ಪಿ ಪಿ ಉಪಾಧ್ಯ ಸರಣಿ ಕಥೆ 17- ಗುರಿಕಾರರು ಶಾಮಣ್ಣನವರ ಕಾಲು ಮುಟ್ಟಿ ನಮಸ್ಕರಿಸಿದರು…

ಪಿ ಪಿ ಉಪಾಧ್ಯ

17

ಗುರಿಕಾರರು ಶಾಮಣ್ಣನವರ ಕಾಲು ಮಟ್ಟಿ ನಮಸ್ಕರಿಸಿದರು.

ಈಗ ಕೊನೆಯದಾಗಿ ಶಾಮಣ್ಣನವರ ಕೋಣಗಳು. ಜನರ ಉತ್ಸಾಹ, ಉದ್ವೇಗ ಮಿತಿ ಮೀರುತ್ತಿತ್ತು. ಕೋಣಗಳನ್ನು ಓಡಿಸುವ ಆಳುಗಳು ತಮ್ಮ ದಿರುಸಿನಲ್ಲಿ ತಯಾರಾಗಿ ನಿಂತಿದ್ದವರು ರಾಜ ಗಾಂಭೀರ್ಯದಿ೦ದ ಕೋಣಗಳನ್ನು ಗದ್ದೆಗೆ ತಂದರು. ಆಗಲೇ ಕೋಣಗಳ ಹೆಗಲಿಗೆ ನೊಗವೇರಿಸಿ ಕಟ್ಟಿದ್ದ ಆ ಭಾರದ ಹಲಗೆಯನ್ನು ಆಚೆ ಇಬ್ಬರು ಈಚೆ ಇಬ್ಬರು ಎತ್ತಿ ಹಿಡಿದು ನೀರುಗದ್ದೆ ವರೆಗೆ ತಂದು ಬಿಟ್ಟರು. ಈಗ ಕೋಣಗಳು ಓಟಕ್ಕೆ ರೆಡಿ. ಅವುಗಳ ನೊಗಕ್ಕೆ ಕಟ್ಟಿದ್ದ ಆ ಹಲಗೆಯ ಮೇಲೆ ಮೂಡುಬಿದರೆಯಿಂದ ಬಂದವರಲ್ಲಿ ಒಬ್ಬ ಏರಿ ನಿಂತ ಮತ್ತು ಹೆಮ್ಮೆಯಿಂದ ಆಚೀಚೆ ನೋಡಿದ.

ಹಾಗೆ ನೋಡಿದವನಿಗೆ ಸುತ್ತ ನಿಂತ ಜನರ ಕುತೂಹಲಭರಿತ ಆತುರ ಗಮನಕ್ಕೆ ಬಂತು ಮತ್ತು ಕೂಡಲೇ ಇನ್ನು ತಡ ಮಾಡುವ ಹಾಗಿಲ್ಲ' ಎಂದುಕೊ೦ಡವ ಕೈಯ್ಯಲ್ಲಿ ಹಿಡಿದಿದ್ದ ಚಾಟಿಯಿಂದ ಎರಡೂ ಕೋಣಗಳಿಗೆ ಒಂದೊ೦ದೇಟು ಹೊಡೆದ ಮತ್ತು ಬಾಲವನ್ನು ತಿರುಚಿದ. ಅದನ್ನೇ ಕಾಯುತ್ತಿದ್ದವೋ ಎನ್ನುವಂತೆ ಓಟ ಪ್ರಾರಂಭಿಸಿದ ಕೋಣಗಳು ಬಿಲ್ಲಿನಿಂದ ಬಿಟ್ಟ ಬಾಣಗಳಂತೆ ಮುಂದೆ ಸಾಗಿದುವು. ಜನ ಉಸಿರು ಕಟ್ಟಿ ನೋಡುತ್ತಿದ್ದಾರೆ. ಮಣ ಭಾರದ ಹಲಗೆಯ ಮೇಲೆ ಭೀಮ ಕಾಯದ ಆಳು. ಅವೆಲ್ಲ ಲೆಕ್ಕವೇ ಇಲ್ಲವೇನೋ ಎನ್ನುವಂತೆ ಓಡುತ್ತಿದ್ದ ಕೋಣಗಳು. ಕೆಸರು ನೀರು ಚಿಮ್ಮುತ್ತಿತ್ತು ಕಾರಂಜಿಯ೦ತೆ. ಮೇಲಿನ ಬಾವುಟ ಕಣ್ಣು ಮುಚ್ಚಿ ತೆರೆಯುವುದರೊಳಗೆ ತೊಯ್ದು ತೊಪ್ಪೆಯಾಗಿತ್ತು. ಕೋಣಗಳ ಓಟದ ರಭಸಕ್ಕೆ ಆ ಪಾಟಿ ನೀರು ಹಾರಿತ್ತು. ಗುರಿಕಾರರಿಗಂತೂ ಹೇಳತೀರದ ಆನಂದ.

ಕಂಬಳದ ಯಜಮಾನಿಕೆ ತಮ್ಮ ಕೈಗೆ ಬಂದಾಗಿನಿ೦ದಲೂ ಈ ತೆರನ ಓಟವನ್ನು ಕಂಡವರಲ್ಲ ಅವರು. ಅದಕ್ಕೂ ಹಿಂದೆ ಚಿಕ್ಕ ಹುಡುಗನಾಗಿದ್ದಾಗ ಗುರಿಕಾರನಾಗಿದ್ದ ತನ್ನ ಅಪ್ಪನ ಹಿಂದೆ ಹಿಂದೆ ತಿರುಗುತ್ತ ಗುರಿಕಾರರ ಮಗನೆಂದು ಪುಕ್ಕಟೆಯಾಗಿ ಅಂಗಡಿಯವರು ಕೊಡುತ್ತಿದ್ದ ಬೆಂಡು ಬತ್ತಾಸುಗಳನ್ನು ತಿನ್ನುತ್ತ ನೋಡುತ್ತಿದ್ದ ಕಾಲದಲ್ಲೂ ಇಂತಹದೊ೦ದು ಓಟವನ್ನು ಕಂಡಿರಲಿಲ್ಲ. ಚಿಕ್ಕ ಮಕ್ಕಳಂತೆ ಅವರೂ ಕಣ್ಣೆವೆಯಿಕ್ಕದೆ ನೋಡುತ್ತಿದ್ದಾರೆ. ಜನ ಪ್ರೋತ್ಸಾಹದ ಕೂಗು ಹಾಕುತ್ತಿದ್ದಾರೆ. ಕಿರಿಚುತ್ತಿದ್ದಾರೆ. ಸುತ್ತ ಮುತ್ತ ನೆರೆದಿದ್ದ ಹತ್ತಿಪ್ಪತ್ತು ಜೊತೆ ಡೋಲು ಚಂಡೆಗಳನ್ನು ಬಾರಿಸುತ್ತಿದ್ದವರು ಇದೇ ಕೊನೆಯೇನೋ ಎನ್ನುವಂತೆ ಬಾರಿಸುತ್ತಿದ್ದಾರೆ. ಈ ಮುಂಚೆ ಓಡಿದ ಕೋಣಗಳು ತೆಗೆದುಕೊಂಡ ಅರ್ಧದಷ್ಟು ಹೊತ್ತಿನಲ್ಲಿಯೇ ಗುರಿ ಮುಟ್ಟಿದ ಕೋಣಗಳು ಅದೇ ವೇಗದಲ್ಲಿ ಹಿಂತಿರುಗಿದುವು. ಇದೇನು ಇಷ್ಟು ಬೇಗ ಮುಗಿದು ಹೋಯ್ತೇ ಎಂದುಕೊಳ್ಳುತ್ತ ಜನ ಕೋಣಗಳನ್ನು, ಕೋಣಗಳನ್ನು ಓಡಿಸಿದ ಆ ಜನರನ್ನು ಮುತ್ತಿದರು.

ಆದಿಯನ್ನಂತೂ ಹೆಗಲ ಮೇಲೆ ಹೊತ್ತುಕೊಂಡು ಕುಣಿಯುವುದೊಂದೇ ಬಾಕಿ. ಶಾಮಣ್ಣನವರನ್ನೂ ಹಾಗೆಯೇ ಮಾಡುತ್ತಿದ್ದರೇನೋ. ಅವರ ವಯಸ್ಸು, ಅಂತಸ್ತು ಅಡ್ಡ ಬಂದಿದ್ದುವು. ಆದರೆ ಮಗನ ಪಕ್ಕದಲ್ಲಿಯೇ ನಿಂತಿದ್ದ ಶಾಮಣ್ಣ ಮೂಗರಾಗಿದ್ದರು. ಬಿಸಿಯೆಲ್ಲ ತಣಿದು ಪಾರಿತೋಷಕವನ್ನು ಕೊಡುವ ಸಂದರ್ಭದಲ್ಲಿಯ೦ತೂ ಗುರಿಕಾರರು ಶಾಮಣ್ಣನವರ ಕಾಲು ಮುಟ್ಟಿ ನಮಸ್ಕರಿಸಿದರು. ಮುಂದಿನ ವರ್ಷ ಕಂಬಳಕ್ಕೆ ಖಂಡಿತಾ ಶಾಮಣ್ಣನವರು ಕೋಣಗಳನ್ನು ತರಲೇಬೇಕು ಮತ್ತು ಆಗ ತಾವು ಯಾವುದಾದರೂ ಮಂತ್ರಿಗಳನ್ನು ಖಂಡಿತವಾಗಿಯೂ ಕರೆಸುತ್ತೇವೆಂದೂ ಹೇಳಿದರು.

ಕೋಣಗಳ ಮರುಪ್ರಯಾಣ ಬೆಳಿಗ್ಗೆಗಿಂತ ವರ್ಣರಂಜಿತವಾಗಿತ್ತು. ಆದಿ ಅಪ್ಪನಿಗೆ ತಿಳಿಯದಂತೆ ಜೊತೆಗೆ ಬಂದಿದ್ದ ಜನರಿಗೆ ಒಂದಿಷ್ಟು ದುಡ್ಡು ಕೊಟ್ಟು ಖುಷಿ ಮಾಡಿಕೊಳ್ಳಿ ಎಂದು ಹೇಳಿದ್ದನ್ನು ಪೂರ್ತಿಯಾಗಿ ಬಳಸಿಕೊಂಡ ಅವರು ಕುಡಿಯುವಾಗ ಕಾಫಿಗಿಂತ ಹೆಚ್ಚು ಹೆಂಡವನ್ನೇ ಖಾಯಸ್ಸು ಮಾಡಿದ್ದರಿಂದ ಕುಣಿತಕ್ಕೆ ಆ ಪಾಟಿ ಆವೇಶ ಬಂದಿತ್ತು. ಗೆಲುವಿನ ಹುಮ್ಮಸ್ಸು ಶಾಮಣ್ಣನವರಿಗೆ ಮತ್ತು ಮಗನಿಗೆ. ಉಳಿದವರಲ್ಲಿ ಬಹಳ ಮಂದಿಗೆ ಹೆಂಡದ ಮತ್ತು. ಮರು ಪ್ರಯಾಣದ ದಾರಿ ಸಾಗಿದ್ದೇ ಗೊತ್ತಾಗಿರಲಿಲ್ಲ. ಮನೆಗೆ ಮೊದಲೇ ಸುದ್ದಿ ಮುಟ್ಟಿದ್ದರಿಂದ ಕಮಲಮ್ಮ ಊರ ನಾಲ್ಕಾರು ಹೆಂಗಳೆಯರನ್ನು ಸೇರಿಸಿ ಕೋಣಗಳನ್ನು ಮತ್ತು ಅವುಗಳ ಜೊತೆ ಬಂದವರನ್ನು ಆರತಿ ಮಾಡಿ ಬರಮಾಡಿಕೊಳ್ಳುವ ವ್ಯವಸ್ಥೆಯನ್ನು ಆಗಲೇ ಮಾಡಿದ್ದರು. ಅದಕ್ಕಿಂತ ಮುಂಚೆ ದೃಷ್ಟಿ ನಿವಾಳಿಸ ಬೇಕಲ್ಲ.

ಹೊಸ ದಿರುಸಿನಲ್ಲಿ ನವಯುವಕನಂತೆ ಕಂಗೊಳಿಸುತ್ತಿದ್ದ ಶಾಮಣ್ಣನವರಿಗೆ ಮೊದಲು. ಅದು ಕಮಲಮ್ಮನ ಕೈಯ್ಯಿಂದಲೇ. ಮತ್ತೆ ಕೋಣಗಳಿಗೆ ಊರ ಹೆಂಗಳೆಯರು. ದೃಷ್ಟಿ ನಿವಾಳಿಸಿ ಓಕುಳಿಯನ್ನು ಬಂದ ದಾರಿಯ ಮೇಲೆ ಸುಮಾರು ದೂರದಲ್ಲಿ ಚಲ್ಲಿ ಬಂದ ಮೇಲೆ ಆರತಿ. ಅಷ್ಟರಲ್ಲಿ ಕೋಣವನ್ನು ಬೇರೆಯವರ ವಶಕ್ಕೆ ಒಪ್ಪಿಸಿ ಬಂದ ಆ ಮೂಡುಬಿದರೆಯವರಿಬ್ಬರು ತಮ್ಮ ತಮ್ಮೊಳಗೇ ತುಳುವಿನಲ್ಲಿ ಮಾತನಾಡಿಕೊಳ್ಳುತ್ತ ನಡು ನಡುವೆ ಆದಿಗೂ ತಿಳಿಯಬೇಕೆಂದಿದ್ದರೆ ಕನ್ನಡದಲ್ಲಿಯೂ ಮಾತನಾಡುತ್ತ ತಮ್ಮ ಮೆಚ್ಚುಗೆಯನ್ನು ಹೊರ ಹಾಕುತ್ತಲೇ ಇದ್ದರು. ಒಮ್ಮೆಯಂತೂಅಲ್ಲ ಇದೆಂತದು ಮಾರಾಯ ಕಂಬಳವೊ ಇಲ್ಲ ಮದುವೆಯೋ… ನನ್ನ ಸರ್ವೀಸಿನಲ್ಲಿಯೇ ಇಂತಹ ಸಂಭ್ರಮದ ಕಂಬಳ ಕಂಡದ್ದೇ ಇಲ್ಲ ಬಿಡು’ ಎಂದು ಒಬ್ಬನೆಂದರೆ ಇನ್ನೊಬ್ಬ ಪಾಪ ಗುತ್ತಿನ ಹೆಗ್ಡೇರು ನಮ್ಮ ಮರಿ ಕೋಣಗಳ ಗತಿ ಎಂತದಾಗುತ್ತದೋ ಎಂದು ಅಳುತ್ತಲೇ ಕೊಟ್ಟಿದ್ದರು. ಇದನ್ನು ಹೇಳಿದರೆ ತುಂಬ ಸಂತೋಷ ಪಟ್ಟಾರು' ಎಂದಿದ್ದ.

ಚದುರುವ ಮುನ್ನ ಜನ ಆಸೆಯಿಂದ ಕೇಳಿದರು. 'ಮಣೂರು ಕಂಬಳಕ್ಕೆ ಇನ್ನು ತಿಂಗಳು ದಿನವಷ್ಟೇ ಇರುವುದು...' ಎಂದು ಹೇಳಿದ್ದರು. ಅವರ ಧ್ವನಿಯಲ್ಲಿ ನಿರೀಕ್ಷೆಯಿತ್ತು. ಇನ್ನೊಮ್ಮೆ ಇದೇ ತೆರನ ಸಂಭ್ರಮದಲ್ಲಿ ಭಾಗವಹಿಸಬಹುದಲ್ಲ ಎನ್ನುವ ಆಸೆಯೂ ಇತ್ತು.ಛೆ.. ವಂಡಾರು ಕಂಬಳದಲ್ಲಿ ಭಾಗವಹಿಸಿದ ಮೇಲೆ ಇಲ್ಲೆಲ್ಲ ಹೋಗುವುದೇ’ ಎನ್ನುತ್ತ ಸಾರಾ ಸಗಟಾಗಿ ಆ ಸಲಹೆಯನ್ನು ತಳ್ಳಿ ಹಾಕಿದ್ದರು ಶಾಮಣ್ಣನವರು. ಜೊತೆಗೆ ಆದಿಯೂ. ಅನತಿ ದೂರದಲ್ಲೇ ಒದಗಬಹುದಾಗಿದ್ದ ಈ ಖುಶಿಯ ಘಳಿಗೆ ತಪ್ಪಿ ಹೋಯಿತಲ್ಲ ಎನ್ನುವ ಕೊರಗಿನಲ್ಲಿಯೇ ಜನರೆಲ್ಲ ಚದುರಿದರು. ಹಾಗೆಯೇ ಸಲ್ಲಬೇಕಾಗಿದ್ದ ಮರ್ಯಾದೆಯನ್ನು ಧಂಡಿಯಾಗಿಯೇ ಸ್ವೀಕರಿಸಿದ ಮೂಡುಬಿದಿರೆಯ ಆಳುಗಳೂ ತೀವ್ರ ತೃಪ್ತಿಯಿಂದ ಹೊರಟಿದ್ದರು. ಹೊರಡುವಾಗ ಮುಂದಿನ ವರ್ಷವೂ ತಾವೇ ಬರುವುದು ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಮಾತ್ರ ಮರೆಯಲಿಲ್ಲ.

ಹಿಂದಿನ ಸಲವಾದರೆ ಬರೀ ನಾಲ್ಕು ತಿಂಗಳ ಕಾಲವಷ್ಟೆ ಆ ಕೋಣಗಳನ್ನು ತಯಾರಿಮಾಡಿದ್ದರೆ ಸಾಕಿತ್ತು. ಯಾಕೆಂದರೆ ವಂಡಾರು ಕಂಬಳದ ನಾಲ್ಕು ತಿಂಗಳ ಮುಂಚೆ ಕೋಣಗಳನ್ನು ಕೊಂಡು ತಂದದ್ದು. ಆದರೆ ಈಗ ಇಡೀ ಒಂದು ವರ್ಷ ಕಾಯಬೇಕು. ಕಾಯಬೇಕು ಎನ್ನುವುದಕ್ಕಿಂತ ವರ್ಷದ ಕಾಲ ಆ ಕೋಣವನ್ನು ಸಾಕಬೇಕು. ಕಂಬಳವಿಲ್ಲ ಎಂದು ಅವುಗಳನ್ನು ಸಾಕುವುದರಲ್ಲಿ, ಅವಕ್ಕೆ ಹೊಟ್ಟೆಗೆ ಹಾಕುವುದರಲ್ಲಿ ಕೊರತೆ ಮಾಡುವ ಹಾಗಿದೆಯೇ. ಅದು ಬೇರೆ ಈ ವರ್ಷ ತಮ್ಮ ಕೋಣಗಳನ್ನು ನೋಡಿದ ಬೇರೆಯವರು ಸುಮ್ಮನಿರುತ್ತಾರೆಯೇ.

ಅವರವರ ಕೋಣಗಳಿಗೆ ತರಬೇತಿ ಕೊಟ್ಟಾರು ಅಥವಾ ಅವರೂ ತೆಂಕಲಾಯಿಗೆ ಹೋಗಿ ನಮ್ಮ ಕೋಣಗಳಿಗಿಂತ ಉತ್ತಮ ಕೋಣಗಳನ್ನು ತಂದಾರು. ಈ ವರ್ಷ ಸಂಪಾದಿಸಿದ ಸ್ಥಾನವನ್ನು ಕಾಯ್ದುಕೊಳ್ಳಬೇಕಾದರೆ ತಾವು ವರ್ಷವಿಡೀ ಎಚ್ಚರದಿಂದಿರಬೇಕು. ಸ್ವಲ್ಪ ಹೆಚ್ಚು ಕಡಿಮೆಯಾದರೂ ಕಷ್ಟ. ಹಾಗಾಗಿ ಕೋಣಗಳನ್ನು ನೋಡಿಕೊಳ್ಳಲು ನಿಯಮಿಸಿಕೊಂಡವನಿಗೆ ವಿವರವಾಗಿ ಅವನ ಕೆಲಸದ ಬಗ್ಗೆ ಹೇಳಿ ಕಂಬಳದ ದಿನ ದೂರವಿದೆಯೆಂದು ಕೋಣಗಳ ಆರೈಕೆಯಲ್ಲಿ ಹೆಚ್ಚು ಕಡಿಮೆ ಆಗಬಾರದು ಎಂದು ಶಾಮಣ್ಣ ಎಚ್ಚರಿಸಿದರು.

ದೈನಂದಿನ ಕೆಲಸದ ಜವಾಬ್ದಾರಿಯನ್ನು ಕೆಲಸದವನಿಗೆ ವಹಿಸಿಕೊಟ್ಟು ಹಾಗೆಯೇ ಕಂಬಳದ ಸಂಭ್ರಮವೂ ಮರೆಯುತ್ತ ಬಂದ ಹಾಗೆ ಆದಿಗೆ ಮಾಡಲು ಬೇರೆ ಕೆಲಸವಿಲ್ಲದೆ ಬೇಜಾರಾಗಲು ಸುರುವಾಗಿತ್ತು. ಬೇರೆ ಸಾಹಸಕ್ಕೆ ಕೈ ಹಾಕಲು ಮನಸ್ಸು ಪದೇ ಪದೇ ತುಡಿಯುತ್ತಿತ್ತು. ಅದೂ ಕಂಬಳದ ಯಶಸ್ಸು ಹೊಸ ಸಾಹಸಕ್ಕೆ ತೀವ್ರವಾಗಿ ಪ್ರಚೋದಿಸುತ್ತಿತ್ತು. ಇನ್ನೂ ಗೆಲುವಿನ ಗುಂಗಿನಲ್ಲಿಯೇ ಇದ್ದ ಅಪ್ಪನೂ ತನ್ನ ಯಾವುದೇ ಹೊಸ ಪ್ರಯತ್ನವನ್ನು ಪ್ರೋತ್ಸಾಹಿಸಬಹುದೆಂಬ ಆಸೆ ಬೇರೆ.

। ಇನ್ನು ನಾಳೆಗೆ ।

‍ಲೇಖಕರು Admin

May 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: