ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಳು ಮಣ್ಣಿನ ಗೋಡೆಯಲ್ಲಿದ್ದ ನಾಲಿಗೆ..

ಆರ್ ಎನ್ ದರ್ಗಾದವರ

ನಮಗೇನೋ ನಿಮ್ಮನ್ನು ಹೊಗಳುವ
ಅಭ್ಯಾಸವಿರಲಿಲ್ಲ
ನೀವೇ ಹೊಗಳುವಂತೆ ಅಂಗಳದ ತುಂಬಾ
ಕೆಂಪು ಬಣ್ಣವನ್ನು ಚಲ್ಲಿ
ಅಭ್ಯಾಸಿಸಿದಿರಿ

ಬಣ್ಣವೂ ರಕ್ತದ ವಾಸನೆಯನ್ನೇ ಹೋಲುತ್ತಿತ್ತು
ನಮ್ಮ ಮಾತುಗಳೂ ನಿಮ್ಮನ್ನು ಹೊಗಳುವಂತೆ
ಕಾಣುತ್ತಿದ್ದವು
ಅರ್ಥಾತ್;
ಕೇಳುತ್ತಿದ್ದವು

ನಮ್ಮಲ್ಲೂ ಉರಿಯಿತ್ತು,
ಯಾರನ್ನೂ ಸುಡದೆ
ಒಂದೇ ಸಮನೆ ಧಗಧಗಿಸುತ್ತಿತ್ತು
ನಂದಿಸಲು ಯತ್ನಿಸುವ ನೀರೂ
ಸಹ ಅದರೊಂದಿಗೆ ಕುದಿಯುತ್ತಿತ್ತು
ಎತ್ತೆತ್ತಲೋ ಹರಿಯುತ್ತಿತ್ತು

ಸುಡುಗಾಡಿನ ನಕಾಶೆ ತಗೆದು
ದಾರಿಬದಿಯಲಿ ನೇತುಬಿಡಬೇಕು
ನೆಮ್ಮದಿ ನಿಟ್ಟುಸಿರು ಬಿಡುವವರು
ಅಲ್ಲಾದರೂ ಸ್ಮರಿಸಲಿ

ಹೂಳಿದವರನ್ನ ಬಾಯಿ ಹೊಲೆದು
ಮತ್ತೆ ಹೂಳಬೇಕು
ಅವರು ಸತ್ತಂತೆ ಕಾಣುತ್ತಿಲ್ಲ
ನೋಡಲ್ಲಿ,
ಹೊಗೆಯು ಉಸಿರಿಸುತಿದೆ
ಹೇಳದೆ ಉಳಿದ ಮಾತುಗಳೀಗ
ಬುಸುಗುಟ್ಟುತ್ತಿವೆ

ಕೇಕೆ ಹಾಕಿ ನಗುವ ಮಧ್ಯ ವಯಸ್ಸಿನ
ತುಂಬು ಯೌವ್ವನದ ಬಿಸಿಲ ಎದೆಯ ಮೇಲೆ
ಕತ್ತು ಸೀಳುವ ಕತ್ತಿಗಳು,
ನಟ್ಟ ನಡುವಿನ
ಕೆಂಡದಂತ ಸೂರ್ಯನ ಕಡೆ
ಮುಖ ಮಾಡಿ
ಪಳಪಳಿಸುತ್ತಿದ್ದವು

ನೀವು ಮೆಟ್ಟಿ ನಡೆದ ದಾರಿಯಲಿ
ಹಜ್ಜೆಗುರುತುಗಳು ಬಿಕ್ಕಿ ಬಿಕ್ಕಿ ಅಳುತ್ತಿದ್ದವು
ಬೆನ್ನು ಬಿದ್ದ ನೆರಳೂ ನರಳುತ್ತಾ
ನಡೆಯುತ್ತಿದೆ

ಅವಾಗಲೂ ನಿಮ್ಮನ್ನೇ ಹೊಗಳಿದ್ದು
ನೀವು ಹುಟ್ಟಿಸಿದ ಭಯದಿಂದಲೇ
ಹೊರತು
ಯಾವ ಪ್ರೇಮವೂ ಅಚ್ಚಿನಂತೆ
ನಮ್ಮಲ್ಲಿ ಉಳಿದಿರಲಿಲ್ಲ

ಎದೆಯೂದ್ದ ಬೆಳೆದು ನಿಂತ
ಹಾಳುಮಣ್ಣಿನ ಗೋಡೆಯ ತುಂಬ
ತುಂಡಾಗಿಯುಳಿದಿದ್ದ ನಾಲಿಗೆಯಲ್ಲೂ
ಸತ್ಯದ ತಾಜಾ ನಿರಾಸೆ ಹುಟ್ಟಿಕೊಂಡಿದೆ

‍ಲೇಖಕರು Avadhi

16 May, 2021

1 Comment

  1. ಧನಪಾಲ ನಾಗರಾಜಪ್ಪ

    ಚೆಂದದ ಕವಿತೆ ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading