ಯಾವಾಗ ಶುರು ಮಾಡ್ತಾರೆ ನೋಡಬೇಕು” ಎಂಬುದು ಕಲ್ಲಕಟ್ಟೆ ಊರಿನ ಕಗ್ಗ ಬೆಳೆವ ರೈತ ಲಕ್ಷ್ಮಣ ಪಟಗಾರ ಈ ವರ್ಷದ ನಿರೀಕ್ಷೆಯ ಮಾತು.   

ಬೆಳೆಯ ಬಗ್ಗೆ ಇಷ್ಟು ಮಾತಾದರೆ ಕಟಾವು ಕುರಿತಾಗಿಯೂ ಒಂದಷ್ಟು ಹೇಳುವುದಿದೆ.. ಅಕ್ಟೋಬರ್ ತಿಂಗಳಲ್ಲಿ ಮತ್ತೆ ಊರುಕೇರಿಯ ಜನವೆಲ್ಲ ಸೇರಿ ಸಾಮೂಹಿಕ ಕೊಯ್ಲಿಗಿಳಿಯುತ್ತಾರೆ. ಆಗ ಗಜನಿಯಲ್ಲಿ ಬಹುತೇಕ ನೀರು ಆವರಿಸಿಕೊಂಡಿರುವುದರಿಂದ, ಕೆಳಗಿಳಿದರೆ  ಹುಗಿದ ಕಾಲು ಎತ್ತಿಡಲಾಗದ ಕಾರಣ ದೋಣಿಯ ಮೇಲೆಯೇ ಹೋಗಿ ತೆನೆಯನ್ನು ಅಂದಾಜು ಒಂದು ಮೊಳದಷ್ಟು ಕೆಳಗೆ ಕಟಾವು ಮಾಡಿ ಸಣ್ಣ ಪಾತಿದೋಣಿಯಲ್ಲಿ ತರಬೇಕಾಗುತ್ತದೆ.

‘ಹಸಗಿ’ಯ ಲೆಕ್ಕದಲ್ಲಿ ಹಗ್ಗ ಹಿಡಿದು ಪಾಲು ಮಾಡಿ ಬಿತ್ತಿದ್ದರೂ ಒಂದೊಂದು ಕಡೆ ಕ್ಷಾರದಂಶ ಹೆಚ್ಚಿರುವಲ್ಲಿ ಕಗ್ಗ ಬೇರುಕೊಡದೇ ಗಂಟೆಗಟ್ಟಲೆ ಜಾಗ ಬೆಳೆಬರದೇ ಖಾಲಿ ಬಿದ್ದಿರುತ್ತದೆ. ಆಗ ಊರಿನ ಎಲ್ಲ ರೈತರು ಬೆಳೆಯನ್ನು ಸಮನಾಗಿ ಕುಟುಂಬದ ಪ್ರಕಾರ ಪಾಲು ಮಾಡಿಕೊಳ್ಳುತ್ತಾರೆ. ಕೂಡಿ ಬಾಳುವ, ಎಲ್ಲರ ಹೊಟ್ಟೆ ತುಂಬಿಯೇ ಇರಲಿ ಎಂಬ ರೈತನ ಎದೆಯಲ್ಲಿ ಸ್ವಾರ್ಥವಿಲ್ಲದ ಬರಿಯ ಭಾವಗೀತ ಹರಿಯುತ್ತಿರುದರಿಂದಲೇ ನಾವು ಉಂಡುಟ್ಟು ಇಂದಿಗೂ ಸಂತೃಪ್ತಿಯಾಗಿರೋದು..

ಕಬ್ಬಿಣ, ಸೋಡಿಯಂ, ಪೊಟ್ಯಾಶಿಯಂ ಅಂಶ ಭರಪೂರ ತುಂಬಿರುವ ಕಗ್ಗ ಅಕ್ಕಿ ಇನ್ನೂ ಹತ್ತು ಹಲವು ಪೌಷ್ಟಿಕಾಂಶಗಳ ಆಗರ. ಅನಾರೋಗ್ಯ ಪೀಡಿತರಿಗೆ, ಮಧುಮೇಹದವರಿಗೆ ಬಹಳ ಒಳ್ಳೆಯದು. ಅಪರೂಪವಾಗುತ್ತಿರುವ ಈ ಅಕ್ಕಿಯನ್ನು ಉಳಿಸಿ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಇತ್ತೀಚೆಗೆ ಕುಮಟೆಯ ಮಾಣಿಕಟ್ಟೆ ಎಂಬ ಊರು ಸುತ್ತಲಿನ ಹತ್ತು ಹಲವು ಊರಿನ ಸಾವಿರಗಟ್ಟಲೆ ರೈತರೊಟ್ಟಿಗೆ ಸೇರಿ ಬೀಜಬ್ಯಾಂಕ್ ಸ್ಥಾಪಿಸಿದೆ.

ಅವರವರ ಖಾತೆಯಲ್ಲಿ ಇರುವ ಕಗ್ಗವನ್ನು ಪ್ರತಿವರ್ಷ ಅವರೇ ಬಿತ್ತಿಬೆಳೆಯುವ, ಕಟಾವು ಮಾಡುವ ಸಾಮೂಹಿಕ ಕ್ಷೇತ್ರೋತ್ಸವ ಆಚರಿಸುತ್ತ ಅಪರೂಪದ ಕಗ್ಗ ನಾಶದತ್ತ ಸಾಗದ ಹಾಗೆ ನೋಡಿಕೊಳ್ಳುತ್ತಿದೆ. ನಿಮಗೆ ಗೊತ್ತಿದೆಯೋ ಇಲ್ಲವೋ ಕಗ್ಗ ಭತ್ತದ ಅಕ್ಕಿಯ ಕೊರತೆ ಸೃಷ್ಟಿಯಾಗುತ್ತಿರುವ/ಯಾಗಿಸುತ್ತಿರುವ ದಿನಮಾನವಾದ ಇಂದು ಅದರ ಬೆಲೆ ಆನ್‌ಲೈನಿನಲ್ಲಿ ಒಂದು ಕಿಲೋಗೆ ನಾಲ್ಕುನೂರು ರೂಪಾಯಿ.. ಅಂದರೆ ಅದರ ಮಹತ್ವ ಎಷ್ಟಿರಬಹುದು ನೀವೇ ಊಹಿಸಿ…

ಏನೇ ಇರಲಿ.. ನಮ್ಮೂರ ಖಾರ್ಲೆಂಡ್ ಬೇಗ ದುರಸ್ತಿಯಾಗಲಿ.. ಮತ್ತು ಕಗ್ಗದ ಕಡೆಗೆ ಈಗಿನ ಹುಡುಗರ ದೃಷ್ಟಿ ಹೆಚ್ಚೆಚ್ಚು ಹಾಯಲಿ..

February 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಗೀತಾ ಎನ್ ಸ್ವಾಮಿ

    ಅತ್ಯದ್ಭುತ ನಿರೂಪಣೆ ರೇಣುಕಾ ಮೇಡಂ.
    ಕಗ್ಗ ನೆಲ್ಲಿನ ಕುರಿತಾಗಿ ಎಷ್ಟೊಂದು ಅಗತ್ಯವಾದ ಮಾಹಿತಿ ಒದಗಿಸಿದ್ದೀರಿ. ಈಗಿನ ಸಮುದಾಯಕ್ಕೆ ಇಷ್ಟೆಲ್ಲಾ ಪೌಷ್ಠಿಕತೆಯುಳ್ಳ ನೆಲ್ಲನ್ನು ಬಳಸುವ ಬಗ್ಗೆ ಅಭಿಯಾನ ಹೊರಟು ಅರಿವು ಮೂಡಿಸುವಷ್ಟು ಕಸುವುಳ್ಳ ಬರಹ. ಕಡಲ ನೆರೆಯ ಬಾಳು,ನೆಲ, ಕೃಷಿ, ಅಲ್ಲಿ ಎದುರಾಗುವ ಸಮಸ್ಯೆಗಳು ಎಲ್ಲವನ್ನೂ ವಿವರಿಸಿರುವ ಕ್ರಮಕ್ಕೆ ಶರಣು ಮೇಡಂ. ನಿಮ್ಮ ಅನುಭವ ಪ್ರಜ್ಞೆಯ ಇನ್ಫಿನಿಟಿಯ ಜೊತೆಗೂಡಿ ಅಬ್ಧಿಯ ಅಲೆಗಳ ಸದ್ದಿನೊಂದಿಗೆ ಕುಳಿತು ಮುದಗೊಂಡ ಅನುಭೂತಿ ದಕ್ಕಿತು. ಅವಧಿ ಬಳಗಕ್ಕೆ, ನಿಮಗೆ ನಮಸ್ಕಾರಗಳು.

    ಪ್ರತಿಕ್ರಿಯೆ
  2. Sujata Revankar

    Super ರೇಣು.ಇಷ್ಟೆಲ್ಲಾ ಮಾಹಿತಿ ಹೇಗೆ ಕೊಟ್ಟೆ..ನಿಜವಾಗಲೂ ಹೆಮ್ಮೆ ಆಗ್ತಿದೆ ನನ್ನ ಗೆಳತಿಯ ಮಾಹಿತಿಕೋಶ ಓದಿ..well done .

    ಪ್ರತಿಕ್ರಿಯೆ
  3. Deepa Hiregutti

    ಒಳ್ಳೆ ಮಾಹಿತಿ ಮತ್ತು ಲೇಖನ ರೇಣು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: