ಹಾಣಾದಿ: ಪೆದ್ರೊ ಪರಾಮೊ ಕಾದಂಬರಿಯ ನೇರ ಅನುಕರಣೆ

ನಿಮ್ಮ ಅಭಿಪ್ರಾಯಕ್ಕೂ ಸ್ವಾಗತ

[email protected]ಗೆ ನಿಮ್ಮ ಅನಿಸಿಕೆ ಕಳಿಸಿ

ಹೊಸ ತಲೆ ಮಾರಿಗೆ ದಕ್ಕಿದ ಪೆದ್ರೊ ಪರಾಮೊ ಅನುಕರಣ…

ನೂರುಲ್ಲಾ ತ್ಯಾಮಗೊಂಡ್ಲು

ಒಂದು ಕೃತಿ ರಚನೆಯಾದ ಮೇಲೆ ಅದು ಒಳ್ಳೆಯ ಕೃತಿಯೊ ಅಲ್ಲವೊ ಎಂದು ಮುಲಾಜಿಲ್ಲದೆ ಸರ್ಟಿಫಿಕೇಟ್ ಕೊಡುವವನು ಓದುಗ ಮಾತ್ರ. ಹಾಗಾಗಿ ಒಬ್ಬ ಓದುಗನಾಗಿ ನನ್ನ ವಿವೇಚನೆಯನ್ನು ಹರಿಯಬಿಟ್ಟಿದ್ದೇನೆ.

ಕೃತಿ ಪರಿಕ್ಷೆಗೆ ಮಾನದಂಡವಿದೆ. ಅದಕ್ಕೆ ಅದರದೇ ಆದ ಸ್ವರೂಪಗಳಿವೆ. ಬಹುಶಃ ನವ್ಯ ಕಾಲದಲ್ಲಿ ಮಾತ್ರ ಅಂತಹ ಸತ್ವ ವಿಮರ್ಶೆಯನ್ನು ಮಾನದಂಡವೆಂಬ ಒರೆಗಲ್ಲಿಗೆ ಹಚ್ಚಿ ಕೃತಿ ಪರೀಕ್ಷೆಗೆ ತೊಡಗಿದ್ದಿರಬಹುದು. ಆದರೆ ಹೊಸ ತಲೆಮಾರಿನ ಹೊತ್ತಿಗೆ ಅಂತಹ ಕೃತಿನಿಷ್ಠ ವಿಮರ್ಶೆಯೇ ಬರದಂತೆ ಆಗಿದೆ.

ಪ್ರಾಯಶಃ ಅಂಥ ವಿಮರ್ಶೆಯ ಪರಿಕರಗಳೇ ಸವೆದಿರಬೇಕು. ಇಲ್ಲವೆ ಬರಹಗಾರರಲ್ಲಿ ವ್ಯುತ್ಪತ್ತಿ ಜ್ಞಾನ ಬತ್ತಿರಬೇಕು. ಈ ಪ್ರಶ್ನೆಗೆ ಯುಕ್ತ ಉತ್ತರ ದೊರೆಯದೆ ವಿಮರ್ಶಾ ವಲಯವೇ ಸೊರಗುತ್ತಿದೆ.

ಆದರೂ ಅಲ್ಲೊಂದು ಇಲ್ಲೊಂದು ವಿಮರ್ಶೆಯ ಗ್ರಂಥಗಳು ರಚನೆಯಾಗುತ್ತಿರುವುದು ಸಮಾಧಾನದ ಸಂಗತಿಯೇ ಹೊರತು ವಿಮರ್ಶಾ ಕ್ಷೇತ್ರದ ಸತ್ವಶಾಲಿ ಬೆಳವಣಿಗೆಯೇನಲ್ಲ.

ಹೊಸ ತಲೆಮಾರು ಸಾಹಿತ್ಯದ ವಿಮರ್ಶೆ ಕೇವಲ ಪಾತಳಿಯ ಬರಹವಾಗುಳಿಯುತ್ತಿದೆ. ವರ್ಷಕ್ಕೆ ನೂರಾರು ಕೃತಿಗಳು ಬಿಡುಗಡೆಯಾಗುತ್ತಿವೆ. ಆದರೆ ಅದರಲ್ಲಿ ಹತ್ತು ಕೃತಿಗಳಾದರೂ ಗುರುತಿಸಿ ವಿಮರ್ಶಿಸುವ ಸಾಹಿತ್ಯಿಕ-ಸಾಂಸ್ಕೃತಿಕ ಜವಾಬ್ದಾರಿ ಈಗಿನ ಯಾವ ಪತ್ರಿಕಾ ಸಂಪಾದಕರಿಗಾಗಲಿ, ಸಾಹಿತ್ಯ -ಸಂಘ ಸಂಸ್ಥೆಗಳಿಗಾಗಲಿ ಅಥವಾ ಅಕಾಡೆಮಿಕ್ ವಲಯದಲ್ಲಾಗಲಿ ಆಗುತ್ತಿಲ್ಲ ಬದಲು ಫೇಸ್ ಬುಕ್ ನಂತಹ ಜಾಲತಾಣದಲ್ಲಿ ಆ ಕೆಲಸ ಆಗಾಗ ಗ್ರಹಣ ಬಡಿದಂತೆ ಆಗುತ್ತಲಿದೆ. ಹೀಗೆ ನಾನು ಫೇಸ್ ಬುಕ್ ನಲ್ಲಿ ಓದಿದ ಕೃತಿ ವಿಮರ್ಶೆ ನರೇಂದ್ರ ಪೈಯವರದು. ನಿಜವಾಗಿ ಆ ಬರಹ ಕೃತಿನಿಷ್ಠವೊ ಅಲ್ಲವೊ ಎಂದು ಗೊತ್ತಾದುದು ‘ಪೆದ್ರೊ ಪರಾಮೊ’ ಮತ್ತು ‘ಹಾಣಾದಿ’ ಕಾದಂಬರಿಗಳು ಓದಿದ ನಂತರವೇ. ಅಲ್ಲಿಯ ವರೆಗೂ ಆ ಎರಡು ಕಾದಂಬರಿಗಳನ್ನು ಓದಿಯೇ  ಇರಲಿಲ್ಲ.

ಎರಡನೇ ಮುದ್ರಣ ಕಂಡಿರುವ ‘ಹಾಣಾದಿ’ ಕಾದಂಬರಿ ಕುರಿತು ಕೆಲವು ವಿಮರ್ಶರ್ಕರು ವಿಶ್ಲೇಷಿಸಿದ ನುಡಿಗಳನ್ನು ಓದಿ ಒಂದು ಅದ್ಭುತ ಅಚ್ಚರಿ ಕಾಯ್ದುಕೊಂಡಿದ್ದ ನನಗೆ ಕಾದಂಬರಿಯ ಓದು ಪೇಲವವಾಗಿಸಿತು.

” ವ್ಯಕ್ತಿ ಮತ್ತು ಸಮಾಜಗಳ ನಡುವಿನ ದುರಂತ ಬಿರುಕು ಕಾದಂಬರಿ ಪ್ರಕಾರದ ಮೂಲಭೂತ ತಾತ್ವಿಕ ದರ್ಶನ ” – ಡಿ.ಆರ್. ನಾಗರಾಜ್ ರವರ ಈ ಪರಂಪರೆಯ ನುಡಿ ನೆರಳಲ್ಲಿ ರುಲ್ಫೋನ ಪೆದ್ರೊ ಪರಾಮೊ ಕಾದಂಬರಿಯ ಒಂದು ಹೊರ ನೋಟದ ವಿಚಾರ ಸಂಗತಿಯ ಪಡಿ ನೆರಳಂತೆ ಹಾಣಾದಿ ಕಾದಂಬರಿಯು ಹೋಲಿಕೆಯಲ್ಲಿ ಸಿಗುತ್ತದೆ. ಆದರೆ ಈ ಎರಡು ಕಾದಂಬರಿಗಳ ಒಳ ನೋಟದ ಕಾಣ್ಕೆಯನ್ನು ಗಮನಿಸಿದರೆ ವಾಸ್ತವವಾದದ ಯಾವ ಮಹೋನ್ನತೆಯನ್ನು ಅದು ದರ್ಶಿಸುವುದಿಲ್ಲ.

ಆದರೆ ಪೆದ್ರೊ ಪರಾಮೊ ಕಾದಂಬರಿಯಲ್ಲಿ ಒಳ ನೋಟದ ಆಸೆಗಣ್ಣು ವಿಮರ್ಶೆಯನ್ನು ಸಡಿಲಪಡಿಸುವುದಿಲ್ಲ. ಅಲ್ಲಿ ಮ್ಯಾಜಿಕ್ ರಿಯಲಿಸಂ ಇದೆ. ವ್ಯಕ್ತಿ ಮತ್ತು ಸಮಾಜದ ನಡುವಿನ ಬದುಕಿನ ಅವಸ್ಥೆ , ವ್ಯವಸ್ಥೆಯೊಂದಿಗೆ ಸಂಬಂಧ ; ನೋವು, ಹತಾಶೆ, ತಳಮಳ, ಸಾವು ಮತ್ತೆ ಭೂತ-ವರ್ತಮಾನಗಳ ಕ್ಯಾನ್ವಾಸಿನ ಚಿತ್ರಣ ಕಪ್ಪು ಬಿಳುಪಿನಂತೆ ಇದೆ. ಈ ಬಿರುಕಿನ ದುರಂತವೇ ಪೆದ್ರೊ ಪರಾಮೊ ಕತೆಯಲ್ಲಿ ಸಣ್ಣ ಸಣ್ಣ ಕತೆಗಳ ವಿನ್ಯಾಸ ಸೃಷ್ಟಿಯು ಕಣ್ಣಂಚಲಿ ಮಿಂಚಿ ಹೋಗುವ ದಿಟ್ಟಿಸುವ ಭಾವ ಓದುಗನಿಗೆ ತರಿಸುತ್ತದೆ.                                                                

————

ಏನೆಲ್ಲ ಕಲ್ಪನೆ -ಭಾವಗಳನ್ನು ತುಂಬಿಕೊಂಡ ನಿರೂಪಕ ಈ ಎರಡು ಕಾದಂಬರಿಗಳ ಮೊದಲಲ್ಲಿ ಒಂದೇ ಪಾತ್ರವಾಗಿ ಕಾಣುತ್ತಾನೆ. ಏಕೆಂದರೆ ಈ ಎರಡು ಕೃತಿಗಳ ಮೊದಲ ಹತ್ತು ಹನ್ನೊಂದು ಕಂತುಗಳಲ್ಲಿ ವಸ್ತು , ತಾತ್ವಿಕ ನಿಲುವು, ತಂತ್ರ  ಮತ್ತು ಭಾಷೆಯ ನಿರೂಪಣೆ ಓದುಗನಂತಹ ವಿಮರ್ಶಕನಿಗೆ ಒಂದೇ ದಾರದಿಂದ ಬಿಗಿದಂತೆ ಅನಿಸುತ್ತದೆ.

ಪೆದ್ರೊ ಪರಾಮೊವಿನ ನಿರೂಪಕ ಹ್ವಾನ್ ಪ್ರೆಸಿಯಾಡೊ ಒಂದೆಡೆಯಾದರೆ ಹಾಣಾದಿಯ ನಿರೂಪಕ ಮತ್ತೊಂದು ಬದಿ. ಆದರೆ ಈ ಈರ್ವರ ಪ್ರಯಾಣ ತನ್ನ ಬಾಲ್ಯ ಕಳೆದ ತನ್ನಪ್ಪನ ಊರಿಗೆ. ಈ ಪ್ರಯಾಣದ ಘನ ಉದ್ದೇಶವು ಒಂದೇ ಅಪ್ಪನನ್ನು ಕಾಣಲು. – ಹೀಗೆ ಪ್ರಯಾಣ ಬೆಳೆಸುವ ಎರಡೂ ಕಾದಂಬರಿಗಳ ನಿರೂಪಕರು ಹಳ್ಳಿ ದಾರಿಯಲಿ ಊರಿಗೆ ಸಮೀಪ ಸಮೀಪವಾದಂತೆ ತಮ್ಮ ತಮ್ಮ ಬಾಲ್ಯದ ಪದರು ಪದರು ನೆನಪುಗಳನ್ನು ಬಿಚ್ಚುತ್ತಾರೆ. ಅಲ್ಲಿ ಬರುವ ಬಿಸಿಲು, ಧಗೆಯ ಪ್ರಖರತೆ, ಏರು-ತಗ್ಗು , ಬೆಟ್ಟ-ಗುಡ್ಡಗಳಂತಹ ಪ್ರತಿಮೆಗಳು ಒಂದೇಯಾಗಿ ನಿರೂಪಕರಿಗೆ ಎದುರಾಗುತ್ತವೆ. ನಂತರ ಊರು ಪ್ರವೇಶಿಸಿದಾಗ ಮಕ್ಕಳ ಆಟ , ಕೆಡವಿದ ಮನೆಗಳು, ಪಾಳು ಬಿದ್ದ ಹಳ್ಳಿ ಬೀದಿಗಳು ಊರಿಗೆ ಊರೇ ಹಾಳು ಬಿದ್ದಿದೆ ಎನ್ನುವಂತಹ ರೂಪಕ ಶಬ್ದಗಳು ನಾಟಕೀಯವಾಗಿ ಬರುತ್ತವೆ.

ಹಾಗೆ ಪೆದ್ರೊ ಪರಾಮೊವಿನ ನಿರೂಪಕ ತನ್ನ ಮನೆಗೆ ಹತ್ತಿರಾದಾಗ “ಅಲ್ಲೊಬ್ಬ ಹೆಂಗಸು ನಿಂತದ್ದಳು. ಬಾ ಎಂದಳು ಹೋದೆ.” (ಪುಟ-154) ಹೀಗೆ ಹಾಣಾದಿಯಲಿ  ಮಗ ಈಗ ಬಂದೆಯೋ ? ನಿನ್ನ ಹಾದಿಯೇ ಕಾಯುತ್ತಿದ್ದೆ ನೋಡು……” ……ಕೂದಲು ಕೆದರಿ ನಿಂತ ಮುದುಕಿಯೊಂದು ಕರಿ ಹಲ್ಲು ಕಿಸಿಯುತ್ತ , ಮುಖದ ತುಂಬಾ ನಕ್ಕಿ ನಿನ್ನ ಹಾದಿ ಕಾಯುತ್ತಿದ್ದೆ ಅಂದಾಗ ಎದೆ ಧಸ್ಸೆಂದಿತು.” (ಪುಟ-25,ಅಧ್ಯಾಯ 3) -ಹೀಗೆ ಅಪ್ಪನನ್ನು ಹುಡುಕುವ ಹ್ವಾನ್ ಗೆ ಡೊನಾ ಎಡುವಿಗೆಸ್ ದ್ಯಾದಾ ಸಿಕ್ಕಿ ಊರಿನ ಸುದ್ದಿಗಳನ್ನು ತಿಳಿಸಿದರೆ, ಹಾಣಾದಿಯಲಿ ನಿರೂಪಕನಿಗೆ ಗುಬ್ಬಿ ಆಯಿ ಅಜ್ಜಿ ಸಿಕ್ಕಿ ಹಾಗೆ ಮಾಡುತ್ತಾಳೆ.

ನರೇಂದ್ರ ಪೈಯವರ ತಮ್ಮ ಟೀಕೆ-ಟಿಪ್ಪಣಿ ಬರಹದಲ್ಲಿ ಗುರುತಿಸಿದಂತೆ ಪೆದ್ರೊ ಪರಾಮೊ ಮತ್ತು ಹಾಣಾದಿಯ ಸುಮಾರು ನಲವತ್ತೈದು ಪುಟಗಳು ಒಂದೇ ವಸ್ತುವಿನ ಹಂದರದಲ್ಲಿ ಭೂತ-ವರ್ತಮಾನಗಳಲ್ಲಿ ತೊಯ್ಯುತ್ತಾ ತುಂಡು ತುಂಡು ನಿರೂಪಣಾ ವಿನ್ಯಾಸದಲ್ಲಿ ಉಪಕತೆಗಳು ತೆರೆದುಕೊಳ್ಳುವುದರಿಂದ ಹಾಣಾದಿ ಕಾದಂಬರಿ ಹೊಸದೇನನ್ನು ಕೊಡದೇ ಪೆದ್ರೊ ಪರಾಮೊನ ಅನುಕರಣೆಯಾಗಿ ಕಾಣುತ್ತದೆ                                                               ———–

ಹ್ವಾನ್ ರುಲ್ಫೋನ ಕಾದಂಬರಿ ಹುಟ್ಟೀದ್ದು 1955 ರಲ್ಲಿ. ಇದೊಂದು ಜಾನಪದಿಯ ಸಂಕೀರ್ಣ ಕೃತಿಯೆಂದು ಹೇಳುವುದಾದರೂ ಮನುಷ್ಯ – ಪ್ರಕೃತಿಯ ನಿಗೂಢತೆ, ಕೇಡು, ಕೆಡುಕು, ಬಡತನ, ಶ್ರೀಮಂತಿಕೆ, ಪ್ರಭುತ್ವ – ರಾಜಕೀಯ, ಹಾಗೆ ದುಷ್ಟತನ, ಜೀವನ- ಹೋರಾಟ ಮತ್ತು ಸಾವು ಇಲ್ಲಿ ಸಂಗಾತಗಳಾಗಿ ಬೇರೆ ಬೇರೆ ರೂಪಗಳಲ್ಲಿ ಪಾತ್ರಗಳಲ್ಲಿ ಭೂತ-ವರ್ತಮಾನದ ವಲ್ಗನದಲ್ಲಿ ಕತೆ-ಉಪಕತೆಗಳು ವಸ್ತುಗೆ ವೇದಿಕೆ ಒದಗಿಸುತ್ತದೆ. ಮೆಕ್ಸಿಕೊ ಜನರ ಜೀವನದಲ್ಲಿ ನಡೆದಂತಹ ರಾಜಕೀಯ ಉಪಟಳ, ಹಿಂಸೆ , ಅತ್ಯಾಚಾರ ಜಮೀನು ಮಾಲೀಕರ ದುರಾಸೆ, ದಬ್ಬಾಳಿಕೆಯಂತಹ ಸಣ್ಣ ಸಣ್ಣ ಉದ್ವಿಗ್ನತೆಗೆ ಮೆಕ್ಸಿಕೊ ಊರಿನ ಜನರನ್ನೆ ಬಲಿ ತೆಗೆದುಕೊಂಡು ಕೊನೆಗೆ ಊರಿನ ಜನ ಸಾವಲ್ಲದ ಸಾವಿಗೆ ತುತ್ತಾಗಿ ತಮ್ಮ ಆತ್ಮಗಳೊಂದಿಗೆ ಕೊಮಾಲದಂತಹ ಕಾಲ್ಪನಿಕ ಊರಲ್ಲಿ ನರಳುತ್ತಲೇ ಉಳಿಯುತ್ತಾರೆ.

ಕಪಿಲರ ಹಾಣಾದಿ ಕಾದಂಬರಿ ಜನಿಸಿದ್ದು ಓ.ಎಲ್. ನಾಗಭೂಷಣ ಸ್ವಾಮಿಯವರು ರುಲ್ಫೋನ ಅನುವಾದ ಪೆದ್ರೊ ಪರಾಮೊ ಪ್ರಕಟಿಸಿದ ಎರಡು ವರ್ಷಗಳ ತರುವಾಯ. ಅಂದರೆ 2019 ರಲ್ಲಿ. ಈ ಕಾದಂಬರಿಯ ಓದು ಒಂದು ಅಜ್ಜಿ ಕತೆಯಂತೆ ಕಾಣುತ್ತದೆ. ಫ್ಯಾಂಟಸಿ ತಂತ್ರಗಾರಿಕೆ ಕತೆಯನ್ನು ಜತನಾಗಿ ಹಿಡಿದಿಡುತ್ತದೆ. ಇಲ್ಲಿಯೂ ಪೆದ್ರೊ ಪರಾಮೊ ಕಾದಂಬರಿಯ ಭೂತ-ವರ್ತಮಾನಗಳ ತಾಕಲಾಟ, ಅನಾಮಿಕ ಹಳ್ಳಿಯೊಂದರಲ್ಲಿ ಜರಗುತ್ತದೆ. ಬಾದಾಮಿ ಗಿಡದ ಪ್ರತಿಮೆಯನ್ನು ಕಾದಂಬರಿಯ ಕೇಂದ್ರ ಪ್ರಜ್ಞೆಗೆ ತಂದು ಇಡೀ ಊರಿನವರ ಸಾವು-ನೋವುಗಳಿಗೆ ಕಾರಣ ಗಿಡವೇ ? ಎಂದು ಹಲುಬುವ ಅಜ್ಜಿ ಕತೆ ಇದೆ. ಪೆದ್ರೊ ಪರಾಮೊ ಕಾದಂಬರಿಗಿಂತ ಹಾಣಾದಿ ಕಾದಂಬರಿಯಲಿ ಅಪ್ಪನನ್ನು ಕಾಣುವ ಹಂಬಲ ಹೆಚ್ಚಾಗಿ ನಿರೂಪಕನಿಗೆ ಕಾಡುತ್ತದೆ. ಅಧ್ಯಾಯ 17 ರಲ್ಲಿ ಬಾದಾಮಿ ಗಿಡವನ್ನು ಕಡಿದ ಕತೆ ಗುಬ್ಬಿ ಆಯಿ ಹೇಳುತ್ತಾಳೆ. ನಂತರ ಬಾದಾಮಿ ಗಿಡದ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದ ನಿರೂಪಕನ ತಂದೆ ಬಾದಾಮಿ ಗಿಡದ ಒಣ ಕಟ್ಟಿಗೆಗಳನ್ನು ಕಲೆಹಾಕಿ ಅದಕ್ಕೆ ಉರಿ ಹಾಕಿ ಉರಿಗೆ ಹಾರಿ ಪ್ರಾಣ ಬಿಡುತ್ತಾನೆ. ಅದಾದ ನಂತರ ನಾಲ್ಕೈದು ವರ್ಷಗಳಿಂದ ಮೈಯಲಿ ದೇವರು ಬಾರದೇ ಇರುವ ನಾವದೂರ ಅನಸೂಯಮ್ಮನ ಮೈಯಲಿ ದೇವರು ಬಂದು “ಅವನ ಗಿಡ ನೀವು ಕಡದಿರಿ, ಅವ ನಿಮಗ ಕೊಲ್ಲುತಾನ ಬಿಡಲ್ಲ ” (ಪುಟ-90) ಅಂದಿದ್ದು ಇದ್ದಕ್ಕಿದ್ದಂತೆ ಆಕೆ ಊರಿಂದ ಮಾಯವಾಗುತ್ತಾಳೆ. ಅದಾದ ಮೇಲೆ ಅವಳು ಊರಿಂದ ಮಾಯವಾದ ದಿನ ಉಟ್ಟಿದ್ದ ಸೀರೆ ನಿರೂಪಕನ ತಂದೆಗೆ ಹೂತಿದ್ದ ಗುಂಡಿ ಮೇಲೆ ಬಿದ್ದಿದ್ದು ಕಂಡ ಜನ ಒಬ್ಬೊಬ್ಬರಾಗಿ ಊರಲ್ಲಿನ ತಮ್ಮ ತಮ್ಮ ಮನೆಗಳನ್ನು ಆಸ್ತಿ-ಪಾಸ್ತಿಗಳನ್ನು ಕೆಡವಿ ಊರು ಖಾಲಿ ಮಾಡಿದ ಕತೆಯನ್ನು ಗುಬ್ಬಿ ಆಯಿಯ ಮೂಲಕ ನಿರೂಪಕ ಕೇಳುತ್ತಾನೆ. ಹೀಗೆ ಕತೆ-ಉಪಕತೆಗಳಲ್ಲಿಯೇ ಸವೆದು ಹೋಗುವ ಹಾಣಾದಿ ಕಾದಂಬರಿ ಅಡುಗೂಲಜ್ಜಿ ಕತೆಯಂತೆ ಕಾಣುತ್ತದೆ.

————

ಎರಡು ಕಾದಂಬರಿಗಳನ್ನು ತೌಲನಿಕವಾಗಿ ಅಭ್ಯಸಿಸಿದಾಗ ವಸ್ತುವಿನ ಶೈಲಿ ಒಂದೇ ಹಂದರದಲ್ಲಿ ಚಲಿಸುತ್ತಾ ಪೆದ್ರೊ  ಪರಾಮೊ ಕಾದಂಬರಿಯ ಅನುಕರಣೆಯಾಗಿಯೇ ಮ್ಯಾಜಿಕ್ ರಿಯಲಿಸಂನ ಕಸುಬು ಹಾಣಾದಿಯಲ್ಲೂ ಕಾಣಸಿಗುತ್ತದೆ. ಮತ್ತೆ ಪೆದ್ರೊ ಪರಾಮೊ ಕಾದಂಬರಿ ಭಾಷೆಯ ಲಯ ಹಾಣಾದಿ ಕಾದಂಬರಿಯಲ್ಲಿ ಭಾಗಶಃ ಮುಂದುವರಿದಂತೆ ಅನಿಸುತ್ತದೆ.

ಹಾಣಾದಿ ಕಾದಂಬರಿಕಾರನಿಗೆ ಭಾಷೆಯ ಹಿಡಿತವಿನ್ನೂ ದಕ್ಕಿಲ್ಲವೆನ್ನುವುದು ವಾಕ್ಯ ರಚನೆ ಮತ್ತು ಪದಕಟ್ಟುವುದರಿಂದ ಗೊತ್ತಾಗುತ್ತದೆ.

ಉದಾಹರಣೆಗೆ : “….ಸಿಕ್ಕವರ ತೊಡೆಯ ಮೇಲೆ ಉರುಳಾಡಿ ಮೈಕೈ ಮಣಿಸಿ ಪ್ರತಿ ಅಡುಗೆ ಮನೆಗೆ ನುಗ್ಗಿ ಹೆಣ್ಣಿಗೆ  ಮಾತಾಡಿಸಿ….”

“ಯಾಕೋ ನನ್ನ ಪ್ರತಿ ಹೆಜ್ಜೆಯ ಹಿಂದೆ ನೆಲ ಸೀಳುತ್ತಾ ಹೊಂಟಂತಿದೆ ”

” ಮನೆಗಳಿಲ್ಲದೆ ಮನುಷ್ಯರಾದರೂ ಇದ್ದಿದ್ದರೆ ಖುಷಿಯಾಗುತಿತ್ತು ”

” ಆದರಲ್ಲಿ ” -(ಪುಟ-23),

” ಮನೆಗೆ ”

” ಕಣ್ಣೀರಿಗ್ಯಾವ ಅಣೆಕಟ್ಟುಗಳು ಇರಲಿಲ್ಲ ”

” ಅವ ”

” ಈಗ ಆ ಮಾತುಗಳು ಸಹ ಪೂರ್ತಿ ಸತ್ತಿರಬಹುದು ” -(ಪುಟ-24) ,

” ಅರೆ! ನಾ ಬರುವಾಗ ಗಮನಿಸಲಿಲ್ಲವಲ್ಲ ನಾ ನನ್ನೂರಿಗೆ ಬಂದಿದ್ದೇನೆಯೋ,”( ಪ್ರಶ್ನಾರ್ಥಕ ಚಿನ್ಹೆ ಬಳಸಿಲ್ಲ)

” ಮುಖದ ತುಂಬಾ ನಕ್ಕಿ ನಿನ್ನ ಹಾದಿ ಕಾಯುತ್ತಿದ್ದೆ ”

“ಇನ್ನೂ ಹಾಗೇ ಪಡಸಾಲೆ ಮೇಲೆ ನಿಂತವನಿಗೆ ”

” ನಾ ಬರುವ ಸುದ್ದಿ ಇವಳಿಗೆ ಹೇಗೆ ಹೊಳೆಯಿತು ? ” -(ಪುಟ-25)

ಈ ಮೇಲೆ ಉದ್ಧರಿಸಲಾಗಿರುವ ಸಾಲುಗಳಲ್ಲಿ ಪ್ರತ್ಯಯಗಳ ಬಳಕೆ, ಗ್ರಾಂಥಿಕ ಭಾಷೆಯ ನಡನಡುವೆ ಆಡು ಭಾಷೆಯ ನುಸುಳುವಿಕೆ, ಅನುಪಸ್ಥಿತಿಯ ಪದಗಳ ಜೋಡನೆ, ಪ್ರಶ್ನಾರ್ಥಕ ಚಿನ್ಹೆಯಂತಹದ್ದು ಬಳಸದಿರುವುದು ಹೀಗೆ ಹಲವು ಕಡೆ ಇಂಥ ದೋಷಗಳು ಶಿಸ್ತಿನ ಓದಿಗೆ ಭಂಗತರುತ್ತದೆ. ಆದರೆ ಕೆಲವು ವಿಮರ್ಶಕರ ವಲಯ “ಇದೊಂದು ಕಾದಂಬರಿ ಲೋಕದ ವಿಸ್ಮಯವೇ ಸರಿ” , ” ‘ಗಾರುಡಿ ವಾಸ್ತವತೆ’ಯ ತಂತ್ರವನ್ನು ಬಳಸುತ್ತಾರೆ” “ಭಾಷೆಯ ಕುರಿತ ಎಚ್ಚರ, ಕತೆಯ ವಸ್ತುವನ್ನು ಹಿಗ್ಗಿಸಿದ ವಿಧಾನ, ಭೌಗೋಳಿಕ ಚಿತ್ರಣ, ಅಪರಿಚಿತ ಅನುಭವಗಳಿಗೆ ಲಗ್ಗೆ ಇಡುವ ಗುಣ ಅವರೊಳಗೆ ರೂಪುಗೊಳ್ಳುತ್ತಿರುವ ಗಟ್ಟಿ ಕಾದಂಬರಿಕಾರನಿಗೆ ಸಾಕ್ಷಿಯಾಗಿದೆ ” “ಬರಗಾಲದಲ್ಲಿ ಬಂದ ಮಳೆಯಂತೆ, ಈ ಕಾದಂಬರಿ ನನ್ನನ್ನು ಹಿಗ್ಗಿಸಿದೆ.” ಎಂದು ಹೇಳಿರುವುದು ಗಮನಿಸಿದರೆ ಉತ್ಪ್ರೇಕ್ಷೆಯಲ್ಲದೆ ಮತ್ತೇನಲ್ಲ ಎನಿಸುತ್ತದೆ.

ಹೀಗೆ ಪೆದ್ರೊ ಪರಾಮೊ ಕಾದಂಬರಿಯ ನೇರ ಅನುಕರಣೆ ಮಾಡಿರುವ ಕೃತಿಕಾರನನ್ನ ತಿದ್ದುವ ಕೆಲಸ ಮಾಡದೆ ಕಾದಂಬರಿಕಾರನ  ವಯಸ್ಸು ತೂಗಿ ಮಾಡಿ ಕಾದಂಬರಿಯ ದೋಷಗಳನ್ನು ತೋರಿಸದೆ ಹೊಗಳಿ ಹೊನ್ನ ಶೂಲಕ್ಕೆರಿಸಿರುವುದು ನೋಡಿದರೆ ಮುಂದೆ ಈ ಯುವ ಬರಹಗಾರನ ಬರಹಗಳು ತೂಗುಗತ್ತಿ ಮೇಲೆ ನಿಲ್ಲುವವೊ ಏನೊ ?

 

‍ಲೇಖಕರು avadhi

March 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

16 ಪ್ರತಿಕ್ರಿಯೆಗಳು

  1. Bidaloti Ranganath

    ನೂರುಲ್ಲಾ ಅವರ ವಿಮರ್ಶೆ ಉತ್ತಮ ವಸ್ತುನಿಷ್ಠ ಪ್ರಮಾಣಿಕ ವಿಮರ್ಶೆ

    ಪ್ರತಿಕ್ರಿಯೆ
  2. prathibha nandakumar

    ಇದೊಂದು ಕುತೂಹಲಕಾರಿ ವಿಶ್ಲೇಷಣೆ. ನಾನು ಹಣಾದಿ ಓದಿದ್ದೀನಿ, ಪೆದ್ರೊ ಪರಾಮೋ ಓದಿಲ್ಲ. ಈ ವಿಶ್ಲೇಷಣೆ ಓದಿದ ಮೇಲೆ ಅದನ್ನೂ ಓದುವ ಆಸೆ ಬಂದಿದೆ. ಒಂದು ಮಾತು ಮಾತ್ರ ನಿಜ. “ಹಾಣಾದಿ ಕಾದಂಬರಿಕಾರನಿಗೆ ಭಾಷೆಯ ಹಿಡಿತವಿನ್ನೂ ದಕ್ಕಿಲ್ಲವೆನ್ನುವುದು ವಾಕ್ಯ ರಚನೆ ಮತ್ತು ಪದಕಟ್ಟುವುದರಿಂದ ಗೊತ್ತಾಗುತ್ತದೆ.” ಇತ್ತೀಚಿನ ಕವಿಗಳು ಕತೆಗಾರರು ಭಿನ್ನ ಕಾಲದ ಶೈಲಿಯ ಭಾಷೆಗಳನ್ನು ಅಸಹಜವಾಗಿ ಮಿಶ್ರ ಮಾಡುತ್ತಾರೆ. ಅದರ ಬಗ್ಗೆ ನಾನು ಬಹಳ ಸಲ ಬರೆದಿದ್ದೀನಿ. ನೂರುಲ್ಲಾ ತ್ಯಾಮಗೊಂಡ್ಲು ಅವರ ಮುಂದಿನ ಬರಹಗಳ ಬಗ್ಗೆ ಕುತೂಹಲಿಯಾಗಿದ್ದೇನೆ.

    ಪ್ರತಿಕ್ರಿಯೆ
  3. Noor

    ಎರೆಡನ್ನು ಪರಾಮರ್ಶಿಸಿ ಅವಲೋಕಿಸಿ ವಿಮರ್ಶಾತ್ಮಕ ಚಿಂತನೆಗಳನ್ನು ಗೈದು ಒಂದು ನಿರ್ಧಾರಕ್ಕೆ ಬಂದಾಗಲೇ ಒಂದು ಕತೆ ಮತ್ತು ಕಾದಂಬರಿಗಳಿಗೆ ಬೆಲೆ ಬರುವುದು ಅದನ್ನು ತಾವುಗಳು ಸಾಕ್ಷಿ ಕರಿಸಿದ್ದೀರಿ….

    ಪ್ರತಿಕ್ರಿಯೆ
  4. gowri

    ಈ ಬರಹಕ್ಕೆ ಮೂಲ ಪ್ರೇರಣೆಯಾದ ನರೇಂದ್ರ ಪೈ ಅವರ ಬರಹವನ್ನೂ ಓದಿರುವೆ. ಎರಡರ ಕೇಂದ್ರವೂ ಒಂದೇ – ಹಾಣಾದಿ ಕಾದಂಬರಿ ಪೆದ್ರೊ ಪರಮನ ಅನುಕರಣೆ ಎನ್ನುವುದು. ಆಶ್ಚರ್ಯಕರ ಸಂಗತಿಯೆಂದರೆ, ಪೆದ್ರೊನನ್ನು ಕನ್ನಡಕ್ಕೆ ತಂದ ಓ.ಎಲ್‌.ಎನ್‌. ಅವರಿಗೆ ಹಾಣಾದಿ ಅನುಕರಣೆ ಅನ್ನಿಸದಿರುವುದು. ಸ್ವತಃ ಅವರೇ ಹಾಣಾದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದರ ಜೊತೆಗೆ, ಕಾದಂಬರಿಕಾರನಿಗೆ ಕೆಲವು ಸೂಕ್ಷ್ಮಗಳನ್ನೂ ಹೇಳಿರುವುದನ್ನು ಸ್ವತಃ ಕಪಿಲ ಅವರೇ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಹಾಗಾಗಿ ಹಾಣಾದಿ ಪೆದ್ರೊನ ನಕಲು ಎನ್ನುವುದು ಒಬ್ಬಿಬ್ಬರ ಅಭಿಪ್ರಾಯವಾಗಬಹುದೇ ಹೊರತು, ಅದು ಸತ್ಯವಾಗಲಾರದು. ಇನ್ನು ಈ ಬರಹದ ವಿಷಯಕ್ಕೆ ಬರುವುದಾದರೆ, ಬರಹಗಾರನಿಗೆ ಭಾಷೆಯ ಹಿಡಿತವಿನ್ನೂ ದಕ್ಕಿಲ್ಲವೆನ್ನುವುದು ಲೇಖಕರು ಕೆಲವು ವಾಕ್ಯಗಳ ಪಟ್ಟಿಯನ್ನೇ ಕೊಟ್ಟಿದ್ದಾರೆ. ಆ ವಾಕ್ಯಗಳ ದೋಷ ಯಾವುದು ಎನ್ನುವುದನ್ನು ಅವರು ಹೇಳಿದ್ದರೆ ಚೆನ್ನಾಗಿತ್ತು. ಹೀಗೆ ಮತ್ತೊಬ್ಬರ ಭಾಷೆಯ ಬಗ್ಗೆ ಬೆರಳು ತೋರುವವರು ತಮ್ಮ ಭಾಷೆಯ ಅಸಲಿಯತ್ತನ್ನೂ ವಿಮರ್ಶೆಗೆ ಒಡ್ಡಿಕೊಳ್ಳುವುದು ಉತ್ತಮ
    –ಗೌರಿ

    ಪ್ರತಿಕ್ರಿಯೆ
    • Bi

      ಗೌರಿ ಅವರೆ
      ಅವರ ಭಾಷೆಯ ಅಸಲಿಯತು ಏನು ತಿಳಿಸಿ ಸ್ವಲ್ಪ….ಬೀ

      ಪ್ರತಿಕ್ರಿಯೆ
    • prathibha nandakumar

      ” ಮುಖದ ತುಂಬಾ ನಕ್ಕಿ ನಿನ್ನ ಹಾದಿ ಕಾಯುತ್ತಿದ್ದೆ ”

      “ಇನ್ನೂ ಹಾಗೇ ಪಡಸಾಲೆ ಮೇಲೆ ನಿಂತವನಿಗೆ ”

      ” ನಾ ಬರುವ ಸುದ್ದಿ ಇವಳಿಗೆ ಹೇಗೆ ಹೊಳೆಯಿತು ?”

      ಮೇಡಂ ಇದರಲ್ಲಿ ಭಾಷಾ ದೋಷ ಕಾಣಿಸುತ್ತಿಲ್ಲವೇ?

      ಪ್ರತಿಕ್ರಿಯೆ
  5. ನೂರುಲ್ಲಾ ತ್ಯಾಮಗೊಂಡ್ಲು

    ಧನ್ಯವಾದಗಳು ಬೀದಲೋಟಿ…

    ಪ್ರತಿಕ್ರಿಯೆ
  6. ನೂರುಲ್ಲಾ ತ್ಯಾಮಗೊಂಡ್ಲು

    ಧನ್ಯವಾದಗಳು ಉಮರ್ ಸರ್..

    ಪ್ರತಿಕ್ರಿಯೆ
  7. ನೂರುಲ್ಲಾ ತ್ಯಾಮಗೊಂಡ್ಲು

    ತುಂಬ ಧನ್ಯವಾದಗಳು ಪ್ರತಿಭಾಜೀ…
    ನಾನು ಈ ವಿಶ್ಲೇಷಣೆ ಅಥವಾ ವಿಮರ್ಶೆ ಬರೆದಿದ್ದು ನಿರೀಕ್ಷಿತವಲ್ಲ…
    ನರೇಂದ್ರ ಪೈಯವರ ಬರಹ ಚರ್ಚೆಯಾದ ನಂತರ ನಾನು ಆ ಎರಡು ಕಾದಂಬರಿಗಳನ್ನು ತರಸಿಕೊಂಡು ಓದಿ ಬರೆದೆ…
    ನಾನು ಕೃತಿಕಾರನ ಕೃತಿಯನಷ್ಟೇ ಪರಿಗಣಿಸಿ ವಸ್ತುನಿಷ್ಠವಾಗಿ ಬರೆದಿದ್ದೇನೆ…
    ಆರ್.ಜಿ.ಹಳ್ಳಿ ಸರ್ ಕೂಡ ನನ್ನ ಬರಹಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.
    ತುಂಬ ಧನ್ಯವಾದಗಳು….

    ಪ್ರತಿಕ್ರಿಯೆ
  8. ನೂರುಲ್ಲಾ ತ್ಯಾಮಗೊಂಡ್ಲು

    ತುಂಬ ಧನ್ಯವಾದಗಳು ನೂರ್ ಸರ್…

    ಪ್ರತಿಕ್ರಿಯೆ
  9. ನೂರುಲ್ಲಾ ತ್ಯಾಮಗೊಂಡ್ಲು

    ಗೌರಿಯವರೇ…
    ಬರಹ ಓದಿ ಪ್ರತಿಕ್ರಿಯೆ ವ್ಯಕ್ತಪಡಿಸಿದಕ್ಕೆ ಮೊದಲಿಗೆ ಧನ್ಯವಾದಗಳು…
    ನಾನು ಈ ನನ್ನ ಬರಹ ಬರೆದಿದ್ದು ಯೂನಿಕ್ ಕೊಡ್ ಬರಹದಲ್ಲಿ ಅದೂ ಮೊಬೈಲ್ ನಲ್ಲಿ…
    ನಾನು ಬೊಲ್ಡ್ ಆಗಿ ಯಾವ ಯಾವ ಕಡೆ ತಪ್ಪಾಗಿದೆ ಎಂದು ನಮೂದಿಸಿದ್ದೇನೆ…ಅದು ಇಲ್ಲಿ ಬೊಲ್ಡ್ ಆಗಿ ಕಾಣುತ್ತಿಲ್ಲವಷ್ಟೆ…
    ತಾವು ಹಾಣಾದಿ ಓದಿದಾಗ ಹಾಗೆ ವಾಕ್ಯ ರಚನೆಯ ದೋಷ ಕಂಡು ಬಂದಿಲ್ಲವೆನ್ನುವುದಾದರೆ,
    ತಮ್ಮ ಇ- ಮೇಲ್ ಹಾಕಿ ನಾನು ಮೇಲ್ ಬರಹ ಕಳುಹಿಸುವೆ.ಆಗ ನಾನು ಉಲ್ಲೇಖಿಸಿರುವ ವಾಕ್ಯಗಳು ಯಾವ ಯಾವ ಕಡೆ ಹೇಗೆ ತಪ್ಪಾಗಿ ಬಂದಿವೆ ಎಂದು ಅರಿವಿಗೆ ಬರುತ್ತವೆ..
    ಧನ್ಯವಾದಗಳು….

    ಪ್ರತಿಕ್ರಿಯೆ
  10. ಮಹಾಂತೇಶ ಹಿರೇಕುರುಬರ

    ನಾನು ಪೆದ್ರೊ ಪರಾಮೊ ಓದಿಲ್ಲ.ನಿಮ್ಮ ಬರಹ ನೋಡಿ ಈಗ ಓದುವ ಮನಸ್ಸಾಗಿದೆ.ಕಪಿಲ ಒಬ್ಬ ಕಿರಿಯ ಬರಹಗಾರನಾಗಿ ಪೆದ್ರೂ ಪರಾಮೊದ ಶೈಲಿ ಅನುಕರಣೆ ಮಾಡಿರಬಹುದೇನೋ ಗೊತ್ತಿಲ್ಲ. ನಿಮ್ಮ ವಿಶ್ಲೇಷಣೆ ಅವರಿಗೆ ಸಹಾಯವಾಗಬಹುದೇನೊ. ಆದರೆ ಓದುಗನಾಗಿ ನನಗಂತೂ ಆ ಕಾದಂಬರಿ ಇಷ್ಟವಾಯಿತು.ಕಲ್ಬುರ್ಗಿ ಸೀಮೆಯ ಗ್ರಾಮೀಣ ಗಾಳಿಯನ್ನು ಅದು ಹಿಡಿದಿಟ್ಟು ಕೊಂಡಿದೆ.ನೀವು ತಪ್ಪು ಎಂದು ಹೇಳಿದ ಕೆಲ ಪದಗಳು ಅವು ಕಲ್ಬುರ್ಗಿ ಸೀಮೆಯ ಗ್ರಾಮೀಣ ಪದಗಳು.ಈ ಪ್ರಾದೇಶಿಕ ಭಾಷಾ ಭಿನ್ನತೆಯನ್ನು ಅರಿಯದೇ ತಪ್ಪು ಎಂದು ಹೇಳುವುದು ಸರಿಯಲ್ಲ ಎನಿಸುತ್ತದೆ.ಹಾಗಾದರೆ ನಮ್ಮ ಗ್ರಾಮೀಣ ಭಾಷೆ ಬದುಕುವುದಾದರೂ ಹೇಗೆ ಸಾಧ್ಯ.

    ಪ್ರತಿಕ್ರಿಯೆ
  11. ನೂರುಲ್ಲಾ ತ್ಯಾಮಗೊಂಡ್ಲು

    ಪ್ರಿಯ ಮಹಾಂತೇಶರವರೇ,
    ಭಾಷೆ ಒಂದು ನಾಡಿನ ಜೀವನಾಡಿ. ಅಂತೆ ಕತೆ,ಕಾದಂಬರಿ,ನಾಟಕವೇ ಇರಲಿ ಭಾಷೆ ಕೃತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾಷೆಯ ಬಳಕೆ ಅದನ್ನು ಬಳಸುವ ಕಲಾತ್ಮಕತೆ ಕೃತಿಕಾರನ ಜಾಣ್ಮೆಗೆ ಸಂಬಂಧಿಸಿದ್ದು. ಹಳ್ಳಿ ಭಾಷೆಯನ್ನು ಕತೆ ಅಥವಾ ಕಾದಂಬರಿಯಲ್ಲಿ ಹೇಗೆ ಬೇಕೊ ಹಾಗೆ ಎಲ್ಲಂದರಲ್ಲಿ ಬಳಸುವುದಲ್ಲ. ಹಾಗೆ ಬಳಸಿದರೆ ಭಾಷೆ ತನ್ನ ಲಯವನ್ನೇ ಕಳೆದುಕೊಳ್ಳುತ್ತದೆ. ಈ ಕಾದಂಬರಿಯಲ್ಲೂ ಹಾಗೆ ಆಗಿರುವುದು. ಗುಲ್ಬರ್ಗಾ ಸೀಮೆಯ ಭಾಷೆಯನ್ನು ಕಾದಂಬರಿಯಲ್ಲಿ ಬಳಸುವುದು ತಪ್ಪು ಎಂದು ನಾನು ಹೇಳಿಯೇ ಇಲ್ಲ. ಈ ಕಾದಂಬರಿ ನಿರೂಪಣೆಯಲ್ಲಿ ಕೃತಿಕಾರ ಗ್ರಾಮೀಣ ಅಥವಾ ಗುಲ್ಬರ್ಗಾ ಸೀಮೆಯ ಪ್ರಾದೇಶಿಕ ಭಾಷೆಯನ್ನು ಮಾಡಿಯೇ ಇಲ್ಲ. ಬದಲಿಗೆ ಗ್ರಂತಸ್ಥ ಭಾಷೆಯಲ್ಲಿ ನಿರೂಪಣೆಗೆ ತೊಡಗಿದ್ದಾರೆ. ಪ್ರಾದೇಶಿಕ ಭಾಷೆಯ ಬಳಕೆ ಕಾದಂಬರಿ ಪಾತ್ರ, ಅಲ್ಲಿ ಬರುವ ನಿರೂಪಣೆಯೊಂದಿಗೆ ಬರಬೇಕು ಅದು ಈ ಹಾಣಾದಿ ಕಾದಂಬರಿಯಲ್ಲಿ ಆಗಿಲ್ಲ. ಆ ಎಚ್ಚರವಿಲ್ಲವೆಂದೇ ನಾನು ಅಂತಹ ಸಾಲುಗಳು ,ಪದಗಳು ಉಲ್ಲೇಖಿಸಿರುವುದು.
    ಪ್ರಿಯರೇ ಕಾದಂಬರಿ ಶಿಸ್ತಾಗಿ ಓದಿ ತಮ್ಮ ಅರಿವಿಗೂ ದಕ್ಕಬಹುದು. ಸುಮ್ಮನೆ ಭಾಷೆ ಬದುಕುವ ಮಾತು ಬೇಡ. ಭಾಷೆ ಬದುಕಲಿಕ್ಕೆ ಸಾಹಿತ್ಯದ ಕೊಡುಗೆ ಅಪಾರವಿದೆ. ಅಂತ ಕೆಲಸ ಪರಂಪರೆಯ ಕಾದಂಬರಿಕಾರರಿಂದ, ಕತೆಗಾರರಿಂದ,ನಾಟಕಕಾರರಿಂದ ಮತ್ತು ಕವಿಗಳಿಂದ ಸಮೃದ್ಧವಾಗಿ ಆಗಿದೆ.ಮತ್ತೂ ಆಗಬೇಕಿದೆ.

    ಪ್ರತಿಕ್ರಿಯೆ
  12. ನೂರುಲ್ಲಾ ತ್ಯಾಮಗೊಂಡ್ಲು

    ತುಂಬ ಧನ್ಯವಾದಗಳು ಬೀಜಿ…

    ಪ್ರತಿಕ್ರಿಯೆ
  13. gowri

    ನೂರುಲ್ಲಾ ಮತ್ತು ಪ್ರತಿಭಾ ಮೇಡಂ ಅವರಿಗೆ, ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದ. ಕಪಿಲ್‌ ಅವರ ಭಾಷೆಯ ತೊಡಕುಗಳ ಕುರಿತಂತೆ ತಮ್ಮ ಕಾಳಜಿ ಮೆಚ್ಚುವಂತಹದ್ದು. ಆದರೆ, ಕೃತಿಕಾರನೊಬ್ಬನ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಇಡೀ ಕೃತಿಯನ್ನೇ ನೋಡಬೇಕೇ ಹೊರತು, ಕೆಲವು ಸಾಲುಗಳನ್ನು ಹೆಕ್ಕುವುದಲ್ಲ. ಹೀಗೆ ಹೆಕ್ಕುವುದಾದರೆ ಯಾವ ಲೇಖಕನ ಕೃತಿಯಿಂದಲೂ ಆಯ್ದುಕೊಡಬಹುದು. ಇನ್ನು ಪ್ರತಿಭಾ ಮೇಡಂ ಉಲ್ಲೇಖಿಸಿರುವ ಸಾಲುಗಳನ್ನೇ ನೋಡಿ: ಇನ್ನೂ ಹಾಗೇ ಪಡಸಾಲೆ ಮೇಲೆ ನಿಂತವನಿಗೆ ”, ” ನಾ ಬರುವ ಸುದ್ದಿ ಇವಳಿಗೆ ಹೇಗೆ ಹೊಳೆಯಿತು ?” – ಈ ಸಾಲುಗಳನ್ನು ಏನು ತಪ್ಪಿದೆ ಎನ್ನುವುದು ನನಗಂತೂ ಹೊಳೆಯಲಿಲ್ಲ. ಹಾಣಾದಿ ಕಾದಂಬರಿಯನ್ನು ಕುರಿತ ಬಹುತೇಕ ಪ್ರತಿಕ್ರಿಯೆಗಳಲ್ಲಿನ ಸಮಸ್ಯೆ, ಕೃತಿಕಾರನ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಓದಿರುವುದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: