ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಡ್ಲಹಳ್ಳಿ ನಾಗರಾಜ್ ಅಂಕಣ – ಕಂಡೆಕ್ಟರ್ ನಮ್ ಫ್ರೆಂಡೇ ಅಲ್ವಾ!

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.

‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ.

ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.

ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.

ಇನ್ನು ಕೆಲವಕ್ಕೆ, ದಿನದ ದುಡಿಮೆಯ ದಣಿವು ನೀಗಿಸಿ ಮನಸು ಹಗುರಮಾಡಿಕೊಳ್ಳವ, ಸ್ವಾರಸ್ಯಕರ ಮಾತುಗಾರರು, ಸೋಮಾರಿಕಟ್ಟೆಯಲ್ಲಿ ಕುಳಿತು, ಕತೆಗಳ ಪೋಷಾಕು ತೊಡಿಸಿ ಹರಟೆಯ ರೂಪದಲ್ಲಿ ಹೇಳುವ ಪ್ರಯತ್ನವೂ ಇದಾಗಿದೆ.

ಮಲೆನಾಡಿನ ಬೈನೆ ಸೇಂದಿಯ ಅಡಸಾಲೆಗಳಲ್ಲಿ ಧಗಧಗಿಸುವ ಬೆಂಕಿಯ ಸುತ್ತ ಕುಳಿತು ಸಂಜೆಯ ಪಾನಗೋಷ್ಟಿಗಳನ್ನು ಉತ್ತೇಜನದಾಯಕವಾಗಿಸಲು ಹೇಳಿದ ʻಗುಂಡು ಪಾರ್ಟಿʼಯ ಕಥಾ ಪ್ರಸಂಗಗಳಾಗಿರಲೂಬಹುದು.

ಜನಪದ ಕತೆಗಳಂತೆ ಜನರ ಬಾಯಿಂದ ಬಾಯಿಗೆ ಹರಿದುಬಂದು ʻಕೇಳು ಕತೆʼ ಗಳಾಗಿ ಗಾಳಿಯಲ್ಲಿ ತೇಲಾಡಿ ಹೋಗುವ ಇಂತಹಾ ಪ್ರಸಂಗಗಳು ಹಲವಾರು.

ಓದುಗರಿಗೆ ಹಿತವಾಗುವಂತಹಾ ಈ ಎಲ್ಲಾ ಪ್ರಸಂಗಗಳ ಹ್ಯೂಮರ್‌ ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲದೆಂಬುದನ್ನು ಮನಗಂಡು ʻಹಗ್ರಾಣದ ಕತೆʼಗಳ ರೂಪ ಕೊಟ್ಟು ಇಲ್ಲಿ ಪ್ರಸ್ತುತಪಡಿಸಲಾಗಿದೆ.

ಅಂಕಣ – 2

ಅವನು ಆ ಹಳ್ಳಿಯ ಸೋಮಾರಿ ಕಟ್ಟೆಯ ಖಾಯಂ ಸದಸ್ಯ. ಒಂದು ತರದಲ್ಲಿ ಆ ಕಟ್ಟೆಯ ಬಳಗದ ಅಧ್ಯಕ್ಷನೇ ಇದ್ದಂತೆ! ಮಾತುಗಾರಿಕೆಯಲ್ಲಿ ಬಲು ನಿಪುಣ. ಒಂದು ಸತ್ಯಕ್ಕೆ ಒಂಬತ್ತು ಸುಳ್ಳು ಪೋಣಿಸಿ ಹೇಳುತ್ತಿದ್ದ ಅವನ ಮಾತನ್ನು ಇತರ ಜನ ಕಣ್ಣುಬಾಯಿ ಬಿಟ್ಟುಕೊಂಡು ಕೇಳುತ್ತಿದ್ದರು.

ಹಾಗಾಗಿ ರಾಮೇಗೌಡನೆಂಬ ಹೆಸರಿನ ಅವನು ‘ಬೊಗಳೆ ರಾಮ’ ಎಂಬುದಾಗಿ ಪ್ರಸಿದ್ಧನಾಗಿದ್ದ. ಅವನ ಮಾತಿನ ಮೋಡಿಗೆ ಒಳಗಾಗಿದ್ದ ಕಟ್ಟೆಯ ಜನ ಅವನೇನಾದರೂ ಕಟ್ಟೆಗೆ ಬರುವುದು ತಡವಾದಲ್ಲಿ ಚಡಪಡಿಸುತ್ತಿದ್ದರು.

ವಿದುರನಾಗಿದ್ದ ಅವನು ಮನೆ ವ್ಯವಸಾಯದ ಕೆಲಸದಲ್ಲಿ ಭಾಗವಹಿಸದೆ ವಾರದ ಸಂತೆ. ಹತ್ತಿರದ ನೆಂಟರ ಮನೆ ಅಲ್ಲಿ ಇಲ್ಲಿ ತಿರುಗಾಡಿಕೊಂಡು ಕಾಲ ಹಾಕುತ್ತಿದ್ದ. ಮಗ ಸೊಸೆಯರು ಅವನನ್ನು ಉಪೇಕ್ಷೆ ಮಾಡಿಬಿಟ್ಟಿದ್ದರು. ಬೀಡಿ ಖರ್ಚಿಗಾಗುವಷ್ಟು ದುಡ್ಡನ್ನು ಹೇಗೋ ಸಂಪಾದಿಸಿಕೊಳ್ಳುತ್ತಿದ್ದ ಅವನು, ಕೆಲವೊಮ್ಮೆ ಆಗಾಗ ಸಣ್ಣಪುಟ್ಟ ಕೈಸಾಲಗಳನ್ನು ಮಾಡಿಕೊಳ್ಳುತ್ತಿದ್ದ.

ಮನೆಯವರು ಗದರಿಸಿದರೆ ಮುನಿಸಿಕೊಂಡು ಒಂದೆರಡು ದಿನ ಯಾವುದಾದರೂ ನೆಮಟರ ಮನೆಗೆ ಹೋಗಿ ಇದ್ದು ವಾತಾವರಣ ತಿಳಿಯಾದ ಮೇಲೆ ಹಿಂತಿರುಗಿ ಬರುತ್ತಿದ್ದ….

ಅವತ್ತು ಪಕ್ಕದ ಊರಿನಲ್ಲಿ ಸಂತೆ. ಅಲ್ಲಿಗೆ ಎಂದಿನಂತೆ ಹೋದವನು ಸಂಜೆ ಮಾಮೂಲಿ ಸಮಯಕ್ಕೆ ಬಂದಿರಲಿಲ್ಲ. ಅವನಿಲ್ಲದೆ ಸೋಮಾರಿಕಟ್ಟೆ ಭಣಗುಡುತ್ತಿತ್ತು. ಸಹಸದಸ್ಯರು ಕಾತುರರಾಗಿ ಅವನಿಗಾಗಿ ಕಾಯುತ್ತಾ ಕುಳಿತಿದ್ದರು.

ಸಂತೆಯ ಸಮೀಪದ ಹೋಟೆಲಿನವನ ಬಳಿ ಸ್ವಲ್ಪ ಕೈಸಾಲ ಮಾಡಿಕೊಂಡಿದ್ದ ಅವನು ತಪ್ಪಿಸಿಕೊಂಡು ತಿರುಗಾಡುತ್ತಿದ್ದ. ಅಂದು ಸಂತೆಯೊಳಗೆ ತಿರುಗಾಡುವಾಗ ಅಕಸ್ಮಾತ್ ಹೋಟೆಲಿನವನು ಎದುರಾಗಿದ್ದ. ಎಷ್ಟು ಪ್ರಯತ್ನಿಸಿದರೂ ಸಬೂಬು ಹೇಳಿ ನುಣುಚಿಕೊಳ್ಳಲು ಸಾಧ್ಯವಾಗಲಿಲ್ಲ. ಹೋಟೆಲಿನವನೂ ಚಾಣಾಕ್ಷ. ಬಾ ಎಂದು ಅವನನ್ನು ತನ್ನ ಹೋಟೆಲಿನ ಬಳಿ ಕರೆದುಕೊಂಡು  ಹೋದ. ಕೂರಿಸಿ ಅರ್ಧ ಕಪ್ ಟೀ ಕೊಟ್ಟು ಒಳಗೆ ಹೋಗಿ ಕೊಡಲಿಯೊಂದನ್ನು ತಂದು ಅವನ ಮುಂದಿಟ್ಟು ಆ ಸೌದೆಯನ್ನೊಂದಿಷ್ಟು ಒಡೆದುಕೊಟ್ಟು ಹೋಗು’ ಎಂದ.

ಆ ಸೌದೆಯನ್ನೆಲ್ಲಾ ಸೀಳಿ ಮುಗಿಸುವಷ್ಟರಲ್ಲಿ ಸಂಜೆಯಾಗಿ ಹೋಗಿತ್ತು. ಓಡೋಡುತ್ತಲೇ ಬಂದು ಕಟ್ಟೆಯ ಬಳಿ ಸೇರುವಲ್ಲಿ ತಡವಾಗಿ ಹೋಗಿತ್ತು.

ಸಂತೆಯಿಂದ ಸ್ವಾರಸ್ಯವಾದ ಪ್ರಸಂಗವನ್ನೇನಾದರೂ ತಂದಿರುತ್ತಾನೆಂದು ಕಾತರರಾಗಿ ಕುಳಿತಿದ್ದ ಅವರ ಪೈಕಿ ಒಬ್ಬ ‘ಏನೋ ಮಾರಾಯ, ಇಷ್ಟ್ ಹೊತ್ತು ಏನ್ಮಾಡ್ತಿದ್ದೆಯೋ ಸಂತೇಲಿ’ ಎಂದ.

‘ಅದೇನ್ಹೇಳ್ತೀರಿ, ಗುಲಾಬಿ ಗೊತ್ತಲ್ಲ, ವಾರ ವಾರ ದೂರದಿಂದ ನೆಗಾಡಿ ಹೋಗ್ತಿದ್ದವಳು ಇವತ್ತು ಎದುರಿಗೇ ಬಂದು ಕೈ ಹಿಡುಕೊಂಡು ಬಿಡೋದಾ! ಸೀದಾ ಮನೆಗೇ ಕರ್ಕೊಂಡು ಹೋಗಿ ಬಾಗಿಲು ಹಾಕಿಕೊಂಡವಳು ಎಷ್ಟ್ ಹೊತ್ತಿಗೆ ಬಾಗಿಲು ತೆರೆದಳು ಅಂತೀರಿ!….‌ʼ ಅವನು ಹೇಳೂತ್ತಲೇ ಇದ್ದ. ಇವರೆಲ್ಲಾ ಬಾಯಿಬಿಟ್ಟುಕೊಂಡು ಕುಳಿತಿದ್ದರು…..

ಹೀಗೆ ಇರಬೇಕಾದರೆ ಒಂದು ಸಲ ಮನೆಯಲ್ಲಿ ಮಾತಿಗೆ ಮಾತಾಗಿ ಹೊರ ಹೋದವನು ಎಂಟುದಿನ ಕಳೆದು ಬಂದ. ಕಟ್ಟೆ ಬಳಗದ ಸದಸ್ಯೆರಲ್ಲಾ ಏನು…ಎತ್ತ ಎನ್ನುತ್ತಾ ಅವನ ಮಾತಿನ ಸ್ವಾರಸ್ಯಕ್ಕಾಗಿ ಕಾದರು.

ಅವನು ದೂರದ ಊರಿನ ತನ್ನ ಅಣ್ಣನ ಮಗಳ ಮನೆಯಲ್ಲಿದ್ದೆ ಎಂದು ಹೇಗೆ ಹೇಳುತ್ತಾನೆ!

ʻಬೆಂಗಳೂರಿಗೆ ಹೋಗಿದ್ದೆʼ ಎಂದ. ಬೆಂಗಳೂರು ಹೆಸರು ಕೇಳಿಯೇ ಜನ ತಬ್ಬಿಬ್ಬಾದರು.

‘ಅಲ್ಲಿ ಯಾರ ಮನೆಲಿದ್ದೆ ಮಾರಾಯ’ ಎಂದರು.

ನಮ್ಮ ಪೇಟೆಲಿ ಒಬ್ಬ ಪರಿಚಯದವನಿದ್ದ. ಅವನು ಈಗ ಬೆಂಗಳೂರಲ್ಲಿ ವಿಧಾನಸೌದ ಅಂತ ಐತೆ. ಅಲ್ಲಿ ದೊಡ್ಡ ಆಫೀಸರ್ ಆಗಿದಾನೆ. ಅವನ ಮನೆಗೆ ಹೋಗಿದ್ದೆ’ ಎಂದ. ಎದುರಿದ್ದವರು ಹುಬ್ಬೇರಿಸಿದರು.

‘ಅದೆಲ್ಲಾ ಸರಿ ಮಾರಾಯ, ಬೆಂಗ್ಳೂರೇನು ಇಲ್ಲೇ ಐತಾ? ನೂರಾರ್ ಮೈಲಿ ದೂರ, ಬಸ್ ಚಾರ್ಜ್ ಎಷ್ಟಾಗುತ್ತೆ? ಏನ್ ಕತೆ!. ಇಲ್ಲೇ ಹತ್ರ ಆದ್ರೆ ಕಂಡೆಕ್ಟ್ರು ಗುರುತಿರುವವರು. ಅವರ ಒಳಗಾಕೆಂಡ್ ಹೆಂಗೋ ಹೋಗಿ ಬುಡ್ತಿದ್ದೆ….ಎಂದ ಒಬ್ಬ.

‘ಇಲ್ಲಿಂದ ಪ್ಯಾಟೆಗೆ ಬಸ್ಸಲ್ಲಿ ಹೋದ್ನಾ….ಅಲ್ಲಿಂದ ರೈಲ್ ಹತ್ತಿದೆ ನೋಡು….ಎನ್ನತೊಡಗಿದಂತೆಯೇ ಎದುರಿನವರು

‘ಎಲಾ ಇವ್ನಾ, ರೈಲಲಿ ಕೂತ್ ಬಂದಿದಾನಲ್ಲ, ದುಡ್ ಎಷ್ಟಾಗಿರಬಹುದು ಅಲ್ಲಿಯವರೆಗೂ ಹೋಗಕೆ, ಕಂಡೆಕ್ಟ್ರು ಸುಮ್ನೆ ಕರ್ಕಂಡ್ ಹೋಗ್ತಾನಾ’ ಎಂದು ಆಶ್ಚರ್ಯ ಚಕಿತರಾಗಿ ಅವನ ಮುಖವನ್ನೇ ನೋಡತೊಡಗಿದರು. ಒಬ್ಬ ಆ ಬಗ್ಗೆ ಕೇಳಿಯೇ ಬಿಟ್ಟ…

‘ಅಯ್ಯೋ ಅದ್ಕೇ ನಿಮ್ಮನ್ನ ಮಲಸೀಮೆ ಮಂಗ ಅನ್ನದು. ಈ ಕೊಂಪೆ ಬಿಟ್ರೆ ನಿಮೇನ್ ಗೊತ್ತು? ರೈಲಲಿ ಏನು ಕಂಡೆಕ್ಟ್ರು ಇರ್ತರೆ ಅಂತ ತಿಳಿದೀರೇನೋ? ಮೊದ್ಲೇ ದುಡ್ ಕೊಟ್ಟು ಟಿಕೆಟ್ ತಗಂಡು ರೈಲು ಹತ್ತಿಗೆಳ್ಳೇಕು. ಮಧ್ಯದಲ್ಲಿ ಯಾರಾದ್ರೂ ಚಕಿಂಗಿಗೆ ಬಂದ್ರೆ ಟಿಕೆಟ್ ತೋರುಸ್ಟೇಕು ಅಷ್ಟೆ. ನನಗೆ ಐಡಿಯಾ ಗೊತ್ತಿತ್ತು. ಟಿಕೆಟ್ ತಗಳ್ದೆ ಬೋಗಿಯೊಳ್ಗೆ ಕೂತಿದ್ನಾ, ಆ ಕಡೆಯಿಂದ ಚಕಿಂಗ್‌ನವ್ನು ಬಂದ್ ಕೂಡ್ಲೆ ಈ ಕಡೆ ಕಕ್ಕಸ್ ರೂಮೊಳಗೆ ಹೋಗಿ ಕೂತ್ಕಂಡ್ ಬುಟ್ಟೆ, ಅವ್ನು ಮುಂದಿನ ಬೋಗಿಗೆ ಹೋದ ಮೇಲೆ ಮತ್ತೆ ಈಚೆಗೆ ಬಂದು ಕೂತ್ಕಂಡು ಆರಾಮಾಗಿ ಹೋದೆʼ ಎಂದ.

ಅವನ ಚಮತ್ಕಾರಕ್ಕೆ ಅವರೆಲ್ಲಾ ತಲೆದೂಗಿದರು.

‘ಮತ್ತೆ ಹೇಗೋ ಮನೆಯವರ ಜೊತೆ ಹೊಂದಾಣಿಕೆ ಮಾಡಿಕೊಂಡ. ಮನೆಗೆ ಹೋಗಿ ಊಟ ಮಾಡಿಕೊಂಡು ಬರೋವಷ್ಟಕ್ಕೆ ದಾರಿ ಮಾಡಿಕೊಂಡ.

ಸೋಮಾರಿ ಕಟ್ಟೆಯವರು ಸಹಿಸಿಕೊಳ್ತಾರೆ ಅಂದ್ರೆ ವ್ಯವಸಾಯದ ಕೆಲಸ ಮಾಡುವ ಮನೆಯವ್ರು ಕೂಳಿಗೆ ದಂಡವಾಗಿರುವ ಈ ಸೋಮಾರಿಯನ್ನು ಹೇಗೆ ಸಹಿಸಿಕೊಂಡಾರು?…….ಮತ್ತೆ ಕಲಹವಾಯಿತು. ಮನೆ ಬಿಟ್ಟು ಹೋಗ್ತಿನಿ ಎಂದು ಬೆದರಿಕೆ ಹಾಕಿದ. ಹೋಗು ನಿನ್ನ ಕಟ್ಗೆಂಡು ನಮಗೇನಾಗಬೇಕು ಎಂದರು ಮನೆಯವರು.

ಆವೇಶದಲ್ಲಿ ಹೊರಟುಹೋದ. ಎಷ್ಟು ದಿನ ತಾನೇ ಅನ್ಯರ ಮನೆಯ ಹಂಗಿನಕೂಳು ನೆಚ್ಚಿ ಕೂರಲು ಸಾದ್ಯ? ಇಪ್ಪತ್ತು ದಿನ ಕಳೆದಿತ್ತು. ಒಂದು ದಿನ ಸೋಮಾರಿಕಟ್ಟೆಯಲ್ಲಿ ಪ್ರತ್ಯಕ್ಷನಾದ. ಬೊಗಳೆ ರಾಮ ಇಷ್ಟು ಕಾಲ ದೀರ್ಘವಾಗಿ ಗೈರುಹಾಜರಾಗಿದ್ದು ಅದೇ ಮೊದಲು.

‘ಮೂಡಿಗೆಯ ಕತ್ತಲೆ ಕಅಡಿನಲ್ಲಿ ಯಾರೋ ಹಳೇ ನೆಂಟರಿದ್ದರಲ್ಲಾ ಅಲ್ಲಿಗೆ ಹೋಗಿರಬಹುದೇ? ಭಾಗಮಂಡಲದ ಹತ್ತಿರದ ಕರಿಕೆಯ ನೆಂಟರ ಮನೆಗೆ ಹೋಗಿರಬಹುದೇ?ʼಮುಂತಾಗಿ  ಅವನ ಗೈರು ಹಾಜರಿಯಲ್ಲಿ ಜನ ವಿಧವಿಧವಾಗಿ ಮಾತಾಡಿಕೊಂಡರು.

ಕಟ್ಟೆಯ ಜನ ನಿಟ್ಟುಸಿರುಬಿಡುತ್ತಾ ಇಷ್ಟು ದಿನ ಎಲ್ಲಿಗೆ ಹೋಗಿದ್ದೆ ಮಾರಾಯ? ಎಂದು ಕಾತರರಾಗಿ ಅವನ ಮುಖವನ್ನೇ ನೋಡತೊಡಗಿದರು.

‘ಅಮೇರಿಕಕ್ಕೆ’ ಎಂದ. ಪ್ರತಿಕ್ರಿಯೆಯಾಗಿ ಅವರ ಕಣ್ಣುಗಳನ್ನೇ ದಿಟ್ಟಿಸಿದ. ಅವನ ಮಾತಿನಿಂದ ಅವರ ಮಧ್ಯ ಬಾಂಬ್ ಎಸೆದಂತೆ ಆಯಿತು.

ಹಾಸನ ಕೇಳಿದ್ರು. ಬೆಂಗಳೂರು ಕೇಳಿದ್ರು. ಹೊರಗಿಂದ ಬಂದವರ ಬಾಯಲ್ಲಿ ಅಮೇರಿಕಾವನ್ನೂ ಕೇಳಿದ್ದರು. ಆದರೆ ಅದೆಲ್ಲೋ ಈ ಪ್ರಪಂಚದಿಂದ ಆಚೆಯೇ ಇರಬಹುದು ಎಂದುಕೊಂಡಿದ್ದರು.

ಅವನು ಅಮೇರಿಕಾಕ್ಕೆ ಹೋಗಿರಲಾರ ಎಂದು  ಅವರ ಮನದಲ್ಲಿ ಸಂಶಯ ಮೂಡತೊಡಗಿತು.

‘ಅಮೇರಿಕಾ ಅಂದರೆ ಯಾರೂ ಕಂಡು ಕೇಳರಿಯದ ದೇಶ. ಎಷ್ಟ್ ಸಾವಿರ ಮೈಲಿ ದೂರ ಆಗುತ್ತೋ? ಅಲ್ಲಿಗೆ ಹೋಗಕೆ ಬನ್ ಚಾರ್ಜ್ ಎಷ್ಟ್ ಸಾವ್ರ ಆಗುತ್ತೋ?ʼ ಎಂದು ಒಬ್ಬ ಮೆಲ್ಲಗೆ ಸಂಶಯವನ್ನು ಹೊರಬಿಟ್ಟ.

ʻಹುಂ, ಅದೆಲ್ಲಾ ನಿಮ್ಲ ಗೊತ್ತಾಗದಿಲ್ಲ ಬುಡು’ ಎಂದು ರಾಮ ಹುಸಿನಗೆಯಾಡುತ್ತಾ ಗಡ್ಡ ನೀವಿಕೊಳ್ಳತೊಡಗಿದ.

। ಮುಂದಿನ ವಾರಕ್ಕೆ ।

‍ಲೇಖಕರು Admin

25 October, 2025

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading