ಪಾತ್ರಗಳ ಹುಡುಕಾಟದಲ್ಲಿ ಮಂಸೋರೆ..

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು.

ಮೂರನೇ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು ಹಾಕಿದ್ದಾರೆ.

ಇವರ ಮೊದಲ ಚಿತ್ರ ‘ಹರಿವು’ ನಿರ್ಮಾಣಗೊಂಡ ಕಥನವೂ ‘ಅವಧಿ’ಯಲ್ಲಿಯೇ ಪ್ರಕಟವಾಗಿತ್ತು.

|ಕಳೆದ ಸಂಚಿಕೆಯಿಂದ|

ಸಿನೆಮಾದಲ್ಲಿ ಪಾತ್ರ ಮಾಡಬೇಕಿರುವ ಪಾತ್ರಧಾರಿಗಳು ಬದಲಾಗುವುದು ವಿಶೇಷವೇನಲ್ಲಾ, ಆದರೆ ಇಂತಹ ನಟರಾದರೇ ಚೆಂದ ಎಂದು ನಿರ್ಧರಿಸಿ, ಅವರನ್ನೇ ಕಲ್ಪಿಸಿಕೊಂಡು ಪಾತ್ರಗಳನ್ನು ಡಿಸೈನ್ ಮಾಡಿಕೊಂಡಿರುವಾಗ ಬದಲಾಯಿಸಿದರೆ ನಿರ್ದೇಶಕನ ಪರಿಸ್ಥಿತಿ ವಿವರಿಸೋದಿಕ್ಕು ಕಷ್ಟ. ಮುಂದೆ ಬದಲಾದ ನಟ ಎಷ್ಟೇ ಅದ್ಭುತವಾಗಿ ನಟಿಸುತ್ತಿದ್ದರೂ ಸಹ, ಆ ನಟ ಮಾಡಿದ್ದಿದ್ರೆ? ಇನ್ನೂ ಚೆನ್ನಾಗಿ ಬರ್ತಿತ್ತೇನೋ ಎಂಬ ಕೊರಗಿನಲ್ಲೇ ಚಿತ್ರೀಕರಣ ಆರಂಭಿಕ ದಿನಗಳನ್ನು ಕಳೆಯಬೇಕಾಗುತ್ತದೆ. ಅದ್ಯಾವುದೋ ಒಂದು ಪುಟ್ಟ ಸನ್ನಿವೇಶ ಬರುವವರೆಗೂ ಇದು ತಪ್ಪಿದ್ದಲ್ಲಾ, ಆ ಪುಟ್ಟ ಸನ್ನಿವೇಶದಲ್ಲಿ ‘ಹಿಂದೆ ಇರಬೇಕಿದ್ದ’ ನಟನ ಜಾಗವನ್ನು ಪ್ರಸ್ತುತ ಅಭಿನಯಿಸುತ್ತಿರುವ ನಟ ಆಕ್ರಮಿಸಿಕೊಂಡು ಬಿಡುತ್ತಾನೆ. ಆನಂತರದೆಲ್ಲಾ ಸುಲಭವಾಗಿ ನಡೆದು ಹೋಗುತ್ತದೆ.

ಸಂಪತ್ ಜಾಗಕ್ಕೆ ಸಂಚಾರಿ ವಿಜಯ್ ಸರ್ ಬಂದ ಮೇಲೆ ಚಿತ್ರೀಕರಣದ ಮೊದಲನೆ ದಿನದ ಮೊದಲಾರ್ಧ ಇದೇ ಸಮಸ್ಯೆಯನ್ನು ಎದುರಿಸಿದೆ. ಅವರು ಎಷ್ಟೇ ಚೆನ್ನಾಗಿ ಅಭಿನಯ ಮಾಡುತ್ತಿದ್ದರೂ ಸಹ ಏನೋ ಕೊರತೆ. ಸಮಾಧಾನ ಆಗ್ತಾನೆ ಇರ್ಲಿಲ್ಲಾ. ಮಧ್ಯಾಹ್ನದ ಒಳಗೆ ಮುಗಿಯಬೇಕಿದ್ದ ಎರಡು ದೃಶ್ಯಗಳಲ್ಲಿ ಒಂದು ಮಾತ್ರ ಮುಗಿಸಲಷ್ಟೇ ಸಾಧ್ಯವಾಯಿತು. ಆದರೆ ಮಧ್ಯಾಹ್ನ ಮಾಡಿದ ದೃಶ್ಯದಲ್ಲಿ, ನನಗೆ ಖುಷಿಯಾಗುವಷ್ಟು ಚೆಂದವಾಗಿ ಎರಡನೆಯ ದೃಶ್ಯ ಮೂಡಿ ಬಂತು. ಅಲ್ಲಿಂದ ವಿಜಯ್ ಅವರೇ ಪೂರ್ತಿಯಾಗಿ ಸುರೇಶನ ಪಾತ್ರವನ್ನು ಆವರಿಸಿಬಿಟ್ಟರು.

ಇದು ಕೇವಲ ಸುರೇಶನ ಪಾತ್ರದ ವಿಷಯದಲ್ಲಷ್ಟೇ ನಡೆದದ್ದಲ್ಲಾ, ಮತ್ತೊಂದು ಪಾತ್ರ ಜಯಮ್ಮನದು, ಮನೆ ಕೆಲಸದಾಕೆ ಜಯಮ್ಮ, ನಾತಿಚರಾಮಿಯಲ್ಲಿ ಬಹುಮುಖ್ಯವಾದ ಪಾತ್ರ. ಕಥೆಯಲ್ಲಿನ ಗೌರಿ ಮತ್ತು ಸುಮ ಇಬ್ಬರ ವ್ಯಕ್ತಿತ್ವಕ್ಕೂ ತದ್ವಿರುದ್ದವಾಗಿ ಜೀವನವನ್ನು ನೋಡುವ, ಜೀವನವನ್ನು ಅನುಭವಿಸಿ, ಬದುಕಿನ ಓಘದೊಂದಿಗೆ ಅಡ್ಜಸ್ಟ್ ಮಾಡಿಕೊಂಡು ಹೋಗುವ ಪಾತ್ರ. ಆ ಪಾತ್ರಕ್ಕೆ ಹೆಚ್ಚಿನ ನಿರೀಕ್ಷೆಗಳೇನೂ ಇಲ್ಲಾ, ಇದ್ದಷ್ಟು ದಿನ ಖುಷಿಯಾಗಿರಬೇಕೆಂಬ ತತ್ವದಂತೆ ಬದುಕುವ ಪಾತ್ರಕ್ಕೆ ಒಳ್ಳೆಯ ನಟಿಯನ್ನು ಹುಡುಕುವಾಗ ಹಳೆಯ ಪರಿಚಯದ ಸಾಕಷ್ಟು ಸಿನೆಮಾಗಳಲ್ಲಿ ಕಾಣಿಸಿಕೊಂಡಿರುವ ನಟಿಯೊಬ್ಬರನ್ನು ಕರೆದು ಪಾತ್ರದ ವಿವರಣೆ ನೀಡಿ, ಸಣ್ಣದಾಗಿ ಆಡಿಷನ್ ಕೂಡ ಮಾಡಿದ್ವಿ, ನಾನು ಸಂಧ್ಯಾ ಮೇಡಂ ಕಲ್ಪಿಸಿಕೊಂಡಿದ್ದಕ್ಕಿಂತ ಹೆಚ್ಚು ಲವಲವಿಕೆಯಿಂದ ಕಾಣುವಂತೆ ನಟಿಸಿದರು. ಖುಷಿಯಾಗೋಯ್ತು.

ಸರಿ ನಮ್ಮ ಮುಂದಿನ ಟಾಸ್ಕ್, ನಮ್ಮ ಕಡಿಮೆ ಬಡ್ಜೆಟ್ ಹಾಗೂ ಪೇಮೆಂಟ್ ಎಂಬ ಗೌರವಧನ ನೀಡುವ ಬಗ್ಗೆ ಕ್ಲಾರಿಟಿ ಕೊಟ್ಟೆ, ಮೊದಲಿಗೆ ಅಷ್ಟು ಕಡಿಮೆ ಸಾಧ್ಯವಾಗುವುದಿಲ್ಲಾ ಎಂದು ಹೇಳಿದರೂ ಕೊನೆಗೆ ಒಂದು ಷರತ್ತಿನ ಮೇಲೆ ಒಪ್ಪುವುದಾಗಿ ಹೇಳಿದರು, ಅದೇನೆಂದರೆ ಈ ಸಿನೆಮಾದಲ್ಲಿ ಅವರ ತಮ್ಮನಿಗೂ ಪಾತ್ರ ನೀಡುವುದಾದರೆ ಮಾತ್ರ ಕಡಿಮೆ ಸಂಭಾವನೆಗೆ ಕೆಲಸ ಮಾಡುವೆ, ಇಲ್ಲವಾದರೆ ಮಾಡುವುದಿಲ್ಲ ಎಂದು ಕಡ್ಡಿತುಂಡು ಮಾಡಿದಂತೆ ಹೇಳಿಬಿಟ್ಟರು.

ಸಿನೆಮಾದಲ್ಲಿ ಇರುವ ಬೇರೆ ಪಾತ್ರಗಳಿಗೆ ಎಲ್ಲರೂ ಆಯ್ಕೆಯಾಗಿ, ಅವರಿಗೆ ಕನ್ಫರ್ಮ್ ಕೂಡ ಮಾಡಿದ್ದೆ. ಅವರಿಗೆ ಈಗ ಆಗಲ್ಲಾ ಅಂತ ಹೇಳಲು ಬರುವುದಿಲ್ಲಾ. ಬೇಕಿದ್ದರೆ ಮುಂದಿನ ಸಿನೆಮಾ ಅಥವಾ ಸ್ನೇಹಿತರ ಬೇರೆ ಸಿನೆಮಾಗಳಿಗೆ ಸಜೆಸ್ಟ್ ಮಾಡುವುದಾಗಿ ಹೇಳಿದರೂ ಸಹ, ಅವರು ಒಪ್ಪಲೇ ಇಲ್ಲಾ. ಕೊನೆಗೆ ಎರಡು ದಿನ ಸಮಯ ಕೊಡಿ ಎಂದು ಹೇಳಿ ಅವರನ್ನು ಕಳಿಸಿಕೊಟ್ಟು ಮುಂದೇನು ಎಂದು ಯೋಚನೆ ಮಾಡಿದೆ.

ನನ್ನ ಸ್ನೇಹಿತರಲ್ಲಿ ಹಲವರನ್ನು ವಿಚಾರಿಸಿದೆ ಈ ಪಾತ್ರಕ್ಕೆ ಸೂಕ್ತವ್ಯಕ್ತಿ ಯಾರಾದರು ಸಿಗಬಹುದಾ ಅಂತ, ಪಾತ್ರದ ವಿವರ ಕೇಳಿದವರೆಲ್ಲಾ, ಸೂಚಿಸಿದ್ದು, ಒಬ್ಬರನ್ನೇ, ಆದರೆ ಅವರು ಅಂತಹ ಪಾತ್ರಗಳನ್ನು ಸಾಕಷ್ಟು ಸಿನೆಮಾಗಳಲ್ಲಿ ಮಾಡಿರುವುದರಿಂದ ಕೇಳುವುದಕ್ಕೆ ನನಗೆ ಮುಜುಗರ, ಜೊತೆಗೆ ನಾನು ಅದೇ ಸ್ಟೀರಿಯೋ ಟೈಪ್ ಮಾದರಿಯ ಪಾತ್ರಕ್ಕೆ ಕರೆಯುತ್ತಿದ್ದೇನೆ ಎಂದು ಅವರೆಲ್ಲಿ ಬೇಸರಿಸಿಕೊಳ್ಳುತ್ತಾರೋ ಎಂಬ ಅಂಜಿಕೆ, ಎರಡು ದಿನಗಳು ಕಾದು, ಕೊನೆಗೆ ಅನ್ಯ ಮಾರ್ಗವಿಲ್ಲದೆ ಅವರಿಗೆ ಕರೆ ಮಾಡಿ, ಎಲ್ಲಾ ವಿವರಗಳನ್ನೂ ತಿಳಿಸಿ, ಸಂಭಾವನೆಯ ವಿಷಯವನ್ನೂ ಅವರಲ್ಲಿ ಅರುಹಿದೆ. ಅವರು ಯಾವುದೇ ಪ್ರಶ್ನೆ ಕೇಳದೇ ಕೂಡಲೇ ಒಪ್ಪಿಕೊಂಡರು, ಜೊತೆಗೆ ಅಂತಹ ಪಾತ್ರಗಳನ್ನು ಈಗ ಒಪ್ಪಿಕೊಳ್ಳುತ್ತಿಲ್ಲಾ, ನಿಮ್ಮ ಜೊತೆ ಕೆಲಸ ಮಾಡಬೇಕೆಂಬ ಆಸೆ ಬಹುಕಾಲದಿಂದ ಇದೆ, ಹಾಗಾಗಿ ಮಾಡುತ್ತೇನೆ ಎಂದು ಒಪ್ಪಿಕೊಂಡರು, ಅವರೇ ಜಯಮ್ಮನ ಪಾತ್ರಕ್ಕೆ ಜೀವ ತುಂಬಿದ ಶ್ವೇತಾ ಶ್ರೀನಿವಾಸ್.

ಅವರು ಕೊನೆಯಲ್ಲಿ ಇನ್ನೊಂದು ಮಾತನ್ನು ಸೇರಿಸಿದರು, ಹರಿವು ಸಿನೆಮಾದಲ್ಲಿ ಡೇಟ್ಸ್ ಸಮಸ್ಯೆಯಾಗಿ ಸಿಕ್ಕ ಅವಕಾಶವನ್ನು ತಪ್ಪಿಸಿಕೊಂಡಿದ್ದೆ. ಈ  ಬಾರಿ ಅದೇ ತರದ ಪಾತ್ರವಾದರೂ ಸಹ ಮಾಡುತ್ತೇನೆ. ಆದ್ರೆ ಮುಂದಿನ ಸಿನೆಮಾದಲ್ಲಿ ಬೇರೆ ರೀತಿಯ ಪಾತ್ರಗಳಿಗೂ ನನ್ನನ್ನು ಗುರುತಿಸಿ ಎಂಬ ಸಣ್ಣ ಕೋರಿಕೆ ಹೇಳಿಕೊಂಡರಷ್ಟೇ. ಅವರು ನೀನಾಸಂ ವಿದ್ಯಾರ್ಥಿಯಾದ್ದರಿಂದ, ಆ ಪಾತ್ರವನ್ನು ಸಾಕಷ್ಟು ಲವಲವಿಕೆಯಿಂದ, ಯಾವ ಬೇಸರವೂ ಇಲ್ಲದೇ ನಿರ್ವಹಿಸಿದರು. ನಾವು ಕಲ್ಪಿಸಿಕೊಂಡಿದ್ದಕ್ಕಿಂತ ಹೆಚ್ಚು ಅರ್ಥಪೂರ್ಣವಾಗಿ ಆ ಪಾತ್ರ ತೆರೆಯ ಮೇಲೆ ಮೂಡಿ ಬಂತು.

ಹೀಗೆ ಅದಲು ಬದಲಾದ ಪಾತ್ರಧಾರಿ ಬಾಲಾಜಿ ಮನೋಹರ್ ಅವರದ್ದು. ಚೂರಿಕಟ್ಟೆ ಸಿನೆಮಾದಲ್ಲಿ ಬಾಲಾಜಿ ಅವರ ಪಾತ್ರ ಹಾಗೂ ಅದರ characterization  ನನಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು, ಅದೇ ಕಾರಣದಿಂದಾಗಿ ನಮ್ಮ ಸಿನೆಮಾದಲ್ಲಿ ಅವರಿಂದ ಒಂದು ಪಾತ್ರವನ್ನು ಮಾಡಿಸಬೇಕೆಂದು ನಿರ್ಧರಿಸಿ, ಗೌರಿ ಕೆಲಸ ಮಾಡುವ ಆಫೀಸಿನಲ್ಲಿ ತೊಂದರೆ ಕೊಡುವ ಮ್ಯಾನೇಜರ್ ಪಾತ್ರಕ್ಕೆ ಅವರನ್ನು ಕೇಳಿ ಒಪ್ಪಿಸಿದ್ದೆ. ಅವರೂ ಸಹ ಖುಷಿಯಿಂದಲೇ ಒಪ್ಪಿಕೊಂಡು ಸಿನೆಮಾದ ರಿಹರ್ಸಲ್ ಗೂ ಬಂದಿದ್ದರು.

ಪಾತ್ರವನ್ನು ಆಳವಾಗಿ ಅರ್ಥ ಮಾಡಿಕೊಂಡು ಒಂದಷ್ಟು ಸಲಹೆ ನೀಡಿ, ದೃಶ್ಯಗಳನ್ನು improvise ಮಾಡಲು ಸಹಕರಿಸಿದರೂ ಕೂಡ. ಎಲ್ಲವೂ ನಿಗಧಿಯಾಗಿದ್ದಾಗಲೇ, ಮನಃಶಾಸ್ತ್ರಜ್ಞನ ಪಾತ್ರ ಮಾಡಬೇಕಿದ್ದ ಸ್ನೇಹಿತರು, ಬೇರೊಂದು ಕೆಲಸದ ಒತ್ತಡದಲ್ಲಿದ್ದೇನೆ ಹಾಗಾಗಿ, ನಿಮ್ಮ ಸಿನೆಮಾದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲಾ ಕ್ಷಮಿಸಿ ಎಂದು ಮೆಸೇಜ್ ಮಾಡಿ ಹೇಳಿದರು, ಅದು ಚಿತ್ರೀಕರಣಕ್ಕೆ ಇನ್ನು ಒಂದು ವಾರ ಇರುವಾಗಲೇ, ಅತ್ತ ವಿಜಯ್ ಅವರ ಸಮಸ್ಯೆ ಬಗೆಹರಿದ ಕೂಡಲೇ ಈ ಸಮಸ್ಯೆ ಆರಂಭವಾಗಿತ್ತು. ಏನು ಮಾಡುವುದೋ ತೋಚಲಿಲ್ಲಾ.

ಮನಃಶಾಸ್ತ್ರಜ್ಞನ ಪಾತ್ರವೂ ಕೂಡ ಬಹು ಮುಖ್ಯ ಪಾತ್ರವಾಗಿತ್ತು. ನಮ್ಮ ಸ್ನೇಹಿತರನ್ನೇ ತಲೆಯಲ್ಲಿರಿಸಿಕೊಂಡು ಬರೆದುಕೊಂಡಿದ್ದ ಪಾತ್ರವದು. ಏನು ಮಾಡುವುದೋ ತೋಚದೆ, ಕೂಡಲೇ ಒಂದು ನಿರ್ಧಾರಕ್ಕೆ ಬಂದು ಆ ಪಾತ್ರಕ್ಕೆ ಬಾಲಾಜಿ ಮನೋಹರ್ ಅವರನ್ನು ಬದಲಾಯಿಸಿ, ಬಾಲಾಜಿ ಸರ್ ಮಾಡಬೇಕಿದ್ದ ಮ್ಯಾನೇಜರ್ ಪಾತ್ರಕ್ಕೆ ಬೇರೊಬ್ಬರನ್ನು ಹುಡುಕಲು ಪ್ರಾರಂಭಿಸಿದೆ.

ಆದರೆ ಸಮಸ್ಯೆ ಅಲ್ಲಿಗೆ ಮುಗಿದಿರಲಿಲ್ಲಾ. ಮನಃಶಾಸ್ತ್ರಜ್ಞನ ಪಾತ್ರ ಈಗ ಸಿನೆಮಾದಲ್ಲಿರುವಂತೆ ತೋಟದಲ್ಲಿ ನಿಸರ್ಗದ ಜೊತೆ ಸಂವಹನೆ ನಡೆಸುವಂತೆ ಡಿಸೈನ್ ಆಗಿರಲಿಲ್ಲಾ. ಅದು ಸಾಮಾನ್ಯವಾಗಿ ಕಂಡು ಬರುವಂತೆ ನಾಲ್ಕು ಗೋಡೆಗಳ ಮಧ್ಯೆ ನಡೆಯುವಂತಹ ಪಾತ್ರವಾಗಿತ್ತು. ಅದಕ್ಕೆ ನಾನು ಆಯ್ಕೆ ಮಾಡಿಕೊಂಡಿದ್ದ ಸ್ನೇಹಿತರು ಸರಿಯಾಗಿ ಹೊಂದಿಕೆಯಾಗುತ್ತಿದ್ದರು. ಇತ್ತ ಬಾಲಾಜಿ ಸರ್ ಅವರನ್ನು ಹೇಗೋ ಒಪ್ಪಿಸಿದೆ. ಆದರೆ ಆ ಪಾತ್ರದಲ್ಲಿ ಅವರನ್ನು ಕಲ್ಪಿಸಿಕೊಳ್ಳುವುದಕ್ಕೆ ನನಗೆ ಸಾಧ್ಯವಾಗುತ್ತಿರಲಿಲ್ಲಾ. ತಲೆಕೆಟ್ಟು ಹೋಗಿತ್ತು.

ಒಂದಿಡೀ ದಿನ ಇದರ ಬಗ್ಗೆಯೇ ಯೋಚಿಸುತ್ತಾ ಕುಳಿತರೂ ಏನೂ ಹೊಳೆಯಲಿಲ್ಲಾ. ಮತ್ತೆ ‘ಧೈರ್ಯ’ದ ಮೊರೆ ಹೋದೆ. ಆನಂತರ ರೂಮಿನಲ್ಲಿ ಒಬ್ಬನೇ ಕೂತು ಯೋಚಿಸುತ್ತಿರುವಾಗ ತೇಜಸ್ವಿಯವರು ನೆನಪಾದರು. ಅವರು ನೆನಪಾದದ್ದೇ ಇಡೀ ಪಾತ್ರಕ್ಕೆ ಒಂದು ಬೇರೆಯದೇ ಆಯಾಮ ಸಿಕ್ಕಿಬಿಟ್ಟಿತು. ಇಡೀ ರಾತ್ರಿ ಕೂತು ಆ ಪಾತ್ರವನ್ನು ತಿದ್ದಿ ತೀಡಿ ಸಿದ್ಧಪಡಿಸಿಕೊಂಡು ಸಮಾಧಾನವಾಗಿ ಮಲಗಿದೆ.

ಬೆಳಿಗ್ಗೆ ಎದ್ದು ಎಲ್ಲವನ್ನೂ ಮತ್ತೊಮ್ಮೆ ಓದಿಕೊಂಡರೆ, ಸಮಸ್ಯೆ ಇನ್ನೂ ಬಗೆ ಹರಿದಿಲ್ಲಾ ಎಂಬುದು ಅರಿವಿಗೆ ಬಂತು, ಪಾತ್ರ ಈಗ ವಿನ್ಯಾಸವಾಗಿರುವುದಕ್ಕೂ, ಅಲ್ಲಿರುವ ಸಂಭಾಷಣೆಗೂ ತಾಳೆಯೇ ಆಗುತ್ತಿರಲಿಲ್ಲಾ, ಮುಂದೇನು ಮಾಡುವುದು ಎಂದು ಯೋಚಿಸಿದವನಿಗೆ ಎನ್ ಎ ಎಂ ಇಸ್ಮಾಯಿಲ್ ಸರ್ ನೆನಪಾದರು, ತೇಜಸ್ವಿಯವರೊಂದಿಗೆ ಸಾಕಷ್ಟು ಸಮಯವನ್ನು ಜೊತೆಯಲ್ಲಿ ಕಳೆದವರು ಇಸ್ಮಾಯಿಲ್ ಸರ್. ಅವರಿಗೆ ತೇಜಸ್ವಿಯವರ ಸ್ವಭಾವ, ಗುಣ, ಮಾತುಗಳ ಪರಿಚಯ ಸಾಕಷ್ಟು ಇದ್ದುದ್ದರಿಂದ ಸಂಭಾಷಣೆಯ ಮೂಲಕ ಅದಕ್ಕೊಂದು ಫ್ಲೇವರ್ ಅವರು ನೀಡಬಹುದು ಎಂದು ಯೋಚಿಸಿ ಅವರಿಗೆ ಕರೆ ಮಾಡಿದೆ. ಅವರು ಆಗ ತುಂಬಾನೇ ಬ್ಯುಸಿಯಾಗಿದ್ದರು, ನನಗೆ ಕಾಯುವಷ್ಟು ಸಮಯವೂ ಇರಲಿಲ್ಲಾ.

ಸರಿ ಇನ್ಯಾರು ಇದಕ್ಕೆ ಸೂಕ್ತ ಎಂದು ಯೋಚಿಸಿದಾಗ ನೆನಪಾದವರು ನಿರ್ದೇಶಕರಾದ ಅಭಯಸಿಂಹ ಅವರು. ಕೂಡಲೇ ಅವರನ್ನು ಸಂಪರ್ಕಿಸಿ, ನನ್ನ ಗೋಳೆಲ್ಲಾ ಹೇಳಿಕೊಂಡು ಇದಕ್ಕೆ ಸಂಭಾಷಣೆ ಬರೆದುಕೊಟ್ಟು ಸಹಾಯ ಮಾಡಬೇಕೆಂದು ಕೇಳಿಕೊಂಡೆ. ಮೊದಲಿಗೆ ಅವರು ಸ್ವಲ್ಪ ಹಿಂಜರಿದರೂ, ಆಮೇಲೆ ಒಪ್ಪಿಕೊಂಡು, ಸ್ಯಾಂಪಲ್ ಒಂದು ಬರೆದು ಕಳಿಸುತ್ತೇನೆ. ಅದು ಸರಿ ಎನಿಸಿದರೆ ಉಳಿದದ್ದು ಬರೆದುಕೊಡುತ್ತೇನೆ ಎಂದು ಹೇಳಿದರು. ಸರಿ ಎಂದು ನಾನು ಒಪ್ಪಿಕೊಂಡು, ಒನ್ಲೈಲ್ ಸ್ಕ್ರಿಪ್ಟ್ ಅವರಿಗೆ ಕಳಿಸಿದೆ, ಅವರು ಸ್ವಲ್ಪ ಹೊತ್ತಿಗೆ ಅದಕ್ಕೆ ಸಂಭಾಷಣೆ ಬರೆದು ಕಳಿಸಿದರು.

ಸತ್ಯವನ್ನು ಒಪ್ಪಿಕೊಳ್ಳುವುದಾದರೆ, ಅದು ಏನೆಂದು ಮೊದಲಿಗೆ ಅರ್ಥವಾಗಲಿಲ್ಲಾ, ಏನೋ ಇದೆ ಎಂಬ ನಂಬಿಕೆ ಬಂತು. ಅವರಿಗೆ ಕರೆ ಮಾಡಿ ಚೆನ್ನಾಗಿದೆ ಮುಂದುವರೆಯಬಹುದು ಎಂದು ಹೇಳಿದೆ. ಆದರೆ ಅವರು ವಿವರವಾಗಿ ಅರ್ಥ ಮಾಡಿಸಿದರು. ಒಂದೊಂದು ದೃಶ್ಯವೂ ತೇಜಸ್ವಿಯವರ ಇಷ್ಟದ ವಸ್ತು, ಗುಣ, ಆಹಾರದ ಮೂಲಕ ಚರ್ಚೆ ನಡೆಯುತ್ತದೆ, ಎಲ್ಲಿಯೂ ತೇಜಸ್ವಿಯವರನ್ನು ತೋರಿಸಬಾರದು ಆದರೆ ಅವರ ಇಡೀ ವ್ಯಕ್ತಿತ್ವ ಅದರಲ್ಲಿ ತುಂಬಿಕೊಂಡಿರಬೇಕು, ಅವರೇ ಸೃಷ್ಟಿಸಿದ ಪಾತ್ರದ ಹೆಸರು ಇಲ್ಲಿ ತೆರೆಯ ಮೇಲೆ ಬರಬೇಕು ಎಂಬ ನನ್ನ ಕಂಡೀಷನ್ಸ್ ಗೆ  ಅನುಗುಣವಾಗಿ ಆ ಸಂಭಾಷಣೆ ಹಾಗೂ ದೃಶ್ಯಗಳು ಬರುತ್ತವೆ ಎಂದು ಅವರೇ ಅರ್ಥ ಮಾಡಿಸಿದ ಮೇಲೆ ಮನಸ್ಸು ನಿರಾಳವಾಯಿತು. ನಾನು ಉಳಿದ ಕೆಲಸಗಳಲ್ಲಿ ನಿರತನಾದೆ. ಎರಡು ದಿನದಲ್ಲಿ ಪೂರ್ತಿ ಸಂಭಾಷಣೆಯನ್ನು ಬರೆದು ಕಳಿಸಿದರು.

ಹೀಗೆ ಸಿನೆಮಾ ನಿರ್ಮಾಣದಲ್ಲಿ ಕೆಲವೊಂದು ಬದಲಾವಣೆಗಳು ಕೊನೆಯ ಹಂತದಲ್ಲೂ ಆಗುತ್ತವೆ. ಆದರೆ ಆ ಬದಲಾವಣೆಯ ಪರಿಣಾಮ, ಫಲಿತಾಂಶ ಏನು ಬರಬಹುದು, ಅದನ್ನು ಹೇಗೆ ನಿರ್ವಹಿಸಬೇಕು ಎಂಬ ಪ್ರಾಕ್ಟಿಕಲ್ ಪ್ರಜ್ಞೆ ನಮ್ಮಲ್ಲಿ ಎಷ್ಟಿರುತ್ತದೆ ಎಂಬುದರ ಮೇಲೆ ಸಿನೆಮಾದ ಅಂತಿಮ ಫಲಿತಾಂಶ ನಿರ್ಧಾರವಾಗುತ್ತದೆ.

|ಮುಂದಿನ ಸಂಚಿಕೆಯಲ್ಲಿ|

‍ಲೇಖಕರು ಮಂಸೋರೆ

February 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಗೀತಾ ಎನ್ ಸ್ವಾಮಿ

    ಚೆನ್ನಾಗಿದೆ ಸರ್ ಬರಹ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: