ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನ್ನಡಿಯೇ ಚೂರು ಚೂರು..

ಚೂರಾದ ಕನ್ನಡಿ

ಬಿದಲೋಟಿ ರಂಗನಾಥ್

ಪಿಸುನುಡಿದ ಕನ್ನಡಿ
ಸ್ವರ ತಪ್ಪಿ ಬಿದ್ದಿದೆ
ಜೀವಕಳೆಯ ಭಾವವನು ನೋಡಲು
ಕನ್ನಡಿಯೇ ಚೂರು ಚೂರು

ಯಾವ ಚೂರನು ಮೊದಲು ಜೋಡಿಸಲಿ
ಯಾವುದಿಟ್ಟರೂ ಸೀಳಿ ಹೋದ ಮುಖದ ಭಾವ
ಕನಸುಗಳೋ ಕೇಳಲೇ ಬ್ಯಾಡಿ
ಕೈ ಕಾಲು ಮುರಿದುಕೊಂಡು ನರಳುತ್ತಿವೆ

ಹೊಸಕನ್ನಡಿ ತಂದು ನೋಡಿಕೊಳ್ಳಲು
ಮುಖವಿದ್ದು ಸತ್ತ ಭಾವದ ಹೆಜ್ಜೆಗಳು
ನಗುವಿಲ್ಲ ಚೈತನ್ಯದ ಚಂದ್ರನಿಲ್ಲ
ಮುಗುಳ್ನಗೆಯು ಸಾಗಿದ ದಾರಿಯಿಲ್ಲ

ಅವಳು ನನ್ನೊಳಗಿದ್ದು
ಚೂರಾದ ಕನ್ನಡಿಯನ್ನು ಮೆಲ್ಲನೆ ಎತ್ತಿಟ್ಟಳು
ಅವಳಿಗೂ ಅನುಮಾನ ಯಾವುದು ಮೊದಲು
ಯಾವುದು ನಂತರ ಆಮೇಲೆ…
ಆದರೂ ಒಮ್ಮೆ ಇಬ್ಬರೂ ನೋಡಿಕೊಂಡೆವು
ಛಿದ್ರ ಛಿದ್ರ ವಾದ ಬಿರುಕುಗಳ ನಡುವೆ
ಪೇಲವದ ಮುಖದ ಜಾಡು ಗೂಡುಕಟ್ಟುತ್ತಿತ್ತು

ಚೂರಾಗಿರುವುದು ಮುಖದ ಕನ್ನಡಿಯೋ
ದಿನವೂ ನೋಡಿ ನಗುತ್ತಿದ್ದ ನಿಲುವುಗನ್ನಡಿಯೋ
ತಡವಿ ನೋಡಿದೆ ಗೋಡೆಯ ಮೇಲೊಮ್ಮೆ
ಕನ್ನಡಿ ತಾಕುತ್ತಿದೆ ಬೆರಳುಗಳಿಗೆ
ಕತ್ತಲೆಯು ತುಂಬಿದೆ
ಮಿಂಚು ಹುಳವೊಂದು ಕನ್ನಡಿಯನ್ನು ಕಚ್ಚುತ್ತಿದೆ

ಆ ದಿನ ಮಾತಾಡಿಸಿದ ಮುಖದ ಗೆರೆಗಳ ಮೇಲೆ
ಸುಳ್ಳುಗಳ ಅಂಗಡಿಯ ಇಟ್ಟಿದ್ದಾರೆ
ಸತ್ಯದ ಕೈಗಳು ಬೊಬ್ಬೆಯೆದ್ದಿವೆ
ಜೋಡಿಸುತ್ತಲೇ ಇರುವೆ ಚೂರಾದ ಕನ್ನಡಿ ಚೂರುಗಳನ್ನು
ದಶಮಾನ ಕಳೆದರೂ
ಅದಕ್ಕೆ ಅಸಲಿ ಕಳೆ ಬರಲೇ ಇಲ್ಲ

‍ಲೇಖಕರು avadhi

26 March, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading