ಹಾಸ್ಯದ ಮೂಲಕ ಬದುಕಿನ ಸತ್ಯಗಳನ್ನು ಹುಡುಕುವ ‘ಕಾಯುವ ಕಾಯಕ’

ಎನ್ ಎಸ್ ಶ್ರೀಧರ ಮೂರ್ತಿ

‘ವಯಸ್ಸಾದ ಮೇಲೆ ಲಗೇಜ್‌ಗಳನ್ನು ಕಡಿಮೆ ಮಾಡಿ ಕೊಳ್ಳ ಬೇಕು. ಆದರೆ ಜಾಸ್ತಿ ಆಗುತ್ತಾ ಹೋಗಿ ಕೊನೆಗೆ ನಾವೇ ಬೇಡದ ಲಗೇಜ್ ಆಗಿ ಬಿಡುತ್ತೇವೆ’ ಇದು ಎಚ್.ಡುಂಡಿರಾಜ್ ಅವರ ‘ಕಾಯುವ ಕಾಯಕ’ ನಾಟಕದ ಸಂಭಾಷಣೆ. ಇದು ಒಂದು ರೀತಿಯಲ್ಲಿ ಈ ನಾಟಕದ ಸ್ವರೂಪವನ್ನು ತಿಳಿಸುತ್ತದೆ ಎಂದು ಹೇಳ ಬಹುದು. ಡುಂಡಿರಾಜ್ ಚುಟುಕು ಕವಿಗಳಾಗಿ ಪ್ರಸಿದ್ಧರು. ಚುಟುಕಗಳು ಕೇವಲ ನಗೆಹನಿಗೆ ಸೀಮಿತವಾಗದೆ ಆ ಮೂಲಕ ಅವರು ಚುರಕನ್ನು ಕೂಡ ಮುಟ್ಟಿಸ ಬಲ್ಲರು. ಇದೇ ಸ್ವರೂಪವನ್ನು ಈ ನಾಟಕದಲ್ಲಿ ಕೂಡ ಗುರುತಿಸ ಬಹುದು.

ಇತ್ತೀಚೆಗೆ ಡುಂಡಿರಾಜ್ ಅವರ ಈ ನಾಟಕವನ್ನು ಬೆಳಗಾವಿಯ ‘ರಂಗಸ೦ಪದ’ ತಂಡ ಬೆಂಗಳೂರಿನ ರಂಗಶ೦ಕರದಲ್ಲಿ ಅಭಿನಯಿಸಿತು. ಹಲವು ಕ್ಷೇತ್ರಗಳಲ್ಲಿ ತಮ್ಮ ಸಾಧನೆ ತೋರಿಸಿರುವ ಶ್ರೀಪತಿ ಮಂಜನ ಬೈಲು ಈ ನಾಟಕದ ನಿರ್ದೇಶಕರು. ನಾಟಕದ ವಸ್ತು ಸರಳ. ಅನ್ಯೋನ್ಯ ದಾಂಪತ್ಯದ ಸಂಗಾತಿಯನ್ನು ನಾಯಕ ಕಳೆದು ಕೊಂಡಿದ್ದಾನೆ. ಮಗನೂ ವಿದೇಶದಲ್ಲಿ ನೆಲೆಸಿದ್ದಾನೆ. ಜೀವದ ಗೆಳೆಯ ಕೂಡ ಮೂರು ದಿನಗಳ ಹಿಂದೆ ತೀರಿ ಕೊಂಡಿದ್ದಾನೆ.

ವಾಸ್ತವ ಯಾವುದು ಎಂದೂ ಕೂಡ ತಿಳಿಯದಂತೆ ನೆನಪುಗಳು ಅವನನ್ನು ಬೆನ್ನು ಹತ್ತಿವೆ. ಇಲ್ಲದ ಗೆಳೆಯ ಬರುತ್ತಾನೆ ಎನ್ನುವ ನಿರೀಕ್ಷೆಯ ಕಾಯವಿಕೆಯಲ್ಲಿಯೇ ನಾಟಕ ತೆರೆದು ಕೊಳ್ಳುತ್ತದೆ. ಈ ಕಾಯವಿಕೆಯ ಇನ್ನೊಂದು ತುದಿಯಲ್ಲಿ ಅವನ ಸಾವು ಸಂಭವಿಸುತ್ತದೆ. ಇಡೀ ಬದುಕನ್ನು ಸಾವಿಗೆ ಕಾಯುವ ನೆಲೆಯ ಸಾಧ್ಯತೆಯ ಕಡೆಗೆ ಕರೆದು ಕೊಂಡು ಹೋಗುವ ಈ ನಾಟಕ ವಿಷಾದವನ್ನು ತನ್ನ ಶ್ರುತಿಯಲ್ಲಿ ಇಟ್ಟು ಕೊಂಡಿದ್ದರೂ ಹಾಸ್ಯಮಯ ಸಂಭಾಷಣೆಗಳಲ್ಲಿ ಕಚಗುಳಿ ಇಡುತ್ತಲೇ ಸಾಗುತ್ತದೆ. ನಗುವಿನಲ್ಲಿ ಒಂದು ಅಳುವಿನ ಬಿಂದು, ಅಳುವಿನಲ್ಲಿ ನಗುವಿನ ಎಳೆ ಹೀಗೆ ನಾಟಕದ ವಿನ್ಯಾಸ ವಿಭಿನ್ನವಾಗಿದೆ. ಕೆ.ಎಸ್.ನಿಸಾರ್ ಅಹಮದ್, ಬಿ.ಆರ್.ಲಕ್ಷ್ಮಣ ರಾವ್ ಅವರ ಕವಿತೆಗಳು, ಡುಂಡಿರಾಜ್ ಅವರದೇ ಚುಟುಕಗಳು, ಭೀಮಸೇನ್ ಜೋಶಿಯವರ ಗಾಯನ ಎಲ್ಲವೂ ನಾಟಕದ ನಡೆಯನ್ನು ಶ್ರೀಮಂತಗೊಳಿಸುತ್ತವೆ. ಸಾಹಿತ್ಯ ಮತ್ತು ಸಂಗೀತ ಬದುಕನ್ನು ಸಹನೀಯವಾಗಿಸುವ ಕ್ರಮವನ್ನು ನಾಟಕ ಮತ್ತೆ ಮತ್ತೆ ಬಿಂಬಿಸುತ್ತದೆ.

ಹಿರಿಯ ನಾಗರೀಕರ ಬದುಕಿನ ತಲ್ಲಣಗಳನ್ನು ಹೇಳುವಾಗಲೂ ಹಿರಿಯ ದಂಪತಿಗಳು ತಮ್ಮ ದಾಂಪತ್ಯದ ಸುಂದರ ಕ್ಷಣಗಳನ್ನು ಸ್ಮರಿಸಿ ಕೊಳ್ಳುವ ರೀತಿ ಗುಣಾತ್ಮಕ ಅಯಾಮವನ್ನು ನಾಟಕಕಕ್ಕೆ ಜೋಡಿಸುತ್ತದೆ. ‘ಬಾಲ್ಯ ವಿವಾಹಕ್ಕೆ ಶಿಕ್ಷೆ ಆಗ ಬೇಕು’ ಎಂದಾಗ ಮದುವೆಗಿಂತ ಬೇರೆ ಶಿಕ್ಷೆ ಬೇಕೆ ಎನ್ನುವಲ್ಲಿ ಇರುವುದು ನವಿರಾದ ದಾಂಪತ್ಯದ ಸೊಗಸು. ಇಂತಹ ಸೊಗಸನ್ನು ತಮ್ಮ ಸಂಭಾಷಣೆಗಳಲ್ಲಿ ಡುಂಡಿರಾಜ್ ಚೊಕ್ಕವಾಗಿ ಕಟ್ಟಿ ಕೊಟ್ಟಿದ್ದಾರೆ.

ಇಲ್ಲಿ ತಲೆಮಾರುಗಳ ತಳಮಳವೂ ಇದೆ. ಏನನ್ನೋ ಸಾಧಿಸುವ ಭ್ರಮೆಯಲ್ಲಿ ವಿದೇಶಕ್ಕೆ ಹಾರುವ ಯುವಜನತೆ ಕಳೆದು ಕೊಳ್ಳುವ ಸ್ವಂತಿಕೆಯನ್ನು ನಾಟಕ ಧ್ವನಿಸುತ್ತದೆ. ತಂದೆ ಮತ್ತು ಮಗನ ನಡುವೆ ನಡೆಯುವ ಸಂವಾದ ನಾಟಕದ ಹೃದ್ಯ ಭಾಗಗಳಲ್ಲಿ ಒಂದು. ಇಂದಿನ ಯುವ ಜನತೆಗೆ ತನ್ನನ್ನು ಭಾವನಾತ್ಮಕವಾಗಿ ತೆರೆದು ಕೊಳ್ಳುವ ಅವಕಾಶ ಸಿಗುತ್ತಿಲ್ಲ ಎನ್ನುವುದನ್ನು ಕೂಡ ನಾಟಕ ವಿಭಿನ್ನವಾಗಿ ಅನಾವರಣಗೊಳಿಸಿದೆ.

ಇಂತಹ ನಾಟಕವನ್ನು ನಿರ್ದೇಶನ ಮಾಡುವುದು ಸುಲಭವಲ್ಲ. ಇದರಲ್ಲಿ ಅನೇಕ ಸಂಗತಿಗಳು ಅಂತರ೦ಗದ ಅಭಿವ್ಯಕ್ತಿಗಳು. ಇಲ್ಲಿ ಕಾಣುವುದು ಮಾತ್ರ ನಿಜ ಅಲ್ಲ ಎನ್ನುವ ನೆಲೆ ಹಲವು ಕಡೆ ಇದೆ. ಇದಕ್ಕೆ ಕೇವಲ ನಟನೆ ಮಾತ್ರ ಸಾಕಾಗುವುದಿಲ್ಲ ಒಂದು ಆವರಣವನ್ನು ರೂಪಿಸ ಬೇಕಾಗುತ್ತದೆ. ಸ್ವತ; ಕಲಾವಿದರೂ ಆಗಿರುವ ಶ್ರೀಪತಿ ಇದನ್ನು ಆಳವಾಗಿ ಅರಿತು ರಂಗದ ಮೇಲೆ ಮೂಡಿಸಿದ್ದಾರೆ. ಅವರು ಸಂಯೋಜಿಸಿರುವ ಸಂಗೀತ ಕೂಡ ನಾಟಕದ ಗಾಢತೆಯನ್ನು ತೀವ್ರಗೊಳಿಸುತ್ತದೆ. ಭ್ರಮೆ ಮತ್ತು ವಾಸ್ತವದ ಅಂಚಿನಲ್ಲಿಯೇ ಸಾಗುವಂತೆ ರೂಪಿಸಿರುವ ವಿನ್ಯಾಸ ನಾಟಕ ವಿಶಿಷ್ಟ ಅನುಭವವಾಗಿ ಮಾರ್ಪಡುವಂತೆ ಮಾಡುತ್ತದೆ.

ಬೆಳಕು ಮತ್ತು ನೆರಳಿನ ಜೊತೆಗೆ ಸಂಗೀತ ಕೂಡ ರಂಗಭೂಮಿಯನ್ನು ಆವರಿಸಿಕೊಳ್ಳುವ ರೀತಿ ವಿಶಿಷ್ಟವಾಗಿದೆ. ಇಲ್ಲಿ ಹಾಸ್ಯವಿದೆ ಆದರೆ ಅದು ನಕ್ಕು ಬಿಡುವ ಹಾಸ್ಯವಲ್ಲ, ನೋವು ಇದೆ ನಿಜ, ಅದು ಕೇವಲ ಅತ್ತು ಕಳೆದು ಕೊಳ್ಳುವ ನೋವಲ್ಲ. ಮುಖ್ಯ ಎಲ್ಲವೂ ಬದುಕನ್ನು ಕಾಣುವ ದಾರಿ ಆಗಿದೆ. ಇಲ್ಲಿ ಮುಖ್ಯವಾಗಿರುವುದು ಬದುಕು. ಆ ಕಾಳಜಿ ನಾಟಕದ ಪ್ರತಿ ತಿರುವಿನಲ್ಲಿ ಕೂಡ ಎದ್ದು ಕಾಣುತ್ತದೆ. ಎಲ್ಲಿಯೂ ಕಳೆದು ಹೋಗಿದ್ದರ ಬಗ್ಗೆ ಹಳಹಳಿಕೆ ಇಲ್ಲ. ಇರುವುದರ ಕುರಿತು ಉತ್ಸಾಹವೂ ಇಲ್ಲ. ಹೀಗಾಗಿ ಬಹಳ ಮುಖ್ಯ ಎನ್ನಿಸುವುದು ಪ್ರತಿ ಸಂಭಾಷಣೆ ಮಾತಿನ ಆಚೆಗಿನ ಮೌನವನ್ನು ಧ್ವನಿಸಿರುವ ರೀತಿ. ಈ ಮೌನ ನಾಟಕ ಸಾಗಿದಂತೆ ಗಾಢವಾಗುತ್ತಾ ಹೋಗುತ್ತದೆ.

ನಾಟಕದ ಪ್ರಮುಖ ಪಾತ್ರಗಳಾದ ಸತ್ಯಮೂರ್ತಿ ಮತ್ತು ಸಾವಿತ್ರಿಯ ಪಾತ್ರದಲ್ಲಿ ಡಾ.ಅರವಿಂದ ಕುಲಕರ್ಣಿ ಮತ್ತು ಪದ್ಮಾ ಕುಲಕರ್ಣಿ ಹದವರಿತು ಅಭಿನಯ ನೀಡಿದ್ದಾರೆ. ಪಾತ್ರವನ್ನು ನೈಜಗೊಳಿಸಿದ್ದಾರೆ. ಅವರ ದಾಂಪತ್ಯದ ಹುಸಿ ಮುನಿಸಿನ ಸಂಭಾಷಣೆಗಳನ್ನು ಕೇಳುವುದು ನೋಡುವುದೇ ಒಂದು ರೀತಿಯಲ್ಲಿ ಸೊಗಸು. ಸ್ನೇಹಿತ ಡಿಸೋಜ ಅವರ ಪಾತ್ರದಲ್ಲಿ ವಾಮನ ಮಳಗಿ ತಮಗೆ ಇರುವ ಸೀಮಿತ ಅವಕಾಶದಲ್ಲಿಯೇ ಮಿಂಚಿದ್ದಾರೆ. ಇನ್ನೆರಡು ಪಾತ್ರಗಳಾದ ಮನೆ ಆಳು ತಿಮ್ಮನಾಗಿ ಮುಕುಂದ ನಿಂಗಣ್ಣನವರ್ ಮತ್ತು ಮಗ ಪ್ರಶಾಂತ್‌ನಾಗಿ ವಿಠಲ ಅಸೋದೆ ಗಮನ ಸೆಳೆಯುತ್ತಾರೆ.

ಬೆಳಗಾವಿಯಲ್ಲಿ ಕನ್ನಡವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿರುವ ‘ರಂಗಸAಪದ’ದ ಗೆಳೆಯರ ಈ ಪ್ರಯತ್ನ ಸಾಂಸ್ಕೃತಿಕವಾಗಿ ಕೂಡ ಮಹತ್ವದ್ದು. ನಾಡಿನ ಎಲ್ಲೆಡೆ ಇದು ಪ್ರದರ್ಶನ ಕಾಣಲಿ.. ಈ ಮೂಲಕ ರಂಗ ಪರಂಪರೆ ಬೆಳೆಯಲಿ ಎಂದು ನಾನು ಆಶಿಸುತ್ತೇನೆ.

‍ಲೇಖಕರು Admin

May 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: