ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಡ್ಲಹಳ್ಳಿ ನಾಗರಾಜ್ ಅಂಕಣ –ಬಡ್ಡಿ..

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.

‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ.

ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.

ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.

ಇನ್ನು ಕೆಲವಕ್ಕೆ, ದಿನದ ದುಡಿಮೆಯ ದಣಿವು ನೀಗಿಸಿ ಮನಸು ಹಗುರಮಾಡಿಕೊಳ್ಳವ, ಸ್ವಾರಸ್ಯಕರ ಮಾತುಗಾರರು, ಸೋಮಾರಿಕಟ್ಟೆಯಲ್ಲಿ ಕುಳಿತು, ಕತೆಗಳ ಪೋಷಾಕು ತೊಡಿಸಿ ಹರಟೆಯ ರೂಪದಲ್ಲಿ ಹೇಳುವ ಪ್ರಯತ್ನವೂ ಇದಾಗಿದೆ.

ಮಲೆನಾಡಿನ ಬೈನೆ ಸೇಂದಿಯ ಅಡಸಾಲೆಗಳಲ್ಲಿ ಧಗಧಗಿಸುವ ಬೆಂಕಿಯ ಸುತ್ತ ಕುಳಿತು ಸಂಜೆಯ ಪಾನಗೋಷ್ಟಿಗಳನ್ನು ಉತ್ತೇಜನದಾಯಕವಾಗಿಸಲು ಹೇಳಿದ ʻಗುಂಡು ಪಾರ್ಟಿʼಯ ಕಥಾ ಪ್ರಸಂಗಗಳಾಗಿರಲೂಬಹುದು.

ಜನಪದ ಕತೆಗಳಂತೆ ಜನರ ಬಾಯಿಂದ ಬಾಯಿಗೆ ಹರಿದುಬಂದು ʻಕೇಳು ಕತೆʼ ಗಳಾಗಿ ಗಾಳಿಯಲ್ಲಿ ತೇಲಾಡಿ ಹೋಗುವ ಇಂತಹಾ ಪ್ರಸಂಗಗಳು ಹಲವಾರು.

ಓದುಗರಿಗೆ ಹಿತವಾಗುವಂತಹಾ ಈ ಎಲ್ಲಾ ಪ್ರಸಂಗಗಳ ಹ್ಯೂಮರ್‌ ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲದೆಂಬುದನ್ನು ಮನಗಂಡು ʻಹಗ್ರಾಣದ ಕತೆʼಗಳ ರೂಪ ಕೊಟ್ಟು ಇಲ್ಲಿ ಪ್ರಸ್ತುತಪಡಿಸಲಾಗಿದೆ.

ಅಂಕಣ – 2

ಪುಟ್ಟಲಿಂಗನಿಗೆ ಪಿತ್ರಾರ್ಜಿತವಾಗಿ ಬಂದ ಎರಡೂವರೆ ಎಕರೆ ಜಮೀನಿತ್ತು, ಅದರಲ್ಲಿ ಒಂದು ಮೂಲೆಯಲ್ಲಿ ಫಸಲಿಗೆ ಬಂದ ಮೂವತ್ತು ತೆಂಗಿನ ಮರಗಳಿದ್ದವು. ಪುಟ್ಟಲಿಂಗ ಹೆಸರಿಗೆ ತಕ್ಕಂತೆ ಪೀಚು ಆಳು. ಅವನ ಸ್ನೇಹಿತರು ʻಏನಾ ಪುಟ್ಟಲಿಂಗ ನಿನ್ನ ಲಿಂಗ ಅಷ್ಟು ಪುಟ್ಟದಾಗಿದೆಯೇನೋ?’ ಎಂದು ಕೆಲವೊಮ್ಮೆ ಖಾಸಗಿಯಾಗಿ ಛೇಡಿಸುತ್ತಿದ್ದರು. ಅವನ ಹೆಂಡತಿ ಸೌಭಾಗ್ಯ ಮೈಕೈ ತುಂಬಿಕೊಂಡು ನೋಡಲು ಚೆನ್ನಾಗಿದ್ದಳು. ಆದರೆ ಸ್ವಲ್ಪ ಪೆದ್ದಿ.ಯಾರಾದರೂ ಏನಾದರು ಹೇಳಿದರೆ ಸುಲಭಕ್ಕೆ ನಂಬಿ ಬಿಡುತ್ತಿದ್ದಳು. ಅವರಿಗೆ ಮಕ್ಕಳಾಗಿರಲಿಲ್ಲ. ನಗರದ ಕಂಡ ಕಂಡ ಆಸ್ಪತ್ರಗಳಿಗೆಲ್ಲಾ ಎಡತಾಕಿ ಸೋತಿದ್ದರು. ಪರಿಣಾಮವಾಗಿ ಪುಟ್ಟಲಿಂಗ ಅಲ್ಲಲ್ಲಿ ಕೈಸಾಲ ಮಾಡಿಕೊಂಡಿದ್ದ. ಸಣ್ಣದಾದರೇನು? ದೊಡ್ಡದಾದರೇನು? ಸಾಲ ಸಾಲವೇ ಅಲ್ಲವಾ! ಅವನು ಸಾಲ ತೀರಿಸಲಾರದೆ ತಲೆ ತಪ್ಪಿಸಿಕೊಂಡು ತಿರುಗಾಡುತ್ತಿದ್ದಾನೆಂದು ತಿಳಿದಾಗ ಸಾಲಗಾರರು ಮನೆಯ ಬಳಿಯೇ ಬಂದು ಕೂಗಾಡಿ ರಂಪ ಮಾಡುತ್ತಿದ್ದರು. ಆಗೆಲ್ಲಾ ಅಲ್ಲಿಂದ ಕಿತ್ತು ಇಲ್ಲಿಗೆ ಕೊಟ್ಟು ಹೇಗೋ ಮರ್ಯಾದೆ ಉಳಿಸಿಕೊಳ್ಳುತ್ತಿದ್ದ.

ಕತ್ತಿ ಹಣಿಯೋ ಕಮ್ಮಾರನ ಹತ್ತಿರ, ಎತ್ತಿಗೆ ಹಲ್ಲೆ ಕಟ್ಟಿದ ಸಾಬಿಯ ಹತ್ತಿರ, ಮನೆಯಲ್ಲಿ ಸಾಕಿದ ಹಂದಿ ಕುಯ್ದಾಗ ಮಾಂಸ ಕಡ ಕೊಟ್ಟವರ ಹತ್ತಿರ, ದಿನಸಿ ಅಂಗಡಿ ಸೆಟ್ಟರ ಹತ್ತಿರ, ಹೀಗೆ ಹಲವಾರು ಜನರ ಬಳಿ ಅವನ ಸಾಲ ನಿಂತಿತ್ತು.

ಅದರಲ್ಲಿ ಅಂಗಡಿ ಸೆಟ್ಟಿಯದ್ದೆ ದೊಡ್ಡ ಸಾಲ; ಐನೂರು ರೂಪಾಯಿ! ಅವರಿಗೂ ಇವನ ಸಮಜಾಯಿಷಿಯನ್ನು ಕೇಳಿ ಕೇಳಿ ಸಾಕಾಗಿ ಹೋಗಿತ್ತು. ಒಂದಿನ ಅಂಗಡಿ ಬೀದಿಯಲ್ಲಿ ಹಿಡಿದು ನಿಲ್ಲಿಸಿಕೊಂಡುಬಿಟ್ಟಿದ್ದರು. ಬೇರೆ ದಾರಿಯಿರಲಿಲ್ಲ ಅವನಿಗೆ. ತ್ವಾಟದಲ್ಲಿ ಎಳನೀರು ಬಂದಿದಾವೆ ಸೆಟ್ರೆ ಅವನ್ನು ಕೆಡವಿ ಮಾರಿ ಮುಂದಲ ವಾರದ ಹೊತ್ತಿಗೆ ನಿಮ್ಮ ಸಾಲ ಚುಕ್ತಾ ಮಾಡಿಬಿಡ್ತೀನಿ ಎಂದು ಮಾತು ಕೊಟ್ಟು ಬಂದಿದ್ದ.

ಮತ್ತೆ ಸಂತೆ ಬಂದಿತ್ತು.

ಹ್ಯಾಗೂ ಒಂದು ಐವತ್ತರವತ್ತು ಎಳನೀರು ಬಂದಿದಾವೆ. ಅವನ್ನ ಕೆಡಿವಿ ಈ ಸಲ ಸೆಟ್ರ ಸಾಲದಿಂದ ಕೈತೊಳ್ಕಬಹುದು. ಮತ್ತೆ ಅವ್ರ ಅಂಗ್ಡಿ ಬೀದಿಲಿ ಧೈರ್ಯವಾಗಿ ತಿರುಗಾಡಬಹುದು. ಇನ್ನು ಸ್ವಲ್ಪ ದಿನ ಅಂಗಡಿ ಸಾಮಾನಿಗೇನೂ ತೊಂದ್ರೆ ಇಲ್ಲ….ಇನ್ನ ಉಳಿದ ಸಾಲಗಾರರು!… ಅವ್ರಿಗೆ ಕ್ಯಾಲೆಂಡರ್ ನಲ್ಲಿ ಮುಂದಿನ ಡೇಟ್ ತೋರಿಸಿದರೆ ಆಯಿತು..ಎಂದುಕೊಳ್ಳುತ್ತಾ ಸಂತೆ ಬೀದಿಯಲ್ಲಿ ಎಳನೀರು ಮಾರುವ ಅಂಬರೀಶನ ಅಂಗಡಿಯ ಕಡೆ ಹೆಜ್ಜೆ ಹಾಕುತ್ತಿದ್ದ.

ಯಾರೋ ಹಿಂದಿನಿಂದ ಭುಜದ ಮೇಲೆ ಕೈ ಹಾಕಿದಂತಾಯಿತು. ಹಿಂದಿರುಗಿ ನೋಡಿದ. ಹಲ್ಲೆ ಕಟ್ಟುವ ಸಾಬಿ! ಅವನ ಹಿಂದುಗಡೆ ಆಚಾರಿ ಹಾಗೂ ಮಾಂಸ ಕೊಟ್ಟಿದ್ದ ಕರಿಯಣ್ಣ!

ಅವರಿಗೂ ಸಹ ಇದೇ ಎಳನೀರಿನ ಕತೆ ಹೇಳಿ ನಂಬಿಸಿದ್ದ. ಸರಿಯಾಗಿ ಸಿಕ್ಕಿ ಹಾಕಿಕೊಂಡುಬಿಟ್ಟೆ ಎನ್ನಿಸಿತು. ‘ಅಬ್ಬೆಬ್ಬೆʼ ಎಂದು ತೊದಲತೊಡಗಿದ.

‘ನಮಗೆ ಎಳನೀರು ಕತೆ ಹೇಳಿ ಆಕಾಶ ತೋರುಸ್ತಾ ಇದೀಯಾ? ..ಈಗ ಗುಟ್ಟಲ್ಲಿ ಎಳನೀರ್ ಮಾರಿ ಸೆಟ್ರಿಗೆ ಕೊಡಕೆ ಹೊರ್ಟಿಯಲ್ಲಾ….ನಾವ್ ಇನ್ನೆಷ್ಟ್‌ ದಿನ ನಿನ್ನ ಹಿಂದೆ ಮುಂದೆ ತಿರ್ಗದು? ಎನ್ನುತ್ತಾ ಅವನನ್ನು ಎಳನೀರು ಅಂಗಡಿಯ ಕಡೆ ದಬ್ಬಿಕೊಂಡು ಹೊರಟೇಬಿಟ್ಟರು. ಕರಿಯಣ್ಣನಂತೂ ʻಈವತ್ತು ನೀನೇನ್ಮಾಡಿದ್ರೂ ತಪ್ಪಿಸಿಕೊಳ್ಳಕಾಗಲ್ಲ. ಅಲ್ಲಿ ನೋಡು…ಮೇಲಿನ ಮರದ ಬುಡದಲ್ಲಿ ನನ್ನ ಹೆಂಡ್ತಿ ಕಾಯ್ತಾ ಇದಾಳೆ. ಅವಳಿಗೆ ಈವತ್ತೇ ಮಾಂಸದ ದುಡ್ಡು ಸಿಕ್ದೆ ಹೋದ್ರೆ ಸಂತೆವಳ್ಗೆ ನಮ್ಮಿಬ್ಬರದ್ದೂ ಚಡ್ಡಿ ಬಿಚ್ಚಿ ನಿಲ್ಲಿಸಿಬಿಡ್ತಾಳೆʼ ಎನ್ನತೊಡಗಿದ.

ಇವರ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದುಕೊಳ್ಳುತ್ತಾ, ಉದ್ದ ಸೈಡ್ ಲಾಕ್ ಬಿಟ್ಟು, ಕತ್ತಿಯ ಮೊನೆಯಲ್ಲೇ ಮೀಸೆ ಮೇಲೆ ಮಾಡುತ್ತಾ ಥೇಟ್ ಸಿನಿಮಾ ಅಂಬರೀಷನ ಭಂಗಿಯಲ್ಲಿ ನಿಂತಿದ್ದ ಅಂಗಡಿಯವನ ಎದುರು ನಿಂತುಕೊಂಡ.

ʻಐನೂರು ರೂಪಾಯಿ ಕೊಟ್ಟಿರು…ನಾಳೆ ಐವತ್ತು ಎಳನೀರು ತಂದು ಕೊಡ್ತೀನಿ’ ಎಂದ.

ಅವನು ಅಂಬರೀಶ! ಬಹಳ ಚಾಣಾಕ್ಷ! ʻಅದೆಲ್ಲಾ ಅಗದಿಲ್ಲ ಪುಟ್ಲಿಂಗ ನಾಳೆನೆ ಎಳನೀರು ತಂದುಕೊಟ್ಟ ದುಡ್ಡು ತಗಂಡು ಹೋಗುʼ ಎಂದ.

ʻಇರ್ಲಿ ಬುಡು ಅಂಬ್ರೀಸು, ಊರು ಮನೆಯವ್ನು ಪುಟ್ಟಲಿಂಗ ಎಲ್ಲಿ ಹೋಗ್ತಾನೆ?ʼ ಎಂದು ಪುಟ್ಟಲಿಂಗನಿಗೆ ಸಪೋರ್ಟ್ ಮಾಡುವವರಂತೆ ಸಾಬಿಯ ಜೊತೆಯಲ್ಲಿದ್ದವರು ಒಕ್ಕೊರಲಿನಲ್ಲಿ ಹೇಳಿದರು.ಅವರೆಲ್ಲರೂ ದಿನವೂ ಅದೇ ಅಂಗಡಿ ಬೀದಿಯಲ್ಲಿ ನಿಂತು ವ್ಯವಹಾರ ಮಾಡುವವರೇ.

ಅಂಬರೀಷ ʻನಿಮ್ದೊಳ್ಳೆ ಕತೆಯಾಯ್ತಲ್ಲ..ʼ.ಎಂದು ಗೊಣಗಾಡುತ್ತಾ, ಲುಂಗಿ ಎತ್ತಿ ಚಡ್ಡಿ ಜೇಬಿನಿಂದ ನೋಟುಗಳನ್ನೆಳೆದು ಬೆಂಚಿನ ಮೇಲೆ ಹರವಿಕೊಂಡು ಎಣಿಸುತ್ತಾ, ನಾನೂ ಕಾಸಿನ ಬಡ್ಡಿಯವ್ರ ಹತ್ರ ದುಡ್ ತಂದು ವ್ಯವಹಾರ ಮಾಡವ್ನು…ಐವತ್ ಎಳ್ನೀರ್ ಕೊಟ್ರೆ ಆಗದಿಲ್ಲ. ತಗಾ ಐನೂರೈತೆ…ನಾಳೆನೇ ಅರವತ್ತು ಎಳನೀರು ತಂದ್‌ ಹಾಕ್ ಬೇಕು ….ಎನ್ನುತ್ತಾ ಪುಟ್ಟಲಿಂಗನ ಕೈಗೆ ಹಣಕೊಟ್ಟ.

ಮರದ ಬಳಿ ಹೋದ ಮೂವರೂ ಪುಟ್ಟಲಿಂಗನ ಕೈಲಿದ್ದ ಹಣ ಕಸಿದುಕೊಂಡು ತಮ್ಮ ತಮ್ಮಲ್ಲೇ ಹಂಚಿಕೊಂಡು ಖುಷಿಯಿಂದ ಹೊರಟು ಹೋದರು.

ಪುಟ್ನಲಿಂಗ ಸಂತೆಯೊಳಗೆ ದಿಕ್ಕುಗಾಣದವನಂತೆ ನಿಂತುಕೊಂಡಿದ್ದ.

ʻದುಡ್ಡು ಅವರ ಕೈ ಸೇರಿತು. ಈ ಸೆಟ್ಟರಿಗೆ ಏನು ಹೇಳುವುದು ಎಳನೀರು ಕೆಡವಿ ಅಂಬರೀಷನ ಅಂಗಡಿಗೆ ಹಾಕಿದರೆ ಅವರಿಗೆ ಸುದ್ದಿ ಮುಟ್ಟುತ್ತದೆ. ಮಾತಿನಂತೆ ಹಣ ತೆಗೆದುಕೊಂಡು ಹೋಗಿ ಅವರ ಕೈಗೆ ಹಾಕದಿದ್ದರೆ ಸುಮ್ಮನೆ ಬಿಟ್ಟಾರೆಯೇ?……

ಎಳನೀರು ಕೆಡವಿ ಹಣ ಕೊಡುತ್ತೇನೆ ಎಂದು ಹೇಳಿದ್ದೆನೆ….ಆದರೆ ಎಳನೀರನ್ನೇ ಕೆಡವದೇ ಹೋದರೆ ! ಸೆಟ್ಟರು ಹಾಗೂ ಅಂಬರೀಷ ಇಬ್ಬರಿಗೂ ಎನೇನಾದರೂ ಸಬೂಬು ಹೇಳಿಕೊಂಡು ಕೆಲವು ದಿನ ತಳ್ಳಿದರೆ ಆಯಿತು ಎಂದು ತನಗೆ ತಾನೇ ಧೈರ್ಯ ತುಂಬಿಕೊಂಡ.

ಇಬ್ಬರಿಗೂ ತಪ್ಪಿಸಿ ತಿರುಗತೊಡಗಿದ.

ಎಳನೀರಿನ ಹಣ ಮುಂಗಡವಾಗಿ ಪಡೆದುಕೊಂಡಿರುವುದು ಸೆಟ್ಟರಿಗೆ ಅಂಬರೀಷನಿಂದ ತಿಳಿದುಹೋಯಿತು. ಅವರಿವರ ಮುಖಾಂತರ ಪುಟ್ಟಲಿಂಗನ ಮನೆಗೆ ಹೇಳಿಕಳಿಸತೊಡಗಿದರು.

ಅಂಬರೀಷ ಒಂದೆರಡು ದಿನ ಕಾದ. ಎಳನೀರು ಬಾರದಿದ್ದಾಗ ಪುಟ್ಟಲಿಂಗನ ಮನೆಗೆ ಹುಡುಗರನ್ನು ಕಳಿಸಿದ.

ಅವರು ಬಂದಾಗ ಪುಟ್ಟಲಿಂಗ ಊರಲ್ಲಿದ್ದರೂ ಇಲ್ಲ ಅನ್ನಿಸತೊಡಗಿದ. ಹೆಂಡತಿ ಸೌಭಾಗ್ಯಳಿಗೂ ಅದನ್ನೇ ಹೇಳಿಕೊಟ್ಟಿದ್ದ. ಅವರ್ಯಾರಾದರೂ ಬಂದಾಗ ಅಕಸ್ಮಾತ್ ಅವನು ಮನೆಯೊಳಗೇ ಇದ್ದರೂ ಹೆಂಡತಿ ಅವರು ಮನೆಯಲ್ಲಿ ಇಲ್ಲ ಎಂದು ಬಿಡುತ್ತಿದ್ದಳು. ಅದನ್ನು ಕೇಳಿದ ಪುಟ್ಟಲಿಂಗ ಹಿಂದಲ ಬಾಗಿಲಿನಿಂದ ತಪ್ಪಿಸಿಕೊಂಡು ಹೋಗುತ್ತಿದ್ದ.

ಈ ತರದ ಕಣ್ಣಾಮುಚ್ಚಾಲೆ ಆಟ ಎಷ್ಟು ದಿನ ನಡೆಯಲು ಸಾದ್ಯ!…. ಅಂಬರೀಷನಿಗೆ ರೋಸಿಹೋಯಿತು.

ಒಂದು ದಿನ ಅವನೇ ಖುದ್ದಾಗಿ ಬಂದ. ಸೌಭಾಗ್ಯ ಬಾಗಿಲಲ್ಲೇ ನಿಂತು ಅವರು ಮನೆಲಿಲ್ಲ ಎಂದಳು. ಪೇಚಿನಲ್ಲಿ ಸಿಲುಕಿಕೊಂಡ ಅವನಿಗೆ ಮೈ ಪರಚಿಕೊಳ್ಳುವಂತಾಯಿತು.

ಒಂದು ಕಾಲನ್ನು ಗೋಡೆಗೆ ಕೊಟ್ಟು ಗೋಡೆಗೊರಗಿ ನಿಂತಿದ್ದ ಸೌಭಾಗ್ಯಳನ್ನೇ ದಿಟ್ಟಿಸಿ ನೋಡುತ್ತಾ ʻನೋಡಮ್ಮಾ. ನನಗೆ ಹೆಂಗೆ ವಸೂಲ್ ಮಾಡಬೇಕು ಅಂತಾ ಗೊತ್ತು… ನಿನ್ನ ಗಂಡನಿಗೆ ಹೇಳು…. ಈ ವಾರದ ಸಂತೆ ಹೊತ್ತಿಗೆ ಎಳ್ನೀರ್ ತಂದ್ ಹಾಕಿ ಲೆಕ್ಕಾಚಾರ ಮಾಡಿಕೊಂಡು ಹೋಗದಿದ್ದರೆ ಸಂತೆ ಕಳೆದು ಮಾರನೇ ದಿನ ಮತ್ತೆ ಬತ್ತೀನಿ. ನನ್ನ ಸಾಲ ಬಡ್ಡಿ ಸಮೇತ ವಸೂಲಿ ಮಾಡಿಕೊಂಡು ಹೋಗ್ತಿನಿ, ಎನ್ನುತ್ತಾ ಹೋರಟು ಹೋಗಿದ್ದ.

ಆ ಕಡೆ ಅಂಗಡಿ ಸೆಟ್ಟಿ, ಈ ಕಡೆ ಅಂಬರೀಷ! ತಪ್ಪಿಸಿಕೊಂಡು ತಿರುಗಿದ ಪುಟ್ನಲಿಂಗ ಹೈರಾಣಾಗಿ ಹೋದ. ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಅವನು ತೀವ್ರ ಜ್ವರಕ್ಕೆ ತುತ್ತಾಗಿ ಮಲಗಿಬಿಟ್ಟ.

ಆ ವಾರದ ಸಂತೆ ಕಳೆಯಿತು. ಹೇಳಿ ಹೋಗಿದ್ದಂತೆ ಸಂತೆಯ ಮಾರನೆಯ ದಿನವೇ ಅಂಬರೀಷ ಪುಟ್ಟಲಿಂಗನ ಮನೆಯ ಮುಂದೆ ಬಂದು ನಿಂತ

ಹೊರಗೆ ಯಾರೂ ಕಾಣಲಿಲ್ಲ. ಗಂಡ ಮಲಗಿದ್ದರಿಂದ ಸೌಭಾಗ್ಯ ದನ ಮೇಯಿಸಲು ತೋಟಕ್ಕೆ ಹೋಗಿದ್ದಳು. ಮುಂದಲ ಬಾಗಿಲು ಓರೆಯಾಗಿತ್ತು. ಒಳಗಿನಿಂದ ನರಳುವುದು ಕೇಳಿತು.

‘ಪುಟ್ಟಲಿಂಗ’ ಎಂದು ಕರೆದ. ಮಲಗಿದ ಪುಟ್ಟಲಿಂಗನಿಗೆ ಸಾಲಗಾರ ಬಂದಿರುವುದು ತಿಳಿಯಿತು. ಆದರೆ ತಪ್ಪಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.

ಬಾಗಿಲು ತಳ್ಳಿಕೊಂಡು ಒಳಬಂದ ಅಂಬರೀಷ ಹೊದಿಕೆಯೆಳೆದು ಮಲಗಿದ್ದ ಪುಟ್ಟಲಿಂಗನನ್ನು ಕಂಡು ಕೋಪದಿಂದ ʻನಿನ್ನ ಕಳ್ಳಾಟ ಏನು ನಡೆಯೋದಿಲ್ಲ… ಬಾ ಎಳನೀರು ಕೆಡವಿ ಕೊಡು’ ಎಂದ. ಇನ್ನು ಇವನಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂಬುದು ಪುಟ್ಟಲಿಂಗನಿಗೆ ಖಚಿತವಾಗಿತ್ತು.

ʻಜ್ವರ ಕುದಿತಿದಾವೆ ಕಣ ಅಂಬರೀಷ. ಅಲ್ಲಿಯವರೆಗೂ ನಡಿಲಾರೆ. ನನಗೇನು ಮೋಸ ಮಾಡಬೇಕು ಅಂತಾ ಇಲ್ಲ. ನೀನೇ ಹೋಗಿ ಕೆಡವಿಕೋʼ ಎಂದ ನರಳಾಡುತ್ತಲೇ.

ʻಅದೆಂಗಾಗುತ್ತೆ ಪುಟ್ಟಲಿಂಗ…. ಯಾವ್ ಮರ್ದಲ್ಲಿ ಎಳನೀರಿದಾವೆ ಅಂತ ಗೊತ್ತಾಗ್ ಬ್ಯಾಡ್ವಾ. ಎಷ್ಟು ಕಾಯಿ ಅಂತಾ ಲೆಕ್ಕ ಹಾಕ್ಕೊಳಕೆ ಮನೆಯವ್ರು ಯಾರಾದ್ರು ಬ್ಯಾಡ್ವಾʼ ಎಂದ.

ಅದಕ್ಕೆ ಪುಟ್ಟಲಿಂಗ ಸಣ್ಣಗೆ ನರಳುತ್ತಲೇ ʻಏ…ನಿನ್ ಮ್ಯಾಲೆ ಏನೂ ನಂಬಿಕೆ ಇಲ್ವ? ನೀನೇನು ದೂರ್ದವ್ನಾ? ಅಲ್ಲೇ ತ್ವಾಟದಲ್ಲಿ ನಮ್ ಹೆಂಡ್ರು ದನಾ ಮೇಯಿಸ್ತಾ ಇರ್ತಾಳೆ. ಹೋಗಿ ಕೆಡಿವಿಕ್ಯಾʼ ಎಂದ.

ಅವನ ಮಾತು ಹಲವಾರು ಅರ್ಥಗಳೊಂದಿಗೆ ಅಂಬರೀಷನ ಮನಸ್ಸಿಗೆ ತಾಕಿತು. ಹಿಂದಿನ ಸಲ ಬಂದಾಗ ಗೋಡೆಗೆ ಕಾಲುಕೊಟ್ಟು ಒರಗಿನಿಂತ ಹೆಂಗಸಿನ ನಿಲುವು ಕಣ್ಣಮುಂದೆ ನಿಂತಿತು.

ತೋಟದಲ್ಲಿ ದನ ಬಿಟ್ಟುಕೊಂಡು ಸೌಭಾಗ್ಯ ಉದುರಿದ ಗರಿಗಳನ್ನು ಎಳೆದು ಒಂದೆಡೆ ಒಟ್ಟುತ್ತಿದ್ದಳು. ಅಂಬರೀಷ ಸಿನಿಮಾ ನಟನ ಶೈಲಿಯಲ್ಲಿ ಗಳ ಹೊತ್ತು ಬರುವುದನ್ನು ದೂರದಿಂದಲೇ ಗಮನಿಸಿದಳು. ಮತ್ತೆ ತನ್ನ ಕೆಲಸದಲ್ಲಿ ತಲ್ಲೀನಳಾದಳು.

ಮೊದಲೇ ನಿರ್ಧರಿಸಿಕೊಂಡು ಬಂದಿದ್ದವನಂತೆ ಅಂಬರೀಷ ಅವಳನ್ನು ಅಪ್ಪಿಕೊಂಡುಬಿಟ್ಟ.

‘ಯಾಕೆ, ಬುಡು ಬುಡುʼ ಎಂದು ಅವಳು ಕೊಸರಾಡಿದಳು.

‘ಎಯ್ ಹೇಳಿ ಕಳ್ಳಿದಾನೆ ನಿನ್ನ ಗಂಡʼನ್ನುತ್ತಾ ಅವನು ಹಿಡಿತ ಬಿಗಿಗೊಳಿಸತೊಡಗಿದ. ಅವಳು ಹಾಗೆಯೇ ಕೊಸರಾಡುತ್ತಾ,ʻಏನಂತ ಹೇಳಿಕಳ್ಸಿದಾರೆ” ಎಂದಳು

‘ನನ್ ಹೆಂಡ್ರು ತ್ವಾಟದಲ್ಲಿದಾಳೆ, ಹೋಗಿ ಕೆಡವಿಕ್ಯ ಅಂತಾ ಹೇಳಿದʼ ಅನ್ನುತ್ತಾ ನೆಲಕ್ಕೆ ಕೆಡವಿಕೊಂಡೇಬಿಟ್ಟ.

ಅವನ ಮಾತು ನಂಬಿದ ಅವಳು ಕೊಸರಾಟ ನಿಲ್ಲಿಸಿ ಮೈ ಸಡಿಲ ಮಾಡಿಕೊಂಡಳು….

ನಂತರ ಅರವತ್ತು ಎಳನೀರು ಕೆಡವಿಕೊಂಡ ಅಂಬರೀಷ ಖುಷಿಯಾಗಿ ಹೋರಟುಹೋದ.

ಇತ್ತ ಮನೆಯಲ್ಲೇ ನರಳುತ್ತಾ ಮಲಗಿದ್ದ ಪುಟ್ಟಲಿಂಗ ʻಅವನು ಬಹಳ ಚಾಲಾಕಿ. ಎಷ್ಟು ಕೆಡವಿಕೊಂಡನೋ ಬಡ್ಡಿ ಗಿಡ್ಡಿ ಅಂತಾ ಬೇರೆ ಮಾತಾಡುತ್ತಿದ್ದ. ಈ ಎಡಬಿಡಂಗಿ ಹೆಂಗಸು ಏನು ಎಡವಟ್ಟು ಮಾಡಿಕೊಂಡ್ಳೋ! ಎಂದು ಚಡಪಡಿಸುತ್ತಾ ಅವಳ ಬರುವಿಗಾಗಿ ಕಾದ.

ಅವಳು ಒಳಬರುತ್ತಲೇ ʻಅಂಬರೀಷ ತ್ವಾಟಕ್ಕೆ ಬಂದಿದ್ನಾ?….ಕೆಡವಿಕೊಂಡ್ನಾ?’ ಎಂದ.

ʻಹೂಂ! …ನೀವೇ ಹೇಳಿದ್ರಂತಲ್ಲಾ, ನನ್ನ ಹೆಂಡ್ರು ತ್ವಾಟದಲ್ಲಿದಾಳೆ ಕೆಡವಿಕೊ ಅಂತ’ ಎಂದು ವೈಯಾರ ಮಾಡುತ್ತಾ ಹೇಳತೊಡಗಿದಳು.

ಅವನಿಗೆ ಎಡವಟ್ಟಿನ ಅರಿವಾಗತೊಡಗಿತು. ತಲೆಸಿಡಿತ ಹೆಚ್ಚಾಯಿತು. ‘ಅದೇನು ಹಂಗೆ ನುಲೀತೀಯಾ?…… ನೀನೊಬ್ಳು ಎಡವಟ್ಟಿ, ಹೋಗ್‌ ಅತ್ಲಾಗಿʼ ಎಂದು ಸಿಡುಕಿದ.

ʻಸರಿಯಾಗೇ ಬಡ್ಡಿ ವಸೂಲು ಮಾಡಿಕೊಂಡು ಹೋಗಿದ್ದಾನೆ, ಬಡ್ಡಿಮಗʼ ಎಂದು ಬಡಬಡಿಸುತ್ತಾ ಗೋಡೆಯ ಕಡೆ ಹೊರಳಿಕೊಂಡ.

। ಮುಂದಿನ ವಾರಕ್ಕೆ ।

‍ಲೇಖಕರು Admin

1 November, 2025

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading