ಈ ಭಣಗುಡುವ ರಸ್ತೆಗಳಲಿ ಯಾರೂ ಇಲ್ಲ..

ಯಾರೆಂದರೆ ಯಾರೂ ಇಲ್ಲ

ಚನ್ನಬಸವ ಆಸ್ಪರಿ

ಹಾಡಹಗಲೇ ಅಪರಾತ್ರಿಯಾದ
ರಾಜಧಾನಿ
ಹೈ ಸ್ಪೀಡು ಗಾಡಿಗೆ
ದಿಢೀರ್ ಬ್ರೇಕು ಬಿದ್ದಂತೆ…

ವಟಗುಟ್ಟಿ ಚೀರಿ ಕಿರ್ ಗುಟ್ಟಿದ
ರಸ್ತೆಗಳೆಲ್ಲ ತಣ್ಣಗೆ ಮಲಗಿವೆ
ಉರಿವ ಬಾನನ್ನೇ ಇಡಿಯಾಗಿ ಹೊದ್ದು

ದೊಡ್ಡ ಸುದ್ದಿಗಳೂ ಸದ್ದಿಲ್ಲದೆ
ಸಾಯುವ ಈ ಊರಲ್ಲೀಗ
ಪಕ್ಕದ ಬೀದಿಯ ಪಿಸುಮಾತೂ
ಕಿವಿಗಡಚಿಕ್ಕುತ್ತಿದೆ

ಮೆಜೆಸ್ಟಿಕ್ ನ ಫುಟ್ ಪಾತುಗಳಲ್ಲಿ
ಜೀವ ಬಸಿವ ಅನಾಮಿಕರ
ಬೆನ್ನುಗಳಿಗೀಗ ನೆಲದ ಸಖ್ಯ
ಜೋಲಿ ಹೊಡೆದು ಸುಸ್ತಾದ
ಮಧುಶಾಲೆಗಳಿಗಿಂದು
ನಿರುಮ್ಮಳ ನಿದ್ದೆ
ಈ ಅಲ್ಪ ವಿರಾಮದಲಿ
ನಿತ್ಯ ಮುತ್ತೈದೆಯರ
ಬಿಗಿದ ಮೈ
ಹೂ ಹಗುರ

ಈ ಭಣಗುಡುವ ರಸ್ತೆಗಳಲಿ
ಯಾರೂ ಇಲ್ಲ-
ಹಡೆದವ್ವನನ್ನೇ ಭೋಗಿಸಿ ತೇಗಿದ
ಕುರುಡ ಈಡಿಪಸ್
ಮುಗಿಯದ ಜಿಜ್ಞಾಸೆಯಲಿ
ಮುಲುಗುವ ಹ್ಯಾಮ್ಲೆಟ್
ಕಡು ಮೋಹದ ಕುದುರೆಯೇರಿರುವ
ಕೊಲೆಗಡುಕ ಮೆಕ್ಬೆಥ್
ಹೊಳೆ ಹೊಳೆವ ಗುಮಾನಿಗಳ
ಗುಲಾಮ ದೊರೆ ಒಥೆಲೋ
ಅರ್ಧರಾತ್ರಿಯಲಿ ದೇವಮಾನವರಾಗಿ
ಎದ್ದು ಬಂದ ಸಿದ್ಧ ಶರಣರು
ತಲೆವಾನರು ತಲೆಹೀನರು
ತಲೆತಿರುಕರು ತಲೆಹಿಡುಕರು
ತಲೆದೂಗುವವರು ತಲೆಮಾಸಿದವರು ಬೆಲೆಬಾಳುವವರು ಬೆಲೆಹೀನರು
ಬೆಲೆತೆತ್ತವರು ಬೇಲಿ ಹಾಕಿದವರು
ಬಾಳು ಕೊಟ್ಟವರು ಗೋಣು ಮುರಿದವರು
ಕತ್ತೆತ್ತಿ ನಡೆದವರು ಕತ್ತು ಹಿಚುಕಿದವರು
ಕಟ್ಟಿದವರು ಕೆಡಿಸಿದವರು
ಕೆಟ್ಟ ಒಳ್ಳೆಯವರು ಒಳ್ಳೆಯ ಕೆಟ್ಟವರು-
ಉಹುಂ
ಯಾರೆಂದರೆ ಯಾರೂ ಇಲ್ಲ

ಮುಖವಾಡಗಳ ಮೇಲೆ
ಮುಖಗವಸು ಧರಿಸಿರುವ ಪುಣ್ಯಾತ್ಮರ
ಶ್ವಾಸ ಸೋಕದ ಈ ಹೊತ್ತು-
ಬಾನ ತುಂಬ ಹಾಡುಗಬ್ಬ
ಹಾರುವುದನೇ ಮರೆತಿದ್ದ ಹಕ್ಕಿಪಿಕ್ಕಿಗಳ
ಎದೆಯ ಆಪ್ತ ಮಾತು
ನೀರ ತುಂಬ ಜೀವದುಸಿರು
ಅಲೆ ಅಲೆಯ ಮೇಲೆ
ಸ್ವಚ್ಛಂದ ಗಂಗಾ ಸಂತಾನ
ತೊನೆ ತೊನೆದು ತೂಗುತಿದೆ
ಟಿಸಿಲೊಡೆದ ಎಲೆ ಬಳ್ಳಿ
ಒಂದುಗೂಡಿವೆ ಮತ್ತೆ
ಓಡಿಹೋದ ಗುಬ್ಬಚ್ಚಿಗಳು
ವಯನಾಗಿ ಕುಣಿಯುತಿವೆ
ಆಕಳಿಸಿ ತೂಕಡಿಸುತ್ತಿದ್ದ
ನಾಯಿ ಬೆಕ್ಕುಗಳೆಲ್ಲ

ಜನತಾ ಕರ್ಫ್ಯೂ…
ಹೊರಬರಬೇಡಿ..ದೂರನಿಲ್ಲಿ
ವೈರಸ್ಸಿನ ವೀರಾವೇಷ
ಕಣ್ಬಿಡುತ್ತಿರುವ ಕವನವೂ ಕಂಗಾಲು!!!

ಕೊರೋನಾ..
ಯಾರಿಗೋ ವಿಷ ಮತ್ತಿನ್ನಾರಿಗೋ ಅಮೃತ..!?

‍ಲೇಖಕರು avadhi

March 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: