ಹಾಡ್ಲಹಳ್ಳಿ ನಾಗರಾಜ್ ಅಂಕಣ – ಸೊಟ್ಟ ಬೆರಳಿನ ಸಮಸ್ಯೆ…

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.

ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ದೇವರಬೆಟ್ಟ, ಗುದ್ದಿನಿಂದ ತೆಗೆದ ಹೆಣ, ನಕ್ರ ಹಾಗೂ ನಾನು, ಕುಂಭದ್ರೋಣ (ಕತಾಸಂಕಲನಗಳು), ಬಾಡಿಗೆಬಂಟರು, ಬಿಂಗಾರೆಕಲ್ಲು, ಬೆಂಕಿಯಸುಳಿ, ಗೃಹ ಪುರಾಣ, ಕಡವೆಬೇಟೆ, ನಿಲುವಂಗಿಯ ಕನಸು ಕಾದಂಬರಿಗಳು ಪ್ರಕಟವಾಗಿವೆ.

‘ಕಾಡುಹಕ್ಕಿಯ ಹಾದಿನೋಟ’ ಎಂಬ ಆತ್ಮಕಥನ ಸ್ವರೂಪದ ಪ್ರಬಂಧ ಸಂಕಲನವಾಗಿದೆ. ಸುಮಾರು ನಾಲ್ಕು ದಶಕಗಳಿಂದಲೂ ಮಿತ್ರರೊಡಗೂಡಿ ಹಾಸನದಲ್ಲಿ ಹೊಯ್ಸಳ ಕಲಾ ಸಂಘ ಎಂಬ ಸಾಂಸ್ಕ್ರತಿಕ ಸಂಘಟನೆ ನಡೆಸುತ್ತಿದ್ದು, ಸಾಹಿತ್ಯಿಕ ಚಟುವಟಿಕೆ, ನಾಟಕ ಹಾಗೂ ಜನಪದ ಗೀತ ಗಾಯನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಸಾಹಿತ್ಯ ಪ್ರಕಾರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ಕಿರಂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಸಿದ್ದಗಂಗಾ ಮಠ ಅನ್ನ ದಾಸೋಹ, ಅಕ್ಷರ ದಾಸೋಹ ಮುಖೇನ ವಿದ್ಯಾದಾನಕ್ಕೆ ಕಾರಣವಾಗಿ ನಾಡಿನ ಲಕ್ಷಾಂತರ ಬಡ ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕು ಮೂಡಿಸಿದೆ.

ವಿದ್ಯೆಯಿಂದ ವಂಚಿತರಾಗಿ ಎಲ್ಲೋ ಮೂಲೆ ಗುಂಪಾಗಬೇಕಾಗಿದ್ದ ಬಡ ಗ್ರಾಮೀಣ ಮಕ್ಕಳು ಮಠದ ಮಡಿಲಿಗೆ ಬಿದ್ದ ಕಾರಣ ಸಮಾಜದ ಹಲವಾರು ರಂಗಗಳಲ್ಲಿ ತಮ್ಮ ಪ್ರತಿಭೆ ಮೆರೆಯಲು ಸಾಧ್ಯವಾಗಿದೆ. ಅಲ್ಲಿ ವಿದ್ಯೆ ಕಲಿತು ಹೋದವರು ಸಾಹಿತಿಗಳಾಗಿದ್ದಾರೆ, ಶಿಕ್ಷಣ ತಜ್ಙರಾಗಿದ್ದಾರೆ, ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾರೆ, ಐ ಎ ಎಸ್, ಐ ಪಿ ಎಸ್ ಅಧಿಕಾರಿಗಳಾಗಿದ್ದಾರೆ, ನಾಟಕ, ಸಿನಿಮಾರಂಗಗಳಲ್ಲಿ ಮಿಂಚಿದ್ದಾರೆ.

ಹೀಗೆ ಮಠದ ಅನ್ನ ದಾಸೋಹ, ಅಕ್ಷರ ದಾಸೋಹಗಳು ಲಕ್ಷಾಂತರ ಬಡಮಕ್ಕಳ ಬದುಕಿನಲ್ಲಿ ‘ದಾಟು ಹಲಗೆ’ಯಾಗಿ ಪರಿಣಮಿಸಿದೆ. ಈ ಶ್ರೀ ಮಠದಲ್ಲಿ ವಿದ್ಯಾರ್ಜನೆ ಮಾಡಿ ಬದುಕು ರೂಪಿಸಿಕೊಂಡ ಹಾಡ್ಲಹಳ್ಳಿ ನಾಗರಾಜ್ ಕತೆಗಾರರಾಗಿಯೂ, ಕಾದಂಬರಿಕಾರರಾಗಿಯೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.

ಸಿದ್ದಗಂಗೆಯಲ್ಲಿನ ಅವರ ಅನುಭವ ಕಥನಗಳನ್ನು ಇಲ್ಲಿ ನಿರೂಪಿಸಿದ್ದಾರೆ.

9

ನಾನು ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಬಿಎಸ್‌ಸಿಗೆ ಸೇರಿಕೊಂಡಿದ್ದೆ.

ಮೆಡಿಕಲ್‌, ವೆಟರ್ನರಿ ಎಂದು ನಮ್ಮ ವಿಜ್ಞಾನ ಮಾಸ್ಟರು ಬಿವಿಎಂ ಆಸೆ ಹುಟ್ಟಿಸಿದ್ದರೂ, ಅದಕ್ಕೆಲ್ಲಾ ಫೀಸು, ಬೇರೊಂದು ನಗರದಲ್ಲಿ ಹಾಸ್ಟೆಲ್‌ ವಾಸ್ತವ್ಯಗಳಿಗೆ ನಮ್ಮಲ್ಲಿ ಅರ್ಥಿಕ ಚೈತನ್ಯವಿಲ್ಲವೆಂದು ತಿಳಿದಿದ್ದರಿಂದ ಅವೆಲ್ಲಾ ಯೋಚಿಸಲು ಹೋಗದೆ ನೇರವಾಗಿ ಬಿಎಸ್‌ಸಿಗೆ ಫೀಸ್‌ ಕಟ್ಟಿದ್ದೆ.

ಆಗ ಕಟ್ಟುನಿಟ್ಟಿನ ಪ್ರಿನಿಪಾಲ್‌ ಎಂ.ಎ.ರಾಮಚಂದ್ರರಾವ್‌ ಇದ್ದರು. ಎಷ್ಟು ಕಟ್ಟುನಿಟ್ಟು ಎಂದರೆ ಕಾಲೇಜು ವೇಳೆಯ ನಂತರವೂ, ಬೆಳಗ್ಗೆ ಹಾಗೂ ಸಂಜೆಯ ವಾಕ್‌ ನೆಪದಲ್ಲಿ ಕಾಲೇಜು ಸುತ್ತ ಗಸ್ತು ಹಾಕುತ್ತಿದ್ದರೆಂದು ಪ್ರತೀತಿಯಿತ್ತು. ಅವರ ನಂತರ ಬಂದ ಮುನಿಗವಿಯಪ್ಪ ಸಹಾ ಅಷ್ಟೇ ಶಿಸ್ತಿನವರು. ಅವರು ಕೆಲಕಾಲದ ನಂತರ ನಮ್ಮ ಕಾಲೇಜಿನಿಂದ ಬೆಂಗಳೂರಿನ ಗ್ಯಾಸ್‌ (G.A.S) ಕಾಲೇಜಿಗ ವರ್ಗವಾಗಿ ಹೋಗಿದ್ದರು. ಅವರ ಅತಿ ಶಿಸ್ತಿನ ಕಾರಣಕ್ಕೋ ಏನೋ ಅಲ್ಲಿಗೆ ಹೋದ ಸ್ವಲ್ಪ ದಿನಕ್ಕೆ ಯಾರೋ ರೌಡಿ ವಿದ್ಯಾರ್ಥಿಗಳು ತಲೆಗೆ ಕಬ್ಬಿಣದ ಸರಳಿನಿಂದ ಹೊಡೆದು ಕೊಲೆ ಮಾಡಿದರೆಂದು ಸುದ್ದಿಯಾಯಿತು.

ಕಾಲೇಜಿನ ಈ ಮುಖ್ಯಸ್ಥರ ಶಿಸ್ತನ್ನು ಕಾರ್ಯಗತಗೊಳಿಸಲೇಂದೇ ನೇಮಕವಾಗಿದ್ದವರಂತೆ ನಡೆದುಕೊಳ್ಳುತ್ತಿದ್ದ ಫಿಜಿಕಲ್‌ ಡೈರೆಕ್ಟರ್‌ ಕ್ಯಾಪ್ಟನ್‌ ಎ.ಟಿ.ನಂಜಪ್ಪ. ಇಂಗ್ಲಿಷಿನ ಜ್ಞಾನ ಅಷ್ಟಾಗಿ ಇಲ್ಲದಿದ್ದಾಗ್ಯೂ ಎಲ್ಲರೊಂದಿಗೆ ಇಂಗ್ಲಿಷಿನಲ್ಲೇ ವ್ಯವಹರಿಸುತ್ತಿದ್ದರು. ಅವರ ಸ್ವಭಾವ ವಿದ್ಯಾರ್ಥಿಗಳಿಗೆಲ್ಲಾ ಮೋಜಿನದಾಗಿ ತೋರುತ್ತಿತ್ತು. ಅವರ ‘ಬ್ಲಟರ್‌ ಇಂಗ್ಲಿಷ್‌’ ನಮ್ಮ ಕಾಲೇಜಿನಲ್ಲಷ್ಟೇ ಅಲ್ಲದೆ ಇಡೀ ನಗರದ ಎಲ್ಲಾ ಶಾಲಾ ಕಾಲೇಜುಗಳಲ್ಲೂ ಪ್ರಸಿದ್ಧವಾಗಿತ್ತು.

ಹಿಂದಿನ ವರ್ಷ ವಿಶ್ವವಿದ್ಯಾನಿಲಯದ ಮಟ್ಟದ ಕ್ರೀಡಾಕೂಟದ ವೇಳೆ ಒಂದು ತಮಾಷೆಯ ಪ್ರಸಂಗ ನಡೆದಿತ್ತು. ಅದರ ಉಸ್ತುವಾರಿ ಎನ್‌.ಸಿ.ಸಿ ಅಧಿಕಾರಿಯೂ ಆಗಿದ್ದ ಕ್ಯಾಪ್ಟನ್‌ ಎ.ಟಿ.ನಂಜಪ್ಪನವರದು. ಯುವಜನ ಮಂತ್ರಿ ಅಂದಿನ ಮುಖ್ಯ ಅತಿಥಿಗಳು. ಪ್ರಿನಿಪಾಲರು ಹಾಗೂ ಇತರ ಅತಿಥಿಗಳು ಮಂತ್ರಿಗಳ ಆಗಮನದ ನಿರೀಕ್ಷೆಯಲ್ಲಿ ನಿಂತಿದ್ದರು. ನಂಜಪ್ಪನವರೂ ಶಿಸ್ತುಪಾಲನೆ ಮಾಡುತ್ತಾ ಅಲ್ಲಿಯೇ ಇದ್ದರು. ಮಂತ್ರಿಗಳು ದಾಬಸ್‌ ಪೇಟೆ ದಾಟಿ ತುಮಕೂರು ಹತ್ತಿರ ಬರುತ್ತಿದ್ದಾರೆಂದು ಸುದ್ದಿಯಾಯಿತು. ವಿದ್ಯಾರ್ಥಿ ಸಂಘದ ನಾಯಕರುಗಳು ನಿಂತಿದ್ದ ಅಧ್ಯಾಪಕ ವರ್ಗದವರನ್ನು ಅವರಿಗೆ ಮೊದಲ ಸಾಲಿನಲ್ಲಿ ಕೂರುವಂತೆ ಕೇಳಿಕೊಳ್ಳಲು ಬಂದರು. ನಂಜಪ್ಪನವರನ್ನು ‘ನಾವು ನೋಡಿಕೊಳ್ಳುತ್ತೇವೆ. ನೀವು ಕೂತುಕೊಳ್ಳಿ’ ಎಂದು ನಿವೇದಿಸಿಕೊಂಡರು.ಅವರು , ನಿಂತಿದ್ದ ಪ್ರಿನಿಪಾಲರು ಹಾಗೂ ಇತರ ಅಧಿಕಾರಿಗಳ ಕಡೆಗೆ ನೋಡಿದರು. ‘ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲಾ ಇನ್ನೂ ನಿಂತಿದ್ದಾರೆ. ನನ್ನದು ಯಾವ ಲೆಕ್ಕ’ ಎನಿಸಿತು. ಆ ಕಡೆಗೆ ಕೈ ತೋರಿಸುತ್ತ ‘ಬಿಗ್‌ ಬಿಗ್‌ ಮ್ಯಾನ್ಸ್‌ ಆರ್‌ ಸ್ಟಾಂಡಿಂಗ್‌! ವಾಟ್ ಈಸ್‌ ಮೈ ಅರಥ್ಮಿಟಿಕ್‌! ‘ಎಂದು ಜನಸ್ತೋಮದ ಮಧ್ಯೆ ತಮ್ಮ ಬಟ್ಲರ್‌ ಇಂಗ್ಲಿಷ್‌ ಬಳಸುವ ಅವಕಾಶವನ್ನು ಉಪಯೋಗಿಸಿಯೇ ಬಿಟ್ಟರು.

ನಾವು ಕಾಲೇಜಿಗೆ ಸೇರಿದ ಆರಂಭದಲ್ಲಿ ಈ ಸುದ್ದಿ ಪ್ರಚಲಿತವಾಗಿದ್ದು ಎಲ್ಲಾ ವಿದ್ಯಾರ್ಥಿಗಳ ತಮಾಷೆಗೆ ವಸ್ತುವಾಗಿತ್ತು.

ಅಂತಹಾ ಕ್ಯಾಪ್ಟನ್‌ ನಂಜಪ್ಪನವರು ನಮ್ಮ ಎನ್‌ಸಿಸಿ ಅಧಿಕಾರಿಗಳು. ಕಾಲೇಜಿನಲ್ಲೆ ಅಷ್ಟು ಶಿಸ್ತು ಮಾಡುವವರು, ಇನ್ನು ಎನ್‌.ಸಿ.ಸಿ ಯಲ್ಲಿ ಕೇಳಬೇಕೆ!

ಎನ್‌ಸಿಸಿ ಪೆರೇಡಿನ ಕಮಾಂಡ್‌ಗಳನ್ನೆಲ್ಲಾ ಇಂಗ್ಲಿಷ್‌ನಲ್ಲೇ ಕೊಡಬೇಕಾಗಿದ್ದುದರಿಂದ ಅವರಿಗೆ ಇಂಗ್ಲಿಷ್‌ ಬಳಕೆಯ ಸುಗ್ಗಿ!

ಎನ್‌ಸಿಸಿ ಮೊದಲ ದಿನದ ಪೆರೇಡ್‌. ಬೆಳಗ್ಗೆ ಏಳಕ್ಕೇ ಶುರು. ಅಷ್ಟರೊಳಗೆ ಎಲ್ಲರೂ ಪ್ರೌಢಶಾಲಾ ಮೈದಾನದಲ್ಲಿ ಕಡ್ಡಾಯವಾಗಿ ಹಾಜರಿರಬೇಕೆಂದು ಸೂಚನೆ ಕೊಟ್ಟಿದ್ದರು.

ನಾನು ಬೆಳಗ್ಗೆ ಬೇಗನೇ ಎದ್ದು ಮಠದಲ್ಲಿ ಶೌಚದ ಸ್ಪರ್ಧೆ ಮುಗಿಸಿ ಎನ್‌ಸಿಸಿ ಸಮವಸ್ತ್ರ ಹಾಗೂ ಮಿಲಿಟರಿ ಬೂಟು ಧರಿಸಿ ಸಂಭ್ರಮ ಪಡುತ್ತಲೇ ತುಮಕೂರು ಪ್ರೌಢಶಾಲಾ ಮೈದಾನಕ್ಕೆ ಓಡಿದೆ. ಖಾಲಿ ಹೊಟ್ಟೆಯಲ್ಲಿದ್ದ ನಾನು ಎಷ್ಟೇ ವೇಗವಾಗಿ ಓಡಿದರೂಸಮಯಕ್ಕೆ ಸರಿಯಾಗಿ ತಲಪಲಾಗಿರಲಿಲ್ಲ. ನಂಜಪ್ಪನವರ ಪೆರೇಡ್‌ ಶುರುವಾಗಿ ಐದು ನಿಮಿಷ ಕಳೆದಿತ್ತು.

ನಂಜಪ್ಪನವರಿಗೆ ಸಿಟ್ಟು ಬಂದಿತ್ತು. ತಡವಾಗಿ ಬಂದಿದ್ದರಿಂದ ನನಗೆ ಶಿಕ್ಷೆ ಖಚಿತ ಎಂದು ಅರಿವಾಯಿತು.

ಪ್ರೌಢಶಾಲಾ ಕಟ್ಟಡದ ಸುತ್ತ ನಾಲ್ಕೈದು ಸುತ್ತು ಓಡಿಸುವ ಶಿಕ್ಷೆ ಇರುತ್ತದೆ ಎಂದು ಹಿರಿಯ ಎನ್‌ಸಿಸಿ ಕೆಡೆಟ್‌ಗಳು ಮಾತಾಡಿಕೊಳ್ಳುತ್ತಿದ್ದುದು ಕೇಳಿಸಿಕೊಂಡಿದ್ದೆ.

ಅವರು ಕಣ್ಣು ಕೆಂಪಗೆ ಮಾಡಿಕೊಂಡು ನನ್ನಡೆಗೆ ತಿರುಗಿದರು. ಸ್ಕೂಲ್ ಕಟ್ಟಡದ ಕಡೆ ಬೆರಳು ಮಾಡಿ ತೋರುತ್ತಾ ‘ಗೋ ಅಂಡ್‌ ರೊಟೇಟ್‌ ದಿ ಸ್ಕೂಲ್ ಬಿಲ್ಡಿಂಗ್‌ ಪೈವ್ ಟೈಮ್ಸ್‌’ ಎಂದು ಗುಡುಗಿದರು. ಪೆರೇಡ್‌ ‘ವಿಶ್ರಾಮ್‌’ ದಲ್ಲಿ ನಿಂತಿದ್ದ ಕೆಡೆಟ್‌ಗಳು ಮುಸಿ ಮುಸಿ ನಗುತ್ತಾ ನಿಂತಿದ್ದರು. ನನಗೆ ಅವರ ಇಂಗ್ಲಿಷನ್ನು ಎಂಜಾಯ್‌ ಮಾಡುವ ಚೈತನ್ಯ ಇರಲಿಲ್ಲ. ಹೆಣಭಾರದ ಬೂಟುಗಾಲನ್ನು ಎಳೆದುಕೊಂಡು ಚುರುಗುಡುತ್ತಿದ್ದ ಹೊಟ್ಟೆಯೊಂದಿಗೆ ಸ್ಕೂಲಿನ ಸುತ್ತು ಹಾಕಲು ಅನುವಾದೆ.

ಆ ವಾರಕ್ಕೊಂದು ದಿನ ಎನ್‌ಸಿಸಿ ಇದ್ದರೆ ಮಿಕ್ಕ ಕೆಲವು ದಿನಗಳಲ್ಲಿ ಬೆಳಗ್ಗೆ ಅಥವಾ ಸಂಜೆ ವಿಶೇಷ ತರಗತಿಗಳು ಇರುತ್ತಿದ್ದವು. ಹಾಗಾಗಿ ಮಠದಲ್ಲಿ ದೊರೆಯುತ್ತಿದ್ದ ಎರಡು ಹೊತ್ತಿನ ಮುದ್ದೆ ಊಟದಲ್ಲಿ ಬೆಳಗಿನ ಊಟ ತಪ್ಪಿ ಹೋಗಿ ಒಮ್ಮೊಮ್ಮೆ ಸಂಜೆಯವರೆಗೂ ಹಸಿದ ಹೊಟ್ಟೆಯಲ್ಲೇ ಇರಬೇಕಾಗುತ್ತಿತ್ತು. ಸಂಜೆ ಸ್ಪೆಷಲ್‌ ಕ್ಲಾಸ್‌ ಏನಾದರೂ ಇದ್ದ ದಿನ ಮಠಕ್ಕೆ ತಲುಪುವುದು ತಡವಾಗಿ ಸಂಜೆಯ ಸಾಮೂಹಿಕ ಪ್ರಾರ್ಥನೆಗೆ ಗೈರಾಗಿ ಶಿಸ್ತುಭಂಗಕ್ಕೆ ಕಾರಣವಾಗುತ್ತಿತ್ತು.

ಇದೆಲ್ಲಾ ಕಷ್ಟವನ್ನು ಅರಿತ ನಮ್ಮ ಅಪ್ಪ ಅದು ಹೇಗೋ ಇನ್ನೂರು ರೂಪಾಯಿ ಹೊಂದಿಸಿಕೊಂಡುಬಂದು ಓಡಾಡಲು ಅನುಕೂಲವಾಗಲಿ ಎಂದು ಒಂದು ಹರ್ಕ್ಯುಲಸ್‌ ಸೈಕಲ್‌ ಫಿಟ್‌ ಮಾಡಿಸಿಕೊಟ್ಟು ಹೋಗಿದ್ದರು.

ಅದರಿಂದಲೂ ನನ್ನ ಸಮಸ್ಯೆ ಸಂಪೂರ್ಣ ಬಗೆಹರಿಯಿತು ಎನ್ನುವಂತಿಲ್ಲ.

ಆಗೆಲ್ಲಾ ಸುತ್ತಲ ಹಳ್ಳಿಯ ಸ್ಕೂಲ್‌ಗಳಲ್ಲಿ ಓದಿ ಪಾಸಾದ ಹುಡುಗರು ತುಮಕೂರಿನ ಕಾಲೇಜು ಸೇರಿ ನಗರದ ವಿವಿಧ ಬಡಾವಣೆಗಳಲ್ಲಿ ರೂಮು ಮಾಡಿಕೊಂಡಿರುತ್ತಿದ್ರರು.

ಅಗ್ಗದ ಬಾಡಿಗೆ ದರದಲ್ಲಿ ರೂಮುಗಳು ಸಿಕ್ಕುತ್ತಿದ್ದುದರಿಂದ ʼಪೂರ್‌ ಹೌಸ್‌ ಕಾಲೊನಿʼ ಎಂಬ ಬಡಾವಣೆ ಹಳ್ಳಿಯ ಬಡ ಹುಡುಗರ ಸ್ವರ್ಗದಂತಿತ್ತು. ಮಠದಿಂದ ಓಡಾಡಲು ಅನುಕೂಲವಾಗದ ಕೆಲ ಹುಡುಗರೂ, ಮಠ ತೊರೆದು ಅದೇ ಬಡಾವಣೆಯಲ್ಲಿ ರೂಮು ಮಾಡಿಕೊಂಡಿದ್ದರು.

ಹಿಂದಿನ ವರ್ಷ ನನ್ನ ಹಾಗೆಯೇ ಮಠಕ್ಕೆ ಸೇರಿ ಹನ್ನೊಂದನೇ ತರಗತಿ ಪಾಸು ಮಾಡಿಕೊಂಡಿದ್ದ ನಮ್ಮ ಊರಿನ ಪಕ್ಕದ ಹುಡುಗ ಕುಮಾರಸ್ವಾಮಿ ಕಾಲೇಜು ಸೇರಿದ ಮೇಲೆ ಅದೇ ಪೂರ್‌ ಹೌಸ್‌ ಕಾಲೊನಿಯಲ್ಲಿ ರೂಮು ಮಾಡಿಕೊಂಡಿದ್ದ.

ನನಗೆ ಮಠದ ಊಟ ತಪ್ಪಿನ ದಿನ, ಅವನಿಗೆ ಗೊತ್ತಾದರೆ ತನ್ನ ರೂಮಿಗೆ ಕರೆದುಕೊಂಡು ಹೋಗಿ ಬೆಳಗ್ಗೆಯ ಉಪ್ಪಿಟ್ಟನ್ನೊ, ಮಧ್ಯಾಹ್ನಕ್ಕೆ ಮಾಡಿಕೊಂಡಿದ್ದ ಅನ್ನವನ್ನೋ ತಿನ್ನಿಸಿ ಕಳಿಸುತ್ತಿದ್ದ‌.  

ಆಗೆಲ್ಲಾ ʼಇದ್ಯಾಕೆ ಇಷ್ಟು ಕಷ್ಟಪಡ್ತೀಯಾ, ಹ್ಯಾಗೂ ನಾನೂ ಒಬ್ಬನೇ ಇದೀನಿ, ರೂಮಲ್ಲಿ… ನೀನೂ ಇಲ್ಲಿಗೇ ಬಂದು ಬಿಡುʼ ಎಂದು ಆಹ್ವಾನ ನೀಡುತ್ತಿದ್ದ. ನನಗೂ ಮನಸ್ಸಿನಲ್ಲಿ ಆಸೆ ಮೂಡುತ್ತಿತ್ತು. 

ಒಂದು ದಿನ ಧೈರ್ಯ ಮಾಡಿ ಊರಿಗೆ ಕಾಗದ ಬರೆದೆ. 

ಎನ್‌ಸಿಸಿ ಪೆರೇಡು, ಸ್ಪೆಷಲ್‌ ಕ್ಲಾಸು, ಸೈನ್ಸ್‌ ಪ್ರಾಕ್ಟಿಕಲ್ಸ್‌, ಎಲ್ಲದರ ಬಗ್ಗೆ ಹೇಳಿದೆ… ಊರಿಂದ ಅಕ್ಕಿ ತಂದುಕೊಂಡರೆ ಸಾಕು…. ರೂಮ್‌ ಬಾಡಿಗೆನೂ ಕಡಿಮೆ ಇದೆ.. ಅದನ್ನು ಇಬ್ಬರೂ ಹಂಚಿಕೊಂಡರೆ ಆಯಿತು. ಪಾತ್ರೆ ಸೀಮೆಣ್ಣೆ ಸ್ಟೌವು ಹ್ಯಾಗೂ ಕುಮಾರಸ್ವಾಮಿಯವೇ ಇವೆ’.

ʼಹ್ಯಾಗಾದರೂ ಮಾಡು… ಆದರೆ ಪೇಟೆಯ ಹುಡುಗರ ಜತೆ ಸೇರಿ ಇಲ್ಲದ ದುಂದು ವೆಚ್ಚ ಮಾಡಬೇಡ. ನಮ್ಮ ಮನೆಯ ಕಷ್ಟ ನಿನಗೆ ಗೊತ್ತಲ್ಲ…. ಒಟ್ಟಿನಲ್ಲಿ ನೀನು ಚೆನ್ನಾಗಿ ಓದಿ ಡಿಗ್ರಿ ಪಾಸು ಮಾಡುವುದು ಮುಖ್ಯʼ ಎಂದು ನನ್ನ ಪತ್ರಕ್ಕೆ ಉತ್ತರವಾಗಿ ಬರೆದಿದ್ದರು.

ನಾನು ದಸರಾ ರಜಾಕ್ಕೆ ಊರಿಗೆ ಹೋಗಿ ಬಂದ ನಂತರ ಅಧಿಕೃತವಾಗಿ ʼಪೂರ್‌ ಹೌಸ್‌ ಕಾಲೊನಿʼಯ ರೂಮಿಗೆ ಸೇರಿಕೊಂಡೆ.

ಸೊಗಸುಗಾರ ಕುಮಾರಸ್ವಾಮಿ ದುಂದುಗಾರನೆಂಬುದು ನನಗೆ ಕ್ರಮೇಣ ತಿಳಿದಿತ್ತು. ಕಾಲೇಜಿನಲ್ಲಿ ಅವನ ತರಗತಿಯ ಒಂದಿಬ್ಬರು ಹುಡುಗಿಯರ ಸ್ನೇಹವೂ ಅವನಿಗಾಗಲೇ ಇತ್ತು. ಅವರಿಗೆ ಚಾಕೋಲೆಟ್ ಐಸ್‌ಕ್ಯಾಂಡಿ ಕೊಡಿಸುವಷ್ಟು ಹತ್ತಿರದವನಾಗಿದ್ದ.

ನಮ್ಮ ಮನೆಯವರಷ್ಟೆ ಆರ್ಥಿಕ ಕಷ್ಟದಲ್ಲಿದ್ದ ಅವನ ಮನೆಯವರಿಂದ ಇದಕ್ಕೆಲ್ಲಾ ಸಾಕಾಗುವಷ್ಟು ಹಣ ಹೇಗೆ ತರಿಸಿಕೊಳ್ಳುತ್ತಾನೆ ಎಂದು ನನಗೆ ಅಚ್ಚರಿಯಾಗುತ್ತಿತ್ತು.

ನನ್ನ ಸಂಶಯ ಅವನಿಗೆ ಅರ್ಥವಾಗಿತ್ತು. ಊರಿಗೆ ಬರೆದಿದ್ದ ಒಂದು ಪತ್ರವನ್ನು ಓದಲು ಕೊಟ್ಟಿದ್ದ. ಅವನ ಹಣದ ಬೇಡಿಕೆ ವಿಚಿತ್ರವಾಗಿತ್ತು.

ರೂಮು ಬಾಡಿಗೆ ಇತರ ಖರ್ಚಿನ ಜೊತೆಗೆ ಈ ಕೆಳಗಿನಂತೆ ಖರ್ಚಿನ ಬಾಬ್ತು ಬರೆದಿದ್ದ.

ʼಟ್ಯೂಷನ್‌ ಫೀಸು, ಲ್ಯಾಬೋರೇಟರಿ ಫೀಸು, ಮಿಸ್ಸಲೇನಿಯಸ್‌ ಫೀಸು….

ಕಾಲೇಜಿಗೆ ಕಟ್ಟುವ ಟ್ಯೂಷನ್‌ ಫೀಸ್‌ ಏನೋ ಸರಿ ಮಾರಾಯ, ಈ ಇನ್ನೆರಡು ಎಂತವು? ಸುಮ್ನೆ ಇಲ್ಲದ್ದೆಲ್ಲಾ ಬರ್ದು ದುಡ್ಡು ತರಿಸಿಕೊಂಡ್ರೆ ಮನೆಯವರಿಗೆ ತೊಂದ್ರೆ ಆಗದಿಲ್ವ? ಅವರಾದ್ರೂ ಎಲ್ಲಿಂದ ಹೊಂದಿಸಿ ಕೊಡ್ತಾರೆ ಎಂದೆ… ಕಾಲೇಜು ಲೈಫಲ್ಲಿ ಮಜಾ ಮಾಡ್ದೆ, ಮುದುಕರಾದ ಮೇಲೆ ಮಾಡ್ತಾರ!.

ʼನಮ್ಮ ಜಮೀನಿನ ಮೇಲೆ ಬ್ಯಾಂಕ್‌ಲ್ಲಿ ಡೆವಲಪ್‌ಮೆಂಟ್‌ ಲೋನ್‌ ಮಂಜೂರಾಗಿತೆ. ನಾನು ಹಿಡ್ತ ಮಾಡಿದ್ರೆ ನಮ್ಮ ಅಪ್ಪನ ಕೈ ತುಂಬಾ ದುಡ್ಡು ಓಡಾಡುತ್ತೆ… ಅವರು ಕುಡ್ದು ತಿಂದು ಹಾಳ್‌ ಮಾಡ್ತಾರೆʼ ಎಂದ.

ಅವನ ಲಾಜಿಕ್‌ ನನಗೆ ಅಚ್ಚರಿ ಮೂಡಿಸಿತ್ತು. ಕುಮಾರಸ್ವಾಮಿ ಊರಿನ ಥಿಯೇಟರಿಗೆ ಬಂದ ಒಂದು ಸಿನಿಮಾವನ್ನೂ ಬಿಡದೆ ನೋಡುತ್ತಿದ್ದ. ಅದು ಹಿಂದಿಯಾಗಲಿ, ಕನ್ನಡವಾಗಲಿ ಯಾವುದಾದರೂ ಸರಿ. ಹಿಂದಿಯಲ್ಲಿ ಜಿತೇಂದ್ರ ಅವನ ಮೆಚ್ಚಿನ ನಟ. ಅವನಂತೆಯೇ ಟೈಟ್‌ ಪ್ಯಾಂಟು, ಕುತ್ತಿಗೆಯವರೆಗೂ ಮುಚ್ಚುವ ಟೀ ಶರ್ಟು ಧರಿಸುತ್ತಿದ್ದ. ಕನ್ನಡ ಪ್ರೇಕ್ಷಕರಿಗೆ ಆಗ ರಾಜಕುಮಾರ್‌ ಒಬ್ಬನೇ ಆರಾಧ್ಯ ದೈವ.

ನನಗೂ ಸಿನಿಮಾಗಳ ಬಗ್ಗೆ ಆಸೆ ಇದ್ದರೂ ಥಿಯೇಟರಿಗೆ ಹೋಗಿ ದುಂದು ಮಾಡುವಷ್ಟು ಹಣ ಇರುತ್ತಿರಲಿಲ್ಲ. ನಾನು ಲೈಬ್ರರಿಗೆ ಹೋಗಿ ಎಲ್ಲಾ ಕನ್ನಡ ಪತ್ರಿಕೆಗಳ ಶುಕ್ರವಾರದ ಪುರವಣಿಗಳನ್ನು ತಿರುವಿ ಹಾಕಿ ಮೆಚ್ಚಿನ ನಟ ನಟಿಯರ ಚಿತ್ರಗಳನ್ನು ಕಣ್ತುಂಬಿಕೊಂಡು ಆಸೆ ಪೂರೈಸುಕೊಳ್ಳುತ್ತಿದ್ದೆ. ಕುಮಾರಸ್ವಾಮಿ  ಥಿಯೇಟರಿನ ಕಡೆ ನನ್ನನ್ನು ಸೆಳೆಯಲು ಪುಸಲಾಯಿಸಿ ವಿಫಲನಾಗಿದ್ದ.

ಆ ಶುಕ್ರವಾರ ಕೃಷ್ಣಾ ಥಿಯೇಟರಿನಲ್ಲಿ ʼಅಮ್ಮʼ ಪಿಕ್ಚರ್‌ ಬಿಡುಗಡೆಯಿತ್ತು.

ಮಧ್ಯಾಹ್ನ ನನಗೆ ಪ್ರಾಣಿಶಾಸ್ತ್ರದ ಪ್ರಾಕ್ಟಿಕಲ್‌ ಕ್ಲಾಸ್‌ ಇತ್ತು. ನಮ್ಮ ಡೆಮಾನ್ಸ್‌ಟ್ರೇಟರ್‌ ʼಫ್ರಾಗ್‌ ಡಿಸೆಕ್ಷನ್‌ ಇದೆ.. ಎಲ್ಲರೂ ನೋಡಿಕೊಂಡು ಸಿದ್ಧವಾಗಿ ಬನ್ನಿʼ ಎಂದು ಹೇಳಿದ್ದರು.

ಬೆಳಗ್ಗೆ ಕನ್ನಡ ಹಾಗೂ ಮೈನರ್‌ ಕೆಮಿಸ್ಟ್ರಿ ಕ್ಲಾಸ್‌ ಇತ್ತು. ನಾನು ಪ್ರಾಣಿಶಾಸ್ತ್ರದ ಪಠ್ಯ ಪುಸ್ತಕ ಹಾಗೂ ಪ್ರಾಕ್ಟಿಕಲ್‌ ಬುಕ್‌ ಎಲ್ಲಾ ಹರಡಿಕೊಂಡು ಮಧ್ಯಾಹ್ನದ ತರಗತಿಗೆ ಸಿದ್ಧನಾಗುತ್ತಿದ್ದೆ.

ಮೂಲೆಯಲ್ಲಿ ಸ್ಟೌವ್‌ ಹಚ್ಚಿ ಅನ್ನಕ್ಕಿಟ್ಟು ಬಂದ ಕುಮಾರಸ್ವಾಮಿ “ಈವತ್ತು ರಾಜ್‌ಕುಮಾರದು ʼಅಮ್ಮʼ ಪಿಕ್ಚರ್‌ ರಿಲೀಸು. ಹೋಗಿ ಬರೋಣ” ಎಂದ.

ʼಕ್ಲಾಸು? ಈವತ್ತು ಮಧ್ಯಾಹ್ನ ಜೂವಾಲಜಿ ಪ್ರಾಕ್ಟಿಕಲ್‌ ಬೇರೆ ಇದೆ.. ಪ್ರಾಗ್‌ ಡಿ ಸೆಕ್ಷನ್ನುʼ ಎಂದೆ.

ಏಯ್‌, ನಿಮ್ದು ಕಪ್ಪೆ ಕುಯ್ಯದು ಅದೆಲ್ಲಾ ಇದ್ದಿದ್ದೇ… ಅದು ಮಧ್ಯಾಹ್ನ ಅಲ್ವಾ? ಮಾರ್ನಿಂಗ್‌ ಶೋಗೆ ಹೋಗಿ ಅಷ್ಟರಲ್ಲಿ ಬರಬಹುದು ಎಂದ. ,ಬೆಳಗ್ಗೆ? ‘ಎಂದೆ.

ʼಕನ್ನಡ, ಮೈನರ್‌ ಕೆಮಿಸ್ಟ್ರಿ ಅಲ್ವಾ? ಅದೇನ್‌ ಮಹಾ ನಿಂಗೆ ರೂಮಲೇ ಓದಿಕೊಳ್ಳಬಹುದು ಬಿಡುʼ ಎಂದ. ನನಗೆ ರಾಜಕುಮಾರ್‌ ಭಾರತಿ ಜೋಡಿಯ ಸಿನಿಮಾ ನೋಡುವ ಆಸೆ ಒಳಗೇ ಗರಿಗೆದರಿತ್ತು. ಅವನ ಮುಖವನ್ನೇ ಮಿಕಿ ಮಿಕಿ ನೋಡುತ್ತಾ ನಿಂತೆ.

ಅವನು ಗೋಡೆ ಮೊಳೆಗೆ ನೇತು ಹಾಕಿದ್ದ ತನ್ನ ಪ್ಯಾಂಟಿನ ಜೇಬಿನಿಂದ ಐದು ರೂಪಾಯಿ ನೋಟು ತೆಗೆದು ನನ್ನ ಕೈಗೆ ತುರುಕ ‘ನೀನು ಏನ್‌ ಯೋಚ್ನೆ ಮಾಡ್ತಿದೀಯ ಅಂತಾ ಗೊತ್ತು. ದುಡ್‌ ನಾನು ಕೋಡ್ತೀನಿʼ. ನೀನು ಈಗ್ಲೇ ಹೋಗಿ ಕ್ಯೂ ನಿಂತ್ಗಂಡು ಸೆಕೆಂಡ್‌ ಕ್ಲಾಸ್‌ದು ಎರಡು ಟಿಕೆಟ್‌ ತಗಂಡಿರು .ನಾನು ಅನ್ನ ಮಾಡಿಟ್ಟು ಹಿಂದುಗಡಲೇ ಬಂದು ಬಿಡ್ತೀನಿʼ ಎಂದ.

ನನ್ನ ಬಳಿ ಇದ್ದದ್ದೇ ಎರಡು ಜೊತೆ ಬಟ್ಟೆ. ಅದರಲ್ಲಿ ಒಂದು ಜತೆ ಒಗೆಯಲೆಂದು ಸರ್ಫ್‌ ನೀರಿನಲ್ಲಿ ನೆನೆಯ ಹಾಕಿದ್ದೆ. ಅವತ್ತು ಪ್ರಾಕ್ಟಿಕಲ್‌ ಕ್ಲಾಸಿಗೆಂದೇ ನನಗೆ ಇಷ್ಟವಾದ ನೀಲಿ ಗೀರುಗಳಿದ್ದ ಅಚ್ಚ ಬಿಳಿಯ ಶರ್ಟನ್ನು ಅದರ ಜತೆಯ ಬಿಸ್ಕೆಟ್‌ ಕಲರ್‌ ಪ್ಯಾಂಟಿನೊಂದಿಗೆ ಸಿದ್ಧವಾಗಿಟ್ಟುಕೊಂಡಿದ್ದೆ.

ಬಟ್ಟೆಯಲ್ಲಿ ಈ ಆಯ್ಕೆ ಏಕೆ ಎಂಬ ಕುತೂಹಲವಾಗಬಹುದು. ಸುಮಾರು ಐವತ್ತು ಜನರಿದ್ದ ನಮ್ಮ ತರಗತಿಯಲ್ಲಿ ಅದೇಕೋ ಅರ್ಧಕ್ಕಿಂತ ಸ್ವಲ್ಪ ಹೆಚ್ಚೇ ಹುಡುಗಿಯರಿದ್ದರು.

ಇಂಗ್ಲಿಷ್‌ ಅಕ್ಷರದ ಅನುಕ್ರಮದಲ್ಲಿ ಹೆಸರುಗಳನ್ನು ಬರೆದು ರೋಲ್‌ ನಂಬರ್‌ ಕೊಡುವ ಪದ್ದತಿಯಿತ್ತು. ನಮ್ಮ ಪ್ರಾಕ್ಟಿಕಲ್‌ ಬ್ಯಾಚಿನ ಇಪ್ಪತ್ತು ಜನರಲ್ಲಿ ಹದಿನಾರು ಜನ ಹುಡುಗಿಯರೇ ಇದ್ದರು. ಎಲ್ಲ ನನ್ನ ಹೆಸರಿನ ಆಸು ಪಾಸಿನವರೇ ಲೀಲಾವತಿ, ಮಂಜುಳ, ನಾಗಮಣಿ, ನಾಗಲಾಂಬಿಕೆ, ನಾಗರತ್ನ, ಪ್ರಮೀಳಾ, … ಹೀಗೆ ಈ ಎಲ್ಲಾ ಬೆಳೆದ ಯುವತಿಯರೇ.ಇವರ ಮಧ್ಯೆ ಇನ್ನೂ ವಯಸ್ಸಿಗೆ ತಕ್ಕ ಹಾಗೆ ದೇಹ ಬೆಳೆಯದ ನಾನು.ಅವರು ನನ್ನನ್ನುಅವರ ಮನೆಯ ಯಾವುದೋ ಹುಡುಗನಂತೆಯೇ ನಡೆಸಿಕೊಳ್ಳುತ್ತಿದ್ದರು. ನನ್ನೊಂದಿಗೆ ಅವರು ಸಹಜವಾಗಿ ಸರಳವಾಗಿ ತಮಾಷೆಯಾಗಿ ಯಾವುದೇ ಭಿಡೆಯಿಲ್ಲದೆ ನಡೆದುಕೊಳ್ಳುತ್ತಿದ್ದರೂ ನನಗೆ ಅವರ ಮಧ್ಯೆ ಆಕರ್ಷಕವಾಗಿ ಕಾಣಬೇಕೆಂಬ ಆಸೆ ಸಹಜವಾಗಿ ಒಳಗೊಳಗೇ ಇರುತ್ತಿತ್ತು.

ಸಿನಿಮಾದ ಸಂಭ್ರಮ ಮನದಲ್ಲಿ ಮೂಡತೊಡಗಿತು. ಇಷ್ಟದ ಬಟ್ಟೆ ಧರಿಸಿ ಚೆನ್ನಾಗಿ ಕ್ರಾಪ್‌ ಬಾಚಿಕೊಂಡು ಎಂ.ಜಿ ರೋಡ್‌ ಕಡೆ ಓಡಿದೆ.

ಆಗಿನ್ನೂ ಎಂಟು ಗಂಟೆಯಾಗಿತ್ತು. ಕೃಷ್ಣಾ ಟಾಕೀಸಿನ ಹೊರಗಿನ ಗೇಟ್‌ ತೆರೆದಿರಲಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ನಿಂತು ಹಣಕಿ ಹಾಕುತ್ತಿದ್ದರು.

ಗೇಟ್‌ ತೆಗೆದದ್ದೇ ತಡ, ನಾನು ಓಡಿ ಹೋಗಿ ಸೆಕೆಂಡ್‌ ಕ್ಲಾಸ್‌ ಟಿಕೆಟ್‌ ಕೊಡುವ ಕಿಟಕಿಯ ಬಳಿ ಮೊದಲಿಗನಾಗಿ ನಿಂತುಕೊಂಡೆ. ಅಲ್ಲಿ ಕ್ಯೂ ನಿಯಂತ್ರಿಸಲು ಸರಳುಗಳೇನೂ ಇರಲಿಲ್ಲ . ಟಿಕೆಟ್   ಕೊಡುವ ಕಿಟಕಿಗೆ ಎದುರಾಗಿ ಜನ ನೇರವಾಗಿ ನುಗ್ಗಿ ಬರದಂತೆ ಒಂದು ತುಂಡುಗೋಡೆ ಮಾತ್ರ ಇತ್ತು.ಥಿಯೇಟರಿನ ಗೋಡೆಯ ಪಕ್ಕದಲ್ಲೆ ಜನ ಸಾಲಾಗಿ ಬರಬೇಕಾಗಿತ್ತು. ರಷ್ಷಾದಾಗ ನಿಯಂತ್ರಿಸಲು ಒಬ್ಬಿಬ್ಬರು ಪೊಲೀಸರು ಬರುತ್ತಿದ್ದರು. ಮಿಕ್ಕಂತೆ ಥಿಯೇಟರ್‌ ಸಿಬ್ಬಂದಿ ಇರುತ್ತಿದ್ದರು.

ಜನ ಎಲ್ಲಿದ್ದರೋ! ಪ್ರವಾಹದೋಪಾದಿಯಲ್ಲಿ ನುಗ್ಗ ತೊಡಗಿದರು. ನೋಡ ನೋಡತ್ತಾ ಕ್ಯೂ ಬೆಳೆಯಿತು. ಇಬ್ಬರು ಥಿಯೇಟರ್‌ ಸಿಬ್ಬಂದಿ ಬಂದು. ಜನ ಆಚೀಚೆಯಿಂದ ಬಂದು ಗೋಡೆಯೊಳಕ್ಕೆ ನುಸುಳಿಕೊಳ್ಳದಂತೆ ಪಹರೆ ನಿಂತರು. ಕ್ಯೂನಲ್ಲಿ ನೂಕಾಟ ಶುರುವಾಯಿತು. ಒಬ್ಬರ ಭುಜ ಒಬ್ಬರು ಗಟ್ಟಿಯಾಗಿ ಹಿಡಿದುಕೊಂಡಿದ್ದ ಜನ ಹಿಂದೆ ಮುಂದೆ ನೂಕಾಡುತ್ತಾ ಹೋರಾಟದಲ್ಲಿ ತೊಡಗಿದ್ದರು. ಸಿಬ್ಬಂದಿ ಎಷ್ಟೇ ತಡೆದರೂ ಗೋಡೆಯೊಳ್ಳಕ್ಕೆ ಕ್ಯೂನ ಜನ ನುಸುಳುವುದನ್ನು ತಡೆಯಲಾಗುತ್ತಿರಲಿಲ್ಲ. ಆ ಒತ್ತಡವನ್ನು ಸಹಿಸಿಕೊಂಡು ಕಿಟಕಿಯ ಬಳಿ ನಿಲ್ಲುವುದು ನನಗೆ ಅಸಾಧ್ಯವಾಗತೊಡಗಿತು. ಹಿಂದಿನವರು ನೂಕಿಕೊಂಡು ಬಂದಂತೆ ಮುಂದಿದ್ದ ಕೆಲವರು ಬಲಿಷ್ಟರು ಬಂದು ಕಿಟಕಿಯ ಸರಳುಗಳನ್ನು ಭದ್ರವಾಗಿ ಹಿಡಿದು ನಿಂತರು. ತಳ್ಳಿದ್ದರಿಂದ ನಾನು ಅವರ ಹಿಂದಕ್ಕಾದೆ. ನೂಕಿಕೊಂಡು ಬರುತ್ತಿದ್ದ ಕ್ಯೂನ ಒತ್ತಡ ಹೆಚ್ಚಾಯಿತು. ಹಿಂದೆ ಒತ್ತರಿಸಲ್ಪಟ್ಟಿದ್ದ ನಾನು ಕಿಟಕಿ ಎದುರಿನ ರಕ್ಷಣಾ ತಡೆಗೋಡೆಗೆ ಹತ್ತಂಡೆಯಾಗಿ ನಿಂತುಕೊಂಡಿದ್ದೆ.

ಟಪ್‌ ಎಂದು ಕಿಟಕಿಯೊಳಗಿನ ಸಣ್ಣ ಕಿಂಡಿಯೊಂದು ತೆರೆದ ಸದ್ದಾಯಿತು. ಸ್ವರ್ಗದ ಬಾಗಿಲೇ ತೆರೆಯಿತೇನೋ ಎಂಬಂತೆ ಕ್ಯೂ ನಿಂತಿದ್ದ ಜನರಲ್ಲಿ ಸಂಚಲನ ಉಂಟಾಯಿತು.

ಒಬ್ಬ ಟಿಕೆಟ್‌ ಪಡೆದು ಗೋಡೆಯಾಚೆಗೆ ನಿರ್ಗಮಿಸಿದ್ದೇ ತಡ ಅದೆಲ್ಲಿದ್ದನೋ ಧಾಂಡಿಗನೊಬ್ಬ ಹೊರಗಿನಿಂದ ಎರಡು ಕೈಗಳಿಂದಲೂ ಗೋಡೆ ಹಿಡಿದು ಚಿಮ್ಮಿ ನನ್ನ ಹೆಗಲ ಮೇಲಕ್ಕೆ ಕಾಲೂರಿ ಕಿಟಕಿಯೆದುರು ನಿಂತು ಕಿಂಡಿಯೊಳಗೆ ಕೈ ಹಾಕಿ ಟಿಕೆಟ್‌ ಪಡೆದೇ ಬಿಟ್ಟ. ಅದೆಲ್ಲಿದ್ದರೋ ಅದಕ್ಕಾಗಿಯೇ ತರಬೇತಿ ಪಡೆದಿದ್ದವರಂತಿದ್ದ ನುರಿತ ಪಂಟರು ಜನರ ಕೋಲಾಹಲದ ಮಧ್ಯೆಯೂ ಗೋಡೆ ಹಾರಿ ಬಂದು ನನ್ನ ಭುಜದ ಮೇಲೆ ಕಾಲಿಟ್ಟು ಕಿಟಕಿಯ ಬಳಿ ಸೇರಿಕೊಳ್ಳುತ್ತಿದ್ದರು. ಆಚೆಯೂ ಇಲ್ಲದೆ ಈಚೆಯೂ ಇಲ್ಲದೆ ಗೋಡೆಗೆ ಹತ್ತಂಡೆಯಾಗಿ ನಿಂತಿದ್ದ ನನ್ನ ಕಾಲುಗಳನ್ನು ಬೇರೆ ಸತತವಾಗಿ ತುಣಿಯುತ್ತಿದ್ದರು. ನನಗೆ ಉಸಿರು ಕಟ್ಟಿದಂತಾಗಿ ಸತ್ತೇ ಹೋಗಿ ಬಿಡುತ್ತೇನೆನೋ ಎನಿಸಿ ಭಯವಾಗ ತೊಡಗಿತು.

ಸ್ವಲ್ಪ ಹೊತ್ತು ಅಷ್ಟೇ. ಕ್ಯೂ ಹತ್ತಾರು ಹೆಜ್ಜೆಯಷ್ಟು ಸಾಗಿ ಬಂದಿರಲಿಲ್ಲ. ಟಪ್‌ ಎಂದು ಕಿಂಡಿಯ ಬಾಗಿಲು ಮುಚ್ಚಿಕೊಂಡಿತು. ಥಿಯೇಟರಿನ ಹೊರ ಗೇಟಿನ ಬಳಿ ಎರಡರದ್ದಕ್ಕೆ ಹತ್ತು, ಐದರದಕ್ಕೆ ಇಪ್ಪತ್ತು ಎಂದು ಕೂಗುವುದು ಕೇಳತೊಡಗಿತು.

ʼಸೂಳೇ ಮುಕ್ಳು, ಮೊದ್ಲೆ ಟಿಕೇಟ್‌ಗಳನ್ನು ಬ್ಲಾಕ್‌ನವರಿಗೆ ಮಾರಿಕೊಂಡಿದ್ದಾರೆʼ ಎಂದು ಗೊಣಗಾಡಿಕೊಳ್ಳುತ್ತಾ ಜನ ನಿರ್ಗಮಿಸತೊಡಗಿದರು.

ʼಸದ್ಯ ಜೀವ ಉಳಿಯಿತಲ್ಲʼ ಎಂದುಕೊಳ್ಳುತ್ತಾ ಗೋಡೆಯ ಮರೆಯಿಂದ ಹೊರಬಂದೆ. ಟಿಕೆಟ್‌ ತರುವ ನನಗಾಗಿ ಅಲ್ಲಿ ಕಾಯುತ್ತಾ ನಿಂತಿದ್ದ ಕುಮಾರಸ್ವಾಮಿ ʼಇದೇನೋ ಮಾರಾಯ ನಿನ್ನ ಅವತಾರʼ ಎನ್ನುತ್ತಾ ಗಾಳಿ ಆಡುವ ಕಡೆಗೆ ಎಳೆದುಕೊಂಡ. ಟಿಕೆಟ್‌ ದೊರಕದೆ ನಿರಾಸೆಯಾಗಿದ್ದ ಅವನು ನನ್ನನ್ನು ಕರೆದುಕೊಂಡು ರೂಮಿನ ಕಡೆ ಹೆಜ್ಜೆ ಹಾಕಿದ.

ಕನ್ನಡಿಯೆದುರು ನಿಂತಾಗ ನನ್ನ ಬಟ್ಟೆಯ, ನನ್ನ ಅವತಾರ ನೋಡಿ ಅಳುವೇ ಬಂದು ಬಿಟ್ಟಿತು.

ಭುಜ ಅಸಾಧ್ಯ ನೋಯುತ್ತಿತ್ತು. ಜನರಿಂದ ತುಳಿಸಿಕೊಂಡ ಪಾದಗಳಲ್ಲಿ ವಿಪರೀತ ನೋವು.

ಬಟ್ಟೆ ಕಳಚಿ ಪಾದಗಳಿಗೆ, ಭುಜಕ್ಕೆ ಎಲ್ಲಾ ಹರಳೆಣ್ಣೆ ಹಚ್ಚಿ ನೀವಿಕೊಂಡು ಚೆನ್ನಾಗಿ ತಣ್ಣೀರು ಸ್ನಾನ ಮಾಡಿಕೊಂಡು ಒಂದು ಗಂಟೆ ಸುಧಾರಿಸಿಕೊಂಡೆ.

ನನ್ನ ಮೆಚ್ಚಿನ ಬಟ್ಟೆ ,ಧಾಂಡಿಗರ ಕಾಲ್ತುಣಿತಕ್ಕೆ ಸಿಲುಕಿ ನಲುಗಿ ಹೋಗಿತ್ತು. ಬೇರೆ ದಾರಿಯಿಲ್ಲದೆ ಕುಮಾರಸ್ವಾಮಿ ಕೊಟ್ಟ ಒಂದು ಬಣ್ಣದ ಅಂಗಿಯನ್ನೆ ತೊಟ್ಟು ಪ್ರಾಕ್ಟಿಕಲ್‌ ಕ್ಲಾಸಿಗೆ ಹೋದೆ.

ಮಂಜುಳ ʼಏನಿವತ್ತು ಹೊಸ ಬಟ್ಟೆʼ ಎಂದಳು. ʼಈವತ್ತು ನಾಗರಾಜ ದೇವಾನಂದ್‌ ಸ್ಟೈಲ್‌ನಲ್ಲಿ ಬಂದಿದ್ದಾನೆʼ ಎಂದು ಮಲ್ಲಿಕಾರ್ಜುನ ಸ್ವಾಮಿ ಛೇಡಿಸಿದ. ದೊಗಳೆಯಾಗಿ ನೇತಾಡುವಂತಿದ್ದ  ಆ ಅಂಗಿ ತೋರಿಸುತ್ತಾ  ನಾಗಲಾಂಬಿಕೆ ತಮಾಷೆ ಮಾಡಿದಳು. ʼನಮ್ಮೂರಲ್ಲಿ ಹುಚ್ಚೆಳ್ಳು ಹೊಲದಲ್ಲಿ ನಿಲ್ಲಿಸುವ ಬೆದರು ಗೊಂಬೆ ಹೀಗೆ ಇರುತ್ತೆʼ ಎಂದು ನಿಜಗುಣ ಗೇಲಿ ಮಾಡಿದ.

ರೂಮಿಗೆ ಬಂದವನೇ ಆ ಅಂಗಿಯನ್ನು ಬಿಚ್ಚಿ ಬಕೆಟಿನೊಳಗೆ ತುರುಕಿ ಸರ್ಫ್‌ನಲ್ಲಿ ನೆನಸಿಟ್ಟು ಹೋಗಿದ್ದ ನನ್ನ ಬಟ್ಟೆಗಳನ್ನು ಗಲ್ಲಿಯ ಕಡೆಗೆ ತೆಗೆದುಕೊಂಡು ಹೋಗಿ ಒಗೆಯಲು ಹಾಕಿಕೊಂಡೆ.

ಗಲ್ಲಿಯಾಚೆಯ ರೂಮಿನಲ್ಲಿ ಜೋರು ಗಲಾಟೆ ಕೇಳುತ್ತಿತ್ತು. ಯಾವತ್ತೂ ಇಲ್ಲದ ಗಲಾಟೆ. 

ಆ ರೂಮಿನಲ್ಲಿದ್ದ ಹುಡುಗರ ಸ್ವಭಾವವನ್ನು ಎಲ್ಲರೂ ಮೆಚ್ಚುತ್ತಿದ್ದರು. ಶಿವಗಂಗೆಯ ಕಡೆಯ ಹಳ್ಳಿಗಳಿಂದ ಬಂದು ಕಾಲೇಜಿಗೆ ಸೇರಿದ್ದ ಆ ನಾಲ್ವರು ಹುಡುಗರು ಅಲ್ಲಿ ರೂಮು ಮಾಡಿಕೊಂಡಿದ್ದರು.

ಎಲ್ಲರೂ ಕಟ್ಟು ನಿಟ್ಟಿನ ಶಿಸ್ತಿನವರು. ಪಾತ್ರೆ ಸೀಮೆಎಣ್ಣೆ ಸ್ಟೌವು ಒಟ್ಟಿನ ಖರ್ಚಿನಲ್ಲಿ ಕೊಂಡಿದ್ದರು. ರೂಮು ಬಿಡುವ ಸಂದರ್ಭ ಬಂದಾಗ ಮಾರುವಾಗ ,ಅವುಗಳಿಗೆ, ಕಾಲೇಜಿಗೆ ಹೊಸದಾಗಿ ಸೇರಿ ರೂಮು ಮಾಡಿದ ಗಿರಾಕಿಗಳು ಸಿಗುವ ಭರವಸೆ ಇತ್ತು.

ರೂಮು ಬಾಡಿಗೆ ನಾಲ್ವರಿಗೂ ಸಮ. ಅಡಿಗೆ, ಗುಡಿಸುವುದು, ಪಾತ್ರೆ ತೊಳೆಯುವುದು ಇದಕ್ಕೆಲ್ಲಾ ಟೈಮ್‌ ಟೇಬಲ್‌ ಇದ್ದೇ ಇತ್ತು.

ಅವರು ಊರಿನಿಂದ ತಂದ ಅಕ್ಕಿ, ರಾಗಿ ಹಿಟ್ಟು, ಕಾಳು ಮುಂತಾದವುಗಳನ್ನು ಚೀಲಗಳಲ್ಲಿ ಹಾಕಿ ತಮಗೆ ಮಾತ್ರ ಬಿಚ್ಚಲು ಬರುವ ಗಂಟು ಹಾಕಿ ಟ್ರಂಕುಗಳಲ್ಲಿ ಇಟ್ಟುಕೊಂಡಿರುತ್ತಿದ್ದರು. ಅಂದು ಊಟಕ್ಕೆ ಹಾಜರಿರುತ್ತಿದ್ದ ಪ್ರತಿಯೊಬ್ಬರೂ ಒಂದೊಂದು ಲೋಟ ಅಕ್ಕಿ, ರಾಗಿ ಹಿಟ್ಟು ಅಳೆದು ಕೊಡಬೇಕಾಗಿದ್ದುದು ನಿಯಮ. ರಜಾದಿನ ಯಾರಾದರೂ ಹಳ್ಳಿಗೆ ಹೋಗಿದ್ದರೆ ಅವರು ಕೊಡುವಂತಿಲ್ಲ. ಅದನ್ನು ಅಳೆಯುವುದಕ್ಕೂ ಅವರ ಬಳಿ ಒಂದು ಅಳತೆಯ ಲೋಟ ಇತ್ತು. ಯಾರಿಗೂ ಅನ್ಯಾಯವಾಗುವಂತಿಲ್ಲ. ಹಾಗಾಗಿ ಆ ಲೋಟದಲ್ಲಿ ಬೇಕಾಬಿಟ್ಟಿ ಅಂದರೆ ಒಬ್ಬರು ತುಂಬಾ, ಒಬ್ಬರು ರಾಶಿ, ಒಬ್ಬರು ಓರೆ ಮಾಡಿ ಅರೆ ಬರೆ ಅಳತೆ ಮಾಡುವಂತಿರಲಿಲ್ಲ. ಚೀಲದಿಂದ ಅಕ್ಕಿ ಅಥವಾ ರಾಗಿ ಹಿಟ್ಟನ್ನು ಲೋಟದ ತುಂಬಾ ಮೊಗೆದು, ಕಂಠದಿಂದ ಮೇಲೆ ಬಂದದ್ದನ್ನು ತೋರು ಬೆರಳನ್ನು ನೇರ ಮಾಡಿ ಸರಿಸಿ ಹಾಕಬೇಕಾಗಿತ್ತು. ಅದಕ್ಕೆ ʼತಲೆ ಹೊಡೆದುʼ ಹಾಕುವುದು ಎನ್ನುತ್ತಿದ್ದರು. 

ಅಷ್ಟು ಕಟ್ಟು ನಿಟ್ಟಿನ ಹುಡುಗರ ರೂಮಿನಲ್ಲಿ ಇದೇನು ಈ ದಿನ ಗದ್ದಲ ಎಂದು ಕೌತುಕವಾಯಿತು. ಒಳಗೆ ಟೀ ಮಾಡುತ್ತಿದ್ದ ಕುಮಾರಸ್ವಾಮಿಯೂ ಹೊರಬಂದ.

ಯಾರೋ ಒಬ್ಬ ಹುಡುಗ ಜೋರಾಗಿ ʼಅಯ್ಯಯ್ಯೋʼ ಎಂದು ಕಿರುಚುತ್ತಿದ್ದ. ನಾವು ಕುತೂಹಲದಿಂದ ಅಲ್ಲಿಗೆ ಓಡಿದೆವು. ಅವರ ಓನರ್‌ ಅಲ್ಲಿಗೆ ಬಂದಿದ್ದರು. 

ಗಟ್ಟಿಮುಟ್ಟಾಗಿದ್ದ ಮೂರು ಜನ ಸೇರಿ ಇನ್ನೊಬ್ಬನಿಗೆ ಹೊಡೆದು ಬಿಟ್ಟಿದ್ದರು. ಆ ಹುಡುಗ ಗೋಡೆಗೊರಗಿ ಅಳುತ್ತಾ ನಿಂತಿದ್ದ. ಓನರ್‌ ವಿಚಾರಣೆ ಶುರು ಮಾಡಿದರು.

ಅವನಿಗೇಕೆ ಹೊಡೆದಿರಿ? ಎಂದೂ ಇಲ್ಲದ ರಗಳೆ ಇಂದು ಏಕೆ?

ʼಇನ್ನೇನು ಮಾಡ್ತಾರೆ ಮತ್ತೆ!ʼ

ʼಓ, ಏನಾದರೂ ನಿಮ್ಮ ದುಡ್ಡು, ವಸ್ತು ಕದ್ದನಾ?ʼ

ʼಥೂ ಇವನೊಬ್ಬ ಹೊಟ್ಟೆಬಾಕʼ

ʼಓ ಅದಾ ಸಮಸ್ಯೆ, ನಿಮಗಿಲ್ಲದಂಗೆ ಅಡಿಗೆ ಮಾಡುದ್ದನ್ನೆಲ್ಲಾ ಅವನೇ ತಿಂದುಕೊಂಡು ಬಿಟ್ಟನಾʼ

ʼಅದೂ ಅಲ್ಲ ಸಾರ್‌, ಅದನ್ನು ಹೆಂಗೆ ಹೇಳದುʼ

ʼಮತ್ತೇನು ಹೇಳಿʼ

ʼಅವನು ಮೊದಲಿಂದಲೂ ಮಾಡಿದ ಅಡುಗೆಲಿ ಅರ್ಧ ಅವನೇ ತಿಂದುಕೊಳ್ತಿದ್ದನಾ? ಅದಕ್ಕೂ ನಾವು ಸುಧಾರಿಸಿಕೊಂಡು ಹೋದ್ವಿʼ…

ʼಹೂಂ ಸರಿ ಹೇಳ್ರಪ್ಪ ಮತ್ತೆʼ

ʼಜಾಸ್ತಿ ತಿನ್ನವರು ಜಾಸ್ತಿ ರಾಗಿ ಹಿಟ್ಟು ಅಕ್ಕಿ ಕೊಡಬೇಕಲ್ವ?..ʼನೋಡಿʼ ಎನ್ನುತ್ತಾ ಅಳತೆಯ ಲೋಟ ತಂದು ಓನರ್‌ ಮುಂದೆ ಹಿಡಿದು ʼಅವನ ಕರೆದು ಅಕ್ಕಿ ಅಳತೆ ಮಾಡಕೆ ಹೇಳಿ ಸಾರ್‌ʼ ಎಂದ.

ದೂರ ನಿಂತಿದ್ದ, ಪೆಟ್ಟು ತಿಂದಿದ್ದ ಹುಡುಗ ಮುಂದೆ ಬಂದ. ಅದೇನು ಸಮಸ್ಯೆ. ಅಳತೆ ಮಾಡಪ್ಪ ಎಂದರು ಓನರ್.

ಹುಡುಗ ಲೋಟದ ತುಂಬಾ ಅಕ್ಕಿ ಮೊಗೆದ. ತಲೆ ಹೊಡೆಯಲು ಬೆರಳು ನೇರ ಮಾಡಬೇಕಲ್ಲ. ನಿಮಿರಿಸಿದ. ಅವನ ಬೆರಳು ನೇರವಾಗುವ ಬದಲು ಒಳಭಾಗಕ್ಕೆ ಡೊಂಕಾಗಿ ಭಾಗಿಕೊಂಡಿತು. ಅಕ್ಕಿ ಲೋಟದ ತಲೆ ಹೊಡೆದ. ಲೋಟದಲ್ಲಿ ಮುಕ್ಕಾಲು ಭಾಗ ಮಾತ್ರ ಅಕ್ಕಿ ಉಳಿದುಕೊಂಡಿತು.

ʼಓ ಇದಾ! ಈ ಸೊಟ್ಟ ಬೆರಳಿಂದೇ ಸಮಸ್ಯೆ! ಎಂದರು ಓನರು.

ಮಿಕ್ಕ ಹುಡುಗರು ʼನೀವೇ ಹೇಳಿ ಸಾರ್‌ ಇದಕ್ಕೆ ಏನು ಮಾಡೋದುʼ ಎಂದರು.

“ಇದಕ್ಕೇನಿಲ್ಲ… ಸಿಂಪಲ್‌ .. ಇನ್ನು ಮೇಲೆ ತಲೆ ಹೊಡೆಯುವುದು ಬೇಡ.. ಮೊಗೆದು ಹಾಗೆಯೇ ಹಾಕಿʼ ಎಂದು ಓನರ್‌ ಹೊರಟು ಹೋದರು. 

ಮತ್ತೂ ಕೆಲ ಕಾಲ ಆ ಹುಡುಗರು ಒಟ್ಟಿಗೆಯೇ ಇದ್ದರು.

|ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: