‘ಹೊಸ ಮನುಷ್ಯ’ ಡಿಎಸ್ಎನ್ ನೆನೆದು…

ಆರ್ ಜಿ ಹಳ್ಳಿ ನಾಗರಾಜ

ವಿಚಾರವಾದಿ ಸಾಹಿತಿ ಡಿ.ಎಸ್. ನಾಗಭೂಷಣ ನಮ್ಮನ್ನಲಿದ್ದಾರೆ. ಅವರಿಗೆ ಅಗಲಿಕೆಯ ವಯಸ್ಸೇನು ಆಗಿರಲಿಲ್ಲ. ಮಾನಸಿಕವಾಗಿ ಬೌದ್ಧಿಕವಾಗಿ ಚೆನ್ನಾಗಿದ್ದರೂ, ದೇಹದ ತೊಂದರೆಯಿಂದ ಓಡಾಡಲು ಕಷ್ಟವಾಗುತ್ತಿತ್ತು. ಅವರೇ ಹೇಳಿಕೊಂಡಂತೆ ವೀಲ್ ಚೇರ್ ಅವರ ಹೆಜ್ಜೆ ಹಾಕವ ಸಂಗಾತಿ ಆಗಿತ್ತು.

ಡಿ.ಎಸ್.ಎನ್ ನಿಷ್ಠುರವಾದಿ, ಖಡಕ್ ಮನುಷ್ಯ. ಅಪ್ಪಟ ಲೋಹಿಯಾ ಸಮಾಜವಾದಿ. ತಾನು ನಂಬಿಕೊಂಡ ಸಿದ್ಧಾಂತವನ್ನು ಎಂದೂ ಬಿಟ್ಟುಕೊಡಲಿಲ್ಲ. ಮಾರಿಕೊಳ್ಳಲೂ ಇಲ್ಲ. ಅಪಾರ ಓದಿನಿಂದ ಪಡೆದ ಜ್ಞಾನವನ್ನು ತನ್ನದೇ ಆಲೋಚನೆಯಿಂದ ಚರ್ಚೆ ಮಾಡುತ್ತಿದ್ದರು. ರಾಜಿಯಾಗದ ತಮ್ಮ ಸಿದ್ಧಾಂತದಿಂದಾಗಿ ಹಲವರಿಗೆ ಆತ‌ ಜಗಳಗಂಟ.

೭೦ರ ದಶಕದ ಕೊನೆ. ದೆಹಲಿ ಆಕಾಶವಾಣಿಯಿಂದ ಕನ್ನಡ ವಾರ್ತಾವಾಚಕರಾಗಿದ್ದಾಗಲೇ, ಮೈಸೂರಿನಿಂದ ಪ್ರಕಟವಾಗುತ್ತಿದ್ದ “ಮಾನವ” ಪತ್ರಿಕೆಗೆ ಸಂಪಾದಕರಾಗಿಯೂ ಕೆಲಸ ಮಾಡಿದರು. ವಿದ್ಯಾರ್ಥಿಯಾಗಿದ್ದ ನನಗೆ ಆಗಲೆ ಅವರ ಹಾಗೂ ಪತ್ರಿಕೆಯ ಸಂಪರ್ಕ ಬೆಳೆದಿತ್ತು. “ಅನುಭವದ ಆಳಕ್ಕೆ; ಚಿಂತನೆಯ ಎತ್ತರಕ್ಕೆ” ಎಂಬುದು ಆ ಪತ್ರಿಕೆಯ ಟ್ಯಾಗ್ ಲೈನ್. ನೆಲಮನೆ ಪ್ರಕಾಶನದ ದೇವೇಗೌಡರು ಪ್ರಕಾಶಕರು. ಎಂ.ಆರ್. ಶಿವಣ್ಣ ಸಹ ಸಂಪಾದಕರು.

ಆ ಪತ್ರಿಕೆಯ ಪ್ರಕಟಣಾ ಜವಾಬ್ದಾರಿ ಹೊತ್ತಿದ್ದ ಈ ಇಬ್ಬರು ಕನ್ನೇಗೌಡನ ಕಪ್ಪಲಿನ ಮನೆಯನ್ನೆ ಕಚೇರಿ ಮಾಡಿಕೊಂಡಿದ್ದರು. ಎಲ್ಲ ಸಮಾಜವಾದಿಗಳನ್ನು ಆ ಪತ್ರಿಕೆ ಬೆಸೆದಿತ್ತು. ಪ್ರೊ. ಎಂ.ಡಿ. ನಂಜುಂಡಸ್ವಾಮಿ, ದೇವನೂರು ಮಹಾದೇವ, ಭಗವಾನ್, ಶಿವರಾಮು ಕಾಡನಕುಪ್ಪೆ, ಬಿ. ರಾಜಣ್ಣ ಮೊದಲಾದವರು ಅದಕ್ಕೆ ಬರೆಯುತ್ತಿದ್ದರು. ಮಾನವತಾವಾದಿ ಕೆ. ರಾಮದಾಸ್ ಜೊತೆ ಸೇರಿ ಮಾನವ ಮಂಟಪ ಮುನ್ನಡೆಸಿದವರಲ್ಲಿ‌ ಇವರೂ ಒಬ್ಬರು. ಚಿತ್ರದುರ್ಗ ಜಿಲ್ಲೆ ಮಲ್ಲಾಡಿಹಳ್ಳಿಯಿಂದ ರಾಘವೇಂದ್ರ ಪಾಟೀಲ ಆರಂಭಿಸಿದ “ಸಂವಾದ” ಸಾಹಿತ್ಯ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಮುಖ್ಯಪಾತ್ರ ವಹಿಸಿ, ಪತ್ರಿಕೆ ಬದ್ಧತೆಯಿಂದ ಬರಲು ಕಾರಣರಾಗಿದ್ದರು.

ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕವಯಿತ್ರಿ ಸವಿತಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಆಕಾಶವಾಣಿಯ ವಿವಿಧ ಹುದ್ದೆಯ ನಂತರ ನಿವೃತ್ತಿ ಹೊಂದಿ ಶಿವಮೊಗ್ಗದಲ್ಲಿ ನೆಲೆಸಿದ್ದರು.
ಕುಪ್ಪಳಿಯಲ್ಲಿ ನಡೆದ ಕುವೆಂಪು ವಿಚಾರ ಸಂಕಿರಣ, ಶಿಬಿರಗಳಲ್ಲಿ, ಇತರೆಡೆಯ ವಿಚಾರ ಸಂಕಿರಣಗಳಲ್ಲಿ ನಾವಿಬ್ಬರು ಭಾಗವಹಿಸಿದ್ದೇವೆ. ಸ್ನೇಹಿತರ ಜೊತೆಗೂಡಿ ಸಮಾಜವಾದಿ ಸಿದ್ದಾಂತಗಳ ಶಿಬಿರ ಏರ್ಪಡಿಸುತ್ತಿದ್ದರು.

ಈಚಿನ ವರ್ಷಗಳಲ್ಲಿ ಬದ್ಧತೆಯಿಂದ “ಹೊಸಮನುಷ್ಯ” ಪತ್ರಿಕೆ ತರುತ್ತಿದ್ದರು. ಅಲ್ಲೂ ನೇರಾನೇರಾ ಮಾತುಗಳಿಂದ ಚರ್ಚೆಯ ಭಾಗವಾಗಿದ್ದರು. ಅವರನ್ನು‌ ಪ್ರೀತಿಸುವವರ ಸಂಖ್ಯೆ ನಾಡಿನಾದ್ಯಂತ ಬಹುಸಂಖ್ಯೆಯಲ್ಲಿತ್ತು. ಹಾಗೆಯೇ ಜಗಳ ಆಡುತ್ತಲೆ ದ್ವೇಷಿಸುವವರೂ ಇದ್ದರು. ಬಳ್ಳಾರಿಯ ಲೋಹಿಯಾ ಪ್ರಕಾಶನದ ಅಣ್ಣ ಸಿ. ಚನ್ನಬಸವಣ್ಣನಿಗೆ ನಾಗಭೂಷಣ ಅಂದ್ರೆ ಪಂಚಪ್ರಾಣ.

ಕವಿ ಜಿಎಸ್ಸೆಸ್ ಅವರಿಗೆ ೭೫ ತುಂಬಿದಾಗ “ಹಣತೆ” ಎಂಬ ಅತ್ಯುತ್ತಮ ಅಭಿನಂದನಾ ಗ್ರಂಥವನ್ನು ಕವಿಪತ್ನಿ ಸವಿತಾ ಹಾಗೂ ನಟರಾಜ ಅವರ ಜೊತೆಗೂಡಿ ಲೋಹಿಯಾದಿಂದ ಡಿಎಸ್ಎನ್ ಹೊರತಂದರು. ಮುಂದೆ ಜಯಪ್ರಕಾಶ ನಾರಾಯಣ ಅವರ ಕೃತಿಯನ್ನು ನಾಗಭೂಣ ಇದೇ ಪ್ರಕಾಶನದ ಮೂಲಕ ಪ್ರಕಟಿಸಿದರು. ಜೆಪಿ ಅವರ ಸಂಪೂರ್ಣ ಕ್ರಾಂತಿಯ ಬಗ್ಗೆ ಅವರು ಆಳವಾಗಿ ತಿಳಿದುಕೊಂಡು ಅನೇಕ ಬಿಡಿಬಿಡಿ ಬರಹಗಳನ್ನು ಈ ಮೊದಲು ಮಾಡಿದ್ದರು. ಅಣ್ಣ ಚನ್ನಬಸವಣ್ಣ ಹಾಗೂ ಡಿಎಸ್ಎನ್ ಅವರಿಬ್ಬರ ಒಡನಾಟ, ಕುಟುಂಬ ಬಾಂಧವ್ಯ, ಸಖ್ಯ ವರ್ಣಿಸಲಾಗದು.

ಎರಡು ತಿಂಗಳ ಹಿಂದೆ “ಹೊಸ ಮನುಷ್ಯ” ಪತ್ರಿಕೆಯ ಸ್ಮರಣೀಯ ವಿಶೇಷಾಂಕ ತಂದು, ಅನಾರೋಗ್ಯದ ಕಾರಣನೀಡಿ ಪ್ರಕಟಣೆ ಕೊನೆಗಳಿದ್ದರು. ಹಲವು ವರ್ಷ ಬರವಣಿಗೆ ನಿರಂತರ ಮಾಡಿದರು. ವಿಚಾರ ಸಂಕಿರಣಗಳಲ್ಲಿ ಭಾಗಿಯಾದರು. ನಮ್ಮ ಅನ್ವೇಷಣೆ ಪ್ರಕಾಶನಕ್ಕಾಗಿ “ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ” ಅವರ‌ ಕಾವ್ಯ ವಿಶ್ಲೇಷಣೆಯ ಪುಸ್ತಕ ಬರೆದುಕೊಟ್ಟಿದ್ದರು. ಈಚೆಗೆ ಅದರ ಪರಿಷ್ಕರಣೆ ಮಾಡಿ ಕೊಡುವುದಾಗಿ ಹೇಳಿದ್ದರು. ಆದರೆ ಈಗ ಅವರೆ ಇಲ್ಲವಾಯ್ತು.

ಅವರ ಮಹತ್ವದ ಕೃತಿ “ಗಾಂಧಿ ಕಥನ”. ಇದಕ್ಕೆ ಈಚೆಗೆ ಕೇಂದ್ರ ಸಾಹಿತ್ಯ‌ ಅಕಾಡೆಮಿ ಪ್ರಶಸ್ತಿ ಕೂಡ ಬಂತು. ಬೆಂಗಳೂರಿನ ಮಿತ್ರರೊಬ್ಬರ ಆಹ್ವಾನದ ಮೇರೆಗೆ ವೀಲ್ ಚೇರಲ್ಲೇ ಆಗಮಿಸಿ, ಶಾಲೆಯೊಂದರಲ್ಲಿ ಮಕ್ಕಳಿಗಾಗಿ ಉಪನ್ಯಾಸ ‌ನೀಡಿ, ಪುಟ್ಟ ಬುಕ್ ಲೆಟ್ ಬರೆದುಕೊಡಲು ಒಪ್ಪಿದಾಗ ಎದುರಾದದ್ದು ಗಾಂಧಿ ಎಂಬ ಆಲದಮರದ ದೊಡ್ಡ ಕ್ಯಾನ್ವಾಸ್.

ಟಿಪ್ಪಣಿ ಮಾಡಿದ್ದ ಗಾಂಧಿ ಚಿಂತನೆ ಬದುಕಿನ ಅನಿವಾರ್ಯ ವಿಚಾರ ಬರೆಯುತ್ತಾ ಹೋದಂತೆ ೭೦೦ ಪುಟಗಳ ಮೀರಿತು. ಅದು ಹೊರ ಬಂದಾಗ ಅಪಾರ ಓದುಗರಿಗೆ‌ ತಲುಪಿತು. ಕೃತಿ ಬೆಲೆಯೂ ತೀರ ಕಡಿಮೆ ₹ ೩೫೦/- ಮಾತ್ರ! ಹೆಚ್ಚು ಜನಕ್ಕೆ ತಲುಪಿಸುವ ಉದ್ದೇಶ ಲೇಖಕ ಹಾಗೂ ಪ್ರಕಾಶಕರದ್ದಾಗಿತ್ತು. ಈ ಕೃತಿ ಅರ್ಪಣೆಯೇ ನನಗೆ ವಿಶೇಷ ಅನ್ನಿಸಿತು. “ಹಲವು ಬಿರುಗಾಳಿಗೆ ಸಿಕ್ಕಿ ಹೊಯ್ದಾಡಿದರೂ, ಆರದ ಜಗದ ಎಲ್ಲ ಗಾಂಧೀ ದೀಪಗಳಿಗೆ” ಎಂಬುದು ಉಲ್ಲೇಖನೀಯ. ಭಾರಿ ಪರಿಶ್ರಮ ಹಾಕಿ, ಗಾಂಧಿ ಬಗ್ಗೆ ಬಂದ ಕೃತಿಗಳ ಅಧ್ಯಯನ ಮಾಡಿ, ಕನ್ನಡದಲ್ಲಿ ಈ ಕೃತಿ ಬರೆದದ್ದು… ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಿಕ್ಕಿದ್ದು ಸಾರ್ಥಕ ಅನ್ನಿಸಿತು.

ಗಾಂಧಿ… ಬೃಹತ್ ಕೃತಿ ಕರೋನಾ ಕಾಲಘಟ್ಟದಲ್ಲಿ ಬಂದರೂ ಒಂದೂವರೆ ವರ್ಷದಲ್ಲಿ ಮೂರು ಮುದ್ರಣ ಕಂಡಿತು!. (ಈಗ ಎಷ್ಟು ಮುದ್ರಣವಾಗಿದೆಯೋ… ಮಾಹಿತಿ ಇಲ್ಲ). ಲೋಹಿಯಾ ಸಮಾಜವಾದವನ್ನು, ಗಾಂಧಿ ಸರಳ ಬದುಕಿನ ಚಿಂತನೆಗಳನ್ನು, ತುಳಿತಕ್ಕೊಳಗಾದ ಮೂಕಜನರಿಗೆ ಬಾಯಿ ಕೊಟ್ಟ ಅಂಬೇಡ್ಕರ್ ವಾದವನ್ನು, ಬಸವತತ್ವದ ಜಾತ್ಯತೀತ ನಿಲುವನ್ನು ಬದುಕಿನಲ್ಲೂ ಅಳವಡಿಸಿಕೊಂಡಿದ್ದ ಹಿರಿಯ ಗೆಳೆಯರ ಅಗಲಿಕೆ ದುಃಖ ತರಿಸಿದೆ. ಈ ಮೂಲಕ ಡಿಎಸ್ಎನ್ ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ.

‍ಲೇಖಕರು Admin

May 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: