ಛಾಯಾಚಿತ್ರದಲ್ಲಿ ಹಕ್ಕುಸ್ವಾಮ್ಯ..

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು.

ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ ಹೆಸರು ಇರುತ್ತದೆ.

ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ ಮಾಡುತ್ತಿದ್ದಾರೆ.

ಸಂಚಯಸಂಚಿಕಿಂದರಿಜೋಗಿ ಹೀಗೆ ನಾನಾ ಮುಖಗಳಲ್ಲಿ ಅವರ ಪ್ರತಿಭೆ ಪ್ರಕಟವಾಗಿದೆ.

| ಕಳೆದ ಸಂಚಿಕೆಯಿಂದ |

ಪೋಟೋಗ್ರಾಫ್ / ಛಾಯಾಚಿತ್ರಗಳು – ನಿಮ್ಮನ್ನು ನಿಮ್ಮ ಗೆಳೆಯ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದರೆ, ಅದರ ಕೃತಿಸ್ವಾಮ್ಯ ಯಾರಿಗೆ ಸೇರುತ್ತದೆ? ಈ ಪ್ರಶ್ನೆ ನಿಮ್ಮನ್ನು ಕಾಡಿದೆಯೇ? ಹಾಗಿದ್ದಲ್ಲಿ ಈ ಲೇಖನ ನಿಮಗಾಗಿ. 

ಭಾರತದಲ್ಲಿ ಫೋಟೋಗ್ರಾಫ್‌ಗಳು Copyright Act 1957‌ದ ಪರಿಚ್ಛೇದ ೨(c)ರ ಅಡಿಯಲ್ಲಿ ‍ಕೌಶಲ್ಯದ ಕೆಲಸಗಳ ಅಡಿ ಸಂರಕ್ಷಿಸಲ್ಪಟ್ಟಿವೆ. ಫೋಟೋಗ್ರಾಫ್‌ಗಳು ಕಾಪಿರೈಟ್ ಅಡಿ ಸಂರಕ್ಷಿಸಲ್ಪಟ್ಟಿದ್ದರೂ, ಕೌಶಲ್ಯ/ಕಲಾತ್ಮಕ ಕೆಲಸಗಳಾಗಿ ಅವುಗಳ ‍ಅರ್ಹತೆ/ಗುಣಮಟ್ಟಗಳನ್ನು ‍ಅಳೆಯುವುದು ಅಪ್ರಸ್ತುತವಾಗುತ್ತದೆ. ಹೀಗಾಗಿ ಕೆಟ್ಟ ಪೋಟೋಗ್ರಾಫರ್ ಆಗಿದ್ದರೂ ಅದು ಕಾನೂನಾತ್ಮಕವಾಗಿ ಕಾಪಿರೈಟ್ ಹೊಂದಿರುತ್ತದೆ. 

ಕಲಾತ್ಮಕ ಕೃತಿಯಲ್ಲಿ ಕೃತಿಸ್ವಾಮ್ಯವನ್ನು ರಕ್ಷಿಸಲು ಅಗತ್ಯವಾದ ಅಂಶವೆಂದರೆ, ಅದನ್ನು ಸೆರೆಹಿಡಿಯಲು ಸ್ವಲ್ಪ ಮಟ್ಟಿಗೆ ಕೌಶಲ್ಯ ಮತ್ತು ಶ್ರಮವನ್ನು ಖರ್ಚು ಮಾಡಿದ್ದು, ಅದು ಸ್ವಂತ ಕೆಲಸವಾಗಿರಬೇಕು. 

‍ಭಾರತದ ಕಾಪಿರೈಟ್ ಆಕ್ಟ್ ನ ಪರಿಚ್ಛೇದ ೨೫ರ ಪ್ರಕಾರ, ಫೋಟೋಗಳನ್ನು ಪ್ರಕಟಿಸಿದ/ಕ್ಲಿಕ್ಕಿಸಿದ ದಿನದಿಂದ ೬೦ ವರ್ಷಗಳವರೆಗೆ ಕಾಯ್ದೆಯ ಅಡಿ ಸಂರಕ್ಷಿಸಲಾಗುತ್ತದೆ [ಫೋಟೋಗಳು ಎಲ್ಲೂ ಪ್ರಕಟಗೊಂಡಿರಬೇಕು ಎಂದೇನಿಲ್ಲ – ಇದು ಫೋಟೋ ತೆಗೆದ ದಿನದಿಂದ ಅನ್ವಯವಾಗುತ್ತದೆ]. ಈ ಕಾಪಿರೈಟ್ ಕಾಲಾವಧಿ ದೇಶದಿಂದ ದೇಶಕ್ಕೆ ಬದಲಾಗುತ್ತದೆ.  ಉದಾಹರಣೆಗೆ, ಅಮೇರಿಕ ಮತ್ತು ಯುರೋಪಿಯನ್ ‍ಒಕ್ಕೂಟದಲ್ಲಿ ಇದು ೭೦ ವರ್ಷಗಳು, ಆದರೆ ಬರ್ನೆ ಕನ್ವೆಷನ್ ಕನಿಷ್ಠ ೫೦ ವರ್ಷಗಳ ಸಂರಕ್ಷಣೆಯನ್ನು ನೀಡುತ್ತದೆ. 

ಭಾರತೀಯ ಕಾಪಿರೈಟ್ ಆಕ್ಟ್, ೧೮೮೬ರ ಸಾಹಿತ್ಯ ಮತ್ತು ಕಲಾತ್ಮಕ ಕೃತಿಗಳ ರಕ್ಷಣೆಗಾಗಿ ನೆಡೆದ ಬರ್ನೆ ಕನ್ವೆನ್ಷನ್‌, ಯುನಿವರ್ಸಲ್ ಕಾಪಿರೈಟ್ ಕನ್ವೆನ್ಷನ್ 1951, ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ ಸಂಬಂಧಿತ ಅಂಶಗಳ ಒಪ್ಪಂದ (TRIPS) 1995 ರ ಒಪ್ಪಂದದಂತಹ ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಅನುಸಾರವಾಗಿದೆ. ಅಂತರರಾಷ್ಟ್ರೀಯ ಕೃತಿಸ್ವಾಮ್ಯ ಸಮಾವೇಶ ಹಾಗೂ ಒಪ್ಪಂದದ ಸದಸ್ಯ ರಾಷ್ಟ್ರಗಳಲ್ಲಿ ಹಕ್ಕುಸ್ವಾಮ್ಯವನ್ನು ರಕ್ಷಿಸಲು ಅಂತರರಾಷ್ಟ್ರೀಯ ಕಾಪಿರೈಟ್ ಆದೇಶವನ್ನು (The International Copyright Order) ಅಂಗೀಕರಿಸಲಾಗಿದೆ. ಅದರಂತೆ ವಿದೇಶಿ ಕಲಾತ್ಮಕ ಕೃತಿಗಳಿಗೆ ಭಾರತದಲ್ಲಿ ರಕ್ಷಣೆ ನೀಡಲಾಗುತ್ತದೆ.

ಸಾಮಾನ್ಯವಾಗಿ, ಲೇಖಕನು ತಾನು ರಚಿಸಿದ ಕೃತಿಯ ಹಕ್ಕುಸ್ವಾಮ್ಯದ ಮೊದಲ ಮಾಲೀಕ. ಛಾಯಾಚಿತ್ರದ ಸಂದರ್ಭದಲ್ಲಿ, ಇದಕ್ಕೆ ವಿರುದ್ಧವಾಗಿ ಒಪ್ಪಂದವಿಲ್ಲದಿದ್ದರೆ ಛಾಯಾಗ್ರಾಹಕ ಮೊದಲ ಮಾಲೀಕರಾಗುತ್ತಾರೆ. ಆದ್ದರಿಂದ ನೀವು ಕ್ಯಾಮೆರಾವನ್ನು ಹೊಂದಿದ್ದರೂ, ಅದನ್ನು ಬಳಸಿ ನಿಮ್ಮ ಸ್ನೇಹಿತ ಛಾಯಾಚಿತ್ರ ತೆಗೆದ ಪಕ್ಷದಲ್ಲಿ, ಆ ಚಿತ್ರದ ಹಕ್ಕುಸ್ವಾಮ್ಯವನ್ನು ನಿಮ್ಮ ಸ್ನೇಹಿತನಿಗೆ ಸೇರುತ್ತದೆ – ಇದು ನಿಮ್ಮನ್ನು ಬೆರಗುಗೊಳಿಸಿದರೂ, ಕಾನೂನಾತ್ಮಕವಾಗಿ ಸತ್ಯ. ಕಾಪಿರೈಟ್ ಕಾಯ್ದೆ, ಛಾಯಾಗ್ರಾಹಕನಿಗೆ ಅವನ್ನು ಮರುಸೃಷ್ಟಿಸುವ, ಕೃತಿಯ ಯಾವುದೇ ರೂಪಾಂತರವನ್ನು ಮಾಡುವ ಮತ್ತು  ಪ್ರಕಟಿಸುವ ಹಕ್ಕುಗಳನ್ನು ನೀಡುತ್ತದೆ.

‌ಛಾಯಾಗ್ರಾಹಕ ತನ್ನ ಛಾಯಾಚಿತ್ರದ ಕೃತಿಸ್ವಾಮ್ಯವನ್ನು ನೋಂದಾಯಿಸುವ ಆಯ್ಕೆ ಇದೆ. ಆದಾಗ್ಯೂ, ಕೃತಿಸ್ವಾಮ್ಯ ರಕ್ಷಣೆಗಾಗಿ, ನೋಂದಣಿಯನ್ನು ಶಿಫಾರಸು ಮಾಡಲಾಗಿದ್ದರೂ, ಅದು ಕಡ್ಡಾಯವಲ್ಲ. ಕೃತಿಯನ್ನು ರಚಿಸಿದ ಕೂಡಲೇ ಕೃತಿಸ್ವಾಮ್ಯದ ಹಕ್ಕು ಸೃಷ್ಟಿಯಾಗುತ್ತದೆ. ಕಾಪಿರೈಟ್ ಕಾನೂನಿನಡಿಯಲ್ಲಿ ಕಲ್ಪನೆಯ ಅಭಿವ್ಯಕ್ತಿಗೆ ಕೃತಿಸ್ವಾಮ್ಯವಿದೆ,  ಆದರೆ ಕಲ್ಪನೆಗೇ ಕಾಪಿರೈಟ್ ಇರುವುದಿಲ್ಲ. [ಆದ್ದರಿಂದ, ನಾನು ಸೂರ್ಯಾಸ್ತದ ಚಿತ್ರವನ್ನು ಕ್ಲಿಕ್ಕಿಸಿ ಮತ್ತು ನೀವು ಅದೇ ಸೂರ್ಯಾಸ್ತದ ಚಿತ್ರವನ್ನು ತೆಗೆದುಕೊಂಡರೆ, ನಾನು ನಿಮ್ಮನ್ನು ತಡೆಯಲು ಸಾಧ್ಯವಿಲ್ಲ, ಆದರೆ ನೀವು ನಿಮ್ಮ ಟಿ-ಶರ್ಟ್‌ನಲ್ಲಿ ನನ್ನ ಸೂರ್ಯಾಸ್ತದ ಚಿತ್ರವನ್ನು ಬಳಸಿದರೆ, ನಾನು ನಿಮ್ಮನ್ನು ತಡೆಯಬಹುದು].

ಕೃತಿಸ್ವಾಮ್ಯ ಕಾಯಿದೆ‌ಯ ಸೆಕ್ಷನ್ 51 ಛಾಯಾಗ್ರಾಹಕರ ಹಕ್ಕುಸ್ವಾಮ್ಯ‍ ಉಲ್ಲಂಘನೆಯನ್ನು ರಕ್ಷಿಸುತ್ತದೆ. ಲೇಖಕ / ಮಾಲೀಕರ ಹಕ್ಕುಗಳ ಯಾವುದೇ ಉಲ್ಲಂಘನೆಯು ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದೆ. ಅಲ್ಲದೆ, ಭಾರತದ ನ್ಯಾಯಾಲಯಗಳು ‌ಛಾಯಾಗ್ರಾಹಕ‌ನ ಅನುಮತಿಯಿಲ್ಲದೆ, ಮತ್ತೊಂದು ಪ್ರಕಟಣೆಯಿಂದ ಕೃತಿಯೊಂದನ್ನು ನಕಲಿಸಿ ಅದನ್ನು ಪ್ರಕಟಿಸುವುದನ್ನು ಛಾಯಾಚಿತ್ರದಲ್ಲಿನ ಹಕ್ಕುಸ್ವಾಮ್ಯದ ಉಲ್ಲಂಘನೆ ಎಂದು ಅಭಿಪ್ರಾಯಪಟ್ಟಿವೆ.

ಆದಾಗ್ಯೂ, ಛಾಯಾಗ್ರಾಹಕನನ್ನು ಹೊರತುಪಡಿಸಿ ಒಬ್ಬ ವ್ಯಕ್ತಿಯು ಅದರಿಂದ ಅನಗತ್ಯ ಲಾಭವನ್ನು ಗಳಿಸುವ ಯಾವುದೇ ದುರುದ್ದೇಶವಿಲ್ಲದೆ ಛಾಯಾಚಿತ್ರಗಳನ್ನು ಬಳಸಬಹುದು. ಒಬ್ಬ ವ್ಯಕ್ತಿಯು ಬೋಧನೆ/ಸಂಶೋಧನಾ ಉದ್ದೇಶಗಳು, ಶಾಸಕಾಂಗ ಉದ್ದೇಶಗಳು, ನ್ಯಾಯಾಂಗ ಪ್ರಕ್ರಿಯೆಗಳಿಗೆ ಛಾಯಾಚಿತ್ರಗಳನ್ನು ಬಳಸಬಹುದು. ಇದು ನ್ಯಾಯಯುತ ಬಳಕೆಯ ತತ್ವಕ್ಕೆ (principle of fair use) ಒಳಪಟ್ಟಿದೆ ಮತ್ತು ಛಾಯಾಗ್ರಾಹಕರ ಪೂರ್ವಾನುಮತಿ ಇಲ್ಲದೆ ಛಾಯಾಚಿತ್ರಗಳನ್ನು ಬಳಸಲು ಅನುಮತಿಸಲಾಗಿದೆ.

ಕೃತಿಸ್ವಾಮ್ಯ ಕಾಯ್ದೆ, 1957 ಒಂದು ಸಮಗ್ರ ಕಾಯಿದೆಯಾಗಿದ್ದು, ಇದು ಭಾರತದಲ್ಲಿ ಛಾಯಾಗ್ರಾಹಕರ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಕಾಪಾಡುತ್ತದೆ. ಕಾನೂನು ಛಾಯಾಗ್ರಾಹಕರು ತೆಗೆದ ಸಾಂಪ್ರದಾಯಿಕ/ಕಾಗದದ ಛಾಯಾಚಿತ್ರಗಳನ್ನು ಮಾತ್ರವಲ್ಲದೆ ಆನ್‌ಲೈನ್ ಛಾಯಾಚಿತ್ರಗಳನ್ನೂ ರಕ್ಷಿಸುತ್ತದೆ – ಆದರೆ ಇದನ್ನು ಸ್ಪಷ್ಟವಾಗಿ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿಲ್ಲ. ಅಸ್ತಿತ್ವದಲ್ಲಿರುವ ಹಕ್ಕುಸ್ವಾಮ್ಯ ಕಾನೂನು ಇತ್ತೀಚಿನ ತಂತ್ರಜ್ಞಾನದಿಂದ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ನಿವಾರಿಸಬಲ್ಲದು ಮತ್ತು ಹಕ್ಕುಸ್ವಾಮ್ಯದ ರಕ್ಷಣೆಗೆ ಬಲವಾದ ಕಾನೂನು ನೆಲೆಯನ್ನು ಹೊಂದಿದೆ.

‍ಫೇಸ್‌ಬುಕ್ ಅಥವಾ ಇನ್ನೇಲ್ಲೇ ಆಗಲಿ ಬೇರೆಯವರ ಚಿತ್ರಗಳನ್ನು ಬಳಸಿಕೊಳ್ಳುವಾಗ ಅದರ ಮೂಲ ಛಾಯಾಗ್ರಹಕನನ್ನು/ಕೃತಿಯನ್ನು ಸೃಷ್ಟಿಸುವುದನ್ನು ನೀವು ಬೇಕೆಂದೇ ಕೈಬಿಡುತ್ತಿದ್ದಲ್ಲಿ, ಮತ್ತೋರ್ವರು ಅದನ್ನು ನಕಲಿಸಿ ಬಳಸಿ ಕಾಪಿರೈಟ್ ಉಲ್ಲಂಘಿಸುವ ಸಾಧ್ಯತೆ ಹೆಚ್ಚಿರುತ್ತದೆ. ಯಾವುದೇ ಕೃತಿಯ ಹಕ್ಕು ಮತ್ತು ಅದನ್ನು ಸೃಷ್ಟಿಸಲು ವ್ಯಯಿಸಿದ ಕಿಂಚಿತ್ ಶ್ರಮವನ್ನೂ ಗೌರವಿಸುವ ಅಭ್ಯಾಸವನ್ನು ಇಂಟರ್ನೆಟ್ ಬಳಕೆದಾರರು ಬೆಳಸಿಕೊಳ್ಳಬೇಕಿದೆ.

ಇದನ್ನು ಸಾಧ್ಯವಾಗಿಸಲು, ಛಾಯಾಗ್ರಾಹಕರು ತಮ್ಮ ಛಾಯಾಚಿತ್ರಗಳನ್ನು ಇಂಟರ್ನೆಟ್‌ಗೆ ಹರಿಬಿಡುವಾಗ ಯಾವ ರೀತಿ ಇದನ್ನು ಇತರರು ಬಳಸಬಹುದು ಎಂದು ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್ ಬಳಸಿ ತಿಳಿಸಬಹುದು – ಇದು ಮೂಲ ಕೃತಿಯ ಸೃಷ್ಟಿಕರ್ತನನ್ನು ನೆನೆಯುವ ಕರಾರನ್ನು ಒಡ್ಡುವ ಮೂಲಕ, ಕೃತಿಸಾಮ್ಯದ ಉಲ್ಲಂಘನೆ ಆಗದಂತೆ ಜಗತ್ತಿನ ಎಲ್ಲರೊಡನೆ ಆ ಕೃತಿಯುನ್ನು ಮೆಚ್ಚುವ ಹಾಗೂ ಇಷ್ಟವಾದಲ್ಲಿ ಆರಾಧಿಸುವ ಅವಕಾಶವನ್ನು ಸುಲಭವಾಗಿ ಕಲ್ಪಿಸುತ್ತದೆ. 

‍ಲೇಖಕರು ಓಂಶಿವಪ್ರಕಾಶ್

February 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: